ಅಭಿವೃದ್ಧಿ ಮತ್ತು ಬ್ರ್ಯಾಂಡೆಡ್ ರಾಜಕಾರಣ

‘ಬ್ರ್ಯಾಂಡೆಡ್’ ನಾಯಕರ ಎಲ್ಲಾ ದಿನಚರಿಗಳು ನಡೆಯುವುದು ಮತ್ತು ಬಹುತೇಕ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುವುದು ಜನರು ನೀಡುವ ತೆರಿಗೆಯಿಂದ ಎನ್ನುವುದನ್ನು ಅರಿಯಬೇಕಾಗಿದೆ. ಇದನ್ನು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ನಂತರ ಅದರಲ್ಲಿಯೂ ಶಕ್ತಿಯೋಜನೆ ಅನುಷ್ಠಾನಕ್ಕೆ ಬಂದ ಹತ್ತು ತಿಂಗಳ ನಂತರದಲ್ಲಿ ರೂ. 98,081 ಕೋಟಿ ಜಿಎಸ್‌ಟಿ ಸಂಗ್ರಹವಾಗಿರುವುದರಿಂದ ತಿಳಿಯಬಹುದು. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ‘ನಮ್ಮ ಪಕ್ಷದ ಉಡುಗೊರೆಗಳು’, ‘ಮೋದಿ ಗ್ಯಾರಂಟಿ’, ‘ಸಿದ್ದರಾಮಯ್ಯ ಗ್ಯಾರಂಟಿ’ ಎಂದು ಬ್ರ್ಯಾಂಡ್ ಮಾಡುವ ಪ್ರವಚನದ ಪುನರುಚ್ಚರಣೆಗಳನ್ನು ಎಲ್ಲರೂ ಸೇರಿ ನಿಲ್ಲಿಸಬೇಕು.

Update: 2024-06-24 06:21 GMT

16ನೇ ಲೋಕಸಭಾ ಚುನಾವಣಾ ಫಲಿತಾಂಶವು ಹಿಂದಿನ ಕೇಂದ್ರ ಸರಕಾರವು ಆರೋಗ್ಯ, ಹಸಿವು, ಸಾರ್ವಜನಿಕ ಶಿಕ್ಷಣ, ನಿರುದ್ಯೋಗ, ಸ್ವಯಂ ಉದ್ಯೋಗ, ದುಡಿಮೆಯ ಅವಕಾಶಗಳು ಕಡಿಮೆಯಾಗುತ್ತಿರುವುದನ್ನು ನಿರ್ಲಕ್ಷಿಸಿರುವುದು ತಿಳಿಸುತ್ತದೆ. ಕಡಿಮೆ ವೇತನಕ್ಕೆ ಹೆಚ್ಚು ದುಡಿಯುವ ಪರಿಸ್ಥಿತಿ ನಿರ್ಮಾಣವಾಗುವ ಜೊತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೀಗೆ ಜನರ ಜೀವನೋಪಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದನ್ನು ಎತ್ತಿಹಿಡಿದಿದೆ. ಇವುಗಳನ್ನು ನಿರ್ಲಕ್ಷಿಸಿ ಕೇವಲ ಜನರ ಭಾವನೆಗಳನ್ನು ಕೆರಳಿಸಿ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುತ್ತೇವೆ ಎಂದು ನಂಬಿದ್ದವರಿಗೆ ಫಲಿತಾಂಶ ಆಘಾತ ತಂದಿದೆ. ಫಲಿತಾಂಶದ ಬಗೆಗಿನ ಸುಳ್ಳು ಎಕ್ಸಿಟ್ ಪೋಲ್‌ಗಳು ಮತ್ತು ಅವುಗಳನ್ನು ಅತಿಯಾದ ಆತ್ಮವಿಶ್ವಾಸದಿಂದ ಸಮರ್ಥಿಸಿಕೊಂಡ ಅನೇಕ ರಾಜಕೀಯ ಪಂಡಿತರು ನಮ್ಮ ಮುಂದಿದ್ದಾರೆ. ‘ಇಂಡಿಯಾ’ ಮೈತ್ರಿಕೂಟವು ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಮಾಜಿಕ ನ್ಯಾಯ ಮತ್ತು ಜಾತಿ ಗಣತಿಗೆ ಒತ್ತು ನೀಡಿದ್ದು, ಹೆಚ್ಚು ಚುರುಕಾಗಿ ಒಕ್ಕೂಟಗಳನ್ನು ರೂಪಿಸಿದ್ದು, ಜಾತಿ ಸಮೀಕರಣಗಳನ್ನು ಅರ್ಥಮಾಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಕಾರಣ ಎನ್ನುವ ವಿವರಣೆಗಳೂ ಇವೆ. ಚುನಾವಣಾ ಫಲಿತಾಂಶವನ್ನು ಯಾವ ರಾಜಕೀಯ ಪಕ್ಷಗಳೂ ವಿಮರ್ಶಾತ್ಮಕವಾಗಿ ನೋಡುತ್ತಿರುವಂತೆ ಕಾಣುತ್ತಿಲ್ಲ. ಒಂದೊಮ್ಮೆ ನೋಡಿದ್ದರೂ ಅದು ಮುಂದಿನ ಚುನಾವಣೆಗಳ ಗೆಲ್ಲುವ ಲೆಕ್ಕಾಚಾರದ ದೃಷ್ಟಿಯಲ್ಲಿ ಮಾತ್ರ.

ಆದರೆ ಜನರು ಮತದಾನದ ಮೂಲಕ ಸಾಮಾಜಿಕ ನ್ಯಾಯದ ಅಗತ್ಯವನ್ನು ಗುರುತಿಸುವುದರ ಜೊತೆಗೆ ಸಂವಿಧಾನದ ಉಳಿವಿನ ಬಗೆಗಿನ ಆತಂಕಗಳನ್ನು ಗುರುತಿಸಿದ್ದಾರೆ. ಜನರು ಅಧಿಕಾರದ ಕೇಂದ್ರೀಕರಣ(ಸರ್ವಾಧಿಕಾರ), ಸ್ಥಳೀಯ ಹಾಗೂ ಪ್ರಾದೇಶಿಕ ವಿಷಯಗಳಿಗೆ ಮತದಾನದಲ್ಲಿ ಗಮನಾರ್ಹ ಮಹತ್ವ ನೀಡಿದ್ದಾರೆ. ‘ಇಂಡಿಯಾ’ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಇದನ್ನು ಮೀರುವ ಪ್ರಯತ್ನವನ್ನು ಸ್ವಲ್ಪಮಟ್ಟಿಗೆ ಮಾಡಿತು. ಈ ಅಂಶಗಳನ್ನು ಯಾವುದೇ ಎಕ್ಸಿಟ್ ಪೋಲ್‌ಗಳು ಮತ್ತು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನರು ಮತ ಚಲಾವಣೆಯಲ್ಲಿ ಪರೋಕ್ಷವಾಗಿ ಗುರುತಿಸಿರುವ ಆರ್ಥಿಕ ಬಿಕ್ಕಟ್ಟುಗಳು, ನಿರಂತರವಾಗಿ ಹೆಚ್ಚುತ್ತಿರುವ ನಿರುದ್ಯೋಗ, ದುಡಿಮೆಯ ಅವಕಾಶದಲ್ಲಿ ಸವಕಳಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಹಾರ ಮತ್ತು ಹಸಿವಿನ ಸಮಸ್ಯೆಗಳು, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಗಂಡಾಂತರಗಳು, ಸ್ವಯಂ ಉದ್ಯೋಗದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟುಗಳು, ಕೃಷಿ ಸಮಾಜದ ಬಿಕ್ಕಟ್ಟುಗಳು, ರೈತರ ಆತ್ಮಹತ್ಯೆ, ಸ್ಥಳಾಂತರ ಮತ್ತು ಪುನರ್‌ವಸತಿ ಇತ್ಯಾದಿ. ಒಟ್ಟಾರೆ 18ನೇ ಲೋಕಸಭಾ ಚುನಾವಣೆಯಲ್ಲಿ ಜನರು ತಮ್ಮ ಜೀವನ ಮತ್ತು ಜೀವನೋಪಾಯಗಳಿಗೆ ಎದುರಾದ ಸಂಕೀರ್ಣ ಸವಾಲುಗಳಿಗೆ ಇಂದಿನ ಕೇಂದ್ರ ಸರಕಾರ ಅಭಿವೃದ್ಧಿ ನೀತಿಗಳು ಉತ್ತರಿಸಲಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಪ್ರಜಾಸತ್ತಾತ್ಮಕವಲ್ಲದ ಕೇಂದ್ರೀಕರಣವನ್ನು ವಿರೋಧಿಸಿ ವೈವಿಧ್ಯತೆಯಲ್ಲಿ ಏಕತೆಯನ್ನು ಎತ್ತಿಹಿಡಿದ್ದಾರೆ. ಯಾವುದೇ ಹಸ್ತಕ್ಷೇಪ, ಅದರಲ್ಲಿಯೂ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಮತ್ತು ನಿಯಂತ್ರಣವನ್ನು ವಿರೋಧಿಸಿದ್ದಾರೆ. ಯಾವುದೇ ರೀತಿಯ ಪಕ್ಷಪಾತ ಮತ್ತು ಮಧ್ಯಸ್ಥಿಕೆ ಇಲ್ಲದ ಗುಣಾತ್ಮಕ ಸಾರ್ವಜನಿಕ ಅಗತ್ಯ ಸೇವೆ ಸರಕಾರಗಳ ಜವಾಬ್ದಾರಿ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲಿ 18ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.45.5ರಷ್ಟು ಮತಗಳನ್ನು ಪಡೆದಿದೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಶೇ.31.5ರಷ್ಟು ಮತಗಳನ್ನು ಪಡೆದಿತ್ತು. ವ್ಯತಿರಿಕ್ತವಾಗಿ ಬಿಜೆಪಿಯ ಮತಗಳ ಪ್ರಮಾಣವು ಶೇ. 51.5ರಿಂದ ಶೇ. 46ಕ್ಕೆ ಇಳಿದಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಮತಗಳ ಪಾಲು ಶೇ.42.88 ರಷ್ಟು. ಹೀಗಾಗಿ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಮತ ಗಳಿಕೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದಕ್ಕೆ ಐದು ಗ್ಯಾರಂಟಿ ಯೋಜನೆಗಳ ಪಾಲು ಇದೆ ಎನ್ನುವುದರಲ್ಲಿ ಅನುಮಾನಗಳು ಇಲ್ಲ. ಆದರೆ, ಮತಗಳಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿರಲು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಅವುಗಳಲ್ಲಿ ಪ್ರಮುಖವಾದವು ಸೀಟು ಹಂಚಿಕೆ, ಅಭ್ಯರ್ಥಿಗಳ ಆಯ್ಕೆ, ಅಭ್ಯರ್ಥಿಗಳ ವ್ಯಕ್ತಿತ್ವ, ನಡವಳಿಕೆ, ಜಾತಿ ಸಮೀಕರಣ, ಸ್ಥಳೀಯ ಕಾರಣಗಳು, ಒಳಬೇಗುದಿ, ಗುಂಪು ರಾಜಕಾರಣ, ಇತ್ಯಾದಿ. ಇವುಗಳಲ್ಲದೆ ಕಾಂಗ್ರೆಸ್ ಜನರಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ತಡೆಯುತ್ತೇವೆ ಎಂದು ಭರವಸೆಯನ್ನು ನೀಡಿತ್ತಾದರೂ ಅದು ಕಡಿಮೆಯಾಗಿಲ್ಲ ಎನ್ನುವುದನ್ನು ಪಂಚಾಯತ್‌ನಿಂದ ವಿಧಾನಸೌಧದವರೆಗೂ ಇರುವ ಎಲ್ಲಾ ಕಂಬಗಳು ಹೇಳುತ್ತಿವೆ. ಇವುಗಳನ್ನು ಕಾಂಗ್ರೆಸ್ ನಾಯಕರು ಮುಕ್ತವಾಗಿ ಚರ್ಚೆ ಮಾಡಬಲ್ಲರೇ? ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವರೇ?

ಇದನ್ನು ಬಿಟ್ಟು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು. ಗ್ಯಾರಂಟಿ ಯೋಜನೆಗಳಿಂದ ಮತಗಳು ಬಂದಿಲ್ಲ. ಇವುಗಳನ್ನು ಫಿಲ್ಟರ್ ಮಾಡಬೇಕು. ಗ್ಯಾರಂಟಿ ಯೋಜನೆಗಳಿಂದ ಪ್ರಯೋಜನವಾಗಿಲ್ಲ ಇತ್ಯಾದಿ ಇದರ ರಾಜಕೀಯ ಲಾಭ-ನಷ್ಟಗಳನ್ನು ಕುರಿತು ಚರ್ಚೆಯ ಮಾತು ಕಾಂಗ್ರೆಸ್ ನಾಯಕರು ಆಡುತ್ತಿರುವುದನ್ನು ಗಮನಿಸುತಿದ್ದೇವೆ. ಹೀಗೆ ಮಾತನಾಡುವ ಕಾಂಗ್ರೆಸ್‌ನ ವಿಧಾನಸಭಾ ಸದಸ್ಯರು ಮತ್ತು ನಾಯಕರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಗಳನ್ನು ಕನಿಷ್ಠ ಗಮನಿಸಿದಂತೆ ಕಾಣುತ್ತಿಲ್ಲ. ಈ ಕುರಿತು ಕಾಂಗ್ರೆಸ್ ತನ್ನ ನಾಯಕರು ಮತ್ತು ಕಾರ್ಯಕರ್ತರಿಗೆ ತರಬೇತಿ ನೀಡಿದಂತೆ ಕಾಣುತ್ತಿಲ್ಲ. ಕಾಂಗ್ರೆಸ್‌ನ ಲೋಕಸಭಾ ಚುನಾವಣಾ ಪ್ರಣಾಳಿಕೆಯು ಕಾಂಗ್ರೆಸ್ ಹಿಂದುಳಿದ ಮತ್ತು ತುಳಿತಕ್ಕೊಳಗಾದ ಜನರ ಪ್ರಗತಿಗೆ ಧ್ವನಿಯಾಗಿದೆ. ಆದಾಗ್ಯೂ, ಜಾತಿ ತಾರತಮ್ಯ ಹೆಚ್ಚಾಗುತ್ತಲೇ ಇದೆ. ಎಸ್‌ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ಸಮುದಾಯಗಳು ಹಿಂದುಳಿಯುತ್ತಲೇ ಇವೆ. ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರಿಗೆ ಇನ್ನಾದರೂ ನ್ಯಾಯಸಿಗಬೇಕಿದೆ, ಹೀಗೆ ಸಮತೆ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತವಾದ ಪ್ರಣಾಳಿಕೆಯನ್ನು ಕಾಂಗ್ರೆಸ್ ನೀಡಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಲ್ಲಿ ಸಾರ್ವಜನಿಕ ಅವಕಾಶಗಳನ್ನು ವಿಸ್ತರಿಸುವ ಭರವಸೆಯನ್ನು ನೀಡಿದೆ. ಆ ಮೂಲಕ ಆರ್ಥಿಕ ನೀತಿಯಲ್ಲಿ ಮಹತ್ವದ ಬದಲಾವಣೆಯ ಅಗತ್ಯವನ್ನು ಕಾಂಗ್ರೆಸ್‌ನ ಲೋಕಸಭಾ ಚುನಾವಣಾ ಪ್ರಣಾಳಿಕೆಯು ತಿಳಿಸುತ್ತದೆ. ಇದು ಮಾನವ ಹಕ್ಕುಗಳು ಅದರಲ್ಲಿಯೂ ನಿರ್ದಿಷ್ಟವಾಗಿ ಪ್ರತಿಯೊಬ್ಬರ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ಚೌಕಟ್ಟಿಗೆ ಸೇರಿದೆ. ಇದನ್ನು ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಆದರೆ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಅಗತ್ಯ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳ ಭಾಗವಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅದರಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ರಾಷ್ಟ್ರ ಸರ್ವೋಚ್ಚ ನಾಯಕರು ಮತ್ತು ರಾಜ್ಯದ ನಾಯಕರು ನಮ್ಮ ‘ಉಡುಗೊರೆಗಳು’ (ವ್ಯಕ್ತಿಯ ಹೆಸರಿನಲ್ಲಿ) ಎಂದು ನೋಡುವುದು ಹೆಚ್ಚು ಅಪಾಯಕಾರಿ.

ಏಕೆಂದರೆ ನಾವು ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಎಲ್ಲಾ ಬಗೆಯ ಅಸಮಾನತೆಗಳನ್ನು ನಿರಂತರವಾಗಿ ಹೆಚ್ಚು ಮಾಡುತ್ತಿವೆ. ಆರ್ಥಿಕ ಬೆಳವಣಿಗೆ ಉದ್ಯೋಗ ರಹಿತ(ಜಾಬ್‌ಲೆಸ್ ಗ್ರೋಥ್) ಚೌಕ್ಕಟ್ಟಿನಿಂದ ನಿರೂಪಿತವಾಗಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ನೀತಿಯ ಚೌಕಟ್ಟಿನಲ್ಲಿ ಮಹತ್ವದ ಬದಲಾವಣೆಗಳ ಅಗತ್ಯವಿದೆ. ಈ ದಿಕ್ಕಿನಲ್ಲಿ ದುಡಿಯುವ ಅವಕಾಶಗಳನ್ನು ವಿಸ್ತರಿಸುವ ಮೂಲಕ ಪ್ರತಿಯೊಬ್ಬರ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ಖಾತ್ರಿಪಡಿಸಬೇಕು. ಈಗಾಗಲೇ ಜಾರಿಯಲ್ಲಿ ಇರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ; ನಗರ ಉದ್ಯೋಗ ಖಾತರಿ ಯೋಜನೆ; ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆಗಳಿಗೆ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ದುಬಾರಿ ಮತ್ತು ಖಾಸಗಿ ಶಿಕ್ಷಣವನ್ನು ನಿಯಂತ್ರಿಸುವುದು, ಆಹಾರ, ಆರೋಗ್ಯ, ಅಕ್ಷರ, ಉದ್ಯೋಗದ ಹಕ್ಕು ಹಾಗೂ ಸಾಮಾಜಿಕ ಭದ್ರತೆಯ ಹಕ್ಕುಗಳಿಂದ ವಂಚಿತರಾದವರಿಗೆ, ಸಾರ್ವಜನಿಕ ವಿತರಣೆಯ ವ್ಯವಸ್ಥೆಯ ಮೂಲಕ ಅಗತ್ಯ ಸರಕು ಮತ್ತು ಸೇವೆಗಳು ದೊರೆಯುವಂತೆ ಮಾಡುವುದು, ಜನ ಸಾಮಾನ್ಯರಿಗೆ ಸಾರ್ವಜನಿಕ ವಲಯದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಆರೋಗ್ಯ ದೊರಕುವಂತೆ ಮಾಡುವುದು, ಕನಿಷ್ಠ ವೇತನದ ಹಕ್ಕು ಮತ್ತು ಆರೋಗ್ಯದ ಹಕ್ಕುಗಳ ಗಂಭೀರವಾಗಿ ಅನುಷ್ಠಾನಕ್ಕೆ ತರುವ ಮೂಲಕ ಜನರ ಜೀವನ ಮಟ್ಟವನ್ನು ಗುಣಾತ್ಮಕವಾಗಿ ಸುಧಾರಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಾಥಮಿಕ ಗುರಿಯಾಗಬೇಕು.

ಆದರೆ ಸರಕಾರಗಳು ತಕ್ಷಣಕ್ಕೆ ಸಾರ್ವಜನಿಕ ವಲಯದಲ್ಲಿ ಉದ್ಯೋಗದ ವಿಸ್ತರಣೆ ಮಾಡಲಾಗದ ಸ್ಥಿತಿಯಲ್ಲಿವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ‘ಸ್ಕೀಮ್’ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲಾ ಸಾರ್ವಜನಿಕ ಕಾರ್ಮಿಕರನ್ನು ಕ್ರಮಬದ್ಧಗೊಳಿಸಬೇಕಾಗಿದೆ ಎನ್ನುವ ಜನಚಳವಳಿಗೆ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ. ಶಿಕ್ಷಣವನ್ನು ಸಾರ್ವಜನಿಕ ವಲಯದಿಂದ ಕೈಬಿಡುವ ಎಲ್ಲಾ ಕ್ರಮಗಳು ಅಂತಿಮ ಹಂತದಲ್ಲಿವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹೇಗಿದೆ ಎನ್ನುವುದು ಕೋವಿಡ್-19ನಲ್ಲಿ ನಮ್ಮ ಅನುಭವಕ್ಕೆ ಬಂದಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ನೆಲಕಚ್ಚಿವೆ. ಕೃಷಿ ಬಿಕ್ಕಟ್ಟು ವಿಸ್ತರಣೆಯಾಗುತ್ತಿದೆ. ರೈತರ ಆತ್ಮಹತ್ಯೆ ಮುಂದುವರಿದಿದೆ. ರೈತರ ಆಂದೋಲನಗಳಿಗೆ ಕಿವಿಗೊಡುವವರು ಆಡಳಿತದಲ್ಲಿ ಇಲ್ಲವಾಗಿದ್ದಾರೆ. ಹವಾಮಾನ ಬದಲಾವಣೆ ಮತ್ತು ಹೆಚ್ಚಿನ ತಾಪಮಾನವು ಬಡತನವನ್ನು ಹೆಚ್ಚಿಸುತ್ತಿದೆ. ಸ್ವಯಂ ಉದ್ಯೋಗಕ್ಕೆ ಅಗತ್ಯ ಸಾಲ ಸೌಲಭ್ಯ ಇಲ್ಲದಿರುವುದು, ಹೊಸ ತಂತ್ರಜ್ಞಾನಗಳಿಗೆ ಪ್ರವೇಶ ಮತ್ತು ತರಬೇತಿ ಇಲ್ಲದಿರುವುದು ಸವಾಲಾಗಿದೆ.

ಇಂತಹ ಸಮಯದಲ್ಲಿ ‘ಮಾನವ ಹಕ್ಕುಗಳ ಆರ್ಥಿಕತೆ’(Human Rights Economy) ಚೌಕಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಸರಕಾರ ಜಾರಿಗೆ ತಂದಿತು. ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರು ಭಾಗವಹಿಸಲು ಸಹಾಯ ಮತ್ತು ಬೆಂಬಲವನ್ನು ನೀಡುವ ದೃಷ್ಟಿಯಿಂದ ಜೂನ್ 2023ರಲ್ಲಿ ಜಾರಿಗೆ ತಂದ ಶಕ್ತಿ ಯೋಜನೆ ಅಸಂಖ್ಯಾತ ಮಹಿಳೆಯರ ಮೊಗದಲ್ಲಿ ನಗುವನ್ನು ತಂದಿದೆ. ತಳಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕರ್ತರಾದ ಆಶಾ ಕಾರ್ಯಕರ್ತೆಯರ ಮೊಗದಲ್ಲಿ ನಗು ತರಿಸಿದೆ.

ಇಂತಹ ವಿಷಯಗಳು ಹಕ್ಕುಗಳ ನೆಲೆಯಲ್ಲಿ ಗ್ರಾಮ ಪಂಚಾಯತ್‌ನಿಂದ ಸಂಸತ್ತಿನವರೆಗಿನ ಎಲ್ಲಾ ಸಭೆಗಳಲ್ಲಿ ವಸ್ತುನಿಷ್ಠವಾಗಿ ಚರ್ಚೆ ಮಾಡಬೇಕು. ಕುಡಿಯುವ ನೀರು, ಬಳಕೆಯ ನೀರು ಇಲ್ಲವಾಗುತ್ತಿದೆ. ಜಲ ಮೂಲಗಳು ಸವಕಳಿ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿರುವಾಗ ‘‘ನಾವು ಚಂದ್ರನಲ್ಲಿ ನೀರು ಹುಡುಕುತ್ತಿದ್ದೇವೆ’’, ‘‘ನಾವು ಆಕಾಶ ವಿಜ್ಞಾನದಲ್ಲಿ/ ಬಾಹ್ಯಾಕಾಶ ಸಂಶೋಧನೆಯಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದೇವೆ’’, ‘‘ಮಂದಿರ ಕಟ್ಟಿದ್ದೇವೆ, ಮಂದಿರದಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ’’ ಎನ್ನುವ ಉತ್ತರಗಳನ್ನು ನಿಲ್ಲಿಸಬೇಕು. ಹಸಿವು ಹೆಚ್ಚಾಗಿದೆ ಎಂದರೆ ‘‘ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಮಾಡಿದ್ದೇವೆ’’, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಿ ಎಂದರೆ ‘‘ಆರೋಗ್ಯ ವಿಮೆ ನೀಡಿದ್ದೇವೆ. ಅದನ್ನು ಬಳಸಿಕೊಳ್ಳಿ’’ ಎನ್ನುವುದನ್ನು ಬಿಡಬೇಕು. ಈ ರೀತಿಯ ಹಾರಿಕೆಯ ಉತ್ತರಗಳನ್ನು ಒಪ್ಪಿಸುವ ಭ್ರಮೆಯಿಂದ ಮಾಧ್ಯಮಗಳು ಸೇರಿದಂತೆ ಎಲ್ಲರೂ ಹೊರಬರಬೇಕು. ಎಲ್ಲರೂ ಎದುರಿಸುತ್ತಿರುವ ಎಲ್ಲಾ ರೀತಿಯ ಗಂಡಾಂತರಗಳನ್ನು ವಸ್ತುನಿಷ್ಠವಾಗಿ ಹಾಗೂ ಮುಕ್ತವಾಗಿ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಅಭಿವೃದ್ಧಿ ಯೋಜನೆಗಳನ್ನು ರಾಜಕೀಯ ನೆಲೆಯಲ್ಲಿ ಬ್ರ್ಯಾಂಡ್ ಮಾಡುವುದು ಮತ್ತು ಅವುಗಳ ಪರಿಣಾಮಗಳ ವಾಸ್ತವವನ್ನು ಅಸಹಜವಾಗಿ ಮತ್ತು ಅವೈಜ್ಞಾನಿಕವಾಗಿ ಅರ್ಥೈಸುವುದನ್ನು ನಿಲ್ಲಿಸಬೇಕು.

ಡಿಜಿಟಲ್ ಇಂಡಿಯಾದೊಂದಿಗೆ ಪರಿಚಯ ಮಾಡಿಕೊಳ್ಳಲು ಬಯಸುವ ನಾಯಕರು ಬಡವರು ಎದುರಿಸುತ್ತಿರುವ ಹಸಿವು, ಅಪೌಷ್ಟಿಕತೆ, ನಿರುದ್ಯೋಗ ಬಗ್ಗೆ ಯೋಚಿಸುತ್ತಿಲ್ಲ. ಶಿಶು ಮರಣ, ಹೆಣ್ಣು ಭ್ರೂಣಹತ್ಯೆ, ಲಿಂಗಸಮಾನತೆ, ಸಾಂಕ್ರಾಮಿಕ ರೋಗ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಾಲದ ಬಂಧನದಿಂದ ಬಳಲುತ್ತಿರುವವರ ಬಗ್ಗೆ ಕಿಂಚಿತ್ತೂ ಚಿಂತಿಸುತ್ತಿಲ್ಲ. ಹೆಚ್ಚಿನ ಯುವಕರು ಮತ್ತು ಮಧ್ಯಮ ವಯಸ್ಕರು ಆತ್ಮಹತ್ಯೆ ಕುರಿತು ಪ್ರಭುತ್ವಕ್ಕೆ ಆತ್ಮವಿಮರ್ಶೆ ಇಲ್ಲವೇ ಇಲ್ಲ.

‘ಬ್ರ್ಯಾಂಡೆಡ್’ ನಾಯಕರ ಎಲ್ಲಾ ದಿನಚರಿಗಳು ನಡೆಯುವುದು ಮತ್ತು ಬಹುತೇಕ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುವುದು ಜನರು ನೀಡುವ ತೆರಿಗೆಯಿಂದ ಎನ್ನುವುದನ್ನು ಅರಿಯಬೇಕಾಗಿದೆ. ಇದನ್ನು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ನಂತರ ಅದರಲ್ಲಿಯೂ ಶಕ್ತಿಯೋಜನೆ ಅನುಷ್ಠಾನಕ್ಕೆ ಬಂದ ಹತ್ತು ತಿಂಗಳ(ಜೂನ್ 23, 2023 ರಿಂದ ಮೇ, 2024) ನಂತರದಲ್ಲಿ ರೂ. 98,081 ಕೋಟಿ ಜಿಎಸ್‌ಟಿ ಸಂಗ್ರಹವಾಗಿರುವುದರಿಂದ ತಿಳಿಯಬಹುದು. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ‘ನಮ್ಮ ಪಕ್ಷದ ಉಡುಗೊರೆಗಳು’, ‘ಮೋದಿ ಗ್ಯಾರಂಟಿ’, ‘ಸಿದ್ದರಾಮಯ್ಯ ಗ್ಯಾರಂಟಿ’ ಎಂದು ಬ್ರ್ಯಾಂಡ್ ಮಾಡುವ ಪ್ರವಚನದ ಪುನರುಚ್ಚರಣೆಗಳನ್ನು ಎಲ್ಲರೂ ಸೇರಿ ನಿಲ್ಲಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಎಚ್.ಡಿ.ಪ್ರಶಾಂತ್

contributor

Similar News