‘ಶಿಕ್ಷಣ’ವು ಸಂಘಟನೆ ಮತ್ತು ಹೋರಾಟದ ಕಥೆ ಹೇಳುತ್ತಿದೆ
‘ಪಂಚಮಪದ’ ಬಹುಪಾಲು ಕೋಟಗಾನಹಳ್ಳಿ ರಾಮಯ್ಯ ಅವರ ‘ಹೆಜ್ಜೆ ಮಾತಾಡು’ ಕೃತಿಯ ರಂಗರೂಪ. ಇಲ್ಲಿ ಮಂಡನೆಯಾಗುವ ಘಟನೆಗಳು ಪಂಚಮ ಪತ್ರಿಕೆಯವು. ಬೆಂಗಳೂರಿನ ‘ಜಂಗಮ ಕಲೆಕ್ಟಿವ್ ತಂಡದ ಕೆ.ಚಂದ್ರಶೇಖರ್ ನಿರ್ದೇಶನದ, ಕೆ.ಪಿ. ಲಕ್ಷ್ಮಣ್ ವಿನ್ಯಾಸದ ಈ ಪ್ರದರ್ಶನವನ್ನು ಚಳವಳಿಯ ಜೀವವಿದ್ದ ಭಾಷಣ ಮತ್ತು ಹಾಡುಗಳ ನೇಯ್ಗೆಯಲ್ಲಿ ಕಟ್ಟಲಾಗಿದೆ. ಪ್ರಸ್ತುತಿಯಲ್ಲಿ ಭರತ ಡಿಂಗ್ರಿ, ಉಮಾ ವೈ.ಜಿ, ನರಸಿಂಹರಾಜು ಬಿ.ಕೆ., ಶ್ರದ್ಧಾರಾಜ್ ಎಚ್.ಆರ್. ಶ್ವೇತಾ ಎಚ್.ಕೆ., ಮಾರಿಯಮ್ಮ, ನಾರಾಯಣಸ್ವಾಮಿ ಗೊಲ್ಲಹಳ್ಳಿ ಏಕಕಾಲಕ್ಕೆ ನಟನಟಿಯರಾಗಿ, ಹೋರಾಟಗಾರರಾಗಿ ಎಪ್ಪತ್ತು-ಎಂಭತ್ತರ ದಶಕದ ದಲಿತ ಹೋರಾಟದ ಕಥನವನ್ನು ಕಣ್ಮುಂದೆ ಕಟ್ಟಿಕೊಡುತ್ತಾರೆ.
‘‘ಮುತ್ತಿನ ಪಲ್ಲಕ್ಕಿ ಮುಟ್ಟಾದ ಮುಟ್ಟಿದರೆ ಅನ್ಯಾಯವೇನಣ್ಣ’’ ಎಂದು ಹಾಡುತ್ತಾ, ಸುಮಾರು ಮೂರು ದಶಕಗಳ ಹಿಂದೆ, ಕಮ್ಮಸಂದ್ರದಲ್ಲಿ ಉತ್ಸವದ ದೇವರಿಗೆ ದಲಿತರು ದೂರದಿಂದಲೇ ಪೂಜಿಸುವುದನ್ನು ನೆನೆದು ಇದು ನ್ಯಾಯವೇನಣ್ಣಾ ಎಂದು ಸಭಿಕರನ್ನು ಕೇಳಲಾಗುತ್ತದೆ. ಸಭಿಕರಲ್ಲಿ ಕೆಲವರು ‘ಇದು ಅನ್ಯಾಯ’ ಎಂದರೆ ಮತ್ತೆ ಕೆಲವರು ನಮಗೆ ದೇವರೇ ಬೇಡ ಎನ್ನುತ್ತಾರೆ. ‘ತನುವಿನೊಳಗನುದಿನವಿದ್ದು’ ಗಾಯನದ ಮೂಲಕ ಬಾನಂದೂರ ಕೆಂಪಯ್ಯ ಅವರ ಜನಿವಾರದ ಕಥೆ ಹೇಳುತ್ತಾ, ಕುಣಿಗಲ್ ತಾಲೂಕಿನ ದಾಸನಪುರದಲ್ಲಿ ನಡೆದ ಚಿಕ್ಕತಿಮ್ಮಯ್ಯನವರ ಕೊಲೆಯನ್ನು ಆಧರಿಸಿ ಕೆ.ಬಿ. ಸಿದ್ದಯ್ಯ ಕಟ್ಟಿದ ಹಾಡು, ಕೋಲಾರದ ಅನಸೂಯಮ್ಮನ ಮೇಲೆ ನಡೆದ ಅತ್ಯಾಚಾರ ಮತ್ತು ಶೇಷಗಿರಿಯಪ್ಪನ ಕೊಲೆ ಪ್ರಕರಣಗಳ ವರದಿಯ ಓದು ರಂಗದ ಮೇಲೆ ಹೊಸತೊಂದು ಲೋಕ ಸೃಷ್ಟಿಸುತ್ತವೆ. ಆ ಹೊಸ ಲೋಕದ ಹೆಸರೇ ನಾನು ಈಚೆಗೆ ನೋಡಿದ ‘ಪಂಚಮಪದ’ ರಂಗ ಪ್ರಯೋಗ.
ಜುಲೈ 22ರಂದು ಬೆಂಗಳೂರಿನ ಗಾಂಧಿಭವನ ಮಹಾದೇವ ದೇಸಾಯಿ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ‘ದಲಿತ ಚಳವಳಿ ಮತ್ತು ಸಮಕಾಲೀನ ಕರ್ನಾಟಕ’ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ರಾಜ್ಯದಾದ್ಯಂತ ದಸಂಸದ ಕಾರ್ಯಕರ್ತರು ಆಗಮಿಸಿದ್ದರು. ಹಂಸಲೇಖ ಅವರು ಉದ್ಘಾಟಿಸಿದರು, ದಿನೇಶ್ ಅಮಿನ್‌ಮಟ್ಟು, ಹಿರಿಯ ಹೋರಾಟಗಾರರಾದ ರಾಮದೇವ್ ರಾಕೆ, ವಿ. ನಾಗರಾಜ್, ಎನ್. ಮುನಿಸ್ವಾಮಿ, ಕುಂದೂರು ತಿಮ್ಮಯ್ಯ, ಚಂದ್ರಶೇಖರಯ್ಯ ಅವರುಗಳು ತಮ್ಮ ಹೋರಾಟದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ ದಸಂಸ (ಅಂಬೇಡ್ಕರ್ ವಾದ)ದ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಜಂಗಮ ಕಲೆಕ್ಟಿವ್ ತಂಡದ ‘ಪಂಚಮಪದ’ ನಾಟಕ ಪ್ರದರ್ಶನಗೊಂಡಿತು. ಒಂದಾದ ಕಾರ್ಯಕರ್ತರು ಒಮ್ಮೆ ಎಪ್ಪತ್ತು ಎಂಭತ್ತರ ದಶಕದ ದಸಂಸದ ಹೋರಾಟದ ದಿನಗಳಿಗೆ ಮರಳಿ ಬಂದಂತಾಯಿತು.
‘ಪಂಚಮಪದ’ ಬಹುಪಾಲು ಕೋಟಗಾನಹಳ್ಳಿ ರಾಮಯ್ಯ ಅವರ ‘ಹೆಜ್ಜೆ ಮಾತಾಡು’ ಕೃತಿಯ ರಂಗರೂಪ. ಇಲ್ಲಿ ಮಂಡನೆಯಾಗುವ ಘಟನೆಗಳು ಪಂಚಮ ಪತ್ರಿಕೆಯವು. ಬೆಂಗಳೂರಿನ ‘ಜಂಗಮ ಕಲೆಕ್ಟಿವ್ ತಂಡದ ಕೆ.ಚಂದ್ರಶೇಖರ್ ನಿರ್ದೇಶನದ, ಕೆ.ಪಿ. ಲಕ್ಷ್ಮಣ್ ವಿನ್ಯಾಸದ ಈ ಪ್ರದರ್ಶನವನ್ನು ಚಳವಳಿಯ ಜೀವವಿದ್ದ ಭಾಷಣ ಮತ್ತು ಹಾಡುಗಳ ನೇಯ್ಗೆಯಲ್ಲಿ ಕಟ್ಟಲಾಗಿದೆ. ಪ್ರಸ್ತುತಿಯಲ್ಲಿ ಭರತ ಡಿಂಗ್ರಿ, ಉಮಾ ವೈ.ಜಿ, ನರಸಿಂಹರಾಜು ಬಿ.ಕೆ., ಶ್ರದ್ಧಾರಾಜ್ ಎಚ್.ಆರ್. ಶ್ವೇತಾ ಎಚ್.ಕೆ., ಮಾರಿಯಮ್ಮ, ನಾರಾಯಣಸ್ವಾಮಿ ಗೊಲ್ಲಹಳ್ಳಿ ಏಕಕಾಲಕ್ಕೆ ನಟನಟಿಯರಾಗಿ, ಹೋರಾಟಗಾರರಾಗಿ ಎಪ್ಪತ್ತು-ಎಂಭತ್ತರ ದಶಕದ ದಲಿತ ಹೋರಾಟದ ಕಥನವನ್ನು ಕಣ್ಮುಂದೆ ಕಟ್ಟಿಕೊಡುತ್ತಾರೆ.
ನಿರ್ದೇಶಕ, ವಿನ್ಯಾಸಕಾರನನ್ನೂ ಒಳಗೊಂಡಂತೆ ಎಲ್ಲರೂ ಇಲ್ಲಿ ನಟರು. ತಿಳಿ ನೀಲಿಮಯ ಜೀನ್ಸ್ ಪ್ಯಾಂಟ್, ಜೀನ್ಸ್ ಶರ್ಟ್, ಕೊರಳಲ್ಲೊಂದು ಶಾಲು ಹಾಕಿ ಅತ್ಯಾಧುನಿಕತೆಯನ್ನು ಸಂಕೇತಿಸುತ್ತಾ ಗಾಢ ವಿಶಾದದಲ್ಲಿಯೂ, ಕಡು ದುಃಖದಲ್ಲಿಯೂ ಆಕ್ರೋಶವನ್ನು ಹೊರ ಹಾಕುತ್ತಾ, ಹಾಡಿಕೆ ಮತ್ತು ಕಥನವನ್ನು ಒಂದರೊಳಗೊಂದು ಬೆಸೆದಿದ್ದಾರೆ. ಎಲ್ಲಾ ಪಾತ್ರಧಾರಿಗಳ ಬಾಡಿ ಲಾಂಗ್ವೇಜ್ ಅಂಬೇಡ್ಕರ್ ಹೇಳುವ ಸ್ವಾಭಿಮಾನವನ್ನೇ ಬಟ್ಟೆಯನ್ನಾಗಿಸಿಕೊಂಡಂತಿದೆ. ಹಾಗಾಗಿ ಬಾಬಾ ಸಾಹೇಬರು ಹೇಳುವ ಶಿಕ್ಷಣ ಪಡೆದ ಹೊಸ ತಲೆಮಾರು ತನ್ನದೇ ಹಿರಿಯರ ಸಂಘಟನೆ ಮತ್ತು ಹೋರಾಟದ ಕತೆ ಹೇಳಿದಂತಿದೆ.
ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ನಡೆಸಿದ ಹೋರಾಟ ಅಸ್ಪಶ್ಯರನ್ನು ಮಾತ್ರವಲ್ಲದೆ ಎಲ್ಲಾ ದಮನಿತರನ್ನು ತಲೆ ಎತ್ತುವಂತೆ ಮಾಡಿತು. ಈ ಹೋರಾಟಕ್ಕೀಗ ಅರ್ಧ ಶತಮಾನ. ಇಂತಹ ಚಾರಿತ್ರಿಕ ಹೋರಾಟದ ದಾಖಲೆ ‘ಪಂಚಮ’ ಪತ್ರಿಕೆ. ಇಂತಹ ಪಂಚಮ ಪತ್ರಿಕೆಯ ಪುಟಪುಟಗಳಿಂದ ಎದ್ದು ಬಂದ ಅಕ್ಷರಗಳೇ ಕತೆ ಹೇಳುವ ರೀತಿಯೇ ‘ಪಂಚಮಪದ’. ಇಲ್ಲಿ ಬುಕ್ ಹಿಡಿದು ಓದುವ ತಂತ್ರ ಹೋರಾಟದ ಸಾಕ್ಷ್ಯವನ್ನು ಮರುಮಂಡಿಸುವ ಪ್ರಯೋಗದಂತೆ ಕಾಣುತ್ತದೆ.
ಅಂಬೇಡ್ಕರ್ 1920ರಿಂದ 1956ರತನಕ ನಡೆಸಿದ ಮೂಖನಾಯಕ (1920), ಬಹಿಷ್ಕೃತ ಭಾರತ (1927), ಜನತಾ (1930), ಪ್ರಬುದ್ಧ ಭಾರತ(1956) ಪತ್ರಿಕೆಗಳ ಮೂಲಕ ದೇಶದಲ್ಲಿ ದಲಿತ ಚರಿತ್ರೆಯನ್ನು ದಾಖಲಿಸಿದಂತೆ, ಕರ್ನಾಟಕದ ಎಚ್ಚೆತ್ತ ದಲಿತರ ಹೋರಾಟದ ಕಥನವನ್ನು ‘ಪಂಚಮ’ ದಾಖಲಿಸಿತು. ಆ ಹೊತ್ತಿನ ದಸಂಸದ ಹೋರಾಟದ ಕಥನ ಹೇಳುವ ಪ್ರಭಾವಿ ಮಾಧ್ಯಮವಾಗಿತ್ತು. ಪಂಚಮ ಪತ್ರಿಕೆ ದಾಖಲಿಸಿದ ಕರ್ನಾಟಕದ ಚರಿತ್ರೆಯೇ ಭಿನ್ನವಾದದ್ದು. ಪಂಚಮ ಪತ್ರಿಕೆಗಳನ್ನು ಆಕರವನ್ನಾಗಿಸಿಕೊಂಡು ಪಂಚಮ ಪತ್ರಿಕೆ ಹೇಳುವ ಕರ್ನಾಟಕದ ಚರಿತ್ರೆ ಎನ್ನುವ ಸಂಶೋಧನೆ ನಡೆಸಬಹುದು. ಅಂತಹದ್ದೇ ಪ್ರಯತ್ನವನ್ನು ಪಂಚಮಪದ ರಂಗಭೂಮಿಯ ಮೇಲೆ ಬಿತ್ತರಿಸಿದೆ.
ಹೀಗೆ ದಸಂಸ ಕಟ್ಟಿದ ಬಿ.ಕೃಷ್ಣಪ್ಪ, ಕವಿ ಕೆ.ಬಿ.ಸಿದ್ದಯ್ಯ, ಸಿದ್ದಲಿಂಗಯ್ಯ, ಬಾನಂದೂರು ಕೆಂಪಯ್ಯ, ಜೆನ್ನಿ, ಕೆ. ರಾಮಯ್ಯ, ಇಂದೂಧರ ಹೊನ್ನಾಪುರ, ದೇವನೂರ ಮಹಾದೇವ ಎಲ್ಲರೂ ರಂಗದಲ್ಲಿ ನಡೆದಾಡಿದ ಅನುಭವವಾಗುತ್ತದೆ. ಸಿದ್ದಲಿಂಗಯ್ಯನವರ ‘ಇಕ್ರಲಾ ಒದಿರ್ಲಾ’ ಹಾಡಿನಲ್ಲಿ ವ್ಯಕ್ತವಾಗುವ ಸಿಟ್ಟು ಹೊಸತಲೆಮಾರಿನ ಆಕ್ರೋಶವನ್ನೂ ಮೈದುಂಬಿಸಿಕೊಂಡಂತಿದೆ. ಪಂಚಮಪದ ಒಂದರ್ಥದಲ್ಲಿ ದಲಿತ ಹೋರಾಟದ ಹಾಡುಗಳ ಏಕರೂಪದ ಹಾಡಿಕೆಯನ್ನು ಪಲ್ಲಟಗೊಳಿಸಿದೆ.
ಅನಸೂಯಮ್ಮನ ಬಗೆಗೆ ಕೆ.ರಾಮಯ್ಯ ಕಟ್ಟಿದ ಹಾಡನ್ನು ಆಧರಿಸಿ ರಾಮಯ್ಯನ ಮಗಳು ದಿಶಾ ಬರೆದ ಪತ್ರ ದಲಿತ ಹೋರಾಟದ ಪುರುಷ ಯಾಜಮಾನ್ಯವನ್ನು ಪ್ರಶ್ನಿಸುವಂಥದ್ದು. ಹೀಗಾಗಿ ದಲಿತ ಹೋರಾಟದ ಮಹಿಳಾ ಗೈರುಹಾಜರಿಯನ್ನು ಪಂಚಮಪದ ಮೀರಲು ಯತ್ನಿಸಿದೆ. ಎಂಟು ನಟರಲ್ಲಿ ನಾಲ್ಕು ಮಹಿಳೆಯರು. ಜೆಂಡರ್ ನ್ಯೂಟ್ರಲ್ ಡ್ರೆಸ್ ಕೋಡ್. ಸ್ಟೇಜಿನ ಹೆಚ್ಚು ಸಮಯವನ್ನು ಹುಡುಗಿಯರೇ ಆವರಿಸಿಕೊಳ್ಳುತ್ತಾರೆ. ಮಾರಿಯಮ್ಮನ ತೆಲುಗು-ಕನ್ನಡ ಮಿಶ್ರಣದ ಹಾಡಿಕೆಯಿಂದ ಶುರುವಾದ ನಾಟಕ, ದಿಶಾಳ ಇಂಗ್ಲಿಷ್ ಪತ್ರದ ಓದಿನೊಂದಿಗೆ ಮುಕ್ತಾಯವಾಗುತ್ತದೆ.
ದಲಿತ ಸಮುದಾಯದ ಹಬ್ಬ, ಹುಟ್ಟು, ಸಾವು ಎಲ್ಲದರಲ್ಲೂ ಸಂಗಾತಿಯಾಗುವುದು ತಮಟೆ ಅಥವಾ ಹಲಗೆ. ಈ ತಮಟೆಯ ಸದ್ದೇ ದಲಿತ ಲೋಕದ ನೂರಾರು ನೆನಪುಗಳನ್ನು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುವಂತೆ ಮಾಡುತ್ತದೆ. ಅಂತೆಯೇ ಮಾರಿ ಮೊದಲಾದ ಹೆಣ್ಣುದೇವಿಯ ಜಾತ್ರೆಗೆ ರಂಗೇರುವುದು ಉರುಮೆ. ಈ ಉರುಮೆಯ ಸದ್ದೂ ಕೂಡ ದಲಿತರ ಸಾಂಸ್ಕೃತಿಕ ನೆನಪುಗಳನ್ನು ಕಾಪಿಟ್ಟುಕೊಂಡಿದೆ. ಹೀಗೆ ಅಸ್ಪಶ್ಯಲೋಕದ ನೆನಪುಗಳನ್ನು ತನ್ನೊಡಲೊಳಗಿಟ್ಟುಕೊಂಡ ತಮಟೆ, ಉರುಮೆ(ಹರೆ), ಜಂಬೆ, ಗೆಜ್ಜೆ, ಬಿದುರು ಮಳೆಕೋಲು ನಾಟಕವನ್ನು ಪರಿಣಾಮಕಾರಿಯಾಗಿಸಿವೆ. ಮಾರಿಯಮ್ಮನ ಹಾಡಿಕೆ ಎಲ್ಲರೊಳಗೂ ದಾಟಿಬರುವಂತೆ ಭಾಸವಾಗುತ್ತದೆ. ಸಚಿನ್ ಅವರ ಬೆಳಕಿನ ವಿನ್ಯಾಸ ಎಂಭತ್ತರ ದಶಕದ ನೆನಪುಗಳನ್ನು ಮರುಕಳಿಸಲು ನೆರವಾಗಿದೆ. ಹಾಗಾಗಿ ಪಂಚಮಪದ ದಲಿತನಾದದ ಹೊಸ ಅನುಭವ ನೀಡುತ್ತದೆ. ಮತಂಗ ಮಹರ್ಷಿ ತನ್ನ ಬೃಹದ್ದೇಶಿ ಕೃತಿಯಲ್ಲಿ ಚರ್ಚಿಸುವ ಗ್ರಾಮರಾಗಗಳನ್ನು ನೆನಪಿಸುತ್ತದೆ.
ಕನ್ನಡದ ರಂಗಭೂಮಿಯು ಕೆಲವರನ್ನು ಮುಟ್ಟಿ ಸ್ಟೇಜಿಗೆ ಕೈ ಹಿಡಿದು ಕರೆದುಕೊಂಡರೆ, ಮತ್ತೆ ಕೆಲವರನ್ನು ದೂರದಲ್ಲಿ ಕೂತು ನಾಟಕ ನೋಡಲು ಮಾತ್ರ ಅವಕಾಶ ಕೊಟ್ಟಿದೆ. ಅಂದರೆ ಕನ್ನಡದ ರಂಗಭೂಮಿ ದಲಿತರನ್ನು ಮುಟ್ಟಿಸಿಕೊಳ್ಳದಂತೆ ಶತಮಾನಗಳ ಕಾಲ ಅಸ್ಪಶ್ಯತೆ ಆಚರಿಸಿದೆ. ಈ ಮಧ್ಯೆ ದಲಿತೇತರ ಕೆಲವರು ದಲಿತ ಸಮುದಾಯವನ್ನು ಪ್ರತಿನಿಧಿಸಿ ಕೆಲವು ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ದಲಿತ ಸಮುದಾಯದ ಹೊಸತಲೆಮಾರು ತನ್ನದೇ ಹಿರಿಯರ ಕತೆ ಹೇಳುವ ಮಾದರಿ ಕನ್ನಡದಲ್ಲಿರಲಿಲ್ಲ. ಹಾಗಾಗಿ ‘ಜಂಗಮ ಕಲೆಕ್ಟಿವ್ ತಂಡ ರಂಗಕ್ಕೆ ದಲಿತ ಲೋಕವನ್ನು ಕೈಹಿಡಿದು ಕರೆತರುತ್ತಿದೆ. ಇದರ ಪರಿಣಾಮವೆ ‘ದಕ್ಲಕಥಾದೇವಿ’, ‘ಪಂಚಮಪದ’ ಮತ್ತು ‘ಬಾಬ್ ಮಾರ್ಲೆ ಫ್ರಂ ಕೋಡಿಹಳ್ಳಿ’ ಪ್ರಯೋಗಗಳಾಗಿವೆ. ಕೆ.ಪಿ.ಲಕ್ಷ್ಮಣ್ ಮತ್ತವರ ತಂಡ ಕನ್ನಡ ರಂಗಭೂಮಿಗೆ ಹೊಸ ಜೀವಂತಿಕೆಯ ಸ್ಪರ್ಶ ನೀಡುತ್ತಿದೆ.
ಚಿತ್ರ: ಅರವಿಂದ ಕುಡ್ಲ
ಈ ವಾರದಿಂದ ‘ವಾರ್ತಾಭಾರತಿ’ಯಲ್ಲಿ ‘ಜನಚರಿತೆ’ ಕಾಲಂ ಶುರುವಾಗುತ್ತಿದೆ. ‘ಜನಚರಿತೆ’ ಅಂಚಿನ, ಅಲಕ್ಷಿತ, ಮುಖ್ಯಧಾರೆಯಲ್ಲಿ ಮರೆಯಾಗುವ ಕೆಲವು ವರ್ತಮಾನದ ವಿದ್ಯಮಾನಗಳನ್ನು, ಕೆಲವು ಸಾಂಸ್ಕೃತಿಕ ವೈವಿಧ್ಯಗಳು, ಕೆಳಸಮುದಾಯಗಳ ಜಿಗುಟುತನ, ಮುಕ್ಕಾಗುತ್ತಿರುವ ಜನರ ಗುರುತುಗಳು ಮತ್ತು ಬಹುತ್ವದ ಎಳೆಗಳನ್ನು ಸರಳವಾಗಿ ಬರೆವ ಪ್ರಯತ್ನವಾಗಿದೆ.