ಲಿಂಗಸುಗೂರಿನಲ್ಲಿ ನೀರಿಗಾಗಿ ನಿತ್ಯ ಅಲೆದಾಟ

ರಾಯಚೂರು, ಎ.26: ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯು ದೇಶದಲ್ಲಿ ಹೆಸರುವಾಸಿಯಾಗಿದೆ. ದೇಶಕ್ಕೆ ಚಿನ್ನ ನೀಡುವ ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ನೀರಿಗಾಗಿ ಮಹಿಳೆಯರು, ಯುವಕರು ಅಲೆದಾಡುವ ಪರಿಸ್ಥಿತಿ ಇದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡುವ ಹಟ್ಟಿ ಪಟ್ಟಣಕ್ಕೆ ತಿಂಗಳಿಗೆ ಎರಡು ಬಾರಿ ಮಾತ್ರ ನೀರು ಬರುತ್ತದೆ. ಹೀಗಾಗಿ ದೂರದ ಹಟ್ಟಿ ಕ್ಯಾಂಪ್ ಏರಿಯಾಗೆ ಹೋಗಿ ನೀರು ತರಬೇಕಿದೆ. ಇತ್ತೀಚೆಗೆ ಟಣಮಕಲ್ ಹಾಗೂ ಕೋಠಾಕ್ರಾಸ್ ಬಳಿಯಲ್ಲಿ ಟಿ.ಸಿ ಸುಟ್ಟು ಹೋಗಿದ್ದು 20 ದಿನಗಳಿಂದ ನೀರು ಬರದೆ ಪಟ್ಟಣದ ನಿವಾಸಿಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಹಟ್ಟಿ ಪಟ್ಟಣಕ್ಕೆ 15 ದಿನಕ್ಕೊಮ್ಮೆ ನೀರು ಬರುವ ಕಾರಣ ಅಷ್ಟೂ ದಿನಕ್ಕೆ ಸಾಕಾಗುವಷ್ಟು ನೀರು ಸಂಗ್ರಹಿಸಲು ಹರಸಾಹಸ ಪಡಬೇಕಿದೆ. ಮನೆಮನೆಗೆ ನಳವಿದ್ದರೂ ನೀರಿಗಾಗಿ ಕ್ಯಾಂಪ್‌ಗೆ ತೆರಳಬೇಕು. ಪ್ರತೀ ನಿತ್ಯ 2-3 ತಾಸು ನೀರು ತುಂಬುವುದೇ ಕಾಯಕವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಸಚಿವರ, ಜಿಲ್ಲಾಧಿಕಾರಿಯ ಆದೇಶಕ್ಕೂ ಕಿಮ್ಮತ್ತಿಲ್ಲ: ಹಟ್ಟಿ ಪಟ್ಟಣದಲ್ಲಿ ಒಟ್ಟು 13. ವಾರ್ಡ್‌ಗಳಿವೆ, 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಕುಡಿಯುವ ನೀರಿಗಾಗಿ ಹೋರಾಟ ಮಾಡಿದರೂ ಜನಪ್ರತಿನಿಧಿಗಳಿಗೆ ಬಡ ಜನರ ನೊವು ತಿಳಿಯದಾಗಿದೆ. ಸುಮಾರು ವರ್ಷಗಳಿಂದ ಪರಿಸ್ಥಿತಿ ಬದಲಾಗಿಲ್ಲ. ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿಲ್ಲ. ಬೇಸಿಗೆಯ ಆರಂಭದಲ್ಲಿಯೇ ನೀರಿನ ಸಮಸ್ಯೆ ಇರುವ ಕಡೆ ಸ್ಥಳೀಯ ಆಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಜಿಲ್ಲಾಧಿಕಾರಿ ನಿತೀಶ್ ಕೆ. ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರೂ ಅಧಿಕಾರಿಗಳು ಈ ಬಗ್ಗೆಗಂಭೀರವಾಗಿ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಕ್ಯಾಂಪ್ ಪ್ರದೇಶದ ಪೊಲೀಸ್ ಠಾಣೆ, ಹೊಸ ಬಸ್ ನಿಲ್ದಾಣ ಹತ್ತಿರದಲ್ಲಿ ಎದುರು ಜನರು ನಿಲ್ಲುತ್ತಿದ್ದಾರೆ. ನೀರಿಗಾಗಿ ಮಕ್ಕಳು, ಯುವಕರು, ನಿತ್ಯ ಸೈಕಲ್, ದ್ವಿಚಕ್ರ ವಾಹನಗಳ ಮೇಲೆ ತರುವ ದೃಶ್ಯಗಳು ಸಾಮಾನ್ಯವಾಗಿವೆ.
ಪಟ್ಟಣದಲ್ಲಿ 40 ವರ್ಷಗಳಿಂದ ನೀರಿನ ಸಮಸ್ಯೆ ಅನುಭವಿಸುತ್ತಿದ್ದೇವೆ. ಶಾಸಕರು, ಪಂಚಾಯತ್ ಸದಸ್ಯರು, ಅಧಿಕಾರಿಗಳು ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ನಮ್ಮ ಬಡಾವಣೆಗೆ ಕುಡಿಯುವ ನೀರಿಲ್ಲ ಹಾಗೂ ದಿನನಿತ್ಯದ ಬಳಕೆಗೆ ಉಪ್ಪು ನೀರೂ ಇಲ್ಲ. ಬಡಾವಣೆಗೆ ಒಂದು ಟ್ಯಾಂಕ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು.
-ಕಸ್ತೂರಿಬಾಯಿ, ಕಾಕಾನಗರದ ನಿವಾಸಿ
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಚುನಾವಣೆ ಸಮಯದಲ್ಲಿ ಭರವಸೆ ನೀಡುತ್ತಾರೆ. ಮತ್ತೆ ಜನಪ್ರತಿನಿಧಿಗಳನ್ನು ನೋಡುವುದು ಚುನಾವಣೆ ಬಂದಾಗಲೇ. ಕೆನಾಲ್‌ಗೆ ನೀರು ಬಿಟ್ಟಾಗಲೇ ಪಟ್ಟಣಕ್ಕೆ ನೀರು ಬಿಡುತ್ತಾರೆ. ಬೇಸಿಗೆಯಲ್ಲಿ ಕನಿಷ್ಠ 1 ತಾಸು ನೀರು ಬಿಟ್ಟರೂ ಅನುಕೂಲವಾಗುತ್ತದೆ.
-ಬಸ್ಸಮ್ಮ, ನಿಂಗಮ್ಮ, ಸ್ಥಳೀಯ ನಿವಾಸಿ
ಟಣಮಕಲ್ ಹಾಗೂ ಕೋಠ ಕ್ರಾಸ್ ಬಳಿ ಟಿಸಿ ಸುಟ್ಟ ಪರಿಣಾಮ ಕುಡಿಯುವ ನೀರು ಸರಬರಾಜು ಆಗಿಲ್ಲ. ಎರಡು ದಿನಗಳಲ್ಲಿ ದುರಸ್ತಿಯಾಗಲಿದೆ. ಪಟ್ಟಣಕ್ಕೆ ಕಂಪೆನಿ ಆಡಳಿತ ಮಂಡಳಿಯಿಂದ ನೀರು ನಿರ್ವಹಣೆಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ.
-ಜಗನ್ನಾಥ ಜೋಶಿ, ಹಟ್ಟಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ
ಹಟ್ಟಿ ಪಟ್ಟಣಕ್ಕೆ ಕಾಲಿಡದ ಶಾಸಕ
ಕುಡಿಯುವ ನೀರಿಗಾಗಿ ಈ ಹಿಂದೆ ಮಾಜಿ ಶಾಸಕ ಡಿಎಸ್ ಹೂಲಗೇರಿ ಅವರು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಟಣಮಕಲ್ಲು ಹತ್ತಿರ ಡಿಎಂಎಫ್ ಯೋಜನೆಡಿಯಲ್ಲಿ 4.30 ಕೋಟಿ ರೂ. ಅನುದಾನದಲ್ಲಿ ಜಾಕ್ ವೆಲ್ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ನೇರವಾಗಿ ಹಟ್ಟಿ ಪಟ್ಟಣಕ್ಕೆ ಹೊಸ ಪೈಪ್‌ಲೈನ್ ಕಾಮಗಾರಿ ಮಾಡಲು ಮುಂದಾದಾಗ ಚುನಾವಣೆ ಬಂದು ಅಡ್ಡಿಯಾಯಿತು. ಆ ಯೋಜನೆ ಕೈಗೆತ್ತಿಕೊಳ್ಳಲಿಲ್ಲ, ಚುನಾವಣೆಯಲ್ಲಿ ಗೆದ್ದು ಬಂದ ಶಾಸಕ ಮಾನಪ್ಪವಜ್ಜಲ್ 2 ವರ್ಷಗಳಿಂದ ಹಟ್ಟಿ ಪಟ್ಟಣಕ್ಕೆ ಕಾಲಿಟಿಲ್ಲ. ಇಲ್ಲಿನ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.