ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು!

Update: 2024-05-27 07:03 GMT

ಹೊಸಕೋಟೆ: ದೇಸಿ ಆಟಗಳು ಮಕ್ಕಳಷ್ಟೇ ಅಲ್ಲ, ದೊಡ್ಡವರಲ್ಲೂ ಸೃಜನಶೀಲತೆ ಮೂಡಿಸುತ್ತಿದ್ದ ಪರಿ ಅನನ್ಯವಾದದ್ದು. ಕಳೆದು ಹೋಗುತ್ತಿರುವ ಕೌಟುಂಬಿಕ ಮೌಲ್ಯವನ್ನು ಪುನರ್ ಪ್ರತಿಷ್ಠಾಪಿಸುವ ಗುಣ ಗ್ರಾಮೀಣ ಕ್ರೀಡೆಗಳಿಗಿದೆ. ಅಪ್ಪಟ ಗ್ರಾಮೀಣ ಕ್ರೀಡೆಗಳು ಕಾಲಾನುಕ್ರಮವಾಗಿ ನಶಿಸಿ ಹೋಗುತ್ತಿರುವುದು ವಿಷಾದನೀಯ.

ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದ ಗ್ರಾಮೀಣ ಕ್ರೀಡೆಗಳು ಮುಂದಿನ ದಿನಗಳಲ್ಲಿ ಇತಿಹಾಸದ ಪುಟ ಸೇರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿರುವುದು ಒಂದೆಡೆಯಾದರೆ, ಮಕ್ಕಳಲ್ಲಿ ಬಾಲ್ಯಾವಸ್ಥೆಯ ಆಟೋಟಗಳ ಅರಿವಿಲ್ಲದೇ ದೈಹಿಕ ಹಾಗೂ ಮಾನಸಿಕ ಸ್ಥಿರತೆ ಕಳೆದುಕೊಳ್ಳುವಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಬಿಡುವಿನಲ್ಲಿ ನೆರೆಹೊರೆಯ ಮಕ್ಕಳು ಸೇರಿ ಆಡುತ್ತಿದ್ದ ಕಣ್ಣಾ ಮುಚ್ಚಾಲೆ, ಕಲ್ಲಿನಾಟ, ಚೌಕಾಬಾರ, ಬಳೆಚುಕ್ಕಿ ಆಟ, ಚನ್ನೇಮಣೆ, ಗೋಲಿಯಾಟ, ಚಿನ್ನಿದಾಂಡು, ಲಗೋರಿ, ಸಾಲುಚೆಂಡು, ಹಗ್ಗ-ಜಗ್ಗಾಟ, ಬುಗುರಿ, ಗೋಲಿ, ಕುಂಟೆಬಿಲ್ಲೆ, ಕಪ್ಪೆ ಓಟ, ಮನೆಯಾಟ ಮತ್ತಿತರ ಅಳಿವಿನಂಚಿನಲ್ಲಿವೆ.

ಮೊಬೈಲ್‌ನಲ್ಲಿ ಮಗ್ನ: ಮಕ್ಕಳ ಆಟವನ್ನು ಮನೆ ಮಂದಿಯೆಲ್ಲ ಒಂದೆಡೆ ಕುಳಿತು ವೀಕ್ಷಿಸಿ, ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಕುಟುಂಬದ ಒಬ್ಬೊಬ್ಬ ಸದಸ್ಯನೂ ಮೊಬೈಲ್ ಲೋಕದಲ್ಲಿ ಮುಳುಗಿ ಪರಸ್ಪರ ಸಂವಹನ ಮಾಡದಿರುವಷ್ಟು ಮಗ್ನರಾಗಿದ್ದಾರೆ.

ಟಿವಿಯ ಕಾರ್ಟೂನ್, ಮೊಬೈಲ್, ವೀಡಿಯೊ ಗೇಮ್‌ಗಳಲ್ಲಿ ಮುಳುಗಿರುವ ಪುಟ್ಟ ಮಕ್ಕಳಿಗೆ ಅಪ್ಪ-ಅಮ್ಮ, ಅಜ್ಜ-ಅಜ್ಜಿಯ ಪ್ರೀತಿಯ ಸಾಂಗತ್ಯವಿಲ್ಲದೇ ಭಾವನಾತ್ಮಕ ಸಂಬಂಧಗಳು ದೂರವಾಗಿವೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಮಕ್ಕಳ ಪಾಲಿಗೆ ಅದುವೇ ಸ್ವರ್ಗ ಎಂಬಂತಾಗಿದೆ. ಮೊಬೈಲ್ ಲಗ್ಗೆ ಇಟ್ಟ ಬಳಿಕ ಕೌಟುಂಬಿಕ ಮೌಲ್ಯಗಳನ್ನು ಬೆಸೆಯುವ ದೇಸೀ ಆಟಗಳು ಮಾಯವಾಗತೊಡಗಿದ್ದು, ಪರಸ್ಪರ ಪ್ರೀತಿ, ವಿಶ್ವಾಸಗಳ ಕೊರತೆ ಕಾಡುತ್ತಿದೆ.

ಇಂದಿನ ಪೋಷಕರಲ್ಲಿ ಕೂಡಾ ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರುತ್ಸಾಹ ತುಂಬಿದೆ. ಮಕ್ಕಳಿಗೆ ಅಧಿಕ ಅಂಕ ಗಳಿಸುವಂತೆ ಒತ್ತಡ ಹಾಕುವ ಪರಿಪಾಠ ಹೆಚ್ಚಾಗಿರುವುದರಿಂದ ಅವರು ಖಿನ್ನತೆಗೆ ಒಳಗಾಗುತ್ತಿದ್ದು, ಮಕ್ಕಳಿಗೆ ದೈಹಿಕ ಆಟೋಟಗಳಲ್ಲಿ ಆಸಕ್ತಿ ಇಲ್ಲದಂತಾಗಿದೆ.

ಗ್ರಾಮೀಣ ಕ್ರೀಡೆಗಳು ಅಳಿವಿನಂಚಿಗೆ ತಲುಪುತ್ತಿದ್ದು, ಹಿರಿಯರ ನೆನಪಿನ ತಿಜೋರಿಯಲ್ಲಿ ಭದ್ರವಾಗಿ ಕುಳಿತಿರುವ ಅಪರೂಪದ ದೇಸಿ ಆಟಗಳನ್ನು ಇಂದಿನ ಪೀಳಿಗೆಯ ಮಕ್ಕಳಿಗೆ ಪರಿಚಯಿಸುವ ಕೆಲಸಕ್ಕೆ ಪೋಷಕರು, ಶಿಕ್ಷಕರು ಮುಂದಾದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಸಾಧ್ಯವಾಗುತ್ತದೆ.

ಶಾಲಾ ಮಕ್ಕಳು ಬೇಸಿಗೆ ರಜೆಯಲ್ಲಿ ಮೊಬೈಲ್, ಕಂಪ್ಯೂಟರ್ ಕ್ರೀಡೆಗಳತ್ತ ಗಮನ ಹರಿಸುವುದನ್ನು ತಡೆಯಲೆಂದೇ ತಾಲೂಕಿನ ಹಲವೆಡೆ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಅನುಭವೀ ತರಬೇತುದಾರರಿಂದ ಕಲೆ, ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡೆ ಚಟುವಟಿಕೆಗಳನ್ನು ನಡೆಸುತ್ತಿದ್ದು, ಬಿಸಿಯೂಟದ ಜತೆಗೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರುವಲ್ಲಿ ಶಿಬಿರಗಳು ಸಹಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

-ಪದ್ಮನಾಭ, ಕ್ಷೇತ್ರ ಶಿಕ್ಷಣಾಧಿಕಾರಿ- ಹೊಸಕೋಟೆ

ಹೆಚ್ಚು ಅಂಕ ಗಳಿಸುವಂತೆ ತಮ್ಮ ಮಕ್ಕಳಿಗೆ ಪೋಷಕರು ಒತ್ತಡ ಹಾಕುತ್ತಿದ್ದಾರೆ. ಕಲಿಕೆಯತ್ತ ಹೆಚ್ಚು ಗಮನ ನೀಡಲೆಂದು ಮಕ್ಕಳನ್ನು ಗ್ರಾಮೀಣ, ಮತ್ತಿತರ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಮೂಲಕ ಮಕ್ಕಳು ಯಾಂತ್ರಿಕ ಜೀವನಕ್ಕೆ ಜೋತು ಬೀಳುತ್ತಾರೆ. ಇದರಿಂದ ತಮ್ಮ ಬಾಲ್ಯದ ಅತ್ಯಮೂಲ್ಯ ಅನುಭವಗಳನ್ನು ಕಳೆದುಕೊಳ್ಳುತ್ತಾರೆ.

- ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News