ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸಮಾನ ಉದ್ಯೋಗಾವಕಾಶಗಳ ಅಗತ್ಯ

Update: 2024-12-08 05:04 GMT

ಸಕಾರಾತ್ಮಕ ಕ್ರಮ (Affirmative Action), ಉದ್ಯೋಗ ಸಮಾನತೆ, ಮೀಸಲಾತಿ- ಇವೆಲ್ಲಾ ಕೇವಲ ಪದಗಳಲ್ಲ; ನ್ಯಾಯ ಮತ್ತು ಸಮಾನತೆಯ ಆಧಾರಶಿಲೆಗಳು, ನೀತಿಯ ಗುರಿ ಅಥವಾ ಮನೋಭಾವವನ್ನು ಬದಲಾಯಿಸುವುದಿಲ್ಲ.

ಜಾಗತಿಕ ಮಟ್ಟದಲ್ಲಿ, ಸರಕಾರಗಳು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಜನಾಂಗೀಯತೆ, ಸ್ಥಳೀಯ ಜನಸಂಖ್ಯೆ, ಅಲ್ಪಸಂಖ್ಯಾತರು, ಲಿಂಗ ಸಮಾನತೆ ಹಾಗೂ ವೈವಿಧ್ಯದ ಮಹತ್ವವನ್ನು ಸ್ಪಷ್ಟಪಡಿಸುತ್ತವೆ, ಖಾಸಗಿ ವಲಯದ ಮೇಲೆ ಕಾರ್ಯಪಡೆಯ ವೈವಿಧ್ಯವನ್ನು ಖಚಿತಗೊಳಿಸಲು ಒತ್ತಾಯಿಸುತ್ತವೆ. ಕೆಲವು ದೇಶಗಳಲ್ಲಿ ಇದು ಕಡ್ಡಾಯ; ಇನ್ನು ಕೆಲವೆಡೆ, ವೈವಿಧ್ಯವನ್ನು ಅನುಸರಿಸುವ ಕಂಪೆನಿಗಳಿಗೆ ತೆರಿಗೆ ರಿಯಾಯಿತಿಗಳು ಮತ್ತು ಪ್ರೋತ್ಸಾಹಗಳು ಸಿಗುತ್ತವೆ. ಇದು ಕೇವಲ ನೀತಿಯಲ್ಲ ಒಂದು ಪ್ರಬಲ ಅಂತರ್ಗತ ಸಮಾಜದತ್ತ ಹೆಜ್ಜೆ.

ಭಾರತದ ಖಾಸಗಿ ವಲಯದಲ್ಲಿ ಸ್ಥಳೀಯರು ಮತ್ತು ಅಂಚಿನಲ್ಲಿರುವ, ತುಳಿತಕ್ಕೊಳಗಾದ ಜಾತಿಗಳಿಗೆ ಮೀಸಲಾತಿಯ ಕುರಿತು ಚರ್ಚೆ ಕಾರ್ಪೊರೇಟ್ ಇಂಡಿಯಾಗೆ ಅಸಹಜವಾಗಿದ್ದರೂ, ೨೦೧೧ರಲ್ಲಿ ನಡೆದ ಜಾತಿ ಗಣತಿ ನಿಜವಾದ ಸತ್ಯವನ್ನು ಬೆಳಕಿಗೆ ತಂದುಕೊಟ್ಟಿತು. ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದವರ ಉದ್ಯೋಗ ಪ್ರಾತಿನಿಧ್ಯವು ಜನಸಂಖ್ಯೆಯ ಅನುಪಾತವನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು ಸ್ಪಷ್ಟವಾಯಿತು. ಈ ಅಸಮಾನತೆಯನ್ನು ಸರಿಪಡಿಸಲು ದೀರ್ಘಕಾಲಿಕ ಮತ್ತು ಸಮಗ್ರ ಕ್ರಮಗಳನ್ನು ಕೈಗೊಳ್ಳುವಲ್ಲಿ ಕಾರ್ಪೊರೇಟ್ ಭಾರತ ಯಾವುದೇ ಪ್ರಯತ್ನ ಮಾಡಿಲ್ಲ. ಪ್ರಗತಿ ಹೋರಾಟದ ಈ ಯುಗದಲ್ಲಿ, ಅಸಮಾನತೆ ದೇಶದ ಉದ್ಯೋಗ ವ್ಯವಸ್ಥೆಯು ಎದುರಿಸುತ್ತಿರುವ ಗಂಭೀರ ಸವಾಲನ್ನು ಸೂಚಿಸುತ್ತದೆ.

ಕುಗ್ಗುತ್ತಿರುವ ಸಾರ್ವಜನಿಕ ವಲಯ ಮತ್ತು ಸರಕಾರಿ ಉದ್ಯೋಗಗಳು ಮತ್ತು ಸ್ಥಿರವಾದ ಆಧಾರದ ಮೇಲೆ ಸಿಐಐನ ಸಕಾರಾತ್ಮಕ ಕ್ರಿಯಾ ಯೋಜನೆ (CII’s Affirmative Action Plan)ಯನ್ನು ಜಾರಿಗೆ ತರಲು ಕಾರ್ಪೊರೇಟ್ ಭಾರತದಲ್ಲಿ ಆಸಕ್ತಿಯ ಕೊರತೆಯು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಲ್ಲಿ ಉದ್ಯೋಗಕ್ಕೆ ಜನಸಂಖ್ಯೆಯ ಅಂತರವನ್ನು ಹೆಚ್ಚಿಸಿದೆ. ಹೆಚ್ಚು ಕೈಗಾರಿಕಾ ರಾಜ್ಯಗಳಲ್ಲಿಯೂ ಸಹ ಅಂತರವು ಹೆಚ್ಚುತ್ತಿದೆ, ಸೇವಾ ಕ್ಷೇತ್ರದಲ್ಲಿ ಕಡಿಮೆ ಅಂತರ ಇದೆ ಎಂದು ತೋರುತ್ತದೆಯಾದರೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಯುವಜನರಿಗೆ ಉದ್ಯೋಗಗಳು ತೃಪ್ತಿಕರವಾಗಿಲ್ಲ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ರಾಷ್ಟ್ರದ ಅತ್ಯಂತ ಕಡಿಮೆ ಸಂಪತ್ತನ್ನು ಹೊಂದಿದ್ದು, ಇದು ಪ್ರತೀ ಮನೆಗೆ 6.13 ಲಕ್ಷ ರೂ. ಗುತ್ತಿಗೆ ಭೂಮಿ, ಕಡಿಮೆ ಶಿಕ್ಷಣ, ಕನಿಷ್ಠ ಸಾಲ ಮತ್ತು ಬಂಡವಾಳದ ಲಭ್ಯತೆಗಳಂತಹ ಕೊರತೆಯಿಂದಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಆದ್ದರಿಂದ ಸರಕಾರಿ ಯೋಜನೆಗಳ ಮೇಲಿನ ಅವಲಂಬನೆಯು ಅತ್ಯುತ್ತಮ ಆಯ್ಕೆಯಾಗಿದೆ.

ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್‌ಒ) ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಪ್ಯೂಮನ್ ಡೆವಲಪ್‌ಮೆಂಟ್ (ಐಎಚ್‌ಡಿ) ಇಂಡಿಯಾ ಎಂಪ್ಲಾಯ್‌ಮೆಂಟ್ ರಿಪೋರ್ಟ್ 2024-ಎಸ್‌ಸಿ ಮತ್ತು ಎಸ್‌ಟಿ ಕೆಲಸ ಮಾಡುವ ಅನುಪಾತವು ಅವರ ಜನಸಂಖ್ಯೆಗೆ ಹೆಚ್ಚಾಗಿದೆ ಎಂಬುದಾಗಿ ತಿಳಿಸುತ್ತವೆ. ಆದರೆ ಈ ಉದ್ಯೋಗಗಳು ಅಸಂಘಟಿತ ವಲಯಕ್ಕೆ ಸೀಮಿತವಾಗಿವೆ. ಕಡಿಮೆ ಶಿಕ್ಷಣ ಮತ್ತು ಕೌಶಲ್ಯರಹಿತ ಉದ್ಯೋಗಗಳಿಗೆ ಸೀಮಿತವಾಗಿದೆ. ಇತರ ಹಿಂದುಳಿದ ವರ್ಗಗಳದು (ಒಬಿಸಿ) ಸಹ ಅದೇ ಸ್ಥಿತಿಯಾಗಿದೆ. ಆದರೆ ಸಾಮಾನ್ಯ ವರ್ಗ ಉನ್ನತ ಮಟ್ಟದ ಉದ್ಯೋಗಗಳನ್ನು ಪಡೆದುಕೊಂಡಿದೆ. ಈ ತಾರತಮ್ಯ ಅಡಚಣೆಗಳನ್ನು ಕೊನೆಗೊಳಿಸಲು ವ್ಯವಸ್ಥಿತ ಪ್ರಯತ್ನಗಳು ಅತಿ ಅವಶ್ಯಕ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗಾಗಿ ರೂಪಿಸಲಾದ ದೃಢವಾದ ಕ್ರಮಗಳು ಮತ್ತು ಉದ್ದೇಶಿತ ನೀತಿಗಳು ಭಾರತದ ವಿಶಾಲ ಕಾರ್ಮಿಕ ಮಾರುಕಟ್ಟೆಯಲ್ಲಿ ಉತ್ತಮ ಮತ್ತು ಯೋಗ್ಯ ಉದ್ಯೋಗಗಳನ್ನು ಖಾತ್ರಿಪಡಿಸುವಲ್ಲಿ ವಿಫಲವಾಗಿವೆ. ತಾರತಮ್ಯ ಮತ್ತು ಶಿಕ್ಷಣದ ಲಭ್ಯತೆಯ ಕೊರತೆ, ಜಾತಿ ಪೀಡಿತ ಸಮಾಜದಲ್ಲಿ ಒಳಗೊಳ್ಳುವಿಕೆಯ ನ್ಯೂನತೆ ಮೂಲ ಕಾರಣವಾಗಿ ಮುಂದುವರಿಯುತ್ತಿವೆ. ಈ ಅಸಮತೋಲನವನ್ನು ಸರಿಹೊಂದಿಸಲು, ಸಮಗ್ರ ಉದ್ದೇಶ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಸುಧಾರಿತ ಕ್ರಮಗಳು ಅತ್ಯಂತ ಅಗತ್ಯವಾಗಿವೆ.

ಕರ್ನಾಟಕವು ಖಾಸಗಿ ವಲಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಗೆ ಶೇ. 14ರಷ್ಟು ಉದ್ಯೋಗದ ಅಂತರವನ್ನು ಹೊಂದಿದ್ದು, ತಮಿಳುನಾಡು ಮತ್ತು ಕೇರಳದ ರಾಜ್ಯಗಳಿಗಿಂತಲೂ ಹಿಂದೆ ಉಳಿದಿದೆ. ಈ ಅಂತರವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಇತ್ತೀಚೆಗೆ ಕರ್ನಾಟಕ ಸರಕಾರವು ಸರಕಾರಿ ಇಲಾಖೆಗಳಲ್ಲಿನ ಎಲ್ಲಾ ಗುತ್ತಿಗೆ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಪ್ರಕಟಿಸಿತು. ಗ್ರೂಪ್ ಸಿ ಮತ್ತು ಡಿ ಯಲ್ಲಿ 75,000ಕ್ಕೂ ಹೆಚ್ಚು ಜನರನ್ನು ವಿವಿಧ ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಈ ನೇಮಕಾತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಅಭ್ಯರ್ಥಿಗಳಿಗೆ ಮೀಸಲಾತಿ ಹಾಗೂ ಮಹಿಳೆಯರಿಗೆ ಶೇ. 33 ಮೀಸಲಾತಿಯನ್ನು ನೀಡಿದ ಕಾರಣ, ಇದು ಅವರಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತದೆ. ಸದ್ಯ ಖಾಲಿ ಇರುವ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಯುವಕರಿಗೆ ಮತ್ತು ಮಹಿಳೆಯರಿಗೆ ನೇರವಾಗಿ ಸರಕಾರದೊಂದಿಗೆ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ.

ಪ್ರೋತ್ಸಾಹಕ ಕಾರ್ಯಕ್ರಮದ ಮೂಲಕ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದಿಂದ ಹೆಚ್ಚಿನ ಯುವಕರನ್ನು ನೇಮಿಸಿಕೊಳ್ಳಲು ಕಾರ್ಪೊರೇಟ್ ಇಂಡಿಯಾವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಕರ್ನಾಟಕ ಕಾರ್ಮಿಕ ಇಲಾಖೆಯ ಮಹತ್ವಾಕಾಂಕ್ಷೆಯ ‘ಆಶಾದೀಪಾ ಯೋಜನೆ’ಯ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಅವರು ಉದ್ಯೋಗಕ್ಕೆ ಸಿದ್ಧರಾಗಲು ಅನುವು ಮಾಡಿಕೊಡಬೇಕು.

ದೇಶದ ಬೆರಳೆಣಿಕೆಯ ರಾಜ್ಯಗಳು, ತಮ್ಮ ಕಾರ್ಯಪಡೆಯಲ್ಲಿನ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ಹೆಚ್ಚು ಯುವಕರನ್ನು ಸೇರಿಸಲು ಹಾಗೂ ಅವರಿಗೆ ತರಬೇತಿ ಮತ್ತು ಉದ್ಯೋಗದ ಅವಕಾಶಗಳನ್ನು ನೀಡಲು ಕಾರ್ಪೊರೇಟ್ ಇಂಡಿಯಾವನ್ನು ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ವಿವಿಧ ಸರಕಾರಗಳು ಕೈಗೊಂಡ ಕ್ರಮಗಳನ್ನು ಗಮನಿಸಿದರೆ, ಕಾರ್ಪೊರೇಟ್ ಭಾರತವು ಸಮಾಜದ ವಿವಿಧ ವರ್ಗಗಳಿಗೆ ಸರಿಯಾದ ಅವಕಾಶಗಳನ್ನು ನೀಡುವ ಹಾಗೂ ಸಾಮಾಜಿಕ ಅಶಾಂತಿಯನ್ನು ಕಡಿಮೆ ಮಾಡುವ ಜವಾಬ್ದಾರಿ ಹೊತ್ತಿದೆ. ಆದರೆ ಕಾರ್ಪೊರೇಟ್ ಭಾರತವು ಸಮಾಜವನ್ನು ಉನ್ನತೀಕರಿಸಲು ಬದ್ಧವಾಗಿಲ್ಲ ಎಂಬುದಂತೂ ನಿಜ.

ಭಾರತದಲ್ಲಿನ ಒಂದು ದೊಡ್ಡ ಸಮುದಾಯದ ಭವಿಷ್ಯವನ್ನು ನಿರ್ಧರಿಸುವ ಸಮಾಜ ಚಾಲಿತ ತಾರತಮ್ಯದ ಮತ್ತು ಹಣೆಬರಹವನ್ನು ನಿರ್ಧರಿಸುವ ಸಾಮಾಜಿಕ ರಚನೆಯು ಕೊನೆಗೊಳ್ಳಬೇಕು. ನಾವು ಬ್ರಿಟಿಷ್ ಗುಲಾಮಗಿರಿಯಿಂದ ಸ್ವಾತಂತ್ರ್ಯವನ್ನು ಪಡೆದು 77 ವರ್ಷಗಳನ್ನು ಪೂರ್ಣಗೊಳಿಸಿದ್ದರೂ, ಕಾರ್ಪೊರೇಟ್ ಇಂಡಿಯಾದಲ್ಲಿ ಶೇ. 4-5 ಸಿಇಒಗಳು ಮಾತ್ರ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೇರಿದ್ದಾರೆ ಮತ್ತು ಒಬಿಸಿ ಸಮುದಾಯದ ಸ್ಥಿತಿ ಹೆಚ್ಚು ಭಿನ್ನವಾಗಿಲ್ಲ. ಈ ಪರಿಸ್ಥಿತಿ ಸಾಮಾಜಿಕ ಅಸಮಾನತೆಯನ್ನು ಮುಂದುವರಿಸುತ್ತದೆ. ಕಾರ್ಪೊರೇಟ್ ಭಾರತವನ್ನು ಪ್ರತೀ ಸಮುದಾಯವನ್ನು ಒಳಗೊಳ್ಳುವಂತೆ ಮಾಡುವ ಏಕೈಕ ಮಾರ್ಗವೆಂದರೆ ದೃಢವಾದ ಕ್ರಮ ಮತ್ತು ಸಕಾರಾತ್ಮಕ ಕ್ರಮಗಳು ಆಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕವಿತಾ ರೆಡ್ಡಿ

contributor

ಸದಸ್ಯರು, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

Similar News