ಬಂಗಾರದ ಬೆಲೆ ಗಗನಮುಖಿಯಾದದ್ದು ಯಾರಿಂದ?

Update: 2025-04-24 10:49 IST
ಬಂಗಾರದ ಬೆಲೆ ಗಗನಮುಖಿಯಾದದ್ದು ಯಾರಿಂದ?
  • whatsapp icon

ಈ ಹಿಂದೆ ಭಾರತದ ಮಹಿಳೆಯರು ಸಣ್ಣ ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದರು. ಆದರೆ ಕಳೆದ 2 ವರ್ಷಗಳಲ್ಲಿ ಮಹಿಳೆಯರ ಚಿನ್ನ ಖರೀದಿಯಿಂದಲೇ ಇಂತಹ ಏರಿಕೆ ಕಾಣುತ್ತಿದೆಯೇ? ಈಗ ಅವರ ಬಳಿ ಹೆಚ್ಚು ಹಣ ಬಂದರೂ, ಚಿನ್ನದ ಬೆಲೆ ಲಕ್ಷ ರೂ. ದಾಟಿರುವಾಗ ಅವರು ಖರೀದಿಸಲು ಸಾಧ್ಯವಿದೆಯೆ?

10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ.

ಆದರೆ ಮೋದಿ ಚಿನ್ನದ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ, ಇದರಿಂದ ಜನರಿಗೆ ಲಾಭವಾಗುತ್ತದೆ ಎಂಬ ಸುಳ್ಳುಗಳ ಗುಂಡಿಗೆ ಅಮಾಯಕರನ್ನು ಬೀಳಿಸುವ ಯತ್ನವೇ ನಡೆಯುತ್ತಿದೆ.

ಮಾರ್ನಿಂಗ್ ಸ್ಟಾರ್ ಎಂಬ ಅಮೆರಿಕನ್ ಹಣಕಾಸು ಸಂಸ್ಥೆ ಚಿನ್ನದ ಬೆಲೆ ಕುಸಿಯುತ್ತದೆ ಮತ್ತು ಅದು 10 ಗ್ರಾಂಗೆ 56,000 ರೂ ಆಗಲಿದೆ ಎಂದು ಹೇಳುತ್ತದೆ.

ಇನ್ನೊಂದೆಡೆ, ಗೋಲ್ಡ್ ಮ್ಯಾನ್ ಸ್ಯಾಚ್ಸ್ ಅಂದಾಜಿನ ಪ್ರಕಾರ, 2025ರ ಕಡೇ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ರೂ. 1,26,000ಕ್ಕಿಂತ ಹೆಚ್ಚಲಿದೆಯಂತೆ.

ಯಾರ ಹೇಳಿಕೆ ನಿಜ ಮತ್ತು ಯಾರದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ, ಆದರೆ ಯಾರು ಚಿನ್ನವನ್ನು ಖರೀದಿಸುತ್ತಿದ್ದಾರೆ? ಅದು ಏಕೆ ದುಬಾರಿಯಾಗುತ್ತಿದೆ?

10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿಗೆ ತಲುಪುವುದು ಭಾರತ ಮತ್ತು ಪ್ರಪಂಚದ ಆರ್ಥಿಕತೆಯ ಬಗ್ಗೆ ಏನು ಹೇಳುತ್ತದೆ? ದೇಶದ ಆರ್ಥಿಕತೆ ತೀವ್ರ ಬಿಕ್ಕಟ್ಟಿನ ಸುಳಿಯಲ್ಲಿದೆಯೇ?

2024ರ ಜುಲೈ 1ರಂದು 10 ಗ್ರಾಂ ಚಿನ್ನದ ಬೆಲೆ ರೂ. 67,850 ಆಗಿತ್ತು, ಜುಲೈ 17ರಂದು ಅದು ರೂ. 73,880ಕ್ಕೆ ಏರಿತು. ಜುಲೈ 31ರಂದು ರೂ. 68,820ಕ್ಕೆ ಇಳಿಯಿತು. ಅಂದಿನಿಂದ ಚಿನ್ನ ಏರಿಳಿತವಾಗುತ್ತಲೇ ಇದೆ. 11 ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 96,000 ತಲುಪಿದೆ.

ಈ ವರ್ಷ ಎಪ್ರಿಲ್ ತಿಂಗಳ ಆರಂಭದಲ್ಲಿ 10 ಗ್ರಾಂ ಚಿನ್ನದ ಬೆಲೆ 91,000 ರೂ. ತಲುಪಿತ್ತು. ಈಗ ಚಿನ್ನದ ಮೌಲ್ಯ 1 ಲಕ್ಷ ರೂ.ಗಿಂತ ಹೆಚ್ಚಾಗಿದೆ.

ಕಳೆದ 1 ವರ್ಷ ಅಥವಾ ಅದಕ್ಕೂ ಮೊದಲು ಚಿನ್ನದಲ್ಲಿ ಹೂಡಿಕೆ ಮಾಡುತ್ತಿರುವ ಬುದ್ಧಿವಂತರು ಮಧ್ಯಮ ವರ್ಗದವರೂ ಅಲ್ಲ, ಸಾಮಾನ್ಯ ಗೃಹಿಣಿಯರೂ ಅಲ್ಲ.

ಭಾರತದ ಆರ್ಥಿಕತೆ ಅಸ್ಥಿರವಾಗಿದೆ ಎಂದು ಯಾರಿಗಾದರೂ ಗೊತ್ತಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೂ ಅಪಾಯ ತಪ್ಪಿದ್ದಲ್ಲ.

ಷೇರು ಹೂಡಿಕೆದಾರರು ಷೇರು ಮಾರುಕಟ್ಟೆ ಮತ್ತು ಕಂಪೆನಿಗಳಿಂದ ತಮ್ಮ ಹಣವನ್ನು ಹಿಂಪಡೆದು ಚಿನ್ನದ ಮೇಲೆ ಹಾಕುತ್ತಿದ್ದಾರೆ. ಅನೇಕ ಬ್ಯಾಂಕುಗಳು ಕೂಡ ಚಿನ್ನದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿವೆ.

ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳನ್ನು ಶೇ. 3 ಅಥವಾ ಅದಕ್ಕಿಂತ ಕಡಿಮೆ ಮಾಡಿವೆ. ಸ್ಥಿರ ಠೇವಣಿ ಬಡ್ಡಿ ದರಗಳು ಕಡಿಮೆಯಾಗಲು ಪ್ರಾರಂಭಿಸಿವೆ. ಆದ್ದರಿಂದ ಬ್ಯಾಂಕಿನಲ್ಲಿ ಹಣ ಇಟ್ಟರೆ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಹಣವುಳ್ಳವರಿಗೆ ಚಿನ್ನದ ಮೇಲಿನ ಹೂಡಿಕೆ ಲಾಭವೆನಿಸಿರಬಹುದು.

ಆದರೆ ಕೋಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೋಟಕ್ ಭಾರತೀಯ ಮಹಿಳೆಯರ ಚಿನ್ನ ಖರೀದಿಸುವ ಸಾಮರ್ಥ್ಯದ ಬಗ್ಗೆ ಹೊಗಳುತ್ತಿದ್ದಾರೆ.

ಈ ಹಿಂದೆ ಭಾರತದ ಮಹಿಳೆಯರು ಸಣ್ಣ ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದರು. ಆದರೆ ಕಳೆದ 2 ವರ್ಷಗಳಲ್ಲಿ ಮಹಿಳೆಯರ ಚಿನ್ನ ಖರೀದಿಯಿಂದಲೇ ಇಂತಹ ಏರಿಕೆ ಕಾಣುತ್ತಿದೆಯೇ? ಈಗ ಅವರ ಬಳಿ ಹೆಚ್ಚು ಹಣ ಬಂದರೂ, ಚಿನ್ನದ ಬೆಲೆ ಲಕ್ಷ ರೂ. ದಾಟಿರುವಾಗ ಅವರು ಖರೀದಿಸಲು ಸಾಧ್ಯವಿದೆಯೆ? ಅಸಂಬದ್ಧತೆಗೆ ಒಂದು ಮಿತಿ ಇದೆ, ಇದು ನಿಜವಾಗಿಯೂ ಮಹಿಳೆಯರನ್ನು ಹೊಗಳುವ ಸಮಯವೇ ಅಥವಾ ಅವರನ್ನು ಮುಂದಿಟ್ಟು ಸತ್ಯವನ್ನು ಮರೆಮಾಡುವ ಪ್ರಯತ್ನವೇ?

ಇದರ ಹಿಂದೆ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರು ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ ಎಂಬ ಸತ್ಯವನ್ನು ಮರೆಮಾಚಲಾಗು ತ್ತಿದೆಯೆ?

ಒಂದು ವರ್ಷದಲ್ಲಿ ಚಿನ್ನದ ಸಾಲ ತೆಗೆದುಕೊಳ್ಳುವುದರಲ್ಲಿ ಶೇ. 76 ಹೆಚ್ಚಳವಾಗಿದೆ. ಇದು ಸ್ವತಃ ರಿಸರ್ವ್ ಬ್ಯಾಂಕಿನ ಡೇಟಾ.

ಕೆಲ ಅಂದಾಜಿನ ಪ್ರಕಾರ, ಭಾರತೀಯ ಕುಟುಂಬಗಳ ಬಳಿ 24,000 ಟನ್ ಚಿನ್ನವಿದೆ. ಪ್ರಪಂಚದಾದ್ಯಂತದ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿರುವಷ್ಟೇ ಚಿನ್ನ ಭಾರತೀಯರ ಮನೆಗಳಲ್ಲಿದೆ.

ಹಾಗಾದರೆ ಜನರು ಈ ಚಿನ್ನದ ಮೇಲೆ ಸಾಲ ಪಡೆದು ತಮ್ಮ ಮನೆಗಳನ್ನು ನಡೆಸುತ್ತಿದ್ದಾರೆಯೇ? ಜನರ ಮನೆಗಳಲ್ಲಿರುವ ಚಿನ್ನ ಆರ್ಥಿಕತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ?

ಆರ್‌ಬಿಐ ಚಿನ್ನದ ಸಾಲದ ನಿಯಮಗಳನ್ನು ಬದಲಾಯಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳಿವೆ.ಚಿನ್ನದ ಸಾಲಗಳ ಕುರಿತು ಹೊರಡಿಸಲಾದ ಕರಡು ಮಾರ್ಗಸೂಚಿ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ಚಿನ್ನದ ಸಾಲಗಳನ್ನು ನೀಡಲು ತಮ್ಮ ಎಲ್ಲಾ ಶಾಖೆಗಳಲ್ಲಿ ಏಕರೂಪದ ಕಾರ್ಯವಿಧಾನ ಅನುಸರಿಸಬೇಕು ಎಂದು ಹೇಳುತ್ತದೆ.

ಯಾವುದೇ ಅಕ್ರಮಗಳು ನಡೆಯದಂತೆ ಸಂಗ್ರಹಣೆ ಮತ್ತು ಲೆಕ್ಕಪತ್ರ ಪ್ರಕ್ರಿಯೆ ಆಗಬೇಕಾಗುತ್ತದೆ. ಚಿನ್ನದ ಗುಣಮಟ್ಟ ನಿರ್ಣಯಿಸಲು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇದು ಖಂಡಿತ ಗ್ರಾಹಕರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.

ಚಿನ್ನದ ಸಾಲ ಅವರಿಗೆ ಹೆಚ್ಚು ದುಬಾರಿಯಾಗುತ್ತದೆ.

2024ರ ಸೆಪ್ಟಂಬರ್ ತಿಂಗಳಲ್ಲಿ ಚಿನ್ನದ ಆಭರಣಗಳ ಮೇಲಿನ ಸಾಲದ ಮೊತ್ತ ಶೇ. 50ಕ್ಕಿಂತ ಹೆಚ್ಚಾಗಿತ್ತು ಎಂದು ವರದಿಗಳಿವೆ. ಅದು 3 ವರ್ಷಗಳಲ್ಲಿ ಆದ ಅತ್ಯಧಿಕ ಹೆಚ್ಚಳ.

ಆದರೆ ಆಭರಣಗಳನ್ನು ಅಡವಿಟ್ಟು ಸಾಲ ಪಡೆಯುವುದರಿಂದ ಜನರು ಸಾಲಕ್ಕೆ ಸಿಲುಕುತ್ತಿದ್ದಾರೆ.

ಎಲ್ಲಾ ಚಿನ್ನದ ಸಾಲಗಳನ್ನು ಸಂಘಟಿತ ವಲಯದಿಂದಲೇ ತೆಗೆದುಕೊಳ್ಳಲಾಗುತ್ತಿಲ್ಲ. ಲೇವಾದೇವಿಗಾರರ ಬಳಿ ಸಾಲ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿರಬಹುದು.

ಟ್ರಂಪ್ ಸುಂಕದ ರಾಜಕೀಯ ಆರಂಭಿಸುವ ಮೂಲಕ ಜಗತ್ತನ್ನು ಆರ್ಥಿಕ ಹಿಂಜರಿತದತ್ತ ತಳ್ಳಿದರು ಎಂದು ಪದೇ ಪದೇ ಹೇಳಲಾಗುತ್ತಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅಸುರಕ್ಷಿತವಾಗಿದೆ,

ಆದ್ದರಿಂದ ಕರೆನ್ಸಿ ಕುಸಿದಾಗ ಜನರು ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಚಿನ್ನದ ಬೆಲೆ ಏರಿಕೆ ಆರ್ಥಿಕತೆಯ ನಾಶದ ಸೂಚನೆಯಾಗಿದ್ದರೆ, ಅದು ಸಂತೋಷದ ವಿಷಯವಲ್ಲ.

ಅಮೆರಿಕದಲ್ಲಿ ಭಾರತದಂತೆ ಮಹಿಳೆಯರು ಚಿನ್ನವನ್ನು ಖರೀದಿಸುವುದಿಲ್ಲವಾದರೂ, ಅಲ್ಲಿಯೂ ಚಿನ್ನದ ಬೆಲೆ ಏರುತ್ತಿದೆ.

ಟ್ರಂಪ್ ವಿಧಿಸಿರುವ ಸುಂಕಗಳಿಂದಾಗಿ ಭವಿಷ್ಯದಲ್ಲಿ ಅಭಿವೃದ್ಧಿಯ ವೇಗ ಕಡಿಮೆಯಾಗಬಹುದು ಮತ್ತು ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚಾಗಬಹುದು ಎಂದು ಅಮೆರಿಕದ ಫೆಡರಲ್ ಬ್ಯಾಂಕ್ ಅಧ್ಯಕ್ಷ ಜೆರೋಮ್ ಪೊವೆಲ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ಟ್ರಂಪ್, ಫೆಡರಲ್ ಬ್ಯಾಂಕ್ ತಕ್ಷಣವೇ ಬಡ್ಡಿದರಗಳನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.

ಟ್ರಂಪ್ ಹೇಳಿಕೆಗಳ ನಂತರ, ಮಾರುಕಟ್ಟೆ ಮತ್ತು ಸರಕಾರಿ ಬಾಂಡ್‌ಗಳೆರಡರಲ್ಲೂ ತ್ವರಿತ ಕುಸಿತ ಕಂಡುಬಂದಿದ್ದು, ಇದರಿಂದಾಗಿ ಉಂಟಾದ ಅಸ್ಥಿರತೆ ಈ ವಾರ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಯಿತು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಈ ವರ್ಷವೇ ಚಿನ್ನದ ಬೆಲೆ ಶೇ. 30ರಷ್ಟು ಹೆಚ್ಚಾಗಿದೆ.

ಹೆಚ್ಚು ಚಿನ್ನವನ್ನು ಹೊಂದಿರುವ ದೇಶ ತನ್ನ ಕರೆನ್ಸಿಯ ಹೆಚ್ಚಿನ ಮೌಲ್ಯ ಹೊಂದಿರುತ್ತದೆ.

ಅಮೆರಿಕದ ಬಳಿ 8,134 ಟನ್ ಚಿನ್ನದ ಸಂಗ್ರಹವಿದೆ. ಜರ್ಮನಿ ಬಳಿ 3,300 ಟನ್‌ಗಳಷ್ಟು ಇದ್ದು, ಅದು ಎರಡನೇ ಸ್ಥಾನದಲ್ಲಿದೆ. ಚೀನಾ ಮೂರನೇ ಸ್ಥಾನದಲ್ಲಿದೆ, ಇದು ಅಮೆರಿಕಕ್ಕಿಂತ ಹಿಂದಿದ್ದು 2,280 ಟನ್‌ಗಳಷ್ಟು ಚಿನ್ನವನ್ನು ಹೊಂದಿದೆ.

ಭಾರತ ಈ ಮೂರೂ ದೇಶಗಳಿಗಿಂತ ಬಹಳ ಹಿಂದಿದೆ.

ಡಿಸೆಂಬರ್ 2024ರವರೆಗೆ ಭಾರತದಲ್ಲಿ 876 ಟನ್ ಚಿನ್ನದ ಸಂಗ್ರಹವಿದೆ.

ಭಾರತೀಯರ ಬಳಿ ಎಷ್ಟೇ ಪ್ರಮಾಣದ ಚಿನ್ನ ಇದ್ದರೂ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರುವ ಚಿನ್ನದ ಸಂಗ್ರಹ ಅನೇಕ ದೇಶಗಳಿಗಿಂತ ಕಡಿಮೆಯಾಗಿದೆ. ಮತ್ತದು ಭಾರತೀಯ ಕುಟುಂಬಗಳು ಹೊಂದಿರುವ ಚಿನ್ನದ ಪ್ರಮಾಣಕ್ಕಿಂತ ತುಂಬಾ ಕಡಿಮೆಯಾಗಿದೆ.

ಅಮೆರಿಕದಲ್ಲಿ ಸಾಮಾನ್ಯ ಜನರು ಚಿನ್ನವನ್ನು ಖರೀದಿಸದಿದ್ದರೂ ಅದರ ಕೇಂದ್ರ ಬ್ಯಾಂಕ್ ಹೊಂದಿರುವ ಚಿನ್ನದ ಪ್ರಮಾಣದೊಂದಿಗೆ, ಡಾಲರ್ ಇಂದು ಜಗತ್ತನ್ನು ಆಳುತ್ತದೆ.

ಎಚ್‌ಎಸ್‌ಬಿಸಿ ಗ್ಲೋಬಲ್ ನಡೆಸಿದ ಅಧ್ಯಯನದ ಪ್ರಕಾರ, ಭಾರತೀಯ ಕುಟುಂಬಗಳು 25,000 ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಹೊಂದಿವೆ. ಇದು ವಿಶ್ವದ 10 ದೊಡ್ಡ ಕೇಂದ್ರ ಬ್ಯಾಂಕುಗಳಿಗಿಂತ ಹೆಚ್ಚಾಗಿದೆ.

ಚೀನಾದ ಕುಟುಂಬಗಳು 20,000 ಟನ್‌ಗಳಷ್ಟು ಚಿನ್ನದ ಸಂಗ್ರಹವನ್ನು ಹೊಂದಿವೆ.

ಮಾರುಕಟ್ಟೆ ಆರ್ಥಿಕತೆ ಕೆಟ್ಟ ಸ್ಥಿತಿಯಲ್ಲಿರುವುದರಿಂದ ಭಾರತ, ಟರ್ಕಿ, ಪೋಲೆಂಡ್ ಮತ್ತು ಚೀನಾದ ಕೇಂದ್ರ ಬ್ಯಾಂಕುಗಳು ಬಹಳಷ್ಟು ಚಿನ್ನವನ್ನು ಖರೀದಿಸುತ್ತಿವೆ ಎಂಬ ವರದಿಗಳಿವೆ.

ಹಣದುಬ್ಬರ ನಿಯಂತ್ರಣಕ್ಕೆ ಬರುವ ಯಾವುದೇ ಭರವಸೆ ಇಲ್ಲ. 2024ರಲ್ಲಿ ಆರ್‌ಬಿಐ ಚಿನ್ನ ಖರೀದಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿದೆ.

ಭಾರತಕ್ಕಿಂತ ಹೆಚ್ಚು ಚಿನ್ನ ಖರೀದಿಸಿರುವ ದೇಶಗಳೆಂದರೆ, ಪೋಲೆಂಡ್ ಮತ್ತು ಟರ್ಕಿ.

ಆರ್‌ಬಿಐ ಒಂದು ವರ್ಷದಲ್ಲಿ 72.6 ಟನ್ ಚಿನ್ನ ಖರೀದಿಸಿದೆ, ಇದು 2023ಕ್ಕಿಂತ ನಾಲ್ಕು ಪಟ್ಟು ಹೆಚ್ಚು.

2024ರಲ್ಲಿ ಆರ್‌ಬಿಐ ತನ್ನ ಚಿನ್ನದ ಮೀಸಲು ಶೇ. 9 ಹೆಚ್ಚಿಸಿದೆ ಎಂದು ವಿಶ್ವ ಚಿನ್ನದ ಮಂಡಳಿ ವರದಿ ಮಾಡಿದೆ.

ಇಂಡಿಯಾ ಎಂಎಫ್‌ಐ ಪ್ರಕಾರ, ಚಿನ್ನದ ಇಟಿಎಫ್‌ಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಹೆಚ್ಚಾಗಿದೆ.

ಭಾರತದ ಜನರು ಚಿನ್ನವನ್ನು ಮಾರಾಟ ಮಾಡಲು ಖರೀದಿಸುವುದಿಲ್ಲ. ಅವರು ಚಿನ್ನವನ್ನು ಅಷ್ಟು ಸುಲಭವಾಗಿ ಮಾರಾಟ ಮಾಡಲು ಬಯಸುವುದಿಲ್ಲ,

ಆದ್ದರಿಂದ ಈಗ ಗೃಹಿಣಿಯರು ಚಿನ್ನವನ್ನು ಖರೀದಿಸುತ್ತಿಲ್ಲ.

ಜನರು 22 ಕ್ಯಾರೆಟ್ ಚಿನ್ನದ ಬದಲು 18 ಕ್ಯಾರೆಟ್ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿದ್ದಾರೆ ಎಂಬ ಮಾತುಗಳು ಕೂಡ ಮಾರುಕಟ್ಟೆಯಲ್ಲಿವೆ. ಆಭರಣಗಳ ತಯಾರಿಕೆ ದುಬಾರಿಯಾಗಿದೆ. ತಯಾರಿಕೆ ಶುಲ್ಕಗಳು ಸಹ ಶೇ. 10ರಿಂದ ಶೇ. 25ರಷ್ಟು ದುಬಾರಿಯಾಗಿವೆ.

ಹೀಗಾಗಿ ಜನರು ತಮ್ಮ ಆಯ್ಕೆಯೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ನಕಲಿ ಆಭರಣಗಳ ಬಳಕೆ ಹೆಚ್ಚಾಗಿದೆ.

ಚಿನ್ನ ಒತ್ತೆ ಇಡುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಮತ್ತೊಂದು ವರದಿ ಹೇಳುತ್ತಿದೆ.

10 ಗ್ರಾಂ ಚಿನ್ನದ ಬೆಲೆ ರೂ. 1 ಲಕ್ಷಕ್ಕಿಂತ ಹೆಚ್ಚಾದರೆ,

ಭಾರತೀಯ ಗೃಹಿಣಿಯರಿಗಂತೂ ಲಾಭವಿಲ್ಲ. ಹಾಗಾಗಿ ಈ ಏರಿಕೆಯಿಂದ ಯಾರಿಗೆ ಲಾಭ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಪಿ.ಎಚ್. ಅರುಣ್

contributor

Similar News