ದಲಿತರು ಮತ್ತು ಆರೆಸ್ಸೆಸ್ | ಆರೆಸ್ಸೆಸ್ ಮಾಜಿ ಸ್ವಯಂಸೇವಕನ ಮಾತುಗಳು

ಬನ್ವರ್ ಮೇಘವಂಶಿ. ರಾಜಸ್ಥಾನದ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ. 1980ರ ದಶಕದ ತನ್ನ ಯವ್ವ್ವನದ ಅವಧಿಯಲ್ಲಿ ಆರೆಸ್ಸೆಸ್ ಬೋಧನೆಗೆ ಮರುಳಾಗಿ ‘ಸಂಘ’ ಸೇರಿದ್ದಾತ. ಆದರೆ, ಆರೆಸ್ಸೆಸ್‌ನೊಳಗೆ ದಲಿತರನ್ನು ನಡೆಸಿಕೊಳ್ಳುವ ನಯವಂಚಕ ರೀತಿ, ಅಲ್ಲಿ ಆಚರಣೆಯಲ್ಲಿರುವ ಜಾತೀಯತೆಯಿಂದ ಬೇಸತ್ತು ಸಂಘದಿಂದ ಆಚೆ ಬಂದು, ಈಗ ಆರೆಸ್ಸೆಸ್‌ನ ಹುಳುಕುಗಳನ್ನು ಬಯಲು ಮಾಡುತ್ತಿದ್ದಾರೆ. ಈ ಕುರಿತು 2019ರಲ್ಲಿ ‘ಮೈ ಏಕ್ ಕರ್ ಸೇವಕ್ ಥಾ’ ಎಂಬ ಹಿಂದಿ ಪುಸ್ತಕವನ್ನೂ ಬರೆದಿದ್ದಾರೆ. 2020ರಲ್ಲಿ ‘ಕ್ಯಾರವಾನ್’ ಪತ್ರಿಕೆ ಬನ್ವರ್ ಮೇಘವಂಶಿಯವರ ಸಂದರ್ಶನ ಪ್ರಕಟಿಸಿತ್ತು. ಇತ್ತೀಚೆಗೆ ಸಂಸತ್ತಿನಲ್ಲಿ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹಮಂತ್ರಿ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ನೀಡಿರುವ ಹೇಳಿಕೆಯೊಂದು ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಅಂಬೇಡ್ಕರ್ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಹೆಸರಲ್ಲ. ಈ ನೆಲದ ಶೋಷಣೆಗೆ ಒಳಗಾದ ನಿಮ್ನ ವರ್ಗಗಳ ಅಸ್ಮಿತೆ. ಅಂತಹ ನಿಮ್ನ ವರ್ಗಗಳೆಡೆಗೆ ಆರೆಸ್ಸೆಸ್‌ನ ನಿಲುವು ಏನು ಅನ್ನೋದನ್ನು ಬನ್ವರ್ ಮೇಘವಂಶಿಯವರ ಮಾತುಗಳು ಸ್ಪಷ್ಟಪಡಿಸುತ್ತವಾದ್ದರಿಂದ, ಆ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Update: 2024-12-20 06:12 GMT

ಅಲ್ಲಿ ಪ್ರಶ್ನೆ ಕೇಳುವುದಕ್ಕೆ ಅವಕಾಶವಿಲ್ಲ. ಅಲ್ಲೇನಿದ್ದರೂ, ನೀವು ಕೇವಲ ನಂಬಬೇಕಷ್ಟೆ, ಅದು ಹೇಗೆ-ಇದು ಹೇಗೆ ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಜಾಗವಿಲ್ಲ. ಒಮ್ಮೆ, ‘‘ನಿನ್ನ ಮಸ್ತಕ ಬಹಳ ಬಲಶಾಲಿಯಾಗಿದೆ, ಆದರೆ ಅದರ ಕೆಳಗಿನ ದೇಹ ಬಲಹೀನವಾಗಿದೆ’’ ಎಂದು ನನಗೆ ಹೇಳಿದ್ದರು. ಅದರರ್ಥ, ನೀವು ಆಲೋಚಿಸುವ ಮೂಲಕ ನಿಮ್ಮ ಮೆದುಳನ್ನು ಬಲ ಮಾಡಿಕೊಳ್ಳುವುದು ಅವರಿಗೆ ಇಷ್ಟವಿಲ್ಲ; ನಿಮ್ಮ ದೇಹವನ್ನು ಬಲ ಮಾಡಿಕೊಳ್ಳಬೇಕು, ಹೊಡಿ-ಬಡಿ ಕೆಲಸಗಳಿಗೆ!

► ರಾಜಸ್ಥಾನದಲ್ಲಿ ನೀವು ಕಳೆದ ಬಾಲ್ಯದ ಬಗ್ಗೆ ಸ್ವಲ್ಪ ವಿವರಿಸುವಿರಾ? ನಿಮ್ಮ ಕೃತಿಯಲ್ಲಿ, ನಿಮ್ಮ ತಂದೆ ಒಬ್ಬ ಕಾಂಗ್ರೆಸ್ ಅನುಯಾಯಿಯಾಗಿದ್ದರು ಎಂದು ದಾಖಲಿಸಿದ್ದೀರಿ. ಅವರನ್ನು ಕಾಂಗ್ರೆಸ್ ಅನುಯಾಯಿಯಾಗುವಂತೆ ಮಾಡಿದ ಕಾರಣಗಳೇನಿರಬಹುದು ಎಂದು ನೀವು ಊಹಿಸುತ್ತೀರಿ.

ಮೇಘವಂಶಿ: ನಮ್ಮದು ಕಬೀರ್ ಪಂಥದ (15ನೇ ಶತಮಾನದ ದಾರ್ಶನಿಕ ಕವಿ) ಹಿನ್ನೆಲೆ ಇರುವಂತಹದ್ದು. ಎಲ್ಲರನ್ನೂ ಒಳಗೊಳ್ಳುವ ಸೂಫಿ ತತ್ವದಿಂದಲೂ ಪ್ರಭಾವಿತವಾದುದು. ನಮ್ಮ ರಾಜಸ್ಥಾನ ಹೇಳಿಕೇಳಿ, ಊಳಿಗಮಾನ್ಯ ಮನಸ್ಥಿತಿಯ ರಾಜ್ಯ. ಎಷ್ಟರಮಟ್ಟಿಗೆಂದರೆ ಇಲ್ಲಿ ದಲಿತರು ಜೀತದಾಳುಗಳಾಗಿ ಬದುಕುತ್ತಿದ್ದರು. ಸಾವಿರಾರು ವರ್ಷಗಳಿಂದ ನಮ್ಮ ಜನ ಹೀಗೆ ದಮನಗೊಳ್ಳುತ್ತಲೇ ಬಂದವರು. ನನ್ನ ಅಜ್ಜ, ಇದನ್ನೆಲ್ಲ ಕಣ್ಣಾರೆ ನೋಡಿದ್ದರು, ಅನುಭವಿಸಿದ್ದರು ಕೂಡಾ.

ನನ್ನ ತಂದೆಯ ದೃಷ್ಟಿಯಿಂದ ನೋಡುವುದಾದರೆ- ಅಂದರೆ, ರಾಜಕೀಯ ಪ್ರಜ್ಞೆಯ ನೆಲೆಯಿಂದ, ನಮ್ಮ ರಾಜಸ್ಥಾನದಲ್ಲಿ ದಲಿತರ ಬದುಕುಗಳ ಮೇಲೆ ಪ್ರಭಾವ ಬೀರಿದ್ದು ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಸ್ವಾತಂತ್ರ್ಯ ಚಳವಳಿ ಗರಿಗೆದರಿದಾಗ, ಗಾಂಧೀಜಿಯ ಹರಿಜನರ ಉದ್ಧಾರದ ಪ್ರಯತ್ನಗಳು (ಇದನ್ನು ಕೆಲವರು ಟೀಕಿಸಬಹುದು) ಈ ಊಳಿಗಮಾನ್ಯ ಶೋಷಣೆಯ ವಿರುದ್ಧ ಸೆಟೆದು ನಿಲ್ಲಲು ದಲಿತರಿಗೆ ಒಂದು ಧ್ವನಿಯಾಗಿ ಕಾಂಗ್ರೆಸ್ ಕೆಲಸ ಮಾಡಿತು. ಅಲ್ಲಿಂದಾಚೆಗೇ ನಮಗೆ ಒಂದಷ್ಟು ಹಕ್ಕುಗಳು ಅಂತ ಲಭಿಸಲು ಶುರುವಾದದ್ದು. ಹಾಗಾಗಿ, ಕಾಂಗ್ರೆಸ್ ಪಕ್ಷದಲ್ಲಿ ಇವತ್ತು ಏನೇನಲ್ಲ ಬದಲಾವಣೆಯಾಗಿದ್ದರೂ, ನನ್ನ ತಂದೆಯ ಮಟ್ಟಿಗೆ ಆ ಪಕ್ಷ ಇವತ್ತಿಗೂ ‘ಗಾಂಧೀಜಿಯ ಕಾಂಗ್ರೆಸ್’ ಆಗಿಯೇ ಉಳಿದುಕೊಂಡಿದೆ.

ಅಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಅವತ್ತಿನ ಕಾಂಗ್ರೆಸ್ ಪಕ್ಷ ನಮ್ಮ ಜನರ ಮೇಲೆ ತುಂಬಾ ಪ್ರಭಾವ ಬೀರಿತ್ತು. ನನಗೆ ತಿಳಿದ ಮಟ್ಟಿಗೆ, ನಮ್ಮ ಊರಿನ ದಲಿತರ ಓಣಿಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಬಾವುಟ ನೋಡಿದ್ದು 1995ರ ನಂತರ. ಅಲ್ಲಿಯವರೆಗೆ ಚುನಾವಣೆಯೆಂದರೆ ಕಾಂಗ್ರೆಸ್‌ನ ಹಸ್ತದ ಗುರುತು ಮಾತ್ರ. ಇಂದಿರಾ ಗಾಂಧಿಯವರ ಹತ್ಯೆಯಾದಾಗ, ನಮ್ಮ ಇಡೀ ಹಳ್ಳಿ ತಮ್ಮ ಕುಟುಂಬದ ಸದಸ್ಯನನ್ನೇ ಕಳೆದುಕೊಂಡಷ್ಟು ತೀವ್ರವಾಗಿ ಶೋಕಿಸಿದ್ದನ್ನು ನಾನು ನೋಡಿದ್ದೇನೆ.

► ನೀವು ಚಿಕ್ಕವರಿದ್ದಾಗ, ನಿಮಗೆ ಯಾವೆಲ್ಲ ಸಮೂಹ ಮಾಧ್ಯಮಗಳ ಸಂಪರ್ಕವಿತ್ತು? ಅಂದರೆ, ದಿನಪತ್ರಿಕೆಗಳು, ಪುಸ್ತಕಗಳು, ಟಿವಿ ಇತ್ಯಾದಿ

ಮೇಘವಂಶಿ: ನನ್ನ ಮನೆಯಲ್ಲಿ ಎರಡೇ ಎರಡು ಪುಸ್ತಕಗಳು ಮಾತ್ರ ಇದ್ದವು. ನಮ್ಮ ಹಳ್ಳಿಗೆ ಆಗ ದಿನಪತ್ರಿಕೆಗಳು ಬರುತ್ತಿರಲಿಲ್ಲ. ಒಂದು ರೇಡಿಯೊ ಇತ್ತು. ಅದರಲ್ಲಿ ನಮ್ಮ ತಂದೆ ಬಿಬಿಸಿ ನ್ಯೂಸ್, ಅದೂ ಇದೂ ಅಂತ ಕೇಳುತ್ತಿದ್ದರು. ಇನ್ನು ಊರಿಗೆ ಇದ್ದದ್ದು ಒಂದೇ ಟಿವಿ. ಅದೂ ಠಾಕೂರರ ಮನೆಯಲ್ಲಿ. ಆತನೂ ಕಾಂಗ್ರೆಸ್ ಅನುಯಾಯಿ. ಹಾಗಾಗಿ 1988ರ ಆಸುಪಾಸಿನಲ್ಲಿ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಶುರುವಾದಾಗ, ಪ್ರತೀ ರವಿವಾರ ದಲಿತರ ಮಕ್ಕಳಾದ ನಮಗೂ ಟಿವಿ ನೋಡಲು ಅನುವು ಮಾಡಿಕೊಡುತ್ತಿದ್ದರು. ಊರಿಗೆ ಊರೇ ರಾಮಾಯಣವನ್ನು ನೋಡಲು ನೆರೆದಿರುತ್ತಿತ್ತು.

ಅದಕ್ಕೂ ಮೊದಲು ನಾನು ರಾಮಾಯಣವನ್ನು ಓದಿದವನೂ ಅಲ್ಲ, ನೋಡಿದವನೂ ಅಲ್ಲ. ಸಾಂಪ್ರದಾಯಿಕವಾಗಿ ಕಬೀರನ ಪಂಥಕ್ಕೆ ಸೇರಿದ ನಮಗೆಲ್ಲ ರಾಮಭಕ್ತಿ ಎಂಬುದೇ ಅಪರಿಚಿತ. ಆದರೆ, ನನ್ನ ಪ್ರಕಾರ ರಮಾನಂದ ಸಾಗರ್ ಅವರ ಆ ರಾಮಾಯಣ ಧಾರಾವಾಹಿಯ ಸರಣಿಯೇನಿದೆಯಲ್ಲ, ಅದುವೇ ದೇಶದ ಮೂಲೆಮೂಲೆಗೆ ರಾಮನನ್ನು, ರಾಮಭಕ್ತಿಯನ್ನೂ, ಅದರ ಹಿಂದಿರುವ ರಾಜಕಾರಣವನ್ನೂ ತಲುಪಿಸಿತೆಂದು ಅನ್ನಿಸುತ್ತದೆ. ಮುಖ್ಯವಾಗಿ ದಲಿತರು, ಆದಿವಾಸಿಗಳು, ರೈತರು ‘ರಾಮನನ್ನು’ ತಮ್ಮೊಳಗೆ ಸ್ವೀಕರಿಸಲು ಆ ಧಾರಾವಾಹಿ ಪ್ರಭಾವ ಬೀರಿತು. ರಾಮನ ಹೆಸರಿನಲ್ಲಿ ನಡೆದ ರಾಜಕೀಯ ಧ್ರುವೀಕರಣದ ಮೊದಲು ಕೆಲಸ ಶುರುವಾದದ್ದು ರಮಾನಂದ ಸಾಗರ್ ಕಡೆಯಿಂದ.

► ಬಾಲ್ಯದ ದಿನಗಳಲ್ಲಿ ಒಂದು ಕಡೆ ನಿಮ್ಮ ತಂದೆ ನಿಮ್ಮ ಮೇಲೆ ರಾಜಕೀಯ ಪ್ರಭಾವ ಬೀರುತ್ತಿದ್ದರೆ, ಮತ್ತೊಂದು ಕಡೆ ಆರೆಸ್ಸೆಸ್‌ನ ಜೊತೆ ನಿಕಟ ಸಂಪರ್ಕ ಹೊಂದಿದ್ದ ಭೂಗೋಳದ ಮೇಷ್ಟ್ರು ಕೂಡಾ ಪ್ರಭಾವ ಬೀರುತ್ತಿದ್ದರು ಎಂದು ನೀವು ನಿಮ್ಮ ಕೃತಿಯಲ್ಲಿ ಬರೆದುಕೊಂಡಿದ್ದೀರಿ. ಈ ಎರಡೂ ಪ್ರಭಾವಗಳನ್ನು ನೀವು ಹೇಗೆ ಬ್ಯಾಲೆನ್ಸ್ ಮಾಡಿದಿರಿ? ಆರೆಸ್ಸೆಸ್‌ನ ಸಿದ್ಧಾಂತದೆಡೆಗೆ ನೀವು ಆಕರ್ಷಿತರಾಗಿದ್ದು ಹೇಗೆ?

ಮೇಘವಂಶಿ: ನಾನು ಆರೆಸ್ಸೆಸ್ ಸಂಪರ್ಕಕ್ಕೆ ಬರುವವರೆಗೆ ಮಾತ್ರ ನನ್ನ ತಂದೆಯ ಪ್ರಭಾವ ಕೆಲಸ ಮಾಡಿತ್ತು. ಆರೆಸ್ಸೆಸ್‌ನಲ್ಲಿ ಆಟಗಳ ಮೂಲಕ ಎಲ್ಲವನ್ನು ಶುರು ಮಾಡುತ್ತಾರೆ. ಆಗ ಅಲ್ಲಿ ಸೈದ್ಧಾಂತಿಕ ಬೋಧನೆಗಳಿರುವುದಿಲ್ಲ. ಮಕ್ಕಳಾದ ನಮಗೆ ಆಟ ಆಡಿಸುತ್ತಾ ಇಷ್ಟವಾಗುತ್ತಾರೆ. ಆದರೆ, ಆಮೇಲೆ ಅವರ ಬೋಧನೆಗಳು ಶುರುವಾಗುತ್ತವೆ. ಗಾಂಧಿ ಮತ್ತು ಅಶೋಕನ (ಬೌದ್ಧ ಧರ್ಮವನ್ನು ಸ್ವೀಕರಿಸಿದ ಮೌರ್ಯ ದೊರೆ) ಅಹಿಂಸಾತ್ಮಕ ನಡೆಗಳನ್ನು ‘ಹೇಡಿತನ’ಗಳೆಂದು ನಮಗೆ ಬೋಧಿಸುತ್ತಾರೆ. ಏಳನೇ ತರಗತಿಗೆ ಬರುವ ವೇಳೆಗಾಗಲೇ ನಾನು, ಆರೆಸ್ಸೆಸ್‌ನ ಹಿಂದಿ ಮುಖವಾಣಿಯಾದ ‘ಪಾಂಚಜನ್ಯ’ ವಾರಪತ್ರಿಕೆ ಓದಲು ಶುರು ಮಾಡಿದ್ದೆ. ಜೊತೆಗೆ ಆರೆಸ್ಸೆಸ್‌ನ ಪುಸ್ತಕಗಳನ್ನೂ ಓದಲು ಕೊಟ್ಟರು.

ಈ ಪ್ರಭಾವಗಳನ್ನು ಬ್ಯಾಲೆನ್ಸ್ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಭಾರತದ ವಿಭಜನೆ, ಕಾಶ್ಮಿರ ಸಮಸ್ಯೆ, ಮುಸ್ಲಿಮ್ ತುಷ್ಟೀಕರಣಗಳಂತಹ ವಿಚಾರಗಳು ಚರ್ಚೆಗೆ ಬಂದಾಗಲೆಲ್ಲ, ನನ್ನ ತಂದೆ ಈ ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು. ನನ್ನ ತಂದೆ ಮತ್ತು ಅಜ್ಜನ ಮೆದುಳುಗಳನ್ನು ಕಾಂಗ್ರೆಸ್ ಧ್ವಂಸ ಮಾಡಿದೆ, ಹಾಗಾಗಿ ಅವರ್ಯಾರು ಸ್ವತಂತ್ರವಾಗಿ ಯೋಚಿಸುತ್ತಿಲ್ಲ ಎಂದು ಭಾವಿಸುತ್ತಿದ್ದೆ. ಹಿಂದೂಗಳ ಬಗ್ಗೆ, ದೇಶದ ಬಗ್ಗೆ ಇವರ್ಯಾರೂ ಯೋಚಿಸುತ್ತಲೇ ಇಲ್ಲ ಅನ್ನಿಸುತ್ತಿತ್ತು.

ನಮ್ಮ ಮನೆ ಬಾಗಿಲಿಗೆ ಅಪ್ಪ, ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿನ ಭಿತ್ತಿಪತ್ರ ಅಂಟಿಸಿದ್ದರು. ನಾನು, ನನ್ನ ತಮ್ಮ ಅದರ ಮೇಲೆ, ‘‘ಗರ್ವ್ ಸೆ ಕಹೋ ಕಿ ಹಮ್ ಹಿಂದೂ ಹೈ’’ ಎಂಬ ಎರಡು ಭಿತ್ತಿಪತ್ರ ಅಂಟಿಸಿದೆವು. ನಮ್ಮ ಮನೆಗೆ ಅಪ್ಪನನ್ನು ಭೇಟಿಯಾಗಲು ಯಾರಾದರೂ ಕಾಂಗ್ರೆಸ್ ನಾಯಕರು ಬಂದಾಗ, ಅವರಿಗೆ ಚಹಾ ತಂದು ಕೊಡಲು, ನೀರು ಕೊಡಲು ನಮಗೆ ಹೇಳುತ್ತಿದ್ದರು. ಆಗೆಲ್ಲ, ‘‘ಇಂತಹವರಿಗೆ ನಾವ್ಯಾಕೆ ಸತ್ಕಾರ ಮಾಡಬೇಕು’’ ಎಂದು ಒಳಗೊಳಗೇ ಆಕ್ರೋಶಗೊಳ್ಳುತ್ತಿದ್ದೆ. ಅಷ್ಟರಮಟ್ಟಿಗೆ, ನನ್ನ ಬ್ರೈನ್‌ವಾಶ್ ಮಾಡಿದ್ದರು.

► ನಿಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದಂತೆ, ಕೆಲವೊಂದು ಆಘಾತಕಾರಿ ಘಟನೆಗಳು ನೀವು ಆರೆಸ್ಸೆಸ್ ತೊರೆಯಲು ಕಾರಣ ಎಂಬುದು ಅರ್ಥವಾಗುತ್ತದೆ. ಮೊದಲನೆಯದು, ನೀವು ಆರೆಸ್ಸೆಸ್ ಪೂರ್ಣಾವಧಿ ಪ್ರಚಾರಕ ಆಗಬೇಕೆಂದು ಹಂಬಲ ವ್ಯಕ್ತಪಡಿಸಿದಾಗ, ನಿಮ್ಮ ಜಾತಿಯ ಕಾರಣಕ್ಕೆ ಅದು ಸಾಧ್ಯವಿಲ್ಲ ಎಂದು ಹೇಳಿದರು ಎಂದಿದ್ದೀರಿ. ಮತ್ತೊಂದು ಉಲ್ಲೇಖದಲ್ಲಿ, ನಿಮ್ಮ ಮನೆಯಲ್ಲಿ ಮಾಡಿದ ಅಡುಗೆಯನ್ನು ಊಟ ಮಾಡಲು ನಿರಾಕರಿಸಿದ ಆರೆಸ್ಸೆಸ್ ನಾಯಕರು, ಅದನ್ನು ಬೀದಿಯಲ್ಲಿ ಎಸೆದು ಹೋದರು ಎಂದಿದ್ದೀರಿ. ಇಂತಹ ಬೇರೆ ಯಾವ ಘಟನೆಗಳು ನಿಮ್ಮ ನಿರ್ಧಾರಕ್ಕೆ ಕಾರಣ?

ಮೇಘವಂಶಿ: ನನಗೆ ಓದುವುದು ಮತ್ತು ಸಂವಾದದಲ್ಲಿ ಭಾಗವಹಿಸುವುದು ಎಂದರೆ ಮೊದಲಿನಿಂದಲೂ ಇಷ್ಟ. ಶಾಖಾ ಕಾರ್ಯಕ್ರಮಗಳಲ್ಲೂ ನಾನು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆದರೆ ನನ್ನ ಪ್ರಶ್ನೆಗಳಿಗೆ ಅವರು ಕಿರಿಕಿರಿ ಅನುಭವಿಸುತ್ತಿದ್ದರು.

ಅಲ್ಲಿ ಪ್ರಶ್ನೆ ಕೇಳುವುದಕ್ಕೆ ಅವಕಾಶವಿಲ್ಲ. ಅಲ್ಲೇನಿದ್ದರೂ, ನೀವು ಕೇವಲ ನಂಬಬೇಕಷ್ಟೆ, ಅದು ಹೇಗೆ-ಇದು ಹೇಗೆ ಎಂದು ತಿಳಿದುಕೊಳ್ಳುವ ಕುತೂಹಲಕ್ಕೆ ಜಾಗವಿಲ್ಲ. ಒಮ್ಮೆ, ‘‘ನಿನ್ನ ಮಸ್ತಕ ಬಹಳ ಬಲಶಾಲಿಯಾಗಿದೆ, ಆದರೆ ಅದರ ಕೆಳಗಿನ ದೇಹ ಬಲಹೀನವಾಗಿದೆ’’ ಎಂದು ನನಗೆ ಹೇಳಿದ್ದರು. ಅದರರ್ಥ, ನೀವು ಆಲೋಚಿಸುವ ಮೂಲಕ ನಿಮ್ಮ ಮೆದುಳನ್ನು ಬಲ ಮಾಡಿಕೊಳ್ಳುವುದು ಅವರಿಗೆ ಇಷ್ಟವಿಲ್ಲ; ನಿಮ್ಮ ದೇಹವನ್ನು ಬಲ ಮಾಡಿಕೊಳ್ಳಬೇಕು, ಹೊಡಿ-ಬಡಿ ಕೆಲಸಗಳಿಗೆ!

ತುಂಬಾ ಯೋಚಿಸುವುದು ಒಳ್ಳೆಯದಲ್ಲ ಎಂದು ಹೇಳುತ್ತಿದ್ದರು. ಯಾರಾದರೂ ವಿಮರ್ಶಾತ್ಮಕವಾಗಿ ಆಲೋಚಿಸುತ್ತಿದ್ದಾರೆ ಎಂದು ಗೊತ್ತಾದರೆ, ಅದನ್ನು ದಮನ ಮಾಡಲು ನೋಡುತ್ತಿದ್ದರು. ಪ್ರಚಾರಕ್ ಏನು ಹೇಳುತ್ತಾನೋ ಅದನ್ನು ನೀವು ನಂಬಬೇಕಷ್ಟೆ. ಆತ ಹೇಳಿದ್ದು ಅಸತ್ಯವೋ, ಅಪೂರ್ಣ ಸತ್ಯವೋ ನೀವು ಪ್ರಶ್ನಿಸುವಂತಿಲ್ಲ. ಆದರೆ, ನನ್ನದು ಪ್ರತಿರೋಧಿಸುವ ಜಾಯಮಾನ.

ಅಡುಗೆ ಘಟನೆ ನಿರ್ಣಾಯಕ ತಿರುವು ಎನ್ನಬಹುದು. ಅವರದನ್ನು ಸಣ್ಣ ಸಂಗತಿ ಎಂದು ಹೇಳುತ್ತಾರೆ. ಆದರೆ ನನಗದು ಗಂಭೀರ ವಿಚಾರ. ನಾನು ಮಾನಸಿಕವಾಗಿ ಪ್ರಕ್ಷುಬ್ಧಗೊಂಡಿದ್ದೇನೆ, ಒಂದೇ ವಿಚಾರಕ್ಕೆ ತಗಲುಹಾಕಿಕೊಂಡಿದ್ದೇನೆ ಎಂದು ಅವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ಹೌದು ನಾನು ತಗಲಿಹಾಕಿಕೊಂಡಿದ್ದೇನೊ ನಿಜ. ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ನಾನು ಪ್ರಾಣಾರ್ಪಣೆ ಮಾಡಲೂ ಸಿದ್ಧನಿದ್ದೆ, ಆದರೆ ನನ್ನಂತಹವನ ಮನೆಯಲ್ಲಿ ಊಟ ಮಾಡಲೂ ಈ ಜನ ತಯಾರಿಲ್ಲ! ಹಾಗಾದರೆ ಇವರು ಹೇಳುತ್ತಿರುವ ಹಿಂದೂರಾಷ್ಟ್ರ ಯಾವುದು? ನಿಧಾನಕ್ಕೆ, ಇದು ನನ್ನೊಬ್ಬನ ಸಮಸ್ಯೆಯಲ್ಲ, ಇಡೀ ನನ್ನ ಸಮುದಾಯಕ್ಕೆ ಇಲ್ಲಿ ಎದುರಾಗುತ್ತಿರುವ ತಾರತಮ್ಯದ ಸವಾಲು ಎಂದು ಅರ್ಥವಾಯಿತು.

► ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ, ನಿಮ್ಮ ತಂದೆ ತನ್ನ ರಾಜಕೀಯ ಗ್ರಹಿಕೆಯನ್ನು ನೇರವಾಗಿ ನಿಮ್ಮ ಮೇಲೆ ಬೀರಲು ಯತ್ನಿಸುತ್ತಿದ್ದರೆ, ಆರೆಸ್ಸೆಸ್ ಸಿದ್ಧಾಂತಗಳನ್ನು ಬಹುಮುಖಿ ಆಯಾಮದಿಂದ ಪರೋಕ್ಷವಾಗಿ ನಿಮ್ಮ ಮೇಲೆ ಬೀರಲಾಗುತ್ತಿತ್ತು ಎಂದು ಗ್ರಹಿಸಬಹುದು. ಈ ವ್ಯತ್ಯಾಸವನ್ನು ತಾವು ವಿವರಿಸಬಹುದೆ?

ಮೇಘವಂಶಿ: ನನ್ನ ತಂದೆಯ ಆಲೋಚನೆ, ಅವರ ತಂದೆಯಿಂದ ಪ್ರಭಾವಿತವಾದುದು. ಅಂದರೆ, ನನ್ನ ಅಜ್ಜ ಅನುಭವಿಸಿದ ಕಹಿ ಅನುಭವಗಳಿಂದ ಪ್ರೇರಿತವಾಗಿ ಹೊಂದಿದ ಆಲೋಚನೆ. ಅವರ ಆಲೋಚನೆಯನ್ನು ನಿಯಂತ್ರಿಸುವ ಅಥವಾ ನಿರ್ದೇಶಿಸುವ ಯಾವ ಸಿದ್ಧಾಂತವಾಗಲಿ ಅಥವಾ ಕಾರ್ಯಕರ್ತರನ್ನು ಒಳಗೊಂಡ ಸಮೂಹವಾಗಲಿ ಇರಲಿಲ್ಲ. ತನ್ನ ಜನರ ಬದುಕನ್ನು ಸಹನೀಯವಾಗಿಸಲು ಕಾಂಗ್ರೆಸ್ ಪಕ್ಷ ನೆರವಾಗಿದ್ದರಿಂದ ನನ್ನಪ್ಪ ಕಾಂಗ್ರೆಸ್ ಜೊತೆ ನಂಟು ಬೆಳೆಸಿಕೊಂಡಿದ್ದರು.

ಆದರೆ ನನ್ನ ಆಲೋಚನೆಗೆ ಇಂತಹ ಸ್ವಾತಂತ್ರ್ಯವಿರಲಿಲ್ಲ. ಆರೆಸ್ಸೆಸ್‌ನಲ್ಲಿ ಪ್ರತಿದಿನ ಒಂದಿಲ್ಲೊಂದು ಚಟುವಟಿಕೆಗಳು ನಡೆಯುತ್ತಲೇ ಇದ್ದವು. ಯೋಗಾಭ್ಯಾಸಗಳು, ಆಟಗಳು, ಅಥವಾ ಶಾಖೆಗಳು ಹೀಗೆ ಮೊದಲು ಒಂದಷ್ಟು ಯೋಗಾಭ್ಯಾಸ, ಆನಂತರ ಆಟ, ಆಮೇಲೆ ಈ ದೇಶ ಯಾರಿಗೆ ಸೇರಿದ್ದು ಅನ್ನುವ ವಿಚಾರದ ಮೂಲಕ ರಾಜಕೀಯ ವಿಚಾರಗಳು.

ಆನಂತರ ನಿಧಾನಕ್ಕೆ, ನಾವು ಶ್ರೇಷ್ಠರು ಎಂದಾದಮೇಲೆ, ಬೇರೆಯವರು ಯಾಕೆ ಶ್ರೇಷ್ಠರಲ್ಲ? ಭಾರತ ಮಾತೆಯ ವಿಭಜನೆಗೆ ಕಾರಣ ಯಾರು? ನೌಖಾಲಿಯಲ್ಲಿ ಗಾಂಧಿ ಹೇಗೆ ಮುಸ್ಲಿಮರ ಪರ ನಿಂತರು? ಮೂಲತಃ ಕಾಶ್ಮೀರಿಯಾದ ನೆಹರೂ ಕಾಶ್ಮೀರ ಸಮಸ್ಯೆಗೆ ಹೇಗೆಲ್ಲ ಕಾರಣ? ಅನ್ನುವ ಕಟ್ಟುಕತೆಗಳ ಮೂಲಕ ನಮ್ಮನ್ನು ಬ್ರೈನ್‌ವಾಶ್ ಮಾಡಲಾಗುತ್ತಿತ್ತು. ಇದರಲ್ಲಿ ಸತ್ಯಾಂಶವೆಷ್ಟು? ಸುಳ್ಳೆಷ್ಟು? ಎಂದು ತಿಳಿದುಕೊಳ್ಳಲು ನಮಗೆ ಅವಕಾಶಗಳೇ ಇರಲಿಲ್ಲ. ಶಾಖೆಗಳಲ್ಲಿ ಯಾವ ವಿಚಾರಗಳನ್ನು ಬೋಧಿಸುತ್ತಿದ್ದರೋ ಅದೇ ಸಂಗತಿಗಳನ್ನು ಪಾಂಚಜನ್ಯ ಪತ್ರಿಕೆಯಲ್ಲಿ, ಆರೆಸ್ಸೆಸ್ ಪುಸ್ತಕಗಳಲ್ಲೂ ಮುದ್ರಿಸುತ್ತಿದ್ದರು. ತರಬೇತಿಯ ನೆಪದಲ್ಲೂ ಅದೇ ವಿಚಾರಗಳನ್ನು ಹೇಳುತ್ತಿದ್ದರು. ಅದಕ್ಕೆ ಪೂರಕವಾಗುವಂತೆ ಶಾ ಬಾನು ಪ್ರಕರಣ ವಿವರವಿರುವ ಪತ್ರಿಕೆಗಳು ನಮ್ಮ ಕೈಗೆ ಸಿಗುತ್ತಿದ್ದವು, ರಮಾನಂದ ಸಾಗರರ ರಾಮಾಯಣವೂ ನೋಡಲು ದಕ್ಕುತ್ತಿತ್ತು. ಎಲ್ಲವೂ ಒಂದೊಕ್ಕೊಂದು ವ್ಯವಸ್ಥಿತವಾಗಿ ಹೆಣಿಗೆಯಾದಂತೆ ನಮ್ಮ ಆಲೋಚನೆಗಳನ್ನು ರೂಪಿಸುತ್ತಿದ್ದರು.

ಶಾಖೆಗಳಲ್ಲಿ, ತರಬೇತುದಾರ ನಿಜಕ್ಕೂ ನಿಮ್ಮನ್ನು ಪ್ರಭಾವಿಸುತ್ತಾನೆ. ಹಾಗೆ ಇರುತ್ತೆ ಆತನ ನಡವಳಿಕೆ. ನಿಮ್ಮ ಹೆಸರಿನ ಕೊನೆಗೆ ‘ಜೀ’ ಎಂಬುದನ್ನು ಸೇರಿಸಿ ಗೌರವಪೂರ್ವಕವಾಗಿ ಕರೆಯುವುದನ್ನು ಕೇಳಿಸಿಕೊಂಡಾಗ ನೀವು ಪುಳಕಿತರಾಗುತ್ತೀರಿ. ಇದು ಪ್ರತಿದಿನ ನಡೆಯುವ ವೃತ್ತಾಂತ. ಬೇರೆ ಸಿದ್ಧಾಂತಗಳು ಆರು ತಿಂಗಳಿಗೋ, ವರ್ಷಕ್ಕೋ, ಐದು ವರ್ಷಕ್ಕೋ ಒಮ್ಮೆ ನಮ್ಮನ್ನು ತಾಕಲು ಯತ್ನಿಸುತ್ತಿದ್ದರೆ, ಆರೆಸ್ಸೆಸ್ ಪ್ರತಿದಿನ, ದಿನಕ್ಕೊಂದು ಗಂಟೆಯಂತೆ ನಮ್ಮನ್ನು ಆವರಿಸುತ್ತಲೇ ಬರುತ್ತದೆ. ನನ್ನ ಇಡೀ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ಒಂದು ಮುಸ್ಲಿಮ್ ಕುಟುಂಬವಿಲ್ಲ. ಆದರೂ, ಮುಸ್ಲಿಮರೆಂದರೆ ಕೆಟ್ಟವರು ಎಂಬ ಭಾವನೆ ನನ್ನ ತಲೆಯಲ್ಲಿ ಬೇರೂರಿತ್ತು.

ಮಕ್ಕಳನ್ನು ಎಳೆವೆಯಲ್ಲೇ ತಮ್ಮ ವಶ ಮಾಡಿಕೊಳ್ಳುವ ವ್ಯವಸ್ಥಿತ ಜಾಲವನ್ನು ಆರೆಸ್ಸೆಸ್ ಹೊಂದಿದೆ. ಅದನ್ನು ‘‘ನಾವು ಶುಭ್ರ ಗೋಡೆಯ ಮೇಲೆ ಬರೆಯುತ್ತಿದ್ದೇವೆ’’ ಎಂದು ಅವರು ಕರೆದುಕೊಳ್ಳುತ್ತಾರೆ. ಶಾಲಾ ಅವಧಿಯ ನಂತರ ನಮ್ಮ ಭೌಗೋಳಿಕ ಮಾಸ್ತರರು, ಆರೆಸ್ಸೆಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ನಮಗಿದ್ದ ಏಳೆಂಟು ಶಿಕ್ಷಕರ ಪೈಕಿ, ಐದು ಮಂದಿ ಆರೆಸ್ಸೆಸ್ ಸಂಪರ್ಕದಲ್ಲಿದ್ದವರು. ಇವತ್ತಿಗೂ ಶಾಲಾ ಶಿಕ್ಷಕರ ಮೇಲೆ ಆರೆಸ್ಸೆಸ್ ಗಾಢ ಪ್ರಭಾವವನ್ನು ಉಳಿಸಿಕೊಂಡಿದೆ. ಹೆಚ್ಚಾಗುತ್ತಲೇ ಹೋಗುತ್ತಿದೆ ಎನ್ನಬಹುದೇನೊ. ಹಿಂದಿ ಭಾಷಿಕ ಪ್ರಾಂತಗಳಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಮತ್ತು ಕಾಲೇಜು ಉಪನ್ಯಾಸಕರಲ್ಲೂ ಬಹಳಷ್ಟು ಮಂದಿ ಆರೆಸ್ಸೆಸ್ ನಂಟು ಹೊಂದಿದ್ದಾರೆ. ಅವರ ಪ್ರಧಾನ ಗುರಿ ಮಕ್ಕಳು!

► ನಿಮಗೆ ಅನ್ಯಾಯವಾದದ್ದು ಧೈರ್ಯವಾಗಿ ಪ್ರತಿಭಟಿಸಿ ಹೊರಬಂದಿರಿ. ಆದರೆ ನಿಮ್ಮಂತಹ ಅನುಭವಗಳನ್ನು ಅನುಭವಿಸಿ ಯೂ ಹಲವಾರು ಜನ ಆರೆಸ್ಸೆಸ್‌ನಲ್ಲಿ ಮುಂದುವರಿಯುತ್ತಿದ್ದಾರೆ. ಅವರ್ಯಾಕೆ ನಿಮ್ಮ ಹಾಗೆ ಧಿಕ್ಕರಿಸಿ ಬರುತ್ತಿಲ್ಲ?

ಮೇಘವಂಶಿ: ಒಮ್ಮೊಮ್ಮೆ ನನಗನ್ನಿಸುತ್ತೆ, ಪ್ರಶ್ನೆ ಕೇಳಿದ್ದಕ್ಕಾಗಿ ನಾನು ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಯಿತೇನೊ ಎಂದು. ಇಂತಹ ಪ್ರಶ್ನೆಗಳನ್ನು ಕೇಳದ ಬಹಳ ಜನ ಸುಖಕರವಾದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ವೃತ್ತಿಯಲ್ಲಿ ಉನ್ನತಿ ಸಾಧಿಸಿದ್ದಾರೆ. ನನ್ನ ಜೊತೆ ಸ್ವಯಂ ಸೇವಕರಾಗಿದ್ದ ಅನೇಕರು, ಉನ್ನತ ಸ್ಥಾನಗಳಿಗೇರಿದ್ದಾರೆ; ರಾಜಕಾರಣದಲ್ಲಿ ಎಂಎಲ್‌ಎಗಳಾಗಿದ್ದಾರೆ.

ನಮಗೆ ತಾರತಮ್ಯವಾಗುತ್ತಿದೆ ಎಂಬುದು ಅವರಿಗೆ ಗೊತ್ತು. ಜಾತಿವ್ಯವಸ್ಥೆಯ ಕಹಿ ಅನುಭವಿಸುತ್ತಿದ್ದಾರೆ. ಆದರೂ ಮೌನಕ್ಕೆ ಶರಣಾಗಿದ್ದಾರೆ. ನಾನು ಕೆಲವರನ್ನು ‘‘ಯಾಕಿಂತಹ ವಂಚನೆಯ ಮೌನಕ್ಕೆ ನಾಟಿಕೊಂಡಿದ್ದೀರಿ?’’ ಎಂದು ಕೇಳಿದೆ. ಅದಕ್ಕವರು, ‘‘ಇದೇನು ಹೊಸದಾ? ಸಮಾಜದ ಎಲ್ಲಾ ಕಡೆ, ಶಾಲೆಗಳಲ್ಲಿ ನಮಗೆ ಇಂತಹ ಅನುಭವಗಳು ಆಗುತ್ತಲೇ ಬಂದಿವೆ. ಆಗೆಲ್ಲ ನಾವು ಸುಮ್ಮನಿರಲಿಲ್ಲವೇ. ಅದೇರೀತಿ, ಆರೆಸ್ಸೆಸ್‌ನೊಳಗೂ ನಾವು ಸುಮ್ಮನಿದ್ದೇವೆ’’ ಎಂದು ಹೇಳಿದರು.

ಈ ಮೌನ ದೊಡ್ಡದಾಗಿ ಕೆಲಸ ಮಾಡುತ್ತದೆ. ಈಗಾಗಲೇ ನಮ್ಮಿಂದ ಪ್ರಶ್ನೆ ಕೇಳುವ ಧೈರ್ಯವನ್ನು ಕಿತ್ತುಕೊಳ್ಳಲಾಗಿದೆ. ಈಗ ಆರೆಸ್ಸೆಸ್ ಅನ್ನು ಪ್ರಶ್ನಿಸಿ ಏನು ಪ್ರಯೋಜನ ಎಂಬುದು ಅವರ ವಾದ. ಅವರ ಪ್ರಶ್ನೆ, ‘‘ಸಂಘಟನೆ ಅಡಿಯಿಂದ ಮುಡಿವರೆಗೆ ಬಹಳ ಬಲಶಾಲಿಯಾಗಿ ಬೆಳೆದುನಿಂತಿದೆ. ಅದರ ವಿರುದ್ಧ ಹೋರಾಡುವುದು ಹೇಗೆ?’’ ನಮ್ಮ ಬದುಕು ಹೀಗೇ ಮುಂದುವರಿದು ಕೊನೆಯಾಗಬೇಕು ಎಂಬುದನ್ನು ಅವರು ಒಪ್ಪಿಯಾಗಿದೆ. ಅವರ ಬ್ರೈನ್‌ವಾಶ್ ಮಾಡಲಾಗಿದೆ. ನನ್ನ ಜೊತೆಗೆ ಹೀಗೇಕಾಗುತ್ತಿದೆ? ನನ್ನ ಸಮುದಾಯದ ಜೊತೆ ಹೀಗೇಕಾಗುತ್ತಿದೆ? ಎಂದು ಯೋಚಿಸಲಾರದಷ್ಟು ಬೌದ್ಧಿಕವಾಗಿ ನಿತ್ರಾಣಗೊಂಡಿದ್ದಾರೆ. ಪ್ರತಿಭಟನೆ, ಪ್ರತಿರೋಧ, ಆಂತರಿಕ ಭಿನ್ನನಿಲುವು ಎಂಬುದು ಆರೆಸ್ಸೆಸ್‌ನೊಳಗೆ ಬರಲು ಸಾಧ್ಯವಿಲ್ಲ. ಯಾಕೆಂದರೆ ಇಂತಹ ಪದಗಳೆಲ್ಲ ಭಯೋತ್ಪಾದಕರಿಗೆ ಮಾತ್ರ ಅನ್ವಯವಾಗುವ ಪದಗಳು ಎಂಬ ಅಭಿಪ್ರಾಯವನ್ನು ಗಾಢವಾಗಿ ಬಿತ್ತಲಾಗಿದೆ.

ಯಾರೋ ಒಬ್ಬ ಸ್ವಯಂಸೇವಕ ಉದ್ಯಮಿಯಾಗಿದ್ದರೆ; ಅಲ್ಲಿ ಅವನಿಗೆ ಅವನದೇ ಆದ ಬಲಹೀನತೆಗಳಿರುತ್ತವೆ. ಆಡಳಿತದಲ್ಲಿರುವ ವ್ಯಕ್ತಿಗೆ ಅವನದೇ ಮಿತಿಗಳಿರುತ್ತವೆ. ಇವೆಲ್ಲವನ್ನು ಅವರು ಅರಿತುಕೊಂಡಿದ್ದಾರೆ. ಹಾಗಾಗಿ ಜನ ಹೋರಾಟಕ್ಕೆ ಮುಂದಾಗುವುದಿಲ್ಲ.

ಇನ್ನು ಕೆಲವರು, ಆರೆಸ್ಸೆಸ್‌ನಿಂದ ತಮಗೆ ಎಷ್ಟೆಲ್ಲ ಗೌರವ ಸಿಗುತ್ತಿದೆ ಎಂದು ಭ್ರಮಿಸಿಕೊಂಡವರೂ ಇದ್ದಾರೆ. ಊರಿನ ಕಟ್ಟೆಯ ಮೇಲೆ ಕೂರುವುದಕ್ಕೂ ಸ್ವಾತಂತ್ರ್ಯವಿರದಿದ್ದ ನಮ್ಮ ಜನರನ್ನು ತೆಹಶಿಲ್ ಅಥವಾ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ವೇದಿಕೆಗಳಲ್ಲಿ ಕರೆದು ಅತಿಥಿಗಳಾಗಿ ಕೂರಿಸುತ್ತಾರೆ. ಅದಷ್ಟಕ್ಕೇ, ತಾವೇನೋ ದೊಡ್ಡ ಗೌರವ ಸಂಪಾದಿಸಿದ್ದೇವೆ ಎಂಬ ಭ್ರಮೆಗೆ ನಮ್ಮ ಜನ ಒಳಗಾಗುತ್ತಿದ್ದಾರೆ. ಆದರೆ ಒಂದಂತೂ ಸತ್ಯ. ನನ್ನಂತಹ ದಲಿತ ಸ್ವಯಂಸೇವಕರಿಗೆ ಅವರದೇ ಆದ ಮಿತಿಯಲ್ಲಿ ಕೆಟ್ಟ ಅನುಭವಗಳು ಎದುರಾಗುತ್ತಲೇ ಇರುತ್ತವೆ. ಖಾಸಗಿಯಾಗಿ ಇಂತಹ ಅನುಭವಗಳನ್ನು ಹೇಳಿಕೊಳ್ಳುತ್ತಾರೆಯೇ ಹೊರತು, ಬಹಿರಂಗವಾಗಿ ಯಾರೂ ಸಂಘರ್ಷಕ್ಕಿಳಿಯುವುದಿಲ್ಲ.

ನನ್ನ ಕೃತಿ ಹೊರಬಂದ ನಂತರ, ಸಾಕಷ್ಟು ಜನ ತಮ್ಮ ಕಥೆಗಳನ್ನು ಹೇಳಿಕೊಂಡರು. ತಾವೇಕೆ ಆರೆಸ್ಸೆಸ್ ತೊರೆದೆವು ಎಂದು ವಿವರಿಸಿದರು. ಇತ್ತೀಚೆಗಷ್ಟೆ ಉತ್ತರಾಖಂಡದ ಮಾಜಿ ಆರೆಸ್ಸೆಸ್ ಸ್ವಯಂಸೇವಕನೊಬ್ಬ ಕರೆ ಮಾಡಿ ಒಂದು ಗಂಟೆ ಕಾಲ ಮಾತಾಡಿದ. ಹನ್ನೆರಡು ವರ್ಷ ಆತ ಸಂಘಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ದುಡಿದಿದ್ದ. ಆದರೆ 2018 ಎಪ್ರಿಲ್ 2ನೇ ತಾರೀಕು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಆರೆಸ್ಸೆಸ್‌ನ ಪಾತ್ರ ತಿಳಿದ ಮೇಲೆ, ಅಲ್ಲಿಂದ ಹೊರಬಂದನಂತೆ. ಇಂತಹ ಸಾಕಷ್ಟು ಉದಾಹರಣೆಗಳಿವೆ.

► ದಲಿತ ಆರೆಸ್ಸೆಸ್ ಸದಸ್ಯರಿಗೆ ಅಂಬೇಡ್ಕರ್ ತರಹದ ಜಾತಿ-ವಿರೋಧಿ ಪ್ರತಿಪಾದಕರ ಧ್ವನಿಗಳು ಹೇಗೆ ತುಲುಪುತ್ತಿವೆ? ನೀವು ವಿವರಿಸಿದಂತಹ ವಾತಾವರಣದಲ್ಲಿ, ಆ ಪ್ರತಿಪಾದಕರ ಧ್ವನಿಗಳನ್ನು ನಿಜಾರ್ಥದಲ್ಲಿ ಸ್ವೀಕರಿಸಲು ಅಂತಹ ಸದಸ್ಯರಿಗೆ ಸಾಧ್ಯವೇ?

ಮೇಘವಂಶಿ: ಆರೆಸ್ಸೆಸ್‌ನಲ್ಲಿ ಅಂಬೇಡ್ಕರ್ ಎನ್ನುವ ಹೆಸರು ಕೇವಲ ತುಟಿಗಳಿಗಷ್ಟೇ ಸೀಮಿತ. ಅವರ ಆಲೋಚನೆಗಳ ಅನುಷ್ಠಾನವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆರೆಸ್ಸೆಸ್‌ನ ಕಾರ್ಯಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಅಂಬೇಡ್ಕರ್ ಅವರನ್ನು ಅವಹೇಳನ ಮಾಡುವ ಮತ್ತು ಮೀಸಲಾತಿ ವಿರುದ್ಧ ಅಭಿಪ್ರಾಯ ರೂಪಿಸುವ ಪ್ರಕ್ರಿಯೆಗಳೇ ನಮಗೆ ಇದನ್ನು ಸಾಬೀತು ಮಾಡುತ್ತವೆ. ದಲಿತ ಸ್ವಯಂ ಸೇವಕರಿಗೆ ಇದೆಲ್ಲ ಅರ್ಥವಾಗುವುದು ತುಂಬಾ ಕಷ್ಟ. ದಲಿತರ ಮೇಲೆ ಸವರ್ಣೀಯರಿಂದ ನಡೆದ ದೌರ್ಜನ್ಯದ ಒಂದೇ ಒಂದು ಪ್ರಕರಣದಲ್ಲಿ ಆರೆಸ್ಸೆಸ್ ವಿರೋಧಿಸಿ ಪ್ರತಿಭಟನೆ ನಡೆಸಿದ್ದಿದೆಯೇ?

ಕಾಲದ ಓಘದಲ್ಲಿ ಇಂತಹ ಪ್ರಶ್ನೆಗಳು ಆ ದಲಿತ ಬಾಂಧವರ ಕಣ್ಣು ತೆರೆಸುತ್ತಿವೆ. ಆಗ ಅವರು ನಿಜವಾದ ಅಂಬೇಡ್ಕರ್ ಅವರತ್ತ ಮುಖ ಮಾಡಿ ನಿಲ್ಲುತ್ತಾರೆ. ಅಂಬೇಡ್ಕರ್ ಅವರ ಆಶಯಕ್ಕೆ ಪೂರಕವಾಗಿ ನಮ್ಮ ಸಮುದಾಯಕ್ಕೆ ನನ್ನ ಕೊಡುಗೆ ಏನು? ಆರೆಸ್ಸೆಸ್‌ನೊಳಗೆ ನೆಲೆ ನಿಂತಿರುವ ನಾನು ಆ ಕೊಡುಗೆಗೆ ಪೂರಕವಾಗಿದ್ದೇನೋ ಮಾರಕವಾಗಿದ್ದೇನೊ? ಎಂಬ ವಿಮರ್ಶೆ ಅವರಲ್ಲಿ ಮೂಡಬೇಕಿದೆ. ಬೇರೆಯವರ ಮೇಲೆ ಹಲ್ಲೆ ಮಾಡಲು ಅಥವಾ ಹೆದರಿಸಲು ಮಾತ್ರ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೆಸ್ಸೆಸ್ ಹಿಪಾಕ್ರಸಿ ಮನದಟ್ಟಾದಾಗ, ಅವರು ಅಲ್ಲಿಂದ ಹೊರಬರುತ್ತಾರೆ.

► ಆರೆಸ್ಸೆಸ್ ತೊರೆದು ಹೊರಬಂದು, ಗಟ್ಟಿಯಾಗಿ ಮಾತನಾಡುತ್ತಿರುವ ದಲಿತರ ಸಾಮಾಜಿಕ ಹಿನ್ನೆಲೆ ಏನಿರಬಹುದು? ಅಂದರೆ, ಲಿಂಗ, ವರ್ಗ, ಉಪಜಾತಿಯಂತಹ ಅಂಶಗಳು ಪ್ರಭಾವ ಬೀರುತ್ತಿರಬಹುದೇ?

ಮೇಘವಂಶಿ: ಆರೆಸ್ಸೆಸ್‌ನಲ್ಲಿರುವ ಬಹಳಷ್ಟು ದಲಿತರು ಮಧ್ಯಮ ವರ್ಗದವರು ಮತ್ತು ಶ್ರೀಮಂತರು; ಸರಕಾರಿ ಉದ್ಯೋಗದಲ್ಲಿರುವಂತಹವರು; ನಗರ ಪ್ರದೇಶದಲ್ಲಿದ್ದು ಶಿಕ್ಷಣ ಪಡೆದಂತಹವರು. ಅವರು ಸಂಪೂರ್ಣವಾಗಿ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಅವರು ಪ್ರತಿಭಟಿಸುವುದಿಲ್ಲ. ಎಂ.ಎನ್. ಶ್ರೀನಿವಾಸ್ ಅವರು ಇದನ್ನು ಸಂಸ್ಕೃತೀಕರಣದ ಪ್ರಭಾವ ಎಂದು ಕರೆಯುತ್ತಾರೆ. ಇನ್ನೂ ಸುಲಭವಾಗಿ ನವ ಬ್ರಾಹ್ಮಣೀಕರಣ ಎನ್ನಬಹುದೇನೊ. ಮೇಲ್ಜಾತಿಗಳ ನಡೆಯನ್ನು ಅನುಸರಿಸುವ ಮೂಲಕ ನಾವು ಮೇಲ್ಚಲನೆ ಹೊಂದುತ್ತಿದ್ದೇವೆ ಎಂದು ಭ್ರಮೆಗೆ ತುತ್ತಾಗುವಿಕೆಯನ್ನು ಹೀಗೆ ಹೇಳಬಹುದು.

ಇನ್ನು ಆರೆಸ್ಸೆಸ್ ಸಹವಾಸ ತೊರೆದು ಹೊರಬಂದು ಗಟ್ಟಿಯಾಗಿ ಮಾತನಾಡುತ್ತಿರುವ ದಲಿತರ ಹಿನ್ನೆಲೆ ಗಮನಿಸಿದಾಗ, ಅವರು ದೊಡ್ಡ ಸಂಖ್ಯೆಯಲ್ಲಿರುವ ಪ್ರಧಾನ ದಲಿತ ಉಪಜಾತಿಗೆ ಸೇರಿರುವುದು ಅರ್ಥವಾಗುತ್ತದೆ. ಉತ್ತರ ಪ್ರದೇಶದಲ್ಲಿ ಜಾಟವರು, ರಾಜಸ್ಥಾನದಲ್ಲಿ ಮೇಘವಲರು, ದಕ್ಷಿಣದಲ್ಲಿ ಅರುಂಧತಿಯಾರ್‌ಗಳು. ಅವೆಲ್ಲ ದೊಡ್ಡ ಸಂಖ್ಯೆಯಲ್ಲಿರುವ ಜಾತಿಗಳಾದ್ದರಿಂದ, ಈ ಸಮುದಾಯದವರ ಮೇಲೆ ಆರೆಸ್ಸೆಸ್ ಪ್ರತೀಕಾರಕ್ಕೆ ಅಥವಾ ದಮನಕ್ಕೆ ಮುಂದಾಗಲು ಯೋಚಿಸುತ್ತದೆ. ಆದರೆ 500, 1,000 ಜನಸಂಖ್ಯೆಯಿರುವ ಸಣ್ಣಪುಟ್ಟ ದಲಿತ ಜಾತಿಗಳ ಸ್ವಯಂಸೇವಕರು, ತಮ್ಮ ಬೆನ್ನಿಗೆ ಜಾತಿಯ ಬಲ ಇಲ್ಲದ್ದರಿಂದ ಕಹಿ ಅನುಭವದೊಂದಿಗೆ ಆರೆಸ್ಸೆಸ್‌ನಿಂದ ಹೊರಬಂದರೂ ಮೌನಕ್ಕೆ ಶರಣಾಗುತ್ತಾರೆ.

ಕೃಪೆ: ದಿ ಕ್ಯಾರವಾನ್ ಪತ್ರಿಕೆ

https://caravanmagazine.in/interview/dalits-will-quit-rss-if-exposed-to-the-real-ambedkar-bhanwar-meghwanshi-former-karsevak

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಂದರ್ಶನ: ಅಭಿಮನ್ಯು ಚಂದ್ರ

contributor

Contributor - ಅನುವಾದ:ಗಿರೀಶ್ ತಾಳಿಕಟ್ಟೆ

contributor

Similar News