ಸಂವಿಧಾನ ಮೌಲ್ಯಗಳೂ ತಿದ್ದುಪಡಿಯ ಹಪಾಹಪಿಯೂ

ಸಂವಿಧಾನವನ್ನು ನಮ್ಮ ಚಿಂತನೆಗೆ ತಕ್ಕಂತೆ ರೂಪಿಸಬೇಕು ಎಂದು ಒತ್ತಾಯಿಸುವ ನೈತಿಕ ಹಕ್ಕು ಯಾವುದೇ ಸಮುದಾಯಕ್ಕಾಗಲೀ, ಸಮಾಜಕ್ಕಾಗಲೀ ಇಲ್ಲ ಎನ್ನುವುದನ್ನು ಇಬ್ಬರೂ ಕಾವಿಧಾರಿಗಳು ಗಮನದಲ್ಲಿಡಬೇಕು. ಈ ಸಂವಿಧಾನದ ಆಶಯದಂತೆ ಬದುಕುತ್ತಿರುವ ‘ಭಾರತದ ಜನಗಳಾದ ನಾವು’ ಸಾಂವಿಧಾನಿಕ ಆಶಯ-ಮೌಲ್ಯಗಳನ್ನು ಗೌರವಿಸಿ ನಡೆದುಕೊಳ್ಳುವುದು ನಮ್ಮ ಆದ್ಯತೆ-ಕರ್ತವ್ಯವಾಗಬೇಕು. ಇದು ಸಾರ್ಥಕವಾಗಬೇಕಾದರೆ ನಮ್ಮೊಳಗಿನ ಪ್ರತ್ಯೇಕತೆಯ ಗೋಡೆಗಳನ್ನು ಕೆಡವಬೇಕು, ‘ಹೊರಗಿಡುವ’ ಮನಸ್ಥಿತಿಯನ್ನು ತ್ಯಜಿಸಬೇಕು, ‘ಅನ್ಯ’ರನ್ನು ಸೃಷ್ಟಿಸುವ ಸಾಂಸ್ಕೃತಿಕ-ರಾಜಕೀಯ ಧೋರಣೆಯನ್ನು ಕೊನೆಗಾಣಿಸಬೇಕು. ಸಮಾಜಕ್ಕೆ ಸಹಬಾಳ್ವೆ ಮತ್ತು ಸಮಚಿತ್ತವನ್ನು ಬೋಧಿಸಬೇಕಾದ ಕಾವಿಧಾರಿಗಳು ಈ ನಿಟ್ಟಿನಲ್ಲಿ ನಡೆದರೆ, ಎಲ್ಲರನ್ನೂ ಗೌರವಿಸುವ ಮನೋಭಾವವನ್ನೂ ಜನಸಾಮಾನ್ಯರಲ್ಲಿ ಮೂಡಿಸಲು ಸಾಧ್ಯ. ದುರದೃಷ್ಟವಶಾತ್ ಈ ಅಧ್ಯಾತ್ಮ ವಲಯವೇ ಇಂದು ಸಮಾಜದ ನಡುವೆ ತಡೆಬೇಲಿಗಳನ್ನು ಕಟ್ಟುವ ಸಾಂಸ್ಥಿಕ ರೂಪ ಪಡೆಯುತ್ತಿವೆ.

Update: 2024-12-01 07:14 GMT
Editor : Ismail | Byline : ನಾ. ದಿವಾಕರ

ಭಾರತದ ಸಂವಿಧಾನದ ಔದಾತ್ಯ ಇರುವುದು ಅದರಲ್ಲಡಗಿರುವ ಕನಸುಗಳಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆಯಲು ಶ್ರಮಿಸಿದ್ದವರ ಮೂಲ ಗುರಿ ಇದ್ದುದು ಭಾರತವನ್ನು ಬಹುತ್ವದ ಸಮ ಸಮಾಜವಾಗಿ ಕಟ್ಟುವುದರತ್ತ. ರಾಜಕೀಯ-ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ಸಮಾನತೆಯ ಈ ಕನಸುಗಳಿಗೆ ಕೆಲವೇ ಅಪಸ್ವರಗಳು ಇದ್ದರೂ ಆ ಕ್ಷೀಣ ದನಿಗಳು ಸಹ ಭಾರತೀಯ ಸಮಾಜದ ಅಂತರಾಳವನ್ನು ಅಲ್ಲಗಳೆಯಲಾಗದೆ ಇದ್ದುದು ಸಂವಿಧಾನ ರಚನಾ ಮಂಡಲಿಯ ಚರ್ಚೆಗಳಲ್ಲಿ ಕಂಡುಬರುತ್ತದೆ. ಶತಮಾನಗಳ ಇತಿಹಾಸ ಇರುವ ಭಾರತೀಯ ಸಮಾಜವನ್ನು ಸಮಾನತೆಯ ಹಾದಿಯಲ್ಲಿ ಕೊಂಡೊಯ್ಯುವಾಗ ಅಗತ್ಯವಾದ ಎಲ್ಲ ಉದಾತ್ತ ಚಿಂತನೆಗಳನ್ನೂ ಸಂವಿಧಾನದಲ್ಲಿ ಅಳವಡಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಸ್ವಾತಂತ್ರ್ಯ -ಸಮಾನತೆ-ಭ್ರಾತೃತ್ವದ ಪರಿಕಲ್ಪನೆಯನ್ನು ಸಂವಿಧಾನದ ಅಂತರಾತ್ಮವಾಗಿ ರೂಪಿಸಿದ್ದರು.

ಇತಿಹಾಸದುದ್ದಕ್ಕೂ ಭಾರತದಲ್ಲಿ ಕಾಣಬಹುದಾದ ಒಂದು ವಿದ್ಯಮಾನ ಎಂದರೆ ಎಲ್ಲರನ್ನೂ ಸಮಾನರೆಂದು ಕಾಣುವ ಉದಾತ್ತ ಚಿಂತನಾಧಾರೆಗಳ ಜೊತೆಗೇ, ಸಮಾಜವನ್ನು ಶ್ರೇಣೀಕರಣಕ್ಕೊಳಪಡಿಸಿ ವಿಘಟಿಸುತ್ತಲೇ ಮೇಲು-ಕೀಳುಗಳನ್ನು ಸೃಷ್ಟಿಸಲು ಬಯಸಿದ ವಿಚಾರಧಾರೆಗಳು ಒಟ್ಟೊಟ್ಟಿಗೇ ನಡೆದುಬಂದಿರುವುದು. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಮನುಸ್ಮತಿಯಂತಹ ಪ್ರಾಚೀನ ಮನಸ್ಥಿತಿಯ ಆಲೋಚನೆಗಳನ್ನು ಸ್ವತಂತ್ರ ಭಾರತದಲ್ಲೂ ಶಾಸನಬದ್ಧವಾಗಿ ಜಾರಿಯಲ್ಲಿರಿಸುವ ಚಿಂತನಾಧಾರೆ ಮಧ್ಯಕಾಲೀನ ಯುಗದಲ್ಲಿದ್ದಂತೆಯೇ ಆಧುನಿಕ ಭಾರತದಲ್ಲೂ ಇರುವುದು ಅಚ್ಚರಿಯ ಸಂಗತಿಯೇನಲ್ಲ. ೭೫ ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಈ ಮನಸ್ಥಿತಿ ಜೀವಂತವಾಗಿರುವುದು ಸೆಕ್ಯುಲರ್ ಭಾರತದ ಬೌದ್ಧಿಕ ವೈಫಲ್ಯ ಎಂದರೆ ಅತಿಶಯೋಕ್ತಿಯಾಗಲಾರದು.

ಏಕೆಂದರೆ ಈ ಏಳು ದಶಕಗಳಲ್ಲಿ ನಮ್ಮ ಸಾರ್ವಜನಿಕ ಪ್ರಜ್ಞೆ ಮತ್ತು ಸಾಮಾಜಿಕ ಅರಿವು ವಿಸ್ತರಿಸಬೇಕಿತ್ತು. ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯದ ಪೂರ್ವಸೂರಿಗಳು ಕಂಡ ಸಮ ಸಮಾಜದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಭೌತಿಕ ಬದುಕು ಮತ್ತು ಬೌದ್ಧಿಕ ಚಿಂತನೆ ವಿಕಾಸವಾಗಬೇಕಿತ್ತು. ದುರಂತ ಎಂದರೆ ‘ವಿಕಸಿತ ಭಾರತ’ದ ಹೊಸ ಕನಸು ಹೊತ್ತಿರುವ ಭಾರತ ಈ ವಿಕಾಸಕ್ಕೆ ತೆರೆದುಕೊಂಡಂತಿಲ್ಲ. ಹಾಗಾಗಿಯೇ ಇಂದಿಗೂ ನಮ್ಮ ನಡುವೆ ಅಸ್ಪಶ್ಯತೆ, ಸಾಮಾಜಿಕ ಬಹಿಷ್ಕಾರ, ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಗಳು ಉಸಿರಾಡುತ್ತಲೇ ಇವೆ. ಸಮಾಜದ ಒಂದು ವರ್ಗವನ್ನು ‘ಅನ್ಯ’ರೆಂದೆಣಿಸಿ ಹೊರಗಿಟ್ಟು ನೋಡುವ ಮನಸ್ಥಿತಿ ಎಲ್ಲರನ್ನೂ ಒಳಗೊಳ್ಳುವ ಸಂವಿಧಾನಕ್ಕೆ ವ್ಯತಿರಿಕ್ತವಾಗಿದ್ದರೂ ಜೀವಂತವಾಗಿದೆ.

ಪ್ರಾಚೀನ ಮನಸ್ಥಿತಿಯ ಆಧುನಿಕ ರೂಪ

ಈ ‘ಹೊರಗಿಟ್ಟು’ ನೋಡುವ ಮಧ್ಯಕಾಲೀನ ವಿಚಾರಧಾರೆಯೇ ನಮ್ಮ ಅತ್ಯಾಧುನಿಕ ನಗರಗಳಲ್ಲೂ ಜಾತಿ ಕೇಂದ್ರಿತ ಅಗ್ರಹಾರಗಳನ್ನು ಸೃಷ್ಟಿಸುತ್ತಿರುವುದನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದೇವೆ. ಮೇಲ್ನೋಟಕ್ಕೆ ಕಾಣುವ ಜಾತಿ ಸಂಕರಗಳಿಗೂ, ಒಳಹೊಕ್ಕು ನೋಡಿದಾಗ ಕಾಣುವ ಜಾತಿಯ ಗೋಡೆಗಳಿಗೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬೇಕಿದೆ. ಈ ಪ್ರಾಚೀನತೆಗೆ ಬಲಿಯಾಗುತ್ತಿರುವುದು ಯಾರು? ಸಾಮಾಜಿಕ ಪಿರಮಿಡ್ಡಿನಲ್ಲಿ ತಳಪಾಯದಲ್ಲಿರುವ ಜನಸಮುದಾಯಗಳು, ಆರ್ಥಿಕವಾಗಿ ಅಂಚಿಗೆ ದೂಡಲ್ಪಟ್ಟಿರುವ ಸಮಾಜಗಳು, ಸಾಂಸ್ಕೃತಿಕವಾಗಿ ಹೊರಗಿರಿಸಲ್ಪಟ್ಟಿರುವ ಜಾತಿಗಳು ಮತ್ತು ಈ ಮೂರೂ ವಲಯಗಳಲ್ಲಿರುವ ಮಹಿಳಾ ಸಂಕುಲ. ಮನುಸ್ಮತಿ ಜೀವಂತಿಕೆಯಿಂದಿರುವುದು ಈ ಪರಿಸರದಲ್ಲಿ. ಹಾಗಾಗಿಯೇ ಡಿಜಿಟಲ್ ಯುಗದ ಭಾರತದಲ್ಲೂ ಮಹಿಳಾ ದೌರ್ಜನ್ಯ-ಜಾತಿ ದೌರ್ಜನ್ಯಗಳು ಸಹ್ಯ ಎನಿಸಿಬಿಟ್ಟಿವೆ.

ಇತ್ತೀಚೆಗೆ ತಾನೇ ಸಂವಿಧಾನ ದಿನವನ್ನು ಆಚರಿಸಿರುವ ನಾವು, ಅಂದರೆ ಭಾರತದ ಜನರು, ಯೋಚಿಸಬೇಕಿರುವುದೇನು? ನಾವು ಶಾಸನವಾಗಿ ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿರುವ ಸಮ ಸಮಾಜದ ಈ ಕನಸನ್ನು ಸಾಕಾರಗೊಳಿಸುವುದರಲ್ಲಿ ನಾವು ಎಡವಿದ್ದೇವೆಯೇ? ಪಾಶ್ಚಿಮಾತ್ಯ ಸೆಕ್ಯುಲರಿಸಂ ಚಿಂತನೆಗಳನ್ನು ಬದಿಗಿಟ್ಟು, ನಮ್ಮದೇ ಆದ ಎಲ್ಲ ಮತಾಚರಣೆ, ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಭಾರತೀಯ ಸೆಕ್ಯುಲರಿಸಂ ತತ್ವವನ್ನು ಅಳವಡಿಸಿಕೊಂಡಿರುವ ನಾವು ಈ ತತ್ವವನ್ನಾದರೂ ಅನುಸರಿಸಲು ಸಾಧ್ಯವಾಗಿದೆಯೇ? ಇಂದಿಗೂ ನಮ್ಮ ಸಮಾಜದಲ್ಲಿ ಮುಟ್ಟಬಾರದವರು, ಮುಟ್ಟಲೊಲ್ಲದವರು, ಮುಟ್ಟಿಸಿಕೊಳ್ಳದಿರು ವವರು, ಬಹಿಷ್ಕೃತರು ಇರುವುದನ್ನು ಗಮನಿಸಿದರೆ ಈ ಪ್ರಶ್ನೆಗೆ ಹೌದು ಎಂದು ಉತ್ತರಿಸಲಾಗುವುದಿಲ್ಲ. ಸಂವಿಧಾನ ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತದೆ ಆದರೆ ಸಾಂವಿಧಾನಿಕ ಆಳ್ವಿಕೆಯಲ್ಲಿ ಈ ಅಸಮಾನತೆಗಳನ್ನು ಹೋಗಲಾಡಿಸಲು ನಾವು ವಿಫಲವಾಗಿದ್ದೇವೆ.

ಅಧ್ಯಾತ್ಮ ವಲಯದ ಅಂತರಂಗ

ಇದರ ಒಂದು ಆಯಾಮವನ್ನು ಇಬ್ಬರು ಕಾವಿಧಾರಿಗಳು ಆಡಿರುವ ಮಾತುಗಳಲ್ಲಿ ಗುರುತಿಸಬೇಕಿದೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ‘‘ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’’ ಎಂಬ ಹೆಬ್ಬಯಕೆಯನ್ನು ಹೊರಹಾಕಿದ್ದರೆ, ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥರು ‘‘ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡುವ ಕಾನೂನು ಜಾರಿಗೆ ತರಬೇಕು’’ ಎಂದು ಆಜ್ಞಾಪಿಸಿದ್ದಾರೆ. ಈ ಎರಡೂ ಹೇಳಿಕೆಗಳು ಎರಡು ಧ್ರುವಗಳಿಂದ ಬಂದಿರುವುದನ್ನು ಗಮನಿಸಬೇಕು. ಪೇಜಾವರರು ಶ್ರೇಣೀಕೃತ ಸಮಾಜದ ಮೇಲ್ಜಾತಿ-ಮೇಲ್ಪದರವನ್ನು ಪ್ರತಿನಿಧಿಸುತ್ತಾರೆ, ಚಂದ್ರಶೇಖರನಾಥರು ನಾಲ್ಕನೇ ಸ್ತರದ ಶೂದ್ರ ಸಮಾಜವನ್ನು ಪ್ರತಿನಿಧಿಸುತ್ತಾರೆ. ಈ ಎರಡೂ ಬಯಕೆಗಳ ನಡುವೆ ಕಾಣುವ ಸಮಾನ ಎಳೆ ಎಂದರೆ ಸಮಾಜದ ಒಂದು ವರ್ಗವನ್ನು ‘ಹೊರಗಿಟ್ಟು’ ನೋಡುವ ಪ್ರವೃತ್ತಿ ಅಥವಾ ಒಂದು ವರ್ಗದ ‘ಶ್ರೇಷ್ಠತೆ-ಪ್ರತ್ಯೇಕತೆ’ಯನ್ನು ಪ್ರತಿಪಾದಿಸುವ ಧೋರಣೆ.

ಈ ಎರಡೂ ಪ್ರತಿಪಾದನೆಗಳು ಮೂಲತಃ ಸಂವಿಧಾನ ವಿರೋಧಿ ಯಾಗಿವೆ. ಭಾರತದ ಸಂವಿಧಾನ ಭಾರತದ ಸಮಸ್ತ ಜನತೆಯನ್ನೂ ಸಮಾನವಾಗಿ ಸಮ್ಮಾನಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ಸಮುದಾಯ ಅಥವಾ ಸಮಾಜವನ್ನು ಗೌರವಿಸುವುದು ಸಂವಿಧಾನದ ಆದ್ಯತೆಯಲ್ಲ. ಬದಲಾಗಿ ಈ ಸಂವಿಧಾನದ ಅಡಿ ಬದುಕುತ್ತಿರುವ ಸಮಾಜಗಳು ಅದರ ಸಮಾನತೆಯ ಮೌಲ್ಯಗಳನ್ನು ಗೌರವಿಸಬೇಕಿದೆ. ಪೇಜಾವರರು ‘ನಮ್ಮನ್ನು ಗೌರವಿಸುವ...’ ಎಂದು ಹೇಳುವಾಗ ಆ ನಮ್ಮವರು ಯಾರು? ಹಿಂದೂಗಳೋ, ಕೇವಲ ಕಾವಿಧಾರಿಗಳೋ, ಕೇವಲ ಬ್ರಾಹ್ಮಣರು/ಮೇಲ್ಜಾತಿಗಳೋ? ತಮ್ಮ ಆವರಣದಲ್ಲೇ ಪೇಜಾವರರು ಹಿಂದೂ ಸಮಾಜದ ಎಲ್ಲ ಸಮುದಾಯಗಳನ್ನೂ ಗೌರವಿಸುತ್ತಾರೆಯೇ? ಅಥವಾ ಮೇಲ್ಜಾತಿ ಗಳಲ್ಲೇ ಎಲ್ಲರನ್ನೂ ಗೌರವಿಸುತ್ತಾರೆಯೇ? ಈ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕು.

ಸಂಪ್ರದಾಯ, ಧಾರ್ಮಿಕ ಆಚರಣೆಗಳ ನೆಲೆಯಲ್ಲಿ ಇಂದಿಗೂ ತಾರತಮ್ಯದ ಧೋರಣೆಯನ್ನು ಅನುಸರಿಸುತ್ತಿರುವ ಸಮಾಜವೊಂದು ಸಂವಿಧಾನವನ್ನು ಗೌರವಿಸಿ, ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಲ್ಲವೇ? ಇಂದಿಗೂ ದೇವಾಲಯ ಪ್ರವೇಶ ಪಡೆಯದ ಅಸ್ಪಶ್ಯರಿದ್ದಾರೆ, ಬಹಿಷ್ಕೃತರಾಗುವ ಜಾತಿಗಳಿವೆ, ಸಾಂಸ್ಕೃತಿಕವಾಗಿ ಹೊರಗಿಡಲ್ಪಡುವ ಸಮಾಜಗಳು ನಮ್ಮ ನಡುವೆ ಇದೆ. ಅಸ್ಪಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರದ ಪಿಡುಗು ಎಲ್ಲ ಜಾತಿ ಶ್ರೇಣಿಗಳನ್ನೂ ಆವರಿಸಿದೆ. ಮನುಜ ಸ್ಪರ್ಶವನ್ನು ಒಲ್ಲದ, ಸಹಜ ಮನುಜ ಸಂಬಂಧಗಳನ್ನು ಒಪ್ಪದ ಒಂದು ವಿಕೃತ ಸಮಾಜದಲ್ಲಿ ನಾವಿದ್ದೇವೆ. ಇಂತಹ ಒಂದು ಪ್ರಾಚೀನ ಮನಸ್ಥಿತಿಯಲ್ಲಿರುವುದು ಸಂವಿಧಾನಕ್ಕೆ ತೋರುವ ಅಗೌರವ ಅಲ್ಲವೇ? ಅಥವಾ ಈ ಪ್ರಾಚೀನ ಮನಸ್ಥಿತಿಯ ಸಮಾಜವನ್ನೇ ‘ಗೌರವಿಸುವ’ ಸಂವಿಧಾನಕ್ಕಾಗಿ ಪೇಜಾವರರು ಆಗ್ರಹಿಸುತ್ತಿದ್ದಾರೆಯೇ?

ಮುಸ್ಲಿಮರಿಗೆ ಮತದಾನದ ಹಕ್ಕು ಕಸಿದುಕೊಳ್ಳುವ ಚಂದ್ರಶೇಖರನಾಥರ ಪ್ರತಿಪಾದನೆ ಇದೇ ಸಂವಿಧಾನ ವಿರೋಧಿ ಧೋರಣೆಯ ಮತ್ತೊಂದು ಆಯಾಮ. ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದ್ದರೂ ಚಂದ್ರಶೇಖರನಾಥರ ಮಾತುಗಳ ಹಿಂದಿರುವ ಪ್ರಾಚೀನ ಮನಸ್ಥಿತಿಯನ್ನು ಯಾರು ಕ್ಷಮಿಸಬೇಕು? ಸ್ವತಂತ್ರ ಭಾರತದಲ್ಲಿ ಎದುರಾಗಬಹುದಾದ ಈ ಸಮಸ್ಯೆಯನ್ನು ಅರಿತೇ ಡಾ. ಬಿ.ಆರ್. ಅಂಬೇಡ್ಕರ್ ಸಾರ್ವತ್ರಿಕ ಮತದಾನ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಒಂದು ಮತ ಎಂಬ ಉದಾತ್ತ ಚಿಂತನೆಯನ್ನು ಅಳವಡಿಸಿದ್ದಾರೆ. ಭಾರತದ ಗಣತಂತ್ರ ಏಳು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದೆ ಯಾದರೆ ಅದರ ಹಿಂದೆ ಈ ಮತದಾನ ವ್ಯವಸ್ಥೆಯ ಭದ್ರ ಬುನಾದಿ ಇದೆ. ಈ ಹಕ್ಕನ್ನು ಒಂದು ಸಮುದಾಯದಿಂದ ಕಸಿದುಕೊಳ್ಳುವ ಚಿಂತನೆಯೇ ಸಮಾಜದ ಒಂದು ವರ್ಗವನ್ನು ಪ್ರತ್ಯೇಕಿಸಿ ಅಥವಾ ಹೊರಗಿಟ್ಟು ನೋಡುವ ಪ್ರಾಚೀನ ಮನಸ್ಥಿತಿಯನ್ನು ಬಿಂಬಿಸುತ್ತದೆ.

ಸಂವಿಧಾನದ ಔದಾತ್ಯದ ನೆಲೆಯಲ್ಲಿ

ಸಂವಿಧಾನವನ್ನು ನಮ್ಮ ಚಿಂತನೆಗೆ ತಕ್ಕಂತೆ ರೂಪಿಸಬೇಕು ಎಂದು ಒತ್ತಾಯಿಸುವ ನೈತಿಕ ಹಕ್ಕು ಯಾವುದೇ ಸಮುದಾಯಕ್ಕಾಗಲೀ, ಸಮಾಜಕ್ಕಾಗಲೀ ಇಲ್ಲ ಎನ್ನುವುದನ್ನು ಇಬ್ಬರೂ ಕಾವಿಧಾರಿಗಳು ಗಮನದಲ್ಲಿಡಬೇಕು. ಈ ಸಂವಿಧಾನದ ಆಶಯದಂತೆ ಬದುಕುತ್ತಿರುವ ‘ಭಾರತದ ಜನಗಳಾದ ನಾವು’ ಸಾಂವಿಧಾನಿಕ ಆಶಯ-ಮೌಲ್ಯಗಳನ್ನು ಗೌರವಿಸಿ ನಡೆದುಕೊಳ್ಳುವುದು ನಮ್ಮ ಆದ್ಯತೆ-ಕರ್ತವ್ಯವಾಗಬೇಕು. ಇದು ಸಾರ್ಥಕವಾಗಬೇಕಾದರೆ ನಮ್ಮೊಳಗಿನ ಪ್ರತ್ಯೇಕತೆಯ ಗೋಡೆಗಳನ್ನು ಕೆಡವಬೇಕು, ‘ಹೊರಗಿಡುವ’ ಮನಸ್ಥಿತಿಯನ್ನು ತ್ಯಜಿಸಬೇಕು, ‘ಅನ್ಯ’ರನ್ನು ಸೃಷ್ಟಿಸುವ ಸಾಂಸ್ಕೃತಿಕ-ರಾಜಕೀಯ ಧೋರಣೆಯನ್ನು ಕೊನೆಗಾಣಿಸಬೇಕು. ಸಮಾಜಕ್ಕೆ ಸಹಬಾಳ್ವೆ ಮತ್ತು ಸಮಚಿತ್ತವನ್ನು ಬೋಧಿಸಬೇಕಾದ ಕಾವಿಧಾರಿಗಳು ಈ ನಿಟ್ಟಿನಲ್ಲಿ ನಡೆದರೆ, ಎಲ್ಲರನ್ನೂ ಗೌರವಿಸುವ ಮನೋಭಾವವನ್ನೂ ಜನಸಾಮಾನ್ಯರಲ್ಲಿ ಮೂಡಿಸಲು ಸಾಧ್ಯ. ದುರದೃಷ್ಟವಶಾತ್ ಈ ಅಧ್ಯಾತ್ಮ ವಲಯವೇ ಇಂದು ಸಮಾಜದ ನಡುವೆ ತಡೆಬೇಲಿಗಳನ್ನು ಕಟ್ಟುವ ಸಾಂಸ್ಥಿಕ ರೂಪ ಪಡೆಯುತ್ತಿವೆ.

ದೇವಾಲಯ ಪ್ರವೇಶ ನಿಷೇಧ, ಪಂಕ್ತಿ ಭೇದ, ಸಾಮಾಜಿಕ ಬಹಿಷ್ಕಾರ, ಸಾಂಸ್ಕೃತಿಕ ತಾರತಮ್ಯ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಬೇರೂರಿರುವ ಮೇಲು ಕೀಳುಗಳ ನಡುವೆಯೂ ಭಾರತೀಯ ಸಮಾಜ ತನ್ನ ಅಖಂಡತೆ-ಏಕತೆಯನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ, ನಿರಂತರ ಶೋಷಣೆ ಎದುರಿಸುತ್ತಿರುವ ತಳಸಮುದಾಯಗಳ ಸಹನಶೀಲತೆ ಮತ್ತು ತಾಳ್ಮೆ. ತಳಸಮಾಜದ ಜನರ ಈ ಸದ್ಭಾವನೆ ಮತ್ತು ಸಂಯಮವನ್ನು ಗೌರವಿಸುವುದು ಪೇಜಾವರರನ್ನೂ ಒಳಗೊಂಡಂತೆ ಎಲ್ಲ ಅಧ್ಯಾತ್ಮದ ಮುಂದಾಳುಗಳ ನೈತಿಕ ಕರ್ತವ್ಯ. ನಮ್ಮ ಸಂವಿಧಾನ ಇದನ್ನೇ ಅಪೇಕ್ಷಿಸುತ್ತದೆ. ಸಂವಿಧಾನದ ಈ ಮೌಲ್ಯಗಳೇ ಭಾರತವನ್ನು ಕಾಪಾಡಿಕೊಂಡು ಬಂದಿವೆ. ಈ ಉದಾತ್ತ ಮೌಲ್ಯಗಳಿಗೆ ತಲೆಬಾಗಿಯೇ ಅಸ್ಪಶ್ಯತೆಯಂತಹ ಚಿತ್ರಹಿಂಸೆಗೊಳಗಾಗುವ ಸಮಾಜಗಳೂ ಸಹ ಮೇಲ್ಜಾತಿಯ ದೌರ್ಜನ್ಯಗಳನ್ನು ಸಹಿಸಿಕೊಂಡು ಬದುಕುತ್ತಿವೆ.

ಮುಖ್ಯವಾಗಿ ಈ ಸಹನಶೀಲ ಜನಸಮುದಾಯಗಳನ್ನು ಗೌರವಿಸುವುದು ನಾಗರಿಕತೆಯನ್ನು ಅಪ್ಪಿಕೊಂಡಿರುವ ಯಾವುದೇ ಸಮಾಜದ ನೈತಿಕ ಕರ್ತವ್ಯ ಅಲ್ಲವೇ? ಮತ್ತೊಬ್ಬರನ್ನು ಅಥವಾ ಮತ್ತೊಂದು ಸಮಾಜವನ್ನು ಗೌರವಿಸುವುದು ವ್ಯಕ್ತಿಗತ ಸಂಯಮ, ಸೌಜನ್ಯದ ವಿಚಾರ. ಆದರೆ ಮತ್ತೊಬ್ಬರಿಂದ ಗೌರವ ನಿರೀಕ್ಷಿಸುವುದು ಊಳಿಗಮಾನ್ಯ ಯಜಮಾನಿಕೆಯ ಲಕ್ಷಣ. ಎಲ್ಲರ ಗೌರವಕ್ಕೆ ಪಾತ್ರರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವುದು ವ್ಯಕ್ತಿಯ ಅಥವಾ ಸಮುದಾಯದ ಸಾಂಸ್ಕೃತಿಕ ಔನ್ನತ್ಯದ ಲಕ್ಷಣ. ಗಾಂಧಿ, ಫುಲೆ, ಅಂಬೇಡ್ಕರ್, ವಿವೇಕಾನಂದ, ಠಾಗೋರ್ ಮೊದಲಾದ ಮಹನೀಯರು ಈ ಔನ್ನತ್ಯವನ್ನು ತಮ್ಮ ವ್ಯಕ್ತಿತ್ವದಲ್ಲಿ ಹೊಂದಿದ್ದರಿಂದಲೇ ಇಂದಿಗೂ ಗೌರವಾನ್ವಿತರಾಗಿದ್ದಾರೆ. ಸ್ವತಂತ್ರ ಭಾರತ ಇಂತಹ ವ್ಯಕ್ತಿತ್ವಗಳನ್ನು ರೂಪಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ.

ಭವಿಷ್ಯದ ಹಾದಿಯ ಮುನ್ನೆಚ್ಚರಿಕೆಗಳು

ದುರಂತ ಎಂದರೆ ನಾವು ಸಾಮಾಜಿಕವಾಗಿ ಜಡಗಟ್ಟುತ್ತಿದ್ದೇವೆ, ಸಾಂಸ್ಕೃತಿಕವಾಗಿ ಹಿಂದಕ್ಕೆ ಚಲಿಸುತ್ತಿದ್ದೇವೆ. ಯಾವುದೇ ನಾಗರಿಕತೆಯಲ್ಲಿ ಅಸಹನೀಯವಾಗಬೇಕಾದ ವರ್ತನೆಗಳು, ಲಕ್ಷಣಗಳು ನಮಗೆ ಅಪ್ಯಾಯಮಾನವಾಗುತ್ತಿವೆ. ಭವಿಷ್ಯದ ತಲೆಮಾರಿಗೆ ಮಾರ್ಗದರ್ಶಕವಾಗಬೇಕಾದ ಮೌಲ್ಯಗಳು ನಮಗೆ ಅಪಥ್ಯವಾಗುತ್ತಿದೆ. ಈ ಎರಡೂ ಲಕ್ಷಣಗಳನ್ನು ಇಬ್ಬರು ಕಾವಿಧಾರಿಗಳ ಪ್ರತಿಪಾದನೆಗಳಲ್ಲಿ ಗುರುತಿಸಬಹುದು. ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಈ ಎರಡೂ ಧ್ವನಿಗಳು ಏಕಾಂಗಿಯಲ್ಲ ಅಥವಾ ವ್ಯಕ್ತಿಗತವಲ್ಲ. ಇದು ನಮ್ಮ ಸಮಾಜದಲ್ಲಿ ಹುದುಗಿರಬಹುದಾದ ಪ್ರಾಚೀನ ಮನಸ್ಥಿತಿಯನ್ನು ಬಿಂಬಿಸುವ ಸಾಮಾಜಿಕ ಅಭಿವ್ಯಕ್ತಿಗಳಷ್ಟೇ. ನಮ್ಮ ನಡುವೆಯೇ ಈ ಎರಡೂ ಚಿಂತನಾಧಾರೆಗಳನ್ನು ಅಕ್ಷರಶಃ ಅನುಮೋದಿಸುವ ಸಮಾಜಗಳು ಜೀವಂತವಾಗಿವೆ. ಬಲಪಂಥೀಯ ರಾಜಕಾರಣಕ್ಕೆ ಈ ಸಮಾಜಗಳೇ ಬುನಾದಿಯೂ ಆಗಿವೆ. ಹಾಗಾಗಿಯೇ ರಾಜಕೀಯ ಧ್ವನಿಯಾಗಿ ಕೇಳಿಬರುತ್ತಿದ್ದ ಸಂವಿಧಾನ ತಿದ್ದುಪಡಿಯ ಕೂಗು ಈಗ ಅಧ್ಯಾತ್ಮ ವಲಯವನ್ನು ಸಹ ಆವರಿಸಿದೆ.

ಭಾರತವನ್ನು ಸಂವಿಧಾನ ಕಂಡ ಸಮ-ಸಮಾಜದ ಕನಸುಗಳತ್ತ ಕೊಂಡೊಯ್ಯಬೇಕಾದರೆ, ಭಾರತೀಯ ಸಮಾಜದ ಪ್ರತಿಯೊಂದು ಸ್ತರದಲ್ಲೂ, ಪ್ರತಿ ಶ್ರೇಣಿಯಲ್ಲೂ, ಪ್ರತಿ ವಲಯದಲ್ಲೂ ಅಡಗಿರುವ ಅಸಮಾನತೆಯ ನೆಲೆಗಳನ್ನು ಕೊನೆಗಾಣಿಸಬೇಕಿದೆ. ಹಾಗೆಯೇ ಈ ಅಸಮಾನತೆಗಳನ್ನೇ ಭವಿಷ್ಯದ ತಲೆಮಾರಿಗೂ ದಾಟಿಸುವಂತಹ ಆಲೋಚನಾ ವಿಧಾನಗಳನ್ನು ಪ್ರಶ್ನಿಸಬೇಕಿದೆ. ಭಾರತದ ಸಂವಿಧಾನ ಪೀಠಿಕೆಯಲ್ಲಿರುವ ಸೆಕ್ಯುಲರ್ ಎಂಬ ಉದಾತ್ತ ಚಿಂತನೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಸಂದರ್ಭದಲ್ಲಿ, ಎಲ್ಲರನ್ನೂ ಒಳಗೊಳ್ಳುವ ಎಲ್ಲರನ್ನೂ ಸಮಾನವಾಗಿ ಸ್ವೀಕರಿಸುವ ಈ ತತ್ವವನ್ನು ಜನಸಾಮಾನ್ಯರಲ್ಲಿ ಬಿತ್ತಬೇಕಿದೆ. ಆಗ ಮಾತ್ರ ಭಾರತ ಒಂದು ಸಮ ಸಮಾಜವಾಗಿ ರೂಪುಗೊಳ್ಳುತ್ತದೆ. ಈ ಎಚ್ಚರ ಅಧ್ಯಾತ್ಮ ವಲಯದಲ್ಲಷ್ಟೇ ಅಲ್ಲದೆ ಇಡೀ ಸಮಾಜದಲ್ಲಿ ಇರಬೇಕಾಗುತ್ತದೆ.

ಇದನ್ನು ಆಗುಮಾಡುವ ಜವಾಬ್ದಾರಿ ಇರುವುದು ಸಮ ಸಮಾಜವನ್ನು ಬಯಸುವ ತಳಸಮಾಜದ ಕ್ರಿಯಾಶೀಲ ಮನಸ್ಸುಗಳ ಮೇಲೆ. ಈ ಆಲೋಚನೆಯನ್ನು ಉದ್ದೀಪನಗೊಳಿಸುವ ಜವಾಬ್ದಾರಿ ಇರುವುದು ಸಂವಿಧಾನ ರಕ್ಷಣೆಗಾಗಿ ಶ್ರಮಿಸುವ ಸಾಂಘಿಕ-ಸಾಂಸ್ಥಿಕ ಮನಸ್ಸುಗಳ ಮೇಲೆ. ಬದಲಾಗುತ್ತಿರುವ ಭಾರತ ವಿಕಾಸದ ಹಾದಿಯಲ್ಲಿ ಸಾಗುತ್ತಿರುವಾಗಲೇ ವಿಕಸನಕ್ಕೆ ಅಡ್ಡಿಯಾಗುವ ಪ್ರಾಚೀನ ಮನಸ್ಥಿತಿಗಳನ್ನು ಸರಿಪಡಿಸುವ ಬೌದ್ಧಿಕ ಜವಾಬ್ದಾರಿಯೂ ನಮ್ಮ ಮೇಲಿದೆ. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸ್ವಾತಂತ್ರ್ಯದ ಪೂರ್ವಸೂರಿಗಳ ಕನಸಿನ ಭಾರತ ಕಟ್ಟಲು ಈ ನೊಗವನ್ನು ಸಾಮಾಜಿಕ-ಸಾರ್ವಜನಿಕ ಪ್ರಜ್ಞೆ ಇರುವ ಎಲ್ಲರೂ ಹೊರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ನಾ. ದಿವಾಕರ

contributor

Similar News