ಸಂಪೂರ್ಣ ಅವನತಿಯತ್ತ ಹಣಕಾಸು ಒಕ್ಕೂಟ ವ್ಯವಸ್ಥೆ
ಸಂವಿಧಾನದ ಪರಿಚ್ಛೇದ 282ರಲ್ಲಿ ‘ಸಾರ್ವಜನಿಕ ಉದ್ದೇಶಗಳಿಗೋಸ್ಕರ ಕೇಂದ್ರ ಅಥವಾ ರಾಜ್ಯ ಯಾವುದಾದರೂ ಅನುದಾನ ಕೊಡಬಹುದು, ಇಲ್ಲಿ ಸಂಸತ್ತು ಅಥವಾ ವಿಧಾನ ಮಂಡಲ ಶಾಸನ ಮಾಡುತ್ತದೆ ಎನ್ನುವುದು ಮುಖ್ಯವಲ್ಲ’ ಎಂದು ಹೇಳಲಾಗಿದೆ. ಅಂದರೆ ಯಾವುದೇ ಬಗೆಯ ಬಿಕ್ಕಟ್ಟು ಎದುರಾಗದಂತೆ ಕೇಂದ್ರ ಸರಕಾರ ಎಚ್ಚರ ವಹಿಸಬೇಕು ಎನ್ನುವುದು ಈ ನೀತಿಯ ಮುಖ್ಯ ಉದ್ದೇಶವಾಗಿತ್ತು. ಆದರೆ ಇದರ ಉದ್ದೇಶವನ್ನು ದುರ್ಬಳಕೆ ಮಾಡಿಕೊಂಡ ಕೇಂದ್ರ ಸರಕಾರವು ಕೇಂದ್ರ ಪ್ರಾಯೋಜಿತ ಯೋಜನೆಗಳು(ಸಿಎಸ್‌ಎಸ್), ಕೇಂದ್ರ ವಲಯ ಯೋಜನೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸತೊಡಗಿದೆ. ಇದು ರಾಷ್ಟ್ರೀಯ ಆದ್ಯತೆ ಎಂದು ಕರೆಯುವ ಕೇಂದ್ರವು ಈ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತಿದೆ.
ಒಕ್ಕೂಟ ಸರಕಾರ ವ್ಯವಸ್ಥೆಯಲ್ಲಿ ವಿಭಿನ್ನ ಸರಕಾರಗಳ ನಡುವಿನ ವಿತ್ತೀಯ ಸಂಬಂಧವನ್ನು ‘ಹಣಕಾಸು ಒಕ್ಕೂಟ’ ಎಂದು ಸ್ಥೂಲವಾಗಿ ಕರೆಯಬಹುದು. ಭಾರತದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಖ್ಯ ಘಟಕಗಳು. ವಿವಿಧ ಹಂತಗಳಲ್ಲಿನ ವೆಚ್ಚ ಮತ್ತು ರೆವಿನ್ಯೂ ಎರಡರ ಜವಾಬ್ದಾರಿಯುತ ಹಂಚಿಕೆ ಈ ಒಕ್ಕೂಟದ ತಳಹದಿಯಾಗಿದೆ. ಭಾರತ ಸರಕಾರ ಕಾಯ್ದೆ 1935ರಲ್ಲಿ ಮೊದಲ ಬಾರಿಗೆ ಅಧಿಕಾರವನ್ನು ಒಕ್ಕೂಟ, ಪ್ರಾಂತೀಯ ಮತ್ತು ಸಮವರ್ತಿ ಎಂದು ಮೂರು ಘಟಕಗಳಾಗಿ ವಿಭಜನೆ ಮಾಡಿದರು. ಸ್ವಾತಂತ್ರ್ಯದ ನಂತರ ಸಂವಿಧಾನದ ಅನುಬಂಧ 7ರಲ್ಲಿ ಕೇಂದ್ರ, ರಾಜ್ಯ, ಸಮವರ್ತಿ ಎಂದು ಮೂರು ಪಟ್ಟಿಗಳನ್ನು ರಚಿಸಿದರು. ಪರಿಚ್ಛೇದ 280ರ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಮತ್ತು ರಾಜ್ಯಗಳ ನಡುವಿನ ಹಣಕಾಸು ಹಂಚಿಕೆಯನ್ನು ನಿರ್ಧರಿಸಲು ಹಣಕಾಸು ಆಯೋಗವನ್ನು ರಚಿಸಲಾಯಿತು. ಕಳೆದ ಹತ್ತು ವರ್ಷಗಳಲ್ಲಿ 2015ರಲ್ಲಿ ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗದ ರಚನೆ, 2017ರಲ್ಲಿ ಜಿಎಸ್‌ಟಿ ಜಾರಿ ಮತ್ತು 15ನೇ ಹಣಕಾಸು ಆಯೋಗದ ಶಿಫಾರಸುಗಳು ಇಲ್ಲಿನ ಹಣಕಾಸು ಒಕ್ಕೂಟದಲ್ಲಿ ಭಾರೀ ಬದಲಾವಣೆಗೆ ನಿರ್ಣಾಯಕ ಪಾತ್ರ ವಹಿಸಿವೆ.
ರಾಜ್ಯಗಳ ಆದಾಯದ ಮೂಲಗಳು
ತೆರಿಗೆ ರೆವಿನ್ಯೂ: (ತನ್ನದೇ ಸ್ವಂತ ತೆರಿಗೆ ರೆವಿನ್ಯೂ- ಆದಾಯದ ಮೇಲಿನ ತೆರಿಗೆ, ಆಸ್ತಿ ಮತ್ತು ಬಂಡವಾಳ ವಹಿವಾಟಿನ ಮೇಲಿನ ತೆರಿಗೆ, ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ, ಕೇಂದ್ರದ ತೆರಿಗೆ ಹಂಚಿಕೆ)
ತೆರಿಗೆಯೇತರ ರೆವಿನ್ಯೂ: ಪಿಎಸ್‌ಇಗಳಿಂದ ಲಾಭಾಂಶ ಮತ್ತು ಲಾಭ
ಕೇಂದ್ರದ ಅನುದಾನಗಳು: ವಿಪತ್ತು ಪರಿಹಾರ ನಿಧಿ, ಸ್ಥಳೀಯ ಸಂಸ್ಥೆಗಳಿಗೆ ಅನುದಾನ, ರೆವಿನ್ಯೂ ಕೊರತೆಯ ಅನುದಾನ ಸಂವಿಧಾನ ವಿಧಿಗಳು
7ನೇ ಅನುಬಂಧ - ಪರಿಚ್ಛೇದ 246 - ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ, ಸಮವರ್ತಿ ಪಟ್ಟಿಯ ಅಡಿಯಲ್ಲಿ ಹಂಚಿಕೆ.
ಪರಿಚ್ಛೇದ 269, 269(ಎ) - ಕೇಂದ್ರವು ತೆರಿಗೆಯನ್ನು ವಿಧಿಸುತ್ತದೆ, ಇದರ ಸಂಗ್ರಹಣೆಯನ್ನು ರಾಜ್ಯಗಳಿಗೆ ವಹಿಸಲಾಗಿದೆ. ಉದಾಹರಣೆ - ಜಿಎಸ್‌ಟಿ.
ಪರಿಚ್ಛೇದ 270 - ಹಣಕಾಸು ಆಯೋಗದ ಶಿಫಾರಸಿನ ಮೇಲೆ ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆ.
ಪರಿಚ್ಛೇದ 275 - ಕೇಂದ್ರದಿಂದ ಅನುದಾನ.
ಪರಿಚ್ಛೇದ 292 - ಕೇಂದ್ರವು ದೇಶದ ಒಳಗೆ ಮತ್ತು ವಿದೇಶದಿಂದ ಸಾಲ ಪಡೆಯಬಹುದು.
ಪರಿಚ್ಛೇದ 293 - ರಾಜ್ಯಗಳು ದೇಶದ ಒಳಗಡೆಯಿಂದ ಮಾತ್ರ ಸಾಲ ಪಡೆಯಬೇಕು.
ಪರಿಚ್ಛೇದ 280 - ಹಣಕಾಸು ಆಯೋಗ.
ರಾಜ್ಯಗಳು ಹಣಕಾಸು ನಿರ್ವಹಣೆಯಲ್ಲಿ ಸ್ವಾವಲಂಬನೆ ಹೊಂದಿವೆಯೇ ಅಥವಾ ಒಕ್ಕೂಟ ಸರಕಾರದ ಮೇಲೆ ಅವಲಂಬಿತವಾಗಿದೆಯೇ ಎನ್ನುವ ಪ್ರಶ್ನೆಯು ಈ ಹಣಕಾಸು ಒಕ್ಕೂಟದ ಸಾರ್ವಜನಿಕ ನೀತಿಯ ಮೇಲೆ ಅವಲಂಬಿತವಾಗಿದೆ. ಇದಕ್ಕೆ ದೊರಕುವ ಉತ್ತರದ ಆಧಾರದಲ್ಲಿ ಹಣಕಾಸು ಒಕ್ಕೂಟದ ಸಾಧಕ ಬಾಧಕಗಳನ್ನು ನಿರ್ಧರಿಸಬಹುದು. ಹಣಕಾಸು ಒಕ್ಕೂಟವು ಆರ್ಥಿಕ ಅಭಿವೃದ್ಧಿ, ಸಂವಿಧಾನ ನೀತಿಗಳು, ಆಡಳಿತದ ಚೌಕಟ್ಟು, ರಾಜಕೀಯ ವಿಕೇಂದ್ರೀಕರಣಗಳ ಮೇಲೆ ಅವಲಂಬಿತವಾಗುತ್ತದೆ. ತೆರಿಗೆ ಹಂಚಿಕೆ, ಅನುದಾನ, ಸಹಾಯಧನ, ಸಾಲ ಇದರ ಮುಖ್ಯ ಸಾಧನಗಳು. ಒಕ್ಕೂಟ ಸರಕಾರಕ್ಕೆ ಅತಿ ಹೆಚ್ಚಿನ ತೆರಿಗೆ ವಿಧಿಸುವ ಅಧಿಕಾರವಿರುತ್ತದೆ, ಆದರೆ ಕನಿಷ್ಠ ವೆಚ್ಚವಿರುತ್ತದೆ. ರಾಜ್ಯಗಳಿಗೆ ಅತಿ ಹೆಚ್ಚಿನ ವೆಚ್ಚಗಳಿವೆ, ಆದರೆ ತೆರಿಗೆ ವಿಧಿಸುವ ಅಧಿಕಾರವಿಲ್ಲ. ಇಲ್ಲಿ ಅಸಮಾನತೆಯಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಂಚಿಕೆಯಾಗಿರುವ ಲಂಬವಾದ(ವರ್ಟಿಕಲ್) ಮತ್ತು ರಾಜ್ಯಗಳ ನಡುವಿನ ಹಂಚಿಕೆಯಾಗಿರುವ ಸಮತಲವಾದದಲ್ಲಿನ(ಹಾರಿಜಂಟಲ್) ಅಸಮಾನತೆಯು ಈ ಹಣಕಾಸು ಒಕ್ಕೂಟಕ್ಕೆ ದೊಡ್ಡ ಸವಾಲಾಗಿದೆ.
ಒಕ್ಕೂಟ ಸರಕಾರದಿಂದ ಬಿಡುಗಡೆಯಾಗುವ ಮೊತ್ತವನ್ನು ಸಾಮಾನ್ಯ ಉದ್ದೇಶದ ಯೋಜನೆಗಳು(ರಾಜ್ಯ ಸರಕಾರಗಳು ಜಾರಿಗೊಳಿಸಿದ ಕಲ್ಯಾಣ ಯೋಜನೆಗಳು ಮತ್ತು ಅವರ ಆಯ್ಕೆಗಳು), ನಿರ್ದಿಷ್ಟ ಉದ್ದೇಶದ ಯೋಜನೆಗಳು(ಕೇಂದ್ರ ನಿರ್ಧರಿಸಿದ, ಜಾರಿಗೊಳಿಸಿದ ಯೋಜನೆಗಳು) ಎಂದು ವಿಂಗಡಿಸಲಾಗುತ್ತದೆ. ಇಲ್ಲಿ ಸಾಮಾನ್ಯ ಉದ್ದೇಶದ ಯೋಜನೆಗಳಿಗೂ ಹಣಕಾಸು ಆಯೋಗಕ್ಕೂ ಸಂಬಂಧವಿಲ್ಲ. ನಿರ್ದಿಷ್ಟ ಉದ್ದೇಶದ ಯೋಜನೆಗಳಿಗೆ ಮಾತ್ರ ಆಯೋಗ ಸಂಬಂಧಿಸಿರುತ್ತದೆ. ಜೊತೆಗೆ ರಾಜ್ಯಗಳಿಗೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಮತ್ತು ರಾಜ್ಯ ಪ್ರಾಯೋಜಿತ ಯೋಜನೆಗಳಿಗೆ ಸಹಾಯಧನ ಹಂಚಿಕೆ ಮಾಡಬೇಕಾಗುತ್ತದೆ. ವಾಸ್ತವದಲ್ಲಿ ಇದು ಸಾಧ್ಯವಾಗಿದೆಯೇ ಎನ್ನುವ ಪ್ರಶ್ನೆಗೆ ನಿರಾಶಾದಾಯಕ ಉತ್ತರ ದೊರಕುತ್ತದೆ. ಮುಖ್ಯವಾಗಿ ಕಳೆದ ಹತ್ತು ವರ್ಷಗಳಲ್ಲಿ ಭಾರತ ಒಳಗೊಂಡಂತೆ ಅನೇಕ ಪ್ರಜಾಪ್ರಭುತ್ವವಾದಿ ದೇಶಗಳು ನಾಯಕ ಕೇಂದ್ರಿತ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಕಾರಣ ಹಣಕಾಸು ಸಮಾನವಾದವೂ ಸಹ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿದೆ.
1952-1967ರವರೆಗೆ ಕಾಂಗ್ರೆಸ್ ಪ್ರಾಬಲ್ಯದ ಒಂದು ಪಕ್ಷದ ಒಕ್ಕೂಟವಿದ್ದಾಗ ಈ ಕೇಂದ್ರ-ರಾಜ್ಯಗಳ ವಿವಾದ ಎಲ್ಲಿಯೂ ಪ್ರಕಟವಾಗಲಿಲ್ಲ. 1969-1989ರ ಅವಧಿಯಲ್ಲಿ ಕಾಂಗ್ರೆಸೇತರ ಪಕ್ಷಗಳು ಅಸ್ತಿತ್ವಕ್ಕೆ ಬಂದ ಬಹು ಪಕ್ಷಗಳ ಒಕ್ಕೂಟದ ಕಾಲಘಟ್ಟದಲ್ಲಿಯೂ ವಿರೋಧ ಪಕ್ಷಗಳ ರಾಜ್ಯ ಸರಕಾರಗಳನ್ನು ಏಕಪಕ್ಷೀಯವಾಗಿ ವಜಾಗೊಳಿಸುವ ಕೇಂದ್ರದ ನೀತಿ ಮಾತ್ರ ಸಾಕಷ್ಟು ಚರ್ಚೆಯಾಗಿದೆ. 1990-2014ರವರೆಗೆ ಪ್ರಾದೇಶಿಕ ಪಕ್ಷಗಳು ಪ್ರವರ್ಧಮಾನಕ್ಕೆ ಬಂದ ಮೈತ್ರಿ ಸರಕಾರಗಳ ಕಾಲದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವು ಕೇಂದ್ರದ ಅನುದಾನ ಮತ್ತು ಸಹಾಯಧನದ ಪ್ರಮಾಣ ನಿರ್ಧರಿಸುತ್ತಿದ್ದರೆ 2014-2024ರವರೆಗೆ ಮತ್ತು ನಂತರವೂ ಬಿಜೆಪಿಯ ನಿರಂಕುಶ ಆಡಳಿತದಲ್ಲಿ ವಿರೋಧಿ ಪಕ್ಷಗಳ ಸರಕಾರಗಳ ವಿರುದ್ಧ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು, ಈ ಸರಕಾರಗಳನ್ನು ಕೋಮು ಗಲಭೆೆಗಳ ಮೂಲಕ, ಅನುದಾನ ನಿರಾಕರಿಸುವುದರ ಮೂಲಕ ಹಣಿಯಲು ಪ್ರಯತ್ನಿಸುತ್ತಿರುವುದು ವರ್ತಮಾನದ ರಾಜಕಾರಣವಾಗಿದೆ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷದ ಮೂಲ ಕಾರಣಗಳು
ರಾಜ್ಯಗಳ ಸಾಲದ ಮೇಲಿನ ಮಿತಿ: 15ನೇ ಹಣಕಾಸು ಆಯೋಗದ ಶಿಫಾರಸನ್ನು ಆಧರಿಸಿ ಕೇಂದ್ರವು ಏಕಪಕ್ಷೀಯವಾಗಿ ರಾಜ್ಯಗಳು ಜಿಎಸ್‌ಡಿಪಿಯ ಶೇ.3ರಷ್ಟು ಮಾತ್ರ ಸಾಲ ಪಡೆಯಬೇಕು ಎಂದು ಮಿತಿ ಹೇರಿದೆ. ಇದರಿಂದಾಗಿ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗಿದೆ ಮತ್ತು ಕಲ್ಯಾಣ ಯೋಜನೆಗಳನ್ನು ಒಳಗೊಂಡಂತೆ ತಮಗೆ ಅಗತ್ಯವಿರುವ ಮಾದರಿಯಲ್ಲಿ ಹಣಕಾಸು ಯೋಜನೆ ರೂಪಿಸಿಕೊಳ್ಳುವುದು ಕಠಿಣವಾಗುತ್ತಿದೆ.
ಲಂಬವಾದ(ವರ್ಟಿಕಲ್) ತೆರಿಗೆ ಹಂಚಿಕೆ: ಆದಾಯ ತೆರಿಗೆ, ಸಿಜಿಎಸ್‌ಟಿ, ವಿದೇಶಿ ವಹಿವಾಟಿನ ಮೇಲೆ ತೆರಿಗೆ ಮುಂತಾದವುಗಳ ಮೇಲಿನ ಅಧಿಕಾರ ಕೇವಲ ಕೇಂದ್ರಕ್ಕಿದೆ. ರಾಜ್ಯಗಳಿಗೆ ಎಸ್‌ಜಿಎಸ್‌ಟಿ ಮಾತ್ರ ನೇರವಾಗಿ ದೊರಕುತ್ತದೆ. ಮಿಕ್ಕ ತೆರಿಗೆ ಹಂಚಿಕೆ ಕೇಂದ್ರದ ಮೇಲೆ ಅವಲಂಬಿತವಾಗಿದೆ. ಈ ವಿಷಯದಲ್ಲಿ ಕೇಂದ್ರವು ತಾರತಮ್ಯ ನೀತಿ ಅನುಸರಿಸುತ್ತಿದೆ ಮತ್ತು ರಾಜ್ಯಗಳು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿವೆ.
15ನೇ ಹಣಕಾಸು ಆಯೋಗದ ಶಿಫಾರಸು: ಈ ಆಯೋಗದ ಶಿಫಾರಸಿನ ಅನುಸಾರ ಲಂಬವಾದ ಮತ್ತು ಸಮತಲವಾದ ತೆರಿಗೆ ಹಂಚಿಕೆಗೆ ಜನಸಂಖ್ಯೆ(ಶೇ.15), ವಿಸ್ತೀರ್ಣ(ಶೇ.15), ರಾಜ್ಯಗಳ ನಡುವಿನ ತಲಾ ಅದಾಯದ ಅಂತರ(ಶೇ.45), ಜನಸಂಖ್ಯೆಯ ಪರಿವರ್ತನೆ(ಶೇ.12.5), ಅರಣ್ಯ ಮತ್ತು ಪರಿಸರ(ಶೇ.10), ತೆರಿಗೆ ಪರಿಣಾಮ(ಶೇ.2.5)ಗಳನ್ನು ಆಧರಿಸುತ್ತದೆ.
ಇಲ್ಲಿ ಯಾವುದೇ ರಾಜ್ಯದ ತಲಾ ಆದಾಯವು ಕಡಿಮೆಯಾಗಿದ್ದರೆ(ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ ಇತ್ಯಾದಿ) ಅವರಿಗೆ ಹೆಚ್ಚಿನ ತೆರಿಗೆ ಪಾಲು ದೊರಕುತ್ತದೆ. ಅಂದರೆ ತಲಾ ಆದಾಯ ಹೆಚ್ಚಿರುವ ಕಾರಣಕ್ಕೆ ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪಾಲು ದೊರಕುತ್ತದೆ. ಇದು ವಿವಾದಾತ್ಮಕ ನಿಯಮವಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದರೂ ತೆರಿಗೆ ಪಾಲು ಕಡಿಮೆ ದೊರಕುವುದನ್ನು ದಕ್ಷಿಣ ರಾಜ್ಯಗಳು ವಿರೋಧಿಸುತ್ತಿವೆ.
2011ರ ಜನಗಣತಿ ಆಧರಿಸಿ ಜನಸಂಖ್ಯೆಯ ಪರಿವರ್ತನೆಯನ್ನು ನಿರ್ಧರಿಸುತ್ತಾರೆ. 14ನೇ ಹಣಕಾಸು ಆಯೋಗವು 1971ರ ಜನಗಣತಿಯನ್ನು ಆಧರಿಸಿತ್ತು. 1971-2011ರ ನಲವತ್ತು ವರ್ಷಗಳ ಅವಧಿಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಶೇ.2ರಷ್ಟು ಜನಸಂಖ್ಯೆ ಕಡಿಮೆಯಾಗಿದೆ. ಈ ಕಾರಣಕ್ಕೂ ತೆರಿಗೆ ಪಾಲಿನಲ್ಲಿ ಕಡಿತವಾಗುತ್ತದೆ. ಉತ್ತರದ ರಾಜ್ಯಗಳ ಜನಸಂಖ್ಯೆ ಹೆಚ್ಚಳವಾಗಿರುವ ಕಾರಣ ಹೆಚ್ಚಿನ ತೆರಿಗೆ ಪಾಲು ದೊರಕುತ್ತದೆ. ಜನಸಂಖ್ಯೆ ನಿಯಂತ್ರಣ ಸಾಧಿಸಿರುವುದಕ್ಕೆ ಇದು ಶಿಕ್ಷೆಯೇ ಎಂದು ದಕ್ಷಿಣದ ರಾಜ್ಯಗಳು ಪ್ರಶ್ನಿಸುತ್ತಿವೆೆ.
ಸೆಸ್ ಸರ್‌ಚಾರ್ಜ್ ಸಂಪೂರ್ಣ ಕೇಂದ್ರದ ಖಜಾನೆಗೆ: ಸಮಗ್ರ ತೆರಿಗೆಯ ಶೇ.25ರಷ್ಟಿರುವ ಸೆಸ್ ಸರ್‌ಚಾರ್ಜ್ ಸಂಪೂರ್ಣ ಕೇಂದ್ರದ ಬೊಕ್ಕಸಕ್ಕೆ ಸಂಗ್ರಹವಾಗುತ್ತದೆ. 2017-18 ಮತ್ತು 2022-23ರ ಅವಧಿಯಲ್ಲಿ ಸೆಸ್ ಸರ್‌ಚಾರ್ಜ್‌ನ ಸಂಗ್ರಹ ಶೇ.133ರಷ್ಟು ಹೆಚ್ಚಾಗಿದೆ. ಕೇಂದ್ರವು ತನಗೆ ಮಾತ್ರ ದೊರಕುವ ಸೆಸ್ ಸರ್‌ಚಾರ್ಜ್ ತೆರಿಗೆಯನ್ನು ನಿಗದಿತವಾಗಿ ಹೆಚ್ಚಿಸುತ್ತಲೇ ಬಂದಿರುವುದು ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯಗಳಿಗೆ ಸಹಾಯಧನ: 2015-16ರಲ್ಲಿ ರೂ. 1,95,000 ಕೋಟಿಯಿದ್ದ ಸಹಾಯಧನ 2023-24ರಲ್ಲಿ ರೂ.1,65,000 ಕೋಟಿಯಷ್ಟಿದೆ. ರೂ. 30,000 ಕೋಟಿ ಕಡಿಮೆಯಾಗಿದೆ.
ರಾಜ್ಯಗಳ ತಕರಾರು ಮತ್ತು ಹಕ್ಕೊತ್ತಾಯ
ಸ್ವಾತಂತ್ರ್ಯ ಬಂದ ದಿನದಿಂದಲೂ ಭಾರತದ ಹಣಕಾಸು(ವಿತ್ತೀ ಯ) ಒಕ್ಕೂಟದ ರೂಪುರೇಷೆಗಳು ಅಸ್ಪಷ್ಟವಾಗಿದೆ. ನೆಹರೂ ಕಾಲದ ಪ್ರಜಾಪ್ರಭುತ್ವ ದಿನಗಳಲ್ಲಿ ಇದರ ಸ್ವರೂಪದ ಮತ್ತು ಚಿಂತನೆಗಳ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ತೊಂಭತ್ತರ ದಶಕದವರೆಗೂ ಒಂದು ಮಟ್ಟದಲ್ಲಿ ಆಚರಣೆಯಲ್ಲಿದ್ದ ಈ ಮಾದರಿಯು ಮೋದಿ ನೇತೃತ್ವದ ಆಡಳಿತದಲ್ಲಿ ಒಂದು ದೇಶ ಒಂದು ಆರ್ಥಿಕತೆಯ ಪ್ರಚಾರದ ಕಾರಣದಿಂದ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಆರಂಭದಲ್ಲಿ ಎರಡು ಹಂತದ ವ್ಯವಸ್ಥೆಯಿದ್ದ ಇದರ ಸ್ವರೂಪವು ಸಂವಿಧಾನದ 73ಮತ್ತು74ರ ತಿದ್ದುಪಡಿಯ ನಂತರ ಬಹು ಹಂತದ ಒಕ್ಕೂಟ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದೆ. ಆದರೆ ವಾಸ್ತವದಲ್ಲಿ ಬಹು ಹಂತವನ್ನು ಪರಿಪೂರ್ಣವಾಗಿ ಅಳವಡಿಸಿಕೊಂಡಿಲ್ಲ. ಪ್ರತ್ಯೇಕ ಅಧಿಕಾರ ಕ್ಷೇತ್ರವನ್ನೊಳಗೊಂಡ ಹಣಕಾಸು ಸಮಾನವಾದ ಮತ್ತು ವಿಕೇಂದ್ರೀಕರಣ ಎರಡೂ ಹಣಕಾಸು ಒಕ್ಕೂಟದ ಮುಖ್ಯ ನೀತಿಗಳಾಗಿವೆ. ಆದರೆ ಈ ಎರಡೂ ಮಾದರಿಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲ. ವಿಕೇಂದ್ರೀಕರಣದ ಆಧಿಕಾರ ರಚನೆಯು ತಳಮಟ್ಟದಿಂದ ಆರಂಭಗೊಳ್ಳಬೇಕಿತ್ತು. ಆದರೆ ಇಂದಿಗೂ ಮೇಲಿನಿಂದ ಆಜ್ಞೆ ಹೊರಡಿಸುವ ಲಂಬವಾದ(ವರ್ಟಿಕಲ್) ಅಧಿಕಾರ ನಿಯಂತ್ರಣವಿದೆ. ಗ್ರಾಮ ಪಂಚಾಯತ್‌ಗಳಿಗೆ ಆರ್ಥಿಕ ಅನುದಾನವೂ ಮೇಲಿನಿಂದಲೇ ಬಿಡುಗಡೆಯಾಗಬೇಕಿದೆ. ರಾಜ್ಯದ ಗ್ರಾಮವೊಂದಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಸ್ಥಳೀಯ ಚುನಾಯಿತ ಸಂಸ್ಥೆಯ ಜವಾಬ್ದಾರಿಯಾಗಿದ್ದರೂ ಪ್ರಧಾನಿ ಮೋದಿಯವರ ‘ನಾವು ಈ ಯೋಜನೆಯನ್ನು ರೂಪಿಸುತ್ತೇವೆ’ ಎನ್ನುವ ನಿರಂಕುಶ ನಡೆ ಈ ನಾಯಕ ಕೇಂದ್ರಿತ ವ್ಯವಸ್ಥೆಗೆ ಒಂದು ಉದಾಹರಣೆ. ಆದರೆ ಇದೇ ಪ್ರಧಾನಿ ರಾಜ್ಯದ ಗ್ರಾಮವೊಂದಕ್ಕೆ ಭೇಟಿ ಕೊಟ್ಟಾಗ ‘ಕುಡಿಯುವ ನೀರು ಕಲ್ಪಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ, ಕೇಂದ್ರ ಸರಕಾರದ್ದಲ್ಲ’ ಎಂದು ಹೇಳಲು ಸಾಧ್ಯವಿಲ್ಲ. ಇದು ಒಂಥರ ಇದ್ದೂ ಇರದಂತಹ ಒಕ್ಕೂಟ ವ್ಯವಸ್ಥೆ.
ಸಂವಿಧಾನದ ಪರಿಚ್ಛೇದ 282ರಲ್ಲಿ ‘ಸಾರ್ವಜನಿಕ ಉದ್ದೇಶಗಳಿಗೋಸ್ಕರ ಕೇಂದ್ರ ಅಥವಾ ರಾಜ್ಯ ಯಾವುದಾದರೂ ಅನುದಾನ ಕೊಡಬಹುದು, ಇಲ್ಲಿ ಸಂಸತ್ತು ಅಥವಾ ವಿಧಾನ ಮಂಡಲ ಶಾಸನ ಮಾಡುತ್ತದೆ ಎನ್ನುವುದು ಮುಖ್ಯವಲ್ಲ’ ಎಂದು ಹೇಳಲಾಗಿದೆ. ಅಂದರೆ ಯಾವುದೇ ಬಗೆಯ ಬಿಕ್ಕಟ್ಟು ಎದುರಾಗದಂತೆ ಕೇಂದ್ರ ಸರಕಾರ ಎಚ್ಚರ ವಹಿಸಬೇಕು ಎನ್ನುವುದು ಈ ನೀತಿಯ ಮುಖ್ಯ ಉದ್ದೇಶವಾಗಿತ್ತು. ಆದರೆ ಇದರ ಉದ್ದೇಶವನ್ನು ದುರ್ಬಳಕೆ ಮಾಡಿಕೊಂಡ ಕೇಂದ್ರ ಸರಕಾರವು ಕೇಂದ್ರ ಪ್ರಾಯೋಜಿತ ಯೋಜನೆಗಳು(ಸಿಎಸ್‌ಎಸ್), ಕೇಂದ್ರ ವಲಯ ಯೋಜನೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸತೊಡಗಿದೆ. ಇದು ರಾಷ್ಟ್ರೀಯ ಆದ್ಯತೆ ಎಂದು ಕರೆಯುವ ಕೇಂದ್ರವು ಈ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತಿದೆ.
ಎಂಬತ್ತರದ ದಶಕದ ನಂತರ ಜಾರಿಗೊಂಡ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಕಾರಣದಿಂದ ಇಡೀ ದೇಶವು ಯೋಜಿತ ಆರ್ಥಿಕತೆಯಿಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಜಿಗಿತಗೊಂಡಿದೆ. ಇದರ ಮುಂದುವರಿದ ಭಾಗವಾಗಿ 2003ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವು ಹಣಕಾಸು ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ(ಎಫ್‌ಆರ್‌ಬಿಎಂ) ಕಾಯ್ದೆ ಜಾರಿಗೊಳಿಸಿತು. ಈ ಕಾಯ್ದೆಯ ನಂತರ ಕೇಂದ್ರವು ರಾಜ್ಯಗಳು ಹಣಕಾಸು ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ನಿಯಂತ್ರಿಸುವ ಪರಂಪರೆ ಆರಂಭಗೊಂಡಿತು. ಅಲ್ಲಿಯವರೆಗೂ ಮಿಗುತಾಯ ಹಣಕಾಸಿನಿಂದ(ಸರ್ಪಲಸ್ ಫಿಸ್ಕಲ್) ಆರ್ಥಿಕವಾಗಿ ಸುರಕ್ಷಿತವಾಗಿದ್ದ ದಕ್ಷಿಣ ರಾಜ್ಯಗಳು ಈ ಕಾಯ್ದೆಯ ನಂತರ ಕ್ರಮೇಣ ಕೊರತೆ ಹಣಕಾಸು(ಡಿಫಿಸಿಟ್ ಫಿಸ್ಕಲ್) ದಿನಗಳಿಗೆ ಹೊರಳಿಕೊಳ್ಳಬೇಕಾಯಿತು. ತನ್ನ ರಾಜ್ಯದ ಜನತೆಗೆ ಅಗತ್ಯವಿರುವ ಆರ್ಥಿಕ ನೀತಿ ರೂಪಿಸುವ, ಅಭಿವೃದ್ಧಿಗಳಿಗೆ ಸಾಲ ಮಾಡುವ ಸ್ವಾತಂತ್ರ್ಯ ಕಳೆದುಕೊಂಡು ಪ್ರತಿಯೊಂದನ್ನು ಕೇಂದ್ರ ನಿಯಂತ್ರಿಸುವ ಒಕ್ಕೂಟ ವ್ಯವಸ್ಥೆ ಆರಂಭಗೊಂಡಿತು. ರಾಜ್ಯಗಳು ಜಿಡಿಪಿಯ ಶೇ.3ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಸಾಲ ಮಾಡಬೇಕು, ವಿತ್ತೀಯ ಕೊರತೆಯನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿರಿಸಬೇಕು ಎನ್ನುವ ನಿಯಮಗಳನ್ನು ಜಾರಿಗೊಳಿಸಲಾಯಿತು. ಇದು ನೇರವಾಗಿ ಕಲ್ಯಾಣ ಯೋಜನೆಗಳ ಮೇಲೆ ದುಷ್ಪರಿಣಾಮ ಬೀರಿತು. ವಿತ್ತೀಯ ಕೊರತೆಯನ್ನು ನಿಯಂತ್ರಿಸುವ ನೆಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ, ನರೇಗಾ, ಗ್ರಾಮೀಣ ಅಭಿವೃದ್ಧಿ, ಅಂಗನವಾಡಿ ಮುಂತಾದ ಇಲಾಖೆಗಳಿಗೆ ಅನುದಾನ ಕಡಿತಗೊಂಡಿತು.
ಮೋದಿ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳಿಗೆ ತಮ್ಮ ಹಕ್ಕುಗಳನ್ನು ಮಂಡಿಸಲು ಸೂಕ್ತ ವೇದಿಕೆಯಾಗಿದ್ದ, ಪ್ರತೀ ರಾಜ್ಯಗಳಿಗೆ ತೆರಳಿ ಅಲ್ಲಿನ ಸರಕಾರಗಳ ಜೊತೆಗೆ ಹಣಕಾಸು ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸುತ್ತಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿದರು. ತಮ್ಮ ಕೈಗೊಂಬೆಯಾಗಿರುವ ಕೇಂದ್ರೀಕರಣಗೊಂಡ ನೀತಿ ಆಯೋಗವನ್ನು ಸ್ಥಾಪಿಸಿದರು.
ಗಾಯದ ಮೇಲೆ ಬರೆ ಇಟ್ಟಂತೆ ಅಗತ್ಯವಿದ್ದ ತೆರಿಗೆ ಸುಧಾರಣೆಯ ನೆಪದಲ್ಲಿ ಜಿಎಸ್‌ಟಿ ಎನ್ನುವ ಹಣಕಾಸು ಒಕ್ಕೂಟಕ್ಕೆ ಮಾರಕವಾಗಿರುವ ಕಾಯ್ದೆ ಜಾರಿಗೊಳಿಸಿದರು. ಈ ನೀತಿಗಳಿಂದ ಲಂಬವಾದ(ವರ್ಟಿಕಲ್) ಮತ್ತು ಸಮತಲವಾದ(ಹಾರಿಜಂಟಲ್) ಹಣಕಾಸು ಹಂಚಿಕೆಯಲ್ಲಿ ಭಾರೀ ವ್ಯತ್ಯಾಸಗೊಂಡು ರಾಜ್ಯಗಳು ತಮ್ಮ ಹಕ್ಕುಗಳನ್ನು ಕಳೆದುಕೊಂಡು ತಮ್ಮ ಪಾಲಿನ ತೆರಿಗೆ ಹಣವನ್ನು ಕೇಂದ್ರದ ಬಳಿ ಬೇಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಾರಾಂಶದಲ್ಲಿ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯಿಂದ ರಾಜ್ಯಗಳು ತಮ್ಮ ದನಿಯನ್ನು ಕಳೆದುಕೊಂಡವು. ರಾಜಕೀಯ ಕೇಂದ್ರೀಕರಣವು ಕ್ರಮೇಣ ಕೇಂದ್ರೀಕೃತ ಹಣಕಾಸು ಒಕ್ಕೂಟಕ್ಕೆ ದಾರಿ ಮಾಡಿಕೊಟ್ಟಿತು.
ಭಾರತದ ಹಣಕಾಸು ಒಕ್ಕೂಟದಲ್ಲಿ ಹಣಕಾಸು ಆಯೋಗ ಮುಖ್ಯ ಪಾತ್ರ ವಹಿಸುತ್ತದೆ. ಸೆಸ್, ಸರ್‌ಚಾರ್ಜ್, ತೆರಿಗೆಯೇತರ ರೆವಿನ್ಯೂ ಹೊರತುಪಡಿಸಿ ಕೇಂದ್ರದ ಸಮಗ್ರ ತೆರಿಗೆ ರೆವಿನ್ಯೂ ಈ ಆಯೋಗದ ಪರಿಧಿಯಲ್ಲಿ ಬರುತ್ತದೆ. ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆ(ಲಂಬವಾದ) ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯ(ಸಮತಲವಾದ) ಕುರಿತು ನೀತಿ ನಿಯಮಾವಳಿ ರೂಪಿಸುವ ಹಣಕಾಸು ಆಯೋಗವು ಪ್ರತೀ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸುತ್ತದೆ. ರಾಜ್ಯ ಸರಕಾರಗಳ ಮನವಿ ಮತ್ತು ಹಕ್ಕೊತ್ತಾಯಗಳು ಮತ್ತು ಕೇಂದ್ರದ ನಿಲುವುಗಳನ್ನು ಒಟ್ಟಗೆ ಕ್ರೋಡೀಕರಿಸಿ ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುತ್ತದೆ. ಆದರೆ ವಾಸ್ತವದಲ್ಲಿ ಬೇರೆಯದೇ ಚಿತ್ರಣವಿದೆ.
2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಒಂದು ವರ್ಷದ ಮೊದಲು 14ನೇ ಹಣಕಾಸು ಆಯೋಗವು ರಚನೆಯಾಗಿತ್ತು. ಈ ಆಯೋಗವು ಕೇಂದ್ರದ ರೆವಿನ್ಯೂನಲ್ಲಿ ರಾಜ್ಯಗಳ ಪಾಲನ್ನು ಶೇ.32ರಿಂದ ಶೇ.42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿತ್ತು. ರಿಪೋರ್ಟರ್ಸ್ ಕಲೆಕ್ಟಿವ್ ತನಿಖಾ ತಂಡವು ‘ಆಗಿನ ಪ್ರಧಾನಿ ಮೋದಿ ಆಯೋಗದ ಅಧ್ಯಕ್ಷರಾಗಿದ್ದ ವೈ.ವಿ. ರೆಡ್ಡಿಯವರಿಗೆ ರಾಜ್ಯಗಳ ಪಾಲನ್ನು ಕಡಿತಗೊಳಿಸುವಂತೆ ಸೂಚಿಸಿದ್ದರು. ಆದರೆ ರೆಡ್ಡಿಯವರು ಪ್ರಧಾನಿಗಳ ಈ ಒತ್ತಾಯಕ್ಕೆ ಮಣಿಯದೆ ಶೇ.42ರಷ್ಟು ಹಂಚಿಕೆಯನ್ನು ಕಾರ್ಯಗತಗೊಳಿಸಿದರು. ರಾಜ್ಯಗಳ ಪಾಲನ್ನು ಕಡಿಮೆ ಮಾಡಲು ಬಯಸಿದ್ದ ಇದೇ ಮೋದಿ ಹಿಂದೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಗಳಿಗೆ ಶೇ.50ರಷ್ಟು ಪಾಲು ಕೊಡಬೇಕೆಂದು ಅಭಿಯಾನ ಮಾಡಿದ್ದರು. ಕಡೆಗೂ 14ನೇ ಹಣಕಾಸಿನ ಆಯೋಗದ ಶಿಫಾರಸನ್ನು ಜಾರಿಗೊಳಿಸಲು 2014ರ ಕೇಂದ್ರ ಸರಕಾರವು ತನ್ನ ಬಜೆಟನ್ನು ಪರಿಷ್ಕರಿಸಿ ರಾಜ್ಯಗಳ ವೆಚ್ಚವನ್ನು ಒಳಗೊಂಡಿರುವ ಇಲಾಖೆಗಳಿಗೆ ಅನುದಾನವನ್ನು ಕಡಿತಗೊಳಿಸಿತು’ ಎಂದು ಹೇಳುತ್ತದೆ. ನಂತರ ಚುನಾವಣಾ ಪ್ರಚಾರಗಳಲ್ಲಿ ಮೋದಿ ತಾವು ಅಧಿಕಾರಕ್ಕೆ ಬಂದ ನಂತರ ರಾಜ್ಯಗಳ ಪಾಲನ್ನು ಹೆಚ್ಚಿಸಿದೆ ಎಂದು ಸುಳ್ಳು ಹೇಳುತ್ತಾ ಹೋದರು.
15ನೇ ಹಣಕಾಸು ಆಯೋಗವು ರಾಜ್ಯಗಳ ಪಾಲನ್ನು ಶೇ.42ರಿಂದ ಶೇ.41ಕ್ಕೆ ಕಡಿಮೆ ಮಾಡಿದರು. ಆದರೆ ಇದುವರೆಗೂ ರಾಜ್ಯಗಳಿಗೆ ಸರಾಸರಿ ಶೇ.25-27ರಷ್ಟು ಮಾತ್ರ ತೆರಿಗೆ ಹಂಚಿಕೆಯ ಪಾಲು ದೊರಕಿದೆ. ಶೇ.16-14ರಷ್ಟು ಮೊತ್ತದಲ್ಲಿ ಕೊರತೆಯಾಗಿದೆ. ಈಗಿನ 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿರುವ ಅರವಿಂದ ಪನಗರಿಯಾ ಹಿಂದೆ ಮೊದಲ ನೀತಿ ಆಯೋಗದ ಅಧ್ಯಕ್ಷರಾಗಿದ್ದರು. ಆದರೆ ಅಧಿಕಾರ ವಹಿಸಿಕೊಂಡ ಎರಡೇ ವರ್ಷಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಮರಳಿ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದಾರೆ. ಬಲಪಂಥೀಯ ಆರ್ಥಿಕ ತಜ್ಞರಾದ ಪನಗರಿಯಾ ಎಪ್ರಿಲ್ 2024ರಲ್ಲಿ ‘‘ಅಸಮಾನತೆ ಕುರಿತು ಯಾರೂ ನಿದ್ದೆಗೆಡಬೇಕಾಗಿಲ್ಲ’’ ಎಂದು ಹೇಳಿಕೆ ನೀಡಿದ್ದರು. ಮುಂದುವರಿದು ‘‘ಬಡತನ ನಿರ್ಮೂಲನೆಗೆ ಸಂಪತ್ತು ಸೃಷ್ಟಿಯ ಅಗತ್ಯವಿದೆ, ಈ ಸಂದರ್ಭದಲ್ಲಿ ಅಸಮಾನತೆ ಎನ್ನುವುದು ಸಹಜವಾಗಿರುತ್ತದೆ’’ ಎಂದು ಹೇಳುತ್ತಾರೆ. ಈಗ ಹಣಕಾಸು ಆಯೋಗದ ಅಧ್ಯಕ್ಷರಾಗಿ ರಾಜ್ಯಗಳಿಗೆ ಅಸಮಾನ ತೆರಿಗೆ ಹಂಚಿಕೆಯನ್ನು ಸರಿಪಡಿಸಬೇಕಾದ ಪನಗರಿಯಾ ಅಸಮಾನತೆ ಸಹಜ ಎನ್ನುವ ನಿಲುವು ಹೊಂದಿರುವುದು ಆಯೋಗದ ಕಾರ್ಯವೈಖರಿಯ ಕುರಿತು, ಹಣಕಾಸು ಒಕ್ಕೂಟದ ಪರ ಇವರ ಬದ್ಧತೆ ಕುರಿತು ಅನುಮಾನ ಮೂಡಿಸುತ್ತದೆ. ಕ್ರೂನಿ ಬಂಡವಾಳಶಾಹಿಗಳ ಪರವಾಗಿರುವ ಪನಗರಿಯಾ ಅವರಿಂದ ಏನು ನಿರೀಕ್ಷಿಸಬಹುದು? ಮುಖ್ಯವಾಗಿ ಕೇಂದ್ರದ ಸಮಗ್ರ ತೆರಿಗೆ ರೆವಿನ್ಯೂನಲ್ಲಿ ರಾಜ್ಯಗಳಿಗೆ ನಯಾಪೈಸೆ ದೊರಕದ ಸೆಸ್ ಸರ್‌ಚಾರ್ಜ್‌ನ ಪ್ರಮಾಣ ಶೇ.23-25ರಷ್ಟಿದೆ. ಇದು ಹಣಕಾಸು ಒಕ್ಕೂಟ ವ್ಯವಸ್ಥೆಯ ದೊಡ್ಡ ವಂಚನೆಯಾಗಿದೆ. ಆದರೆ ಪನಗರಿಯಾ ಸೆಸ್‌ಸರ್‌ಚಾರ್ಜ್ ಹಣಕಾಸು ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ. ಸೆಸ್ ಸರ್‌ಚಾರ್ಜ್‌ನ ಪಾಲು ರಾಜ್ಯದ ಬಾಬತ್ತಿಗೂ ಹಂಚಿಕೆಯಾಗುವಂತೆ ಸಂವಿಧಾನದ ಪರಿಚ್ಛೇದ 270ನ್ನು ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ.