ಆಹಾರ ಸಂಸ್ಕೃತಿಯೂ ಜೀವಪರ ಕಾಳಜಿಯೂ

ದಿಲ್ಲಿಯ ಜೈನ ಸಮುದಾಯದ ಮೂಲ ಉದ್ದೇಶ ಜೀವ ಪ್ರೀತಿಯೇ ಇರಬಹುದು. ಆದರೆ ಅದಕ್ಕೆ ಬಕ್ರೀದನ್ನು ಮಾತ್ರ ಗುರಿಯಾಗಿಸುವುದು ಜೀವಪರತೆಗಿಂತಲೂ ಹೆಚ್ಚಾಗಿ ಅನ್ಯಮತ ವಿರೋಧದ ಕುರುಹಾಗಿ ಕಾಣುತ್ತದೆ. ಮಾನವ ಸಮಾಜವು ಆದಿ ಕಾಲದಿಂದಲೂ ರೂಢಿಸಿಕೊಂಡು ಬಂದಿರುವ ಆಹಾರ ಪದ್ಧತಿಗಳನ್ನೂ ಗೌರವಿಸುವುದು ಪ್ರಜಾಸತ್ತಾತ್ಮಕ ಗುಣ.

Update: 2024-06-27 05:26 GMT
Editor : jafar sadik | Byline : ನಾ. ದಿವಾಕರ

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತಮ್ಮದೇ ಆದ ವೈವಿಧ್ಯಮಯ ಸ್ವರೂಪಗಳಿವೆ. ವಿಭಿನ್ನ ಧರ್ಮಗಳ ಜನತೆ ಆಚರಿಸುವ ಹಬ್ಬಗಳು ಕೆಲವು ಸಂದರ್ಭಗಳಲ್ಲಿ ಸಾಮುದಾಯಿಕ ರೂಪ ಪಡೆದುಕೊಳ್ಳುತ್ತವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಹಬ್ಬಗಳೂ ಸಹ ಸಾಂಸ್ಕೃತಿಕ ನೆಲೆಯಲ್ಲಿ ಎಲ್ಲರಿಂದಲೂ ಸಂಭ್ರಮಿಸಲ್ಪಡುತ್ತದೆ. ಹಬ್ಬಗಳನ್ನು ಆಚರಿಸುವುದಕ್ಕೂ, ಅದರ ಹಿಂದಿನ ಪ್ರಾಚೀನ ನಂಬಿಕೆಗಳಿಗೂ ಮತ್ತು ಜನಸಮುದಾಯಗಳು ಸಮನ್ವಯದ ನೆಲೆಯಲ್ಲಿ ಹಬ್ಬಗಳನ್ನು ಸಂಭ್ರಮಿಸುವುದಕ್ಕೂ ಇರುವ ಸೂಕ್ಷ್ಮ ಸಂಬಂಧಗಳನ್ನು ಗಮನಿಸಿದರೆ, ಭಾರತದ ಬಹುಸಾಂಸ್ಕೃತಿಕ ನೆಲೆಯನ್ನೂ, ಅದರ ಅಂತಃಸತ್ವವನ್ನೂ ಸುಲಭವಾಗಿ ಅರಿತುಕೊಳ್ಳಬಹುದು. ಹಾಗೆಯೇ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಆಹಾರ ಪದ್ಧತಿಗಳು ಸಹ ತನ್ನದೇ ಆದ ಪ್ರಾದೇಶಿಕ, ಸಾಮುದಾಯಿಕ ವೈಶಿಷ್ಟ್ಯಗಳನ್ನು ಹೊಂದಿವೆ.

ಕಳೆದ ಹತ್ತು ವರ್ಷಗಳಲ್ಲಿ ಸಂಘಪರಿವಾರ ಮತ್ತು ಸಹಯೋಗಿ ಸಂಘಟನೆಗಳು ಪ್ರತಿಪಾದಿಸುತ್ತಿರುವ ಏಕರೂಪೀ ಆಹಾರ ಪದ್ಧತಿಯನ್ನು ಭಾರತದ ವಿಶಾಲ ಸಮಾಜದಲ್ಲಿ ಅಳವಡಿಸಲು ಸಾಧ್ಯವೇ ಇಲ್ಲ. ಏಕೆಂದರೆ ಭಾರತದ ಸಾಂಸ್ಕೃತಿಕ ವೈವಿಧ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಹಾರ ವೈವಿಧ್ಯವನ್ನು ದೇಶದ ಉದ್ದಗಲಕ್ಕೂ ಗುರುತಿಸಬಹುದು. ಸಸ್ಯಾಹಾರ/ಮಾಂಸಾಹಾರ ಎಂಬ ಎರಡು ಪ್ರಭೇದಗಳನ್ನು ಸೃಷ್ಟಿಸಿ ಹಿಂದೂ ಸಮಾಜದ ಒಳಗೇ ವೈದಿಕಶಾಹಿಯ ಆಹಾರ ಪದ್ಧತಿಯ ಏಕರೂಪವನ್ನು ಪ್ರತಿಪಾದಿಸುತ್ತಿರುವ ಹಿಂದೂ ಮೂಲಭೂತವಾದಿಗಳಿಗೆ ಈ ವೈವಿಧ್ಯದ ಅರಿವೂ ಅಗತ್ಯವಾಗಿ ಇರಬೇಕು. ಗೋಹತ್ಯೆಯ ವಿರುದ್ಧ ಶಾಸನಗಳನ್ನು ಹೊರಡಿಸಿ, ಗೋಮಾಂಸ ಸೇವನೆಯ ವಿರುದ್ಧ ದೇಶವ್ಯಾಪಿ ಆಂದೋಲನವನ್ನು ನಡೆಸುವ ಸಂಘಟನೆಗಳು ಸಹ, ಅಸ್ಸಾಂ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸರಕಾರವೇ ಇದ್ದರೂ ಗೋಮಾಂಸ ನಿಷೇಧದ ಬಗ್ಗೆ ಮಾತನಾಡಲಾಗುವುದಿಲ್ಲ. ಏಕೆಂದರೆ ಅಲ್ಲಿ ಗೋಮಾಂಸ ನಿತ್ಯಾಹಾರ.

ಇದೇ ಪ್ರಮೇಯವನ್ನು ಎಲ್ಲ ರೀತಿಯ ಮಾಂಸಾಹಾರ ಸೇವನೆಗೂ ಅನ್ವಯಿಸಬಹುದು. ಪಶ್ಚಿಮಬಂಗಾಲ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಶುದ್ಧ ಸಸ್ಯಾಹಾರಿ ಬ್ರಾಹ್ಮಣ ಸಮುದಾಯದಲ್ಲೂ ಒಂದು ಪಂಗಡವು ಮೀನು ಸೇವಿಸುವುದನ್ನು ಗಮನಿಸಬಹುದು. ಮೂಲತಃ ಆಹಾರ ಪದ್ಧತಿ ಮಾನವ ಸಮಾಜದ ಅಭ್ಯುದಯದ ಜೊತೆಗೂಡಿಯೇ ಬೆಳೆದುಬಂದಿದೆ. ಆಧುನೀಕರಣಕ್ಕೊಳಗಾದ ಮಾನವ ಸಮಾಜದಲ್ಲಿ ಪೂರ್ಣ ಸಸ್ಯಾಹಾರಿ ಜನಸಮೂಹಗಳು ಸಹ ಮಾಂಸಾಹಾರ ಸೇವನೆಗೆ ಒಗ್ಗಿಹೋಗಿರುವುದನ್ನು ವ್ಯಕ್ತಿಗತ ನೆಲೆಯಲ್ಲಿ ಗುರುತಿಸಬಹುದು. ಕೋಳಿ, ಮೀನು, ಕುರಿ, ಮೇಕೆ ಮುಂತಾದ ಪ್ರಾಣಿಗಳ ಸಾಕಣೆಯ ಮೂಲ ಉದ್ದೇಶವೇ, ಸಾಕಣೆಯ ನಂತರ ಅದನ್ನು ಆಹಾರವಾಗಿ ಸೇವಿಸುವುದಾಗಿರುತ್ತದೆ. ಇದರಿಂದ ಬರುವ ಮೊಟ್ಟೆ, ತುಪ್ಪಳ, ಔಷಧೀಯ ವಸ್ತುಗಳನ್ನು ಹೊರತುಪಡಿಸಿದರೆ ಈ ಪ್ರಾಣಿಗಳು ಕಾಲಾನುಕಾಲದಿಂದಲೂ ಮನುಷ್ಯನ ಸೇವನೆಗಾಗಿಯೇ ಮುಡಿಪಾಗಿವೆ.

ಸಾಂಸ್ಕೃತಿಕ ರಾಜಕಾರಣದ ಛಾಯೆ

ಆದರೂ ಕಳೆದ ಹತ್ತು ವರ್ಷಗಳ ಸಾಂಸ್ಕೃತಿಕ ರಾಜಕಾರಣದ ನಡುವೆ ಭಾರತದಲ್ಲಿ ಆಹಾರ ರಾಜಕಾರಣ ಪ್ರಧಾನವಾಗಿ ಸಮಾಜವನ್ನು ಕಾಡುತ್ತಿದೆ. ಮನೆಯ ಫ್ರಿಡ್ಜ್‌ನಲ್ಲಿ ಗೋಮಾಂಸ ಇಟ್ಟಿದ್ದಕ್ಕಾಗಿ ಕೊಲೆಯಾದ ಅಕ್ಲಾಖ್ ನಮ್ಮ ನಡುವೆ ದುರಂತ ಸಾಕ್ಷಿಯಾಗಿ ಇನ್ನೂ ನಿಂತಿದ್ದಾನೆ. ಇತ್ತೀಚಿನ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಮಾಂಸ ಸಂಗ್ರಹಿಸಿದ್ದ ಆರೋಪದ ಮೇಲೆ 11 ಮನೆಗಳನ್ನೇ ಬುಲ್ಡೋಜ್ ಮಾಡಿ ಧ್ವಂಸ ಮಾಡಲಾಗಿದೆ. ಈ ಮನೆಗಳು ಅಕ್ರಮವಾಗಿ ಸರಕಾರಿ ಭೂಮಿಯಲ್ಲಿ ಕಟ್ಟಲಾಗಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದೇ ರೀತಿ ಅಕ್ರಮವಾಗಿ ನಿರ್ಮಿಸಿರುವ 16 ಮನೆಗಳು ಸುರಕ್ಷಿತವಾಗಿವೆ. ಕಾರಣ ಈ ಮನೆಗಳಲ್ಲಿ ಗೋಮಾಂಸ ಇಟ್ಟಿಲ್ಲ. ಅಂದರೆ ಅಕ್ರಮ ಒತ್ತುವರಿಗಿಂತಲೂ ಗೋಮಾಂಸದ ಸಂಗ್ರಹವೇ ಮುಖ್ಯ ಅಪರಾಧವಾಗಿ ಪರಿಗಣಿಸಲ್ಪಡುತ್ತದೆ. ಇದು ಬಲಪಂಥೀಯ ರಾಜಕಾರಣದ ಆಹಾರ ಸಂಸ್ಕೃತಿಯ ಒಂದು ಝಲಕ್‌ಎಂದು ಹೇಳಬಹುದು.

ಈ ನಡುವೆಯೇ ಹಳೆ ದಿಲ್ಲಿಯಲ್ಲಿ ಒಂದು ಸ್ವಾರಸ್ಯಕರ ಪ್ರಸಂಗ ನಡೆದಿದೆ. ಬಕ್ರೀದ್ ಎಂದರೆ ಮುಸಲ್ಮಾನರು ಕುರಿಗಳನ್ನು ಬಲಿ ಕೊಡುವ ಒಂದು ಧಾರ್ಮಿಕ ಆಚರಣೆ. ಈ ಆಚರಣೆಯ ಹಿಂದಿನ ನಂಬಿಕೆ, ವಿಶ್ವಾಸಗಳು ವಿಶ್ವದಾದ್ಯಂತ ಮುಸ್ಲಿಮ್ ಸಮುದಾಯವನ್ನು ಇಂದಿಗೂ ಪ್ರಭಾವಿಸುತ್ತಿದ್ದು ತ್ಯಾಗ ಬಲಿದಾನದ ಸಂಕೇತವಾಗಿ ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುವ ಪರಂಪರೆಯಂತೂ ಬೆಳೆದುಬಂದಿದೆ. ಈ ವರ್ಷದ ಬಕ್ರೀದ್ ಸಂದರ್ಭದಲ್ಲಿ ದಿಲ್ಲಿಯ ಜೈನ ಸಮುದಾಯದ ಸಂಘಟನೆಯೊಂದು ಆಡುಗಳು ಮನುಷ್ಯರ ಆಹಾರಕ್ಕಾಗಿ ಬಲಿಯಾಗುವುದನ್ನು ತಪ್ಪಿಸುವ ಸಲುವಾಗಿ ಸಾಂಕೇತಿಕ ಯೋಜನೆಯನ್ನು ಹಮ್ಮಿಕೊಂಡಿತ್ತು. ದಿಲ್ಲಿಯ ಜೈನ ಸಮುದಾಯವು 15 ಲಕ್ಷ ರೂ.ಗಳನ್ನು ಸಂಗ್ರಹಿಸಿ 124 ಆಡುಗಳನ್ನು ಖರೀದಿಸುವ ಮೂಲಕ, ಈ ಪ್ರಾಣಿಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಿದೆ. ದಿಲ್ಲಿಯ ಜಾಮಾ ಮಸೀದಿಯ ಸಮೀಪದಲ್ಲೇ ಒಂದು ಕೊಟ್ಟಿಗೆಯನ್ನು ನಿರ್ಮಿಸಿ ಅಲ್ಲಿ ಈ ಆಡುಗಳನ್ನು ಇಡಲಾಗಿದೆ.

ಕಸಾಯಿಖಾನೆಗೆ ಸಾಗಿಸಲಾಗುವ ಕುರಿ, ಮೇಕೆಗಳು ಸಾಮಾನ್ಯವಾಗಿ ಅರಚಿಕೊಳ್ಳುತ್ತಿರುತ್ತವೆ. ಅವುಗಳ ಮನಶ್ಶಾಂತಿಗಾಗಿ ಒಂದು ಶಕ್ತಿಯುತವಾದ ಜೈನ ಮಂತ್ರ ಇರುವುದಾಗಿಯೂ, ಇದರಿಂದ ಆಡುಗಳಿಗೆ ಹೊಸ ಜೀವ ಬಂದಂತಾಗುತ್ತದೆ ಎಂದೂ ನಯಾ ಜೈನ ಮಂದಿರದ ವಕ್ತಾರರು ಹೇಳುತ್ತಾರೆ. ದಿಲ್ಲಿಯ ಚಾಂದನಿ ಚೌಕ್ ನಿವಾಸಿಗಳಿಗೆ ‘ಆಡು ದರ್ಶನ’ವನ್ನು ಏರ್ಪಡಿಸಿದ್ದ ಈ ಸಂಸ್ಥೆಯು ಆಡುಗಳ ಸಾಕಣೆೆಗಾಗಿ, ಮೇವು ಸಂಗ್ರಹಿಸಲು ಜೈನ ಸಮುದಾಯದವರಿಂದಲೇ ದೇಣಿಗೆ ಸಂಗ್ರಹಿಸಿರುವುದು ವಿಶಿಷ್ಟ. ಜೈನ ಗುರು ಸಂಜೀವ್ ಎಂಬವರ ಒಂದು ಫೋನ್‌ಕರೆಯಿಂದ ಉತ್ಸುಕರಾಗಿ ಈ ಸಂಸ್ಥೆಯು ಬಕ್ರೀದ್ ದಿನದಂದು ಬಲಿಯಾಗುವ ಆಡುಗಳಿಗೆ ಜೀವದಾನ ಮಾಡಲು ನಿರ್ಧರಿಸಿದ್ದು, ಈ ಪ್ರಸಂಗವು ಆರಂಭಿಕ ಹೆಜ್ಜೆ ಮಾತ್ರ ಎನ್ನುತ್ತಾರೆ ಚಿರಾಗ್ ಜೈನ್. ಇದು ನಮ್ಮ ಜೈನ ಧರ್ಮದ ಅಹಿಂಸಾ ಮಾರ್ಗವನ್ನು ಅನುಸರಿಸಿ ನಾವು ಕೈಗೊಳ್ಳುತ್ತಿರುವ ಸಮಾಜ ಕಲ್ಯಾಣ ಕ್ರಮ ಎಂದು ಹೆಮ್ಮೆಯಿಂದ ಹೇಳುವ ವಿವೇಕ್ ಜೈನ್ ಎಂಬ ಚಾರ್ಟರ್ಡ್ ಅಕೌಂಟೆಂಟ್, ಇದನ್ನು ‘ಚಾರಿತ್ರಿಕ ಕ್ಷಣ’ ಎಂದು ಬಣ್ಣಿಸುತ್ತಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಕುತೂಹಲದ ಸಂಗತಿ ಎಂದರೆ ಆಡುಗಳನ್ನು ಖರೀದಿಸುವ ಸಲುವಾಗಿ ಸಂಸ್ಥೆಯ ಸದಸ್ಯರು ಮುಸ್ಲಿಮರಂತೆಯೇ ವೇಷ ಧರಿಸಿ ಹೋಗಿದ್ದಾರೆ. ತಲಾ 10 ಸಾವಿರ ರೂ.ಗಳ ದರದಲ್ಲಿ 124 ಆಡುಗಳನ್ನು ಖರೀದಿಸಲಾಗಿದ್ದು ಅವುಗಳ ಪೈಕಿ ನೂರು ಆಡುಗಳನ್ನು ಜೈನ ದೇವಾಲಯದ ಧರ್ಮಶಾಲೆಯಲ್ಲಿ ಕೂಡಿಹಾಕಲಾಗಿದೆ. ಈ ಆಡುಗಳಿಗೆ ಸೂಕ್ತ ಮೇವು ಸಂಗ್ರಹಿಸಲು ಸಮುದಾಯದ ಸದಸ್ಯರೇ ನೆರವಾಗಿದ್ದಾರೆ. ಗುಜರಾತ್, ಕೇರಳ, ಹೈದರಾಬಾದ್, ಪಂಜಾಬ್, ಮಹಾರಾಷ್ಟ್ರ ರಾಜ್ಯಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ ಎಂದು ವಿವೇಕ್ ಜೈನ್ ಹೇಳುತ್ತಾರೆ. ‘‘ಈ ಉದಾತ್ತ ಉದ್ದೇಶವನ್ನು ಸಾಕಾರಗೊಳಿಸುವ ಸಲುವಾಗಿ ಉದಾರ ಹಣಸಹಾಯ ಮಾಡಿ, ಇದರಿಂದ ಕೆಲವು ಪ್ರಾಣಿಗಳ ವಧೆಯಾಗುವುದನ್ನು ತಪ್ಪಿಸಬಹುದು, ರಕ್ಷಿಸಲ್ಪಟ್ಟ ಆಡುಗಳನ್ನು ಗೋ ರಕ್ಷಣಾ ತಾಣಗಳಂತೆಯೇ ಆಡು ರಕ್ಷಣಾ ತಾಣಗಳಿಗೆ ಕಳುಹಿಸಲಾಗುತ್ತದೆ’’ ಎಂಬ ಸಂದೇಶವನ್ನೂ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಲಾಗಿದೆ.

ಪ್ರಾಣಿ ದಯೆ ಮತ್ತು ಜೀವಪರತೆ

ಜೈನ ಸಮುದಾಯದ ಕೆಲವರ ಈ ಔದಾತ್ಯ ಮತ್ತು ಔದಾರ್ಯ ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೊಳಗಾ ಗುತ್ತದೆ. ಆದರೆ ಕುರಿ, ಮೇಕೆ ಸಾಕಣೆಯ ಬಗ್ಗೆ ಸೂಕ್ತ ಅರಿವಿಲ್ಲದೆ, ಅವುಗಳನ್ನು ನಿರ್ವಹಿಸುವ ಮಾರ್ಗೋಪಾಯಗಳನ್ನು ತಿಳಿಯದೆ ಈ ರಕ್ಷಿಸಲ್ಪಟ್ಟ ಆಡುಗಳನ್ನು ಎಷ್ಟು ದಿನ, ಹೇಗೆ ಕಾಪಾಡಲಾಗುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಕುರಿ, ಮೇಕೆ ಸಾಕಣೆಯನ್ನೇ ತಮ್ಮ ಬದುಕಿನ ಹಾದಿಯನ್ನಾಗಿ ಶತಮಾನಗಳಿಂದಲೂ ರೂಪಿಸಿಕೊಂಡಿರುವ ಕುರಿಗಾಹಿ ಸಮುದಾಯಗಳನ್ನು, ಗ್ರಾಮಭಾರತದ ಜನತೆಯನ್ನು ಆಶ್ರಯಿಸಬೇಕಾಗುತ್ತದೆ. ಭಾರತದ ಉದ್ದಗಲಕ್ಕೂ ಕಾಣಬಹುದಾದ ಕುರಿಗಾಹಿ ಸಮುದಾಯವು ತನ್ನದೇ ಆದ ಸಾಮಾಜಿಕ ನೆಲೆಯನ್ನು ಹೊಂದಿರುವಂತೆಯೇ ಸಾಂಸ್ಕೃತಿಕ ಭೂಮಿಕೆಯನ್ನೂ, ರಾಜಕೀಯ ಪ್ರಾಬಲ್ಯವನ್ನೂ ಗಳಿಸಿಕೊಂಡಿದೆ. ಹಾಗೆಯೇ ಕುರಿ, ಮೇಕೆ ಸಾಕಣೆ ಒಂದು ವೃತ್ತಿಯಾಗಿ ನಗರಕೇಂದ್ರಗಳಲ್ಲಿ ಕಂಡುಬಂದರೂ ಇದನ್ನು ಅನುಸರಿಸುವ ಸಮುದಾಯಗಳು ಗ್ರಾಮೀಣ ನೆಲೆಯಿಂದಲೇ ಬಂದಿರುತ್ತವೆ.

ಒಂದು ವೃತ್ತಿಯಾಗಿ ಅಥವಾ ಔದ್ಯಮಿಕ ನೆಲೆಯಲ್ಲಿ ನೋಡಿದಾಗ ಕುರಿ, ಮೇಕೆ ಸಾಕಣೆ ಲಕ್ಷಾಂತರ ಕುಟುಂಬಗಳ ಬದುಕಿನ ಭಾಗವಾಗಿರುವುದೇ ಅಲ್ಲದೆ ಜೀವನೋಪಾಯದ ಮಾರ್ಗವೂ ಆಗಿದೆ. ಕುರಿ, ಮೇಕೆಗಳನ್ನು ಸಾಕುವುದೇ ಮೂರು ಕಾರಣಗಳಿಗಾಗಿ, ಒಂದು ಆಹಾರವಾಗಿ, ಎರಡನೆಯದು ಅದರ ತುಪ್ಪಳ ಮತ್ತು ಮೂರನೆಯದು ಗೊಬ್ಬರಕ್ಕಾಗಿ. ಜೀವ ಜಗತ್ತಿನಲ್ಲಿ ಹಲವು ಪ್ರಾಣಿಗಳು ಹೀಗೆಯೇ ಮಾನವ ಸಮಾಜದೊಂದಿಗೆ ಬೆಳೆದುಬಂದಿವೆ. ಮನುಷ್ಯ ಸಮಾಜವು ಶತಮಾನಗಳಿಂದಲೂ ರೂಢಿಸಿಕೊಂಡು ಬಂದ ಆಹಾರ ಪದ್ಧತಿಗಳಲ್ಲಿ ಮಾಂಸಾಹಾರವೂ ಒಂದಾಗಿದ್ದು, ಇಲ್ಲಿ ತಮ್ಮ ಜೀವ ಕಳೆದುಕೊಳ್ಳುವ ಜೀವಜಂತುಗಳನ್ನು ‘ಹಿಂಸೆ-ಅಹಿಂಸೆ’ಯ ಪ್ರಮೇಯದಲ್ಲಿಟ್ಟು ನೋಡಲಾಗುವುದಿಲ್ಲ. ಆಡುಗಳನ್ನು ಕಸಾಯಿಖಾನೆಗಳಲ್ಲಿ ವಧೆಯಾಗುವುದರಿಂದ ತಪ್ಪಿಸುವ ಸಲುವಾಗಿ ಜೈನ ಸಮುದಾಯದ ಒಂದು ಗುಂಪು, ಕೆಲವೇ ಪ್ರಾಣಿಗಳನ್ನು ರಕ್ಷಿಸಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಇಲ್ಲಿ ಜೀವ ರಕ್ಷಣೆಯೇ ಮುಖ್ಯವಾಗಿದ್ದರೆ ಒಂದು ಮತದ ಅನುಯಾಯಿಗಳು, ತಮ್ಮದೇ ಆದ ಧಾರ್ಮಿಕ ನಂಬಿಕೆಗಳಿಗೆ ಅನುಸರಿಸಲಾಗುವ ಬಕ್ರೀದನ್ನೇ ಏಕೆ ಆಯ್ಕೆ ಮಾಡಬೇಕಿತ್ತು? ಭಾರತೀಯ ಸಂಸ್ಕೃತಿಯಲ್ಲಿ ಹೊಸ ವರ್ಷದ ಆರಂಭದಲ್ಲಿ ಅಂದರೆ ದೇಶಾದ್ಯಂತ ಎಲ್ಲ ಜಾತಿ ಸಮುದಾಯಗಳಲ್ಲೂ ಆಚರಿಸಲ್ಪಡುವ ಯುಗಾದಿ ಹಬ್ಬದ ಮರುದಿನ, ವರ್ಷ ತೊಡಕು ಆಚರಿಸುವಾಗ ಕೋಟ್ಯಂತರ ಕುರಿ, ಮೇಕೆಗಳನ್ನು ಕಡಿಯಲಾಗುತ್ತದೆ. ಪಶ್ಚಿಮ ಬಂಗಾಲದಲ್ಲಿ ನವರಾತ್ರಿ ಹಬ್ಬದ ಆಚರಣೆಯಲ್ಲಿ ಮಾಂಸಾಹಾರವೂ ಒಂದು ಭಾಗವಾಗಿದ್ದು, ಅಲ್ಲಿಯೂ ಸಹ ಬಲಿಯಾಗುವುದು ಇದೇ ಕುರಿ, ಮೇಕೆಗಳ ಸಂತಾನವೇ ಆಗಿರುತ್ತದೆ. ಭಾರತದ ಉದ್ದಗಲಕ್ಕೂ ಗ್ರಾಮೀಣ ಪ್ರದೇಶಗಳ ಸಾಂಸ್ಕೃತಿಕ ಇತಿಹಾಸವನ್ನು ಅವಲೋಕಿಸಿದಾಗ, ದೈವಗಳಿಗೆ ಕುರಿ, ಮೇಕೆ ಬಲಿ ಕೊಡುವುದು ಮತ್ತು ಅದರ ಮಾಂಸವನ್ನು ಸೇವಿಸುವುದು ಒಂದು ಸಾಮಾನ್ಯ ಸಂಗತಿಯಾಗಿ ಕಾಣುತ್ತದೆ. ತಳಸಮಾಜದಲ್ಲಿ ತಮ್ಮ ಜೀವನೋಪಾಯ ಮಾರ್ಗಗಳು ಸುಗಮವಾಗಲೆಂದು, ತಮ್ಮ ದೈನಂದಿನ ಬದುಕಿನ ಸಂಕಷ್ಟಗಳು ದೂರವಾಗಲೆಂದು ವಿವಿಧ ದೈವಗಳಿಗೆ ಹರಕೆ ಹೊರುವ ಜನಸಮುದಾಯಗಳೆಲ್ಲವೂ ಬಹುತೇಕವಾಗಿ ಕುರಿ, ಮೇಕೆಗಳನ್ನು ಬಲಿ ಕೊಡುವುದಾಗಿಯೇ ಪ್ರಮಾಣ ಮಾಡಿ, ಸಾಕಣೆ ಮಾಡುತ್ತಾರೆ.

ಬದುಕಿನಿಂದಾಚೆಗಿನ ಜೀವಪರತೆ

ಕುರಿ, ಮೇಕೆ ಮಾಂಸ ಅತಿ ಹೆಚ್ಚು ಬೇಡಿಕೆ ಇರುವ ಆಹಾರವಾಗಿದ್ದು, ಮಾಂಸಾಹಾರವನ್ನು ಸೇವಿಸುವ ಎಲ್ಲ ಸಮುದಾಯಗಳಲ್ಲೂ ಇದು ಸಮಾನವಾಗಿ ಕಂಡುಬರುತ್ತದೆ. ಜೀವಪರ ಕಾಳಜಿಯಿಂದ ಆಡನ್ನು ತಪ್ಪಿಸುವುದೇ ಆದರೆ ಭಾರತದ ಕೋಟ್ಯಂತರ ಜನರ ನಿತ್ಯಾಹಾರವನ್ನು ಕಸಿದುಕೊಂಡಂತಾಗುತ್ತದೆ. ಗೋಮಾಂಸವಾಗಲೀ, ಕುರಿ, ಮೇಕೆ ಮಾಂಸವಾಗಲೀ ಯಾವುದೇ ಒಂದು ಮತಕ್ಕೆ ಅಥವಾ ಜಾತಿಗೆ ಸೀಮಿತವಾದ ಆಹಾರವಲ್ಲ. ಗೋಮಾಂಸ ಸೇವನೆ ಮತ್ತು ಗೋಹತ್ಯೆಯ ವಿರುದ್ಧ, ಸಂಘಪರಿವಾರ ಕೈಗೊಂಡಿರುವ ಅಭಿಯಾನದಿಂದ ಈಗಾಗಲೇ ಭಾರತದ ಗ್ರಾಮೀಣ ಆರ್ಥಿಕತೆ ಅಪಾರ ನಷ್ಟ ಅನುಭವಿಸುತ್ತಿರುವುದು ದತ್ತಾಂಶಗಳ ಸಮೇತ ಸಾಬೀತಾಗುತ್ತಿದೆ. ಆದರೂ ಭಾರತ ಗೋಮಾಂಸ ರಫ್ತು ವ್ಯಾಪಾರದಲ್ಲಿ ವಿಶ್ವದ ನಂಬರ್ ಒನ್ ಸ್ಥಾನದಲ್ಲಿರುವುದೂ ಒಂದು ವಿಡಂಬನಾತ್ಮಕ ವಾಸ್ತವ. ಈಗ ಆಡಿನ ರಕ್ಷಣೆಯೂ ಇದೇ ರೀತಿಯ ಅಭಿಯಾನವಾದರೆ ಭಾರತದ ಕೋಟ್ಯಂತರ ಗ್ರಾಮೀಣ ಕುಟುಂಬಗಳು ಬೀದಿಪಾಲಾಗುತ್ತವೆ.

ಕುರಿ, ಮೇಕೆಗಳು ಸಾಮಾನ್ಯವಾಗಿ ಭಾರತದ ಶುಷ್ಕ ಮತ್ತು ಅರೆ-ಶುಷ್ಕ ಕೃಷಿ-ಹವಾಮಾನ ವಲಯಗಳಲ್ಲಿ, ಹಾಗೆಯೇ ವಾಯವ್ಯ ಮತ್ತು ದಕ್ಷಿಣ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಕಂಡುಬರುತ್ತವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶಗಳಲ್ಲಿ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕುರಿಗಾಹಿ ಸಮುದಾಯಗಳು ಪ್ರಮುಖವಾಗಿ ಕಂಡುಬರುತ್ತವೆ. ದಕ್ಷಿಣ ಕರ್ನಾಟಕ-ಆಂಧ್ರದ ಗಡಿಯಲ್ಲಿ ಇಂದಿಗೂ ಕುರಿ ಕಂಬಳಿ ಉದ್ಯಮವು ಸಶಕ್ತವಾಗಿರುವುದನ್ನು ಗಮನಿಸಬಹುದು. ಮಾನವ ಸಮಾಜ ತನ್ನ ಅಭ್ಯುದಯದ ಹಾದಿಯಲ್ಲಿ ನಿಸರ್ಗವನ್ನು ನಂಬಿ ಬದುಕುತ್ತಿರುವ ಹಾಗೆಯೇ ಕೆಲವು ನಿಸರ್ಗ ಸೃಷ್ಟಿಯ ಜೀವ ಜಂತುಗಳನ್ನೂ ನಂಬಿ ಬದುಕುವುದನ್ನು ರೂಢಿಸಿಕೊಂಡಿದೆ. ಈ ಹಾದಿಯಲ್ಲೇ ಕೆಲವು ಪ್ರಾಣಿಗಳು ಮನುಷ್ಯನ ನಿತ್ಯಾಹಾರವಾಗಿ ಬಳಕೆಯಾಗುತ್ತಿವೆ. ಈ ಜೀವಗಳನ್ನು ಪ್ರೀತಿಸುವುದು ಮಾನವೀಯತೆಯ ದ್ಯೋತಕ. ಆದರೆ ಇದನ್ನೇ ಆಹಾರವನ್ನಾಗಿ ಬಳಸುವ ಜನಸಮುದಾಯಗಳನ್ನು ತಿರಸ್ಕರಿಸುವುದು ಅಥವಾ ನಿಕೃಷ್ಟವಾಗಿ ನೋಡುವುದು ಅಮಾನುಷತೆಯ ಸಂಕೇತ.

ದಿಲ್ಲಿಯ ಜೈನ ಸಮುದಾಯದ ಮೂಲ ಉದ್ದೇಶ ಜೀವ ಪ್ರೀತಿಯೇ ಇರಬಹುದು. ಆದರೆ ಅದಕ್ಕೆ ಬಕ್ರೀದನ್ನು ಮಾತ್ರ ಗುರಿಯಾಗಿಸುವುದು ಜೀವಪರತೆಗಿಂತಲೂ ಹೆಚ್ಚಾಗಿ ಅನ್ಯಮತ ವಿರೋಧದ ಕುರುಹಾಗಿ ಕಾಣುತ್ತದೆ. ಮಾನವ ಸಮಾಜವು ಆದಿ ಕಾಲದಿಂದಲೂ ರೂಢಿಸಿಕೊಂಡು ಬಂದಿರುವ ಆಹಾರ ಪದ್ಧತಿಗಳನ್ನೂ ಗೌರವಿಸುವುದು ಪ್ರಜಾಸತ್ತಾತ್ಮಕ ಗುಣ. ಭಾರತೀಯ ಸಮಾಜದಲ್ಲಿ ಪ್ರಾಣಿ ದಯೆ ಎನ್ನುವುದು ಒಂದು ನೆಲೆಯಲ್ಲಿ ಸಾಮಾಜಿಕ ಬದ್ಧತೆಯಾಗಿ ಕಂಡುಬಂದರೆ ಮತ್ತೊಂದೆಡೆ ಸಾರ್ವಜನಿಕ ತೋರಿಕೆಯಾಗಿಯೂ ಕಾಣುತ್ತದೆ. ಸಿನೆಮಾ ನಟರು, ರಾಜಕಾರಣಿಗಳು, ವಾಣಿಜ್ಯೋದ್ಯಮಿಗೂ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಪರಂಪರೆ ಇದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಆದರೆ ತಮ್ಮ ಸುತ್ತಲಿನ ಸಮಾಜದಲ್ಲಿ ಅತ್ಯಂತ ನಿಕೃಷ್ಟರಾಗಿ ಬಾಳುತ್ತಾ, ನಿರ್ಗತಿಕತೆಯ ನಡುವೆಯೇ ಬದುಕು ಸವೆಸುವ ಸಹನಟರ ಬಗ್ಗೆ ಯಾವ ಸಿನೆಮಾ ತಾರೆ ಜೀವಪರ ಕಾಳಜಿ ತೋರುತ್ತಾರೆ? ಅಥವಾ ತಮಗೆ ಮತ ನೀಡುವ ಜನತೆಯ ನಡುವೆ ನೀರು-ಸೂರು-ಉದ್ಯೋಗ-ಮೂಲ ಸೌಕರ್ಯಗಳಿಲ್ಲದೆ ಬದುಕುವ ನೂರಾರು ಕುಟುಂಬಗಳ ಬಗ್ಗೆ ಇಂತಹ ರಾಜಕೀಯ ನಾಯಕರು ಎಂದಾದರೂ ಜೀವಪರ ಕಾಳಜಿ ತೋರಿರುವುದುಂಟೇ? ವಾಣಿಜ್ಯೋದ್ಯಮಿಗಳು ತಮ್ಮ ಔದ್ಯೋಗಿಕ ಜಗತ್ತಿನಲ್ಲಿ ಅತ್ಯಂತ ಹೀನ ಬದುಕು ಸವೆಸುವ ಶ್ರಮಜೀವಿಗಳಿಗೆ ಇದೇ ಜೀವಪ್ರೀತಿಯನ್ನು ತೋರುತ್ತಾರೆಯೇ? ಈ ಪ್ರಶ್ನೆಗಳೊಂದಿಗೇ ಜೀವಪರತೆಯ ಬಗ್ಗೆ ಮಾತನಾಡುವಾಗ, ಪ್ರಸಕ್ತ ದ್ವೇಷ ರಾಜಕಾರಣ, ಮತೀಯ ದಾಳಿಗಳು, ಕೋಮು ಗಲಭೆ, ಜಾತಿ ದೌರ್ಜನ್ಯಗಳ ನಡುವೆ, ಆರ್ಥಿಕ ಅಭಿವೃದ್ಧಿಯ ಹಾದಿಯಲ್ಲಿ ಜೀವ ಕಳೆದುಕೊಳ್ಳುವ ಅಥವಾ ತಮ್ಮ ಮನೆಮಠ ಕಳೆದುಕೊಳ್ಳುವ ಅಮಾಯಕ ಜನತೆಯ ಬಗ್ಗೆ ಯಾವ ಧಾರ್ಮಿಕ ಸಂಘಟನೆ ಜೀವಪರ ಪ್ರೀತಿಯನ್ನು ತೋರಿದೆ?

ಕುರಿ, ಮೇಕೆಗಳನ್ನು ಬಲಿಯಾಗುವುದರಿಂದ ತಪ್ಪಿಸಿ ತಮ್ಮ ಜೀವಪರತೆಯನ್ನು ಪ್ರದರ್ಶಿಸುವ ಒಂದು ಪ್ರಯತ್ನ ಈ ನಿಟ್ಟಿನಲ್ಲಿ ಸಮಾಜಕ್ಕೆ ಆದರ್ಶವಾಗುವುದೇ ಆದರೆ, ಅದು ಮನುಷ್ಯರನ್ನೂ ಒಳಗೊಂಡಂತಹ ಜೀವಪರತೆಯತ್ತ ಸಾಗಬೇಕಿದೆ. ಭಾರತದಲ್ಲಿ ಲಕ್ಷಾಂತರ ಸಂಖ್ಯೆಯ ‘ಪ್ರಾಣಿ ದಯಾ ಸಂಘ’ಗಳು ಇರಬಹುದು. ಆದರೆ ಒಂದೇ ಒಂದು ‘ಜೀವ ದಯಾ ಸಂಘ’ ಇರುವುದನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಜೀವ ಎಂದಾಕ್ಷಣ ಅದು ಪರಮಾಣು ಕಣಗಳಂತೆ ವಿಭಜನೆಗೊಳಗಾಗುತ್ತಾ ಜಾತಿ, ಮತ, ಧರ್ಮ, ಲಿಂಗ, ಸಮುದಾಯ, ಭಾಷೆ ಹೀಗೆ ಹರಿದುಹೋಗುತ್ತವೆ. ಪ್ರಾಣಿಗಳನ್ನು ಮುದ್ದಾಡಿ ಅಪ್ಪಿಕೊಳ್ಳುವ ಸಮಾಜವು ಮನುಷ್ಯನನ್ನು ಶಾಶ್ವತವಾಗಿ ದೂರ ಇರಿಸುವ ಒಂದು ಸಾಂಸ್ಕೃತಿಕ ಪರಂಪರೆಯನ್ನು ನಾವು ಶತಮಾನಗಳಿಂದ ಪೋಷಿಸಿಕೊಂಡು ಬಂದಿದ್ದೇವೆ. ಪ್ರಾಣಿಗಳೂ ಮನುಷ್ಯನಂತೆ ಎಂಬ ಜೀವಪರ ಕಾಳಜಿಯ ಮಾತುಗಳನ್ನಾಡುವ ಮುನ್ನ ನಮ್ಮೊಳಗೆ ‘ಪ್ರತಿಯೊಬ್ಬ ಮನುಷ್ಯನೂ ತನ್ನಂತೆಯೇ’ ಎಂಬ ಭಾವನೆ ಮೂಡಲು ಸಾಧ್ಯವೇ ?

ಆದಿಕವಿ ಪಂಪನ ‘‘ಮನುಷ್ಯ ಜಾತಿ ತಾನೊಂದೇ ವಲಂ’’ ಎಂಬ ನುಡಿಗಳು ಈ ಕಾರಣಕ್ಕಾಗಿಯೇ ಪ್ರತಿಧ್ವನಿಸುತ್ತಲೇ ಇರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ. ದಿವಾಕರ

contributor

Similar News