ಸಿಎಎ ಅಸ್ತ್ರದಿಂದ ಬಿಜೆಪಿಗೆ ಚುನಾವಣೆ ಗೆಲ್ಲಲು ಸಾಧ್ಯವೇ?

ಮತ್ತೆ ‘ಸಿಎಎ’(ಪೌರತ್ವ ತಿದ್ದುಪಡಿ ಕಾಯ್ದೆ)ಯ ಚರ್ಚೆ ಜೋರಾಗಿದೆ. ಇಬ್ಬರು ಕೇಂದ್ರ ಸಚಿವರು ಸಿಎಎ ಜಾರಿ ಬೇಗ ಆಗಲಿದೆ ಎಂದು ಹೇಳಿದ್ದಾರೆ. ಅದರ ಬೆನ್ನಿಗೇ ವಾಟ್ಸ್‌ಆ್ಯಪ್‌ಗಳಲ್ಲಿ ಸಿಎಎ ಕುರಿತ ಚರ್ಚೆ, ಮೆಸೇಜುಗಳ ಭರಾಟೆಯೂ ಜೋರಾಗಿದೆ. ಹಾಗಾದರೆ ಬಿಜೆಪಿ ನಿಜಕ್ಕೂ ಸಿಎಎ ಜಾರಿ ಮಾಡಲಿದೆಯೇ ? ಅಥವಾ ಅದೂ ಒಂದು ಚುನಾವಣಾ ಜುಮ್ಲಾ ಆಗಲಿದೆಯೇ ? ಲೋಕಸಭಾ ಚುನಾವಣೆಯ ಹೊತ್ತಲ್ಲಿಯೇ ಸರಿಯಾಗಿ ಬಿಜೆಪಿ ಯಾಕೆ ಸಿಎಎ ವಿಚಾರವನ್ನು ಮುನ್ನೆಲೆಗೆ ತರುತ್ತಿದೆ? ಬಂಗಾಳದಲ್ಲಿ ಅದಕ್ಕೆ ಸಿಎಎ ಚರ್ಚೆ ಯಾಕೆ ಬಹಳ ಮುಖ್ಯ? ಅದೇ ವೇಳೆ ಸಿಎಎ ಜಾರಿ ಮಾಡಲು ಬಿಜೆಪಿಗೆ ಇರುವ ಅಡೆತಡೆಗಳೇನು? ಹೇಗೆ ಅದು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಒಡ್ಡುವ ಸವಾಲನ್ನು ಎದುರಿಸಲಿದೆ?

Update: 2024-02-02 06:08 GMT
Editor : jafar sadik | Byline : ಪೂರ್ವಿ

Photo: PTI

ಈಗಾಗಲೇ ಎಲ್ಲರೂ ಗಮನಿಸಿರುವಂತೆ ಬಿಜೆಪಿ ಮತ್ತೊಮ್ಮೆ ಸಿಎಎಯನ್ನು ತನ್ನ ರಾಜಕೀಯ ಅಜೆಂಡವನ್ನಾಗಿಸಿಕೊಂಡು ಮುಂದೆ ಬಂದಿದೆ. ಕೇಂದ್ರ ಸಚಿವರೂ ಆಗಿರುವ ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ನಾಯಕರು ಮೋದಿ ಸರಕಾರ ಬಹುಬೇಗ ಸಿಎಎ ಜಾರಿಗೊಳಿಸಲಿದೆ ಎಂದಿದ್ದಾರೆ.

ಅವರಲ್ಲಿ ಒಬ್ಬರು ಶಂತನು ಠಾಕೂರ್ ಮತ್ತು ಇನ್ನೊಬ್ಬರು ನಿಸಿತ್ ಪ್ರಮಾಣಿಕ್. ಮತುವಾ ಸಮುದಾಯದ ನಾಯಕ ಶಂತನು ಠಾಕೂರ್ ಅವರಂತೂ ಒಂದು ವಾರದಲ್ಲೇ ಸಿಎಎ ಜಾರಿಯಾಗಲಿದೆ ಎಂದು ಅಬ್ಬರಿಸಿದ್ದನ್ನು ಗಮನಿಸಬಹುದು. ಆದರೆ ನಿಸಿತ್ ಪ್ರಮಾಣಿಕ್ ಅಂಥ ಯಾವುದೇ ನಿರ್ದಿಷ್ಟಗಡುವನ್ನು ಪ್ರಸ್ತಾಪಿಸಿಲ್ಲ.

ಸ್ವಲ್ಪ ಸಮಯದ ಹಿಂದೆ, ಅಂದರೆ 2023ರ ಡಿಸೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನಾಲ್ಕು ವರ್ಷಗಳ ಬಳಿಕ ಮತ್ತೆ ಸಿಎಎ ವಿಚಾರವನ್ನು ಪಶ್ಚಿಮ ಬಂಗಾಳದಲ್ಲಿ ತೆಗೆದಿದ್ದರು. ಕೋಲ್ಕತ್ತಾದಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ‘‘ಸಿಎಎ ದೇಶದ ಕಾನೂನು ಮತ್ತು ಅದರ ಅನುಷ್ಠಾನವನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ’’ ಎಂದು ಆಗಲೇ ತಮ್ಮ ಚುನಾವಣಾ ಉದ್ದೇಶದ ಆಟ ಶುರು ಮಾಡಿದ್ದರು.

ಅದನ್ನೇ ಬಿಜೆಪಿ ಈಗ ಮಾಡುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಗಾಗಿ ಈ ಘೋಷಣೆಯನ್ನು ದೊಡ್ಡ ಅಬ್ಬರದೊಂದಿಗೆ ಮಾಡಲಾಗುತ್ತಿದೆ. ಆದರೆ ಇದು ಯಥಾ ಪ್ರಕಾರ ಚುನಾವಣೆಯ ಹೊತ್ತಿನ ರಣತಂತ್ರವೇ ಎಂಬ ಅನುಮಾನವೂ ಎದ್ದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ, ಕಳೆದ ಕೆಲ ವರ್ಷಗಳಿಂದ ಬಿಜೆಪಿ ಕೆಳ ಜಾತಿಯ ಹಿತಾಸಕ್ತಿಗಳ ರಕ್ಷಕ ಎಂಬಂತೆ ತನ್ನನ್ನು ಬಿಂಬಿಸಿಕೊಳ್ಳತೊಡಗಿದೆ. ಆ ಮೂಲಕ ಕೆಳ ಜಾತಿಯ ಹಿಂದೂ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಿದೆ.

ಪಶ್ಚಿಮ ಬಂಗಾಳದ ಒಟ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯಲ್ಲಿ ಶೇ.18.35ರಷ್ಟು ರಾಜಬನ್ಶಿ ಸಮುದಾಯದವರಿದ್ದರೆ, ಶೇ.17.41ರಷ್ಟು ನಾಮಶೂದ್ರ ಸಮುದಾಯದವರಿದ್ದಾರೆ. ಈ ಎರಡೂ ಬಹು ದೊಡ್ಡ ಸಮುದಾಯಗಳ ನಡುವೆ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಬಿಜೆಪಿ ಕಸರತ್ತು ನಡೆಸುತ್ತಿದೆ.

ರಾಜಬನ್ಶಿಗಳು ಪಶ್ಚಿಮ ಬಂಗಾಳದ ಅತಿದೊಡ್ಡ ಪರಿಶಿಷ್ಟ ಜಾತಿಯ ಸಮುದಾಯವಾಗಿದ್ದು, ಉತ್ತರ ಬಂಗಾಳದ ಜನಸಂಖ್ಯೆಯ ಅಂದಾಜು ಶೇ.30ರಷ್ಟಿದೆ. 2019ರ ಚುನಾವಣೆಯಲ್ಲಂತೂ ಶೇ.15ಕ್ಕಿಂತ ಹೆಚ್ಚು ರಾಜಬನ್ಶಿ ಜನಸಂಖ್ಯೆಯಿರುವ 5 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿಯೇ ಗೆದ್ದುಕೊಂಡಿತ್ತು. 2021ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಈ ಪ್ರದೇಶದಲ್ಲಿ 30 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿತ್ತು. ಆದರೆ ಕಳೆದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಎದುರು ಬಿಜೆಪಿ ಸೋತು ಸುಣ್ಣವಾಗಿತ್ತು.

ರಾಜಬನ್ಶಿಗಳನ್ನು ಒಲಿಸಿಕೊಳ್ಳಲು ಸಮುದಾಯದ ನಾಯಕ ಅನಂತ ಮಹಾರಾಜ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿರುವುದು, ಕಳೆದ ವರ್ಷ ರಾಜ್ಯಸಭೆಗೆ ಅವರ ನಾಮನಿರ್ದೇಶನ ಇವೆಲ್ಲವೂ ಬಿಜೆಪಿಯ ಚುನಾವಣಾ ಲೆಕ್ಕಾಚಾರದ ನಡೆಗಳೇ ಆಗಿವೆ. ರಾಜಬನ್ಶಿಗಳನ್ನು ಸಾಮಾನ್ಯವಾಗಿ ಹೊರಗಿನವರು ಎಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ರಕ್ಷಣೆಯೊದಗಿಸುವ ನಿಟ್ಟಿನಲ್ಲಿ ಸಿಎಎ ಜಾರಿ ಬಗ್ಗೆ ಹೇಳುವ ಮೂಲಕ ಬಿಜೆಪಿ ಆ ಸಮುದಾಯವನ್ನು ಸೆಳೆಯುವ ಯತ್ನದಲ್ಲಿದೆ. ಅದಕ್ಕಾಗಿಯೇ ಈಗ ಚುನಾವಣೆ ಬರುತ್ತಿರುವ ಹಾಗೆಯೇ ಮತ್ತೆ ಸಿಎಎ ವಿಚಾರವನ್ನು ಅದು ಎತ್ತಿಕೊಂಡಿದೆ.

ತನ್ನ ಸಾಂಪ್ರದಾಯಿಕ ಹಿಂದೂ ಮತ ಬ್ಯಾಂಕನ್ನು ಭದ್ರಗೊಳಿಸಿಕೊಳ್ಳುವ ಉದ್ದೇಶವನ್ನೂ ಸಿಎಎ ಮೂಲಕ ಸಾಧಿಸಿಕೊಳ್ಳಲು ಬಿಜೆಪಿ ಬಯಸುತ್ತದೆ ಎಂದು ರಾಜಕೀಯ ವಿಶ್ಲೇಷಕ ಆ್ಯನ್ ಗುಹಾ ಹೇಳುತ್ತಾರೆ. ಇನ್ನು, ರಾಜಬನ್ಶಿ ಸಮುದಾಯವಲ್ಲದೆ, ಮತುವಾ ಎಂಬ ನಾಮಶೂದ್ರ ಸಮುದಾಯವನ್ನು ಸೆಳೆಯುವುದೂ ಬಿಜೆಪಿಯ ಉದ್ದೇಶ.

ಮತುವಾ ಸಮುದಾಯದವರು ಒಟ್ಟು ಜನಸಂಖ್ಯೆಯ ಶೇ.3.8ರಷ್ಟಿದ್ದು, ಇದು ಪಶ್ಚಿಮ ಬಂಗಾಳದಲ್ಲಿ ಎರಡನೇ ಅತಿ ದೊಡ್ಡ ಪರಿಶಿಷ್ಟ ಜಾತಿ ಸಮುದಾಯವಾಗಿದೆ. ಬಾಂಗ್ಲಾದೇಶದಿಂದ ಬಂದ ಹಿಂದೂ ಬಂಗಾಳಿ ನಿರಾಶ್ರಿತರಿಗೆ ಸೂಕ್ತ ಪುನರ್ವಸತಿಗಾಗಿ ಬಹಳ ಹಿಂದಿನಿಂದಲೂ ಮತುವಾ ಸಮುದಾಯವರು ಬೇಡಿಕೆಯಿಡುತ್ತಲೇ ಬಂದಿದ್ದಾರೆ. 2019ರಲ್ಲಿ ಸಿಎಎ ಮುಂದಿಟ್ಟುಕೊಂಡೇ ಬಿಜೆಪಿ ಈ ಸಮುದಾಯವನ್ನು ಸೆಳೆದಿತ್ತು.

ಮತುವಾ ಪ್ರಾಬಲ್ಯದ ನಾಡಿಯಾ ಮತ್ತು ಉತ್ತರ 24 ಪರಗಣಗಳಲ್ಲಿ ರಾಣಾಘಾಟ್ ಮತ್ತು ಬಂಗಗಾನ್ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.

2021ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತುವಾ ಸಮುದಾಯದ ಪವಿತ್ರ ಸ್ಥಳವಾದ ಒರಕಂಡಿಗೆ ಪ್ರಧಾನಿ ಮೋದಿ ಭೇಟಿ ನೀಡುವುದರೊಂದಿಗೆ ಮತ್ತೊಮ್ಮೆ ಆ ಸಮುದಾಯವನ್ನು ಸೆಳೆಯುವ ಯತ್ನ ಮಾಡಿದ್ದರು. ನಾಡಿಯಾ ಮತ್ತು ಉತ್ತರ 24 ಪರಗಣಗಳ ಮತುವಾ ಪ್ರದೇಶದಲ್ಲಿ 15 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ 2023ರ ಪಂಚಾಯತ್ ಚುನಾವಣೆಯಲ್ಲಿ ಮಾತ್ರ ಮತುವಾ ಸಮುದಾಯದ ಮತಗಳು ಪುನಃ ಟಿಎಂಸಿ ಪಾಲಾಗಿದ್ದವು. ಈಗ ಬಿಜೆಪಿ ಮತ್ತೆ ಸಿಎಎ ವಿಚಾರವನ್ನು ಮುಂದೆ ಮಾಡುತ್ತಿರುವುದಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತೀವ್ರ ತಕರಾರು ಎತ್ತಿದ್ದಾರೆ.

ಬಿಜೆಪಿಯ ನಡೆಯನ್ನು ಚುನಾವಣಾ ನಾಟಕ ಮಾತ್ರ ಎಂದು ಮಮತಾ ಟೀಕಿಸಿದ್ದಾರೆ. ಮಾತ್ರವಲ್ಲ, ತಾವು ಬದುಕಿರುವವರೆಗೂ ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.ಚುನಾವಣೆ ಬಂದೊಡನೆ ಸಿಎಎ ವಿಚಾರವನ್ನೆತ್ತಿ ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಹಾತೊರೆಯುತ್ತದೆ. ಆದರೆ ತಾನು ಜೀವಂತವಾಗಿರುವವರೆಗೂ ಅದು ಸಾಧ್ಯವಿಲ್ಲ ಎಂದು ಮಮತಾ ಹೇಳಿದ್ದಾರೆ.

ಟಿಎಂಸಿ ಜೊತೆಗಿನ ಸಂಘರ್ಷಕ್ಕೆಂದೇ ಬಿಜೆಪಿ ಸಿಎಎ ಅಸ್ತ್ರವನ್ನು ಮುಂದೆ ಮಾಡಿದ್ದು, ತಾತ್ಕಾಲಿಕವಾಗಿ ರಾಜಕೀಯ ಲಾಭ ಪಡೆಯುವ ಹವಣಿಕೆಯಾಗಿದೆ. ಆದರೆ ವಿಶ್ಲೇಷಕರು ಅಭಿಪ್ರಾಯಪಡುವ ಹಾಗೆ, ಸಿಎಎ ಜಾರಿ ಬಿಜೆಪಿಗೆ ಚುನಾವಣಾ ಲಾಭ ತಂದುಕೊಡಲಿದೆ ಎಂಬುದು ಅಷ್ಟು ಸರಳವಾಗಿಯಂತೂ ಇಲ್ಲ. ತಾತ್ಕಾಲಿಕವಾಗಿಯೇನೋ ಲಾಭವಾಗಬಹುದಾದರೂ, ದೀರ್ಘಾವಧಿಯಲ್ಲಿ ಅದು ಎಣಿಸಿದಷ್ಟು ಸುಲಭವಿಲ್ಲ. ಹಾಗಾಗಿಯೇ ಬಿಜೆಪಿ ಈ ಚುನಾವಣೆ ಗೆಲ್ಲುವವರೆಗೂ ಸಿಎಎ ಅಬ್ಬರವನ್ನು ಜೋರಾಗಿರಿಸಿ, ಆಮೇಲೆ ತಾನೇ ಮತ್ತೊಮ್ಮೆ ಮರೆಯುವ ತಂತ್ರ ಹೂಡಿದೆಯೆ? ಅಥವಾ ಈಗ ಹಿಂದುತ್ವದ ಅಗ್ರೆಸಿವ್ ರಾಜಕಾರಣ ಮಾಡುತ್ತಿರುವ ಬಿಜೆಪಿ ಅದನ್ನೂ ಜಾರಿಗೆ ತಂದೇ ಬಿಡಲಿದೆಯೇ?

ಮುಂದಿನ ದಿನಗಳೇ ಇದಕ್ಕೆ ಉತ್ತರ ಹೇಳಲಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಪೂರ್ವಿ

contributor

Similar News