ಉಗ್ರಗಾಮಿಗಳ ದುಷ್ಕೃತ್ಯ, ಕೇಂದ್ರ ಸರಕಾರದ ವೈಫಲ್ಯ ಎರಡನ್ನೂ ಅತ್ಯುಗ್ರವಾಗಿ ಖಂಡಿಸಲೇಬೇಕು
Photo credit: PTI
ಅನ್ನ ತಿನ್ನುವವರೆಲ್ಲರೂ ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಬಲಿ ಪಡೆದ ಪಾಕ್ ಉಗ್ರಗಾಮಿಗಳ ದುಷ್ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಲೇಬೇಕು. ಅದರ ಜೊತೆಯಲ್ಲಿ ಆ ಅಮಾಯಕ ಪ್ರವಾಸಿಗರಿಗೆ ರಕ್ಷಣೆ ನೀಡಲಾಗದೆ ದುರುಳರ ಕೈಗೆ ಅವರನ್ನು ಒಪ್ಪಿಸಿದ ಕೇಂದ್ರ ಸರಕಾರದ ವೈಫಲ್ಯವನ್ನೂ ಅತ್ಯುಗ್ರವಾಗಿ ಖಂಡಿಸಲೇಬೇಕು.
ಈ ಖಂಡನೆ ನಿಮ್ಮಿಂದ ಬರದೆ ಇದ್ದರೆ ಪ್ರಾಣ ಕಳೆದುಕೊಂಡವರಿಗೆ ಮತ್ತು ನೊಂದ ಕುಟುಂಬಕ್ಕೆ ನೀವು ಬಗೆಯುವ ದ್ರೋಹವಾಗುತ್ತದೆ. ಇದನ್ನು ಗಟ್ಟಿಯಾಗಿ ಹೇಳಬೇಕಾಗಿರುವ ಮಾಧ್ಯಮಗಳು ಪ್ರತಿಕಾರದ ರಣಕೇಕೆ ಹಾಕುತ್ತಿವೆಯೇ ಹೊರತು ಯಾರೂ ಕೂಡಾ ಸರಕಾರದ ಮೋದಿ-ಶಾ ಜೋಡೆತ್ತುಗಳ ವೈಫಲ್ಯದ ಚರ್ಚೆಯನ್ನು ಮಾಡುತ್ತಿಲ್ಲ.
ನಾನು ತಪ್ಪಿ ಯಾವುದೋ ಒಂದು ಕನ್ನಡ ಟಿವಿ ಚಾನೆಲ್ ನೋಡುತ್ತಿದ್ದೆ. ಅವನ್ಯಾವನೋ ಪೆಂಗ ‘’ಉಗ್ರಗಾಮಿಗಳ ಮನೆಗೆ ಹೋಗಿ ಅವರ ಹೆಂಡತಿ ಮಕ್ಕಳನ್ನು ಕೊಲ್ಲಬೇಕು" ಎಂದು ಕರೆ ಕೊಡುತ್ತಾನೆ. ಇವನು ಹೊಟ್ಟೆಗೆ ಏನು ತಿನ್ನುತ್ತಾನೆ? ಆ ದುಷ್ಟಾತಿದುಷ್ಟ ಉಗ್ರಗಾಮಿಗಳೇ ಮಹಿಳೆಯರು ಮತ್ತು ಮಕ್ಕಳನ್ನು ಬಿಟ್ಟುಬಿಟ್ಟಿದ್ದಾರೆ, ಅವರನ್ನು ಮೀರಿಸಿದ ಈ ಪತ್ರಕರ್ತನ ಮೆದುಳೊಳಗೆ ಎಂತಹ ದುಷ್ಟತನದ ಕಿಚ್ಚು ಇರಬಹುದು!
ಪಹಲ್ಗಾಮ್ ಹತ್ಯಾಕಾಂಡಕ್ಕೆ ಕಾರಣ ಕೇಂದ್ರ ಸರಕಾರದ ಬೇಹುಗಾರಿಕಾ ಸಂಸ್ಥೆಗಳ ವೈಫಲ್ಯ ಎನ್ನುವುದಕ್ಕೆ ದೊಡ್ಡಮಟ್ಟದ ತನಿಖೆ ನಡೆಸಬೇಕಾದ ಅಗತ್ಯ ಇಲ್ಲ. ಹಿಂದಿನ ಸರಕಾರದ ಕಾಲದಲ್ಲಿ ಬೇಹುಗಾರಿಕೆಯ ವೈಫಲ್ಯ ನಡೆದಿಲ್ಲವೇ ಎಂದು ಯಾರಾದರೂ ಕೇಳಿದರೆ ಖಂಡಿತ ಆಗಿದೆ ಎನ್ನುವುದೇ ನನ್ನ ಉತ್ತರ.
ಭಾರತ-ಚೀನಾ ಯುದ್ದದ ಕಾಲದಿಂದಲೂ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಯುದ್ದ ಮತ್ತು ಈ ರೀತಿಯ ಆಂತರಿಕ ಭಯೋತ್ಪಾದನೆಯ ಘಟನೆಗಳಲ್ಲಿ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯಲ್ಲಿನ ಲೋಪದ ಪಾತ್ರವೇ ಪ್ರಧಾನವಾದುದು. ನಿರಾಕರಿಸಲಾಗದ ದಾಖಲೆಗಳಲ್ಲಿನ ಸತ್ಯ ಸಂಗತಿ ಏನೆಂದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ಉಗ್ರರ ಅಟ್ಟಹಾಸ ಮೇರೆ ಮೀರುವುದು ಮತ್ತು ಪ್ರತಿ ಘಟನೆಗಳಲ್ಲಿಯೂ ಗೂಢಚರ್ಯೆಯ ವೈಫಲ್ಯ ಎದ್ದು ಕಾಣುವುದು.
ಕಾರ್ಗಿಲ್‌ನಲ್ಲಿ ಪಾಕ್ ಸೈನಿಕರ ನುಸುಳುವಿಕೆಯಿಂದ ಹಿಡಿದು ಸಂಸತ್, ಅಕ್ಷರಧಾಮದ ಮೇಲಿನ ದಾಳಿ, ಪುಲ್ವಾಮ ಉರಿ, ಪಠಾಣ್ ಕೋಟ್, ಪಹಲ್ಗಾಮ್ ವರೆಗೆ ಬಿಜೆಪಿ ಸರಕಾರ ಇದ್ದಾಗಲೇ ಭಯೋತ್ಪಾದನೆಯ ಘಟನೆಗಳು ಹೆಚ್ಚು ನಡೆದಿರುವುದು ಮತ್ತು ಅವೆಲ್ಲವೂ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೇಯ ವೈಫಲ್ಯದಿಂದಲೇ ಸಾಧ್ಯವಾಗಿರುವುದು.
ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು 20 ಭಾರತೀಯ ಸೈನಿಕರ ತಲೆ ಕಡಿದು ಹತ್ಯೆಮಾಡಿದರು. ಒಂದು ತಲೆಗೆ ಅವರ ಹತ್ತು ತಲೆ ಬಿಡಿ, ಕಡಿದ ನಮ್ಮವರ ತಲೆಗಳನ್ನು ತರಲು ಹೆಣಗಾಡಬೇಕಾಯಿತು. ಈಗಲೂ ಅವರು ಅಕ್ಷಯ್ ಚೀನಾದಲ್ಲಿ ಭಾರತದ ಗಡಿಯೊಳಗಿನ 38,000 ಕಿ.ಮೀ. ಪ್ರದೇಶವನ್ನು ಕಬ್ಜಾ ಮಾಡಿ ಕೂತಿದ್ದಾರೆ. ಚೀನಾದ ರೋಮ ಅಲುಗಾಡಿಸಲು ನಮಗಾಗಲಿಲ್ಲ. ಎದೆ ಬಡಿದುಕೊಂಡು ಅಬ್ಬರಿಸಿದ್ದೇ ಬಂತು, ಅವರು ಕ್ಯಾರೇ ಅನ್ನಲಿಲ್ಲ. ಇದರ ಬಗ್ಗೆ ಮಾತನಾಡಿದರೆ ದೇಶದ್ರೋಹ.
ಪಹಲ್ಗಾನ್ ಹತ್ಯಾಕಾಂಡಕ್ಕೆ ಪ್ರತಿಕಾರ ಆಗಲೇಬೇಕು, ಆಗುತ್ತದೆ ಕೂಡಾ. ಆದರೆ ಅಲ್ಲಿ ಎಲ್ಲವೂ ಸುರಕ್ಷಿತವಾಗಿದೆ, ಕಾಶ್ಮೀರ ಮತ್ತೆ ಭೂಸ್ವರ್ಗ ಆಗಿದೆ ಎಂದು ಪ್ರಚಾರ ಮಾಡಿ ದೂರದ ಊರುಗಳಿಂದ ಅಮಾಯಕ ಪ್ರವಾಸಿಗರನ್ನು ಕರೆಸಿ ದುರುಳರ ಕೈಗೆ ಒಪ್ಪಿಸಿದ ಸರಕಾರದ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು?
ಈ ಹೊಣೆಯನ್ನು ಜವಾಹರಲಾಲ್ ನೆಹರೂ ಇಲ್ಲವೇ ರಾಹುಲ್ ಗಾಂಧಿ ಹೆಗಲ ಮೇಲೆ ಹೊರಿಸಲಿಕ್ಕೆ ಆಗುವುದಿಲ್ಲ. ಅದನ್ನು ಪ್ರಧಾನಿ ನರೇಂದ್ರಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರೇ ವಹಿಸಿಕೊಳ್ಳಬೇಕು. ಇವರು ರಾಜೀನಾಮೆ ಕೊಡುವುದೇನು ಬೇಡ, ಕನಿಷ್ಠ ಪ್ರಾಣ ಕಳೆದುಕೊಂಡ ಕುಟುಂಬದ ಎದುರು ಕೈಮುಗಿದು ‘’ ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ’ ಎಂದಾದರೂ ಹೇಳಬೇಕಲ್ಲವೇ?
ಇಬ್ಬರದ್ದೂ ತಪ್ಪು, ಆದರೆ ಕಾಂಗ್ರೆಸ್ ಪಕ್ಷಕ್ಕೆ ತನ್ನ ತಪ್ಪನ್ನು ಮರೆಮಾಚಲು ದಾರಿನೇ ಇರಲಿಲ್ಲ, ಬಿಜೆಪಿ ಮಾತ್ರ ಹಿಂದುತ್ವ, ದೇಶಭಕ್ತಿ ಮೊದಲಾದ ಮುಖವಾಡಗಳನ್ನು ಹಾಕಿಕೊಂಡು ತನ್ನ ವೈಫಲ್ಯವನ್ನು ಮರೆ ಮಾಚುತ್ತಿದೆ. ಈ ಮುಖವಾಡವನ್ನು ಕಿತ್ತು ಬಿಸಾಡಬೇಕಾದ ಮಾಧ್ಯಮಗಳು ಅವರ ತೊಡೆಯೇರಿ ಕುಳಿತಿವೆ.
ನಾನು ಇಷ್ಟು ಹೇಳಿದ ಮಾತ್ರಕ್ಕೆ ಗೂಢಚರ್ಯೆ ವೈಫಲ್ಯವನ್ನು ಪ್ರಶ್ನಿಸಲು ನೀನು ಯಾರು? ನೀನೊಬ್ಬ ದೇಶದ್ರೋಹಿ ಎಂದೆಲ್ಲ 2 ರುಪೀಸ್ ಜೀತದಾಳುಗಳು ಚೀರಾಡಬಹುದು. ಅವರೇನಾದರೂ ಓದು-ಬರಹ ಗೊತ್ತಿದವರಾಗಿದ್ದರೆ ಕಣ್ತೆರೆದು ನಾನು ಯುಪಿಎ ಕಾಲದಲ್ಲಿ ಭದ್ರತಾ ಮತ್ತು ಬೇಹುಗಾರಿಕೆಯ ವೈಫಲ್ಯದ ಬಗ್ಗೆ ಪ್ರಜಾವಾಣಿ ಪತ್ರಿಕೆಗೆ ಬರೆದಿದ್ಣ ಅಂಕಣಗಳ ಮೇಲೆ ಒಮ್ಮೆ ಕಣ್ಣಾಡಿಸಿ ಎಂದಷ್ಟೇ ಹೇಳುವೆ. ಭಾರತ ಮಾತೆಗೆ ಜಯವಾಗಲಿ.