ಎನ್‌ಎಂಸಿಯ ಅವಾಂತರಗಳು
ಎನ್‌ಎಂಸಿಯು ಸರ್ವಜನಾಂಗದವರು, ಸರ್ವಧರ್ಮೀಯರು, ಎಲ್ಲ ಪ್ರಕಾರದ ವೈದ್ಯರು ಒಪ್ಪುವಂಥ ಲಾಂಛನ ಮೂಡಿಬರಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ವಿಚಾರ ವಿನಿಮಯ ಮಾಡಿ ಲಾಂಛನ ವಿನ್ಯಾಸಗೊಳಿಸಲಿ. ಏಕೆಂದರೆ ಇದು ವೈದ್ಯಕೀಯ ವೃತ್ತಿ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ನಿಯಂತ್ರಿಸುವ ದೇಶದ ಅತ್ಯುನ್ನತ ಸಂಸ್ಥೆ. ಆ ಸಂಸ್ಥೆಯ ಘನತೆ, ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಲಿ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಇತ್ತೀಚೆಗೆ ಒಂದಿಲ್ಲೊಂದು ವಿಷಯದಿಂದ ಸುದ್ದಿಯಲ್ಲಿ ಇರುತ್ತದೆ. ಮೊದಲು ಹಿಪ್ಪೋಕ್ರೆಟಿಸ್ ಪ್ರತಿಜ್ಞಾವಿಧಿಯನ್ನು ತಿರಸ್ಕರಿಸಿ, ಮಹರ್ಷಿ ಚರಕ ಶಪಥ ತರಲು ಹವಣಿಕೆ ಹಾಕಿ, ಎಲ್ಲಡೆ ಪ್ರತಿರೋಧ ವ್ಯಕ್ತವಾದಾಗ ಅದರಿಂದ ಹಿಂದೆ ಸರಿಯಿತು. 2022ರಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ‘ಯೋಗ ’ವನ್ನು ಪಠ್ಯಕ್ರಮದ ಕಡ್ಡಾಯ ಭಾಗವಾಗಿ ಸುತ್ತೋಲೆ ಹೊರಡಿಸಿತು. ವ್ಯವಸ್ಥೆಯನ್ನು ಕೆಡಿಸುವ ಧೋರಣೆಯನ್ನೇ ಎನ್‌ಎಂಸಿ ಮೈಗೂಡಿಸಿ ಕೊಂಡಂತಿದೆ. ನೀಟ್ ಪರೀಕ್ಷೆ ವಿಷಯದಲ್ಲಿ ಮೆರಿಟನ್ನು ಗಾಳಿಗೆ ತೂರಿ, ನೀಟ್ ಪರೀಕ್ಷೆಗೆ, ಹಾಜರಾಗಿ ಅರ್ಹತೆಯ ಅಂಕ ಪಡೆಯದವರೂ ಸ್ನಾತಕೋತ್ತರ ಸೀಟ್ ಪಡೆಯಬಹುದೆಂದಿತು. ಸರಕಾರ ಮತ್ತು ಎನ್‌ಎಂಸಿ ಅರ್ಹತೆಯ ಅಂಕಗಳನ್ನು ಶೇ.0ಗೆ ಇಳಿಸಿದ್ದು ವೈದ್ಯಕೀಯ ಶಿಕ್ಷಣ ಗುಣಮಟ್ಟವನ್ನು ಹಾಳುಮಾಡಿದಂತಾಗಿದೆ.
ಭಾರತೀಯ ವೈದ್ಯಕೀಯ ಸಂಘ ಇದರ ವಿರುದ್ಧ ಸಿಡಿದೆದ್ದಾಗ, ಇದು ನಾನ್ ಕ್ಲಿನಿಕಲ್ ವಿಷಯಗಳಿಗೆ ಮಾತ್ರ ಸೀಮಿತ ಎಂದು ಸಬೂಬು ಹೇಳಿತು. ವೈದ್ಯಕೀಯ ಕಾಲೇಜುಗಳಲ್ಲಿ ನಾನ್ ಕ್ಲಿನಿಕಲ್ ವಿಷಯ ಕಲಿಸುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಇರುವುದರಿಂದ ಈ ನಿರ್ಧಾರ ಕೈಕೊಳ್ಳಲಾಗಿದೆ ಎಂದಿತು. ನೆನಪಿಡಿ ನಾನ್ ಕ್ಲಿನಿಕಲ್ ಮೂಲ ವಿಷಯಗಳ ಮೇಲೆ ವೈದ್ಯಕೀಯ ಶಿಕ್ಷಣದ ಭದ್ರ ಬುನಾದಿಯಾಗುವುದು. ಇನ್ನು ಇಂತಹ ಶಿಕ್ಷಕರ ಕೈಯಲ್ಲಿ ಕಲಿತ ವೈದ್ಯರಿಂದ, ಸಮಾಜ ಇನ್ನೆಂಥ ತೊಂದರೆಗಳನ್ನು ಎದುರಿಸಲು ಸಜ್ಜಾಗಬೇಕಾಗುವುದೋ ಎಂಬ ಜನಾಭಿಪ್ರಾಯ ಮೂಡಿದಾಗ ಮೌನಕ್ಕೆ ಜಾರಿತು!
ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಪ್ರಾರಂಭಿಸಬೇಕೆಂಬ ಸರಕಾರದ ಧ್ವನಿಗೆ ತಾನೂ ಧ್ವನಿಗೂಡಿಸಿ ಅವಸರದಲ್ಲಿ ಹಿಂದಿಯಲ್ಲಿ ಬರೆದ ಅಂಗರಚನಾಶಾಸ್ತ್ರ(Anatomy), ಶರೀರಶಾಸ್ತ್ರ (Physiology) ಇತ್ಯಾದಿ ಪಠ್ಯಪುಸ್ತಕಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತು. ಅಷ್ಟೇ ಅಲ್ಲ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹಿಂದಿಯಲ್ಲಿ ಪ್ರಾಯೋಗಿಕವಾಗಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅನುಮತಿಯನ್ನು ಕೊಟ್ಟಿತು. ಕಾಲೇಜು ಪ್ರಾರಂಭವಾಯಿತು ಕೂಡ. ಹಿಂದಿಯಲ್ಲಿ ಪ್ರಕಟವಾದ ಪುಸ್ತಕಗಳು ಸರಿಯಿಲ್ಲ ಎಂಬುದರ ಅರಿವು ಜನರಿಗಾಗಲು ಬಹಳ ಸಮಯ ಹಿಡಿಯಲಿಲ್ಲ.
ಇತ್ತೀಚೆಗೆ ದೇಶದ ಎಲ್ಲ ವೈದ್ಯರು ಜನೆರಿಕ್ ಔಷಧಿಗಳನ್ನೇ ಕಡ್ಡಾಯವಾಗಿ ಬರೆಯಬೇಕು. ತಪ್ಪಿದಲ್ಲಿ ದಂಡ ಹಾಕಲಾಗುವುದು. ಅಷ್ಟೇ ಅಲ್ಲ ಲೈಸೆನ್ಸನ್ನು ರದ್ದು ಮಾಡಲಾಗುವುದು ಎಂಬ ಸುತ್ತೋಲೆ ಹೊರಡಿಸಿತು. ಇದಕ್ಕೆ ಸರಕಾರವೂ ತಲೆದೂಗಿತು. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಯಿತು. ಜನೆರಿಕ್ ಔಷಧ ಬರೆಯಲು ವೈದ್ಯರ ತಕರಾರೇನೂ ಇಲ್ಲ. ಆದರೆ, ಔಷಧಿಗಳ ಗುಣಮಟ್ಟವನ್ನು ಮೊದಲ ಆದ್ಯತೆಯ ಮೇಲೆ ಪರಿಶೀಲಿಸಿ, ಔಷಧ ಉತ್ಪಾದಕರಿಗೆ ನಿರ್ದೇಶನ ನೀಡಬೇಕಿತ್ತು. ಈ ಪೂರ್ವ ತಯಾರಿ ಅತೀ ಮುಖ್ಯ ಎಂಬುದು ಎನ್‌ಎಂಸಿ ತಲೆಗೆ ಹೊಳೆಯದೇ ಇದ್ದದೊಂದು ದುರಂತ!
ಜನೆರಿಕ್ ಔಷಧಗಳು ಮುಂಬೈ, ಗುಜರಾತಿನಲ್ಲಿ ಶೇಟ್‌ಜಿಯವರ ಹಿತ್ತಲಲ್ಲಿ ತಯಾರಾಗುತ್ತವೆ. ಬ್ರಾಂಡೆಡ್ ಔಷಧಿಗಳ ನೆತ್ತಿಯ ಮೇಲೆ ಹೊಡೆಯುವಂತಹ ಪ್ಯಾಕ್‌ಗಳಲ್ಲಿ ಮಾರುಕಟ್ಟೆಗೆ ಬರುತ್ತವೆ. ಇವುಗಳನ್ನು ಸೇವಿಸಿದ ರೋಗಿಗಳು ಗುಣಮುಖವಾಗದಿದ್ದಲ್ಲಿ, ಬೇರೆ ದುಷ್ಪರಿಣಾಮ ಕಾಣಿಸಿಕೊಂಡಲ್ಲಿ ವೈದ್ಯರ ಮಾನ ಹರಾಜಾಗುವಲ್ಲಿ ಸಂಶಯವೇ ಇಲ್ಲ. ವೈದ್ಯ ರೋಗಿಗಳ ಸಂಬಂಧದ ಕಂದಕ ಇನ್ನಷ್ಟು ದೊಡ್ಡದಾಗಿ, ವೈದ್ಯರ ಮೇಲಿನ ಹಲ್ಲೆಗಳ ಪ್ರಸಂಗ ಮತ್ತಷ್ಟು ಹೆಚ್ಚಾಗುವಲ್ಲಿ ಸಂದೇಹವೇ ಇಲ್ಲ. ವೈದ್ಯರ ಹಿತಾಸಕ್ತಿ, ಗುಣಮಟ್ಟದ ವೈದ್ಯಕೀಯ ಶಿಕ್ಷಣ ನಿಯಂತ್ರಿಸುವ ದೇಹದ ಅತ್ಯುನ್ನತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಎನ್‌ಎಂಸಿ ಹೀಗೆ ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ?
ಈಗ ಎನ್‌ಎಂಸಿ ಮತ್ತೆ ಸುದ್ದಿಯಲ್ಲಿದೆ. ರಾಷ್ಟ್ರೀಯ ಲಾಂಛನವನ್ನು ತೆಗೆದು ಹಾಕಿದೆ. ಆ ಜಾಗದಲ್ಲಿ ಭಾರತೀಯ ಆಯುರ್ವೇದ ವೈದ್ಯ ಪದ್ಧತಿಯ ಪಿತಾಮಹ ಧನ್ವಂತರಿಯ ಚಿತ್ರವನ್ನು ಸೇರಿಸಿದೆ. ಈ ಬದಲಾವಣೆಯನ್ನು ಭಾರತೀಯ ವೈದ್ಯಕೀಯ ಸಂಘ ಕೇರಳ ರಾಜ್ಯ ಶಾಖೆ ಪ್ರಶ್ನಿಸಿದಾಗ, ಈ ಲಾಂಛನವನ್ನು ಕಳೆದ ಒಂದು ವರ್ಷದಿಂದ ಬಳಸುತ್ತಿದ್ದೇವೆ. ಆಗ ಧನ್ವಂತರಿಯ ಚಿತ್ರ ಕಪ್ಪು ಬಿಳುಪಿನ ರೇಖಾ ಚಿತ್ರವಾಗಿತ್ತು. ಪ್ರಿಂಟ್ ಔಟ್‌ಗಳಲ್ಲಿ ಕಾಣುತ್ತಿರಲಿಲ್ಲ. ಈಗ ಅದಕ್ಕೆ ಬಣ್ಣ ಹಾಕಿದ್ದು ಎದ್ದು ಕಾಣುತ್ತಿದೆ ಎಂದು ಎನ್‌ಎಂಸಿ ಹೇಳುತ್ತಿದೆ.
ಅಲೋಪತಿ ವೈದ್ಯರೆಲ್ಲ ಕಲಿತದ್ದು ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಯ ಶಿಕ್ಷಣವನ್ನು. ಭಾರತದಲ್ಲಿ ಉಳಿದ ಪದ್ಧತಿಗಳಲ್ಲಿ ಶಿಕ್ಷಣ ಪಡೆದು, ಬಹುತೇಕರು ಪ್ರಾಕ್ಟೀಸ್ ಮಾಡುವುದು ಮಾತ್ರ ಅಲೋಪತಿಯನ್ನೇ. ಅಲೋಪತಿ ವೈದ್ಯರೆಲ್ಲ ಹಿಪ್ಪೋಕ್ರೆಟಿಸ್ ಪ್ರತಿಜ್ಞಾ ವಿಧಿ ತೆಗೆದುಕೊಳ್ಳುತ್ತಾರೆ.
ಭಾರತದ ಅಲೋಪತಿ ವೈದ್ಯರ ಲಾಂಛನ ಒಂದು ಕೋಲಿನ ಸುತ್ತ ಎರಡು ಹಾವು ಸುತ್ತಿಕೊಂಡಿರುವುದು. ಹಳೆಯಕಾಲದಿಂದಲೂ ವೈದ್ಯ ವೃತ್ತಿಬಾಂಧವರು, ವೈದ್ಯಶಾಸ್ತ್ರ ಇದನ್ನು ವೈದ್ಯಕೀಯ ಲಾಂಛನ ಎಂದು ಒಪ್ಪಿಕೊಂಡು ಬಂದಿದೆ ಮತ್ತು ಬಳಸುತ್ತಿದೆ ಕೂಡ. ಕೋಲಿಗೆ ಸುತ್ತಿಕೊಂಡ ಒಂದೇ ಹಾವಿನ ಚಿನ್ಹೆಯು ಗ್ರೀಕ್ ಪುರಾಣದ ಪ್ರಕಾರ ಅಪಲೊ ಮಗನಾದ
ಅಸ್‌ಕ್ಲೆಎಪಿಯಸ್ ಹಿಡಿದು ಕೊಳ್ಳುತ್ತಿದ್ದ ಲಾಂಛನ. ವೈದ್ಯರಾಗಿದ್ದ ಅಸ್ಕ್ಲಪಿಸ್‌ಗೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯಿತ್ತು. ಹಾವಿಗೆ ವಯಸ್ಸಾದಂತೆ ಶಕ್ತಿ ಕುಗ್ಗುವುದು ಸಹಜ. ಆದರೆ ಪೊರೆ ಕಳಚಿದ ಮೇಲೆ ನವಶಕ್ತಿ ಪಡೆಯುತ್ತದೆ. ರೋಗಿಯು ನವಶಕ್ತಿ ಪಡೆಯುವುದನ್ನು ಇದು ಸಂಕೇತಿಸುವುದರಿಂದ ಈ ಲಾಂಛನ ವೈದ್ಯ ವೃತ್ತಿಗೆ ಸರಿ ಹೊಂದುತ್ತದೆ ಎಂದು ಭಾವಿಸಲಾಗಿತ್ತು. ಅಷ್ಟೇ ಅಲ್ಲ, ಅದನ್ನು ಪ್ರಪಂಚದ ಅಲೋಪತಿ ವೈದ್ಯರೆಲ್ಲರೂ ಒಪ್ಪಿಕೊಂಡಿದ್ದರು.
ರಾಜ್ಯ ಸಭೆಯ ಶೂನ್ಯ ವೇಳೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಲಾಂಛನವನ್ನು ಬದಲಾಯಿಸಿದ ವಿಷಯದ ಕುರಿತು ಅಧಿವೇಶನದಲ್ಲಿ ಪ್ರಶ್ನೆ ಎತ್ತಿದ ಟಿಎಂಸಿಯ ಶಂತನು ಸೇನ್, ರಾಷ್ಟ್ರೀಯ ವೈದ್ಯಕೀಯ ಆಯೋಗದ ಈ ಹಿಂದಿನ ಲಾಂಛನವನ್ನು ಮರುಸ್ಥಾಪಿಸುವಂತೆ ಆಗ್ರಹಿಸಿದ್ದರು. ವೈದ್ಯಕೀಯ ಸಮುದಾಯಗಳ ಆಕ್ಷೇಪಗಳ ಹೊರತಾಗಿಯೂ, 64 ವರ್ಷಗಳ ಹಳೆಯ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ-1956ನ್ನು ರದ್ದುಗೊಳಿಸಿ 2020ನೇ ಸೆಪ್ಟಂಬರ್ 25ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೆ ತರಲಾಯಿತು ಎಂದು ಅವರು ಹೇಳಿದ್ದರು.
ಈಗ ಧನ್ವಂತರಿಯನ್ನೇ ವೈದ್ಯ ಸಮೂಹ ಗುಣಪಡಿಸುವ ದೇವರೆಂದು ಒಪ್ಪಿಕೊಳ್ಳಬೇಕು ಎಂಬ ಒತ್ತಡವನ್ನು ಈ ಲಾಂಛನದ ಮೂಲಕ ಹೇರುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಧನ್ವಂತರಿ ವಿಷ್ಣುವಿನ ಅವತಾರ, ಆಯುರ್ವೇದ ಶಾಸ್ತ್ರದ ಅಧಿದೇವತೆ ಎಂದು ಹಿಂದೂ ಪುರಾಣ ಹೇಳುತ್ತದೆ. ಅಂದರೆ, ಎನ್‌ಎಂಸಿ ಏಕಪಕ್ಷೀಯವಾಗಿ ಆಯುರ್ವೇದದ ಬೆಂಬಲಕ್ಕೆ ನಿಲ್ಲುತ್ತಿರುವುದು ಸ್ಫಟಿಕದಷ್ಟೇ ಸ್ಪಷ್ಟ. ಕೇಂದ್ರ ಸರಕಾರ ಮತ್ತು ಎನ್‌ಎಂಸಿ ಹೆಜ್ಜೆ ಹೆಜ್ಜೆಗೆ ಹಂತ ಹಂತವಾಗಿ ಅಲೋಪತಿ ಕ್ಷೇತ್ರಕ್ಕೆ ಕಿಚ್ಚು ಹಚ್ಚಿ ಹಾಳು ಮಾಡುತ್ತಿದೆ, ಅವಮಾನಿಸುತ್ತಿದೆ.
ಈ ಮನೋಭಾವದಿಂದ ಎನ್‌ಎಂಸಿ ಹೊರಬರಬೇಕಿದೆ. ಸರ್ವಜನಾಂಗದವರು, ಸರ್ವಧರ್ಮೀಯರು, ಎಲ್ಲ ಪ್ರಕಾರದ ವೈದ್ಯರು ಒಪ್ಪುವಂಥ ಲಾಂಛನ ಮೂಡಿಬರಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ವಿಚಾರ ವಿನಿಮಯ ಮಾಡಿ ಲಾಂಛನ ವಿನ್ಯಾಸಗೊಳಿಸಲಿ. ಏಕೆಂದರೆ ಇದು ವೈದ್ಯಕೀಯ ವೃತ್ತಿ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ನಿಯಂತ್ರಿಸುವ ದೇಶದ ಅತ್ಯುನ್ನತ ಸಂಸ್ಥೆ. ಆ ಸಂಸ್ಥೆಯ ಘನತೆ, ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಲಿ.