ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಗುರಿ: ಡಾ.ಅಜಯ್ ಧರಂ ಸಿಂಗ್

Update: 2024-09-01 07:07 GMT

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ, ಜೇವರ್ಗಿ ವಿಧಾನ ಸಭೆಯ ಶಾಸಕ ಡಾ.ಅಜಯ್ ಧರಂ ಸಿಂಗ್ ಅವರು ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ವಿಶೇಷ ಸಂದರ್ಶನದ ಆಯ್ದ ಭಾಗ ಇದಾಗಿದೆ.

ವಾ.ಭಾ: ಆರ್ಟಿಕಲ್ 371 ಜೆ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ವಿರೋಧ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ನೀವು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಏನು ಹೇಳುತ್ತೀರಿ?.

ಡಾ.ಅಜಯ್ ಧರಂ ಸಿಂಗ್: ಆರ್ಟಿಕಲ್ 371 ಜೆ ತಿದ್ದುಪಡಿಗಾಗಿ 40 ವರ್ಷಗಳ ಕಾಲ ಹೋರಾಟ ನಡೆದಿದೆ. ಅದರಲ್ಲಿ ಮುಖ್ಯವಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವಂತಹ ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆ ಇದೆ. ಆರ್.ಗುಂಡೂ ರಾವ್ ಸಿಎಂ ಆಗಿದ್ದಾಗ ನಮ್ಮ ತಂದೆಯವರ ನೇತೃತ್ವದಲ್ಲಿ ಧರಂ ಸಿಂಗ್ ಸಮಿತಿ ರಚನೆ ಮಾಡಿ, ಆ ಸಮಿತಿ ಕಲ್ಯಾಣ ಕರ್ನಾಟಕದ ಎಲ್ಲ ಕಡೆ ಸಂಚರಿಸಿ, ಸಮುದಾಯಗಳು ಹಿಂದುಳಿಯಲು ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಪಡೆದು ವರದಿ ಮಾಡಿತ್ತು. ಹೊಸದಾಗಿ ಕಲ್ಯಾಣ ಕರ್ನಾಟಕ ಮಂಡಳಿ ಸ್ಥಾಪನೆ ಆಗಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಈಗ ನಾವು ಈ ಮಂಡಳಿ ಮೂಲಕ ಹೆಚ್ಚು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ, ಮೀಸಲಾತಿ ಕೊಡಬೇಕೆಂದು ಕೇಳುತ್ತಿದ್ದೇವೆ.

ವಾ.ಭಾ: ಹೈದರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ ಅಂತ ಬದಲಾಯಿತು. ಆದರೆ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಈಗಿನ ಪರಿಸ್ಥಿತಿ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ ಸೇರಿದಂತೆ ಹಲವು ವಿಷಯಗಳಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿ ಹೊಂದಿದಂತೆ ಕಾಣುತ್ತಿಲ್ಲ. ಐದು ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟರೂ ಖರ್ಚಾಗುವುದು ಮೂರು ಸಾವಿರ ಕೋಟಿ ರೂ. ಎಂದಾದರೆ ಇದರಿಂದ ಮಂಡಳಿಯ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆಯಲ್ಲವೇ?

ಡಾ.ಅಜಯ್ ಧರಂ ಸಿಂಗ್: ಕಲ್ಯಾಣ ಕರ್ನಾಟಕಕ್ಕೆ ಮೀಸಲಿಟ್ಟ ಅನುದಾನದಲ್ಲಿ ಇತಿಹಾಸದಲ್ಲಿ ಐದು ಸಾವಿರ ಕೋಟಿ ಬಂದಿದ್ದು ಇದೇ ಮೊದಲು. ಅದು ಸಿದ್ದರಾಮಯ್ಯ ಅವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ. ಕಳೆದ ಬಾರಿ ಹಾಗೂ ಅದಕ್ಕಿಂತ ಹಿಂದಿನ ವರ್ಷ ಮೂರು ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಅಭಿವೃದ್ಧಿಗೆ ಬಳಸುತ್ತಿದ್ದೇವೆ. ಹಾಗಾಗಿ, ಅನುದಾನದ ಹಣ ಹಾಗೆಯೇ ಉಳಿದಿದೆ ಎಂಬ ಆರೋಪವನ್ನು ನಾನು ಒಪ್ಪುವುದಿಲ್ಲ. ಆದರೆ, ಈ ಬಾರಿ ಮಂಡಳಿ ರಚನೆ, ಅಂಗೀಕಾರ, ಸಿಎಂ ಹಾಗೂ ರಾಜ್ಯಪಾಲರ ಅಂಕಿತ, ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಜಾರಿ ಸೇರಿದಂತೆ ಎಲ್ಲ ಕಾರ್ಯಗಳು ಮುಗಿಯುವಾಗ ಡಿಸೆಂಬರ್ ಆಗಿತ್ತು. ಹಾಗಾಗಿ ನಮ್ಮ ಸರಕಾರಕ್ಕೆ ಸಿಕ್ಕಿದ್ದು ಸಣ್ಣ ಸಮಯವಾದ್ದರಿಂದ ಕೆಲಸಗಳು ತಡವಾಗಿದೆ. ಆದರೂ ಈ ಸಣ್ಣ ಕಾಲಾವಕಾಶದಲ್ಲಿಯೂ ಸುಮಾರು ಎರಡು ಸಾವಿರ ಕೋಟಿ ರೂ. ಖರ್ಚು ಮಾಡಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 2007ರಲ್ಲಿ ಧರಂ ಸಿಂಗ್ ಫೌಂಡೇಶನ್ ಸ್ಥಾಪಿಸಿ ತಾಲೂಕಿನಾದ್ಯಂತ ಉಚಿತ ಆ್ಯಂಬುಲೆನ್ಸ್ ಸೇವೆಯನ್ನೂ ಆರಂಭಿಸಿದ್ದೆವು. ನಾನು ಅಧ್ಯಕ್ಷನಾದ ಬಳಿಕ ಆರೋಗ್ಯ ಆವಿಷ್ಕಾರ ಎಂಬ ಕಾರ್ಯಕ್ರಮ ಮಾಡುತ್ತ್ತಿದ್ದೇವೆ. ಅದರಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಅರೋಗ್ಯ ಕೇಂದ್ರಗಳು, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು, ತಾಲೂಕು ಮಟ್ಟದಲ್ಲಿರುವಂತಹ ಆಸ್ಪತ್ರೆಗಳು, ಮಹಿಳೆಯರಿಗೆ ಅನುಕೂಲಕರ ಯೋಜನೆ ಹಮ್ಮಿಕೊಂಡಿದ್ದೇವೆ.

ವಾ.ಭಾ: ಕಲ್ಯಾಣ ಕರ್ನಾಟಕದ ಭಾಗ ದಲ್ಲಿ ಶಿಕ್ಷಣಕ್ಕಾಗಿ ನೀವು ಮಾಡಿರುವ ಅಭಿವೃದ್ಧಿ ಯೋಜನೆಗಳು ಯಾವುದು?.

ಡಾ.ಅಜಯ್ ಧರಂ ಸಿಂಗ್: ನಾನು ಅಧ್ಯಕ್ಷನಾದ ನಂತರ ಮೊದಲು ಪ್ರಾಮುಖ್ಯತೆ ಕೊಟ್ಟದ್ದು ಶಿಕ್ಷಣದ ವಿಚಾರಕ್ಕೆ. ಮೂರು ಸಾವಿರ ಕೋಟಿ ರೂ.ಯಲ್ಲಿ ಕನಿಷ್ಠ 25 ಪ್ರತಿಶತಃ ಹಣ ಈ ಭಾಗದ ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ, ಜಿಲ್ಲಾ ಮಂತ್ರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಶಿಕ್ಷಣಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ನಾನು ಹೇಳಿದ್ದೇನೆ.

ವಾ.ಭಾ: ರಾಜ್ಯಾದ್ಯಂತ ಸರಕಾರಿ ಶಾಲೆಗಳನ್ನು ನೋಡಿದರೆ ಗುಣಮಟ್ಟ, ಶಿಕ್ಷಕರ ಕೊರತೆ, ಸ್ವಂತ ಕಟ್ಟಡದ ಕೊರತೆ ಹಾಗೂ ಇತ್ಯಾದಿ ಸಮಸ್ಯೆಗಳಿವೆ. ಈ ಸಮಸ್ಯೆಗಳ ಬಗ್ಗೆ ಏನು ಹೇಳುತ್ತೀರಿ?.

ಡಾ.ಅಜಯ್ ಧರಂ ಸಿಂಗ್: ಶಿಕ್ಷಣ ಕ್ಷೇತ್ರವನ್ನು ಗಮನಿಸಿ, ಈ ಭಾಗದ ಸಮಸ್ಯೆಗಳನ್ನು ಅವಲೋಕಿಸಲು ಒಂದು ಎಕ್ಸ್‌ಪರ್ಟ್ ಕಮಿಟಿ ಮಾಡುತ್ತಿದ್ದೇವೆ. ಇದು ಕೇವಲ ಒಂದು ವರ್ಷದಲ್ಲಿ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳಲ್ಲ. ಮೂರ್ನಾಲ್ಕು ವರ್ಷಗಳು ಬೇಕಾಗಬಹುದು. ಮೂಲಸೌಕರ್ಯದ ಕೊರತೆ ಇದೆ. 9,249 ಶಾಲೆಗಳಲ್ಲಿ 7,658 ಶಾಲೆಗಳು ಸೋರುತ್ತಿವೆ. ಹಾಗಾಗಿ ಎಲ್ಲ ಶಾಲೆಗಳ ಸಮಸ್ಯೆಗಳನ್ನು ಒಂದೇ ಬಾರಿಗೆ ದುರಸ್ತಿ ಮಾಡುವುದು ಕಷ್ಟ. ಶಿಕ್ಷಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಜಂಟಿಯಾಗಿ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತೇವೆ. ಇನ್ನು ಶಿಕ್ಷಕರ ನೇಮಕಾತಿ ವಿಚಾರಕ್ಕೆ ಬಂದರೆ 2,618 ಅತಿಥಿ ಶಿಕ್ಷಕರನ್ನು ನಾವು ಮಂಡಳಿ ವತಿಯಿಂದ ನೇಮಕ ಮಾಡುತ್ತಿದ್ದೇವೆ. ಸರಕಾರದ ವತಿಯಿಂದ ಆರು ಸಾವಿರಕ್ಕೂ ಹೆಚ್ಚು ಖಾಯಂ ಶಿಕ್ಷಕರ ನೇಮಕಾತಿಯೂ ಸದ್ಯದಲ್ಲೇ ಆಗಲಿದೆ.

ವಾ.ಭಾ: ತಾವು ಸಚಿವ ಸ್ಥಾನಕ್ಕೆ ಆಕಾಂಕ್ಷಿ ಎಂದು ಒಮ್ಮೆ ಹೇಳಿದ್ದೀರಿ. ಈಗ ಸಚಿವ ಸಂಪುಟ ಪುನರ್‌ರಚನೆಯ ಚರ್ಚೆಗಳು ನಡೆಯುತ್ತಿವೆ. ಈಗ ಏನು ಹೇಳುತ್ತೀರಿ?.

ಡಾ.ಅಜಯ್ ಧರಂ ಸಿಂಗ್: ನಾನಂತೂ ಖಂಡಿತವಾಗಿಯೂ ನೂರಕ್ಕೆ ನೂರು ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ನಮ್ಮ ಪಕ್ಷದ ಸಿಎಂ ಹಾಗೂ ಎಲ್ಲರೂ ಆಶೀರ್ವಾದ ಮಾಡಿದರೆ ಖಂಡಿತವಾಗಿಯೂ ನಾನು ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ವಾ.ಭಾ: ಜಾತಿ ಜನಗಣತಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಡಾಖಂಡಿತವಾಗಿ ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಜಾತಿಗಣತಿ ನಡೆದು ವರದಿ ಸರಕಾರದ ಬಳಿ ಇದ್ದರೂ ಅದನ್ನು ಬಿಡುಗಡೆ ಮಾಡುತ್ತಲೇ ಇಲ್ಲ. ಈ ದ್ವಂದ್ವ ನಿಲುವಿನ ಬಗ್ಗೆ ಏನು ಹೇಳುತ್ತೀರಿ?.

ಡಾ.ಅಜಯ್ ಧರಂ ಸಿಂಗ್: ಜಾತಿಗಣತಿ ವರದಿ ಬಿಡುಗಡೆ ಆಗಬೇಕಾಗಿತ್ತು. ಬೇರೆ ಬೇರೆ ರೀತಿಯ ವಿರೋಧಗಳು ಬಂದಿದ್ದರಿಂದ ಅದು ಈವರೆಗೆ ಬಿಡುಗಡೆ ಆಗಿಲ್ಲ. ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯನವರು ಕೂಡಾ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಅದು ಬಿಡುಗಡೆ ಆಗುತ್ತದೆ ಎಂಬ ಭರವಸೆ ನನಗಿದೆ.

ವಾ.ಭಾ: ಬಿಜೆಪಿ ಭ್ರಷ್ಟಾಚಾರವನ್ನು ವಿರೋಧಿಸಿ ಅಧಿಕಾರಕ್ಕೆ ಬಂದಿದ್ದೀರಿ. ಯಾವುದನ್ನು ನೀವು ವಿರೋಧಿಸಿ ಅಧಿಕಾರಕ್ಕೆ ಬಂದಿದ್ದಿರೋ, ಅದರಲ್ಲೇ ನಿಮ್ಮ ಸರಕಾರ ಈಗ ಸಿಕ್ಕಿ ಹಾಕಿಕೊಂಡಿದೆ. ಏನು ಹೇಳುತ್ತೀರಿ?.

ಡಾ.ಅಜಯ್ ಧರಂ ಸಿಂಗ್: ನಾವು ಅಧಿಕಾರಕ್ಕೆ ಬಂದಿದ್ದು ಅಭಿವೃದ್ಧಿಯ ಹೆಸರಿನಲ್ಲಿ. ಐದು ಗ್ಯಾರಂಟಿ ಕೊಡುತ್ತೇವೆ ಎಂದಿದ್ದೆವು. ಅವುಗಳನ್ನು ಸಂಪೂರ್ಣ ಜಾರಿ ಮಾಡಿದ್ದೇವೆ. ವಾಲ್ಮೀಕಿ ಹಗರಣದ ತನಿಖೆ ನಡೆಯುತ್ತಿದೆ. ಅದರಲ್ಲಿ ಸರಕಾರದ ಪಾತ್ರವಿಲ್ಲ. ಕೆಲವು ಅಧಿಕಾರಿಗಳು ತಮ್ಮ ಅಧಿಕಾರದ ದುರ್ಬಳಕೆ ಮಾಡಿರಬಹುದು. ಅದರ ವಿಚಾರಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಸತ್ಯ ಇಂದಲ್ಲ ನಾಳೆ ಹೊರ ಬರುತ್ತೆ. ಬಿಜೆಪಿಯವರು ಸಿಎಂ ಸಿದ್ದರಾಮಯ್ಯರನ್ನು ಸಿಲುಕಿಸಲು, ಕೆಳಗಿಳಿಸಲು ನೋಡಿದ್ರು. ಆದರೆ ಏನೂ ಸಿಗಲಿಲ್ಲ. ಇನ್ನು ಮುಡಾ ವಿಚಾರ. ಮೂರು ಎಕರೆ ಹದಿನಾರು ಗುಂಟೆ ಜಾಗದ ಹೆಸರಲ್ಲಿ ಬಿಜೆಪಿ ಏನೆಲ್ಲಾ ರಾಜಕೀಯ ಮಾಡಿತು. ಸಿದ್ದರಾಮಯ್ಯ ಅವರ ಬಳಿಕ ಇಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದರಲ್ಲವೇ? ಆಗ ಯಾಕೆ ಈ ವಿಚಾರ ಎತ್ತಿಲ್ಲ? ಪ್ರಾಮಾಣಿಕ ಸಿಎಂ ಸಿದ್ದರಾಮಯ್ಯರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಹಾಗಾಗಿ ಬಿಜೆಪಿ ಈಗ ಹೇಗಾದರೂ ಸಿಎಂ ಹೆಸರನ್ನು ಕೆಡಿಸಲು ಪ್ರಯತ್ನ ಮಾಡುತ್ತಿದೆ. ಜನರ ನಡುವೆ ಸುಳ್ಳಾಭಿಪ್ರಾಯಗಳನ್ನು ಬಿತ್ತುತ್ತಿದ್ದಾರೆ. ಅದಕ್ಕಾಗಿಯೇ ನಾವು ಜನಾಂದೋಲನ ಕಾರ್ಯಕ್ರಮ ಮಾಡಿರುವುದು.

ವಾ.ಭಾ: ಬಿಜೆಪಿ ಕೋಮು ರಾಜಕೀಯ ಮಾಡುತ್ತೆ ಎಂಬುದು ನಿಮ್ಮ ಆರೋಪ. ಆದರೆ, ನೀವು ತುಷ್ಟೀಕರಣ ರಾಜಕಾರಣ ಮಾಡುತ್ತೀರಿ ಎಂಬ ಆರೋಪ ಬಿಜೆಪಿಯದ್ದು. ಏನು ಹೇಳುತ್ತೀರಿ?.

ಡಾ.ಅಜಯ್ ಧರಂ ಸಿಂಗ್: ಲೋಕಸಭೆ, ವಿಧಾನಸಭೆ ಯಾವುದೇ ಚುನಾವಣೆ ಬರುವಾಗಲೂ ಧ್ರುವೀಕರಣ ಮಾಡುವುದೊಂದೇ ಬಿಜೆಪಿಯ ಕೆಲಸ. ಅದಕ್ಕಾಗಿ ಬೊಮ್ಮಾಯಿಯವರು ತಮ್ಮ ಹಗರಣವನ್ನು ಮುಚ್ಚಿ ಹಾಕಲು ಹಿಜಾಬ್ ಪ್ರಕರಣ, ಹಲಾಲ್ ಕಟ್ ತಂದರು. ಮತ್ತೂ ಮುಂದುವರಿದು ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡಿದ್ದಾರೆ. ಅವರ ರಾಜಕೀಯ ಇರುವುದೇ ಧ್ರುವೀಕರಣದ ಮೇಲೆ. ಕೇಂದ್ರದಲ್ಲೂ ಮೊದಲ ಹಂತದ ಚುನಾವಣೆ ನಡೆದ ಮೇಲೆ ಮೋದಿಯವರು ಮಾಡಿದ್ದೂ ಇದನ್ನೇ. ಎಲ್ಲರನ್ನೂ ಜಾತಿ, ಧರ್ಮ ನೋಡದೆ ಒಗ್ಗಟ್ಟಾಗಿ ಕೊಂಡೊಯ್ಯುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಅದನ್ನು ಬಿಜೆಪಿ ತುಷ್ಟೀಕರಣ ಅನ್ನುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿರವಾಗಿರುತ್ತೆ. ಬಿಜೆಪಿಯ ಕೀಳು ಮಟ್ಟದ ರಾಜಕಾರಣ ಮುಂದುವರಿದರೆ ಜನರೇ ತಕ್ಕ ಪಾಠ ಕಳಿಸುತ್ತಾರೆ. ಮುಂದಿನ ಬಾರಿಯೂ ನಾವೇ ಅಧಿಕಾರದಲ್ಲಿರುತ್ತೇವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ

contributor

Contributor - ಬರಹ ರೂಪ: ನಿಝಾಮ್ ಅನ್ಸಾರಿ

contributor

Similar News