ಗಾಂಧಿ ಭಾರತ

ಜನವರಿ 30 ಗಾಂಧಿಯ ಸಮಾಧಿಗೆ ಇನ್ನಷ್ಟು ಮತ್ತು ಅದರೊಂದಿಗೆ ಜನರ ಕಣ್ಣಿಗೂ ಮಣ್ಣೆರಚುವ ದಿನವಾಗಬಾರದು. ಯಾರನ್ನು ದೂಷಿಸುತ್ತೇವೋ ಅವರ ನಿಯಮವನ್ನು ನಾವೂ ಅನುಸರಿಸುವ ರಾಜಕೀಯ ಅನಿವಾರ್ಯ ನಮ್ಮದಾಗಬಾರದು. ಆಗ ಮಾತ್ರ ಗಾಂಧಿ, ಗಾಂಧಿ ಅಧ್ಯಕ್ಷತೆ ವಹಿಸಿದ ಸಮಾವೇಶದ ನೆನಪುಗಳು ಹಸಿರಾಗಿ ಉಳಿದಾವು. ಅದು ಯುದ್ಧರಂಗದ ಅವಶೇಷಗಳಾಗಬಾರದು. ನೆಟ್ಟ ಗಿಡ ಮರವಾಗಿ ಬಿಳಲುಬಿಟ್ಟು ನೆರಳು ನೀಡುವಂತಿರಬೇಕು.

Update: 2025-01-30 05:18 GMT
ಗಾಂಧಿ ಭಾರತ
  • whatsapp icon

ಪತ್ರಿಕೆಗಳನ್ನು ಓದುವ ಜನರು ಗಮನಿಸಿರಬಹುದಾದಂತೆ 20.01.2025ರಂದು ಮಾಧ್ಯಮಗಳಲ್ಲಿ ಕರ್ನಾಟಕ(ದ ಕಾಂಗ್ರೆಸ್) ಸರಕಾರವು ಒಂದು ಪೂರ್ಣಪುಟದ ಜಾಹೀರಾತನ್ನು ನೀಡಿತು. ಅದರ ಸಂದರ್ಭ ಏನೆಂದು ಗೊತ್ತಾಗಲಿಲ್ಲ. ‘1924-2024 ಬೆಳಗಾವಿ, ಕರ್ನಾಟಕ’ ಎಂಬ ಶೀರ್ಷಿಕೆಯ ಜಾಹೀರಾತಿನಲ್ಲಿ ‘‘ಗಾಂಧಿ ಆದರ್ಶಗಳನ್ನು ಅನುಸರಿಸುವುದು, ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದು ಮತ್ತು ಗಾಂಧಿ ಕನಸನ್ನು ನನಸಾಗಿಸುವುದು’’ ಎಂಬ ವಾಕ್ಯಗಳಿದ್ದವು. 2025ರಲ್ಲಿ ಜಾಹೀರಾತನ್ನು ನೀಡುವುದು ರಸಾವಧಾನದ ಅಪ್ರಸ್ತುತತೆಗೆ ಸಾಕ್ಷಿಯಾಯಿತು. ಆದರೆ ಕೆಳಗಡೆ ‘‘ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ 1924ರ ಬೆಳಗಾವಿ ಕಾಂಗ್ರೆಸ್ ಸಮಾವೇಶದ ಶತಮಾನೋತ್ಸವದ ಸ್ಮರಣಾರ್ಥವಾಗಿ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಅನಾವರಣ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ- ಮಂಗಳವಾರ, ಜನವರಿ 21, 2025 ಬೆಳಗ್ಗೆ 10:30, ಸುವರ್ಣ ವಿಧಾನಸೌಧ, ಬೆಳಗಾವಿ’’ ಎಂಬ ಸ್ಥಳ-ಸಮಯ ಸೂಚನೆಯಿದ್ದುದರಿಂದ ಇದು ಡಿಸೆಂಬರ್ 2024ರಲ್ಲಿ ನಡೆಯಬೇಕಾಗಿದ್ದ ಆದರೆ ನಡೆಯದ, ಮುಂದೂಡಲ್ಪಟ್ಟ ಸಮಾವೇಶದ ಜಾಹೀರಾತೆಂದು ಗೊತ್ತಾಯಿತು. ಜಾಹೀರಾತಿನಲ್ಲಿ ಈ ಘೋಷವಾಕ್ಯಗಳಲ್ಲದೆ ‘‘ಕರ್ನಾಟಕ ಮಾದರಿ ಆಡಳಿತವು ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸುವ ಮೂಲಕ ಮಹಿಳೆಯರು, ಬಡವರು ಮತ್ತು ಶೋಷಿತ ವರ್ಗದವರನ್ನು ಸಬಲೀಕರಣಗೊಳಿಸುತ್ತಾ ‘ಗಾಂಧಿ ಭಾರತ’ವನ್ನು ಮರುನಿರ್ಮಿಸುವ ಕನಸನ್ನು ನನಸಾಗಿಸುವತ್ತ ಮುನ್ನಡೆಯುತ್ತಿದೆ’’ ಮತ್ತು ‘‘ನಮ್ಮ ಕರ್ನಾಟಕ ಗ್ಯಾರಂಟಿ ಕರ್ನಾಟಕ’’ ಎಂಬ ಆತ್ಮಶ್ಲಾಘನೆಯಲ್ಲದೆ ಈ ಕುರಿತಂತೆ ಗಾಂಧೀಜಿಯವರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ/ಕಾಂಗ್ರೆಸ್ ರಾಜ್ಯಾಧ್ಯಕ್ಷರ ಹಾಗೂ ಮುಖದ ಚಹರೆ ಗೊತ್ತಾಗದ ಹತ್ತಾರು ಮಂದಿಯ ಚಿತ್ರವೂ ಕಾಂಗ್ರೆಸ್ ನಾಯಕರ ಭಾವಚಿತ್ರವೂ ಇತ್ತು. (ಈ ಎಲ್ಲ ವಿಚಾರಗಳು ಆಂಗ್ಲ ಪತ್ರಿಕೆಗಳಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಟವಾಗಿದ್ದವು.)

ಈಚೆಗೆ ನನ್ನ ಮಿತ್ರರಲ್ಲಿ ನಾನು ದೇಶದ ಪ್ರತಿಪಕ್ಷಗಳ, ಆದರೆ ಭ್ರಷ್ಟಾಚಾರದ ಆರೋಪವನ್ನು ಹೊತ್ತ ಕೆಲವು ರಾಜಕಾರಣಿಗಳ ವಿರುದ್ಧ ಪ್ರಧಾನಿಯವರು ನೇರಯುದ್ಧ ಘೋಷಿಸಿ ಅವರು ಜೈಲು ಸೇರುವಂತೆ ಮಾಡುತ್ತೇನೆ ಎಂದು ಭಾಷಣ ಮಾಡಿ ಆನಂತರ ಅವರು ತನ್ನ ಪಕ್ಷ ಸೇರಿದ ಮೇಲೆ ಅವರ ವಿರುದ್ಧ ಇದ್ದ ಆಪಾದನೆಗಳನ್ನು ಹಿಂಪಡೆದು ಅವರಿಗೆ ಕ್ಲೀನ್‌ಚಿಟ್ ಕೊಟ್ಟ ಪ್ರಸಂಗವನ್ನು ಹೇಳಿ ರಾಜಕಾರಣಿಗಳೆಲ್ಲರೂ ಒಂದೇ ಶೋಷಿತರು ಮತ್ತು ಪ್ರತಿಪಕ್ಷಗಳೆಂದರೆ ಈ ದೇಶದ ಅಸಂಖ್ಯ ಮುಗ್ಧ ಪ್ರಜೆಗಳು ಎಂದಾಗ ಅವರು ಹಾಗಲ್ಲ, ಪ್ರಧಾನಿಯವರ ನಡೆಯು ರಾಜಕೀಯ ಅನಿವಾರ್ಯ ಮತ್ತು ಇವೆಲ್ಲ ರಾಜಕೀಯದಲ್ಲಿ ಸಾಮಾನ್ಯವೆಂದರು. ‘ರಾಜಕೀಯ ಅನಿವಾರ್ಯ’ ಮತ್ತು ‘ರಾಜಕೀಯ ಸಾಮಾನ್ಯ’ ಎಂಬ ಈ ಪದವನ್ನು ಅವರಿಂದ ಪಡೆದು ಮತ್ತೆ ಅವರಿಗೆ ಅರ್ಪಿಸುತ್ತೇನೆ.

ಮಹತ್ವಾಕಾಂಕ್ಷೆಯ ಈ ಜಾಹೀರಾತು ಪ್ರಧಾನಿಯವರ ಅಥವಾ ಅವರ ಬೆಂಬಲಿಗರ ಧಾಟಿಯಲ್ಲಿ ರಾಜಕೀಯ ಅನಿವಾರ್ಯ ಅಥವಾ ರಾಜಕೀಯ ಸಾಮಾನ್ಯವಾಗಿತ್ತು ಎನ್ನಬಹುದು. ಆದರೆ ಇಷ್ಟು ಮಹತ್ವಾಕಾಂಕ್ಷೆಯನ್ನು ಹೊರುವುದು ಗಾಂಧಿಗೆ ಎಸಗುವ ಪರಮ ಅನ್ಯಾಯವೆನ್ನಬಹುದು. ಸಾಮಾನ್ಯವಾಗಿ ಗಾಂಧಿಯ ಯಾವುದೇ ಚಿತ್ತದಲ್ಲಿ ಅವರೊಂದಿಗೆ ನೆಹರೂ, ಸುಭಾಸ್, ಪಟೇಲ್, ಮೌಲಾನಾ ಮುಂತಾದವರ ಚಿತ್ರಗಳಿರುವುದು ಸಹಜ. ಅವರೊಂದಿಗೆ ಅಸಂಖ್ಯ ಭಾರತೀಯರನ್ನು ಸಂಕೇತಿಸುವ ವ್ಯಕ್ತಿಗಳನ್ನು ತೋರಿಸುವುದೂ ಅಷ್ಟೇ ಸಹಜ. ಆದರೆ ಗಾಂಧಿಯೊಂದಿಗೆ ಅವರನ್ನು ಸ್ಮರಿಸುವುದರ ಹೊರತು ಅವರ ನಡೆನುಡಿಯನ್ನು ಜಾರಿಗೆ ತರಲು ಹಿಂಜರಿಯುವ ಸರಕಾರಗಳು ತಮ್ಮನ್ನು ಅವರೊಂದಿಗೆ ಸಾರ್ವಜನಿಕವಾಗಿ ಪ್ರದರ್ಶಿಸುವುದು ಎಷ್ಟು ಸಮಂಜಸ ಅಥವಾ ಉಚಿತ? ಗಾಂಧಿಯೊಂದಿಗೆ ತಮ್ಮ ಚಿತ್ರ ಪ್ರಕಟವಾದರೆ ತಮ್ಮನ್ನು ಗಾಂಧಿಯಂತೆ ಗುರುತಿಸುತ್ತಾರೆ, ಗೌರವಿಸುತ್ತಾರೆ ಎಂದು ನಂಬುವ ನಾಯಕರ ಬಾಲ ಎಂದಿಗೂ ಡೊಂಕೇ. ಮತೀಯ ಶಕ್ತಿಗಳು ದೇಶದ ಸ್ವಾತಂತ್ರ್ಯಪೂರ್ವ ನಾಯಕರನ್ನು ಹೈಜಾಕ್ ಮಾಡಿ ತಮ್ಮ ಮತಾನುಕೂಲದ ಚಕ್ಕಡಿಗೆ ಕಟ್ಟಿಹಾಕಿ ದುಡಿಸಿಕೊಂಡದ್ದಿದೆ. ವಿವೇಕಾನಂದ, ಸುಭಾಸ್, ಭಗತ್ ಸಿಂಗ್ ಇವರನ್ನೆಲ್ಲ ಪ್ರಯೋಗಿಸಿ ಜನರನ್ನು ದಿಕ್ಕುಗೆಡಿಸಿ ಸುಳ್ಳು ದೇಶಭಕ್ತರನ್ನು ಸೃಷ್ಟಿಸಿದ್ದಿದೆ. ಅಂಥದ್ದನ್ನು ಟೀಕಿಸುವ ಜನರು ತಮ್ಮನ್ನು ತಾವು ಬುದ್ಧಿಜೀವಿಗಳೆಂದು, ಪ್ರಗತಿಪರರೆಂದು ಘೋಷಿಸಿಕೊಂಡು ಇಂತಹ ಅವಾಂತರವನ್ನು ಸಹಿಸಿಕೊಳ್ಳುವುದು ಹೇಗೆ?

1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವು ಚಾರಿತ್ರಿಕವಾಗಿತ್ತು. ಗಾಂಧಿ ಅದರ ಅಧ್ಯಕ್ಷತೆಯನ್ನು ವಹಿಸಿದ್ದರು. ಆಗ ಕಾಂಗ್ರೆಸ್ ಒಂದು ರಾಜಕೀಯ ಪಕ್ಷದಂತಿರಲಿಲ್ಲ. ಅದು ದೇಶದ ಸ್ವಾತಂತ್ರ್ಯದಾಹಿಗಳ ನಾಯಕತ್ವವನ್ನು ವಹಿಸಿತ್ತು. ಇಂದು ಅದು ಹಾಗಿದೆಯೇ? ಅದನ್ನು ನೈಜ ಸ್ವಾತಂತ್ರ್ಯದಾಹದಲ್ಲಿ ಗ್ರಹಿಸುವುದು ಬೇರೆ; ರಾಜಕೀಯದ ಕೊಳಕಿನೊಂದಿಗೆ ಸೇರಿಸಿ ಚಿತ್ರಿಸುವುದು ಬೇರೆ.

ಚಿಕ್ಕ ಚಿಕ್ಕ ಉದಾಹರಣೆಗಳೆಂದರೆ: ಗಾಂಧಿ ಯಾವ ಕಾಲ-ಸಂದರ್ಭದಲ್ಲೂ ಮದ್ಯಪಾನವನ್ನು ಒಪ್ಪಿರಲಿಲ್ಲ. ಅವರನ್ನು ಮಾತುಮಾತಿಗೂ ಉಲ್ಲೇಖಿಸುವವರು ಮದ್ಯಪಾನವನ್ನು ನಿಷೇಧಿಸುವರೇ? ಬದಲಾಗಿ ದಿನೇದಿನೇ ಮದ್ಯಪ್ರಿಯರಿಗೆ ಬೇಕಾದ ಕಾನೂನುಗಳೇ ಜಾರಿಯಾಗುತ್ತಿವೆ; ಮದ್ಯವೇ ಕೇಂದ್ರವಾಗಿ, ಮದ್ಯಾಹ್ನಿಕರಿಗೆ ಅನುಕೂಲವಾಗುವುದಕ್ಕಾಗಿ, ಶಾಲೆಗಳನ್ನು, ಪೂಜಾಕೇಂದ್ರಗಳನ್ನು, ಆಸ್ಪತ್ರೆಗಳನ್ನು ಮದ್ಯಕೇಂದ್ರಗಳಿಂದ ದೂರ ಸ್ಥಳಾಂತರಿಸುವುದು ಮಾತ್ರ ಉಳಿದಿದೆ. ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಬೇಕೆಂದು ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ ಭಾಷಣದಲ್ಲಿ ಹೇಳಿದರೆ ಸಾಲದು; ಆ ದಿಕ್ಕಿನಲ್ಲಿ ಒಂದು ಅಂಗುಲವಾದರೂ ಮುನ್ನಡೆಯಬೇಕು. ಬದಲಾಗಿ ದಿನೇ ದಿನೇ ಲಂಚವೇ ಮೊದಲಾದ ನೈತಿಕ ಪಿಡುಗುಗಳು ಹೆಚ್ಚಾಗುತ್ತಿವೆ. ಸರಕಾರಿ ಅಥವಾ ಸೇವೆಯಲ್ಲಿದ್ದರೆ (ರಾಜಕಾರಣ, ಶಾಸಕಾಂಗ ಮತ್ತು ಕಾರ್ಯಾಂಗ ಈ ನೆಲೆಗಳು) ಮೂರು ತಲೆಮಾರಿಗೆ ಬೇಕಾದಷ್ಟು ಸಂಪತ್ತನ್ನು ಗಳಿಸಿ ಉಳಿಸಿಕೊಳ್ಳಬಹುದೆಂಬುದು ಇಂದು ಚಿದಂಬರ ರಹಸ್ಯವಾಗಿಯೇನೂ ಉಳಿದಿಲ್ಲ. ಈ ಪೈಕಿ ತಜ್ಞರೆಂದು, ಸಂವೇದನಾಶೀಲರೆಂದು ಹೆಸರು ಪಡೆಯಬೇಕೆಂದಿರುವವರು, ತಮ್ಮ ಮಕ್ಕಳಿಗೆ ಲಕ್ಷ್ಮೀಪುತ್ರರಾಗಲು ಹೇಳಿಕೊಡುತ್ತಾರೆಯೇ ಹೊರತು ಸರಸ್ವತೀಪುತ್ರರಾಗಬೇಕೆಂದು ಆ(ದೇ)ಶಿಸುವುದಿಲ್ಲ. ಆಡಳಿತ ಪಾರದರ್ಶಕವಾಗಿರಬೇಕೆಂದು ಬಡಾಯಿಕೊಚ್ಚಿದರೆ ಸಾಲದು; ಅದನ್ನು ತುಪ್ಪೇರಿದ ದರ್ಪಣವನ್ನಾಗಿಸಬಾರದು. ಇದನ್ನು ಸಾಧಿಸುವುದು ಹೋಗಲಿ, ಪಾರದರ್ಶಕತೆಯನ್ನು ಹೊಡೆದೋಡಿಸುವಂತೆ ಮೊನ್ನೆಮೊನ್ನೆಯಷ್ಟೇ ಕರ್ನಾಟಕ ಸರಕಾರವು ಸಾರ್ವಜನಿಕ/ಸರಕಾರಿ ಕಚೇರಿಗಳಲ್ಲಿ ಜನರು ಆಡಿಯೊ, ವೀಡಿಯೊಗಳನ್ನು ಮಾಡುವುದನ್ನು ನಿರ್ಬಂಧಿಸಿದೆಯೆಂಬ ಸುದ್ದಿ ಬಂದಿದೆ. ಜನರ ಕಣ್ಣಿಗೆ ಮಣ್ಣೆರಚಲು ಮದ್ಯಪಾನ ಸಂಯಮ ಮಂಡಳಿಗಳಿವೆ; ಅವು ಹಾನಿಕಾರಕವೆಂಬ ಪ್ರಚಾರವೂ ಇದೆ. ತಂಬಾಕಿನ ಕುರಿತೂ ಇಂತಹ ವೈರುಧ್ಯಮಯ ವಾತಾವರಣವನ್ನು ಸೃಷ್ಟಿಸಿಲಾಗಿದೆ. ಗಾಂಧಿಯ ಕನಸನ್ನು ನನಸಾಗಿಸಲು ಗ್ರಾಮ ಸ್ವರಾಜ್ಯಗಳನ್ನು ಸ್ಥಾಪಿಸಲಾಯಿತು. ಆದರೆ ಹಳ್ಳಿಹಳ್ಳಿಗಳಲ್ಲಿ ಗ್ರಾಮರಾಜ್ಯವನ್ನು ಸ್ಥಾಪಿಸುವ ಬದಲು ಅಲ್ಲೂ ಅಧಿಕಾರ ರಾಜಕೀಯ, ಪಕ್ಷರಾಜಕೀಯ, ಭ್ರಷ್ಟರಾಜಕೀಯವನ್ನು ನೆಲೆಗೊಳಿಸಲಾಯಿತು. ಈಗ ಈ ಮಣ್ಣಿನಲ್ಲಿ ವಿಷಕಾರಕ ಕಳೆಗಳಿಗಿರುವ ಪ್ರೋತ್ಸಾಹವು ಜೀವಬೆಲೆಯ ಬೆಳೆಗಳಿಗಿಲ್ಲ.

ಇಂತಹ ಉದಾಹರಣೆಗಳು ಬದುಕಿನ, ಆಡಳಿತದ, ಸಾಮಾಜಿಕ ಪರಿಸರದಲ್ಲಿ ಬೇಕಷ್ಟಿವೆ. ನೋಡುವ ಕಣ್ಣುಗಳು ಬೇಕು, ಅಷ್ಟೇ. ಸಾರವಿಷ್ಟೇ: ಗಾಂಧಿಯೊಂದಿಗೆ ನಮ್ಮನ್ನು ನಾವು ಚಿತ್ರಿಸಿಕೊಂಡರೆ ನಾವು ಗಾಂಧಿಗೆ ಅವಮಾನಮಾಡುತ್ತೇವೆಯೇ ಹೊರತು ನಮ್ಮ ಗೌರವವು ಹೆಚ್ಚಾಗಲಾರದು. ಗಾಂಧಿಯನ್ನು ಅವಮಾನಿಸಲು ಗೋಡ್ಸೆಯ ಅಭಿಮಾನಿಗಳು ಮಾಡುವ ಸೈತಾನಕ್ರಿಯೆಗಳನ್ನು ಸರಿಯಾಗಿ ಪ್ರತಿಭಟಿಸಿ ನಿಯಂತ್ರಿಸಲು ಪ್ರಯತ್ನಿಸಬೇಕೇ ಹೊರತು ನಾವು ಗಾಂಧಿಯೊಂದಿಗೆ ನಿಂತದ್ದರಿಂದ ಏನೂ ಸಾಧನೆಯಾಗಲಾರದು. ತಮ್ಮದಲ್ಲದ ದುಡ್ಡಿನಲ್ಲಿ ಜಾಹೀರಾತನ್ನು ನೀಡುವಾಗ ಅಲ್ಲಿ ರಾಜಕಾರಣವೊಂದೇ ಕಾಣಸಿಗುತ್ತದೆ.

ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಲಭಿಸಿತು. ಅದಾದ ಕೆಲವೇ ತಿಂಗಳುಗಳಲ್ಲಿ ಗಾಂಧಿ ಗತಿಸಿದರು. ಸ್ವಾತಂತ್ರ್ಯ ಲಭಿಸುವ ಅಥವಾ ಅದರ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಗಾಂಧಿಹತ್ಯೆ ನಡೆದಿದ್ದರೆ ಅದಕ್ಕೆ ಬ್ರಿಟಿಷರು ನೆಪವಾಗುತ್ತಿದ್ದರೇನೋ? ಆದರೆ ಅದು ನಡೆದದ್ದು ಸ್ವತಂತ್ರ ಭಾರತದಲ್ಲಿ. ಭಾರತ-ಪಾಕಿಸ್ತಾನ ವಿಭಜನೆ ನಡೆದಾಗ ಸಾವಿರಾರು ಮಂದಿ ಸಾವು ಇಲ್ಲವೇ ನೋವು ಅನುಭವಿಸಿದರು. ಆಗ ಗಾಂಧಿಹತ್ಯೆ ನಡೆದಿದ್ದರೆ ಅಥವಾ ಅದನ್ನು ಮುಸಲ್ಮಾನನೊಬ್ಬ ನಡೆಸಿದ್ದರೆ, ಅದನ್ನು ವಿಭಜಕ ಶಕ್ತಿಗಳೋ ಅಥವಾ ವಿಭಜನೆಯನ್ನು ವಿರೋಧಿಸಿದವರೋ ನಡೆಸಿದ್ದಾರೆಂದು ದೂರಬಹುದಿತ್ತು. ಆದರೆ ಅದೆಲ್ಲ ನಡೆದ ಬಳಿಕ, ಬೆಂಕಿಯಾರಿ ಬೂದಿಯಷ್ಟೇ ಉಳಿದ ಕ್ಷಣದಲ್ಲಿ ಅಪ್ಪಟ ಹಿಂದೂ ಒಬ್ಬ ಹಿಂದುತ್ವದ ಹೆಸರಿನಲ್ಲಿ, ರಾಷ್ಟ್ರೀಯತೆಯ ಹೆಸರಿನಲ್ಲಿ, ಹಿಂಸೆಯ ಕಿಡಿ ಗಾಂಧಿಯನ್ನು ಆಹುತಿ ಪಡೆದ ಬಗೆ ಮಾತ್ರ ವಿಷಾದನೀಯ.

ಕಳೆದ 75 ವರ್ಷಗಳಲ್ಲಿ ಗಾಂಧಿಹತ್ಯೆಯಷ್ಟು ಚರ್ಚೆಗೊಳಗಾದ ವಿಚಾರ ಇನ್ನೊಂದಿರಲಿಕ್ಕಿಲ್ಲ. ನೇತಾಜಿಯ ನಿಗೂಢ ಸಾವು ತನಿಖಾ ಕುತೂಹಲವನ್ನು ಕೆರಳಿಸಿದರೂ ಅದೀಗ ಬರಿಗುಲ್ಲು ನಿದ್ರೆಗೇಡು ಎಂಬಂತೆ ಅಕಾಡಮಿಕ್ ಆಗಿ ಮಾತ್ರ ಉಳಿದಿದೆ. ಆದರೆ ಗಾಂಧಿಹತ್ಯೆಯ ಕ್ರೌರ್ಯದ ಬೇರುಗಳು ಸಡಿಲವಾಗಿ ನಾಶವಾಗುವುದರ ಬದಲು ಗಟ್ಟಿಯಾಗಿವೆ. ಅವು ಮತಾಂಧತೆಯ ಪರಾಕಾಷ್ಠೆಯನ್ನು ತಲುಪಿ ದೇಶವನ್ನು ಖಂಡ-ತುಂಡುಮಾಡಿ ನಿರ್ನಾಮಮಾಡುವತ್ತ, ವಿನಾಶದತ್ತ ಸಾಗಿಸುತ್ತಿದೆ. ಗಾಂಧಿಯ ಚಿತ್ರ ಕರೆನ್ಸಿ ನೋಟುಗಳಲ್ಲಿ ಮಾತ್ರ ಪರಿಚಯವಾಗುತ್ತಿದ್ದು ಗಾಂಧಿಯ ಆದರ್ಶಗಳು, ಮೌಲ್ಯಗಳು, ಸಿದ್ಧಾಂತಗಳು ರಾಜಕಾರಣದ ಕಾಲಾಳುವಿನಂತೆ ಓಡಾಡುತ್ತಿವೆ. ಬಲಪಂಥೀಯ ರಾಜಕಾರಣವು ತಮ್ಮದೇ ಕಾರಣಗಳಿಗಾಗಿ ಸುಲಭಸಾಧ್ಯವಲ್ಲವೆಂದು ಗೊತ್ತಿದ್ದರೂ ಗಾಂಧಿಯನ್ನು ಜನಮಾನಸದಿಂದ ಮರೆಸುವ ಪ್ರಯತ್ನಮಾಡುತ್ತಿದೆ. ಇದು ಫಲಕೊಡಲಾರದೆಂದು ಭಾವಿಸುವ ಸ್ಥಿತಿ ಈಗ ದೇಶದಲ್ಲಿಲ್ಲ. ಸ್ವಾರ್ಥಕ್ಕೆ, ಮತೀಯ ಭ್ರಮೆಗೆ ತುತ್ತಾದ, ಅಜ್ಞಾನಿ ಹಾಗೂ ಧೂರ್ತ ಜನರು (ಇವರಲ್ಲಿ ಸಾಕಷ್ಟು ಮಂದಿ ವಿದ್ಯಾವಂತರು, ಗಣ್ಯರು, ಸಿರಿವಂತರು ಮತ್ತು ಸರಕಾರದ ಆಯಕಟ್ಟಿನ ಸ್ಥಾನ-ಮಾನವನ್ನು ಹೊಂದಿದವರು) ಗಾಂಧಿಯನ್ನು ತದೇಕಚಿತ್ತದಿಂದ ವಿರೋಧಿಸುತ್ತಿದ್ದಾರೆ. ಈ ಪೈಕಿ ಒಂದಷ್ಟು ಮಂದಿ ನೇರವಾಗಿ ಗಾಂಧಿಹಂತಕನನ್ನು ಮತ್ತು ಮತಾಂಧ ರಾಜಕೀಯವನ್ನು ತಮ್ಮ ಕುಲದೇವರಂತೆ ನೋಡುತ್ತಿರುವುದು ಗಮನಾರ್ಹ. ದೇಶದಲ್ಲಿ ಅತಿಮಾನವರು ಮತ್ತು ವ್ಯಕ್ತಿಪ್ರಧಾನರು ಸಾಮಾಜಿಕ ವಿಷಮತೆಗೆ, ರಾಜಕೀಯ ಅನೈತಿಕತೆಗೆ ನೇರ ಹೊಣೆಯಾಗಿದ್ದಾರೆ. ತಾವು ನಂಬಿಕೆಯಿಂದ ತೋಡಿದ ಬಾವಿಗೆ ಮುಗ್ಧ ಜನ ತಾವೇ ಬಲಿಯಾಗುತ್ತಿದ್ದಾರೆ. ಒಮ್ಮೆ ಮೇಲೇರಿದವರು ಮತ್ತೆ ಕೆಳಗಿಳಿಯಲಾರರು. ಸಾವು-ನೋವು ಮಾತ್ರ ಅವರನ್ನು ಕೆಳಗಿಳಿಸೀತು, ಅಷ್ಟೇ.

ಗಾಂಧಿಯಂಥ ಗಾಂಧಿಯಿಲ್ಲದಾಗ ಇವೆಲ್ಲ ನೆನಪಾಗುವುದು ಸಹಜ. ಜನವರಿ 30 ಗಾಂಧಿಯ ಸಮಾಧಿಗೆ ಇನ್ನಷ್ಟು ಮತ್ತು ಅದರೊಂದಿಗೆ ಜನರ ಕಣ್ಣಿಗೂ ಮಣ್ಣೆರಚುವ ದಿನವಾಗಬಾರದು. ಯಾರನ್ನು ದೂಷಿಸುತ್ತೇವೋ ಅವರ ನಿಯಮವನ್ನು ನಾವೂ ಅನುಸರಿಸುವ ರಾಜಕೀಯ ಅನಿವಾರ್ಯ ನಮ್ಮದಾಗಬಾರದು. ಆಗ ಮಾತ್ರ ಗಾಂಧಿ, ಗಾಂಧಿ ಅಧ್ಯಕ್ಷತೆ ವಹಿಸಿದ ಸಮಾವೇಶದ ನೆನಪುಗಳು ಹಸಿರಾಗಿ ಉಳಿದಾವು. ಅದು ಯುದ್ಧರಂಗದ ಅವಶೇಷಗಳಾಗಬಾರದು. ನೆಟ್ಟ ಗಿಡ ಮರವಾಗಿ ಬಿಳಲುಬಿಟ್ಟು ನೆರಳು ನೀಡುವಂತಿರಬೇಕು.

ಯಾವುದೇ ಸಿದ್ಧಾಂತವು, ಯಾವನೇ ನಾಯಕನು ಪ್ರತಿಮಾ ನಿರ್ಮಾಣದಿಂದ ಉಳಿಯಲು ಸಾಧ್ಯವಿದ್ದಿದ್ದರೆ ಈ ದೇಶದ ತುಂಬ ಪ್ರತಿಮೆಗಳನ್ನು ಸ್ಥಾಪಿಸುವುದರ ಮೂಲಕ ದೇಶವನ್ನು ಮರುನಿರ್ಮಾಣ ಸಾಧ್ಯವಿತ್ತು. ನೆಲದಲ್ಲಿ ಬೇರೂರಿದ್ದು ಉಳಿಯಬಹುದು; ಅಂಟಿದ್ದಲ್ಲ. ನೂರಾರು ಅಡಿ ಎತ್ತರದಿಂದ ಒಬ್ಬ ವ್ಯಕ್ತಿಯನ್ನು, ಒಂದು ತತ್ವವನ್ನು, ಉಳಿಸಲು ಸಾಧ್ಯವಿಲ್ಲವೆಂಬುದು ಭೂಮಿಗೆ ಅದರ ಕಂಪನದ ಮೂಲಕ ಅರ್ಥವಾಗಿದೆ. ಆಗಬೇಕಾದ್ದು ಮರುನಿರ್ಮಾಣವಲ್ಲ; ಯಾವುದೇ ಒಳಿತೂ ನಿರ್ನಾಮವಾಗದಂತೆ ನೋಡಿಕೊಳ್ಳುವ ಎಚ್ಚರಿಕೆ; ಜಾಗೃತಿ. ತ್ರಿವಿಕ್ರಮಾವತಾರವನ್ನು ತಾಳಿದರೂ ದೇವರಾಗಿ ಉಳಿದವನು ವಾಮನನೇ. ತ್ರಿವಿಕ್ರಮ ಪ್ರದರ್ಶನವಲ್ಲ.

ಮತಾಂಧ ರಾಜಕೀಯ ಈ ದೇಶವನ್ನು ಎಲ್ಲಿಗೆ ತಳ್ಳುತ್ತಿದೆಯೆಂಬುದನ್ನು ನೋಡುತ್ತಿದ್ದೇವೆ. ವಿದ್ಯಾವಂತರು ಅಕ್ಷರಸ್ಥ ಬುದ್ಧಿಹೀನರಾಗಿ ಕೃತಕ ಬುದ್ಧಿಮತ್ತೆಯ ಆಧುನಿಕತೆಯಲ್ಲಿ ಸಹಜ ಮೂರ್ಖತನವನ್ನು ಬೆಳೆಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಗಾಂಧಿ ಆದರ್ಶಗಳನ್ನು ಅನುಸರಿಸುವುದು, ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದು ಮತ್ತು ಗಾಂಧಿ ಕನಸನ್ನು ನನಸಾಗಿಸುವುದು ಮುಂತಾದ ಪಾಠಗಳನ್ನು ಕಾಂಗ್ರೆಸ್ ಸರಕಾರ ಜನರಿಗೆ ಕಲಿಸುವ ಮೊದಲು ತಾನು ಕಲಿಯಬಹುದೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News