ಜಾಗತಿಕ ಮದುವೆಗಳು ಮತ್ತು ಭಾರತೀಯ ವೃದ್ಧಾಶ್ರಮಗಳು

ಇದನ್ನು ಆಧುನಿಕ ಜಗತ್ತಿನ ಕೊಡುಗೆ ಎನ್ನಬೇಕೆ? ಇಲ್ಲ ಜಗತ್ತಿನ ನಿಯಮ ಎನ್ನಬೇಕೆ? ಅಥವಾ ಎಲ್ಲವನ್ನು ಕಾಲವೇ ನಿರ್ಣಯಿಸುತ್ತದೆ ಎಂದು ತಿಳಿದುಕೊಳ್ಳಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಜಾಗತಿಕ ಮದುವೆಗಳಿಂದ ಭಾರತದ ನಗರಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ ಆಗುತ್ತಿರುವುದಂತೂ ಸತ್ಯ.

Update: 2024-09-12 06:39 GMT

ಇತ್ತೀಚೆಗೆ ಹೈದರಾಬಾದಿನ ನಿವೃತ್ತ ಸಹೋದ್ಯೋಗಿಯೊಬ್ಬರಿಗೆ ಫೋನ್ ಮಾಡಿ ‘‘ಹೇಗಿದ್ದೀಯ ಮೂರ್ತಿ?’’ ಎಂದು ಕೇಳಿ ಇತರ ಸಹೋದ್ಯೋಗಿಗಳ ಬಗ್ಗೆಯೂ ವಿಚಾರಿಸಿದೆ. ಮೂರ್ತಿ, ‘‘ಅಯ್ಯೋ ಬಿಡಿ ಸರ್ ಹೈದರಾಬಾದ್ ಈಗ ವೃದ್ಧಾಶ್ರಮ ಆಗಿ ಪರಿವರ್ತನೆ ಆಗ್ತಾ ಇದೆ’’ ಎಂದುಬಿಟ್ಟರು. ಇದರ ಬಗ್ಗೆ ಆನಂತರ ಹೇಳುತ್ತೇನೆ.

ಹದಿನೈದು ವರ್ಷಗಳ ಹಿಂದೆ ನನ್ನ ಸಹೋದ್ಯೋಗಿಯ ಒಬ್ಬಳೇ ಮಗಳ ಮದುವೆಗೆ ಬೆಂಗಳೂರಿನ ಒಂದು ರೆಸಾರ್ಟ್‌ಗೆ ಕುಟುಂಬ ಸಮೇತ ಹೋಗಿದ್ದೆ. ಆ ಹೆಣ್ಣು ಮಗಳು ಜರ್ಮನಿಗೆ ಓದಲು ಹೋಗಿ ಅಲ್ಲಿನ ಜರ್ಮನಿ ಹುಡುಗನನ್ನು ಮೆಚ್ಚಿಕೊಂಡಿದ್ದಳು. ಜರ್ಮನಿಯಿಂದ ಕುಟುಂಬಗಳ ಸಮೇತ ಸುಮಾರು 30 ಜನರು ಬಂದಿದ್ದರು. ಅವರೆಲ್ಲ ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸಿದ್ದು ಮಹಿಳೆಯರು ವಿಶೇಷವಾಗಿ ಸೀರೆ ಕುಪ್ಪಸ ಧರಿಸಿದ್ದರು. ಭೋಜನಶಾಲೆಯಲ್ಲಿ ಎಲ್ಲರೂ ಸಾಲಾಗಿ ಕುಳಿತುಕೊಂಡು ನಗುನಗುತ್ತಾ ದೋಸೆ, ಪೊಂಗಲ್ ಇಡ್ಲಿ ವಡೆ, ಚಟ್ನಿ ಸಾಂಬಾರ್ ಸವಿಯುತ್ತಿದ್ದರು, ಜೊತೆಗೆ ನೋಡಿದವರನ್ನೆಲ್ಲಾ ‘‘ಹಲೋ ಹಲೋ..’’ ಎಂದು ನಗುತ್ತಾ ವಿಶ್ ಮಾಡುತ್ತಿದ್ದರು. ಕೊನೆಗೆ ಮದುವೆ ಮಂಟಪದಲ್ಲಿ ವಧು-ವರನನ್ನು ನೋಡಿದ ನನಗೆ ಆಶ್ಚರ್ಯವಾಯಿತು, ವರ ನುಗ್ಗೆಕಾಯಿಯಂತೆ ಏಳು ಅಡಿಗಳಿಗಿಂತ ಎತ್ತರವಾಗಿದ್ದು ಹುಡುಗಿ ಐದಡಿ ಇದ್ದಳು.

ಭಾರತೀಯ ಯುವತಿ ಆಸ್ಟ್ರೇಲಿಯದ ಯುವಕ, ಭಾರತೀಯ ಯುವಕ ರಶ್ಯದ ಯುವತಿ, ಜರ್ಮನಿಯ ಯುವಕ ಭಾರತೀಯ ಯುವತಿ, ಭಾರತೀಯ ಯುವಕ ಮೆಕ್ಸಿಕನ್ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದು ಈಗ ಸರ್ವೇಸಾಮಾನ್ಯವಾಗಿಬಿಟ್ಟದೆ. ಆಧುನಿಕ ತಂತ್ರಜ್ಞಾನದಿಂದ ಜಗತ್ತು ಒಂದು ಜಾಗತಿಕ ಹಳ್ಳಿಯಾಗಿ ಮಾರ್ಪಟ್ಟಿದೆ. ಯುವಕ-ಯುವತಿಯರು ದೇಶ-ವಿದೇಶಗಳಿಗೆ ಹೋಗಿ ಶಿಕ್ಷಣ ಪಡೆದುಕೊಂಡು ಅಲ್ಲೇ ಉದ್ಯೋಗ ಮಾಡುವುದರಿಂದ ಇದೆಲ್ಲ ಸಾಧ್ಯವಾಗಿದೆ. ಆದರೆ ಹಿಂದುಮುಂದು ಗೊತ್ತಿಲ್ಲದ ಯುವ ಪೀಳಿಗೆಗಳು ಇದನ್ನು ಹೇಗೆ ಅರ್ಥಮಾಡಿಕೊಳ್ಳುತ್ತವೆ ಅಥವಾ ಇಬ್ಬರೂ ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವ ಆಲೋಚನೆ ಬರದೇ ಇರುವುದಿಲ್ಲ! ಆಧುನಿಕ ತಂತ್ರಜ್ಞಾನ ಇಡೀ ಜಗತ್ತನ್ನು ಆವರಿಸಿಕೊಂಡು ಮನುಷ್ಯನೆಂಬ ಪ್ರಾಣಿ ಹೆಚ್ಚು ವಿಕಸನಗೊಂಡಿರುವುದು ಇದಕ್ಕೆ ಕಾರಣವಿರಬೇಕು! ಇಲ್ಲ ಜಾತಿ-ಮತ -ಧರ್ಮಗಳು ಪ್ರೀತಿಯ ಮುಂದೆ ಏನೇನೂ ಅಲ್ಲ ಎಂಬ ಸಂದೇಶ ಇರಬೇಕು! ಆದು ಏನೇ ಆಗಲಿ, ಪ್ರಸಕ್ತ ಈ ಪ್ರಕ್ರಿಯೆಯಲ್ಲಿ ನಷ್ಟ ಅನುಭವಿಸುತ್ತಿರುವುದು ಮಾತ್ರ ಭಾರತದ ವೃದ್ಧರು. ಇತ್ತೀಚೆಗೆ ಶಾಲೆಯ ಮಕ್ಕಳನ್ನು ವೃದ್ಧಾಶ್ರಮ ನೋಡುವುದಕ್ಕೆ ಕರೆದುಕೊಂಡು ಹೋದಾಗ ಅಲ್ಲಿದ್ದ ತನ್ನ ಅಜ್ಜಿಯನ್ನು ನೋಡಿದ ಮೊಮ್ಮಗಳು ಗಳಗಳನೆ ಅತ್ತುಕೊಂಡಳು ಎಂಬ ಸುದ್ದಿ ನೋಡಿದೆ. ಇವೆಲ್ಲವನ್ನು ಗಮನಿಸುತ್ತಿದ್ದರೆ ಹಿಂದಿನ ಕೂಡುಕುಟುಂಬಗಳ ಪದ್ಧತಿ ನೆನಪಿಗೆ ಬರುತ್ತದೆ.

ಪಶ್ಚಿಮ ದೇಶಗಳು ಕುಟುಂಬ ಸಂಬಂಧವನ್ನು ಯಾವಾಗಲೋ ಕಳಚಿಕೊಂಡು ದೂರವಾಗಿವೆ. ಜಗತ್ತಿನ ನೂರಾರು ದೇಶಗಳ ವೈವಿಧ್ಯಮಯ ಸಂಪ್ರದಾಯ/ಪದ್ಧತಿಗಳನ್ನು ಯುವ ಜನಾಂಗಗಳು ಹೇಗೆ ಅರ್ಥ ಮಾಡಿಕೊಳ್ಳುತ್ತಿವೆ ಎನ್ನುವುದು ಗೊತ್ತಾಗುತ್ತಿಲ್ಲ ಅಥವಾ ಇದರಲ್ಲಿ ಅರ್ಥ ಮಾಡಿಕೊಳ್ಳುವುದು ಏನಿದೆ? ಎಂದುಕೊಳ್ಳಬೇಕೋ ಅದೂ ಗೊತ್ತಿಲ್ಲ. ಇದೆಲ್ಲದರ ಮೇಲೆ ಜಗತ್ತಿನ ಕೆಲವು ಭಾಗಗಳ (ದೇಶಗಳ) ಜನಾಂಗಗಳು ಹೇಗೆ ವಿಶಾಲವಾಗಿ ಯೋಚಿಸುತ್ತಿದ್ದರೆ, ಕೆಲವು ಜನಾಂಗಗಳು ಇನ್ನೂ ಸಂಕುಚಿತವಾಗಿ ಯೋಚಿಸುತ್ತಿವೆ. ಇತಿಹಾಸಕಾರರೊಬ್ಬರು ಮುಂದಿನ ಮುನ್ನೂರು ವರ್ಷಗಳಲ್ಲಿ ಭಾರತದಲ್ಲಿ ಜಾತಿಗಳು ಇರುವುದಿಲ್ಲ ಎಂದಿದ್ದರು. ಆದರೆ ಅದು ಸಾವಿರ ವರ್ಷಗಳಾದರೂ ತೊಲಗುವುದಿಲ್ಲ ಎನಿಸುತ್ತಿದೆ.

ಈಗ ಮೊದಲಿನ ವಿಷಯಕ್ಕೆ ಬರುತ್ತೇನೆ. ನಾನು ನಾಗಾಲ್ಯಾಂಡ್‌ನಲ್ಲಿ ಉದ್ಯೋಗದಲ್ಲಿದ್ದಾಗ (1990ರ ದಶಕ) ನನಗೆ ನಿರ್ದೇಶಕರಾಗಿದ್ದ ಹೈದರಾಬಾದ್‌ನ ಒಬ್ಬರು ‘‘ನನ್ನ ಮಗಳಿಗೆ ಅಮೆರಿಕದಲ್ಲಿ ಎಂ.ಎಸ್. ಓದಲು ಸೀಟು ಸಿಕ್ಕಿದೆ, ಅವಳು ಓದು ಮುಗಿಸಿ ಅಲ್ಲೇ ನೆಲೆಸುತ್ತಾಳೆ, ಆದರೆ ನನ್ನ ಮಗ ಸ್ವಲ್ಪ ಹೆಡ್ಡ ಅವನಿಗೆ ಎಂ.ಎಸ್. ಸೀಟು ಸಿಕ್ಕಿ ಅವನನ್ನೂ ಅಮೆರಿಕಕ್ಕೆ ಕಳುಹಿಸಿಬಿಟ್ಟರೆ ಸಾಕು’’ ಎಂದು ಹಲುಬುತ್ತಿದ್ದರು. ಕೊನೆಗೆ ಇಬ್ಬರು ಮಕ್ಕಳು ಅಲ್ಲೇ ಓದಿ ಅಲ್ಲೇ ಮದುವೆ ಮಾಡಿಕೊಂಡು ಅಮೆರಿಕನ್ನರಾಗಿಹೋದರು. ಈಗ ಅವರು ಭಾರತದ ಕಡೆಗೆ ಕಾಲು ಚಾಚಿಯೂ ಮಲಗುತ್ತಿಲ್ಲ. ಹೈದರಾಬಾದ್‌ನ ನಿರ್ದೇಶಕರು ಈಗ ತನ್ನ ಪತ್ನಿಯನ್ನು ಕಳೆದುಕೊಂಡು ವೃದ್ಧಾಪ್ಯ ಸಮಸ್ಯೆಗಳಿಂದ ಹಾಸಿಗೆ ಹಿಡಿದಿದ್ದಾರೆ. ದೊಡ್ಡ ಮನೆ, ಒಂಟಿ ಬದುಕು. ಈಗ ಅವರ ಮಕ್ಕಳ ಅಮೆರಿಕ ಕನಸು ಹೇಗಿದೆ ಎಂದು ಕೇಳಿದರೆ ಏನು ಹೇಳಬಹುದು! ಇದು ಒಂದು ಉದಾಹರಣೆ ಮಾತ್ರ. ವಿಶೇಷವಾಗಿ ಆಂಧ್ರದವರ ಬಳಿನೂರಾರು ಕೋಟಿ ರೂಪಾಯಿಗಳ ಸ್ವತ್ತು ಇರಲಿ, ಆದರೆ ಅವರ ಮಕ್ಕಳು ಅಮೆರಿಕದಲ್ಲಿ ಇದ್ದರೆ ಮಾತ್ರ ಅವರಿಗೆ ಗೌರವ! ಈಗ ಅದು ಭಾರತದಾದ್ಯಂತ ಹರಡಿಕೊಂಡಿದೆ. ಬೆಂಗಳೂರಿನ ನನ್ನ ಹಲವಾರು ಸಹೋದ್ಯೋಗಿಗಳ ಮಕ್ಕಳು ಅಮೆರಿಕ ಇನ್ನಿತರ ದೇಶಗಳಿಗೆ ಹೋದವರು ಅಲ್ಲಿಯೇ ನೆಲೆಸಿದ್ದಾರೆ. ನಾಲ್ಕಾರು ವರ್ಷಗಳಿಗೆ ಒಮ್ಮೆ ಅಪರೂಪವಾಗಿ ಬಂದು ಹೋಗುತ್ತಾರೆ. ಬೆಂಗಳೂರಿನಲ್ಲಿರುವ ಕೆಲವು ಸಹೋದ್ಯೋಗಿಗಳು ಆಗಾಗ ನನಗೆ ಫೋನ್ ಮಾಡಿ ‘ವೆಂಕಟಸ್ವಾಮಿ ನೀವಾದರೂ ಆಗಾಗ ಮನೆಗೆ ಬಂದು ಹೋಗಿ’ ಎಂದು ಹೇಳುತ್ತಾರೆ. ನನ್ನ ಒಬ್ಬನೇ ಮಗನೂ ಯುರೋಪ್ ಸೇರಿಕೊಂಡಿದ್ದಾನೆ. ಭಾರತ ಬಿಟ್ಟು ಹೋದವರು ಹಿಂದಕ್ಕೆ ಯಾಕೆ ಬರುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಅಗಾಧ ಜನಸಂಖ್ಯೆ, ನಿರುದ್ಯೋಗ, ವಿಪರೀತ ಭ್ರಷ್ಟಾಚಾರ, ಅಶಿಸ್ತು, ಅಪಘಾತಗಳು ಮತ್ತು ಪರಿಸರ ಮಾಲಿನ್ಯದಿಂದ ನಮ್ಮ ದೇಶ ಮುಳುಗಿಹೋಗಿದೆ.

1960-1980ರ ದಶಕಗಳ ತಲೆಮಾರಿಗೆ ಸೇರಿದ ವಿಶೇಷವಾಗಿ ಹಣವಂತರು, ಸರಕಾರಿ ಅಧಿಕಾರಿಗಳು ಮತ್ತು ಮೇಲ್ ಮಧ್ಯಮ ವರ್ಗದವರು ಒಂದೆರಡು ಮಕ್ಕಳನ್ನು ಮಾತ್ರ ಪಡೆದುಕೊಂಡು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ಶ್ರಮವನ್ನು ಒತ್ತೆ ಇಟ್ಟಿದ್ದರು (ಈಗಲೂ ಅದು ಮುಂದುವರಿದಿದೆ). ಈಗ ಅವರೆಲ್ಲ ಪರಿತಾಪ ಪಡುತ್ತಿದ್ದಾರೆ. ಈಗ ಇವರಿಗೆಲ್ಲ ಉಳಿದಿರುವ ಒಂದೇ ಒಂದು ಸಮಾಧಾನ ಎಂದರೆ ‘ಮಕ್ಕಳು ಎಲ್ಲಾದರು ಇರಲಿ ಬಿಡಪ್ಪ ಚೆನ್ನಾಗಿದ್ದರೆ ಸಾಕು’ ಎನ್ನುವುದು. ಇನ್ನು ಯುವ ಪೀಳಿಗೆಗಳ ಮದುವೆಗಳ ಬಗ್ಗೆ ಹೇಳುವುದಾರೆ ಅದು ಎರಡು ರೀತಿ. ಒಂದು, ಇಲ್ಲಿನ ಹೆಣ್ಣು ಗಂಡು ವಿದೇಶಗಳಿಗೆ ಹೋಗಿ ಕೆಲಸ ಗಳಿಸಿಕೊಂಡ ಮೇಲೆ ಇಲ್ಲಿನವರನ್ನೇ ನೋಡಿ ಮದುವೆ ಆಗಿರುವುದು. ಎರಡು, ವಿದೇಶದಲ್ಲಿಯೇ ಹೆಣ್ಣು ಗಂಡು ಪ್ರೀತಿ ಮಾಡಿ ಅಲ್ಲೆ ಮದುವೆ ಆಗಿರುವುದು. ಎರಡೂ ವಿಚಾರಗಳಲ್ಲಿ ಪೋಷಕರು ಮತ್ತು ಮಕ್ಕಳು ದೂರವಾಗುತ್ತಾರೆ. ಕೊನೆಗೆ ಇದನ್ನು ಆಧುನಿಕ ಜಗತ್ತಿನ ಕೊಡುಗೆ ಎನ್ನಬೇಕೆ? ಇಲ್ಲ ಜಗತ್ತಿನ ನಿಯಮ ಎನ್ನಬೇಕೆ? ಅಥವಾ ಎಲ್ಲವನ್ನು ಕಾಲವೇ ನಿರ್ಣಯಿಸುತ್ತದೆ ಎಂದು ತಿಳಿದುಕೊಳ್ಳಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಜಾಗತಿಕ ಮದುವೆಗಳಿಂದ ಭಾರತದ ನಗರಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ ಆಗುತ್ತಿರುವುದಂತೂ ಸತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಎಂ. ವೆಂಕಟಸ್ವಾಮಿ

contributor

Similar News