ಸುಗಟೂರಿನಲ್ಲೊಂದು ಮಾದರಿ ಬಸ್ ನಿಲ್ದಾಣ ನಿರ್ಮಾಣ

ಕೋಲಾರ : ತಾಲೂಕಿನ ಸುಗಟೂರು ಗ್ರಾಮದಲ್ಲೊಂದು ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು, ಪ್ರಯಾಣಿಕರಿಗೆ ಬೇಕಾದ ಹಲವಾರು ಸೌಲಭ್ಯಗಳನ್ನೊಳಗೊಂಡ ಸುಂದರ ವಾತಾವರಣ ನಿರ್ಮಿಸಲಾಗಿದೆ.
ಕೂರಲು ಕೆತ್ತನೆ ಕಲ್ಲಿನ ಬೆಂಚ್‌ಗಳು, ಓದಲು ಹಲವು ದಿನಪತ್ರಿಕೆಗಳು, ಕುಡಿಯಲು ಶುದ್ಧ ನೀರಿನ ವ್ಯವಸ್ಥೆ, ಸೆಕೆಗೆ ಫ್ಯಾನ್, ಮನೋರಂಜನೆಗೆ ಎಫ್‌ಎಂ ರೇಡಿಯೊ, ಬೆಳಕಿನ ವ್ಯವಸ್ಥೆ, ಬಣ್ಣದ ಲೈಟ್‌ಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ. ಸಿ.ಸಿ.ಟಿ.ವಿ ಕ್ಯಾಮರಾ, ಉಚಿತ ವೈಫೈ, ಟಿ.ವಿ, ಬಸ್‌ಗಳ ವೇಳಾಪಟ್ಟಿ ಫಲಕ ಅಳವಡಿಸಲೂ ಸಿದ್ಧತೆಗಳು ನಡೆಯುತ್ತಿವೆ.
ಸುಮಾರು 30x40 ಚದರ ಅಡಿಯ ಜಾಗ ಇದಾಗಿದ್ದು, ಮುಂದೆಯೇ ಉದ್ಯಾನ ನಿರ್ಮಿಸಿ ತರಹೇವಾರಿ ಹೂವಿನ ಕುಂಡಗಳನ್ನು ಇಡಲಾಗಿದೆ. ವಿವಿಧ ಪ್ರಭೇದದ ಗಿಡಗಳನ್ನು ಬೆಳೆಸಲಾಗಿದೆ. ಜೊತೆಗೆ ಬಸ್ ನಿಲ್ದಾಣದೊಳಗೆ ಹಳ್ಳಿ ಸೊಬಗಿನ ಚಿತ್ತಾರ ಕಾಣಬಹುದು. ಇದರ ಪ್ರಮುಖ ರೂವಾರಿ ಜಾನಪದ ಗಾಯಕ ಗೋ.ನಾ.ಸ್ವಾಮಿ, ಸುಮಾರು 7 ಲಕ್ಷ ರೂ.ಸ್ವಂತ ಹಣ ಖರ್ಚು ಮಾಡಿ ಮಾದರಿ ಈ ನಿಲ್ದಾಣ ನಿರ್ಮಿಸುತ್ತಿದ್ದಾರೆ.
ಇದಕ್ಕೂ ಮೊದಲು ಸಂಸದರ ಅನುದಾನದಡಿ ಈ ಬಸ್ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಕಾಮಗಾರಿ ಅಪೂರ್ಣಗೊಂಡು ವರ್ಷದಿಂದ ಪಾಳುಬಿದ್ದಿತ್ತು. ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಜನರಿಂದ ಈ ವಿಚಾರ ಗೊತ್ತಾಗಿ ಅದೇ ಊರಿನವರಾದ ಗೋ.ನಾ.ಸ್ವಾಮಿ ಕಾಯಕಲ್ಪ ನೀಡಲು ಮುಂದಾದರು.
ಜಾನಪದ ಗಾಯಕ ಗೋ.ನಾ.ಸ್ವಾಮಿ ಮಾತನಾಡಿ, ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕೆಂದು ನಿತ್ಯ ದಿನಪತ್ರಿಕೆಗಳನ್ನು ಇಡಲಾಗುತ್ತಿದೆ. ಸದ್ಯದಲ್ಲೇ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸುತ್ತಿದ್ದು, ಪೊಲೀಸರು ನಿಗಾ ಇಡಲಿದ್ದಾರೆ. ಊರಿನ ಜನರೇ ನಿಲ್ದಾಣದಲ್ಲಿ ನೈರ್ಮಲ್ಯ ಕಾಪಾಡಿಕೊಂಡು ನಿರ್ವಹಣೆ ಮಾಡಲಿದ್ದಾರೆ ಎಂದು ಗೋ.ನಾ.ಸ್ವಾಮಿ ತಿಳಿಸಿದರು.
ವಿದೇಶಗಳಲ್ಲಿ ಬಸ್ ನಿಲ್ದಾಣ ಸ್ವಚ್ಛವಾಗಿರುತ್ತವೆ, ಹೈಟೆಕ್ ಆಗಿರುತ್ತವೆ. ಅಗತ್ಯ ಸೌಲಭ್ಯಗಳನ್ನು ಹೊಂದಿರುತ್ತವೆ. ನಮ್ಮೂರಲ್ಲೂ ಇಂಥ ಒಂದು ಮಾದರಿ ನಿಲ್ದಾಣ ಇರಬೇಕೆಂದು ಸೌಲಭ್ಯ ಕಲ್ಪಿಸಲಾಗಿದೆ. ನಿಲ್ದಾಣವೆಂದರೆ ಹೀಗೂ ಇರುತ್ತದೆಯೇ ಎಂಬ ಅಚ್ಚರಿ ಆಗಬೇಕು. ನಮ್ಮ ಊರು ಮಾದರಿ ಆಗಿರಬೇಕು. ನಮ್ಮದು ಎಂಬ ಭಾವನೆ ಬರಬೇಕು ಎಂದು ಗೋ.ನಾ.ಸ್ವಾಮಿ ಹೇಳಿದರು.
ಹೂವಿನ ಗಿಡಗಳಿಗೆ ಗ್ರಾಮ ಪಂಚಾಯತ್‌ನಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ ಬಳಿ ಹೈಮಾಸ್ಟ್ ದೀಪವನ್ನು ಸದ್ಯದಲ್ಲೇ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗೋ.ನಾ.ಸ್ವಾಮಿ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜ್ಯ, ದೇಶ, ವಿದೇಶಗಳಲ್ಲಿ ಜಾನಪದ ಗಾಯನ ಮೂಲಕ ಜನಪದ ಸೊಗಡು ಹರಡುತ್ತಿದ್ದಾರೆ. ಸುಮಾರು 500 ಜನಪದ ಹಾಡು ಹಾಡಿದ್ದು, 64 ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಎಲ್ಲ ಕಲಾವಿದರೂ ಸಮಾಜದಿಂದಲೇ ಬೆಳೆಯುತ್ತಾರೆ, ಹಣ ಗಳಿಸುತ್ತಾರೆ. ಆದರೆ, ಹೆಚ್ಚಿನವರು ವಾಪಸ್ ಸಮಾಜಕ್ಕೆ ಏನೂ ಕೊಡಲ್ಲ. ಆ ರೀತಿ ಆಗಬಾರದು. ಓದಿ ಬೆಳೆದ ಊರಿಗೆ ಏನಾದರೂ ಕೊಡುಗೆ ನೀಡಬೇಕೆಂದು ಬಸ್ ನಿಲ್ದಾಣ ನಿರ್ಮಿಸಿದ್ದೇನೆ. ಇದು ನನ್ನೂರಿನ ಜನರಿಗೆ ನನ್ನ ಉಡುಗೊರೆ. ದೇಶದಲ್ಲೇ ಮಾದರಿ ನಿಲ್ದಾಣವಾಗಬೇಕು.
-ಗೋ.ನಾ.ಸ್ವಾಮಿ, ಜಾನಪದ ಗಾಯಕ
