ಜಾತಿ ಗಣತಿ: ಆಳ ಅಗಲ

ಪರಿಶಿಷ್ಟ ಸಮುದಾಯಗಳು, ಹಿಂದುಳಿದ, ಅತಿ ಹಿಂದುಳಿದ ವರ್ಗಗಳು ತಮಗಿಂತಲೂ ಹೆಚ್ಚಿನ ಜನಸಂಖ್ಯೆಯಲ್ಲಿರುವುದು ಈ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಜಾತಿಗಳ ಹಲವು ರಾಜಕೀಯ, ಧಾರ್ಮಿಕ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಶಕಗಳ ಕಾಲ(೧೯೩೧ರಿಂದ) ತಮ್ಮದು ಅತಿ ಹೆಚ್ಚಿನ ಜನಸಂಖ್ಯೆ ಎಂದು ತಮ್ಮ ಜಾತಿಗಳ ಜನತೆಯನ್ನು ನಂಬಿಸಿಕೊಂಡು ಬಂದಿದ್ದ ಮತ್ತು ಆ ಮೂಲಕ ಒಂದು ಬಗೆಯ ದರ್ಪ ಮತ್ತು ಅಂತಸ್ತನ್ನು ಪಡೆದುಕೊಂಡಿದ್ದ ಈ ಬಲಿಷ್ಠ ಜಾತಿಗಳಿಗೆ ಇದು ಸುಳ್ಳು ಎಂದು ಬಹಿರಂಗಗೊಂಡಾಗ ಇವರ ಕಟ್ಟಿಕೊಂಡ ಅಹಮಿಕೆಯ ಸೌಧ ಕುಸಿಯುತ್ತದೆ.;

Update: 2025-04-27 10:42 IST
ಜಾತಿ ಗಣತಿ: ಆಳ ಅಗಲ
  • whatsapp icon

ಭಾಗ- 1

1931ರ ನಂತರ ಭಾರತದಲ್ಲಿ ಪೂರ್ಣ ಪ್ರಮಾಣದ ಜಾತಿಗಣತಿ ನಡೆದಿಲ್ಲ. ಇಂದಿಗೂ ಮೀಸಲಾತಿ ಹಂಚಿಕೆಗೆ ಆಗಿನ ದತ್ತಾಂಶವನ್ನು ಆಧಾರವಾಗಿ ಬಳಸಲಾಗುತ್ತಿದೆ. 94 ವರ್ಷಗಳ ಈ ಅಂತರವು ಅನೇಕ ಅಸಮಾನತೆಗಳಿಗೆ ಕಾರಣವಾಗಿದೆ. ಉದಾಹರಣೆಗೆ ನಿರ್ದಿಷ್ಟ ಜಾತಿಯೊಳಗಿನ ಪ್ರಬಲ ಉಪಜಾತಿಗಳು ಮೀಸಲಾತಿ ಲಾಭಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳುತ್ತಿದ್ದರೆ ಆ ಜಾತಿಯೊಳಗಿನ ಸಣ್ಣ ಸಣ್ಣ ದುರ್ಬಲ ಉಪಜಾತಿಗಳು ಯಾವುದೇ ಪ್ರಾತಿನಿಧ್ಯವಿಲ್ಲದೆ ಸಮಾಜೋ-ರಾಜಕೀಯ- ಶೈಕ್ಷಣಿಕ-ಆರ್ಥಿಕವಾಗಿ ಹಿಂದುಳಿದಿದ್ದಾರೆ. ನಿಖರವಾದ, ವೈಜ್ಞಾನಿಕ ಜಾತಿ ಗಣತಿಯಿಂದ ಈ ಅಸಮತೋಲನವನ್ನು ಸರಿಪಡಿಸಬಹುದು.

ಹಿಂದುಳಿದ, ಅತಿ ಹಿಂದುಳಿದ ಜಾತಿಗಳು, ಪರಿಶಿಷ್ಟ ಸಮುದಾಯಗಳು ಶೇ.80ರಷ್ಟು ಜನಸಂಖ್ಯೆ ಯಲ್ಲಿರುವ ಭಾರತದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಿಂದ ಪಾರದರ್ಶಕವಾದ ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಹಾಯಕವಾಗುತ್ತದೆ. ಆ ಮೂಲಕ ಸಂವಿಧಾನದ ಜಾತ್ಯತೀತ ತತ್ವಗಳನ್ನು ಬಲಪಡಿಸಬಹುದು. ಬ್ರಿಟಿಷ್ ಆಡಳಿತದ ಕಾಲದಲ್ಲಿ (1871-1931) ಆಡಳಿತಾತ್ಮಕ ಉದ್ದೇಶಗಳಿಗಾಗಿ ಜಾತಿ ಗಣತಿಯನ್ನು ನಡೆಸಲಾಯಿತು. ಆದರೆ ಸ್ವಾತಂತ್ರ್ಯಾನಂತರ ಈ ಸಮೀಕ್ಷೆಯನ್ನು ಸಾರ್ವಜನಿಕ ನೀತಿ ರೂಪರೇಷೆಗಳ ಉದ್ದೇಶಕ್ಕಾಗಿ ಅಳವಡಿಸಿಕೊಳ್ಳಲಾಯಿತು

1871-72ರಲ್ಲಿ ಉತ್ತರ-ಪಶ್ಚಿಮ ಪ್ರಾಂತ(ಎನ್‌ಡಬ್ಲ್ಯುಪಿ), ಕೇಂದ್ರ ಪ್ರಾಂತ(ಸಿಪಿ), ಬಂಗಾಳ, ಮದ್ರಾಸ್ ಭಾಗಗಳಲ್ಲಿ ಮೊತ್ತ ಮೊದಲ ಜಾತಿ ಗಣತಿಯನ್ನು ನಡೆಸಲಾಯಿತು. ಈ ಗಣತಿಯಲ್ಲಿ ಜಾತಿಯನ್ನು ಅತ್ಯಂತ ಮೇಲ್ಪದರದಲ್ಲಿ ಗ್ರಹಿಸಲಾಗಿತ್ತು ಮತ್ತು ಸ್ವೇಚ್ಛಾನುಸಾರವಾಗಿ ಜಾತಿಗಳನ್ನು ‘ಕೂಟಗಳು’ ಎಂದು ಪರಿಗಣಿಸಿದ್ದರು. ಎನ್‌ಡಬ್ಲ್ಯುಪಿ ಪ್ರಾಂತದಲ್ಲಿ ‘ಬ್ರಾಹ್ಮಣರು, ರಜಪೂತ್, ಬನಿಯಾ ಮತ್ತು ಇತರ ಹಿಂದೂ ಜಾತಿಗಳು’ ಎಂದು ಅಧಿಕೃತವಾಗಿ ದಾಖಲಿಸಿದ್ದರು. ಸಿಪಿ ಪ್ರಾಂತದಲ್ಲಿ ‘ಸೇವಕರು ಮತ್ತು ಕಾರ್ಮಿಕರು’, ‘ಯಾಚಕರು ಮತ್ತು ಭಕ್ತರು’ ಎನ್ನುವ ವರ್ಗಗಳಲ್ಲಿ ದಾಖಲಿಸಿದರು. ಬಂಗಾಳದಲ್ಲಿ ‘ಭಿಕ್ಷುಕರು, ಸಂಗೀತಗಾರರು, ಬಾಣಸಿಗರು’ ಎಂದು ಮದ್ರಾಸ್ ಪ್ರಾಂತದಲ್ಲಿ ‘ಮಿಶ್ರ ಜಾತಿಗಳು’, ‘ಅಂತ್ಯಜರು’ ಎಂದು ವರ್ಗೀಕರಿಸಿದ್ದರು. ಪ್ರೊ. ಅನೀಸ್ ಗುಪ್ತಾ ಮತ್ತು ಸಂಶೋಧಕ ಶುಭಂ ಶರ್ಮಾ ‘ಈ ಜಾತಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿನ ಸಂಕೀರ್ಣತೆಯಿಂದ ಹತಾಶಗೊಂಡ ಚಿಚೆಲೆ ಪ್ಲೊಡೆನ್ (1881ರ ಜನಗಣತಿ ವರದಿ ರಚಿಸಿದವರು) ಇಡೀ ಜಾತಿ ಪ್ರಶ್ನೆಯನ್ನು ‘ಗೊಂದಲಗೊಳಿಸುತ್ತದೆ’ ಎಂದು ಕರೆದರು ಮತ್ತು ‘ಮುಂದಿನ ದಿನಗಳಲ್ಲಿ ಜಾತಿಗಳು ಮತ್ತು ಬುಡಕಟ್ಟುಗಳ ಜನಸಂಖ್ಯೆಯ ಮಾಹಿತಿಗಾಗಿ ಪ್ರಯತ್ನಿಸುವುದಿಲ್ಲ’ ಎಂದು ಹೇಳಿದ್ದರು 1931ರ ಜಾತಿ ಗಣತಿಯಲ್ಲಿಯೂ ಇದೇ ಸಮಸ್ಯೆಗಳು ಮುಂದುವರಿದವು. ಆ ಸಮೀಕ್ಷೆಯಲ್ಲಿ 4,147 ಜಾತಿಗಳನ್ನು ಗುರುತಿಸಲಾಯಿತು. ವಿಭಿನ್ನ ಪ್ರದೇಶಗಳಲ್ಲಿ ಜಾತಿ ಗುಂಪುಗಳು ವಿಭಿನ್ನ ಗುರುತುಗಳನ್ನು ಹಕ್ಕುಸಾಧನೆ ಮಾಡುತ್ತಿದ್ದವು..ಇದು ಅಧಿಕಾರಿಗಳಿಗೆ ಅಚ್ಚರಿ ಉಂಟು ಮಾಡಿತ್ತು..’ ಎಂದು ಬರೆಯುತ್ತಾರೆ.

2011ರ ಸಮಾಜೋ-ಆರ್ಥಿಕ ಜಾತಿ ಗಣತಿಯಲ್ಲಿ(ಎಸ್‌ಇಸಿಸಿ) 46.7 ಲಕ್ಷ ಜಾತಿಗಳು/ಉಪಜಾತಿಗಳನ್ನು ಗುರುತಿಸಲಾಗಿದೆ, ಇದರಲ್ಲಿ 8.2 ಕೋಟಿ ದೋಷಗಳಿವೆ ಎಂದು ಒಪ್ಪಿಕೊಂಡಿದ್ದಾರೆ. 2022ರ ಬಿಹಾರ ಜಾತಿ ಗಣತಿಯಲ್ಲಿ ‘ಹಿಜ್ರಾ’, ‘ಕಿನ್ನಾರ್’ರನ್ನು ಜಾತಿ ಪಟ್ಟಿಯೊಳಗೆ ಪ್ರವರ್ಗಗಳಾಗಿ ಪರಿಗಣಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. 1953ರ ಹಿಂದುಳಿದ ವರ್ಗಗಳ ಕಾಕಾ ಕಾಲೇಕರ್ ಆಯೋಗ ಮತ್ತು 1970ರ ದಶಕದ ಮಂಡಲ್ ಆಯೋಗವು 1931ರ ಜಾತಿ ಗಣತಿಯನ್ನು ಆಧರಿಸಿದ್ದವು. ಎರಡೂ ಆಯೋಗಗಳು ಸಮಗ್ರವಾದ ಜಾತಿ ಗಣತಿ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತ ಪಡಿಸಿದವು.

ಜಾತಿ ಗಣತಿಯು ಕೇವಲ ಅಂಕಿಸಂಖ್ಯೆಗಳ ದಾಖಲೆಯಲ್ಲ . ಬದಲಿಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಅಗತ್ಯವಾದ ಸಮೀಕ್ಷೆಯಾಗಿದೆ.

ಪ್ರಸ್ತುತ ಬೆಳವಣಿಗೆಗಳು

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ(ಜಾತಿ ಗಣತಿ) ನಡೆಸಿದ ಕಾಂತರಾಜು ಆಯೋಗದ ವರದಿಯನ್ನು ಎಪ್ರಿಲ್‌2025 ಮೊದಲ ವಾರದಲ್ಲಿ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಲಾಗಿದೆ. ನಂತರ ಎಪ್ರಿಲ್‌17ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಇದರ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದ್ದರೂ ಅದು ಪೂರ್ಣಗೊಳ್ಳಲಿಲ್ಲ, ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಈ ಸಭೆಯಲ್ಲಿ ಲಿಂಗಾಯತ, ಒಕ್ಕಲಿಗ ಜಾತಿಯ ಸಚಿವರು ಮಾತ್ರ ತಮ್ಮ ತಮ್ಮ ಜಾತಿಯ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಪರಸ್ಪರ ವಾಗ್ವಾದ ನಡೆಸಿದರು ಎನ್ನುವ ವರದಿ ಪ್ರಕಟವಾಯಿತು. ಈಗ 2 ಮೇ 2025ರಂದು ಈ ಚರ್ಚೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಮುಖ್ಯವಾಗಿ ಯಾರೇ ವಿರೋಧಿಸಲಿ ಪರಿಶಿಷ್ಟ ಸಮುದಾಯ, ಅತಿ ಹಿಂದುಳಿದ ಮತ್ತು ಸಣ್ಣ ಸಣ್ಣ ಉಪಜಾತಿಗಳ ಅಸ್ಮಿತೆಗೆ, ಗುರುತಿಸುವಿಕೆಗೆ, ಸಾಮಾಜಿಕ-ರಾಜಕೀಯ ಹಕ್ಕಿನ ಪ್ರತಿಪಾದನೆಗೆ, ಕಲ್ಯಾಣ ಯೋಜನೆಗಳ ಫಲಾನುಭವಕ್ಕೆ, ಭವಿಷ್ಯದ ಶಿಕ್ಷಣ, ಉದ್ಯೋಗದಲ್ಲಿನ ಪ್ರಾತಿನಿಧ್ಯಕ್ಕೆ ಈ ಜಾತಿಗಣತಿ ಅಗತ್ಯವಾಗಿದೆ. ಇದರ ಫಲವಾಗಿ ಅನೇಕ ವಂಚಿತ ಸಮುದಾಯಗಳ ಅಸ್ತಿತ್ವ, ಗುರುತು ಮತ್ತು ಹಕ್ಕು ಮುನ್ನೆಲೆಗೆ ಬರುತ್ತದೆ.

ಮುಂದಿನ ದಿನಗಳಲ್ಲಿ ಈ ಆಯೋಗದ ವರದಿಯು ವಿಧಾನಮಂಡಲದ ಎರಡೂ ಅಧಿವೇಶನಗಳಲ್ಲಿ ಚರ್ಚೆಯಾಗಬೇಕು. ಸಾರ್ವಜನಿಕವಾಗಿ ಪ್ರಕಟವಾಗಬೇಕು ಮತ್ತು ವ್ಯಾಪಕವಾಗಿ ಚರ್ಚೆ, ಸಂವಾದಗಳಾಗಬೇಕು. ಯಾವುದೇ ಬಗೆಯ ಆಕ್ಷೇಪ, ಸಲಹೆಗಳಿದ್ದರೆ ಮತ್ತು ಅದು ಸೂಕ್ತ ಎನಿಸಿದರೆ ತಿದ್ದುಪಡಿಯಾಗಬೇಕು. ಇದು ಮುಂದಿನ ಕೆಲವು ತಿಂಗಳುಗಳಲ್ಲಿ ಶೀಘ್ರಗತಿಯಲ್ಲಿ ನಡೆಯಬೇಕಾದ ಪ್ರಕ್ರಿಯೆಗಳು. ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರು ವರದಿಯ ಜೊತೆಗೆ ತಮ್ಮ ಆಯೋಗದ ಶಿಫಾರಸುಗಳನ್ನು ಸಹ ಸಲ್ಲಿಸಿದ್ದಾರೆ. ಇದೂ ಸಹ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೆಗ್ಡೆಯವರು ‘‘2015ರಲ್ಲಿ ರಚನೆಯಾದ ಕಾಂತರಾಜು ಆಯೋಗವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಿದೆ. ಕರ್ನಾಟಕದ ಆಗಿನ 6.33 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನಸಂಖ್ಯೆಯ ಸಮೀಕ್ಷೆ ಮಾಡಲಾಗಿದೆ. 37 ಲಕ್ಷ ಜನಸಂಖ್ಯೆ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ, ಇದು ವೈಜ್ಞಾನಿಕ ಸಮೀಕ್ಷೆ’’ ಎಂದು ವಿವರಿಸಿದ್ದಾರೆ. ಈ ಹಿಂದಿನ ನಾಗನಗೌಡ, ಹಾವನೂರು, ಟಿ.ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಆಯೋಗಗಳು ಸ್ಯಾಂಪಲ್ ಸಮೀಕ್ಷೆ ನಡೆಸಿವೆ. ಆದರೆ ಕಾಂತರಾಜು ಆಯೋಗವು 5.68 ಕೋಟಿ ಜನಸಂಖ್ಯೆಯ ಸಮೀಕ್ಷೆ ನಡೆಸಿವೆ. ಈ ನೆಲೆಯಲ್ಲಿ ಈ ವರದಿಯು ವೈಜ್ಞಾನಿಕ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ಸಹಜವಾಗಿ ಪ್ರತಿಯೊಂದು ಗಣತಿ, ಸಮೀಕ್ಷೆ ಸಂದರ್ಭದಲ್ಲಿ ಲೋಪದೋಷಗಳಿರುತ್ತವೆ. ಗಣತಿದಾರರು ಗೊತ್ತಿದ್ದೂ, ಗೊತ್ತಿಲ್ಲದೆ ತಪ್ಪುಗಳನ್ನು ಮಾಡುತ್ತಾರೆ. ಯಾವುದೇ ಸಮೀಕ್ಷೆಗಳು ಇಂತಹ ದೋಷಗಳಿಂದ ಹೊರತಾಗಿಲ್ಲ. ಉದಾಹರಣೆಗೆ ಮತದಾರರ ಗುರುತಿನ ಚೀಟಿ ನೀಡುವ ಸಂದರ್ಭದಲ್ಲಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಹೆಸರುಗಳು ಬಿಟ್ಟು ಹೋಗಿರುತ್ತವೆ, ಮರಳಿ ಹೆಸರು ಸೇರಿಸಲು ಮತ್ತೊಂದು ಪ್ರಕ್ರಿಯೆ ಶುರುವಾಗುತ್ತದೆ. ಈ ಜಾತಿ ಗಣತಿಗೆ ಸಂಬಂಧಿಸಿದಂತೆ ಬಿಟ್ಟು ಹೋದ 37 ಲಕ್ಷ ಜನಸಂಖ್ಯೆಯ ಮರು ಸಮೀಕ್ಷೆಗೆ ಮತ್ತೊಮ್ಮೆ ಪ್ರಕ್ರಿಯೆ ಶುರು ಮಾಡಬೇಕು. ಎಲ್ಲಾ ಜಿಲ್ಲಾ, ತಾಲೂಕು, ಗ್ರಾಮೀಣ ಕೇಂದ್ರಗಳಲ್ಲಿ ಬ್ಲಾಕ್ ಮಟ್ಟದಲ್ಲಿ ಬೂತ್‌ಗಳನ್ನು ಸ್ಥಾಪಿಸಬೇಕು, ಯಾವ ಕುಟುಂಬದ ಸಮೀಕ್ಷೆ ಆಗಲಿಲ್ಲವೋ ಅವರು ಬಂದು ಮರಳಿ ತಮ್ಮ ವಿವರಗಳನ್ನು ಸಲ್ಲಿಸಬೇಕು ಮತ್ತು ಇದಕ್ಕೆ ಕಾರ್ಯಕರ್ತರನ್ನು ನೇಮಿಸಿಕೊಳ್ಳಬೇಕು. ಇದಿಷ್ಟು ಇಂದಿನ ಕಂಪ್ಯೂಟರ್ ಯುಗದಲ್ಲಿ ಸುಲಭವಾಗಿ ಮಾಡಬಹುದಾದ ಕೆಲಸವೇ.

ಎರಡನೆಯದಾಗಿ ಮುಂದುವರಿದ ಜಾತಿಯಾದ ಬ್ರಾಹ್ಮಣರು ಮತ್ತು ಮಧ್ಯ ಜಾತಿಗಳಾದ ಲಿಂಗಾಯತರು, ಒಕ್ಕಲಿಗರು ‘ಈ ಸಮೀಕ್ಷೆ ವೈಜ್ಞಾನಿಕವಲ್ಲ, ತಿರಸ್ಕರಿಸಬೇಕು’ ಎಂದು ಗಲಾಟೆ ಮಾಡುತ್ತಿದ್ದಾರೆ. ಆದರೆ ‘ವೈಜ್ಞಾನಿಕ ಸಮೀಕ್ಷೆಯ ಮಾನದಂಡ ಗಳೇನು? ಆಯೋಗದ ಶಿಫಾರಸುಗಳು ಸಾರ್ವಜನಿಕವಾಗಿ ಪ್ರಕಟಗೊಂಡಿಲ್ಲ, ಹಾಗಿದ್ದ ಪಕ್ಷದಲ್ಲಿ ಈ ಜಾತಿಗಳಿಗೆ ಇದು ಅವೈಜ್ಞಾನಿಕ ಎಂದು ಹೇಗೆ ಗೊತ್ತಾಯಿತು? ಮಾಧ್ಯಮಗಳಲ್ಲಿ ಸೋರಿಕೆಯಾದ ಅಂಕಿಅಂಶಗಳು ಅನಧಿಕೃತ, ಇದನ್ನು ಆಧರಿಸಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ’ ಎನ್ನುವ ಪ್ರಶ್ನೆಗಳಿಗೆ ಈ ಜಾತಿವಾದಿಗಳು ಉತ್ತರಿಸುತ್ತಿಲ್ಲ. ಬದಲಿಗೆ ಲಿಂಗಾಯತರು ‘ನಮ್ಮ ಜನಸಂಖ್ಯೆ 1.5 ಕೋಟಿಗೂ ಅಧಿಕ, ಅನೇಕ ಉಪಜಾತಿಗಳು ವೀರಶೈವ ಜಾತಿಯ ಪಟ್ಟಿಯಲ್ಲಿ ಇಲ್ಲ..’ ಎಂದು ತಕರಾರು ತೆಗೆದಿದ್ದಾರೆ, ಹಾಗೆಯೇ ಒಕ್ಕಲಿಗರು ಸಹ ‘ನಮ್ಮ ಜನಸಂಖ್ಯೆ ಆಯೋಗದಲ್ಲಿ ವರದಿಯಾಗಿರುವುದಕ್ಕಿಂತ ಹೆಚ್ಚಾಗಿದೆ, ಇದು ಸಮರ್ಪಕವಾಗಿಲ್ಲ’ ಎಂದು ಟೀಕಿಸಿದ್ದಾರೆ. ಹಾಗೆಯೇ ಯಾದವರೂ ಸಹ ‘ಗೊಲ್ಲರು, ಕಾಡು ಗೊಲ್ಲರಿಂದ ನಮ್ಮನ್ನು ಬೇರ್ಪಡಿಸಿ ನಮ್ಮನ್ನು 2ಎ ಪ್ರವರ್ಗದಲ್ಲಿ ಮುಂದುವರಿಸಿದ್ದಾರೆ, ಆದರೆ ಆ ಎರಡು ಜಾತಿಗಳನ್ನು ಪ್ರವರ್ಗ 1ಬಿ, 1ಎಗೆ ಸೇರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಪಿಂಜಾರರು ‘ನಮ್ಮ ಜನಸಂಖ್ಯೆಯನ್ನು ತುಂಬಾ ಕಡಿಮೆ ತೋರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತರ ಜಾತಿಗಳೂ ತಮ್ಮದೇ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಕಾಲದಲ್ಲಿಯೂ ಜಾತಿಗಣತಿ ಎನ್ನುವುದು ವಿವಾದಾತ್ಮಕವಾಗಿರುತ್ತದೆ. ಅದನ್ನು ವಿರೋಧಿಸಿ ಪ್ರತಿಭಟನೆಗಳಿರುತ್ತದೆ. ಇದೆಲ್ಲವನ್ನೂ ಮೀರಿ ಯಾರಿಗೂ ಅನ್ಯಾಯವಾಗದಂತೆ ಜಾತಿಗಣತಿಯ ಶಿಫಾರಸುಗಳನ್ನು ಜಾರಿಗೊಳಿಸುವುದು ಪ್ರತಿಯೊಂದು ಸರಕಾರದ ಕರ್ತವ್ಯ. ಇದಕ್ಕೆ ಖಂಡಿತವಾಗಿ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಸಿದ್ದರಾಮಯ್ಯನವರ ಮುಂದಿರುವ ಸವಾಲು ಸಹ ಇದೇ.

ಆದರೆ ಆಯೋಗದ ವರದಿ ಇನ್ನೂ ಸಾರ್ವಜನಿಕವಾಗಿ ಬಹಿರಂಗಗೊಂಡಿಲ್ಲದ ಕಾರಣ ಇವರ ಎಲ್ಲಾ ಆಕ್ಷೇಪಗಳಿಗೆ ಯಾವುದೇ ಮಾನ್ಯತೆ, ಬೆಂಬಲವಿರುವುದಿಲ್ಲ. ಒಂದು ವೇಳೆ ಚರ್ಚೆಗಾಗಿ ಸೋರಿಕೆಯಾದ ಮಾಹಿತಿಯನ್ನು ಆಧರಿಸುವುದಾದರೆ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳಲ್ಲಿ ಐವತ್ತಕ್ಕೂ ಅಧಿಕ ಅನೇಕ ಉಪಜಾತಿಗಳ ಅಸ್ತಿತ್ವ ಮತ್ತು ಜನಸಂಖ್ಯೆ ಪ್ರಮಾಣ ಮೊದಲ ಬಾರಿಗೆ ಬಹಿರಂಗವಾಗಿದೆ ಮತ್ತು ಅನೇಕ ಉಪಜಾತಿಗಳು ಲಿಂಗಾಯತ ಅಥವಾ ಒಕ್ಕಲಿಗ ಎಂದು ಬರೆಸಿದರೆ ತಮ್ಮಂತಹ ಸಣ್ಣ, ಸಣ್ಣ ಉಪಜಾತಿಗಳಿಗೆ ಮಾನ್ಯತೆ ಕಡಿಮೆಯಾಗಬಹುದು ಮತ್ತು ಲಿಂಗಾಯತ, ಒಕ್ಕಲಿಗರಿಂದ ಹೊರಗಿರುವ ಜಾತಿ ಎಂದು ಬರೆಸಿದರೆ ತಮ್ಮ ಜಾತಿಯೊಳಗಿನ ಪಟ್ಟಭದ್ರ ಪಂಗಡಗಳ ಹಿಡಿತದಿಂದ ಹೊರಬರಬಹುದು ಎಂದು ಭಾವಿಸಿ ಪ್ರತ್ಯೇಕ ಜಾತಿಯ ಹೆಸರನ್ನು ನಮೂದಿಸಿದ್ದಾರೆ. ಇಂತಹ ಅನೇಕ ಕಾರಣಗಳಿವೆ. ಆಯಾ ಜಾತಿಗಳ ಮುಖಂಡರು ಈ ಬದಲಾವಣೆಗಳಿಗೆ, ಬೆಳವಣಿಗೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಇಲ್ಲಿ ಸರಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಕಡೆಗೂ ವರದಿ ಬಹಿರಂಗಗೊಳ್ಳುವವರೆಗೂ ಯಾವುದೇ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ.

ಬಹುತೇಕ ಜಾತಿ ಮುಖಂಡರು, ಆಯಾ ಜಾತಿಗಳ ರಾಜಕೀಯ ನಾಯಕರು ‘ಸಮೀಕ್ಷೆ ಸಂದರ್ಭದಲ್ಲಿ ಅನೇಕ ಮನೆಗಳಿಗೆ ಭೇಟಿ ಕೊಟ್ಟಿಲ್ಲ’ ಎಂದು ಆಪಾದಿಸುತ್ತಾರೆ. ಇದರಲ್ಲಿಯೂ ಹುರುಳಿದೆ. ಹಲವು ಗಣತಿದಾರರಲ್ಲಿ ಕರ್ತವ್ಯಲೋಪವಿರಬಹುದು. ಇಂತಹ ವಿದ್ಯಮಾನಗಳು ಪ್ರತೀ ಸಮೀಕ್ಷೆಯಲ್ಲಿಯೂ ಸಾಧಾರಣವಾಗಿ ಕಂಡುಬರುತ್ತದೆ. ಈ ಲೋಪಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಆದರೆ 2015ರಲ್ಲಿ ಸಮೀಕ್ಷೆ ಪ್ರಾರಂಭವಾದಾಗ ಇದೇ ಮುಖಂಡರು ತಮ್ಮ ಜಾತಿಯ ಜನರಿಗೆ ಇದರ ಕುರಿತು ಸೂಕ್ತ ತರಬೇತಿ, ಮಾಹಿತಿ ಕೊಡಬೇಕಿತ್ತಲ್ಲವೇ? ಯಾವ ರೀತಿ ತಮ್ಮ ಜಾತಿ, ಉಪಜಾತಿಯನ್ನು ಹೇಳಬೇಕು ಎಂದು ವಿವರಿಸಬೇಕಿತ್ತಲ್ಲವೇ? ಆದರೆ ಇದೇ ಲಿಂಗಾಯತ, ಒಕ್ಕಲಿಗ ಜಾತಿಯ ಕೆಲವು ರಾಜಕಾರಣಿಗಳು, ಧಾರ್ಮಿಕ ಮುಖಂಡರು ಆರಂಭದಿಂದಲೂ ಈ ಜಾತಿಗಣತಿಯನ್ನು ವಿರೋಧಿಸುತ್ತಾ ಬಂದಿರುವುದು ಜಗಜ್ಜಾಹೀರಾಗಿದೆ. ಇವರು ಯಾಕೆ ಜಾತಿಗಣತಿಯನ್ನು ವಿರೋಧಿಸುತ್ತಾರೆ ಎನ್ನುವುದಕ್ಕೆ ಉತ್ತರ ಕಂಡುಕೊಂಡರೆ ಇಡೀ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಇಂತಹ ವಿಘ್ನಸಂತೋಷಿಗಳು ಒಂದಲ್ಲ, ಎರಡಲ್ಲ ಹತ್ತು ಸಮೀಕ್ಷೆ ಮಾಡಿದರೂ ಕ್ಷುಲ್ಲಕ ಕಾರಣಗಳಿಗಾಗಿ ವಿರೋಧಿಸುತ್ತಲೇ ಇರುತ್ತಾರೆ.

ಆದರೆ ಯಾಕೆ ವಿರೋಧ?

ಪ್ರೊ. ಕಿರಣ್ ಕುಮಾರ್ ‘‘ಮುಖ್ಯವಾಗಿ ಜಾತಿ ಗಣತಿಯೆಂದರೆ ಜನರನ್ನು ಪ್ರತ್ಯೇಕವಾದ ಡಬ್ಬಿಗಳಲ್ಲಿ ವರ್ಗೀಕರಿಸುವುದಲ್ಲ, ಬದಲಿಗೆ ಅನುಕೂಲವಂತರು ಮತ್ತು ಶೋಷಿತರ ಸಮಾಜೋ-ಆರ್ಥಿಕತೆಯನ್ನು ಅಳತೆ ಮಾಡುವುದು. ಬಹುತೇಕ ಮುಂದುವರಿದ ಜಾತಿಗಳ ಅನುಕೂಲವಂತಿಕೆಯು ಅವರ ಅನಾಮಧೇಯತೆಯಲ್ಲಿದೆ’’ ಎಂದು ಹೇಳುತ್ತಾರೆ. ಇದು ನಿಜ. ಅನೇಕ ಮುಂದುವರಿದ, ಮಧ್ಯ ಜಾತಿಗಳು ಪಡೆದುಕೊಳ್ಳುತ್ತಿರುವ ಸೌಲಭ್ಯಗಳು ಅಗೋಚರವಾಗಿರುತ್ತವೆ ಮತ್ತು ಯಾವುದೇ ಸಂದರ್ಭದಲ್ಲಿಯೂ ಸಾರ್ವಜನಿಕವಾಗಿ ಪರಿಗಣನೆಗೂ ಬಂದಿರುವುದಿಲ್ಲ. ತಾವು ಪಡೆದುಕೊಳ್ಳುವ ಸವಲತ್ತುಗಳ ಅನಾಮಿಕತೆ ಬಹಿಂಗಗೊಳ್ಳುತ್ತವೆ ಎನ್ನುವ ಕಾರಣಕ್ಕೆ ಈ ಜಾತಿಗಳು ಜಾತಿಗಣತಿಯನ್ನು ವಿರೋಧಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ. ಶ್ರೀಪಾದ ಭಟ್

contributor

Similar News