ಬತ್ತದ ಹೊಸಕೋಟೆಯ ಗಂಗಾಪುರ ಕಲ್ಯಾಣಿ

ಹೊಸಕೋಟೆ : ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆ ಆರಂಭವಾಯಿತೆಂದರೆ ಕೆರೆ-ಕಟ್ಟೆ ಸೇರಿದಂತೆ ಕೆಲ ನೀರಿನ ಮೂಲಗಳು ಬತ್ತಿಹೋಗುವುದು ಸಾಮಾನ್ಯ. ಆದರೆ ಹೊಸಕೋಟೆ ತಾಲೂಕಿನ ಗಂಗಾಪುರ ಕಲ್ಯಾಣಿಯಲ್ಲಿ ಬೇಸಿಗೆ ಬಿರು ಬಿಸಿಲಿದ್ದರೂ ನೀರು ಇರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಬೇಸಿಗೆ ಬಿಸಿಲು ಹೆಚ್ಚಾಗಿದ್ದು ಕೆರೆ-ಕುಂಟೆಗಳಲ್ಲಿ ನೀರು ಖಾಲಿಯಾಗಿದ್ದು, ಆದರೆ ವಿಶೇಷವಾಗಿ ನೀರು ಖಾಲಿಯಾಗದೆ ದನಕರುಗಳು, ಕಾಡು ಪ್ರಾಣಿಗಳಿಗೆ ನೀರಿನ ಆಧಾರ ಸ್ತಂಭವಾಗಿ ಕಂಗೊಳಿಸುತ್ತಿದೆ. ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಗಾಪುರ ಕಲ್ಯಾಣಿಯಲ್ಲಿ ನೀರು ಅರ್ಧಕ್ಕಿಂತ ಹೆಚ್ಚಾಗಿ ಉಳಿದಿದೆ. ಇದು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಇದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಕೆಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಪ್ರವಾಸಕ್ಕೆಂದು ಬಂದು ಈಜು ಹೊಡೆದು ಮೋಜು ಮಸ್ತಿ ಮಾಡುತ್ತಿರುತ್ತಾರೆ. ದನ ಕರುಗಳಿಗೆ ಒಳ್ಳೆಯ ನೀರು ದೊರೆಯುತೆಂದು ರೈತರು ಸಂತಸ ಪಡುತ್ತಿದ್ದಾರೆ.
ಇನ್ನೊಂದು ವಿಶೇಷವೆಂದರೆ ಈ ಕಲ್ಯಾಣಿಯಲ್ಲಿ ಇದುವರೆಗೂ ಎಷ್ಟೇ ಬೇಸಿಗೆ ಬಂದರೂ ನೀರು ಖಾಲಿಯಾಗಿರುವ ಸಂದರ್ಭವೆ ಕಂಡಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಮಾತಾಗಿದೆ. ಗಂಗಾಪುರ ಗ್ರಾಮದಲ್ಲಿರುವ ಕಲ್ಯಾಣಿಯು ರಾಜವಂಶರ ಅಳ್ವಿಕೆಯಿಂದ ಖ್ಯಾತಗೊಂಡಿದ್ದು ಸುತ್ತಲಿನ ಜನರಿಗೆ ನೀರಿನ ದಾಹ ತೀರಿಸಲು, ಜಲ ಸಂಗ್ರಹಣೆಗಾಗಿ ಕಲ್ಯಾಣಿಯನ್ನು ನಿರ್ಮಿಸಿದ್ದರು. ಕಾಲ ಬದಲಾದಂತೆ ತೆರೆದ ಬಾವಿಗಳ ನೀರಿಗಿಂತ ಕೊಳವೆ ಬಾವಿಗಳತ್ತ ಸರಕಾರಗಳು ಆಸಕ್ತಿ ತೋರಿದ ಕಾರಣ ಕಲ್ಯಾಣಿಗಳನ್ನು ಮರೆತರು.
ಕಲ್ಯಾಣಿಗಳನ್ನು ದನ ಕರುಗಳನ್ನು ತೊಳೆಯುವುದಕ್ಕೆ ಬಳಸಿಕೊಂಡರು, ಆದರೆ ಗಂಗಾಪುರ ಜನರು ಮಾತ್ರ ನಿರಂತರವಾಗಿ ಕಲ್ಯಾಣಿ ನೀರನ್ನೇ ಕುಡಿಯಲು ಬಳಸಿಕೊಂಡು ತಲಾ ತಲಾಂತರಗಳಿಂದ ಬೆಳೆದು ಬಂದ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಿದ್ದರು. ಒಂದು ಕಾಲದಲ್ಲಿ ಇಡೀ ಗಂಗಾಪುರ ಗ್ರಾಮದ ಜನರಿಗೆ ನೀರಿನ ದಾಹ ನೀಗಿಸುತ್ತಿದ್ದ ಕಲ್ಯಾಣಿಗಳಲ್ಲಿ ನೀರು ಜನರ ಕಣ್ಣುತುಂಬುತ್ತಿದೆ.
ಆಧುನಿಕ ಕಾಲದಲ್ಲಿ ಕಲ್ಯಾಣಿ ಪಕ್ಕದಲ್ಲಿಯೇ ಕೊರೆಸಿದ ಕೊಳವೆ ಬಾವಿಯಿಂದ ತನ್ನ ಒಡಲಲ್ಲಿ ಉಕ್ಕುತ್ತಿದ್ದ ನೀರಿನ ಬುತ್ತಿ ಬತ್ತಿ ತನ್ನ ಸೊಬಗನ್ನು ಕಳೆದುಕೊಂಡಿತ್ತು, ಗುಟುಕು ಜಲ ಮಾತ್ರ ಸದಾ ಇರುತ್ತಿತ್ತು. ಆದರೆ ಸುಮಾರು ವರ್ಷಗಳೇ ಕಳೆದರು ಕಲ್ಯಾಣಿಯಲ್ಲಿ ಮಾತ್ರ ನೀರು ಖಾಲಿಯಾಗದೇ ತನ್ನ ಸೊಬಗನ್ನು ಮತ್ತಷ್ಟು ಹೆಚ್ಚಿಸಿಕೊಂಡು ರೈತರಿಗೆ ವರದಾನವಾಗಿ ಪರಿಣಮಿಸಿದೆ. ಗ್ರಾಮಸ್ಥರ ದಾಹವನ್ನು ತೀರಿಸುವಂತ ಕಲ್ಯಾಣಿಯಲ್ಲಿ ಕಳೆದ8 ವರ್ಷಗಳ ಹಿಂದೆ ತಾಯಿ ಮಕ್ಕಳಿಬ್ಬರು ಹಾಗೂ ಒಬ್ಬ ವೃದ್ಧ ಬೆಂಗಳೂರಿನ ಇಬ್ಬರು ಯುವಕರು ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ನಂತರ ಈ ಕಲ್ಯಾಣಿಯಲ್ಲಿ ಜನರು ನೀರನ್ನು ಬಳಸುವುದು ಬಿಟ್ಟರು. ಎಂತಹ ಬರಗಾಲದಲ್ಲಿಯೂ ಇಲ್ಲಿ ನೀರಿನ ಸೆಲೆ ಬತ್ತುತಿರಲಿಲ್ಲ ಎಂಬುದು ಸ್ಥಳೀಯರ ಮಾತಾಗಿದೆ.
ಪ್ರವಾಸಿತಾಣವಾಗಿ ಮಾರ್ಪಾಡು :
ಬೇಸಿಗೆ ಕಾಲದಲ್ಲಿ ಜನತೆ ತಂಪು ಪಾನೀಯ ಸೇರಿದಂತೆ ವಿವಿಧ ರೀತಿಯ ತಿನಿಸುಗಳು ಹಾಗೂ ಪಾನೀಯಗಳಿಗೆ ಮಾರು ಹೋಗಿದ್ದಾರೆ. ಇದರ ಜೊತೆಗೆ ಯುವಕರು ಬಿಸಲಿನ ತಾಪ ಕಡಿಮೆ ಮಾಡಿಕೊಳ್ಳಲು ಈಜಾಡಲು ಕಲ್ಯಾಣಿಯ ಮೊರೆ ಹೋಗುತ್ತಿದ್ದಾರೆ. ಎಲ್ಲೆಡೆ ನೀರಿನ ಅಭಾವವಿರುವ ಕಾರಣ ಸುತ್ತಲಿನ ದೂರದ ಊರುಗಳಿಂದ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವುದರಿಂದ ಕಲ್ಯಾಣಿಯ ಸೊಬಗನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮವೆ ಬರುತ್ತದೆ. ಒಂದು ರೀತಿ ಪ್ರವಾಸಿ ತಾಣವಾಗಿ ಮಾರ್ಪಡಾಗಿದೆ.
ಹೊಸಕೋಟೆ ತಾಲೂಕಿನ ಅನೇಕ ಕೆರೆ-ಕುಂಟೆಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ. ಆದರೆ ಗಂಗಾಪುರ ಗ್ರಾಮದ ಕಲ್ಯಾಣಿಯಲ್ಲಿ ಮಾತ್ರ ಇಲ್ಲಿಯತನಕ ನೀರಿನ ಸೊಬಗು ಕಡಿಮೆಯಾಗಿಲ್ಲ ಮತ್ತು ನೀರು ಬತ್ತಿದ ಇತಿಹಾಸವಿಲ್ಲ. ಇದರಿಂದ ಸುತ್ತಲಿನ ರೈತರಿಗೆ ಹಾಗೂ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಿದೆ.
-ಮುನಿಯಪ್ಪ, ಗ್ರಾಮಸ್ಥ, ಗಂಗಾಪುರ