ಚುನಾವಣೆ ಪ್ರಚಾರದ ತಯಾರಿಗಾಗಿ 'ಭೂತ' ಬಜೆಟ್
ಬಜೆಟ್ ಎಂಬುದು ಮುಂಬರುವ ವರ್ಷದ ಆಯವ್ಯಯಗಳ ಮುಂಗಾಣ್ಕೆ. ಲೇಖಾನುದಾನ ಎಂಬುದು ಸಂವಿಧಾನದ ಸೆಕ್ಷನ್ 113ರ ಅಡಿ ಪೂರ್ಣಪ್ರಮಾಣದ ಬಜೆಟ್ ಅನುಮೋದನೆ ಪ್ರಕ್ರಿಯೆ ನಡೆಯಲು ಸಾಧ್ಯವಾಗುವ ತನಕ, ಸೆಕ್ಷನ್ 116ರ ಅಡಿಯಲ್ಲಿ, ಹಣಕಾಸು ವರ್ಷದ ಯಾವುದೋ ಒಂದು ಭಾಗಕ್ಕೆ ಅಂದಾಜು ಮಾಡಲಾಗಿರುವ ವೆಚ್ಚಕ್ಕೆ ಮುಂಚಿತವಾಗಿ ಅನುಮತಿ ಪಡೆಯುವ ಪ್ರಕ್ರಿಯೆ. ಹಾಲಿ ಬಜೆಟ್‌ನ್ನು ಲೇಖಾನುದಾನ ಎನ್ನುತ್ತಲೇ ಇಡಿಯ (2024-25) ವರ್ಷಕ್ಕೆ ಅಂದಾಜುಗಳನ್ನು ಕೊಟ್ಟಿದ್ದರೂ, ಚುನಾವಣೋತ್ತರ ಬಜೆಟ್ ಮಂಡನೆ ಆಗುವ ತನಕ ಅದಕ್ಕೆ ದೊಡ್ಡ ಮಹತ್ವ ಇಲ್ಲ. ಹಾಗಾಗಿ ಗುರುವಾರ ಬಜೆಟ್ ಮಂಡನೆಯ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಭವಿಷ್ಯದ’ ಬದಲು ‘ಭೂತಕಾಲದ’ ಮಾತುಗಳನ್ನು ಮೆಲುಕುಹಾಕಿ, ಎದುರಿರುವ ಚುನಾವಣೆ ಪ್ರಚಾರಕ್ಕೆ ಪೂರಕವಾಗಬಲ್ಲ ಒಂದಿಷ್ಟು ಸರಕುಗಳನ್ನು ಕಲೆಹಾಕಿ ಒಂದೇ ತಾಸಿನೊಳಗೆ ‘ಮಧ್ಯಂತರ’ ಬಜೆಟ್ ಭಾಷಣ ಮುಗಿಸಿದರು.
ಮೋದಿ 2.0 ಅವಧಿಯ ಕೊನೆಯ ಹಂತದಲ್ಲಿ ನಿಂತು, 2047ಕ್ಕೆ ‘ವಿಕಸಿತ ಭಾರತ’ದಲ್ಲಿ ಸರ್ವಾಂಗೀಣ, ಸರ್ವಸ್ಪರ್ಶಿ ಮತ್ತು ಸರ್ವಸಮಾವೇಶಿ ಬೆಳವಣಿಗೆಯ ಭರವಸೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಡವರು, ಮಹಿಳೆಯರು, ಯುವಕರು ಮತ್ತು ರೈತರೆಂಬ ನಾಲ್ಕು ‘ಜಾತಿಗಳ’ ಸಶಕ್ತೀಕರಣದ ಆಶಯವನ್ನು ಮುಂದಿಟ್ಟರು. 10 ವರ್ಷಗಳಲ್ಲಿ 25ಕೋಟಿ ಜನ ಬಡತನ ರೇಖೆಯಿಂದ ಮೇಲೆದ್ದರು ಎಂಬಂತಹ ಪ್ರಶ್ನಾರ್ಹ ಅಂಕಿಸಂಖ್ಯೆಗಳನ್ನು ಇಟ್ಟುಕೊಂಡು ತಮ್ಮ ಹೊಸ GDP (ಆಡಳಿತ, ವಿಕಾಸ, ಕಾರ್ಯಸಾಧನೆ)ಯನ್ನು ವ್ಯಾಖ್ಯಾನಿಸಿದ ಹಣಕಾಸು ಸಚಿವರ ಈ ಹೇಳಿಕೆಯನ್ನು, ಐದು ವರ್ಷಗಳ ಹಿಂದೆ 2019-20ರಲ್ಲಿ ಮೋದಿ 1.0 ಅವಧಿಯ ಕೊನೆಯಲ್ಲಿ ಪಿಯೂಷ್ ಗೋಯಲ್ ಅವರು ಇದೇರೀತಿ ಚುನಾವಣೆಯ ಹೊಸ್ತಿಲಿನಲ್ಲಿ ನಿಂತು ಮಂಡಿಸಿದ್ದ ಲೇಖಾನುದಾನದ ವೇಳೆ ಪ್ರಕಟಿಸಿದ್ದ ‘10 ಅಂಶದ ವಿಷನ್‌ಗಳು’ ಈಗೆಲ್ಲಿಗೆ ತಲುಪಿವೆ ಎಂಬುದನ್ನು ಗಮನಿಸಿದರೆ, ಈ ಸರಕಾರ ತನ್ನ ಹಾದಿಯಲ್ಲಿ ಎಲ್ಲಿಗೆ ತಲುಪಿದೆ ಎಂಬುದು ಸ್ಪಷ್ಟವಾಗುತ್ತದೆ.
ಆ ಹತ್ತು ಅಂಶಗಳೆಂದರೆ:
ಮೂಲ ಸೌಕರ್ಯಗಳ ಅಭಿವ್ರದ್ಧಿ (ಬ್ರಹತ್ ಮೂಲಸೌಕರ್ಯ ಯೋಜನೆಗಳು); ಡಿಜಿಟಲ್ ಇಂಡಿಯಾ; ಮಾಲಿನ್ಯ ಮುಕ್ತ ಭಾರತ (ಇಲೆಕ್ಟ್ರಿಕ್ ವಾಹನ, ಎನರ್ಜಿ ಸ್ಟೋರೇಜ್); ಗ್ರಾಮೀಣ ಕೈಗಾರಿಕೀಕರಣ (ದೊಡ್ಡ ಕೈಗಾರಿಕೆಗಳಿಗೆ ಬೆಂಬಲ ನೀಡುವ MSME); ಶುದ್ಧ ನದಿಗಳು (ಮೈಕ್ರೋ ಇರಿಗೇಷನ್); ಕರಾವಳಿಯ ಸದುಪಯೋಗ (ಸಾಗರಮಾಲಾ); ಬಾಹ್ಯಾಕಾಶ ಕಾರ್ಯಕ್ರಮ (ಗಗನಯಾನ); ಆಹಾರ ಸ್ವಾವಲಂಬನೆ (ಕಾರ್ಪೊರೇಟ್ ಫಾರ್ಮಿಂಗ್); ಆರೋಗ್ಯವಂತ ಭಾರತ (ಆಯುಷ್ಮಾನ್ ಭಾರತ); ಮತ್ತು ಮಾನವ ಸಂಪನ್ಮೂಲದ ಪರಿಣಾಮಕಾರಿ ಬಳಕೆ (ಆಧುನಿಕ, ಟೆಕ್ನಾಲಜಿ ಡ್ರಿವನ್).
ಪೂರ್ಣ ಪ್ರಮಾಣದಲ್ಲಿ ಕಾರ್ಪೊರೇಟೀಕರಣದ ಉದ್ದೇಶ ಹೊಂದಿದ್ದ ಈ ವಿಷನ್, ಇಂದು ಕ್ರೋನಿ ಕ್ಯಾಪಿಟಲಿಸ್ಟ್ ವ್ಯವಸ್ಥೆಯೊಂದಕ್ಕೆ ಬಾಗಿಲು ತೆಗೆದಿರುವುದನ್ನು ದೇಶ ಅನುಭವಿಸುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹಿಂದೆಂದಿಗಿಂತಲೂ ಹೆಚ್ಚು ವೇಗದಲ್ಲಿ ಏರಿದೆ. ಈ ಸರಕಾರದಲ್ಲಿ ಬಡವರ ‘ಒಳಗೊಳ್ಳುವಿಕೆ’ ವಸತಿ, ನೀರು, ವಿದ್ಯುತ್, ಅಡುಗೆ ಅನಿಲ ಮತ್ತು ಬ್ಯಾಂಕ್ ಖಾತೆಗಳಿಗೆ ಸೀಮಿತಗೊಂಡಿದೆ.
ಅಧಿಕಾರ ಕೇಂದ್ರೀಕರಣ
ಸಂವಿಧಾನದ ರಾಜ್ಯ ಪಟ್ಟಿ ಅಥವಾ ಜಂಟಿಪಟ್ಟಿಗಳಲ್ಲಿ ಬರುವ ಸಂಗತಿಗಳಲ್ಲೆಲ್ಲ ಮೇಲೆ ಹೇಳಲಾದ ಹತ್ತು ವಿಷನ್‌ಗಳ ಹೆಸರಿನಲ್ಲಿ ಕೈಯಾಡಿಸುವುದನ್ನು ತನ್ನ ಪದ್ಧತಿ ಮಾಡಿಕೊಂಡಿರುವ ಭಾರತ ಸರಕಾರವು ಈಗ ರಾಜ್ಯಗಳು ಹಣಕ್ಕಾಗಿ ತನ್ನೆದುರು ಕೈಯೊಡ್ಡಿ ನಿಲ್ಲುವ ಸನ್ನಿವೇಶವನ್ನು ಹಂತಹಂತವಾಗಿ ರೂಪಿಸುತ್ತಿದೆ. ಹಕ್ಕಿನಿಂದ ಸಿಗಬೇಕಾದ ಹಣವು ರಾಜ್ಯಗಳಿಗೆ ಈಗ ಕೇಂದ್ರದಿಂದ ‘ಸಾಲ’ರೂಪದಲ್ಲಿ ಸಿಗತೊಡಗಿದೆ. ವಿಕಸಿತ ಭಾರತ ರೂಪಿಸಲು 75,000ಕೋಟಿ ರೂ. ದೀರ್ಘಕಾಲಿಕ ಸಾಲ, ಬಂಡವಾಳ ವೆಚ್ಚಗಳಿಗೆ 1.3ಲಕ್ಷ ಕೋಟಿ ಬಡ್ಡಿರಹಿತ ಸಾಲದ ಮುಂದುವರಿಕೆ ಇದಕ್ಕೆ ನಿದರ್ಶನಗಳು. ರಾಜ್ಯಗಳಿಗೆ 2024-25ನೇ ಸಾಲಿನಲ್ಲಿ ಸಿಗಲಿರುವ ತೆರಿಗೆ ಪಾಲು 12.20 ಲಕ್ಷ ಕೋಟಿ ರೂ. ಮಾತ್ರ. ಇದು GDPಯ ಕೇವಲ 3.7ಶೇ.
ಕುತೂಹಲಕರ ಅಂಶವೆಂದರೆ ಭಾರತ ಸರಕಾರ, ಬಜೆಟ್ ವರ್ಷದಲ್ಲಿ ರೂ.11.11ಲಕ್ಷ ಕೋಟಿಗಳ ಬೃಹತ್ ಕ್ಯಾಪೆಕ್ಸ್ ಹೂಡಿಕೆಗೆ ವ್ಯವಸ್ಥೆ ಮಾಡಿಕೊಂಡಿದೆ. ‘ವ್ಯಾಪಾರ ಸರ್ಕಾರದ ಕೆಲಸವಲ್ಲ’ ಎಂದು ಹೇಳುತ್ತಲೇ, ಕಳೆದ ಹತ್ತು ವರ್ಷಗಳಲ್ಲಿ ತನ್ನ ಸೊತ್ತುಗಳನ್ನು ಖಾಸಗಿಗೆ ಮಾರುವ ಮತ್ತು ದೇಶದ ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಸರಕಾರಿ ಖರ್ಚಿನಿಂದ ಖಾಸಗಿಯವರಿಗೆ ಅನುಕೂಲ ಮಾಡಿಕೊಡುವಂತಹ ‘ಕ್ಯಾಪೆಕ್ಸ್’ ಹೂಡಿಕೆಗಳಿಗೆ ವೇಗ ನೀಡಲಾಗುತ್ತಿದೆ. ಕೋವಿಡ್ ಕಾಲದಲ್ಲಿ ಆರ್ಥಿಕತೆಯನ್ನು ಮತ್ತು ಉದ್ಯೋಗಾವಕಾಶಗಳನ್ನು ಬಡಿದೆಬ್ಬಿಸುವ ಹೆಸರಲ್ಲಿ ಆರಂಭಗೊಂಡ ಈ ಹೊಸ ಟ್ರೆಂಡ್, ಈಗ ಕ್ರೋನಿಗಳಿಗೆ ಅವಕಾಶಗಳನ್ನು ಮೊಗೆದುಕೊಡುವ ವ್ಯವಸ್ಥೆ ಆಗಿ ಬದಲಾದಂತಿದೆ.
ಪ್ರಚಾರದ ಸರಕಿನ ತೂಕಗಳು
ದೇಶವು 2030ರ ಹೊತ್ತಿಗೆ 7ಟ್ರಿಲಿಯನ್ ಡಾಲರ್ ಗಾತ್ರದ ‘ಅಭಿವೃದ್ಧಿ ಹೊಂದಿದ’ ಆರ್ಥಿಕತೆ ಆಗಲಿದೆ ಎಂದು ಸರಕಾರವು ಚುನಾವಣಾ ತಯಾರಿ ಸರಕಿನ ರೂಪದಲ್ಲಿ ಪ್ರಚಾರ ನಡೆಸುತ್ತಿದೆ. 2023-24ನೇ ಸಾಲಿಗೆ GDP ಬೆಳವಣಿಗೆಯ ದರ 7.3ಶೇ. ಎಂದು ಅಂದಾಜಿಸಲಾಗಿರುವ ನಮ್ಮ ಆರ್ಥಿಕತೆಯು 2030ರ ಹೊತ್ತಿಗೆ 7ಟ್ರಿಲಿಯನ್ ಡಾಲರ್ ಗಾತ್ರ ಪಡೆಯಬೇಕೆಂದಾದರೆ, ಸರಕಾರವು 2024-25ನೇ ಸಾಲಿಗೆ ಅಂದಾಜಿಸಿರುವ 10.5ಶೇ. GDP ಬೆಳವಣಿಗೆಯ ದರ ಪರ್ಯಾಪ್ತವೇ? ಕಳೆದ ಸಾಲಿನಲ್ಲೂ ಇದೇ 10.5ಶೇ. GDP ಬೆಳವಣಿಗೆಯ ದರದ ಅಂದಾಜು ಇದ್ದುದು, 7.3ಶೇ.ಗೆ ಇಳಿಯಲು ಕಾರಣಗಳೇನು? ಆರ್ಥಿಕ ಶಿಸ್ತಿನ (FRBM) ಕಾನೂನುಗಳನ್ವಯ GDPಯ 40ಶೇ.ಒಳಗಿರಬೇಕಾದ ಸರ್ಕಾರಿ ಸಾಲವು 2023-24ರಲ್ಲಿ 57.1ಶೇ. (RE) ನಷ್ಟಿದ್ದು, ಆದಾಯದ ಬಹುತೇಕ 20ಶೇ. ಭಾಗ ಸಾಲದ ಬಡ್ಡಿ ಮರುಪಾವತಿಗೇ ಬೇಕಾಗುತ್ತದೆ. 2024-25ರಲ್ಲಿ ಅದನ್ನು GDP 51.2ಶೇ. ಇರುವುದಾಗಿ ಅಂದಾಜು ಮಾಡಲಾಗಿದೆ. GDPಯ 3ಶೇ.ನ ಒಳಗಿರಬೇಕಾದ ಹಣಕಾಸು ಕೊರತೆ, ಈಗಿನ್ನೂ 5.8ಶೇ. (RE) ಇದೆ. ಆರ್ಥಿಕ ಶಿಸ್ತು ಮೊದಲ ಆದ್ಯತೆ ಆಗಬೇಕಿರುವಾಗ, ಸಾಲತಂದು ತುಪ್ಪತಿನ್ನುವಂತಹ ಟ್ರಿಲಿಯನ್ ಗಾತ್ರದ ಇಕಾನಮಿಯ ಹಿಂದೆ ಓಡುವ ಬಡಿವಾರಗಳ ತೂಕ ಎಷ್ಟು?
ಖಾಸಗಿ ಕ್ಷೇತ್ರದ ಬಳಕೆ ವೆಚ್ಚದಲ್ಲಿ (PFCE) ಪುಟ್ಟ ಏರಿಕೆ (60.6ಶೇ.ನಿಂದ 60.09ಶೇ.) ವರದಿಯಾಗಿದೆಯಾದರೂ, ಕೋವಿಡ್ ಬಳಿಕದ ಆರ್ಥಿಕತೆಯಲ್ಲಿ ಏ ಶೇಪಿನ ಪುಟಿದೇಳುವಿಕೆ (ಅಂದರೆ ಬಡವರು ಹೆಚ್ಚು ಬಡವರಾದುದು, ಶ್ರೀಮಂತರು ಹೆಚ್ಚು ಶ್ರೀಮಂತರಾದುದು) ಮತ್ತು ಲಕ್ಸುರಿ ಉತ್ಪನ್ನಗಳ ಖರೀದಿಯಲ್ಲಾಗಿರುವ ಹೆಚ್ಚಳಗಳು ಬಳಕೆಯಲ್ಲಾಗಿರುವ ಏರಿಕೆಗೆ ಕಾರಣಗಳತ್ತ ಬೊಟ್ಟುಮಾಡುತ್ತವೆ. ಕೃಷಿ ಕ್ಷೇತ್ರದಲ್ಲಿ 1.8ಶೇ., ಉತ್ಪಾದನಾ ಕ್ಷೇತ್ರದಲ್ಲಿ 6.5ಶೇ., ನಿರ್ಮಾಣ ಕ್ಷೇತ್ರದಲ್ಲಿ 10.7ಶೇ., ಸೇವಾಕ್ಷೇತ್ರದಲ್ಲಿ 7.1ಶೇ. ಬೆಳವಣಿಗೆ ದಾಖಲಾಗಿವೆ. ಇದು ಮೂಲಸೌಕರ್ಯಗಳಿಗಾಗಿ ಮಾಡಿರುವ ಅಪಾರ ಹೂಡಿಕೆಗೆ ಹೋಲಿಸಿದರೆ ತೀರಾ ಸಣ್ಣ ಫಲಿತಾಂಶ. ಆಮದಿನಲ್ಲಿ (-7.9ಶೇ.) ಇಳಿಕೆ, ರಫ್ತಿನಲ್ಲಿ (-5.7ಶೇ.) ಇಳಿಕೆ ಆಗಿದ್ದು, ಟ್ರೇಡ್ ಬ್ಯಾಲೆನ್ಸ್ 1.88ಲಕ್ಷ ಕೋಟಿ ಗಾತ್ರದಲ್ಲಿದೆ, ಆದರೆ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅದು ಸ್ವಲ್ಪ (-11.5ಶೇ.) ಸುಧಾರಿಸಿದೆ.
ಕರಾವಳಿ ಗಮನಿಸಬೇಕಾದದ್ದು
ಬಜೆಟ್ ಮಂಡನೆಯ ವೇಳೆ ಹಣಕಾಸು ಸಚಿವರು ಹೇಳಿದ ಮೂರು ಅಂಶಗಳನ್ನು ಕರಾವಳಿ ಜನರು ಕಣ್ಣಿಟ್ಟು ಗಮನಿಸಬೇಕಿದೆ.
1. ರೈಲ್ವೆ ಇಲಾಖೆಯು ಇಂಧನ-ಖನಿಜ-ಸಿಮೆಂಟ್ ಕಾರಿಡಾರ್ ಅಭಿವೃದ್ಧಿಪಡಿಸಲಿದೆ; ಬಂದರು ಸಂಪರ್ಕ ಕಾರಿಡಾರ್‌ಗಳನ್ನು PM ಗತಿಶಕ್ತಿ ಯೋಜನೆಯಡಿ ಅನುಷ್ಠಾನಗೊಳಿಸಲಾಗುವುದು ಎಂದು ಬಜೆಟ್ ಹೇಳಿರುವುದು.
2. ಮತ್ಸ್ಯ ಸಂಪದ ಯೋಜನೆಯಡಿ ಸಾಗರ ಮೂಲದ ಉತ್ಪಾದಕತೆಯನ್ನು ಹೆಕ್ಟೇರಿಗೆ 3ರಿಂದ 5ಟನ್‌ಗೆ ಏರಿಸುವುದು, ರಫ್ತನ್ನು ದುಪ್ಪಟ್ಟುಗೊಳಿಸುವುದು ಮತ್ತು 55ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ರೂಪಿಸುವುದು.
3. ಬಂದರು ಸಂಪರ್ಕ ಆಧರಿಸಿ, ದ್ವೀಪಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ರೂಪಿಸುವುದು.
ಈ ಮೂರೂ ಯೋಜನೆಗಳು ಕರಾವಳಿಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದಿಲ್ಲಿಯಲ್ಲೇ ರೂಪುಗೊಂಡು ಅನುಷ್ಠಾನಗೊಳ್ಳತೊಡಗಿದರೆ, ಅದು ಕರ್ನಾಟಕದ ಕರಾವಳಿಯಲ್ಲಿ ಆರ್ಥಿಕ, ಸಾಮಾಜಿಕ, ಪರಿಸರ ಸಂಬಂಧಿ ಅನಗತ್ಯ ಒತ್ತಡಗಳು ಮತ್ತು ಜಂಜಡಗಳನ್ನು ಸೃಷ್ಟಿಸಲಿದೆ ಎಂಬುದಕ್ಕೆ ಯಾವುದೇ ಅನುಮಾನ ಬೇಡ. ಸರಕಾರವು
ಈ ಯೋಜನೆಗಳಲ್ಲಿ ಖಾಸಗಿ ಸಹಭಾಗಿತ್ವದ ಸ್ವರೂಪ ಮತ್ತು ಪ್ರಮಾಣಗಳನ್ನು ಮುಚ್ಚಿಟ್ಟು ಮಾರ್ಕೆಟಿಂಗ್ ಮಾಡುತ್ತಿದೆ.