ಸಂಪಾದಕೀಯ ಪತ್ರಿಕೆಯ ಬಹುದೊಡ್ಡ ಶಕ್ತಿ

Update: 2024-08-29 06:32 GMT

ಕುಂದಾಪುರ ತಾಲೂಕಿನ ಹಳ್ಳಿಮೂಲೆಯೊಂದರಲ್ಲಿ ಬಾಲ್ಯವನ್ನು ಕಳೆದ ನನಗೆ ‘ನವಭಾರತ’ ಪತ್ರಿಕೆಯ ಬಗ್ಗೆ ಕೇಳಿ ಮಾತ್ರ ಗೊತ್ತಿತ್ತು. ಆದರೆ ಅದು ಓದಲು ಸಿಗುತ್ತಿದ್ದುದು ಕಡಿಮೆ. ಮೊದಲು ಓದಲು ಸಿಕ್ಕ ದಿನಪತ್ರಿಕೆ ಮಣಿಪಾಲದಿಂದ ಹೊರಡುತ್ತಿದ್ದ ಉದಯವಾಣಿ.

ಉದಯವಾಣಿ ಪತ್ರಿಕೆ ಶುರುವಾಗಿ (1970) ಐದು ವರ್ಷಗಳಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಯಿತು. ತುರ್ತುಪರಿಸ್ಥಿತಿಯ ನಿರ್ಬಂಧದ ಕಾರಣ ನಿಲ್ಲಿಸಿದ ಸಂಪಾದಕೀಯವನ್ನು ಮತ್ತೆ ಅದು ಆರಂಭಿಸಲೇ ಇಲ್ಲ ಎಂಬುದು ಮುಂದೆ ತಿಳಿಯಿತು. ಹಾಗಾಗಿ ರಾಜಕೀಯ ಸಹಿತ ಸಮಕಾಲೀನ ಅಗುಹೋಗುಗಳ ಬಗ್ಗೆ ಪತ್ರಿಕೆಯ ಸಂಪಾದಕೀಯ ನಿಲುವು ಏನು ಎಂಬುದು ಓದುಗರಿಗೆ ಯಾವತ್ತೂ ತಿಳಿಯುವಂತಿರಲಿಲ್ಲ.

ಆದರೂ, ಅದರಲ್ಲಿನ ಜನತಾವಾಣಿ ಮತ್ತು ದೂರುಗಂಟೆ ಪರಿಣಾಮಕಾರಿಯಾಗಿದ್ದವು. ರವಿವಾರದ ಪುರವಣಿ ಕತೆ, ಕಾವ್ಯಗಳು ರಂಜನೆಯ ಜತೆಯಲ್ಲಿಯೇ ಬೌದ್ಧಿಕ ಬೆಳವಣಿಗೆಗೂ ಕಾರಣವಾಗುವಂತಿದ್ದವು. ಬೇರೆ ಪತ್ರಿಕೆಗಳು ಸಿಗದ ಕಾರಣ, ನಮಗೆ ಉದಯವಾಣಿಯೊಂದೇ ಹೊರ ಜಗತ್ತಿನ ಕಿಂಡಿಯಾಗಿತ್ತು. ಅದನ್ನು ಓದುತ್ತಾ, ಅದಕ್ಕೆ ಬರೆಯುತ್ತಾ ನಾವು ಬೆಳೆದೆವು.

ಇರುವ ಪತ್ರಿಕೆಗಳು ಒಂದು ಮಗ್ಗುಲಿನ ಕಥನವನ್ನು ಮಾತ್ರ ಓದುಗರ ಮುಂದಿಡುತ್ತಿದೆ, ಸ್ಥಾಪಿತ ಮೇಲ್ವರ್ಗದ ಪರವಾಗಿದೆ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವಲ್ಲಿ ವಿಫಲವಾಗುತ್ತಿದೆ, ತನ್ನ ಓದುಗರ ಆಲೋಚನಾಶಕ್ತಿಯನ್ನು ಸ್ಥಗಿತ ಸ್ಥಿತಿಯಲ್ಲಿರಿಸುತ್ತಿದೆ ಎಂಬ ಅನುಮಾನ ಬಲವಾಗತೊಡಗಿದಾಗ ಪರ್ಯಾಯ ಪತ್ರಿಕೆಯೊಂದು ತೀರಾ ಅಗತ್ಯವಿದೆ ಎಂದು ಬಲವಾಗಿ ಅನ್ನಿಸಲಾರಂಭಿಸಿತು.

ಇಂತಹ ಹೊತ್ತಿನಲ್ಲಿಯೇ ‘ಚಿಂತನೆಯ ಮಳೆ ಹರಿಸಿ, ಜನಶಕ್ತಿ ಬೆಳೆ ತೆಗೆವ’ ಕನಸಿನೊಂದಿಗೆ ‘ಮುಂಗಾರು’ ಪತ್ರಿಕೆ ವಡ್ಡರ್ಸೆ ರಘುರಾಮ ಶೆಟ್ಟರ ನೇತೃತ್ವದಲ್ಲಿ ಆರಂಭವಾಗಿ (1984) ನಾಡಿನಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಸತ್ಯ ಹೇಳುವಾಗ ಯಾವುದೇ ಮುಲಾಜಿಗೆ ಒಳಗಾಗದ ಮತ್ತು ಜನಸಾಮಾನ್ಯರ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಕಾರಣಕ್ಕೆ ಮುಂಗಾರು ಬಹಳ ಬೇಗ ಜನಪ್ರಿಯವಾಯಿತು.

ಎಷ್ಟು ಬೇಗ ಜನಪ್ರಿಯತೆಯ ಹಾದಿಯಲ್ಲಿ ಸಾಗಿತೋ, ಆರ್ಥಿಕ ಸಹಿತ ಅನೇಕ ಆಂತರಿಕ ಸವಾಲುಗಳನ್ನೂ ಅಷ್ಟೇ ಬೇಗ ಎದುರಿಸಬೇಕಾಗಿ ಬಂದು ಕೊನೆಗೊಮ್ಮೆ ಅದು ನಿಂತೇ ಹೋಯಿತು. ಆದರೆ ಅದು ತನ್ನ ಅಲ್ಪ ಆಯುಷ್ಯದಲ್ಲಿ ಮಾಡಿದ ಸಾಧನೆ ಮಾತ್ರ ಬಹಳ ದೊಡ್ಡದು. ಅನೇಕ ಪತ್ರಕರ್ತರು ಮುಂಗಾರುವಿನ ಮೂಲಕವೇ ಹುಟ್ಟಿ ಬೆಳೆದು, ಇಂದಿಗೂ ನೈಜ ಪತ್ರಕರ್ತರು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತೆ ನಮ್ಮ ಮುಂದಿದ್ದಾರೆ.

ಕರಾವಳಿಯ ಬಗೆಗಿನ ಒಂದು ಭರವಸೆಯೆಂದರೆ, ಇಲ್ಲಿ ಜೀವವಿರೋಧಿ ಶಕ್ತಿಗಳು ಎಷ್ಟಿವೆಯೋ, ಅವನ್ನು ಎದುರಿಸಲು ಸಿದ್ಧವಾಗಿ ನಿಂತಿರುವ ಜೀವಪರ ಶಕ್ತಿಗಳೂ ಅಷ್ಟೇ ಇವೆ. ಜೀವವಿರೋಧಿ ಸಿದ್ಧಾಂತ ಪ್ರತಿಪಾದಿಸುವ ಕಲ್ಲಡ್ಕ ಪ್ರಭಾಕರ ಭಟ್ಟರು ಇರುವ ಹಾಗೆಯೇ ಜೀವಪರ ಸಿದ್ಧಾಂತಕ್ಕೆ ಜೀವನವನ್ನೇ ಮುಡಿಪಾಗಿರಿಸಿದ ಬಾಕ್ರಬೈಲು ಸುರೇಶ ಭಟ್ಟರೂ ಇಲ್ಲಿ ಇದ್ದಾರೆ. ಒಂದು ನಿರ್ದಿಷ್ಟ ವಿಚಾರಧಾರೆಯನ್ನು ಪ್ರತಿಪಾದಿಸುವ ಪತ್ರಿಕೆಗಳು ಇರುವಂತೆಯೇ, ಇದಕ್ಕೆ ವಿರುದ್ಧವಾದ ಜೀವಪರ ವಿಚಾರಧಾರೆ ಪ್ರತಿಪಾದಿಸುವ ಮುಂಗಾರು, ಜನವಾಹಿನಿ, ವಾರ್ತಾಭಾರತಿ ಇದ್ದ/ಇರುವ ಪ್ರದೇಶ ಇದು.

ಕಳೆದ ಶತಮಾನದ ಕೊನೆಯ ದಶಕದ ಹೊತ್ತಿಗಾಗುವಾಗ ಮುದ್ರಣ ತಂತ್ರಜ್ಞಾನದಲ್ಲಿ ಹೊಸ ಕ್ರಾಂತಿ ಆರಂಭವಾಯಿತು. ಹೊಸ ತಂತ್ರಜ್ಞಾನವು ಪತ್ರಿಕೆಯ ವಿನ್ಯಾಸದ ಕೆಲಸವನ್ನು ಸುಲಭ, ಸುಂದರ ಮತ್ತು ಅಚ್ಚುಕಟ್ಟಾಗಿಸಿತು. ಪರಿಣಾಮವಾಗಿ ಪತ್ರಿಕೆಗಳ ಸಂಖ್ಯೆಯೂ ಏರತೊಡಗಿತು. ಪೈಪೋಟಿ ಅಧಿಕವಾಯಿತು. ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಈ ಎಲ್ಲ ಗಾಯದ ಮೇಲೆ ಬರೆ ಎಳೆಯುವಂತೆ, ಬೇರೆ ಕ್ಷೇತ್ರಗಳಲ್ಲಿ ಹೇರಳ ಹಣ ಸಂಪಾದಿಸಿದ ವ್ಯಾಪಾರಿಗಳೂ ಪತ್ರಿಕೆ ಶುರು ಮಾಡಿ ಒಂದು ರೂಪಾಯಿಗೆ ಪತ್ರಿಕೆ ಮಾರ ತೊಡಗಿದರು. ಪರಿಸ್ಥಿತಿ ಹೀಗಿರುವಾಗ ಆರ್ಥಿಕ ಶಕ್ತಿ ಇಲ್ಲದ ಪತ್ರಿಕೆಗಳು ಹೇಗೆ ಬದುಕಿ ಉಳಿಯಬೇಕು?

ಇದೇ ಪರಿಸ್ಥಿತಿ ಮುಂಗಾರುವಿನ ನಂತರ ಹುಟ್ಟಿಕೊಂಡ ‘ಜನವಾಹಿನಿ’ಗೂ ಒದಗಿಬಂತು. ಮುಂಗಾರು ಸೃಷ್ಟಿಸಿದ ಶೂನ್ಯ ತುಂಬುವ ಹಾಗೆ ಉದಯಿಸಿದ ‘ಜನವಾಹಿನಿ’ (1998) ಮುಂಗಾರು ಹಾಕಿ ಕೊಟ್ಟ ದಾರಿಯಲ್ಲಿಯೇ ಚಿಂತನೆಯ ಮಳೆ ಸುರಿಸುವ, ಓದುಗರನ್ನು ವೈಚಾರಿಕತೆಯ ಹಾದಿಯಲ್ಲಿ ಕರೆಯೊಯ್ಯುವ ತೇರನ್ನು ಬಹುದೂರ ಎಳೆದು, ವಸ್ತುನಿಷ್ಠ ಪತ್ರಿಕೋದ್ಯಮದ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿ ಕಣ್ಮುಚ್ಚಿತು.

ಮುಂಗಾರುವಿನ ಆನಂತರ ಜನವಾಹಿನಿಯೂ ಮರೆಯಾದಾಗ ಹೊಸ ಆಶಾಕಿರಣದಂತೆ ಉದಯಿಸಿದ್ದು ‘ವಾರ್ತಾಭಾರತಿ’ (2003). ಹಾಗೆ ನೋಡಿದರೆ ‘ವಾರ್ತಾಭಾರತಿ’ ಉದಯಿಸಿದ್ದು ಮುದ್ರಣ ಮಾಧ್ಯಮದ ಮಟ್ಟಿಗೆ ಅಸಾಧಾರಣ ಆರ್ಥಿಕ ಸವಾಲು ಆರಂಭವಾಗುತ್ತಿದ್ದ, ಜತೆಗೆ ಕೋಮುವಾದಿ ರಾಜಕಾರಣವು ದೇಶದ ಮೇಲೆ ಹಿಡಿತ ಬಲಗೊಳಿಸುತ್ತಿದ್ದ ಕಾಲಘಟ್ಟದಲ್ಲಿ.

ದೇಶದಲ್ಲಿ ಡಿಜಿಟಲ್ ಯುಗವೂ ಆರಂಭವಾಗಿತ್ತು. ಡಿಜಿಟಲ್ ಮಾಧ್ಯಮಗಳು ಮುದ್ರಣದ ಸುದ್ದಿಮಾಧ್ಯಮಗಳಿಗೆ ಮಾರಕ ಹೊಡೆತ ನೀಡಲು ಸಿದ್ಧವಾಗಿದ್ದವು. ಈ ಕ್ಷಣದ ಸುದ್ದಿ ಈಕ್ಷಣವೇ ಸಿಗುವ ಕಾಲದಲ್ಲಿ ಇಂದಿನ ಸುದ್ದಿ ನಾಳೆಗೆ ಯಾರಿಗೆ ಬೇಕು?

ಜನಪರವಾಗಿರಬೇಕೆಂಬ ಆದರ್ಶದ ಬೆನ್ನು ಹತ್ತಿದ ‘ವಾರ್ತಾಭಾರತಿ’ಯದ್ದೋ ಇತರ ಪತ್ರಿಕೆಗಳಿಗಿಲ್ಲದ ಬೇರೆಯದೇ ಸಮಸ್ಯೆ. ಮಾಲಕತ್ವದ ಕಾರಣವಾಗಿ ಅದಕ್ಕೆ ಮತೀಯ ಹಣೆಪಟ್ಟಿ. ಪತ್ರಿಕೆ ದಿಟ್ಟವಾಗಿರಬೇಕು ಎಂಬುದು ಒಂದು ಆದರ್ಶ. ಆದರೆ ಈ ದಿಟ್ಟತನವು ಪತ್ರಿಕೆಯನ್ನು ಮುಗಿಸುವ ಪರಿಸ್ಥಿತಿ ನಿರ್ಮಾಣವಾಗುವಷ್ಟು ದಿಟ್ಟವಾಗಿರಬಾರದು ಎಂಬ ವಾಸ್ತವವನ್ನು ಅರಿಯದ ಸೋಕಾಲ್ಡ್ ಕೆಲ ಪ್ರಗತಿಪರರು ಕೂಡಾ ‘ವಾರ್ತಾಭಾರತಿ’ಗೆ ಮತೀಯತೆಯ ಹಣೆಪಟ್ಟಿ ಕಟ್ಟಿ ಅದನ್ನು ದೂರ ಮಾಡಿದ್ದಿದೆ. ಅದು ಮುಸ್ಲಿಮ್ ಒಲವಿನ ಪತ್ರಿಕೆಯಾದರೆ ಅದನ್ನು ಮುಸ್ಲಿಮರಾದರೂ ಕೊಂಡು ಪ್ರೋತ್ಸಾಹಿಸಬೇಕಲ್ಲವೇ? ಆದರೆ ಆರ್ಥಿಕವಾಗಿ ಬಲಾಢ್ಯರಾಗಿದ್ದೂ ‘ವಾರ್ತಾಭಾರತಿ’ಯನ್ನು ಬೆಂಬಲಿಸದ ಅಸಂಖ್ಯ ಮುಸ್ಲಿಮರು ನನಗೆ ಗೊತ್ತು. ಸಾಮಾನ್ಯವಾಗಿ ಬೇರೆ ಪತ್ರಿಕೆಗಳು ಅನುಭವಿಸದ ಇಂತಹ ವಿಚಿತ್ರ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಲೂ ‘ವಾರ್ತಾಭಾರತಿ’ ಎರಡು ದಶಕಗಳನ್ನು ದಾಟಿ ಮುನ್ನಡೆಯುತ್ತಿದೆ ಎನ್ನುವುದನ್ನು ನಂಬಲೇ ಆಗುತ್ತಿಲ್ಲ.

‘ವಾರ್ತಾಭಾರತಿ’ಯಂತಹ ಪತ್ರಿಕೆಯ ಮಹತ್ವ ಏನು ಎನ್ನುವುದನ್ನು ತಿಳಿಯಬೇಕಿದ್ದರೆ ನಾಡಿನ ಇತರ ಪತ್ರಿಕೆಗಳತ್ತ ಒಮ್ಮೆ ಕಣ್ಣು ಹಾಯಿಸಬೇಕು. ಬಹುತೇಕ ಪತ್ರಿಕೆಗಳು ತಮ್ಮ ವೃತ್ತಿ ಧರ್ಮಕ್ಕೆ ಎಂದೋ ಎಳ್ಳು ನೀರು ಬಿಟ್ಟಿವೆ. ಸತ್ಯ ಹೇಳಲು ಹಿಂದೇಟು ಹಾಕುತ್ತಿವೆ. ಹಿಂದೆ ಒಂದು ಕಾಲದಲ್ಲಿ ಪತ್ರಿಕೆಗಳ ಸಂಪಾದಕೀಯ ಬರಹಕ್ಕೆ ವಿಶೇಷ ಮಹತ್ವ ಇತ್ತು. ಈಗ ನಾಡಿನ ಹೆಚ್ಚಿನ ಪತ್ರಿಕೆಗಳು ಸಂಪಾದಕೀಯವನ್ನು ಕಾಟಾಚಾರಕ್ಕಾಗಿಯಷ್ಟೇ ಬರೆಯುತ್ತಿವೆ. ಅಲ್ಲೂ ಯಾವುದೋ ಒಂದು ರಾಜಕೀಯ ಪಕ್ಷಕ್ಕೋ, ಸರಕಾರಕ್ಕೋ ಹೆದರಿಯೋ ಅಥವಾ ಅವನ್ನು ನೋಯಿಸಬಾರದೆಂದೋ ಅತ್ಯಂತ ಅಳುಕಿನಿಂದ ಬರೆದ ಸಂಪಾದಕೀಯದ ಮಾತುಗಳಿರುತ್ತವೆ.

‘ವಾರ್ತಾಭಾರತಿ’ಯ ಸಂಪಾದಕೀಯಗಳ ಬಗ್ಗೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಅನಂತ ಮೂರ್ತಿಯವರು ಮೆಚ್ಚಿ ನುಡಿದ ಮಾತುಗಳನ್ನು ಮರೆಯುವುದಾದರೂ ಹೇಗೆ ಸಾಧ್ಯ? ಈ ಸಂಪಾದಕೀಯಗಳು ನೇರವಂತಿಕೆ, ಅಪಾರ ಮಾಹಿತಿ, ಆಳ ವಿಶ್ಲೇಷಣೆಗಳಿಂದ ಸಂಗ್ರಹಯೋಗ್ಯ ಮೌಲಿಕ ಲೇಖನಗಳಿಂತಿರುತ್ತವೆ . ಈ ಅರ್ಥದಲ್ಲಿ ‘ವಾರ್ತಾಭಾರತಿ’ಯ ಸಂಪಾದಕೀಯ ಅದರ ಒಂದು ಬಹುದೊಡ್ಡ ಶಕ್ತಿ ಮತ್ತು ಪತ್ರಿಕೆಯನ್ನು ಇಷ್ಟಪಡಲು ಅದೊಂದೇ ಸಂಗತಿ ಸಾಕು.

ಪತ್ರಿಕೆಯೊಂದು ತನ್ನ ವೃತ್ತಿಧರ್ಮವನ್ನು ಪಾಲಿಸುತ್ತಿದೆಯೇ ಎಂದು ತಿಳಿಯಲು ಬಹಳ ಕಷ್ಟ ಪಡಬೇಕಿಲ್ಲ. ಸುಮ್ಮನೆ ಅದರ ಮುಖಪುಟದ ಮುಖ್ಯ ಸುದ್ದಿಯನ್ನು, ಆ ಸುದ್ದಿಯ ಶೀರ್ಷಿಕೆಯನ್ನು, ಸಂಪಾದಕೀಯ ಬರಹವನ್ನು ಮತ್ತು ಯಾವ ಸುದ್ದಿಯನ್ನು ಆರನೇ ಏಳನೇ ಪುಟದ ಮೂಲೆಗೆ ತಳ್ಳಿದೆ ಎನ್ನುವುದನ್ನು ನೋಡಿ. ಈ ವಿಷಯದಲ್ಲಿ ‘ವಾರ್ತಾಭಾರತಿ’ ಕನ್ನಡದ ಇತರ ಪತ್ರಿಕೆಗಳಿಗಿಂತ ಭಿನ್ನವಾಗಿ ನಿಂತಿದೆ.

ಪತ್ರಿಕೆಯ ಎರಡು ಇಡೀ ಪುಟಗಳನ್ನು ಗಂಭೀರ ಲೇಖನಗಳಿಗಾಗಿ ಅದು ಮೀಸಲಿಟ್ಟಿದೆ. ಆದರೆ ಇಷ್ಟೊಂದು ಗಂಭೀರದ ಮತ್ತು ದೀರ್ಘ ಲೇಖನಗಳನ್ನು ಓದುವ ವ್ಯವಧಾನ ಈಗಿನ ಓದುಗರಿಗೆ ಇದೆಯೇ ಎನ್ನುವುದು, ಹಾಗೆಯೇ ಇತರ ಹೆಚ್ಚಿನ ಪತ್ರಿಕೆಗಳಂತೆ ‘ವಾರ್ತಾಭಾರತಿ’ಯೂ ಕತೆ, ಕಾವ್ಯದಂತಹ ಸಾಹಿತ್ಯ ವಿಚಾರಗಳನ್ನು ಕೈಬಿಟ್ಟಿರುವುದರಿಂದ ಎಳೆಯ ಬರೆಹಗಾರರಿಗೆ ಓದುವ ಬರೆಯುವ ಅವಕಾಶ ಇಲ್ಲದಂತಾಗಲಿಲ್ಲವೇ ಎನ್ನುವ ಪ್ರಶ್ನೆಗಳು ಬೇರೆಯೇ ಚರ್ಚೆಯ ವಿಷಯ.

ಇದು ಸರಕಾರದ ಆಮಿಷ ಮತ್ತು ಧಮಕಿಗೆ ದೊಡ್ಡ ದೊಡ್ಡ ಮಾಧ್ಯಮಗಳೇ ಮಂಡಿಯೂರಿ ಆಳುವವರ ಭಜನೆಯಲ್ಲಿ ತೊಡಗಿರುವ ಕಾಲ. ಸತ್ಯೋತ್ತರ ಯುಗದಲ್ಲಿ ಸತ್ಯ ಹೇಳುವುದು ಕಡು ಕಷ್ಟದ ಕೆಲಸ. ಇತ್ತೀಚೆಗೆ ಸಿಕ್ಕ ಕೇಂದ್ರ ಸರಕಾರದ ಅಧಿಕಾರಿಯೊಬ್ಬರಲ್ಲಿ ಅವರ ನಿತ್ಯದ ಕರ್ತವ್ಯಗಳ ಬಗ್ಗೆ ವಿಚಾರಿಸಿದೆ. ‘‘ಬೆಳಿಗ್ಗೆ ನಮ್ಮ ಮೊದಲ ಕೆಲಸ ‘ವಾರ್ತಾಭಾರತಿ’ಯಲ್ಲಿ ಏನು ಬಂದಿದೆ ಎಂಬ ಸಾರಾಂಶವನ್ನು ಕೇಂದ್ರ ಸರಕಾರಕ್ಕೆ ತಲಪಿಸುವುದು’’ ಎಂದು ಅವರು ಹೇಳಿದ್ದರು. ಆರ್ಥಿಕ ಸವಾಲುಗಳ ಜತೆಯಲ್ಲಿ, ಇಂತಹ ಸರಕಾರಿ ಕಣ್ಗಾವಲಿನ ನಡುವೆಯೂ ಕೆಲಸ ಮಾಡುತ್ತಾ, ವೃತ್ತಿಧರ್ಮ ಪಾಲಿಸುತ್ತಲೇ ಅಸ್ತಿತ್ವ ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ.

‘ವಾರ್ತಾಭಾರತಿ’ಯಂತಹ ಜನಪರ ಸುದ್ದಿ ಮಾಧ್ಯಮಗಳ ಮಹತ್ವ ಏನು, ಅವು ಯಾಕೆ ಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಸುಮ್ಮನೆ, ಅಂತಹ ಸುದ್ದಿ ಮಾಧ್ಯಮಗಳು ಇಲ್ಲದ ಒಂದು ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶ್ರೀನಿವಾಸ ಕಾರ್ಕಳ

contributor

Similar News