ಬಿಜೆಪಿಯೊಳಗಿನ ಭಿನ್ನಮತ ಕಾಂಗ್ರೆಸ್‌ಗೆ ಲಾಭ ತರಲಿದೆಯೇ?
ಬೆಂಗಳೂರು ಉತ್ತರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಕಳೆದ ನಾಲ್ಕು ಚುನಾವಣೆಗಳಿಂದಲೂ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ. ಈ ಬಾರಿ ಬಿಜೆಪಿಗೆ ಸೆಡ್ಡುಹೊಡೆದು ಕ್ಷೇತ್ರವನ್ನು ವಶಪಡಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ ತವಕ. ಬಿಜೆಪಿ-ಜೆಡಿಎಸ್ ಮೈತ್ರಿ ಇರುವುದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ವಲಸೆ ಬಂದಿರುವ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್‌ನ ರಾಜೀವ್ ಗೌಡ ನಡುವೆ ಜನ ಯಾರನ್ನು ಆರಿಸಲಿದ್ದಾರೆ..?
ಸರಣಿ- 27
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು:
ಕೆ.ಆರ್. ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ
ಈ ಎಂಟು ಕ್ಷೇತ್ರಗಳ ಪೈಕಿ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.
ಕೆ.ಆರ್.ಪುರ-ಬೈರತಿ ಬಸವರಾಜ(ಬಿಜೆಪಿ), ಬ್ಯಾಟರಾಯನಪುರ-ಕಂದಾಯ ಸಚಿವ ಕೃಷ್ಣ ಬೈರೇಗೌಡ(ಕಾಂಗ್ರೆಸ್), ಯಶವಂತಪುರ-ಎಸ್.ಟಿ. ಸೋಮಶೇಖರ್(ಬಿಜೆಪಿ), ದಾಸರಹಳ್ಳಿ-ಎಸ್.ಮುನಿರಾಜು(ಬಿಜೆಪಿ), ಮಹಾಲಕ್ಷ್ಮಿ ಲೇಔಟ್-ಕೆ.ಗೋಪಾಲಯ್ಯ(ಬಿಜೆಪಿ), ಮಲ್ಲೇಶ್ವರಂ-ಸಿ.ಎನ್. ಅಶ್ವತ್ಥ ನಾರಾಯಣ(ಬಿಜೆಪಿ), ಹೆಬ್ಬಾಳ-ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್(ಕಾಂಗ್ರೆಸ್) ಹಾಗೂ ಪುಲಕೇಶಿನಗರ-ಎ.ಸಿ.ಶ್ರೀನಿವಾಸ(ಕಾಂಗ್ರೆಸ್) ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 31,14,249. ಅವರಲ್ಲಿ ಪುರುಷ ಮತದಾರರು 16,03,410, ಮಹಿಳಾ ಮತದಾರರು 15,10,255 ಮತ್ತು ಇತರರು 584.
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳ ಪೈಕಿ ಒಟ್ಟು 2,911 ಮತಗಟ್ಟೆಗಳಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವೂ ಒಂದು. 2004ರಿಂದ ಸತತ ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿಕೊಂಡು ಬರುತ್ತಿದ್ದಾರೆ.
ಒಕ್ಕಲಿಗರು, ಪರಿಶಿಷ್ಟರು ಹಾಗೂ ಮುಸ್ಲಿಮ್ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರವು ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಹಲವು ಚುನಾವಣೆಗಳಲ್ಲಿ ಈ ಕ್ಷೇತ್ರದ ಹೆಸರು ಬದಲಾದದ್ದಿದೆ. 1951-52ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ಎಂದು ಕರೆಯಲ್ಪಟ್ಟರೆ, 1957 ಹಾಗೂ 1962ರಲ್ಲಿ ಬೆಂಗಳೂರು ನಗರ ಕ್ಷೇತ್ರ ಎಂದು ಹೆಸರು ಬದಲಾಯಿತು. 1967 ಹಾಗೂ 1971ರ ಚುನಾವಣೆಯಲ್ಲಿ ಬೆಂಗಳೂರು ಕ್ಷೇತ್ರ ಎಂದು ಕರೆಯಲಾಯಿತು. ಆನಂತರ ಪುನಃ 1977ರಿಂದ ಈವರೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲಿ ಈ ಕ್ಷೇತ್ರವನ್ನು ಬೆಂಗಳೂರು ಉತ್ತರ ಕ್ಷೇತ್ರ ಎಂದೇ ಕರೆಯಲಾಗುತ್ತಿದೆ.
ಚುನಾವಣಾ ಇತಿಹಾಸ
ಹಿರಿಯ ಕಾಂಗ್ರೆಸ್ ಧುರೀಣ ಕೇಶವ ಅಯ್ಯಂಗಾರ್, ವಿಧಾನಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಫರ್ ಶರೀಫ್, ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರಂತಹ ಘಟಾನುಘಟಿ ನಾಯಕರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
1952 ಹಾಗೂ 1957ರಲ್ಲಿ ಕೇಶವ ಅಯ್ಯಂಗಾರ್, 1962, 1967, 1971ರಲ್ಲಿ ಸತತ ಮೂರು ಬಾರಿ ಕೆಂಗಲ್ ಹನುಮಂತಯ್ಯ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ನಂತರ, 1977, 1980, 1984, 1989, 1991 ಕಾಂಗ್ರೆಸ್ ನಾಯಕ ಸಿ.ಕೆ. ಜಾಫರ್ ಶರೀಫ್ ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ಪಾತ್ರರಾದರು.
1996ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿ.ಕೆ.ಜಾಫರ್ ಶರೀಫ್ ಬದಲು ಮುಹಮ್ಮದ್ ಉಬೇದುಲ್ಲಾ ಶರೀಫ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅವರು ಜನತಾ ದಳದ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ವಿರುದ್ಧ ಪರಾಭವಗೊಂಡರು.
ಆನಂತರ, 1998, 1999ರಲ್ಲಿ ಸಿ.ಕೆ.ಜಾಫರ್ ಶರೀಫ್ ಪುನಃ ಕ್ಷೇತ್ರವನ್ನು ಕೈವಶ ಮಾಡಿಕೊಂಡರು.
2004ರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಬಿಜೆಪಿಯಿಂದ ಕಣಕ್ಕಿಳಿಯುವ ಮೂಲಕ ಮೊದಲ ಬಾರಿ ಈ ಕ್ಷೇತ್ರದಲ್ಲಿ ಕಮಲ ಅರಳಿಸಿದರು.
ಅದಾದ ನಂತರ 2009ರಲ್ಲಿ ಸಾಂಗ್ಲಿಯಾನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದು ಪರಾಭವಗೊಂಡರು.
2009ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಡಿ.ಬಿ.ಚಂದ್ರೇಗೌಡ ಗೆಲುವು ಸಾಧಿಸಿದರು.
ಇದಾದ ಬಳಿಕ, 2014 ಹಾಗೂ 2019ರಲ್ಲಿ ಸತತ ಎರಡು ಬಾರಿ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನಾಗಿಸಿದರು.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರಿಗೆ ಜೆಡಿಎಸ್ ಬೆಂಬಲ ನೀಡಿತ್ತು.
ಆದರೆ, ಈ ಚುನಾವಣೆಯಲ್ಲಿ ಚಲಾಯಿಸಲ್ಪಟ್ಟ ಒಟ್ಟು 15,60,324 ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ 8,24,500 ಮತಗಳನ್ನು (ಶೇ.52.87) ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ 6,79,982 ಮತಗಳನ್ನು (ಶೇ.43.41) ಮಾತ್ರ ಪಡೆಯುವಲ್ಲಿ ಯಶಸ್ವಿಯಾದರು. ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ 1,47,518 ಮತಗಳು ಆಗಿದ್ದರೆ, 11,632 ನೋಟಾ ಚಲಾವಣೆಯಾಗಿತ್ತು.
ಸದಾನಂದಗೌಡರಿಗೆ ಟಿಕೆಟ್ ನಿರಾಕರಣೆ- ಶೋಭಾ ಕರಂದ್ಲಾಜೆ ಕಣಕ್ಕೆ
2024ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಹಾಲಿ ಸಂಸದ ಡಿ.ವಿ. ಸದಾನಂದಗೌಡ ಈಗಾಗಲೇ ಪ್ರಕಟ ಮಾಡಿ ನಂತರ ನಾಯಕರ ಒತ್ತಾಯದ ಮೇಲೆ ತೀರ್ಮಾನ ವಾಪಸ್ ಪಡೆದಿದ್ದರು. ಅವರಿಗೆ ಟಿಕೆಟ್ ಭರವಸೆ ನೀಡಿ ಕೊನೆಗೆ ಶೋಭಾ ಕರಂದ್ಲಾಜೆ ಅವರನ್ನು ಉಡುಪಿ ಚಿಕ್ಕಮಗಳೂರಿನಿಂದ ಕರೆ ತಂದು ಇಲ್ಲಿ ಕಣಕ್ಕಿಳಿಸಲಾಗಿದೆ.
ಟಿಕೆಟ್ ಮಿಸ್ಸಾಗಿದ್ದಕ್ಕೆ ಸಿಟ್ಟಾಗಿರುವ ಸದಾನಂದ ಗೌಡ ಯಡಿಯೂರಪ್ಪ ಕುಟುಂಬದ ಸ್ವಾರ್ಥ ರಾಜಕಾರಣದ ಬಗ್ಗೆ ಮಾತಾಡಿದ್ದಾರೆ. ಕಾಂಗ್ರೆಸ್ ಆಹ್ವಾನ ಬಂದರೂ ಅದನ್ನು ತಿರಸ್ಕರಿಸಿರುವ ಡಿವಿಎಸ್, ರಾಜ್ಯದಲ್ಲಿ ಪಕ್ಷ ಶುದ್ಧಿಗೊಳಿಸುವ ತನಕ ವಿರಮಿಸುವುದಿಲ್ಲ ಅಂತ ಪಣ ತೊಟ್ಟಿದ್ದಾರೆ.
ಮತ್ತೊಂದೆಡೆ ಉಡುಪಿ-ಚಿಕ್ಕಮಗಳೂರಿನ ವಿರೋಧದಿಂದ ಈ ಕ್ಷೇತ್ರದಿಂದ ಶೋಭಾ ಇಲ್ಲಿ ಟಿಕೆಟ್ ಗಿಟ್ಟಿಸಿಕೊಂಡರೂ ಇಲ್ಲೂ ಕಾರ್ಯಕರ್ತರಿಂದ ‘ಗೋ ಬ್ಯಾಕ್’ ಅಭಿಯಾನದ ಬಿಸಿ ಅನುಭವಿಸಬೇಕಿದೆ.
ಯಶವಂತಪುರದಲ್ಲಿ ಈ ಹಿಂದಿನ ಸ್ಪರ್ಧೆ ಮತ್ತು ಕ್ಷೇತ್ರದೊಂದಿಗೆ ಒಡನಾಟ ಇಟ್ಟುಕೊಂಡಿರುವುದರ ಜೊತೆ ಸಮುದಾಯದ ಬಲ ಶೋಭಾ ಕೈ ಹಿಡಿಯಬಹುದು.
ನರೇಂದ್ರ ಮೋದಿ ಅಂಶ ಕೂಡ ಶೋಭಾ ಸಹಾಯಕ್ಕೆ ಬರಬಹುದು.
ಶೋಭಾಗೆ ಹಿನ್ನಡೆ ತರಬಲ್ಲ ಅಂಶಗಳು
- ಪ್ರತೀ ಬಾರಿ ವಲಸಿಗರ ಸ್ಪರ್ಧೆಯಿಂದ ಮತದಾರರು ಬೇಸತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರಿನ ವಿರೋಧವೂ ಇಲ್ಲಿ ಹಿನ್ನಡೆ ತರಬಹುದು
- ಈ ನಡುವೆ ತಮಿಳುನಾಡಿನ ವಿರುದ್ಧದ ನಾಲಿಗೆ ಹರಿಬಿಟ್ಟ ವಿಚಾರವೂ ಶೋಭಾಗೆ ಹಿನ್ನಡೆ ತರಬಹುದು.
-ಪ್ರತೀ ಬಾರಿ ಕೋಮು ದ್ವೇಷದ ಹೇಳಿಕೆಗಳಿಂದ ಜನ ಬೇಸತ್ತಿದ್ದಾರೆ
- ಕಾಂಗ್ರೆಸ್ ಕಡೆ ವಾಲಿರುವ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ವಿರೋಧಕ್ಕೆ ಹೆಚ್ಚು ಬೆಲೆ ತೆರಬೇಕಾಗಬಹುದು
- ಸದಾನಂದ ಗೌಡರಿಗೆ ವಿನಾಕಾರಣ ಟಿಕೆಟ್ ನಿರಾಕರಿಸಿ, ಅವರ ಬಹಿರಂಗ ವಿರೋಧ ಈ ಬಾರಿ ಬಿಜೆಪಿ ಅಭ್ಯರ್ಥಿ ಪಾಲಿಗೆ ಕಂಟಕ ಆಗಬಹುದು
ಕಾಂಗ್ರೆಸ್‌ನಿಂದ ಪ್ರೊ. ರಾಜೀವ್ ಗೌಡ
ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ಎಂ.ವಿ. ರಾಜೀವ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿರುವ ಒಕ್ಕಲಿಗರ ಬಲ ಶೋಭಾ ಮತ್ತು ರಾಜೀವ್ ಗೌಡ ಇಬ್ಬರಿಗೂ ಶಕ್ತಿ. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಬಲವೂ ರಾಜೀವ್ ಅವರಿಗಿದೆ.
ರಾಜೀವ್ ಗೌಡ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿದ್ದು, ಅವರು ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿನ ಅನುಭವ, ಉನ್ನತ ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿನ ಅವರ ಅನುಭವ ಸಹಾಯಕ್ಕೆ ಬರಬಹುದು.
ಸದಾನಂದ ಗೌಡ ಅಸಮಾಧಾನ ಮತ್ತು ಶೋಭಾ ವಿರುದ್ಧದ ಮತಗಳು ಅದೇ ಸಮುದಾಯದ ರಾಜೀವ್ ಗೌಡ ಪರ ಬಂದರೂ ಅಚ್ಚರಿ ಇಲ್ಲ.
ಒಟ್ಟಿನಲ್ಲಿ ಅಖಾಡ ರಂಗೇರುತ್ತಾ ಇದ್ದು, ವಲಸೆ ಬಂದಿರುವ ಶೋಭಾ ಅಥವಾ ಕಾಂಗ್ರೆಸ್‌ನ ರಾಜೀವ್ ಗೌಡ ಅವರಲ್ಲಿ ಜನ ಯಾರನ್ನು ಬೆಂಬಲಿಸುತ್ತಾರೆಂದು ಕಾದು ನೋಡಬೇಕಾಗಿದೆ.
ವಿಪಕ್ಷಗಳನ್ನು ಹಣಿಯುವ ಮೋದಿ ಸರಕಾರದ ನಡೆ ಈಗ ?ಅದಕ್ಕೆ ತಿರುಗುಬಾಣವಾಗಲಿದೆಯೇ ?