ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಂತರ ರೂ. ಲಾಭ ಗಳಿಸಿದ ರೈತ

ರಾಯಚೂರು, ಮಾ.18: ಕೃಷಿ ಲಾಭದಾಯಕವಾಗಿಲ್ಲ ಎಂದು ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಕುಟುಂಬ ಡ್ರ್ಯಾಗನ್ ಹಣ್ಣು ಬೆಳೆದು ಲಕ್ಷಾಂತರ ರೂ. ಸಂಪಾದಿಸಿದ್ದಾರೆ.
ರಾಯಚೂರು ತಾಲೂಕಿನ ಚಿಕ್ಕಸುಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರೆಪ್ಪ ಹನುಮಂತ ನಾಯಕ ರೈತ. ಇವರು ಕಡಿಮೆ ವೆಚ್ಚದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಕೈತುಂಬ ಆದಾಯ ಗಳಿಸುತ್ತಿದ್ದಾರೆ.
ಮಾರೆಪ್ಪ ಅವರು 2.5 ಎಕರೆಯಲ್ಲಿ ಡ್ರ್ಯಾಗನ್ ಹಣ್ಣು ಬೆಳೆದು ಈ ವರ್ಷ 25 ಲಕ್ಷ ರೂ. ಲಾಭ ಪಡೆದಿದ್ದಾರೆ. 2021ರಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಿಂದ 7 ಸಾವಿರ ಡ್ರ್ಯಾಗನ್ ಸಸಿಗಳನ್ನು ತಲಾ ಒಂದು ಸಸಿಗೆ 75 ರೂಪಾಯಿಯಂತೆ ಸಾರಿಗೆ ವೆಚ್ಚ ಸೇರಿ 2.5 ಲಕ್ಷ ಖರ್ಚು ಮಾಡಿದ್ದರು.
2.5 ವರ್ಷದ ಬಳಿಕ ಅಂದರೆ 2023ರಲ್ಲಿ ಮೊದಲ ಇಳುವರಿ ಬಂದಿದ್ದು ಇದು ಸ್ಯಾಂಪಲ್ ಆಗಿ 25 ಕ್ವಿಂಟಾಲ್ ಮಾತ್ರ ಬಂದಿದೆ. ಆದರೆ ಈ ವರ್ಷ 250 ಕ್ವಿಂಟಾಲ್ ಇಳುವರಿಯಾಗಿದೆ. ಬೆಳೆಯ ಕಟಾವು, ಕೂಲಿ ಹಾಗೂ ಇತರ ಖರ್ಚುವೆಚ್ಚ ಸೇರಿ ಒಟ್ಟು 6 ಲಕ್ಷ ರೂ. ಖರ್ಚು ಮಾಡಿ ಈಗ 25 ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ.
ಡ್ರ್ಯಾಗನ್ ಹಣ್ಣಿನ ಬೆಳೆಯ ಬಗ್ಗೆ 4 ವರ್ಷ ಮಾಹಿತಿ: ಆರಂಭದಿಂದಲೂ ತೋಟಗಾರಿಕೆ ಬೆಳೆಯಲ್ಲಿ ಆಸಕ್ತಿ ವಹಿಸಿದ್ದ ಮಾರೆಪ್ಪ ಅವರು ನಿಂಬೆ, ಮಾವು, ಅಂಜೂರ ಸಹಿತ ಇತರ ಬೆಳೆ ಬೆಳೆಯುತ್ತಿದ್ದರೂ. ಬಳಿಕ ಸಾಂಪ್ರದಾಯಿಕ ಕೃಷಿಗೆ ಮರಳಿ ಹತ್ತಿ, ತೊಗರಿ ಬೆಳೆಯುತ್ತಿದ್ದರು. 2017ರಲ್ಲಿ ಡ್ರ್ಯಾಗನ್ ಬೆಳೆಯ ಬಗ್ಗೆ ಸ್ನೇಹಿತರಿಂದ ತಿಳಿದುಕೊಂಡಿದ್ದರು. ಕೊರೋನ ಸಂದರ್ಭದಲ್ಲಿ ಡ್ರ್ಯಾಗನ್ ಬೆಳೆಯಲು ಮುಂದಾಗಿದ್ದರು ಹೊಸ ಬೆಳೆ ಬೆಳೆದು ಕೈಸುಟ್ಟುಕೊಳ್ಳಬಾರದು ಎಂದು ತೆಲಂಗಾಣ, ಮಹಾರಾಷ್ಟ್ರ, ವಿಜಯನಗರ ಜಿಲ್ಲೆಯ ರೈತರಿಂದ ಮಾಹಿತಿ ಪಡೆದುಕೊಂಡಿದ್ದರು. ಬಳಿಕ 2021ರಲ್ಲಿ ಡ್ರ್ಯಾಗನ್ ಬೆಳೆಯಲು ನಿರ್ಧಾರ ಮಾಡಿದ್ದರು.
ಮಾರೆಪ್ಪ ಕುಟುಂಬಕ್ಕೆ ಕೃಷಿಯೇ ಮೂಲಾಧಾರ: ಕೃಷಿ ಲಾಭದಾಯಕವಾಗಿಲ್ಲ, ಹವಾಮಾನ ವೈಪರೀತ್ಯಗಳು, ಅತಿವೃಷ್ಟಿ,ಅನಾವೃಷ್ಟಿ ಹಾಗೂ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ಸಿಗುವುದಿಲ್ಲ ಎಂದು ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಇವೆಲ್ಲದರ ನಡುವೆ ಮಾರೆಪ್ಪ ಅವರ ಕುಟುಂಬ ಕೃಷಿಯಲ್ಲೇ ಮುಂದುವರಿದು ಕೈತುಂಬಾ ಹಣ ಸಂಪಾದಿಸಿ ಮಾದರಿಯಾಗಿದ್ದಾರೆ. ಮಾರೆಪ್ಪ ಅವರ ತಂದೆ ಹನುಮಂತಪ್ಪನವರು ಕೃಷಿಯನ್ನೇ ನಂಬಿ ಬದುಕುತ್ತಿದ್ದು ತನ್ನ ಮಕ್ಕಳಿಗೆ ಕೃಷಿಯನ್ನು ಕೈಬಿಡದಂತೆ ಸೂಚನೆ ನೀಡಿದ್ದರಿಂದ ಅವರ ಮಾರ್ಗದರ್ಶನದಲ್ಲಿ ಮಾರೆಪ್ಪ ಸಹಿತ ಅವರ ಸಹೋದರರು ಕೃಷಿಯನ್ನೇ ಉಸಿರಾಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಬೆಳೆದ ಡ್ರ್ಯಾಗನ್ ಫ್ರೂಟ್, ಮಹಾರಾಷ್ಟ್ರ, ಸೋಲಾಪುರ, ಹೈದರಾಬಾದ್, ಬೆಂಗಳೂರುಗೆ ರಫ್ತು ಮಾಡುತ್ತಿದ್ದು, ಕೆ.ಜಿಗೆ 80-130ರವರೆಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ರಿಸ್ಕ್ ತೆಗೆದುಕೊಳ್ಳದಿದ್ದರೆ ಯಶಸ್ವಿಯಾಗಲು ಸಾಧ್ಯವಿಲ್ಲ. ಹೀಗಾಗಿ ಹೊಸ ಬೆಳೆ ಅನಿಸಿದರೂ ಡ್ರ್ಯಾಗನ್ ಬೆಳೆದೆ. ಇದರ ಪರಿಣಾಮ ಇಂದು ಯಶಸ್ಸು ಕಂಡಿದ್ದೇನೆ.
-ಮಾರೆಪ್ಪ ಹನುಮಂತ ನಾಯಕ, ರೈತ
ಭಾರೀ ಬೇಡಿಕೆ
ಡ್ರ್ಯಾಗನ್ ಹಣ್ಣು ಇತ್ತೀಚೆಗೆ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ಹಣ್ಣಿಗೆ ಭಾರೀ ಬೇಡಿಕೆಯಿದೆ. ಡ್ರ್ಯಾಗನ್ ಫ್ರೂಟ್ಸ್‌ನಲ್ಲಿ ಹೆಚ್ಚಿನ ನಾರಿನಾಂಶ, ಔಷಧೀಯ ಗುಣಗಳು ಹೊಂದಿದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಮಲಬದ್ಧತೆ ಸಮಸ್ಯೆ ನಿವಾರಣೆ, ಹೃದಯಸಂಬಂಧಿತ ಹಾಗೂ ಇತರ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ಡ್ರ್ಯಾಗನ್ ಫ್ರೂಟ್ ಸೇವನೆಗೆ ವೈದ್ಯರು ಸಲಹೆ ನೀಡುತ್ತಾರೆ. ಹೀಗಾಗಿ ಬೇಡಿಕೆ ಹೆಚ್ಚು.
ಮಹಾತ್ಮ ಗಾಂಧಿ ನರೇಗಾ ಯೋಜನೆಯು ಸುಸ್ಥಿರ ಅಭಿವೃದ್ಧಿಗೆ ಜೀವನೋಪಾಯ ಮಾರ್ಗಗಳನ್ನು ಬಲಪಡಿಸುವ ಉದ್ದೇಶದಿಂದ ಅನೇಕ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.ಮಾರೆಪ್ಪ ಅವರ ಡ್ರ್ಯಾಗನ್ ಫ್ರೂಟ್ ಬೆಳೆಯಲು ಉದ್ಯೋಗ ಖಾತ್ರಿ ಯೋಜನೆಯೂ ಕೈ ಹಿಡಿದಿದೆ. ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿ ವಿಭಾಗದಲ್ಲಿ 2023-24ನೇ ಸಾಲಿನಲ್ಲಿ ಕೂಲಿಹಣ, ಸಾಮಗ್ರಿಗಳ ವೆಚ್ಚ ಸೇರಿ 1.95 ಲಕ್ಷ ರೂ. ಸಹಾಯಧನ ಪಡೆದಿದ್ದಾರೆ.
-ಧನರಾಜ ಗೌಡ, ನರೇಗಾ ಯೋಜನೆಯ ಐಇಸಿ ಸಂಯೋಜಕ
