ಪ್ರತಿರೋಧದ ರಂಗಭೂಮಿ ಕಟ್ಟುವ ವೈಚಾರಿಕತೆ ಮತ್ತು ಧೈರ್ಯ ಕರಾವಳಿ ರಂಗಭೂಮಿಗೆ ಅಗತ್ಯವಿದೆ

ರಂಗಭೂಮಿ ಯಾವತ್ತಿಗೂ ತನ್ನೊಳಗೆ ತನ್ನ ಸಾಂಸ್ಕೃತಿಕ ಸ್ವಭಾವದಲ್ಲೇ ಬಂಡುಕೋರತನ ಮತ್ತು ಪ್ರಭುತ್ವ ವಿರೋಧಿ ಗುಣವನ್ನು ಹೊಂದಿದೆ. ಹಾಗಾಗಿ ಇವತ್ತಿನ ಕಾಲಘಟ್ಟದಲ್ಲಿ ರಂಗಭೂಮಿಯ ಜವಾಬ್ದಾರಿ ಬಹಳ ಮಹತ್ವದ್ದು. ಪ್ರಭುತ್ವವನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಸಾರ್ವಜನಿಕವಾಗಿ ನೈತಿಕ ಅಧಃಪತನಕ್ಕೆ ಒಳಗಾದಂತೆ ಪ್ರಭುತ್ವದ ಓಲೈಕೆಯಲ್ಲಿ ತೊಡಗಿಸಿಕೊಂಡಿರುವಾಗ ರಂಗಭೂಮಿ ಆ ಜವಾಬ್ದಾರಿಯನ್ನು ಎತ್ತಿಕೊಳ್ಳಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಜಗತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತಲ್ಲಣಗೊಂಡಾಗ ರಂಗಭೂಮಿಯೇ ಜಗತ್ತನ್ನು ಮತ್ತೆ ಮತ್ತೆ ಸಹನಶೀಲವಾಗಿಸಿದ ಹಲವು ಉದಾಹರಣೆಗಳು ಇತಿಹಾಸದ ಪುಟಗಳಲ್ಲಿ ನಮಗೆ ಕಾಣಸಿಗುತ್ತವೆ ಮತ್ತು ರಂಗಭೂಮಿಯಿಂದಲೇ ಜೀವಪರವಾದ ಸಾಮರಸ್ಯದ ಒಳಿತಿನ ಸಮಾಜವನ್ನು ಕಟ್ಟಲು ಸಾಧ್ಯ ಎಂದು ನಂಬಿಕೊಂಡು ಬಂದಿರುವ ಬಹಳ ದೊಡ್ಡ ವರ್ಗ ನಮ್ಮ ನಡುವೆ ಇದೆ. ಹೀಗಿರುವಾಗ ಈ ನಂಬಿಕೆಯನ್ನೇ ಅಲುಗಾಡಿಸಿ ಬಿಡುವ ಘಟನೆಗಳು ಇವತ್ತು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವಾಗ ಮಾತನಾಡಲೇ ಬೇಕಾದ ಸ್ಥಿತಿ ಕಲಾವಿದನಿಗೆ ಅನಿವಾರ್ಯವಾಗಿದೆ.

Update: 2024-03-27 06:01 GMT

ಬಿ.ಆರ್. ನಾಗೇಶ್ ತನ್ನ ‘ಎದ್ದ ಬಿದ್ದ ತೆರೆಗಳು’ ಎಂಬ ಮಹತ್ವದ ಪುಸ್ತಕದ ಆರಂಭದಲ್ಲಿ ಒಂದು ಮಾತು ಹೇಳುತ್ತಾರೆ. ‘‘ಕರಾವಳಿಯಲ್ಲಿ ಸಾಧಾರಣ 400 ವರ್ಷಗಳ ಸಂಪ್ರದಾಯದ ಸತ್ವದ ಮೇಲೆ ಕಟ್ಟಲ್ಪಟ್ಟ ಯಕ್ಷಗಾನ ಬಯಲಾಟವು ನೆಲದೊಳಗಿರುವ ತನ್ನ ಭಾಗದ ಮೇಲೆ ಯಾವ ಬದಲಾವಣೆಗಳ ಪರಿಣಾಮಕ್ಕೂ ಅವಕಾಶ ಕೊಡದೇ ಹೋದರೂ, ನೆಲದ ಮೇಲೆ ಕಾಣಿಸುವ ಕಟ್ಟಡದ ಭಾಗದಲ್ಲಿ ಹಲವಾರು ಮಾರ್ಪಾಟು, ಏರ್ಪಾಟುಗಳಿಗೆ ಒಳಗಾಗಿದೆ. ಆದರೆ ನೆಲದಡಿಯಲ್ಲಿ ಯಾವ ರೀತಿಯ ಪಾಯವೂ ಇಲ್ಲದೆ ಸುಮಾರು 100 ವರ್ಷಗಳ ಹಿಂದೆ ಕಟ್ಟಲ್ಪಟ್ಟ ನಾಟಕ ರಂಗದ ಕಟ್ಟಡ ತನ್ನ ಅರ್ಬುದೀಯ ಬೆಳವಣಿಗೆಯಿಂದಾಗಿ ಇಂದು ಈ ನೆಲದಲ್ಲಿ ಹೇಳಿಕೊಳ್ಳುವಂತಹ ಯಾವ ಹವ್ಯಾಸಿ ತಂಡವಾಗಲೀ ವ್ಯವಸಾಯ ತಂಡವಾಗಲೀ ಹುಟ್ಟಿಕೊಳ್ಳದಂತೆ ಮಾಡಿದ ಸಂಪೂರ್ಣ ಹೊಣೆಯನ್ನು ಹೊರ ಬೇಕಾಗಿದೆ.’’ ಎಂದು ಹೇಳುತ್ತಾರೆ. ಇದು 1900ರಿಂದ 1972ರ ವರೆಗಿನ ದಕ್ಷಿಣ ಕನ್ನಡದ (ಅಂದರೆ ಆಗಿನ ಕಾಲಕ್ಕೆ ಅವಿಭಜಿತ) ರಂಗಭೂಮಿಯ ಕಥನವಾಗಿದೆ. ಆದರೆ ಆನಂತರದಲ್ಲಿ ಅಂದರೆ 1972ರ ನಂತರದ ಅಥವಾ ಕರಾವಳಿ ರಂಗಭೂಮಿ ಬಿ.ಆರ್. ನಾಗೇಶ್‌ರ ಈ ಮಾತುಗಳಿಗೆ ಸವಾಲೆಂಬಂತೆ ಆದರೆ ಅವರ ಆಶಯದಂತೆ ಊಹಿಸಲಾಗದ ರೀತಿಯ ವಿಸ್ತಾರವನ್ನು ಕಂಡಿದೆ.

ಜಾನ್ ಫೋಸ್ಸೆಯವರ ರಂಗ ಸಂದೇಶ

ನಾರ್ವೆ ದೇಶದ ಜಾನ್ ಫೋಸ್ಸೆಯವರಿಗೆ ಈ ಬಾರಿಯ ವಿಶ್ವ ರಂಗಭೂಮಿಯ ರಂಗಸಂದೇಶ ನೀಡುವ ಅವಕಾಶ ಲಭಿಸಿದೆ. ಅವರು ‘ಕಲೆ, ಕಲಾವಿದರು ಮತ್ತು ಶಾಂತಿ’ ಎಂಬ ವಿಷಯದಲ್ಲಿ ಈ ವರ್ಷದ ರಂಗಸಂದೇಶವನ್ನು ನೀಡಿದ್ದಾರೆ. ಕಳೆದ ವರ್ಷ ಅವರ ನಾಟಕಗಳಿಗೆ ನೊಬೆಲ್ ಪ್ರಶಸ್ತಿ ಬಂದಾಗ ಯುರೋಪಿನ ಅಕಾಡಮಿ ವಲಯವೇ ತಬ್ಬಿಬ್ಬಾಗಿತ್ತು ಮತ್ತು ಇದರ ಹಿಂದೆ ಇರುವ ಸ್ವೀಡಿಷ್ ರಾಜಕಾರಣದ ಬಗ್ಗೆ ಹಲವು ಪತ್ರಿಕೆಗಳು ಬರೆದಿವೆ ಎಂಬ ಮಾಹಿತಿಗಳು ಇದೆ. ಅವರ ಈ ರಂಗ ಸಂದೇಶವನ್ನು ಅವಲೋಕಿಸಿದಾಗ ತುಂಬಾ ಆಸಕ್ತಿದಾಯಕವಾಗಿ ಕಾಣುತ್ತಿಲ್ಲ. ತೀರಾ ಶೃಂಗಾರಮಯವಾದ ಭಾಷೆಯಲ್ಲಿ ಬರೆದು ಮಾತಿನ ವೈಭವದಲ್ಲಿ ತೇಲಿಸಿದ್ದಾರೆ ಅನಿಸುತ್ತಿದೆ ವಿನಃ ರಂಗಭೂಮಿಯ ಸಮಕಾಲೀನತೆಯ ಬಗ್ಗೆ ಅವರು ಮಾತನಾಡಿಲ್ಲ. ಈ ಸಮಕಾಲೀನತೆಯ ಬಗ್ಗೆ ಮಾತನಾಡುವ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಅತೀ ಅಗತ್ಯವಾಗಿದೆ. ಏಕೆಂದರೆ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳು ಇವತ್ತು ಯುದ್ಧಾಸ್ತ್ರಗಳನ್ನು ಮಿತಿಮೀರಿ ಸಂಗ್ರಹಿಸಿ ಯುದ್ಧೋನ್ಮಾದ ಸ್ಥಿತಿಯಲ್ಲಿ ಇವೆ; ಯುದ್ಧಗಳು ಇನ್ನೂ ನಡೆಯುತ್ತಲೇ ಇವೆ. ಅಷ್ಟು ಮಾತ್ರವಲ್ಲದೆ ಇಡೀ ಜಗತ್ತು ಜನಾಂಗೀಯ ಸಂಘರ್ಷದ ಉರಿಯಲ್ಲಿ ಬೇಯುತ್ತಿದೆ. ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ದ್ವೇಷಿಸುತ್ತಿದೆ, ಒಂದು ಧರ್ಮ ಇನ್ನೊಂದು ಧರ್ಮದ ಜನರನ್ನು ನಮ್ಮವರು ಎಂದು ಒಪ್ಪಿಕೊಳ್ಳದ ಸ್ಥಿತಿ ವ್ಯಾಪಕವಾಗಿದೆ. ಮನುಷ್ಯ ಮನುಷ್ಯನ ಮೇಲೆಯೇ ಅಸಹನೆ ಬಹಳ ಕಡೆ ಕಾಣುತ್ತಿದೆ. ಇದನ್ನು ಇನ್ನೂ ಮುಂದುವರಿಸಿ ಒಂದು ಸಂಸ್ಕೃತಿ, ಒಂದು ಭಾಷೆ, ಒಂದು ಬಣ್ಣ ಎಂಬ ಭಾವನೆಗಳ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಹೀಗೆ ಇರುವಾಗ ಕಲೆ ಮತ್ತು ಕಲಾವಿದ ಮತ್ತು ರಂಗಭೂಮಿ ಇದನ್ನು ಎದುರುಗೊಳ್ಳುವುದು ಹೇಗೆ? ಈ ಕಾಲಘಟ್ಟದಲ್ಲಿ ಕಲೆ ಮತ್ತು ಕಲಾವಿದ ನಿರ್ದೇಶಕನ ಜವಾಬ್ದಾರಿಗಳೇನು? ಯುದ್ಧೋನ್ಮಾದದ ಮನಸ್ಥಿತಿಗೆ ರಂಗಭೂಮಿ ಪ್ರತಿರೋಧವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಜಾನ್ ಫೋಸ್ಸೆಯವರ ಮಾತುಗಳು ಹೇಳುತ್ತಿಲ್ಲ. ತೀರಾ ನೀರಸವಾದ ಈ ರಂಗಸಂದೇಶದಲ್ಲಿ ಹೊಸದಾಗಿ ಘಟಿಸಲು ಏನೂ ಇಲ್ಲ. ‘‘ನಾವೆಲ್ಲಾ ಬಹಳ ಚೆನ್ನಾಗಿಯೇ ಇದ್ದೇವೆ’’ ಎಂಬ ತುಂಬಾ ಆಶಾವಾದದ ಮಾತುಗಳಿವೆ. ಕರಾವಳಿ ರಂಗಭೂಮಿಯನ್ನು ಜಾನ್ ಫೋಸ್ಸೆಯವರ ಈ ಮಾತುಗಳಿಗೆ ಹೋಲಿಸಲು ಸಾಧ್ಯವಿಲ್ಲದ ವಾತಾವರಣವಿದೆ.

ಕರಾವಳಿ ರಂಗಭೂಮಿಯ ವರ್ತಮಾನದ ಸೆಲೆ

ಕರಾವಳಿ ರಂಗಭೂಮಿ ಯಾವತ್ತಿಗೂ ಇಲ್ಲಿನ ಯಕ್ಷಗಾನ ಮತ್ತು ಭೂತಾರಾಧನೆಗಳಿಂದ ಪ್ರೇರಿತವಾಗಿದೆ. ಕರಾವಳಿ ರಂಗಭೂಮಿಯೆಂದರೆ ಅದು ನಾನು ಇಲ್ಲಿ ಹೇಳುತ್ತಿರುವುದು ಆಧುನಿಕ ಪ್ರಯೋಗ ರಂಗಭೂಮಿಯ ಬಗ್ಗೆ ಮಾತ್ರ ಎನ್ನುವುದನ್ನು ಆರಂಭದಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಪ್ರಧಾನವಾಗಿ ಇಟ್ಟುಕೊಂಡು ಮಾತನಾಡುವುದಾದರೆ ಕರಾವಳಿಯ ಆಧುನಿಕ ರಂಗಭೂಮಿ ಅದು ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ತನ್ನ ವಿಸ್ತಾರವನ್ನು ಪಡೆಯುತ್ತಿದೆ. ಅದರಲ್ಲೂ ಕನ್ನಡ ಮತ್ತು ತುಳು ಭಾಷೆಯಲ್ಲಿ ವಿಸ್ತಾರ ಮತ್ತು ಅಗಾಧತೆಯಲ್ಲಿ ಬಹಳ ಹೆಚ್ಚು ವಿಸ್ತಾರವಾಗಿರುವಂತೆ ಕಾಣುವುದು ಉಡುಪಿ ಜಿಲ್ಲೆಯಲ್ಲಿ. ಉಡುಪಿ, ಮಣಿಪಾಲದ ಸುತ್ತಮುತ್ತ ಮತ್ತು ಅದರ ಉತ್ತರಕ್ಕಿರುವ ಬ್ರಹ್ಮಾವರ, ಕುಂದಾಪುರ ಮತ್ತು ಬೈಂದೂರುಗಳಲ್ಲಿ ರಂಗಭೂಮಿಯ ಕೆಲಸಗಳು ಸಮೃದ್ಧವಾಗಿ ನಡೆಯುತ್ತಿದೆ. ಆದರೆ ಉಡುಪಿಯಿಂದ ದಕ್ಷಿಣ ಮತ್ತು ಪೂರ್ವಭಾಗದಲ್ಲಿ ಇದರ ಸದ್ದು ಇಲ್ಲ ಅಥವಾ ತುಂಬಾ ಕ್ಷೀಣವಾಗಿದೆ. ಉಡುಪಿಯನ್ನೇ ಸೀಮಿತವಾಗಿ ನೋಡಿದಾಗ ಇಲ್ಲಿ 30 ರಿಂದ 35 ಹವ್ಯಾಸಿ ರಂಗತಂಡಗಳಿವೆ. ವರ್ಷವೊಂದಕ್ಕೆ ಕನಿಷ್ಠ 10 ಹೊಸ ನಾಟಕಗಳು ಸಿದ್ಧಗೊಳ್ಳುತ್ತವೆ. ಪ್ರಸಕ್ತ ವರ್ಷದಲ್ಲಿ 4 ತುಳು ನಾಟಕಗಳು ಸಿದ್ಧವಾಗಿದೆ. ಕನಿಷ್ಠವೆಂದರೂ 15ರಿಂದ 20 ನಾಟಕೋತ್ಸವಗಳು ನಡೆಯುತ್ತವೆ. 150ರಿಂದ 170 ನಾಟಕಗಳು ಪ್ರದರ್ಶನಗೊಳ್ಳುತ್ತವೆ. ದಕ್ಷಿಣ ಕನ್ನಡದಲ್ಲಿ ಸುಮಾರು 10 ಹವ್ಯಾಸಿ ತಂಡಗಳಿವೆ. ಪ್ರತೀ ವರ್ಷ ಕನಿಷ್ಠ 5 ಕನ್ನಡ ನಾಟಕಗಳು ಸಿದ್ಧಗೊಳ್ಳುತ್ತವೆ. ಆದರೆ ತುಳು ರಂಗಭೂಮಿಯಲ್ಲಿ ಆಧುನಿಕ ರಂಗಪ್ರಯೋಗಗಳು ಬಹಳ ಕಡಿಮೆ. ಆದರೆ ಇಲ್ಲಿ ಕೊಂಕಣಿ ರಂಗಭೂಮಿ ಪ್ರಾಬಲ್ಯವನ್ನು ಗಳಿಸುತ್ತಿದೆ. ಕೊಂಕಣಿ ನಾಟಕಗಳು ಒಂದು ಸೀಮಿತ ಧರ್ಮದ ಪರಿಧಿಯಲ್ಲಿಯಾದರೂ ಹಲವು ಪ್ರದರ್ಶನಗಳನ್ನು ಕಾಣುತ್ತಿವೆ. ಅದೂ ಕೇವಲ ಒಂದು ತಂಡದಿಂದ ಹಲವು ಕೊಂಕಣಿ ನಾಟಕಗಳು ಸಿದ್ಧಗೊಂಡು ಪಕ್ಕಾ ವೃತ್ತಿಪರರಂತೆ ದಿನವೊಂದಕ್ಕೆ 3 ಪ್ರದರ್ಶನಗಳನ್ನು ಕೊಟ್ಟದ್ದೂ ಇದೆ. ವಿವಿಧ ರಂಗಶಾಲೆಗಳಿಂದ ರಂಗಶಿಕ್ಷಣವನ್ನು ಪಡೆದು ಬಂದ ಹಲವು ಯುವ ಕಲಾವಿದರು ರಂಗಭೂಮಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕರಾವಳಿಯ ಮಟ್ಟಿಗಂತೂ ಇದು ರಂಗಭೂಮಿಯ ಉಚ್ಛ್ರಾಯ ಕಾಲ.

ರಂಗಭೂಮಿಯ ನಂಬಿಕೆಗೆ ಕೊಡಲಿ

ಆದರೆ ಎಲ್ಲವೂ ಸರಿಯಾಗಿದೆ ಎನ್ನುವಂತಿಲ್ಲ. ಜಾನ್ ಫೋಸ್ಸೆಯವರು ಹೇಳಿದ ಹಾಗೆ ‘ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ, ಎಲ್ಲಾ ಉತ್ತಮಾಂಶಗಳನ್ನು ಒಳಗೊಂಡಿರುವ ಒಂದು ವಿಶಿಷ್ಟ ಅನುಭೂತಿ ಸಿಗುತ್ತಾ ಇದೆ ನಮಗೆ, ಅದು ಜನರನ್ನು ಒಟ್ಟು ಸೇರಿಸುತ್ತಾ ಇರುವ ದೊಡ್ಡ ಶಕ್ತಿಯಾಗಿದೆ’ ಎಂದು ಖುಷಿಪಡುತ್ತಾ ಸುಮ್ಮನಿದ್ದು ಬಿಡುವಂತಿಲ್ಲ. ‘ಕಲೆಯ ಮೂಲಕ ಯಾರು ಕಾಯಕ ಮಾಡುತ್ತಾರೋ ಅವರು ಶಾಂತಿಯ ಸಾರ್ವತ್ರಿಕ ಪ್ರತಿಪಾದಕರಾಗಿ ನಿಲ್ಲುತ್ತಾರೆ’ ಎನ್ನುವ ಫೋಸ್ಸೆಯವರ ಮಾತನ್ನು ಕರಾವಳಿಗೆ ಸಮೀಕರಿಸಿ ನೋಡಿದಾಗ ನಿರಾಶೆಯ ಕಾರ್ಮೋಡ ಆವರಿಸುತ್ತಿದೆ. ‘‘ಸಂಗೀತ, ಸಾಹಿತ್ಯ, ರಂಗಭೂಮಿ, ಸಿನೆಮಾ ಮೊದಲಾದ ಪ್ರದರ್ಶನ ಕಲೆಗಳ ಲೋಕದೊಳಗೆ ಮಾನವೀಯತೆ, ಕೋಮುಸೌಹಾರ್ದ ಮತ್ತು ಸಮಾನತೆಯ ಪ್ರಜ್ಞೆ ಅಂತರ್ಗತವಾಗಿಯೇ ಇರುತ್ತದೆ ಎಂಬ ನಮ್ಮ ಬಹುವರ್ಷಗಳ ನಂಬಿಕೆಗಳಿಗೆ ಕೊಡಲಿಯೇಟು ಬೀಳುತ್ತಿದೆ’’ ಎನ್ನುವ ರಹಮತ್ ತರೀಕೆರೆಯವರ ಮಾತಿನ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹುಟ್ಟಿದ ವಿಷಮತೆಗಳು ಇಲ್ಲಿಯ ಯಕ್ಷಗಾನವನ್ನು ಆಪೋಷನ ತೆಗೆದುಕೊಂಡಿದ್ದು, ಇದೀಗ ರಂಗಭೂಮಿಗೂ ಬಹಳ ವೇಗವಾಗಿ ಹರಡುತ್ತಿದೆ. ಪ್ರಭುತ್ವವೇ ರಂಗಭೂಮಿಯನ್ನು ಬಳಸಿಕೊಳ್ಳಲು ಆರಂಭಿಸಿರುವುದು, ಹಲವು ಕಲಾವಿದರು, ನಿರ್ದೇಶಕರು ಮತ್ತು ಕೆಲವು ರಂಗತಂಡಗಳ ರಂಗನಡೆಗಳು ಮತ್ತು ವೈಚಾರಿಕ ನಿಲುವುಗಳು ಆತಂಕಕಾರಿಯಾಗಿ ಕಾಣಿಸುತ್ತಿದೆ.

ಅರಿವಿನ ಮಾಧ್ಯಮ

ರಂಗಭೂಮಿ ಎನ್ನುವುದು ಬರಿಯ ಮನರಂಜನೆಗಾಗಿ ಮಾತ್ರ ಸೀಮಿತವಾಗಿಲ್ಲ. ಅದೊಂದು ಅರಿವಿನ ದಾರಿಯಾಗಿದೆ. ನಮ್ಮನ್ನು, ನಮ್ಮ ಚಿಂತನೆಗಳನ್ನು ನಮ್ಮ ಆಲೋಚನಾ ಕ್ರಮಗಳನ್ನು ನಾವೇ ಒರೆಹಚ್ಚಿ ನಿರ್ಧರಿಸುವ ಮತ್ತು ನಮ್ಮ ಸುತ್ತಲಿನ ಜಗತ್ತಿಗೆ ಅರಿವನ್ನು ವಿಸ್ತರಿಸುವ ಮಾಧ್ಯಮವಾಗಬೇಕಿದೆ. ಹಾಗಾಗಿ ನಾಟಕ ಇವತ್ತು ಕೇವಲ ಮನರಂಜನೆಯ ಮಾಧ್ಯಮವಾಗಬೇಕಾದ ಅಗತ್ಯವಿಲ್ಲ. ಈ ಒಳನೋಟವನ್ನು ಅಥವಾ ಈ ಚಿಂತನೆಯನ್ನು ಒಪ್ಪದ ಅನೇಕ ಮಂದಿ ಆಧುನಿಕ ರಂಗಭೂಮಿಯಲ್ಲಿ ಇದ್ದಾರೆ. ಹಾಗಾಗಿ ನಾಟಕಗಳು ವರ್ತಮಾನವಾಗುತ್ತಿಲ್ಲ, ಸಮಕಾಲೀನವಾಗುತ್ತಿಲ್ಲ. ಪ್ರತಿರೋಧದ ನಾಟಕಗಳಂತೂ ಕರಾವಳಿ ರಂಗಭೂಮಿಯಲ್ಲಿ ಬಹಳ ಕಡಿಮೆ. ನಾಟಕ ಎನ್ನುವುದು ಅಭಿಜಾತ ಕಲೆ. ಯಾವುದೇ ಅಭಿಜಾತ ಕಲೆಗೆ ಒಂದು ಸಾಮಾಜಿಕ ಬದ್ಧತೆ ಇರುತ್ತದೆ. ಹಾಗಾಗಿ ಮನರಂಜನೆಗಾಗಿ ಮನರಂಜನೆ ಎಂಬ ವ್ಯಾಖ್ಯಾನವನ್ನು ದಾಟಿ ಜಾಗತಿಕ ರಂಗಭೂಮಿ ತುಂಬ ದೂರ ಬಂದಾಗಿದೆ. ಆದರೆ ಕರಾವಳಿ ರಂಗಭೂಮಿಯಲ್ಲಿ ಕೆಲಸ ಮಾಡುವ ಬಹುತೇಕ ನಟರು, ನಿರ್ದೇಶಕರು, ಸಂಘಟಕರು ಇನ್ನೂ ಕಲೆಗಾಗಿ ಕಲೆ ಎಂಬ ಭ್ರಮೆಯಲ್ಲೇ ಇದ್ದಾರೆ.

ನಾಟಕ ಪ್ರತಿರೋಧವಾಗಿ

ರಂಗಭೂಮಿ ಯಾವತ್ತಿಗೂ ತನ್ನೊಳಗೆ ತನ್ನ ಸಾಂಸ್ಕೃತಿಕ ಸ್ವಭಾವದಲ್ಲೇ ಬಂಡುಕೋರತನ ಮತ್ತು ಪ್ರಭುತ್ವ ವಿರೋಧಿ ಗುಣವನ್ನು ಹೊಂದಿದೆ. ಹಾಗಾಗಿ ಇವತ್ತಿನ ಕಾಲಘಟ್ಟದಲ್ಲಿ ರಂಗಭೂಮಿಯ ಜವಾಬ್ದಾರಿ ಬಹಳ ಮಹತ್ವದ್ದು. ಪ್ರಭುತ್ವವನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಸಾರ್ವಜನಿಕವಾಗಿ ನೈತಿಕ ಅಧಃಪತನಕ್ಕೆ ಒಳಗಾದಂತೆ ಪ್ರಭುತ್ವದ ಓಲೈಕೆಯಲ್ಲಿ ತೊಡಗಿಸಿಕೊಂಡಿರುವಾಗ ರಂಗಭೂಮಿ ಆ ಜವಾಬ್ದಾರಿಯನ್ನು ಎತ್ತಿಕೊಳ್ಳಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ರಂಗಭೂಮಿ ಕೆಲಸ ಮಾಡಬೇಕಾಗಿದೆ. ನಾಟಕದ ವಸ್ತು ಈ ಸಮಕಾಲೀನತೆಯ ದೃಷ್ಟಿಯಲ್ಲಿ ಮುಖ್ಯವಾಗುತ್ತದೆ. ಜಗತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತಲ್ಲಣಗೊಂಡಾಗ ರಂಗಭೂಮಿಯೇ ಜಗತ್ತನ್ನು ಮತ್ತೆ ಮತ್ತೆ ಸಹನಶೀಲವಾಗಿಸಿದ ಹಲವು ಉದಾಹರಣೆಗಳು ಇತಿಹಾಸದ ಪುಟಗಳಲ್ಲಿ ನಮಗೆ ಕಾಣಸಿಗುತ್ತವೆ ಮತ್ತು ರಂಗಭೂಮಿಯಿಂದಲೇ ಜೀವಪರವಾದ ಸಾಮರಸ್ಯದ ಒಳಿತಿನ ಸಮಾಜವನ್ನು ಕಟ್ಟಲು ಸಾಧ್ಯ ಎಂದು ನಂಬಿಕೊಂಡು ಬಂದಿರುವ ಬಹಳ ದೊಡ್ಡ ವರ್ಗ ನಮ್ಮ ನಡುವೆ ಇದೆ. ಹೀಗಿರುವಾಗ ಈ ನಂಬಿಕೆಯನ್ನೇ ಅಲುಗಾಡಿಸಿ ಬಿಡುವ ಘಟನೆಗಳು ಇವತ್ತು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವಾಗ ಮಾತನಾಡಲೇ ಬೇಕಾದ ಸ್ಥಿತಿ ಕಲಾವಿದನಿಗೆ ಅನಿವಾರ್ಯವಾಗಿದೆ. ರಂಗಭೂಮಿಯ ಅಂತಿಮ ಆಶಯ ಅದು ಸತ್ಯದರ್ಶನ. ನಿಜವನ್ನು ಮರೆಮಾಚಿ ಸುಳ್ಳನ್ನು ಸತ್ಯವಾಗಿಸುವ ಕೆಲಸವನ್ನು ಜಾಗತಿಕ ರಂಗಭೂಮಿ ಯಾವತ್ತೂ ಮಾಡಿಲ್ಲ. ಬದಲಾಗಿ ಸತ್ಯವನ್ನು ಹೇಳಿದ್ದಕ್ಕಾಗಿ ಹಲವು ಬಾರಿ ನಿರ್ಬಂಧಿಸಲ್ಪಟ್ಟ ಉದಾಹರಣೆಗಳು ಇವೆ. ಧರ್ಮಾಧಾರಿತ ರಾಜಕಾರಣ ರಂಗಭೂಮಿಯನ್ನು ಬಳಸಿಕೊಳ್ಳಲು ಆರಂಭಿಸಿದೆ; ಇದು ಈಗ ತಣ್ಣಗೆ ಇದ್ದಂತೆ ಕಂಡರೂ ಮುಂದಿನ ಅಪಾಯದ ಸಂಕೇತಗಳೇ ಹೌದು. ಹಾಗಾಗಿ ಪ್ರತಿರೋಧದ ರಂಗಭೂಮಿ ಕಟ್ಟುವ ವೈಚಾರಿಕತೆ ಮತ್ತು ಧೈರ್ಯ ಕರಾವಳಿ ರಂಗಭೂಮಿಗೆ ತುಂಬಾ ಅಗತ್ಯವಾಗಿದೆ. ಕರಾವಳಿಯನ್ನು ಕಾಡುತ್ತಿರುವ ಕೋಮುದ್ವೇಷ, ಅಸಮಾನತೆ, ಬಡತನ, ಭೂಮಾಫಿಯಾ, ಹವಾಮಾನ ವೈಪರೀತ್ಯ ಮತ್ತು ಪ್ರಕೃತಿ ನಾಶದ ಬಗ್ಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಗಂಭೀರವಾಗಿ ಯೋಚಿಸಬೇಕಿದೆ.

ಬ್ರೆಕ್ಟ್ ಮತ್ತು ಕಾರ್ನಾಡ್‌ರ ಸಮಕಾಲೀನತೆ

ಜಗತ್ತಿನ ಶ್ರೇಷ್ಠ ನಾಟಕಕಾರ ಬರ್ಟೋರ್ಟ್ ಬ್ರೆಕ್ಟ್ ಬರೆಯುತ್ತಾನೆ: ‘‘ನನ್ನ ನಾಟಕದ ಉದ್ದೇಶ ಅನುಭವದ ಉದ್ದೀಪನೆಯೂ ಅಲ್ಲ, ಅನುಭವದ ಪುನರ್‌ಸೃಷ್ಟಿಯೂ ಅಲ್ಲ. ಈ ಜಗತ್ತನ್ನು ನೋಡುವ ಮತ್ತು ಪರಿಭಾವಿಸುವ ವಿಶಿಷ್ಟ ಅನುಭವವನ್ನು ಪ್ರೇಕ್ಷಕರಿಗೆ ಕಲ್ಪಿಸಿಕೊಡುವುದು.’’ ಬ್ರೆಕ್ಟ್ 1898ರಲ್ಲಿ ಜರ್ಮನಿಯಲ್ಲಿ ಹುಟ್ಟಿ 1946ರಲ್ಲಿ ಪೂರ್ವ ಜರ್ಮನಿಯಲ್ಲಿ ತೀರಿಕೊಳ್ಳುತ್ತಾನೆ. ತನ್ನ ತಾರುಣ್ಯದಲ್ಲಿ ಇದ್ದಾಗ ಹಿಟ್ಲರ್ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದ. ಮಾರನೆಯ ದಿನವೇ ಬ್ರೆಕ್ಟ್ ದೇಶಬಿಟ್ಟ. ಹಿಟ್ಲರನ ಸಮಯದಲ್ಲಿ ನಡೆದ ಯಹೂದಿಗಳ ಸಾಮೂಹಿಕ ಕಗ್ಗೊಲೆಗೆ ಬ್ರೆಕ್ಟ್ ಸಮಕಾಲೀನನಾಗಿದ್ದ ಮತ್ತು ಅದೇ ಸಂದರ್ಭದಲ್ಲಿ ಜರ್ಮನಿಯಿಂದ ಹೊರಗಿದ್ದು ‘ಮದರ್ ಕರೇಜ್’, ‘ಕಕೇಶಿಯನ್ ಚಾಕ್ ಸರ್ಕಲ್’, ‘ಗೆಲೆಲಿಯೋ’, ‘ದಿ ಗುಡ್ ವುಮನ್ ಆಫ್ ಸೆಜುವಾನ್’ ಎಂಬ ಜಗತ್ತಿನ ಶ್ರೇಷ್ಠ ನಾಟಕಗಳನ್ನು ಬರೆಯುತ್ತಾನೆ. ಒಬ್ಬ ನಾಟಕಕಾರನ ಜವಾಬ್ದಾರಿ ಇದು. ಈ ಸಂದರ್ಭದಲ್ಲಿ ನೆನಪಾಗುವುದು ಗಿರೀಶ್ ಕಾರ್ನಾಡ್‌ರ ಅಚ್ಚೊತ್ತಿ ನಿಂತ ಚಿತ್ರ. ಅವರು ‘ಮೀ ಟೂ ಅರ್ಬನ್ ನಕ್ಸಲ್’ ಎಂದು ಕುತ್ತಿಗೆಗೆ ಬೋರ್ಡ್ ಸಿಕ್ಕಿಸಿಕೊಂಡು ಮೂಗಿಗೆ ಆಕ್ಸಿಜನ್ ಪೈಪ್ ಹಾಕಿಕೊಂಡು ಬೆಂಗಳೂರಿನ ಟೌನ್‌ಹಾಲ್‌ನ ಮೆಟ್ಟಿಲಿನಲ್ಲಿ ಕೂತುಕೊಂಡು ಪ್ರತಿಭಟಿಸಿದ ದೃಶ್ಯ ಮತ್ತು ‘‘ನಾನು ಬೀಫ್ ತಿನ್ನಲು ಬಂದಿಲ್ಲ ಅದು ನನ್ನ ಕೆಲಸವೂ ಅಲ್ಲ. ನಾನು ಬಂದಿರುವುದು ನಮ್ಮ ಒಂದು ಆಹಾರ ಪದ್ಧತಿಯನ್ನು ಬೆಂಬಲಿಸಲು ಮಾತ್ರ’’ ಎಂದು ತೀಕ್ಷ್ಣವಾಗಿ ಅವರು ನೀಡಿದ ಸ್ಟೇಟ್‌ಮೆಂಟ್. ಕಾರ್ನಾಡರಂತೆ ಸಮಕಾಲೀನ ವಾಗಬಲ್ಲ ಬದ್ಧತೆಯನ್ನು ಯಾವ ನಾಟಕಕಾರ ಅಥವಾ ನಿರ್ದೇಶಕನೂ ತೋರಿಸಿಲ್ಲ ಎನ್ನುವುದೇ ಇಂದಿನ ದುರಂತ. ಕಾರ್ನಾಡರ ನಾಟಕಗಳಲ್ಲಿ ಅವರು ಪ್ರತೀ ಬಾರಿಯೂ ಜನಾಂಗೀಯ ಘರ್ಷಣೆಯನ್ನು ಮುಖಾಮುಖಿಯಾಗಿಸಿದ್ದಾರೆ. ‘ತುಘಲಕ್’ನಲ್ಲಿ ಮುಸ್ಲಿಮ್ ಸಂಸ್ಕೃತಿ, ‘ಹಿಟ್ಟಿನ ಹುಂಜ’ದಲ್ಲಿ ಜೈನ ಸಂಸ್ಕೃತಿ, ‘ತಲೆದಂಡ’ದಲ್ಲಿ ವೀರಶೈವ ಸಂಸ್ಕೃತಿ, ‘ಅಂಜುಮಲ್ಲಿಗೆ’ಯಲ್ಲಿ ವಸಾಹತು ಸಂಸ್ಕೃತಿ, ‘ಹಯವದನ’ ಮತ್ತು ‘ಅಗ್ನಿ ಮತ್ತು ಮಳೆ’ಯಲ್ಲಿ ವೈದಿಕ ಸಂಸ್ಕೃತಿ, ಇನ್ನು ಉಳಿದಂತೆ ‘ಬೆಂದಕಾಳು ಆನ್ ಟೋಸ್ಟ್’, ‘ಮದುವೆ ಆಲ್ಬಂ’, ‘ಒಡಕಲು ಬಿಂಬ’ದಲ್ಲಿ ವಸಾಹತೋತ್ತರ ಆಧುನಿಕ ಸಂಸ್ಕೃತಿ. ಹೀಗೆ ಸಂಸ್ಕೃತಿಯೊಳಗಿನ ಜನಾಂಗೀಯ ಘರ್ಷಣೆಗಳನ್ನು ಇಷ್ಟೊಂದು ಪರಿಣಾಮಕಾರಿಯಾಗಿ ನಾಟಕೀಕರಣಗೊಳಿಸಿದ ಇನ್ನೊಬ್ಬ ನಾಟಕಕಾರನಿಲ್ಲ. ಹಾಗಾಗಿ ಕಾರ್ನಾಡರ ನಾಟಕಗಳಲ್ಲಿ ಹಳೆಯ ಸಂಕಥನಗಳು ಹೊಸ ಸಂಕಥನಗಳಾಗಿ ರೂಪುಗೊಳ್ಳುತ್ತವೆ. ಮಹಾಸಂಸ್ಕೃತಿಗಳು ಮತ್ತು ಕಿರು ಸಂಸ್ಕೃತಿಗಳು ಮುಖಾಮುಖಿಯಾಗುತ್ತವೆ ಮತ್ತು ಕಿರು ಸಂಸ್ಕೃತಿಯೇ ಮೇಲುಗೈ ಸಾಧಿಸುತ್ತದೆ. ಹಾಗಾಗಿ ಕಾರ್ನಾಡ್ ಈ ಕಾಲಕ್ಕೆ ಬಹಳ ಮುಖ್ಯವಾಗುತ್ತಾರೆ.

ಕರಾವಳಿ ನಾಟಕೋತ್ಸವಗಳು-ಆಯ್ಕೆಗಳು ಮತ್ತು ಸರಳತೆಯ ಅಗತ್ಯಗಳು

ಕರಾವಳಿಯಲ್ಲಿ ಉಡುಪಿ, ದಕ್ಷಿಣಕನ್ನಡವನ್ನು ತೆಗೆದುಕೊಂಡರೆ ವರ್ಷಕ್ಕೆ ಸುಮಾರು 25 ನಾಟಕೋತ್ಸವಗಳು ನಡೆಯುತ್ತವೆ. ಈ ಎಲ್ಲಾ ನಾಟಕೋತ್ಸವಗಳಲ್ಲಿ ಹೆಚ್ಚು ಪಾಲು ತೆಗೆದುಕೊಳ್ಳುವವರು ಬೆಂಗಳೂರಿಗರು. ಬೆಂಗಳೂರಿನಲ್ಲಿ ದಿನಂಪ್ರತಿ ಹುಟ್ಟಿಕೊಳ್ಳುತ್ತಿರುವ ರಂಗತಂಡಗಳಿಗೆ ಕರಾವಳಿ ಆಡುಂಬೋಲವಾಗಿದೆ. ಕನಿಷ್ಠವೆಂದರೂ ಬೆಂಗಳೂರಿನ 50 ನಾಟಕಗಳು ಪ್ರತೀವರ್ಷ ಕರಾವಳಿಯಲ್ಲಿ ಪ್ರದರ್ಶನ ಕಾಣುತ್ತವೆ. ಆದರೆ ಇಲ್ಲಿ ತಯಾರಾದ ನಾಟಕಗಳು ಬೆಂಗಳೂರಿನ ಮುಖವನ್ನೇ ಕಾಣುವುದು ಸಾಧ್ಯವಾಗುತ್ತಿಲ್ಲ ಮತ್ತು ಅವುಗಳ ಸಂಖ್ಯೆ ತುಂಬಾ ಕಡಿಮೆ. ಹೀಗಾಗಿ ಕರಾವಳಿಯ ಹವ್ಯಾಸಿ ರಂಗತಂಡಗಳು ಆರ್ಥಿಕವಾಗಿ ಸೊರಗುತ್ತಿವೆ. ರಂಗಭೂಮಿ ಯಾವತ್ತಿಗೂ ಅದು ಸೋತವರ ಪರ, ಅಲ್ಪಸಂಖ್ಯಾತರ ಪರ, ಬಡವರ ಪರ ಮತ್ತು ಹಸಿದವರ ಪರ. ಅದೇ ಅದರ ಮೂಲ ಧರ್ಮವೂ ಹೌದು ಮತ್ತು ಅದೇ ಜಾಗತಿಕ ಧರ್ಮವೂ ಹೌದು. ಆದರೆ ಇತ್ತೀಚೆಗಿನ ಬೆಳವಣಿಗೆಗಳು ಬಹಳ ಅದ್ದೂರಿ ನಾಟಕಗಳ ವಿನ್ಯಾಸಕ್ಕೆ ಕಾರಣವಾಗಿವೆ. ವೈಭವಯುತ ಸೆಟ್ ಮತ್ತು ಮಾಯಾ ಬೆಳಕು ನಾಟಕಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಹಾಗಾಗಿ ಆ ಅದ್ದೂರಿ ನಾಟಕಗಳ ಮುಂದೆ ಹಲವು ಹವ್ಯಾಸಿ ರಂಗತಂಡಗಳು ಸ್ಪರ್ಧಿಸಲಾಗದಂತಹ ವಾತಾವರಣ ನಿರ್ಮಾಣವಾಗಿದೆ. ತೀರಾ ಇತ್ತೀಚೆಗೆ ನಡೆದ ಮಂಗಳೂರಿನ ನಾಟಕೋತ್ಸವ ಅದರ ಎಲ್ಲ ಔಚಿತ್ಯತೆ ಮತ್ತು ಯಶಸ್ಸಿನ ನಡುವೆಯೂ ರಂಗಭೂಮಿಯನ್ನು ಕಾರ್ಪೊರೇಟ್ ಸಂಸ್ಕೃತಿಯ ಮಟ್ಟಕ್ಕೆ ದೂಡುತ್ತಿದೆ ಎಂಬ ಆತಂಕ ಕಾಡುತ್ತಿರುವುದಂತೂ ಸತ್ಯ. ಇದರಲ್ಲಿ ಭಾಷಾ ಪ್ರಾತಿನಿಧ್ಯವಾಗಲೀ, ಪ್ರದೇಶವಾರು ಪ್ರಾತಿನಿಧ್ಯವಾಗಲೀ, ಆರ್ಥಿಕ ಸಮಾನತೆಯ ಪ್ರಾತಿನಿಧ್ಯವಾಗಲೀ ಅಥವಾ ಕರಾವಳಿ ಮಣ್ಣ ನೆಲಕ್ಕೆ ಪ್ರಾತಿನಿಧ್ಯವಾಗಲೀ ಕಾಣುತ್ತಿಲ್ಲ. ಕರಾವಳಿಯ ರಂಗಭೂಮಿಯ ಮಟ್ಟಿಗೆ ಇದು ಸಹ್ಯವೋ ಎಂಬ ತುಸು ಚರ್ಚೆಯನ್ನು ನಾವು ಎತ್ತಿಕೊಳ್ಳಬೇಕಾಗಿದೆ. ಈ ವರ್ಷದ ವಿಶ್ವರಂಗಭೂಮಿ ದಿನಾಚರಣೆ ಈ ಪ್ರಶ್ನೆಗಳ ಸುತ್ತ ಚರ್ಚಿಸಲಿ ಎಂಬುದೇ ಆಶಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಂತೋಷ್ ನಾಯಕ್ ಪಟ್ಲ

ರಂಗನಿರ್ದೇಶಕರು

Similar News