ಬಿಜೆಪಿಯ 10 ವರ್ಷಗಳ ಆಡಳಿತ: ಆರ್ಥಿಕತೆಯ ಆಳ-ಅಗಲ

Update: 2024-02-20 06:22 GMT

ಭಾಗ- 2

► ಕಲ್ಯಾಣ ಯೋಜನೆಗಳ ವೈಫಲ್ಯಗಳು

ತಮ್ಮ ಹತ್ತು ವರ್ಷಗಳ ಸಾಧನೆಯನ್ನು ಪ್ರಚಾರ ಮಾಡಲು ಮೋದಿ ಸರಕಾರವು ವಿಕಾಸ ಭಾರತ ಸಂಕಲ್ಪ ಯಾತ್ರೆ ಎನ್ನುವ ಪ್ರಪಗಂಡಾ ನಡೆಸುತ್ತಿದ್ದಾರೆ. ಇಡೀ ಚಟುವಟಿಕೆಯೇ ಒಂದು ದೊಡ್ಡ ಹಗರಣ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಇದಕ್ಕಾಗಿ ಎ,ಬಿ,ಸಿ,ಡಿ ಗ್ರೂಪ್‌ನ ಲಕ್ಷಾಂತರ ಸರಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸಾಧನೆಯ ಹೆಸರಿನಲ್ಲಿ ಬಿಜೆಪಿ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. 1,500 ವಾಹನಗಳ ಮೂಲಕ 806 ಜಿಲ್ಲೆಗಳು, 2.5 ಲಕ್ಷ ಗ್ರಾಮ ಪಂಚಾಯತ್‌ಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಸರಕಾರದ ಸಾಧನೆ ಅಂತಿರದೆ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ಸರಕಾರದ ಕೈಗೊಂಬೆಯಾಗಿರುವ ಚುನಾವಣಾ ಆಯೋಗವು ಕಣ್ಣು ಮುಚ್ಚಿಕೊಂಡು ಕುಳಿತಿದೆ.

ಇದರ ಕುರಿತು ಜನರ ಮುಂದೆ ವಿವರಿಸಬೇಕಾಗಿದೆ ಚುನಾವಣೆಯ ಎರಡನೇ ಭಾಗವಾಗಿ 10 ವರ್ಷಗಳಲ್ಲಿ ಜಾರಿಗೊಳಿಸಿದ್ದೇವೆ ಎನ್ನಲಾದ 142 ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ. ಇದರ ಪ್ರಚಾರ ಸಾಮಗ್ರಿಗಳಿಗಾಗಿ ನೂರಾರು ಕೋಟಿ ಹಣ ವೆಚ್ಚ ಮಾಡುತ್ತಿದ್ದಾರೆ. ಈ ದುಡ್ಡು ಎಲ್ಲಿಂದ ಬಂತು ಎಂದು ಕೇಳಬೇಕಿದೆ. ಇವರ ಪಕ್ಷದ ಪ್ರಣಾಳಿಕೆ ಅನುಸಾರ 2015-16ರಲ್ಲಿ ಶುರುವಾಗಿ ಇಲ್ಲಿಯವರೆಗೆ 142 ಕಲ್ಯಾಣ ಯೋಜನೆಗಳಿವೆ. ಆದರೆ ಇದರಲ್ಲಿ ಕೇವಲ 42 ಯೋಜನೆಗಳಿಗೆ ಲೋಗೋಗಳಿವೆ. ಇದರಲ್ಲಿ ಪಿಎಮ್ ಕಿಸಾನ್, ಪಿಎಮ್ ಆವಾಸ್ ಮುಂತಾಗಿ ಪಿಎಮ್ ಹೆಸರಿನಲ್ಲಿ 20 ಯೋಜನೆಗಳಿವೆ. ಇನ್ನೂ ಕೆಲವು ಅಮೃತಕಾಲ, ಅಮೃತ ಭಾರತ ಮುಂತಾದ ಹೆಸರಿನಲ್ಲಿವೆ

ಕಳೆದ ಚುನಾವಣೆಯಲ್ಲಿ ಇವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಆದರೆ ದುಪ್ಪಟ್ಟಾಗುವುದರ ಬದಲಿಗೆ ರೈತರ ಸಮಸ್ಯೆಗಳು ಹೆಚ್ಚಾಗಿವೆ. ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯೂ ನೀಡಿಲ್ಲ. ಇವರ ಹತ್ತು ವರ್ಷಗಳ ಅವಧಿಯಲ್ಲಿ 1,00,474 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ ಸಿಆರ್ ಬಿ (ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೊ) ವರದಿ ಮಾಡಿದೆ. ಪ್ರತಿ ದಿನ ಸರಾಸರಿ 30 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮೋದಿ ಸರಕಾರದ ಕೊಡುಗೆ.

15 ಲಕ್ಷ ಕೊಡುತ್ತೇವೆ ಎಂದಿರುವಿರಲ್ಲಾ ಎಂದು ಕೇಳಿದಾಗ ಅಮಿತ್ ಶಾ ಯಾವುದೋ ಸಂದರ್ಶನದಲ್ಲಿ ‘ಜುಮ್ಲಾ’ ಎಂದು ಹೇಳುತ್ತಿದಾರೆ. ಹತ್ತು ವರ್ಷ ಕಳೆದರೂ 15 ಲಕ್ಷ ಎಲ್ಲಿ ಎಂದು ಕೇಳಬೇಕಾಗುತ್ತದೆ.

ಗಂಗಾ ಶುದ್ಧೀಕರಣ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡು ಗಂಗಾ ಜಲವನ್ನು ಶುದ್ಧೀಕರಣ ಮಾಡುತ್ತೇವೆ ಎಂದು ಹೇಳಿ ಧಾರ್ಮಿಕವಾಗಿ ಬಳಸಿ ರಾಜಕರಣ ಮಾಡುತ್ತಿದ್ದಾರೆ. ನಮಾಮಿ ಗಂಗೆ ಹೆಸರಲ್ಲಿ ಶುದ್ಧೀಕರಣ ಮಾಡುತ್ತೇವೆ ಎಂದು ಹೇಳಿದ್ದಾರೆ ಆದರೆ ಇದಕ್ಕಾಗಿ 20 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ ಆದರೆ ಗಂಗಾ ಶುದ್ದೀಕರಣ ಕೇವಲ ಶೇ.20ರಷ್ಟು ಕೂಡ ಪೂರೈಸಿಲ್ಲ. ಹೆಣಗಳು ಇನ್ನೂ ತೇಲುತ್ತಲಿವೆ ಎನ್ನುವ ಪರಿಸರದ ವರದಿಗಳು ಸಿಗುತ್ತಲೇ ಇವೆ. ಇದರ ಕುರಿತು ಮೋದಿ ಸರಕಾರವನ್ನು ಪ್ರಶ್ನೆ ಮಾಡಬೇಕಾಗಿದೆ.

ಇನ್ನು ಬಹಳ ಮುಖ್ಯವಾಗಿ ಮತ್ತೊಂದು ಪ್ರಚಾರವೆಂದರೆ 100 ಸ್ಮಾರ್ಟ್ ನಗರಗಳನ್ನು ಶುರು ಮಾಡುತ್ತೇವೆ ಎನ್ನುವ ಭರವಸೆ. ಇದಕ್ಕಾಗಿ ವಿದೇಶಿ ರಾಷ್ಟ್ರಗಳೊಡನೆ ನಾಲ್ಕು ಲಕ್ಷ ಕೋಟಿ ಬಂಡವಾಳವನ್ನು ಹೂಡಿಕೆ ಮಾಡಲು ಕಾಂಟ್ರಾಕ್ಟ್ ಸಹ ಕೊಡಲಾಗಿತ್ತು ಆದರೆ ಇದರ ಎಲ್ಲಾ ಭರಾಟೆಗಳು ಈಗ ಮೌನವಾಗಿವೆ. ಯಾರೂ ಮಾತನಾಡುತ್ತಿಲ್ಲ. ಸ್ಮಾರ್ಟ್ ನಗರಗಳೆಲ್ಲಿ ಎಂದು ಕೇಳಬೇಕಿದೆ

ಗ್ರಾಮ ಪಂಚಾಯತ್ ವಿಕಾಸ ಯೋಜನೆ ಅಡಿಯಲ್ಲಿ 2014ರಿಂದ 2016ರಲ್ಲಿ 703, 2016-17ರಲ್ಲಿ 501, 2018-19ರಲ್ಲಿ 302, 2019-20ರಲ್ಲಿ 553 ಗ್ರಾಮ ಪಂಚಾಯತ್‌ಗಳನ್ನು ದತ್ತು ಪಡೆದುಕೊಳ್ಳಲಾಗಿದೆ. ಮುಂದುವರಿದಂತೆ 2020-21ರಲ್ಲಿ 379, 2021-22ರಲ್ಲಿ 356, 2022-23ರಲ್ಲಿ 329, 2023-24ರಲ್ಲಿ 284 ಗ್ರಾಮ ಪಂಚಾಯತ್‌ಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ‘ದ ಪ್ರಿಂಟ್’ನಲ್ಲಿ ಪ್ರಕಟವಾಗಿದೆ. ಈ ವರದಿಯನ್ನು ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಗ್ರಾಮಪಂಚಾಯತ್‌ಗಳನ್ನು ದತ್ತು ತೆಗೆದುಕೊಳ್ಳುವುದು ಕಡಿಮೆಯಾಗುತ್ತಾ ಬಂದಿದೆ. ಇವರು ಯಾವ ಅಭಿವೃದ್ಧಿ ಮಾಡಲು ಹೊರಟಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ. ಮತ್ತು ದತ್ತು ಪಡೆದುಕೊಂಡ ಗ್ರಾಮಗಳ ಸ್ಥಿತಿ ಗತಿಯೇನು ಎನ್ನುವುದರ ಕುರಿತು ಎಲ್ಲಿಯೂ ದಾಖಲೆಗಳಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಫೇಕ್ ದಾಖಲೆಗಳನ್ನು ಕೊಡುತ್ತಿದ್ದಾರೆ. ನಮ್ಮ ಸಂಘಟನೆಗಳ ಮೂಲಕ ಇವರ ಸುಳ್ಳುಗಳನ್ನು ಬಯಲು ಮಾಡಬೇಕಾಗಿದೆ.

ಇನ್ನು 2014 ರಿಂದ 2024ರವರೆಗೆ ಬುಲೆಟ್ ಟ್ರೈನ್ ತರುತ್ತೇವೆ ಎಂದು ಹೇಳುತ್ತಲೆ ಬರುತ್ತಿದ್ದಾರೆ, ಆದರೆ ಇಂದಿಗೂ ಒಂದು ಬುಲೆಟ್ ಟ್ರೈನ್‌ನ ಯೋಜನೆ ಪ್ರಾರಂಭವಾಗಿಲ್ಲ. ಪ್ರತಿ ಚುನಾವಣೆಯಲ್ಲೂ ಟ್ರೈನ್ ತರುತ್ತೇವೆ ಎಂದು ಹಸಿ ಸುಳ್ಳುಗಳನ್ನು ಹೇಳುತ್ತಾ ಈಗ 2019, 2022 ಮುಗಿದು 2027ಕ್ಕೆ ತರುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ.

ಮತ್ತೊಂದು ಕಲ್ಯಾಣ್ ಯೋಜನೆಯಾದ 2018ರ ವೇಳೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವ್ಯವಸ್ಥೆ ಮಾಡುತ್ತೇವೆ ಎನ್ನುವ ಭರವಸೆಯೂ ಸುಳ್ಳಾಗಿದೆ. ಆದರೆ 2019 ಮುಗಿದು 2024ಕ್ಕೆ ಬಂದಿದ್ದೇವೆ. ಇನ್ನು ಕೂಡ ಗ್ರಾಮೀಣ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಫಲರಾಗಿದ್ದಾರೆ. ಇವರ ಸರಕಾರದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 3 ಕೋಟಿ ಕುಟುಂಬಗಳು ಇನ್ನ್ನೂ ಕತ್ತಲೆಯಲ್ಲಿವೆ. ಇದನ್ನು ಕೂಡ ಜನರು ಪ್ರಶ್ನೆ ಮಾಡಬೇಕಾಗುತ್ತದೆ.

ಮತ್ತೊಂದು ಮೋಸವೆಂದರೆ ನರೇಗಾ ಯೋಜನೆಗೆ ಆಧಾರ್ ಕಡ್ಡಾಯ ಮಾಡಿರುವುದರಿಂದ ಲಕ್ಷಾಂತರ ಮಂದಿ ಉದ್ಯೋಗದಿಂದ ವಂಚನೆಗೊಳಗಾಗುತ್ತಿದ್ದಾರೆ. ಪ್ರತಿ ಬಜೆಟ್ ಸಂದರ್ಭದಲ್ಲಿಯೂ ನರೇಗಾ ಯೋಜನೆಗೆ ಹಣಕಾಸು ಅನುದಾನವನ್ನು ಕಡಿತಗೊಳಿಸುತ್ತಿದ್ದಾರೆ.

ಉಜ್ವಲಾ ಯೋಜನೆಯಲ್ಲಿ ಸ್ವತಃ ಮಾನ್ಯ ಮೋದಿಯವರು ನೇರವಾಗಿ ಇದರ ಫಲಾನುಭವಿ ಮಹಿಳೆಯೊಬ್ಬರನ್ನು ಭೇಟಿ ಮಾಡಿ ಗ್ಯಾಸ್ ವಿತರಿಸಿದ್ದಾರೆ ಮತ್ತು ಸಂದರ್ಶನ ಮಾಡಿದ ಪ್ರಚಾರವೂ ಸಹ ಗೋದಿ ಮೀಡಿಯಾಗಳಲ್ಲಿ ನೋಡಿದ್ದೇವೆ. ಆದರೆ ವಾಸ್ತವದಲ್ಲಿ ಇಡೀ ದೇಶದಲ್ಲಿ ಕೇವಲ 1.5 ಕೋಟಿ ಜನಸಂಖ್ಯೆ ಮಾತ್ರ ಒಂದು ಬಾರಿ ಗ್ಯಾಸ್ ತೆಗೆದುಕೊಂಡಿದ್ದಾರೆ ಇನ್ನೂ 1.8 ಕೋಟಿ ಜನಸಂಖ್ಯೆ ಒಂದು ಬಾರಿಯೂ ಗ್ಯಾಸ್ ತೆಗೆದುಕೊಂಡಿಲ್ಲ ಎಂದು ವರದಿಗಳು ಹೇಳುತ್ತಿವೆ. ಇವರು ಹೇಳಿದಂತೆ 3.3 ಕೋಟಿ ಜನಸಂಖ್ಯೆ ಉಚಿತ ಗ್ಯಾಸ್ ಸೌಲಭ್ಯ ಬಳಸುತ್ತಿಲ್ಲ ಎಂಬುದನ್ನು ನಾವು ಜನರಿಗೆ ತಲುಪಿಸಬೇಕಿದೆ. ಈಗಾಗಲೇ ಅನಾಮಿಕ ಮಹಿಳೆಯೊಬ್ಬರು ಮೋದಿಯವರಿಂದ ಗ್ಯಾಸ್ ಪಡೆಯುತ್ತಿರುವ ಪೋಟೊ ಬಳಸಿ ಇವರಿಗೆ ಗ್ಯಾಸ್ ದೊರೆತಿದೆ ಎಂದು ಪ್ರಚಾರ ಮಾಡುತ್ತಿದ್ದರು. ಆದರೆ ಸತ್ಯಶೋಧನೆಯ ಮೂಲಕ ಆ ಮಹಿಳೆಯ ಸಂದರ್ಶನ ನಡೆಸಿದ ನಂತರ ತನಗೆ ಯಾವುದೇ ಗ್ಯಾಸ್ ಸೌಲಭ್ಯ ದೊರೆತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಂತಹ ಹಸಿ ಸುಳ್ಳುಗಳಿಂದಲೇ ಬಿಜೆಪಿಯ ಬಂಡವಾಳ ಬಯಲಾಗುತ್ತಿದೆ.

ಮತ್ತೊಂದು ಜೋರು ಪ್ರಚಾರ ಪಡೆದುಕೊಂಡ ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಮೊನ್ನೆ ಬಜೆಟ್ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಹೇಳುವಂತೆ 25 ಕೋಟಿ ಜನಸಂಖ್ಯೆ ಇದರಿಂದ ಲಾಭವನ್ನು ಗಳಿಸಿದ್ದಾರೆ. ಆದರೆ ವಾಸ್ತವವಾಗಿ ಈ ಯೋಜನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇವರ ಸಿಎಜಿ ವರದಿಯ ಪ್ರಕಾರ ಆಯುಷ್ಮಾನ್ ಯೋಜನೆಯಲ್ಲಿ ಎರಡು ಲಕ್ಷ ಕೋಟಿ ರೂ. ಅವ್ಯವಹಾರವಾಗಿದೆ. ನಿಧನರಾದ ಲಕ್ಷಾಂತರ ಜನರ ಹೆಸರಿನಲ್ಲಿ ಚಿಕಿತ್ಸೆಯ ನೆಪದಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿರುವುದನ್ನು ಕೂಡ ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ. ಆದರೆ ಈ ಭ್ರಷ್ಟಾಚಾರ ಹಗರಣದ ಕುರಿತು ಯಾವುದೇ ಮಾಧ್ಯಮ ಮಾತನಾಡುತ್ತಿಲ್ಲ. ಈ ತರಹದ ಯೋಜನೆಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಮಾಡುವ ಹಗರಣಗಳಾಗಿವೆ. ಮುಖ್ಯವಾಗಿ ಇದು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಲಾಭದಾಯಕ ಯೋಜನೆಯಾಗಿದೆ. ಕಾಯಿಲೆ ಬರದಂತೆ ತಡೆಗಟ್ಟುವ ಸಾರ್ವಜನಿಕ ಆಸ್ಪತ್ರೆಗಳನ್ನು ನಾಶ ಮಾಡಿ, ಕಾಯಿಲೆ ಗುಣಪಡಿಸುವ ನೆಪದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಲಾಭ ತಂದುಕೊಳ್ಳಲು ಈ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಕೌಶಲ್ಯ ವಿಕಾಸ್ ಯೋಜನೆಯಲ್ಲಿ ಶೇ.45ರಷ್ಟು ಜನಸಂಖ್ಯೆ 26 ವರ್ಷದೊಳಗೆ ಬರುತ್ತಾರೆ ಶೇ.35ರಷ್ಟು ಜನಸಖ್ಯೆ 35 ವರ್ಷದೊಳಗೆ ಬರುತ್ತಾರೆ. ಆದರೆ ಇದರಿಂದ ಏನು ಪ್ರಯೋಜನವಾಗಿದೆ ಎಂದು ಗಮನಿಸಿದರೆ ನಿರಾಸೆ ಕಾದಿದೆ. ಸರಕಾರದ ಕಾರ್ಮಿಕ ಇಲಾಖೆಯ ಮಾಹಿತಿ ಪ್ರಕಾರ 2016ರಲ್ಲಿ 54 ಲಕ್ಷ ಯುವಜನತೆಗೆ ಕೌಶಲ್ಯ ತರಬೇತಿ ಕೊಟ್ಟಿದ್ದೇವೆ ಎನ್ನುತ್ತಿದಾರೆ. ಇವರ ಪೈಕಿ ಶೇ.24ರಷ್ಟು ಜನಸಂಖ್ಯೆಗೆ (13.5 ಲಕ್ಷ) ಮಾತ್ರ ಉದ್ಯೋಗ ಸಿಕ್ಕಿದೆ. ಉಳಿದಂತೆ 40.5 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿಲ್ಲ. 2022ರವರೆಗೆ 1.37 ಕೋಟಿ ಯುವಜನತೆಗೆ ಕೌಶಲ್ಯ ತರಬೇತಿ ಕೊಡಲಾಗಿದೆ ಎಂದು ಸರಕಾರದ ದತ್ತಾಂಶ ವರದಿ ಕೊಡುತ್ತದೆ. ಇವರ ಪೈಕಿ ಶೇ.18ರಷ್ಟು (24 ಲಕ್ಷ) ಜನಸಂಖ್ಯೆಗೆ ಉದ್ಯೋಗ ಸಿಕ್ಕಿದೆ. ಅಂದರೆ ಉಳಿದ 1.06 ಕೋಟಿ ಜನಸಂಖ್ಯೆಗೆ ಉದ್ಯೋಗ ದೊರಕಿಲ್ಲ. ಕೌಶಲ್ಯ ತರಬೇತಿ ಪಡೆದ ನಂತರವೂ ನಿರುದ್ಯೋಗಿಗಳಾಗಿದ್ದಾರೆ. ಮುಖ್ಯವಾಗಿ ದೊರಕಿದ ಉದ್ಯೋಗವೂ ಸಹ ಖಾಯಂ ಉದ್ಯೋಗವಲ್ಲ. ಸಂಪೂರ್ಣವಾಗಿ ಗುತ್ತಿಗೆ ಆಧಾರಿತ ಅಸಂಘಟಿತ ವಲಯದ ನೌಕರಿಯಾಗಿದೆ. ಇಲ್ಲಿ ಉದ್ಯೋಗ ಭದ್ರತೆಯಿಲ್ಲ. ಕನಿಷ್ಠ ವೇತನವಿಲ್ಲ ಇದರಿಂದ ಯಾರಿಗೆ ಲಾಭವಾಗಿದೆ ಎಂಬುದನ್ನು ನಾವು ಪ್ರಶ್ನಿಸಬೇಕಿದೆ. ಈ ಕೌಶಲ್ಯ ಯೋಜನೆ ಕೇವಲ ಮೋದಿಯವರ ಪ್ರಚಾರಕ್ಕೆ ಮಾತ್ರ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

► ಉಪ ಸಂಹಾರ

ಇಂದು ಮೋದಿ ನೇತೃತ್ವದ ಬಿಜೆಪಿ ಪಕ್ಷದ ವೈಫಲ್ಯಗಳನ್ನು ಜನರ ಮುಂದಿಡಲು ಅಂಕಿ-ಅಂಶಗಳ ದತ್ತಾಂಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಸರಳವಾಗಿ ಅರ್ಥವಾಗುವ ಮಾದರಿಯಲ್ಲಿ ಜನತೆಗೆ ತಿಳಿಸಿ ಹೇಳಬೇಕಾಗಿದೆ. ಪ್ರಜಾಪ್ರಭುತ್ವವಾದಿಗಳ ಬಳಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಲ್ಲ. ಕೇವಲ ಡಿಜಿಟಲ್ ಮಾಧ್ಯಮ ಮತ್ತು ಸಂಘಟನೆಗಳನ್ನು ಬಳಸಿಕೊಂಡು ಜನರ ಬಳಿ ಹೋಗಬೇಕಿದೆ. ಸಾಕಷ್ಟು ಶ್ರಮ ಮತ್ತು ತ್ಯಾಗ ಬೇಡುತ್ತದೆ. ಆದರೆ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಜ್ಞಾವಂತರು ಸತ್ಯವನ್ನು ಜನರ ಬಳಿಗೆ ಹೇಳಲೇಬೇಕಾದ ಅನಿವಾರ್ಯತೆಯಿದೆ. ಇದು ಜೀವನ್ಮರಣದ ಪ್ರಶ್ನೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ. ಶ್ರೀಪಾದ ಭಟ್

contributor

Similar News