ದಲಿತರ ಆತ್ಮಾಭಿಮಾನದ ಪ್ರತೀಕ ‘ಭೀಮಾ ಕೋರೆಗಾಂವ್’

Update: 2025-01-01 05:43 GMT

ಪುಣೆಯಿಂದ 16 ಮೈಲು ಅಂತರದ ಮೇಲಿರುವ ಕೋರೆಗಾಂವ್ ಭೀಮಾ ನದಿಯ ದಂಡೆಯ ಮೇಲಿದೆ (ಸದ್ಯ ಕೋರೆಗಾಂವ್ ಶಿರೂರು ತಾಲೂಕಿನಲ್ಲಿದೆ). ಭೀಮಾ ನದಿಯ ದಂಡೆಯ ಮೇಲೆ ಊರು ಇರುವುದರಿಂದ ಇದಕ್ಕೆ ‘ಭೀಮಾ ಕೋರೆಗಾಂವ್’ ಎಂದೂ ಕರೆಯುತ್ತಾರೆ. ಈ ಭೀಮಾನದಿಯ ಬಲದಂಡೆಯ ಮೇಲೆಯೇ ಪೇಶ್ವೆ ಮತ್ತು ಬ್ರಿಟಿಷರ ನಡುವೆ ಘನಘೋರ ಯುದ್ಧ ನಡೆದದ್ದು. ಈ ಯುದ್ಧದಲ್ಲಿ ಪೇಶ್ವೆೆಯ 30,000 ಸೈನಿಕರಲ್ಲಿ ಬಹಳಷ್ಟು ಸೈನಿಕರು ಸತ್ತಿದ್ದರೆ, ಉಳಿದವರು ರಣರಂಗ ಬಿಟ್ಟು ಓಡಿಹೋಗಿದ್ದರು. ಬ್ರಿಟಿಷ್ ಸೈನ್ಯದ 21 ಜನ ಮಹಾರ್ ಸೈನಿಕರು ಮಾತ್ರ ಸತ್ತಿದ್ದರು. ರಣರಂಗದಲ್ಲಿ ಅಸ್ಪಶ್ಯರು ಮೆರೆದ ಈ ವೀರತ್ವವನ್ನು ಬ್ರಿಟಿಷರು ಕೋರೆಗಾಂವ್‌ನಲ್ಲಿ ಒಂದು ವೀರಸ್ಮಾರಕವನ್ನು ನಿರ್ಮಿಸಿ ತಮ್ಮ ಗೌರವವನ್ನು ಸಲ್ಲಿಸಿದ್ದರು. ಈ ವಿಜಯ ಸ್ತಂಭದ ಮೇಲೆ ಬ್ರಿಟಿಷರು ‘One of the proudest triumphs of British Army in the East’ (ಪೂರ್ವ ದೇಶಗಳಲ್ಲಿ ಬ್ರಿಟಿಷ್ ಸೈನ್ಯವು ಹೆಮ್ಮೆಯಿಂದ ಹೇಳಿಕೊಳ್ಳುವಂಥ ವಿಜಯ ಇದಾಗಿದೆ) ಎಂದು ಬರೆಸಿದ್ದಾರೆ.

ಜನವರಿ 1ರಂದು ಈ ವಿಜಯ ಪ್ರಾಪ್ತವಾಗಿದ್ದರಿಂದ ಪ್ರತೀ ವರ್ಷದ ಮೊದಲ ದಿನದಂದು ಈ ವೀರ ಸ್ಮಾರಕಕ್ಕೆ ಸೈನಿಕ ಬಟಾಲಿಯನ್‌ನವರು ಗೌರವ ವಂದನೆ ಸಲ್ಲಿಸುವ ಪದ್ಧತಿಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ಬ್ರಿಟಿಷ್ ಸರಕಾರದ ಸೈನ್ಯ ತಪ್ಪದೇ ಪ್ರತೀ ಜನವರಿ 1ರಂದು ಗೌರವ ವಂದನೆಗಾಗಿ ಭೀಮಾ ಕೋರೆಗಾಂವ್‌ಗೆ ಹೋಗುತ್ತಿತ್ತು. ಭೀಮಾ ಕೋರೆಗಾಂವ್‌ನ ಈ ವಿಜಯಸ್ತಂಭ ಇತಿಹಾಸದಲ್ಲಿ ಮಹತ್ವದ ಪುಟಗಳನ್ನಾಶ್ರಯಿಸಿದ್ದುದ್ದನ್ನು ಡಾ. ಅಂಬೇಡ್ಕರ್ ಓದಿದ್ದರು. ಅವರ ತಂದೆ ಮಿಲಿಟರಿಯಲ್ಲಿ ಇದ್ದುದರಿಂದ ಇತರರಿಗಿಂತ ಹೆಚ್ಚು ಈ ಸ್ತಂಭದ ಬಗ್ಗೆ ಅವರಿಗೆ ಗೊತ್ತಿತ್ತು.

ಇಂತಹ ವೀರ ಪರಂಪರೆಯಲ್ಲಿ ಬಂದ ಅಸ್ಪಶ್ಯರನ್ನು ಬ್ರಿಟಿಷ್ ಸರಕಾರವು, ಸೈನ್ಯ ಮತ್ತು ಪೊಲೀಸ್ ಖಾತೆಗಳಿಂದ ವಂಚಿತರನ್ನಾಗಿಸಿ ಅವರಿಗೆ ವಿಶ್ವಾಸಘಾತವನ್ನೇ ಮಾಡಿತ್ತು. ‘ನಮ್ಮ ಜನ ನಿಮಗಾಗಿ ಏನು ಮಾಡಿದರು ಮತ್ತು ಅದಕ್ಕೆ ಪ್ರತಿಯಾಗಿ ನೀವು ನಮಗೇನು ಮಾಡಿದಿರಿ?’ ಎಂಬುದನ್ನು ಆಧಾರ ಸಹಿತವಾಗಿ ಬ್ರಿಟಿಷರಿಗೆ ತೋರಿಸಬೇಕೆಂದು ಡಾ. ಅಂಬೇಡ್ಕರ್ ನಿರ್ಧರಿಸಿದರು.

ಬ್ರಿಟಿಷ್ ಸರಕಾರದ ‘ಅಸ್ಪಶ್ಯರಿಗೆ ಸೈನಿಕ ಭರ್ತಿ ನಿಷೇಧ’ದ ವಿರುದ್ಧದ ಹೋರಾಟ ಕೋರೆಗಾಂವ್‌ನಿಂದಲೇ ಆರಂಭಿಸಬೇಕೆಂದು ಡಾ. ಅಂಬೇಡ್ಕರ್ ನಿರ್ಧರಿಸಿದರು. ಜನವರಿ 1, 1927ರಂದು ವಿಜಯಸ್ತಂಭದ ಎದುರೇ ಈ ಚಳವಳಿ ಆರಂಭವಾಯಿತು.

ಅಪಾರ ಸೈನ್ಯದೆದುರು ವೀರತ್ವದಿಂದ ಹೋರಾಡಿ ಪಡೆದ ಅಸ್ಪಶ್ಯ ಸೈನಿಕರ ಗೆಲುವನ್ನು ಅವರ ಶಕ್ತಿ, ಸಾಮರ್ಥ್ಯ, ಸಾಹಸಗಳನ್ನು ಪ್ರತಿನಿಧಿಸುವ ಸಾಕ್ಷಿ ಸ್ತಂಭವಾಗಿ ವಿಜಯಸ್ತಂಭ ನಿಂತಿದ್ದರೆ, ತಮ್ಮ ಜನರಿಗಾದ ಅವಮಾನವನ್ನು, ಅನ್ಯಾಯವನ್ನು ಈ ಸ್ತಂಭದ ಸಾಕ್ಷಿಯಾಗಿ ನಿವಾರಿಸುತ್ತೇನೆಂಬ ಅದಮ್ಯ ವಿಶ್ವಾಸದಿಂದ ಡಾ. ಅಂಬೇಡ್ಕರರು ಅದೇ ವಿಜಯಸ್ತಂಭದ ಎದುರು ನಿಂತಿದ್ದರು. ಚಳವಳಿಗಾಗಿ ಬೇರೆ ಬೇರೆ ಕಡೆಗಳಿಂದ ಸಾವಿರಾರು ಜನರು ಬಂದಿದ್ದರು. ಆರಂಭದಲ್ಲಿ ಡಾ. ಅಂಬೇಡ್ಕರ್ ಹಾಗೂ ಇತರರು ವಿಜಯಸ್ತಂಭಕ್ಕೆ ಗೌರವ ವಂದನೆ ಸಲ್ಲಿಸಿದರು. ನಂತರ ಬ್ರಿಟಿಷ್ ಸರಕಾರದ ವಿರುದ್ಧ ಬಂಡಾಯದ ಶುಭಾರಂಭವನ್ನು ತೆಂಗಿನಕಾಯಿ ಒಡೆದು ಆರಂಭಿಸಲಾಯಿತು. ಡಾ. ಅಂಬೇಡ್ಕರ್ ಜನರನ್ನುದ್ದೇಶಿಸಿ ಭಾಷಣವನ್ನು ಮಾಡಿದರು. ಅವರ ಭಾಷಣದ ಓಘ ಹೀಗಿತ್ತು:

‘‘ಯಾವ ಮಹಾರ್ ಜನಾಂಗದ ನೂರಾರು ಸೈನಿಕರು ಹಲವಾರು ಯುದ್ಧಗಳಲ್ಲಿ ಹೋರಾಡಿ ಬ್ರಿಟಿಷ್ ಸರಕಾರಕ್ಕೆ ಗೆಲುವನ್ನು ತಂದು ಕೊಟ್ಟಿರುವರೋ, ಆ ಮಹಾರ್ ಜನಾಂಗದ ಯುವಕರಿಗೆ ಸೈನಿಕ ಖಾತೆಯ ನೌಕರಿಯನ್ನು ನಿರಾಕರಿಸಿ ಸರಕಾರವು ವಿಶ್ವಾಸಘಾತ ಮಾಡಿದೆ. ಮಹಾರ್ ಸೈನಿಕರು ಬ್ರಿಟಿಷರ ಪರವಾಗಿ ಸ್ವದೇಶಿಯರ ವಿರುದ್ಧ ಹೋರಾಟ ಮಾಡಿದ್ದೇನೂ ಅಭಿಮಾನ ಪಡುವಂತಹ ಸಂಗತಿಯಲ್ಲ. ಮೇಲ್ಜಾತಿಯ ಜನರು ಇವರನ್ನು (ಅಸ್ಪಶ್ಯರನ್ನು) ನಾಯಿ-ಬೆಕ್ಕುಗಳಿಗಿಂತ ಕಡೆಯಾಗಿ ನಡೆಸಿಕೊಂಡಿದ್ದರಿಂದ ಮತ್ತು ನಿರಂತರವಾಗಿ ಅವಮಾನದ ಜೀವನವನ್ನು ನೀಡಿದ್ದರಿಂದ, ಹೊಟ್ಟೆ ಹೊರೆಯಲು ಬೇರೆ ದಾರಿ ಇಲ್ಲದ್ದಕ್ಕಾಗಿ, ಅನಿವಾರ್ಯವಾಗಿ ಅವರು ಬ್ರಿಟಿಷ್ ಸೈನ್ಯದಲ್ಲಿ ಭರ್ತಿಯಾಗಬೇಕಾಯಿತು. ಬ್ರಿಟಿಷ್ ಸರಕಾರವು ಮಹಾರ್ ಜನರಿಗೆ ವಿಧಿಸಿದ ಸೈನಿಕ ಖಾತೆ ನಿಷೇಧವನ್ನು ಈ ಕೂಡಲೇ ಹಿಂದೆಗೆದುಕೊಳ್ಳಬೇಕು; ಇಲ್ಲದಿದ್ದರೆ ನಾವೆಲ್ಲ ನಮ್ಮ ಹಕ್ಕುಗಳಿಗಾಗಿ ಸರಕಾರದ ವಿರುದ್ಧ ಹೋರಾಡಬೇಕಾಗುವುದು. ಭಿಕ್ಷೆ ಬೇಡುವುದರಿಂದ ನಮ್ಮ ಹಕ್ಕುಗಳು ದೊರೆಯುವುದಿಲ್ಲ; ಅವನ್ನು ಪಡೆಯಲು ನಾವು ನಮ್ಮ ಶಕ್ತಿಯನ್ನು ಪ್ರಕಟಿಸಬೇಕಾಗಿದೆ. ಕುರಿಯನ್ನು ದೇವರಿಗೆ ಬಲಿ ಕೊಟ್ಟಂತೆ ಸಿಂಹವನ್ನು ಬಲಿ ಕೊಡಲಾಗುವುದಿಲ್ಲ, ಮಹಾರರಲ್ಲಿ ಶಕ್ತಿ ಇದೆ; ಆದರೆ ಆ ಶಕ್ತಿಯ ಅರಿವು ಅವರಿಗಾಗುತ್ತಿಲ್ಲ. ಕೋಳಿ-ಕುರಿಗಳ ವಂಶ ನಿಮ್ಮದಲ್ಲ; ನಿಮ್ಮ ಹಿರಿಯರು ಸಿಂಹಗಳಾಗಿದ್ದರು. ನಿಮ್ಮದು ಸಿಂಹರಾಶಿ. ವೈರಾಟಗಡವನ್ನು ಗೆದ್ದ ನಾಗನಾಕ, ಖಡಚರ್ಯದ ಯುದ್ಧವನ್ನು ಗೆದ್ದ ಸಿದ್ಧನಾಕ, ರಾಮಗಡದ ಕೋಟೆಯನ್ನು ಬ್ರಿಟಿಷರ ಪರವಾಗಿ ಗೆದ್ದ ಬಾಜಿ ಮಹಾರ ಇವರೆಲ್ಲರೂ ನಿಮ್ಮ ಹಿರಿಯರಾಗಿದ್ದರು. ಈ ಪರಂಪರೆಯ ಜನರ ಸಹಾಯವಿಲ್ಲದಿರುತ್ತಿದ್ದರೆ, ಬ್ರಿಟಿಷ್ ಸರಕಾರ ಖಂಡಿತವಾಗಿ ಈ ದೇಶದಲ್ಲಿ ವ್ಯಾಪಿಸಲು ಸಾಧ್ಯವಿರಲಿಲ್ಲ. ಆದರೆ ಅದೇ ಅಸ್ಪಶ್ಯರ ಸೈನಿಕ ಭರ್ತಿಯನ್ನು ಸರಕಾರ ನಿಲ್ಲಿಸಿದ್ದರಿಂದ ನಮಗೆಲ್ಲ ಆಘಾತವಾಗಿದೆ. ರಾಜಕೀಯ ದೃಷ್ಟಿಯೇ ಇರಲಿ, ಆರ್ಥಿಕ ದೃಷ್ಟಿಯೇ ಇರಲಿ, ಬೇಕೆಂದಾಗ ನೌಕರಿ ಕೊಟ್ಟು, ಬೇಡವೆಂದಾಗ ತೆಗೆದು ಹಾಕುವುದು ಪಕ್ಷಪಾತ ಧೋರಣೆಯಾಗುವುದು; ಅಷ್ಟೇ ಅಲ್ಲದೆ ವಿಶ್ವಾಸದ್ರೋಹ, ಸ್ನೇಹದ್ರೋಹವೂ ಆಗುವುದು.

ನಾವು ಸರಕಾರಕ್ಕೆ ನಿಷ್ಠರಾಗಿದ್ದುದಕ್ಕಾಗಿಯೇ ಅದು ನಮ್ಮನ್ನು ಹೀಗೆ ಉಪೇಕ್ಷೆ ಮಾಡುತ್ತಿದೆ. ಸರಕಾರ ಕೊಟ್ಟಿದ್ದನ್ನು ಪಡೆದು, ಅದು ಏನು ಹೇಳುತ್ತದೆಯೋ ಅದನ್ನು ಕೇಳಿಕೊಳ್ಳುತ್ತಿರುವುದರಿಂದಲೇ ನಮ್ಮಲ್ಲಿ ಗುಲಾಮಗಿರಿ ಬೆಳೆದಿದೆ. ಕೇಳಿಪಡೆಯುವವರಾಗಬೇಕು ನಾವು; ಸರಕಾರದ ಈ ನೀತಿಯನ್ನು ನಾವು ಉಗ್ರವಾಗಿ ಪ್ರತಿಭಟಿಸಬೇಕಾಗಿದೆ.

ಮಹಾಯುದ್ಧ ನಡೆದಾಗ ಸರಕಾರಕ್ಕೆ ಅಸ್ಪಶ್ಯರ ನೆನಪಾಯಿತು. ಒಂದೇಕೆ, ಎರಡು ಬಟಾಲಿಯನ್‌ಗೆ ಬೇಕಾಗುವಷ್ಟು ಅಸ್ಪಶ್ಯರನ್ನು ಸೈನ್ಯಕ್ಕೆ ತುಂಬಿಕೊಳ್ಳಲಾಯಿತು. ಈ ಜನ ನಿಷ್ಠೆಯಿಂದ ಬ್ರಿಟಿಷರ ಪರವಾಗಿ ಜಗತ್ತಿನ ನಾನಾ ಕಡೆಗಳಲ್ಲಿ ಹೋರಾಡಿ ಬ್ರಿಟಿಷರಿಗೆ ಗೆಲುವನ್ನು ತಂದುಕೊಟ್ಟರು. ಯುದ್ಧ ಮುಗಿದ ನಂತರ ಆರ್ಥಿಕ ಮುಗ್ಗಟ್ಟಿನ ನೆಪ ಒಡ್ಡಿ ಇವರೆನ್ನೆಲ್ಲ ತೆಗೆದುಹಾಕಲಾಯಿತು. ಸರಕಾರದ ಈ ದ್ವಂದ್ವ ವರ್ತನೆಗೆ ಏನು ಅನ್ನಬೇಕೋ ನನಗೆ ತಿಳಿಯುತ್ತಿಲ್ಲ.

ಸರಕಾರವು ಒಂದು ಜವಾಬ್ದಾರಿಯುತ ಸಂಸ್ಥೆಯಾಗಿದೆ. ಮನಸ್ಸಿಗೆ ಬಂದಂತೆ ಅದು ವರ್ತಿಸಕೂಡದು. ಅದು ಏನು ಮಾಡಬೇಕಾದರೂ ತನ್ನ ನೌಕರರ ಮೂಲಕವೇ ಎಂಬುದನ್ನು ಮರೆಯಬಾರದು. ನಾವು ನಮ್ಮ ಹಿತ ಸಾಧಿಸಬೇಕೆಂದರೆ ಸರಕಾರಿ ನೌಕರಿಯಲ್ಲಿ ಹೆಚ್ಚು ಹೆಚ್ಚು ಪ್ರವೇಶ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ನಾವು ಉಪೇಕ್ಷಿತರಾಗುತ್ತೇವೆ. ಆಗುತ್ತಲೇ ಇರುತ್ತೇವೆ. ಇದು ನಿಲ್ಲಬೇಕೆಂದರೆ ಸರಕಾರಿ ರಂಗದಲ್ಲಿ ಅಸ್ಪಶ್ಯರ ಪ್ರವೇಶ ಹೆಚ್ಚು ಹೆಚ್ಚು ಆಗುವಂತೆ ನೋಡಿಕೊಳ್ಳಬೇಕು.

ನಿಮಗೆಲ್ಲ ಹೇಳಲೇಬೇಕಾದ ವಿಶೇಷ ಸಂಗತಿಯೊಂದಿದೆ. ಜನರ ಮನಸ್ಸಿನ ಮೇಲೆ ದುಷ್ಟ ಅನಿಷ್ಟ ವಿಚಾರಗಳ ಜಂಗು ಬೆಳೆದಿದೆ. ಅದನ್ನು ತಿಕ್ಕಿ ತೊಳೆಯಬೇಕಿದೆ. ಆಚಾರ, ವಿಚಾರ ಮತ್ತು ಉಚ್ಛಾರಗಳಲ್ಲಿ ಎಲ್ಲಿಯವರೆಗೆ ಶುದ್ಧಿಯಾಗುವುದಿಲ್ಲವೋ ಅಲ್ಲಿಯವರೆಗೆ ಅಸ್ಪೃಶ್ಯ ಸಮಾಜದ ಜಾಗೃತಿ ಅಥವಾ ಪ್ರಗತಿಯ ಬೀಜ ಚಿಗುರಲು ಸಾಧ್ಯವಿಲ್ಲ. ನಾವುಗಳೆಲ್ಲ ಜಾಗೃತರಾಗುವ ದಿಶೆಯಲ್ಲಿ ಕ್ರಿಯಾಶೀಲರಾಗಬೇಕಾಗಿದೆ; ಜಾಗೃತಿಯ ಬೆಂಕಿ ಆರದಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು. ನಿಮ್ಮೆಲ್ಲರ ಉದ್ಧಾರದ ನೇತೃತ್ವವನ್ನು ನೀವೇ ವಹಿಸುವಿರೆಂದು ನಾನು ಆಶಿಸುತ್ತೇನೆ.’’

ಭೀಮಾ ಕೋರೆಗಾಂವ್‌ನ ಅಸ್ಪಶ್ಯವೀರರ ಕಥೆಗಳನ್ನು, ಅವರ ಹೋರಾಟದ ಪರಿಯನ್ನು ಡಾ. ಅಂಬೇಡ್ಕರ್ ವಿವರಿಸಿದಾಗ ಅಲ್ಲಿದ್ದ ಜನರು ಹುಚ್ಚೆದ್ದು ಹೋದರು. ಎಂತಹ ವೀರ ಪರಂಪರೆಗೆ, ವಂಶಕ್ಕೆ ಸೇರಿದ ಜನರು ತಾವೆಂದು ಹೆಮ್ಮೆ ಪಟ್ಟುಕೊಂಡರು. ಡಾ. ಅಂಬೇಡ್ಕರ್ ಮಾತುಗಳಿಂದ ಊರು ಊರುಗಳಲ್ಲಿ ಸ್ವಾಭಿಮಾನದ ಅಗ್ನಿಕುಂಡಗಳು ಹೊತ್ತಿಕೊಂಡವು: ಎಲ್ಲೆಡೆಯಲ್ಲೂ ಪ್ರತಿಭಟನೆಗಳು ಆರಂಭವಾದವು. ಇದರಿಂದ ಎಚ್ಚೆತ್ತ ಬ್ರಿಟಿಷ್ ಸರಕಾರವು ಅಸ್ಪಶ್ಯರ ಮೇಲಿನ ಸೈನಿಕಭರ್ತಿ ನಿಷೇಧದ ಆಜ್ಞೆಯನ್ನು ಹಿಂದಕ್ಕೆ ಪಡೆದುಕೊಂಡಿತು. ಈ ಚಳವಳಿಗೆ ಸರಕಾರ ಎಷ್ಟು ಹೆದರಿತ್ತೆಂದರೆ, ಅಸ್ಪಶ್ಯರಿಗಾಗಿಯೇ ಒಂದು ಘಟಕವನ್ನು ತೆರೆದು ಅದರಲ್ಲಿ ಅಸ್ಪಶ್ಯ ಯುವಕರನ್ನು ಮಿಲಿಟರಿಗೆ ಮತ್ತು ಪೊಲೀಸ್ ಖಾತೆಯಲ್ಲಿ ಸೇರಿಸಿ ಕೊಳ್ಳಲಾಯಿತು. ಸಾವಿರಾರು ಅಸ್ಪಶ್ಯ ಯುವಕರು ಮಿಲಿಟರಿ ಮತ್ತು ಪೊಲೀಸ್ ಖಾತೆ ಸೇರಿಕೊಂಡರು.

ಆಗಲೇ ಡಾ. ಅಂಬೇಡ್ಕರ್ ಒಂದು ನಿರ್ಧಾರಕ್ಕೆ ಬಂದರು. ಪ್ರತೀ ವರ್ಷ ಜನವರಿ 1ರಂದು ಅವರು ಭೀಮಾ ಕೋರೆಗಾಂವ್‌ಗೆ ಬಂದು ವಿಜಯಸ್ತಂಭಕ್ಕೆ ಗೌರವ ಸಲ್ಲಿಸುವ ಪರಿಪಾಠವನ್ನು ಆರಂಭಿಸಿದರು. ಅಂದು ಎಷ್ಟೇ ಕೆಲಸಗಳಿರಲಿ, ಅವರು ಎಲ್ಲಿಯೇ ಇರಲಿ, ಕೋರೆಗಾಂವ್‌ಗೆ ಬಂದು ವಿಜಯಸ್ತಂಭಕ್ಕೆ ಗೌರವವನ್ನು ಸಲ್ಲಿಸುವುದನ್ನು ತಪ್ಪಿಸುತ್ತಿರಲಿಲ್ಲ. ಪ್ರತಿವರ್ಷದ ಮೊದಲ ದಿನವನ್ನು ದಲಿತರ ವಿಜಯದ ದಿನವನ್ನಾಗಿ ಆಚರಿಸಬೇಕೆಂದು ಡಾ. ಅಂಬೇಡ್ಕರ್ ಹೇಳುತ್ತಿದ್ದರು.

ಈಗಲೂ ಜನವರಿ 1ರಂದು ಭೀಮಾ ಕೋರೆಗಾಂವ್‌ಗೆ ಅನೇಕರು ಭೇಟಿ ಕೊಡುತ್ತಾರೆ. ತಮ್ಮ ಸ್ವಾಭಾವಿಕ ಶೌರ್ಯವನ್ನು ಮೆರೆದು, ಸಾವಿರಾರು ಸೈನಿಕರನ್ನು ಇರುವೆ ಒರೆದು ಹಾಕುವಂತೆ ಒರೆಸಿ ಹಾಕಿ, ದಲಿತರ ಆತ್ಮಾಭಿಮಾನಕ್ಕೆ ಕುಂದಣವಿಟ್ಟ ಈ ವೀರರನ್ನು ಈಗಲೂ ನೆನಪಿಸಿಕೊಳ್ಳಲಾಗುತ್ತದೆ. ಮಿಲಿಟರಿ ಬಟಾಲಿಯನ್ ಗೌರವ ವಂದನೆ ಸಲ್ಲಿಸುತ್ತಿದ್ದಂತೆಯೇ ಈ ವೀರರ ಸ್ಮರಣೆಗಾಗಿ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಭೀಮಾ ಕೋರೆಗಾಂವ್ ಪ್ರತೀ ಜನವರಿ 1ರಂದು ಅಸ್ಪಶ್ಯರ ತೀರ್ಥ ಕ್ಷೇತ್ರವಾಗಿ ಮಾರ್ಪಟ್ಟಿದೆ.

(ಡಾ. ಸರಜೂ ಕಾಟ್ಕರ್‌ರ ‘ಭೀಮಾ ಕೋರೆಗಾಂವ್’ ಕೃತಿಯ ಆಯ್ದ ಭಾಗ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಸರಜೂ ಕಾಟ್ಕರ್

contributor

Similar News