‘ಬ್ರಾಹ್ಮಣ ಭಾರತ’ದ ಹುನ್ನಾರಗಳನ್ನು ತೆರೆದಿಡುವ ಅಪರೂಪದ ಪುಸ್ತಕ: ‘ಗಾಂಧೀಜಿಯ ಹಂತಕ’!

ಲೇಖಕ ಝಾ ಅವರು ಸಂಘ ಪರಿವಾರದ ಬ್ರಾಹ್ಮಣಶಾಹಿ ಸಿದ್ಧಾಂತವನ್ನು ವಿರೋಧಿಸಿದವರ ಬಗ್ಗೆ ಕುತೂಹಲದ ಮಾಹಿತಿ ನೀಡುತ್ತಾರೆ. ಅದೆಂದರೆ ಆರಂಭದ ವರ್ಷಗಳಲ್ಲಿ ಬ್ರಾಹ್ಮಣರಿಂದ ಸ್ಥಾಪನೆಯಾದ ಆರೆಸ್ಸೆಸ್ ಸಂಘಟನೆಯನ್ನು ಮಹಾರಾಷ್ಟ್ರ ರಾಜ್ಯದಲ್ಲೇ ಬ್ರಾಹ್ಮಣೇತರರು ಕಟುವಾಗಿ ವಿರೋಧಿಸಿರುವುದು. ಅದೆಷ್ಟೋ ಊರುಗಳಲ್ಲಿ ಆಗ ಸಂಘದ ಸದಸ್ಯರ ಮೇಲೆ, ಶಾಖೆಗಳ ಮೇಲೆ ಬ್ರಾಹ್ಮಣೇತರರು ಹಲ್ಲೆ ನಡೆಸಿರುವ ಕುರಿತೂ ಮಾಹಿತಿ ಒದಗಿಸಿದ್ದಾರೆ. ಅಂದರೆ, ಸಂಘ ಪರಿವಾರದ ಅಂತಿಮ ಉದ್ದೇಶ ಬ್ರಾಹ್ಮಣ ಆಡಳಿತದ ಹಿಂದೂ ಭಾರತದ ನಿರ್ಮಾಣವೆನ್ನುವುದು ಮಹಾರಾಷ್ಟ್ರದ ಬ್ರಾಹ್ಮಣೇತರರಿಗೆ ಆಗಲೇ ಸ್ಪಷ್ಟವಾಗಿ ಅರ್ಥವಾಗಿತ್ತು.!! ಇದಕ್ಕೆ ಪೂರಕವಾದ ಮಾಹಿತಿ ಎಂದರೆ, ಗಾಂಧೀಜಿ ಹತ್ಯೆ ಸಂಚಿನ ಎಲ್ಲ ಪಾತ್ರಧಾರಿಗಳೂ ಬ್ರಾಹ್ಮಣರೇ ಆಗಿರುವುದು!!

Update: 2024-05-21 07:05 GMT

ಇಲ್ಲಿ ವರೆಗೂ ಸಂಘಪರಿವಾರದ ಅಂತಿಮ ಗುರಿ ಅಖಂಡ ಹಿಂದೂ ರಾಷ್ಟ್ರ ಅಂತ ಭಾವಿಸಿದ್ದೆ. ಈ ಪುಸ್ತಕ ಓದಿದ ನಂತರ ಅರ್ಥವಾಯಿತು: ಅದು ಬ್ರಾಹ್ಮಣರ ಅದರಲ್ಲೂ ಪೇಶ್ವೆ ಆಡಳಿತದ, ಉಳಿದವರೆಲ್ಲರೂ ಗುಲಾಮರಾಗಿರುವ ಹಿಂದೂ ರಾಷ್ಟ್ರ ನಿರ್ಮಾಣವೇ ಈ ಸಂಘಟನೆಗಳ ಅಂತಿಮ ಗುರಿ ಎಂಬುದು.!

ನಾಥೂರಾಮ್ ಗೋಡ್ಸೆಯ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಇರುವುದು ಸಾವರ್ಕರ್- ಗೋಲ್ವಾಲ್ಕರ್‌ಗಳು ಆತನ ತಲೆಯೊಳಗೆ ತುಂಬಿದ ಮುಸ್ಲಿಮ್ ದ್ವೇಷ ಮತ್ತು ಹಿಂದೂ ರಾಷ್ಟ್ರ ಕಲ್ಪನೆಗೆ ಅಡ್ಡಗಾಲು ಹಾಕುತ್ತಿರುವ ಗಾಂಧೀಜಿಯ ಕುರಿತು ದ್ವೇಷ ಮತ್ತು ಅಸಹನೆ ಅನ್ನುವುದನ್ನು ’ಗಾಂಧೀಜಿಯ ಹಂತಕ’ ಪುಸ್ತಕವು ಎಳೆ ಎಳೆಯಾಗಿ ಭರಪೂರ ಪುರಾವೆಗಳೊಂದಿಗೆ ಸಮರ್ಥಿಸುತ್ತದೆ. ದಿಲ್ಲಿ ಮೂಲದ ಹಿರಿಯ ಪತ್ರಕರ್ತ ಧೀರೇಂದ್ರ ಝಾ ಅವರು ಬರೆದಿರುವ ಅತ್ಯಂತ ಮಹತ್ವದ Gandhi's Assassins ಪುಸ್ತಕವನ್ನು ಎ.ನಾರಾಯಣ ಮತ್ತು ಮನೋಜ್ ಕುಮಾರ್ ಗುದ್ದಿ ‘ಗಾಂಧೀಜಿಯ ಹಂತಕ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಇರುವ ವ್ಯಕ್ತಿಗಳು, ಸಂಘಟನೆಗಳು ಅವುಗಳ ಕಾರ್ಯ ವೈಖರಿ, ಹತ್ಯೆಯ ಸಂಚು ರೂಪಿಸಿದ ರೀತಿ ಎಲ್ಲವನ್ನೂ ವಿವರವಾಗಿ ಹದಿನೆಂಟು ಅಧ್ಯಾಯಗಳಲ್ಲಿ ಆಧಾರಗಳೊಂದಿಗೆ ನಿರೂಪಿಸಿದ್ದಾರೆ.

ಗಾಂಧಿ ಹತ್ಯೆಯ ವಿವರಗಳನ್ನು ಮಾತ್ರವಲ್ಲ, ಸಂಘ ಪರಿವಾರ ಈಗ ವೈಭವೀಕರಿಸುತ್ತಿರುವ ಸಾವರ್ಕರ್ ಎಂಬ ವ್ಯಕ್ತಿಯ ದೇಶಭಕ್ತಿಯ ಅಸಲೀ ಮುಖವನ್ನು ಮತ್ತು ಆರೆಸ್ಸೆಸ್, ಹಿಂದೂ ಮಹಾಸಭಾ ಮುಂತಾದ ದೇಶಭಕ್ತ ಸಂಘಟನೆಗಳ ಸ್ಥಾಪನೆಯ ಹಿಂದಿರುವ ಮುಸ್ಲಿಮ್ ದ್ವೇಷದ ಮುಖಗಳನ್ನೂ ಇಲ್ಲಿ ತೆರೆದಿಟ್ಟಿದ್ದಾರೆ. ಮೊದಲು ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ಬೆಂಬಲಿಗನಾಗಿ, ಚಳವಳಿಯ ವೇದಿಕೆಯಲ್ಲೇ ಭಾಷಣ ಮಾಡಲು ಕಲಿತ ಗೋಡ್ಸೆ ನಂತರ ಸಾವರ್ಕರ್ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟ, ಗಾಂಧೀಜಿಯ ಕಡುದ್ವೇಷಿಯಾಗಿ ಬದಲಾದ ವಿವರಗಳನ್ನೂ ದಾಖಲಿಸಿದ್ದಾರೆ.

ಒಂದೇ ಒಂದು ಉದಾಹರಣೆ:

ಗಾಂಧೀಜಿ ಅವರ ಬಗ್ಗೆ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಸಂಘಟನೆಗಳಿಗೆ ಇರುವ ಆಕ್ರೋಶವನ್ನು ದಿಲ್ಲಿ ಪೊಲೀಸ್ ಗುಪ್ತಚರ ವಿಭಾಗವು 1947ರ ಡಿಸೆಂಬರ್ 8ರಂದು ದಾಖಲಿಸಿದೆ. ದಿಲ್ಲಿಯ ರೊಹ್ಟಕ್ ರಸ್ತೆಯಲ್ಲಿ ನಡೆದ ಆರೆಸ್ಸೆಸ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಸರಸಂಘಚಾಲಕ ಗೋಳ್ವಾಲ್ಕರ್ ‘‘ಸಂಘವು ಪಾಕಿಸ್ತಾನವನ್ನು ನಿರ್ನಾಮಗೊಳಿಸುವವರೆಗೂ ವಿಶ್ರಮಿಸುವುದಿಲ್ಲ. ನಮ್ಮ ಹಾದಿಯಲ್ಲಿ ಯಾರಾದರೂ ಅಡ್ಡ ಬಂದರೆ ಅವರನ್ನೂ ಮುಗಿಸುತ್ತೇವೆ. ಅದು ನೆಹರೂ ಸರಕಾರವಾಗಲಿ, ಬೇರಾವುದೇ ಸರಕಾರವಾಗಲಿ..’’

ಆ ರಹಸ್ಯ ಸಭೆಯಲ್ಲಿ ಆರೆಸ್ಸೆಸ್ ನಾಯಕ ವಿಶೇಷವಾಗಿ ಗಾಂಧೀಜಿಯ ಹೆಸರನ್ನೆತ್ತಿ ಅವರನ್ನು ‘ಮೌನವಾಗಿಸುವ’ ಅಗತ್ಯದ ಬಗ್ಗೆ ಕೂಡಾ ಹೇಳಿದ್ದರು.!!

‘‘ಗಾಂಧೀಜಿ ಅವರು ಮಾತನಾಡದಂತೆ ಮಾಡುವುದಾಗಿ ಗೋಳ್ವಾಲ್ಕರ್ ಬೆದರಿಕೆ ಹಾಕಿದ ಮೂರುವಾರಗಳಲ್ಲಿಯೇ ಗೋಡ್ಸೆ, ಆಪ್ಟೆ ಹಾಗೂ ಕರ್ಕರೆ ತಮ್ಮ ಹಿಂದಿನ ಯೋಜನೆಯನ್ನು ಕಾರ್ಯಗತಗೊಳಿಸುವತ್ತ ಕಾರ್ಯ ಪ್ರವೃತ್ತರಾದರು.’’(ಪುಟ:183) ಎಂದು ಝಾ ಬರೆಯುತ್ತಾರೆ. ಆದರೆ, ಗಾಂಧೀಜಿಯನ್ನು ಇಲ್ಲವಾಗಿಸಬೇಕೆಂಬ ಸೂಚನೆ ನಿಖರವಾಗಿ ಗೋಡ್ಸೆಗೆ ಎಲ್ಲಿಂದ ಬಂತು ಅನ್ನುವುದು ನಿಗೂಢವಾಗಿದೆ. ಇದಕ್ಕೆ ಕಾರಣ ಗಾಂಧೀಜಿ ಕಗ್ಗೊಲೆಯ ಹಿಂದಿನ ಸಂಚಿನ ಬಗ್ಗೆ ಸರಿಯಾದ ತನಿಖೆ ನಡೆಯದೆ ಇರುವುದು ಎಂದೂ ಝಾ ಬರೆಯುತ್ತಾರೆ.

ಗಾಂಧಿ ಹತ್ಯೆಯ ನಾನಾ ವಿಫಲ ಪ್ರಯತ್ನಗಳ ಕುರಿತೂ ಈ ಪುಸ್ತಕದಲ್ಲಿ ವಿವರವಾದ ಮಾಹಿತಿ ಇದೆ. ಅದರಲ್ಲೂ ಹತ್ಯೆಗೆ ಹತ್ತು ದಿನಗಳ ಮೊದಲು, ಅಂದರೆ 1948ರ ಜನವರಿ 20ರಂದು ಇದೇ ಗೋಡ್ಸೆ ಸಹಚರರು ನಡೆಸಿದ ವಿಫಲ ಪ್ರಯತ್ನದ ಕುರಿತು ವಿಸ್ತೃತ ವಿವರಣೆ ಇದೆ. ಕುತೂಹಲದ ಸಂಗತಿಯೆಂದರೆ, ಜನವರಿ 20ರ ಹತ್ಯೆಯ ವಿಫಲಯತ್ನದ ವರೆಗೂ ಗಾಂಧೀಜಿಯವರ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಲು ನಾನಾ ನೆಪ ಹೇಳಿ ನಿರಾಕರಿಸುತ್ತಿದ್ದ ಗೋಡ್ಸೆ, ಇದ್ದಕ್ಕಿದ್ದಂತೆ ಎರಡು ಮೂರು ದಿನಗಳಲ್ಲೇ ತಾನೇ ಹತ್ಯೆ ಮಾಡಲು ಮುಂದಾಗಲು ನಿರ್ಧರಿಸಿರುವುದು ಮತ್ತು ಮುಂದಿನ ಎಂಟೇ ದಿನದಲ್ಲಿ ಗಾಂಧೀಜಿ ಹತ್ಯೆ ಮಾಡಿ ಮುಗಿಸಿರುವುದು.!!

ಕೆಲವೇ ದಿನಗಳಲ್ಲಿ ಗೋಡ್ಸೆ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವೇನಿತ್ತು ಅನ್ನುವುದು ನಿಗೂಢವಾಗಿದೆ.

ಸಂಘ ಪರಿವಾರ ತನ್ನ ಉದ್ದೇಶವನ್ನು ಈಡೇರಿಸಲು ಯಾವ ಮಟ್ಟಕ್ಕೂ ಇಳಿಯಬಲ್ಲುದು, ಯಾವ ತಂತ್ರವನ್ನು ಬೇಕಾದರೂ ಹೆಣೆಯಬಲ್ಲುದು, ಅದಕ್ಕಾಗಿ ಯಾರು ಯಾರನ್ನೋ ಬಳಸಿಕೊಂಡು ಎಂತಹ ಕುಟಿಲ ತಂತ್ರವನ್ನೂ ಕೂಡಾ ಹೆಣೆಯಬಲ್ಲುದು,ಯಾವ ರೀತಿ ಬೇಕಾದರೂ ಸಂಚು ಮಾಡಬಲ್ಲುದು ಮತ್ತು ತನ್ನ ಉದ್ದೇಶ ಈಡೇರಿದ ನಂತರ ಅದು ತನ್ನ ಸಂಘಟನೆಗೆ ಅಪಖ್ಯಾತಿ ತರಬಲ್ಲುದಾದರೆ ಆ ಸಂಚಿಗೂ ತನಗೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ತೋರಿಸಲು ತಮ್ಮ ಸಂಘಟನೆಯನ್ನೇ ನಂಬಿ ಬಂದವರ ಬೆನ್ನಿಗೂ ಇರಿಯಬಲ್ಲುದು ಎಂಬುದಕ್ಕೆ ಅತ್ಯಂತ ಉತ್ತಮ ಉದಾಹರಣೆ ಎಂದರೆ ಗಾಂಧಿ ಹತ್ಯೆಯ ಸಂಚು.!! ಈ ಕುಟಿಲ ನೀತಿ, ತಂತ್ರ ಹೆಣೆಯುವ ವಿಚಾರದಲ್ಲಿ ಗೋಡ್ಸೆಯ ಗಾಡ್ ಫಾದರ್ ಸಾವರ್ಕರ್ ಇನ್ನೂ ಒಂದು ಹೆಜ್ಜೆ ಮುಂದು.!!

ಗಾಂಧಿ ಹತ್ಯೆಯ ನಂತರ ದೇಶಾದ್ಯಂತ ಭುಗಿಲೆದ್ದ ಸಾರ್ವತ್ರಿಕ ಆಕ್ರೋಶವನ್ನೆದುರಿಸಲಾಗದ ಸಂಘ ಪರಿವಾರ ಮತ್ತು ಸಾವರ್ಕರ್, ಗೋಡ್ಸೆಗೂ ತನಗೂ ಸಂಬಂಧವೇ ಇಲ್ಲವೆಂಬ ನರೇಟಿವನ್ನು ಉದ್ದಕ್ಕೂ ಹೆಣೆಯುತ್ತಲೇ ಬಂದಿರುವುದೇ ಇದಕ್ಕೆ ಸಾಕ್ಷಿ ಎಂದು ಝಾ ಅನೇಕ ಸಾಕ್ಷ್ಯಾಧಾರಗಳ ಮೂಲಕ ವಿವರಿಸುತ್ತಾರೆ. ತಾವೇ ಸೃಷ್ಟಿಸಿದ ಪತ್ರವನ್ನು ಗೋಡ್ಸೆಯ ಮೂಲಕವೇ ಕೋರ್ಟಿಗೆ ಸಲ್ಲಿಸುವ ಮೂಲಕ ಗೋಡ್ಸೆಯನ್ನು ಅಕ್ಷರಶಃ ನೈತಿಕವಾಗಿಯೂ ಒಂಟಿಯಾಗಿಸುತ್ತಾರೆ. ಹತ್ಯೆಯ ವಿಚಾರಣೆ ನಂತರ ಸಾವರ್ಕರ್ ಬಿಡುಗಡೆಯಾಗುತ್ತಾರೆ. ಗೋಡ್ಸೆ ಮತ್ತು ಆಪ್ಟೆಗೆ ಗಲ್ಲುಶಿಕ್ಷೆಯಾಗುತ್ತದೆ.

ತಮಾಷೆಯೆಂದರೆ, ತಾವು ಹತ್ಯೆಗೈದ ಅದೇ ಗಾಂಧೀಜಿಯವರ ಅಹಿಂಸಾ ನೀತಿಯನ್ನೇ ಮುಂದಿಟ್ಟುಕೊಂಡು ಕೊನೆ ಕ್ಷಣದ ವರೆಗೆ ಗಲ್ಲು ಶಿಕ್ಷೆಯಿಂದ ಪಾರಾಗಲೂ ತಂತ್ರ ಹೆಣೆಯುವುದು!! ಈ ಎಲ್ಲ ವಿವರಗಳನ್ನೂ ಧೀರೇಂದ್ರ ಝಾ ಆಧಾರ ಸಹಿತ ಮುಂದಿರಿಸಿದ್ದಾರೆ..!!

ಈಗೇನೋ, ಸಂಘ ಪರಿವಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮೂಲಕ ಸಂವಿಧಾನ ತಿದ್ದುಪಡಿ, ಹಿಂದೂ ರಾಷ್ಟ್ರ ಸ್ಥಾಪನೆಯ ತನ್ನ ಸಿದ್ಧಾಂತಗಳನ್ನು ಜಾರಿಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಲೇಖಕ ಝಾ ಅವರು ಸಂಘ ಪರಿವಾರದ ಬ್ರಾಹ್ಮಣಶಾಹಿ ಸಿದ್ಧಾಂತವನ್ನು ವಿರೋಧಿಸಿದವರ ಬಗ್ಗೆ ಕುತೂಹಲದ ಮಾಹಿತಿ ನೀಡುತ್ತಾರೆ. ಅದೆಂದರೆ ಆರಂಭದ ವರ್ಷಗಳಲ್ಲಿ ಬ್ರಾಹ್ಮಣರಿಂದ ಸ್ಥಾಪನೆಯಾದ ಆರೆಸ್ಸೆಸ್ ಸಂಘಟನೆಯನ್ನು ಮಹಾರಾಷ್ಟ್ರ ರಾಜ್ಯದಲ್ಲೇ ಬ್ರಾಹ್ಮಣೇತರರು ಕಟುವಾಗಿ ವಿರೋಧಿಸಿರುವುದು. ಅದೆಷ್ಟೋ ಊರುಗಳಲ್ಲಿ ಆಗ ಸಂಘದ ಸದಸ್ಯರ ಮೇಲೆ, ಶಾಖೆಗಳ ಮೇಲೆ ಬ್ರಾಹ್ಮಣೇತರರು ಹಲ್ಲೆ ನಡೆಸಿರುವ ಕುರಿತೂ ಮಾಹಿತಿ ಒದಗಿಸಿದ್ದಾರೆ. ಅಂದರೆ, ಸಂಘ ಪರಿವಾರದ ಅಂತಿಮ ಉದ್ದೇಶ ಬ್ರಾಹ್ಮಣ ಆಡಳಿತದ ಹಿಂದೂ ಭಾರತದ ನಿರ್ಮಾಣವೆನ್ನುವುದು ಮಹಾರಾಷ್ಟ್ರದ ಬ್ರಾಹ್ಮಣೇತರರಿಗೆ ಆಗಲೇ ಸ್ಪಷ್ಟವಾಗಿ ಅರ್ಥವಾಗಿತ್ತು.!! ಇದಕ್ಕೆ ಪೂರಕವಾದ ಮಾಹಿತಿ ಎಂದರೆ, ಗಾಂಧೀಜಿ ಹತ್ಯೆ ಸಂಚಿನ ಎಲ್ಲ ಪಾತ್ರಧಾರಿಗಳೂ ಬ್ರಾಹ್ಮಣರೇ ಆಗಿರುವುದು!!

ಆದರೆ ಸಂಘಪರಿವಾರದ ಹುನ್ನಾರಗಳ ಇನ್ನೊಂದು ವೈಶಿಷ್ಟ್ಯವೆಂದರೆ, ತನ್ನ ಉದ್ದೇಶ ಸಾಧನೆಗಾಗಿ ಹೆಣೆಯುವ ತಂತ್ರಗಳನ್ನು ಕಾಲಕಾಲಕ್ಕೆ ಬದಲಿಸುತ್ತಾ ಹೋಗುವುದು. ಅದಕ್ಕೆ ತಕ್ಕಂತೆ ಪಾತ್ರಧಾರಿಗಳನ್ನು ತಾತ್ಕಾಲಿಕವಾಗಿ ಹುಡುಕಿಕೊಳ್ಳುವುದು. ಜನರನ್ನು ನಂಬಿಸಲು ಹೊರಗೊಂದು ಚಂದದ ನರೇಟಿವ್ ಸೃಷ್ಟಿಸುವುದು.

ದುರ್ದೈವದ ಸಂಗತಿಯೆಂದರೆ, ಹಿಂದುತ್ವದ ಹೆಸರಿನಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಕಾರುವ ಬಿಜೆಪಿಯ ಮತ್ತು ಅದರ ಹೈಕಮಾಂಡ್ ಆಗಿರುವ ಸಂಘಪರಿವಾರದ ಈ ಹುನ್ನಾರಗಳನ್ನು ದೇಶದ ಉಳಿದ ಭಾಗಗಳಲ್ಲಿರುವ ಅವುಗಳ ದೊಡ್ಡ ಸಂಖ್ಯೆಯ ಕಾಲಾಳುಗಳಾದ ಶೂದ್ರ, ದಲಿತರನ್ನೊಳಗೊಂಡ ಬ್ರಾಹ್ಮಣೇತರ ಸಮುದಾಯಗಳು ಇನ್ನೂ ಅರ್ಥ ಮಾಡಿಕೊಳ್ಳದೇ ಇರುವುದು!!

ಗೋಡ್ಸೆಯ ಬದುಕಿನ ಎಲ್ಲ ಮಜಲುಗಳನ್ನೂ ಅತ್ಯಂತ ವಸ್ತುನಿಷ್ಠವಾಗಿ ಎಲ್ಲಾ ವಿವರಗಳೊಂದಿಗೆ ದಾಖಲಿಸಿರುವುದು ಈ ಪುಸ್ತಕದ ಹೆಗ್ಗಳಿಕೆ. ಹಾಗೆಯೇ ಪುಸ್ತಕದಲ್ಲಿ ಬರೆದಿರುವ ವಿವರಗಳಿಗೆ ನೀಡಿರುವ ಆಧಾರ ಗ್ರಂಥಗಳ ಪಟ್ಟಿಯೇ 54 ಪುಟಗಳಷ್ಟಿರುವುದು ಒಂದು ದಾಖಲೆಯೂ ಹೌದು ಮತ್ತು ಈ ಪುಸ್ತಕದ ಅಥೆಂಟಿಸಿಟಿಗೆ ಒಂದು ದೊಡ್ಡ ಪುರಾವೆಯೂ ಹೌದು.

ಹಾಗೆಂದು ಸ್ಪಷ್ಟವಾಗಿ ನಿರ್ಧರಿತವಾಗದ ಸಂಗತಿಗಳ ಕುರಿತು ಎಲ್ಲೂ ತೀರ್ಮಾನವನ್ನು ಬರೆಯಲು ಹೋಗದೆ ಕೇವಲ ಸಾಧ್ಯತೆಗಳನ್ನು ಮಾತ್ರ ಸೂಚಿಸುತ್ತ ಹೋಗುವುದು ಝಾ ಅವರ ವೃತ್ತಿಪರತೆಗೊಂದು ನಿದರ್ಶನ.

ಮುಖ್ಯವಾಗಿ, ಸಂಘ ಪರಿವಾರದ ಹುಸಿ ಹಿಂದುತ್ವದ ರಾಜಕೀಯದ ಹಿಂದಿರುವ ಕೋಮು ಹುನ್ನಾರಗಳನ್ನು ಅರ್ಥೈಸುವ ನಿಟ್ಟಿನಲ್ಲಿ ‘ಗಾಂಧೀಜಿಯ ಹಂತಕ’ ನಾವೆಲ್ಲರೂ ಓದಲೇ ಬೇಕಾದ ಮಹತ್ವದ ಪುಸ್ತಕ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಿರಿಧರ ಕಾರ್ಕಳ

contributor

Similar News