ರಾಜಪ್ರಭುತ್ವ, ಕೋಮುವಾದ ಮತ್ತು ಜಾತಿವಾದಗಳಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ..

Update: 2024-04-03 05:44 GMT

ಭಾರತದಲ್ಲಿ 2,600 ವರ್ಷಗಳ ಹಿಂದೆ ಮೇಲ್ಜಾತಿ ಪ್ರಭುತ್ವವನ್ನು ಅಹಿಂಸಾತ್ಮಕವಾಗಿ ರದ್ದುಗೊಳಿಸಿ ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ಶ್ರೇಯಸ್ಸು ಜಗತ್ತಿನ ಮೊದಲ ಪ್ರಜಾಪ್ರಭುತ್ವವಾದಿ ಬುದ್ಧನಿಗೆ ಸಲ್ಲುತ್ತದೆ. ಬುದ್ಧನ ವಿಚಾರಧಾರೆಗಳಿಂದ ಪ್ರಭಾವಿತರಾದ ಯುರೋಪಿನ ಜನತೆ ಪ್ರಜಾಪ್ರಭುತ್ವ ಕ್ರಾಂತಿಯನ್ನು ರಾಜಪ್ರಭುತ್ವ ಮತ್ತು ಪುರೋಹಿತ ಪ್ರಭುತ್ವಗಳ ವಿರುದ್ಧ ಯಶಸ್ವಿಯಾಗಿ 17ನೇ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುನ್ನಡೆಸಿದ ಶ್ರೇಯಸ್ಸನ್ನು ಹೊಂದಿದ್ದಾರೆ. ಅಂದು ಜಾನ್ ಮಿಲ್ಟನ್ ‘‘ನಮ್ಮ ಪ್ರಭುಗಳಾಗಬೇಕೆಂಬುದು ನಿಮ್ಮ ಆಸೆಯಾಗಿದ್ದರೆ, ನಿಮ್ಮ ಗುಲಾಮರಾಗಿ ಬದುಕಬೇಕೆಂಬ ಆಸೆ ನಮಗೇಕೆ ಬೇಕು?’’ ಎಂಬ ಐತಿಹಾಸಿಕ ಪ್ರಶ್ನೆಯನ್ನು ವ್ಯವಸ್ಥೆಯ ಮುಂದಿಟ್ಟು ಪ್ರಜಾಪ್ರಭುತ್ವ ಕ್ರಾಂತಿಗೆ ಮುನ್ನುಡಿ ಬರೆದರು.

ವಾಸ್ತವವಾಗಿ ಮೊದಲ ಮಹಾಯುದ್ಧ ಕಾಲದಲ್ಲಿ ಹಿಟ್ಲರ್ ಮತ್ತು ಬಳಗ ಜಗತ್ತಿನಲ್ಲಿ ಪೈಶಾಚಿಕ ಪ್ರಭುತ್ವವನ್ನು ಸ್ಥಾಪಿಸಿ ಸಾರ್ವಜನಿಕರನ್ನು ಬಲಾತ್ಕಾರದಿಂದ ಗುಲಾಮಗಿರಿಗೆ ದಬ್ಬಿದ ಬಗೆ ಜಗತ್ತಿನ ಕರಾಳ ಇತಿಹಾಸವಾಗಿ ದಾಖಲಾಗಿದೆ. ದ್ವಿತೀಯ ಮಹಾಯುದ್ಧವನ್ನು ಜ್ಞಾನಿಗಳು ರಾಕ್ಷಸಿ ಪ್ರಭುತ್ವ ಮತ್ತು ಪ್ರಜಾಪ್ರಭುತ್ವಗಳ ನಡುವಣ ಯುದ್ಧದಲ್ಲಿ ಪ್ರಜಾಪ್ರಭುತ್ವದ ಗೆಲುವು ಎಂಬುದಾಗಿ ಅರ್ಥೈಸಿದ್ದಾರೆ. ಆನಂತರ ಜಗತ್ತಿನ ಬಹುತೇಕ ರಾಷ್ಟ್ರಗಳು ರಾಜಕೀಯವಾಗಿ ಸ್ವತಂತ್ರ ರಾಷ್ಟ್ರಗಳಾಗಿ ರೂಪುಗೊಂಡು ತಮ್ಮದೇ ಆದ ಸಂವಿಧಾನಗಳನ್ನು ರಚಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಶಾಂತಿ ಮತ್ತು ನೆಮ್ಮದಿಗಳಿಂದ ಬದುಕಲು ಸಾಧ್ಯವಾಯಿತು. ಭಾರತ ಕೂಡಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳನ್ನು 1947ರಲ್ಲಿ ಗಳಿಸಲು ಸಾಧ್ಯವಾಯಿತು.

ಭಾರತವು ಸರ್ವ ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ರೂಪುಗೊಳ್ಳಲು ಗಾಂಧಿ, ಪಟೇಲ್, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ಲೋಹಿಯಾ ಮೊದಲಾದ ದಾರ್ಶನಿಕರು ಐತಿಹಾಸಿಕವಾಗಿ ಮಹತ್ವದ ಪಾತ್ರವಹಿಸಿದರು. ಅಂದು ಕಾಂಗ್ರೆಸ್ ಪಕ್ಷ ಬಹುತ್ವ, ಧರ್ಮನಿರಪೇಕ್ಷತೆ, ಸಾಮಾಜಿಕ ಪ್ರಜಾಸತ್ತೆ, ಆರ್ಥಿಕ ಪ್ರಜಾಸತ್ತೆ ಮತ್ತು ಬಹುಜನರ ಸಬಲೀಕರಣಗಳಿಗೆ ಬದ್ಧವಾದ ಆಳ್ವಿಕೆಗೆ ಭದ್ರ ಬುನಾದಿ ಹಾಕಿರುವುದು ಜನಮನ್ನಣೆ ಗಳಿಸಿದೆ. ನೆಹರೂ ಮತ್ತು ಇಂದಿರಾ ಗಾಂಧಿ ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ನೀಡಿರುವ ಕೊಡುಗೆಯನ್ನು ಸಮಸ್ತ ಬಹುಜನರು ಮರೆಯಲಾಗದು. ಭೂ ಸುಧಾರಣೆ, ಸಾರ್ವಜನಿಕ ಉದ್ದಿಮೆಗಳ ಅಭಿವೃದ್ಧಿ, ಮೂಲ ಸೌಕರ್ಯಗಳ ವಿಸ್ತರಣೆ, ಕೃಷಿ ಕ್ರಾಂತಿ, ಕೈಗಾರಿಕಾಭಿವೃದ್ಧಿ, ಯುವಜನರಿಗೆ ಉದ್ಯೋಗಾವಕಾಶಗಳ ವಿಸ್ತರಣೆ ಮೊದಲಾದ ಕಾರ್ಯಕ್ರಮಗಳಿಂದ ಬಡತನ ನಿರ್ಮೂಲನೆಗೆ ಇವರು ನೀಡಿದ ಕೊಡುಗೆ ಅವಿಸ್ಮರಣೀಯ.

ಕಾಂಗ್ರೆಸಿಗರು ಸಮಗ್ರವಾಗಿ ಬಡತನ ನಿರ್ಮೂಲನೆ ಮಾಡದಿದ್ದರೂ, ಬಡವರನ್ನು ನಿರ್ಮೂಲನೆ ಮಾಡುವ ಸಲುವಾಗಿ ತಮಗೆ ಸಿಕ್ಕ ರಾಜ್ಯಾಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಿಲ್ಲ ಎಂಬುದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ. ಆರ್ಥಿಕ ಉದಾರೀಕರಣ ಮತ್ತು ಸಾಮಾಜಿಕ ನ್ಯಾಯಗಳ ನಡುವೆ ಸಮನ್ವಯ ಸಾಧಿಸಿ ಶ್ರೀಮಂತರು ಮತ್ತು ಬಡವರ ಅಭಿವೃದ್ಧಿಗಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹ ರಾವ್, ಮನಮೋಹನ್ ಸಿಂಗ್ ಮೊದಲಾದವರು ನಡೆಸಿದ ಪ್ರಯತ್ನಗಳು ವಿಶೇಷ ಮಹತ್ವ ಹೊಂದಿದ್ದವು. ದುರ್ಬಲ ವರ್ಗಗಳಿಗೆ ಅಧಿಕಾರ ಮತ್ತು ಸಂಪತ್ತಿನ ಮರು ಹಂಚಿಕೆಯಲ್ಲಿ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಮುನ್ನಡೆಸಿದ ಮಂಡಲ್ ಚಳವಳಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ವಿತರಣೆ ದೃಷ್ಟಿಯಿಂದ ಭಾರತದ ಇತಿಹಾಸದಲ್ಲಿ ವಿಶೇಷ ಮೈಲುಗಲ್ಲಾಗಿದೆ.

1980ರ ದಶಕದಲ್ಲಿ ಆರಂಭಗೊಂಡ ಆರೆಸ್ಸೆಸ್ ನಿರ್ದೇಶಿತ ಕೋಮುವಾದಿ ರಾಜಕಾರಣ ಭಾರತದ ಸಾಮಾಜಿಕ ನ್ಯಾಯ ಚಳವಳಿಗೆ ಮಾರಣಾಂತಿಕ ಕೊಡಲಿ ಪೆಟ್ಟು ನೀಡಿತು. ಮಂದಿರವಾದಿಗಳು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅತಿ ಹಿಂದುಳಿದ ಸಮುದಾಯಗಳ ಬದುಕಿನ ಜೊತೆ ಚೆಲ್ಲಾಟವಾಡಿ ಕೋಮುವಾದಿ ರಾಜಕಾರಣವನ್ನು ಬಲಪಡಿಸಿ ಸಾಂವಿಧಾನಿಕ ಆಶಯಗಳನ್ನು ಗಾಳಿಗೆ ತೂರಿದರು. ದೇಶದಾದ್ಯಂತ ಮುಗ್ಧರನ್ನು ದಾರಿ ತಪ್ಪಿಸಿ ಮೌಢ್ಯವನ್ನು ಬಿತ್ತಲಾಯಿತು. ಮಂದಿರಗಳನ್ನು ಕಟ್ಟುವುದರಿಂದ ಹೊಸ ತಲೆಮಾರಿನ ಭಿಕ್ಷುಕರು ಸೃಷ್ಟಿಯಾಗುವರೆಂಬ ಬಾಬಾ ಸಾಹೇಬ್ ಅಂಬೇಡ್ಕರರ ಎಚ್ಚರಿಕೆಯನ್ನು ಕೋಮುವಾದಿಗಳು ನಿರ್ಲಕ್ಷಿಸಿದರು. ಇಂದು ಪ್ರಬುದ್ಧ ದಕ್ಷಿಣ ಭಾರತವನ್ನು ಹೊರತು ಪಡಿಸಿ ಬಹುತೇಕ ಭಾರತ ಕೋಮುವಾದಿಗಳು ಮತ್ತು ಜಾತಿವಾದಿಗಳ ಕಪಿಮುಷ್ಟಿಗೆ ಸಿಲುಕಿ ನರಳುತ್ತಿದೆ.

ವಿಕಸಿತ ಭಾರತ ಮತ್ತು ವಿಶ್ವಗುರು ಪರಿಕಲ್ಪನೆಗಳನ್ನು ಮುಂದಿಟ್ಟುಕೊಂಡು ಭಾರತವನ್ನು ಜಾಗತಿಕವಾಗಿ ಮೂರನೇ ಬಹುದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದಾಗಿ ಆರೆಸ್ಸೆಸ್, ವಿಎಚ್‌ಪಿ, ಬಜರಂಗ ದಳ ಮೊದಲಾದವರು ಬಹುಜನ ಭಾರತೀಯರನ್ನು ಹೊಸ ಭ್ರಮೆಗೆ ಗುರಿಪಡಿಸಿದ್ದಾರೆ. ಹಸಿವು, ಅಪೌಷ್ಟಿಕತೆ, ಅನಾರೋಗ್ಯ, ಬಡತನ, ನಿರುದ್ಯೋಗ ಮೊದಲಾದ ವಿಷಯಗಳಲ್ಲಿ ಭಾರತದ ಸಾಧನೆ ಜಾಗತಿಕ ಮಟ್ಟದಲ್ಲಿ ಅತ್ಯಂತ ನಿರಾಶಾದಾಯಕವಾಗಿದೆ. ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ಐಎಲ್‌ಒ) ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿಯೊಂದರಲ್ಲಿ ಅತಿ ಹೆಚ್ಚು ವಿದ್ಯಾವಂತ ಭಾರತೀಯರು ಹೆಚ್ಚು ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿದ್ದಾರೆಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಪ್ರಬುದ್ಧ ಭಾರತದ ಅಸಲಿ ನಿರ್ಮಾಪಕರಾದ ಕೊಳಚೆ ಪ್ರದೇಶವಾಸಿಗಳು ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಮಸಣದ ಹೂವುಗಳಾಗಿದ್ದಾರೆ. ಇದು ವಿಶ್ವಗುರು ಮತ್ತು ಮನುವಾದಿಗಳ ಬಳಗಕ್ಕೆ ಕಾಣಿಸದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಭಾರತ ಸರಕಾರ ಇತ್ತೀಚೆಗೆ ಚುನಾವಣಾ ಬಾಂಡ್‌ಗಳ ಮೂಲಕ ಆಳುವ ಪಕ್ಷದ ಧನ ಸಂಗ್ರಹಣೆ ಯೋಜನೆಯನ್ನು ಸಂವಿಧಾನ ಬದ್ಧವಾಗಿ ರದ್ದುಗೊಳಿಸಿ ಭಾರತದ ಮರ್ಯಾದೆಯನ್ನು ಸರ್ವೋಚ್ಚ ನ್ಯಾಯಾಲಯ ಉಳಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.

ಪ್ರಜಾಪ್ರಭುತ್ವವು ಚುನಾವಣೆಯೊಂದಿಗೆ ಪ್ರಾರಂಭವಾಗುವುದಿಲ್ಲ ಮತ್ತು ಚುನಾವಣೆಯೊಂದಿಗೆ ಕೊನೆಗೊಳ್ಳುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನೀಡಿರುವ ತೀರ್ಪು ಐತಿಹಾಸಿಕ ಮಹತ್ವ ಹೊಂದಿದೆ. ಭಾರತೀಯ ಸಂವಿಧಾನದಲ್ಲಿ ಧರ್ಮ, ಜಾತಿ, ಧನ ಮೊದಲಾದ ಅಂಶಗಳಿಂದ ಮುಕ್ತವಾದ ಚುನಾವಣಾ ವ್ಯವಸ್ಥೆಯನ್ನು ರೂಪಿಸುವಲ್ಲಿ ಸರಕಾರ ಜವಾಬ್ದಾರಿಯುತ ಪಾತ್ರ ವಹಿಸಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಚುನಾವಣಾ ಪ್ರಕ್ರಿಯೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸದಿದ್ದಲ್ಲಿ ಪ್ರಜಾಸತ್ತೆ ಉಳಿಯುವುದಿಲ್ಲವೆಂಬ ಮಹತ್ವದ ಸಂದೇಶವನ್ನು ಸರ್ವೋಚ್ಚ ನ್ಯಾಯಾಲಯ 2024ರ ಮಹಾ ಚುನಾವಣೆಯ ಹಿನ್ನೆಲೆಯಲ್ಲಿ ನೀಡಿರುವುದು ಅರ್ಥಪೂರ್ಣವಾಗಿದೆ. ವಿಶೇಷವಾಗಿ ಕಾರ್ಪೊರೇಟ್ ವಲಯದ ಕಬಂಧಬಾಹುಗಳಿಂದ ಪ್ರಜಾಸತ್ತೆಯನ್ನು ಮುಕ್ತಗೊಳಿಸುವುದು ಪ್ರಸಕ್ತ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆ ಮತ್ತು ಸಮಗ್ರತೆಯನ್ನು ಭದ್ರಪಡಿಸುವುದು ಸಂಸತ್ತು, ಚುನಾವಣಾ ಆಯೋಗ ಮತ್ತು ನ್ಯಾಯಾಂಗಗಳ ಸಾಮೂಹಿಕ ಜವಾಬ್ದಾರಿಯಾಗಿದೆ.

2024ರ ಚುನಾವಣೆಯನ್ನು ರಾಮಮಂದಿರ ನಿರ್ಮಾಣದ ಆಧಾರದ ಮೇಲೆ ಗೆಲ್ಲುವ ಮತ್ತೊಂದು ಮಾರಣಾಂತಿಕ ಭ್ರಮೆಯನ್ನು ಮೋದಿ ಪ್ರಭುತ್ವ ಇತ್ತೀಚೆಗೆ ಸೃಷ್ಟಿಸಿದೆ. ಕೋಮುವಾದಿಗಳು ಮತ್ತು ಜಾತಿವಾದಿಗಳ ಅನೈತಿಕ ಮೈತ್ರಿ ಕರ್ನಾಟಕ ರಾಜ್ಯವನ್ನೂ ಒಳಗೊಂಡಂತೆ ಭಾರತದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪ್ರಕ್ರಿಯೆಯನ್ನು ದುರ್ಬಲಗೊಳಿಸಿರುವ ಸಂಗತಿ ಪ್ರಜ್ಞಾವಂತರನ್ನು ಘಾಸಿಗೊಳಿಸಿದೆ. ಮತ್ತೊಮ್ಮೆ ರಾಜಪ್ರಭುತ್ವ ಮತ್ತು ಪುರೋಹಿತಶಾಹಿ ಜೊತೆಗೂಡಿ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವವನ್ನು ಕಸಿದುಕೊಳ್ಳುವ ಹುನ್ನಾರವನ್ನು ಮನುವಾದಿ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ನಡೆಸಿವೆ. ಇಂದು ಇಡೀ ಭಾರತದ ಜನತೆ ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ಫುಲೆ, ನಾರಾಯಣ ಗುರು, ಗೋಪಾಲಗೌಡ, ಕುವೆಂಪು ಮೊದಲಾದ ದಾರ್ಶನಿಕರ ಮಾರ್ಗದರ್ಶನದಲ್ಲಿ ‘ಭಾರತ ರಕ್ಷಿಸಿ’ ಚಳವಳಿಗೆ ಸನ್ನದ್ಧರಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಬಿ.ಪಿ.ಮಹೇಶ್ ಚಂದ್ರಗುರು

contributor

Similar News