ಮಹದೇಶ್ವರಬೆಟ್ಟದಲ್ಲಿ ಸಚಿವ ಸಂಪುಟ ಸಭೆ : ಚಾಮರಾಜನಗರ ಜಿಲ್ಲೆಯ ಜ್ವಲಂತ ಸಮಸ್ಯೆಗೆ ಮುಕ್ತಿ ಸಿಗುವುದೇ?

ಚಾಮರಾಜನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎ.24ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಗಡಿ ಜಿಲ್ಲೆಯ ಜಲ್ವಂತ ಸಮಸ್ಯೆ ಬಗೆಹರಿಸುವಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ಹಾಗೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಎಂದು ಹೇಳಲಾಗಿದೆ.
ಈಗಾಗಲೇ ರಾಜ್ಯ ಸರಕಾರದಿಂದ ಜಿಲ್ಲಾಡಳಿತಕ್ಕೆ ಜಿಲ್ಲೆಯಲ್ಲಿ ಇರುವ ಪ್ರಮುಖ ಸಮಸ್ಯೆಗಳ ವಿವರವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಪ್ರಸ್ತಾವವನ್ನು ಕಳುಹಿಸುವಂತೆ ಸೂಚಿಸಲಾಗಿದ್ದು, ಅದರಂತೆ ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸರಣಿ ಸಭೆ ನಡೆಸಲಾಗುತ್ತಿದೆ.
ಪ್ರಮುಖವಾಗಿ ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಗೆ ಸಿಬ್ಬಂದಿ ನೇಮಕ ಮಾಡುವುದು, ದುಸ್ಥಿತಿಯಲ್ಲಿರುವ ಸರಕಾರಿ ಶಾಲೆಗಳ ದುರಸ್ಥಿಗೆ ಕ್ರಮ ವಹಿಸುವುದು, ಗುಡ್ಡಗಾಡಿನಲ್ಲಿ ಕಚ್ಚಾ ರಸ್ತೆ ನಿರ್ಮಾಣ, ಹಾಡಿ ಪೋಡುಗಳಲ್ಲಿ ಕಿರು ಆರೋಗ್ಯ ಕೇಂದ್ರ ತೆರೆಯುವುದು, ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಜನ ವಸತಿ ಹಾಡಿಗಳಲ್ಲಿ ವಾಸ ಮಾಡುವವರಿಗೆ ಸುಗಮ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಪೂರೈಕೆ, ವಿದ್ಯುತ್ ಸೌಕರ್ಯ ಸೇರಿದಂತೆ ಹಲವು ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು.
ಸಚಿವ ಸಂಪುಟದಲ್ಲಿ ಪ್ರಮುಖವಾಗಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿರುವ ತಮಿಳುನಾಡು ಸರಕಾರದ ತಕರಾರು ಬಗ್ಗೆ ಚರ್ಚೆ ನಡೆಯಲಿದೆ. ಹೊಗನೇಕಲ್ ಪ್ರದೇಶವನ್ನು ಮತ್ತಷ್ಟು ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಯೋಜನೆ ಪ್ರಸ್ತಾಪ ಹಾಗೂ ಪಾಲಾರ್ ಗಡಿಯಿಂದ ಹೊಗನೇಕಲ್ ತನಕ ಸುಗಮ ಸಂಚಾರಕ್ಕೆ ರಸ್ತೆ ನಿರ್ಮಾಣದ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳಾದ ಬೆಳೆಗಳಿಗೆ ಬೆಂಬಲ ಬೆಲೆ, ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ದರ ನಿಗದಿ, ಬಾಕಿ ಪಾವತಿ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ.ಕಾಡಂಚಿನಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ನಿಲುಗಡೆಗೆ ತೆಗೆದುಕೊಳ್ಳಬಹುದಾದ ಕ್ರಮ ಮತ್ತು ಯೋಜನೆ ಬಗ್ಗೆ ವ್ಯಾಪಕ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.
ಹನೂರಿನಲ್ಲಿ 100 ಹಾಸಿಗೆಯುಳ್ಳ ತಾಲೂಕು ಆಸ್ಪತ್ರೆ ಮಂಜೂರು ಹಾಗೂ ಸಿಬ್ಬಂದಿ ನೇಮಕಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದ್ದು, ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.
ನಾಲ್ ರೋಡ್ ನಿಂದ ತಮಿಳುನಾಡು ಗಡಿ ತನಕ ರಸ್ತೆ ದುರಸ್ಥಿಗೆ ವಿಶೇಷ ಅನುದಾನ ಮಂಜೂರಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿನ ವಸತಿ ರಹಿತರಿಗೆ ವಸತಿ ಕಲ್ಪಿಸಲು ವಿಶೇಷ ಯೋಜನೆಯನ್ನು ಅನುಷ್ಠಾನ ಸೇರಿದಂತೆ ವಿಶೇಷ ಪ್ಯಾಕೇಜ್ ಮಂಜೂರಾತಿ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನವಾಗುವ ಸಾಧ್ಯತೆಗಳಿವೆ. ಇದಕ್ಕಾಗಿಯೇ ಜಿಲ್ಲಾಡಳಿತವು ವಿವಿಧ ಇಲಾಖೆಯಿಂದ ಜಿಲ್ಲೆಗೆ ಬೇಕಾಗಿರುವ ಸೌಲಭ್ಯಗಳು ಮತ್ತು ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಿದ್ದಪಡಿಸಿಕೊಂಡಿದ್ದು, ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗುತ್ತಿದೆ ಎನ್ನಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲದೇ ಮೈಸೂರು ಪ್ರಾದೇಶಿಕಕ್ಕೆ ಒಳಪಡುವ ಜಿಲ್ಲೆಗಳ ಸಮಸ್ಯೆ ಮತ್ತು ಪರಿಹಾರದ ಬಗ್ಗೆಯೂ ಸಹ ಸಚಿವ ಸಂಪುಟದಲ್ಲಿ ಚರ್ಚೆ ಯಾಗುವ ಸಾಧ್ಯತೆಗಳಿವೆ. ಇದಕ್ಕೆಲ್ಲವೂ ಎ.24ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಉತ್ತರ ಸಿಗಲಿದೆ.