ಈ ಬೇಸಿಗೆ ತಡೆದುಕೊಳ್ಳುವುದೇ ಬೆಂಗಳೂರು?

2018-2022ರವರೆಗೆ ಐದು ವರ್ಷಗಳ ಕಾಲ ಒಟ್ಟಾರೆ ಕರ್ನಾಟಕದಲ್ಲಿ ಒಳ್ಳೆಯ ಮಳೆಯಾಗಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿರಲಿಲ್ಲ. ಆದರೆ 2023ರ ಮುಂಗಾರು ಮಳೆ ಸಂಪೂರ್ಣವಾಗಿ ವಿಫಲವಾಗಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದೆ.

Update: 2024-03-01 05:41 GMT

ಕರ್ನಾಟಕದಲ್ಲಿ 7 ದೊಡ್ಡ ನದಿಗಳು ಮತ್ತು ಅವುಗಳ ಉಪನದಿಗಳಿದ್ದು ಅವುಗಳಲ್ಲಿ 26 ನದಿಗಳು ಪಶ್ಚಿಮಘಟ್ಟದಿಂದ ಪೂರ್ವಕ್ಕೆ ಹರಿದರೆ 12 ನದಿಗಳು ಪಶ್ಚಿಮಕ್ಕೆ ಹರಿಯುತ್ತವೆ. 2018ರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕಾವೇರಿ ನದಿಕೊಳ್ಳದಿಂದ 404 ಟಿಎಂಸಿ ತಮಿಳುನಾಡಿಗೆ, 284 ಟಿಎಂಸಿ ಕರ್ನಾಟಕಕ್ಕೆ, 30 ಟಿಎಂಸಿ ಕೇರಳ ಮತ್ತು 7 ಟಿಎಂಸಿ ನೀರನ್ನು ಪಾಂಡಿಚೇರಿಗೆ ನೀಡಬೇಕಾಗಿದೆ. ಕಾವೇರಿ ನೀರಿನ ಹಂಚಿಕೆ ಬ್ರಿಟಿಷರ ಕಾಲದಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ವಿಪರ್ಯಾಸವೆಂದರೆ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸಲಾಗುತ್ತಿದೆ. ಬೆಂಗಳೂರಿಗರಿಗೆ ಅದು ತ್ಯಾಜ್ಯನೀರು! ಜಿಲ್ಲೆಗಳಿಗೆ ಒಳ್ಳೆಯ ನೀರಾಗುತ್ತದೆಯೇ! ಜಗತ್ತಿನಲ್ಲಿ ಯಾವುದೇ ದೇಶ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಅಂತರ್ಜಲಕ್ಕೆ ಸೇರಿಸುತ್ತಿಲ್ಲ.

130 ಕೋಟಿ ಜನರ ವಾಸಸ್ಥಾನವಾಗಿರುವ ಬೆಂಗಳೂರು ಮಹಾನಗರ ಭವಿಷ್ಯದಲ್ಲಿ ಜಗತ್ತಿನಲ್ಲಿಯೇ ನೀರಿನ ಅಭಾವಕ್ಕೆ ಒಳಗಾಗುವ ಪಟ್ಟಿಯಲ್ಲಿ 1ನೇ ಅಥವಾ 2ನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಆಫ್ರಿಕಾದ ಕೇಪ್‌ಟೌನ್ ವಾಸಿಗರು ದಶಕದ ಹಿಂದೆಯೇ ಮನೆಗಳನ್ನು ಬಿಟ್ಟುಹೋದರು; ಅಥವಾ ಆಗಾಗ ಬಂದುಹೋಗುತ್ತಾರೆ. ಬೆಂಗಳೂರಿನ ಜೊತೆಗೆ ಪಟ್ಟಿಯಲ್ಲಿರುವ ಮಹಾನಗರಗಳೆಂದರೆ ಸಾವೊ ಪೋಲೊ, ಸ್ಯಾನ್ ಡಿಯಾಗೊ, ಲಾಸ್ ವೇಗಾಸ್, ಸ್ಯಾನ್ ಆಂಟೋನಿಯೊ, ಬೀಜಿಂಗ್, ಹೊಸದಿಲ್ಲಿ, ಮೆಕ್ಸಿಕೋನಗರ, ಕೈರೋ, ಟೋಕಿಯೋ, ಇಸ್ತಾಂಬುಲ್, ಜಕಾರ್ತ, ಮಾಸ್ಕೋ, ಲಂಡನ್ ಇತ್ಯಾದಿ.

ರಾಜ್ಯದಲ್ಲಿ ವಾರ್ಷಿಕವಾಗಿ ದೊರಕುವ ಒಟ್ಟು ಮಳೆ-ನೀರು ಸುಮಾರು 3,500 ಟಿಎಂಸಿಗಳು. ಇದರಲ್ಲಿ ಪೂರ್ವಕ್ಕೆ ಹರಿಯುವ ನದಿಗಳಿಂದ 1,500 ಟಿಎಂಸಿ ನೀರು ದೊರಕುತ್ತಿದ್ದು ಅದರಲ್ಲಿ ಸುಮಾರು 1,000 ಟಿಎಂಸಿ ನೀರನ್ನು ಸಂಗ್ರಹಣೆ ಮಾಡುವ ವ್ಯವಸ್ಥೆ ಇದ್ದು ಉಳಿದ 500 ಟಿಎಂಸಿ ನೀರು ಬಂಗಾಳಕೊಲ್ಲಿ ಸೇರುತ್ತದೆ. ಪಶ್ಚಿಮಕ್ಕೆ ಹರಿಯುವ ನದಿಗಳಿಂದ 2,000 ಟಿಎಂಸಿ ನೀರು ದೊರಕುತ್ತಿದ್ದು ಅದರಲ್ಲಿ ಕೇವಲ 350 ಟಿಎಂಸಿ ನೀರು ಮಾತ್ರ ಸಂಗ್ರಹಣೆ ಮಾಡುವ ವ್ಯವಸ್ಥೆ ಇದ್ದು ಉಳಿದ 1,650 ಟಿಎಂಸಿ ನೀರು ಅರೇಬಿಯನ್ ಸಮುದ್ರ ಸೇರುತ್ತದೆ. ಬೆಂಗಳೂರಿಗೆ ಕಾವೇರಿ ಕೊಳ್ಳದಿಂದ ವಾರ್ಷಿಕ 19 ಟಿಎಂಸಿ ಮತ್ತು ಉಳಿದ ಹಳ್ಳಿಗಳು, ಪಟ್ಟಣ-ಪಂಚಾಯತ್‌ಗಳಿಗೆ 19 ಟಿಎಂಸಿ ನೀರನ್ನು ಕಾಯ್ದಿರಿಸಲಾಗುತ್ತದೆ. ಇದರ ಜೊತೆಗೆ ಸುಮಾರು 7 ಟಿಎಂಸಿ ನೀರನ್ನು ಕೊಳವೆಬಾವಿಗಳಿಂದ ಪಡೆಯಲಾಗುತ್ತದೆ!

ನಮ್ಮ ರಾಜ್ಯದ ಬಿಡಿಸಲಾಗದ ಸಮಸ್ಯೆಯೆಂದರೆ ಕಾವೇರಿ ಕೊಳ್ಳದ ನೀರಿನ ರಾಜ್ಯವಾರು ಹಂಚಿಕೆ. ಕಾವೇರಿ ಅದರ ಉಪನದಿಗಳು ಕರ್ನಾಟಕದಲ್ಲಿ ಹುಟ್ಟಿ ಕೆಳರಾಜ್ಯಗಳಿಗೆ ಹರಿಯುವುದರಿಂದ ರಾಜ್ಯದ ನದಿ-ಅಣೆಕಟ್ಟುಗಳಿಂದ ಕೆಳರಾಜ್ಯಗಳಿಗೆ ನೀರನ್ನು ಹಂಚಿಕೆ ಮಾಡುವ ವ್ಯವಸ್ಥೆ ಇದೆ. ಆಘಾತಕರ ವಿಷಯವೆಂದರೆ ಕಾವೇರಿ ಕೊಳ್ಳದ ಜಲಾನಯನ ಪ್ರದೇಶದಲ್ಲಿ ಮಳೆ ಬೀಳಲಿ, ಬೀಳದೆ ಹೋಗಲಿ ಕರ್ನಾಟಕ ರಾಜ್ಯ ಸುಪ್ರೀಂ ಕೋರ್ಟ್ ತೀರ್ಪಿನಂತೆ ನೀರನ್ನು ಬಿಡಗಡೆ ಮಾಡಬೇಕಾಗುತ್ತದೆ! ಆಯಾ ವರ್ಷ ಎಷ್ಟು ಮಳೆ ಬೀಳುತ್ತದೆ ಅದರ ಪ್ರಕಾರ ನೀರನ್ನು ವೈಜ್ಞಾನಿಕವಾಗಿ ಲೆಕ್ಕಹಾಕಿ ನೀರನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುವ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಕೆಲವೊಮ್ಮೆ ಕರ್ನಾಟಕ ರಾಜ್ಯ ತನ್ನ ರೈತರ ಕೈಕಟ್ಟಿ, ಒಂದೇ ಬೆಳೆ ಅಥವಾ ಕಬ್ಬು, ಭತ್ತ ಬೆಳೆಯದಂತೆ ಎಚ್ಚರಿಸಿ, ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯುವ ತಮಿಳುನಾಡಿಗೆ ನೀರು ಹರಿಸುತ್ತದೆ. ಕರ್ನಾಟಕದ ರಾಜಕಾರಣಿಗಳು ರಾಜ್ಯದ ಪ್ರಶ್ನೆ ಬಂದಾಗ ಒಂದಾಗದೆ ಇರುವುದೇ ಹೆಚ್ಚು, ಆದರೆ ತಮಿಳುನಾಡು ರಾಜಕಾರಣಿಗಳು/ಜನರು ಇಂತಹ ವಿಷಯ ಬಂದಾಗ ಒಟ್ಟಾಗಿ ನಿಂತು ಹೋರಾಡುತ್ತಾರೆ.

ಬೆಂಗಳೂರಿನ ಜನಸಂಖ್ಯೆ ಈಗ ಸುಮಾರು 1,36,08,000 (2023) ಎನ್ನಲಾಗಿದೆ. ಕುಡಿಯುವ ನೀರಿನ ತೊಂದರೆ ತಲೆದೋರಿದಾಗ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯುವ ಅವಕಾಶಗಳು ಬೆಂಗಳೂರಿಗಿಲ್ಲ ಮತ್ತು ಹತ್ತಿರದಲ್ಲಿ ಹರಿಯುವ ಯಾವ ನದಿಯೂ ಇಲ್ಲ. ಇರುವ ಒಂದೇ ಒಂದು ನದಿಯೆಂದರೆ 100 ಕಿ.ಮೀ.ಗಳ ದೂರದಲ್ಲಿರುವ ಕಾವೇರಿ. ಕಾವೇರಿಯಿಂದ ತರುವ ನೀರಿನಲ್ಲಿ ಸುಮಾರು ಶೇ. 30ರಷ್ಟು ನೀರು ತುಕ್ಕು ಹಿಡಿದ ಪೈಪ್‌ಗಳಲ್ಲಿ ಪೋಲಾಗುವುದಾಗಿ ಬಿಡಬ್ಲುಎಸ್‌ಎಸ್ ಹೇಳಿಕೊಂಡಿದೆ. ಜೊತೆಗೆ ಸಾಕಷ್ಟು ಅನಧಿಕೃತ ಸಂಪರ್ಕಗಳೂ ಇವೆ. 2018-2022ರವರೆಗೆ ಐದು ವರ್ಷಗಳ ಕಾಲ ಒಟ್ಟಾರೆ ಕರ್ನಾಟಕದಲ್ಲಿ ಒಳ್ಳೆಯ ಮಳೆಯಾಗಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿರಲಿಲ್ಲ. ಆದರೆ 2023ರ ಮುಂಗಾರು ಮಳೆ ಸಂಪೂರ್ಣವಾಗಿ ವಿಫಲವಾಗಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದೆ.

ಈಗ ಮಾರ್ಚ್ ತಿಂಗಳು ಆರಂಭ ವಾಗಿದ್ದು ಇನ್ನೂ ಕನಿಷ್ಠ ಮೂರು-ನಾಲ್ಕು ತಿಂಗಳಾದರೂ (ಮುಂಗಾರು ಮಳೆ ಬರುವವರೆಗೆ) ಬೆಂಗಳೂರಿನ ಜನರು ತಡೆದುಕೊಳ್ಳ ಬೇಕಾಗುತ್ತದೆ. ಬೆಂಗಳೂರು ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬರುವ ಹಳ್ಳಿಪಟ್ಟಣಗಳಿಗೆ ತಿಂಗಳಿಗೆ 3 ಟಿಎಂಸಿ ನೀರು ಬೇಕಾಗುತ್ತದೆ. ಬೆಂಗಳೂರಿಗೆ ತಿಂಗಳಿಗೆ ಕನಿಷ್ಠ 1.5 ಟಿಎಂಸಿ ಎಂದರೆ ಜೂನ್-ಜುಲೈ ತಿಂಗಳವರೆಗೆ 4-5 ಟಿಎಂಸಿ ನೀರಾದರೂ ಬೇಕು. ಬೆಂಗಳೂರಿನ ಅಂತರ್ಜಲದ ಮಟ್ಟ ಎಷ್ಟು ಆಳಕ್ಕೆ ಕುಸಿದಿದೆ? ಇಲ್ಲ ಖಾಲಿಯಾಗಿದೆಯೋ ಗೊತ್ತಿಲ್ಲ! ಬೆಂಗಳೂರಿನಲ್ಲಿ ಸರಕಾರದ ಹೇಳಿಕೆಯಂತೆ ಸುಮಾರು 10.84 ಲಕ್ಷ ನೀರಿನ ಸಂಪರ್ಕಗಳಿವೆ. 10,955 ಕೊಳವೆಬಾವಿಗಳಲ್ಲಿ 1,214 ಕೊಳವೆಬಾವಿ ಗಳು ಬತ್ತಿದ್ದು 3,700 ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಎಂದಿದೆ. ಇನ್ನೊಂದು ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಖಾಸಗಿಯಾಗಿ 5 ಲಕ್ಷಕ್ಕಿಂತ ಹೆಚ್ಚು ಕೊಳವೆಬಾವಿಗಳು ಇವೆ. ಅವುಗಳಲ್ಲಿ ಎಷ್ಟು ಕೊಳವೆಬಾವಿಗಳು ಬತ್ತಿಹೋಗಿವೆ ಎನ್ನುವ ಲೆಕ್ಕ ಎಲ್ಲೂ ದೊರಕುವುದಿಲ್ಲ. ಈಗ ದೊರಕುತ್ತಿರುವ ನೀರು ಹೆಚ್ಚಾಗಿ ಕೆರೆಗಳ ಸುತ್ತಮುತ್ತಲಿನ ಕೊಳವೆಬಾವಿಗಳಿಂದ ಹೊರತೆಗೆಯಲಾಗುತ್ತಿದ್ದು ಹೆಚ್ಚಿನ ಕಲ್ಮಷದಿಂದ ಕೂಡಿರುತ್ತದೆ.

ನಾನಿರುವ ಸುಮಾರು 400 ಫ್ಲ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್ಸ್‌ಗೆ ದಿನಕ್ಕೆ 50 ಲಕ್ಷ ಲೀಟರುಗಳ (ಸ್ವಂತ) ಕೊಳವೆಬಾವಿ ನೀರು, 3 ಲಕ್ಷ ಲೀಟರುಗಳ (ವಾರಕ್ಕೆ) ಕಾವೇರಿ ನೀರು ಮತ್ತು ದಿನಕ್ಕೆ 20-25 ಟ್ಯಾಂಕರುಗಳಿಂದ ನೀರನ್ನು ತರಿಸಿಕೊಳ್ಳಲಾಗುತ್ತಿದೆ. ಈಗ ಒಂದು ಟ್ಯಾಂಕರ್ ನೀರಿಗೆ ಕನಿಷ್ಠ 1,200ರೂ. ಗರಿಷ್ಠ ಬೆಲೆ ಪರಿಸ್ಥಿತಿಗೆ ತಕ್ಕಂತಿರುತ್ತದೆ. ಒಂದು ಟ್ಯಾಂಕರ್‌ನಲ್ಲಿ 10,000-12,000 ಲೀಟರುಗಳ ನೀರು ಇರುತ್ತದೆ. ಸರಕಾರ ಕುಡಿಯುವ ನೀರನ್ನು ಹೇಗೆ ಕಡಿಮೆ ಉಪಯೋಗಿಸಬೇಕು ಎನ್ನುವುದರ ಬಗ್ಗೆ ಚರ್ಚಿಸುತ್ತಿಲ್ಲ ಎನಿಸುತ್ತದೆ! ಕುಡಿಯುವ, ಸ್ನಾನಮಾಡುವ ನೀರಿಗಿಂತ ಹೆಚ್ಚಾಗಿ ಪೋಲಾಗುತ್ತಿರುವುದು ನೇರವಾಗಿ ನಲ್ಲಿಗಳಲ್ಲಿ ನೀರು ಬಿಟ್ಟುಕೊಂಡು ಪಾತ್ರೆಗಳನ್ನು ತೊಳೆಯುವುದರಿಂದ. ಫ್ಲ್ಯಾಟುಗಳು, ಸ್ವಂತ ಮನೆಗಳಿರುವ ಹಣವಂತರು ಸಾಕಷ್ಟು ಹಣ ಕೊಟ್ಟು ನೀರು ಕೊಂಡಕೊಳ್ಳಬಹುದು, ಆದರೆ ಸಾರ್ವಜನಿಕ ಕೊಳಾಯಿಗಳನ್ನು ನಂಬಿಕೊಂಡಿರುವ ಬಡವರ ಗತಿ ಏನಾಗಬಹುದು? ಸರಕಾರ ತುರ್ತಾಗಿ ನೀರಿನ ಬಗ್ಗೆ ಕೆಲವು ನಿರ್ಬಂಧಗಳನ್ನು ಹೇರಬೇಕಿದೆ. ಜನರಿಗೆ ನೀರಿನ ಅಭಾವ ಗೊತ್ತಾದಾಗ ಮಾತ್ರ ಅದರ ಬೆಲೆ ಗೊತ್ತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಎಂ. ವೆಂಕಟಸ್ವಾಮಿ

contributor

Similar News