ಆಳ್ವಿಕೆಯ ಜವಾಬ್ದಾರಿಯೂ ಆಡಳಿತ ದಕ್ಷತೆಯೂ

ಸಾಂವಿಧಾನಿಕ ಬದ್ಧತೆ ಎಂದರೆ ಗ್ರಾಂಥಿಕ ಪಠಣ ಅಲ್ಲ ಅಥವಾ ಸಂವಿಧಾನದ ವೈಭವೀಕರಣ ಮಾತ್ರವಲ್ಲ. ಅದನ್ನು ಅಕ್ಷರಶಃ ಪಾಲಿಸುವುದಾಗಿರುತ್ತದೆ. ಅದರರ್ಥ ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ, ನಿಷ್ಪಕ್ಷ, ಜನಪರ ಆಳ್ವಿಕೆಯನ್ನು ನೀಡುವುದು. ಜಾತಿ, ಮತ, ಧರ್ಮ, ಸಾಮುದಾಯಿಕ ಅಸ್ಮಿತೆಗಳನ್ನು ದಾಟಿ ರಾಜ್ಯದ ಸಮಸ್ತ ಜನತೆಯ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಕಾಪಾಡುವುದು. ಈ ಉದಾತ್ತ ಧ್ಯೇಯವನ್ನು ರಾಜಕೀಯ ಸ್ವ ಹಿತಾಸಕ್ತಿಗೆ ಬಲಿಕೊಡುವುದೇ ಆದರೆ ರಾಜ್ಯವು ಮತ್ತೊಮ್ಮೆ ಬಲಪಂಥೀಯ ದ್ವೇಷ ರಾಜಕಾರಣಕ್ಕೆ, ಅವಕಾಶವಾದಿ ರಾಜಕಾರಣಕ್ಕೆ ಬಲಿಯಾಗುತ್ತದೆ. ಅಧಿಕಾರ ವ್ಯಾಮೋಹ ಮತ್ತು ಪೀಠದಾಹದಿಂದ ಮುಕ್ತವಾಗಿ ಜನಪರ ಕಾಳಜಿಯೊಂದಿಗೆ ಸ್ವಚ್ಛ ಆಡಳಿತ ನೀಡುವತ್ತ ರಾಜ್ಯ ಸರಕಾರ ಗಮನಹರಿಸುವುದು ವರ್ತಮಾನದ ತುರ್ತು.

Update: 2024-07-18 06:59 GMT
Editor : Musaveer | Byline : ನಾ. ದಿವಾಕರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆಯ ಕೇಂದ್ರಗಳ ವಾರಸುದಾರಿಕೆ ವಹಿಸುವ ರಾಜಕೀಯ ಪಕ್ಷಗಳಿಗೆ ಮೂಲತಃ ಇರಬೇಕಾದ್ದು ಜನಪರ ಕಾಳಜಿ, ಸಾಮಾಜಿಕ ಕಳಕಳಿ ಮತ್ತು ಮನುಜ ಸಂವೇದನೆ. ಇವುಗಳನ್ನು ಕಳೆದುಕೊಂಡ ಯಾವುದೇ ರಾಜಕೀಯ ಪಕ್ಷವೂ ತನ್ನ ಅಧಿಕಾರವನ್ನು ಸಾಮಾನ್ಯ ಜನತೆಯ ಆಕಾಂಕ್ಷೆಗಳಿಗೆ ಪೂರಕವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ತಳ ಸಮಾಜದ ನಿತ್ಯ ನೋವು ಸಂಕಟಗಳಿಗೆ ಸ್ಪಂದಿಸದ ಯಾವುದೇ ರಾಜಕೀಯ ಕೂಟವೂ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ, ಕೇವಲ ಚುನಾವಣಾ ಕೇಂದ್ರಿತ ಅಧಿಕಾರ ಗ್ರಹಣ ಅಥವಾ ಆಳ್ವಿಕೆಯ ಹಸ್ತಾಂತರದ ಒಂದು ವ್ಯಾವಹಾರಿಕ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ೨೦೨೪ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳೂ ಇದೇ ಸಂದೇಶವನ್ನು ರವಾನಿಸಿದೆ. ಅದರೆ ಆಳ್ವಿಕೆಯ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಈ ವಾಸ್ತವವನ್ನು ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ.

ತಳ ಸಮಾಜದಲ್ಲಿ ಮಾರುಕಟ್ಟೆ ಆರ್ಥಿಕತೆಯ ಅವಕಾಶಗಳಿಂದ ಹಾಗೂ ಲಾಭಗಳಿಂದ ವಂಚಿತರಾಗಿರುವ ಅಪಾರ ಜನಸಮೂಹಗಳಿಗೆ ಪೂರ್ಣ ನ್ಯಾಯ ಒದಗಿಸಿ ಅವರ ಜೀವನಮಟ್ಟವನ್ನು ಸುಧಾರಿಸುವ ಕ್ರಮಗಳಿಗೆ ಬಂಡವಾಳಶಾಹಿ-ನವ ಉದಾರವಾದಿ ಅರ್ಥವ್ಯವಸ್ಥೆಯು ಅವಕಾಶ ನೀಡುವುದಿಲ್ಲವಾದ್ದರಿಂದ ಈ ಶೋಷಿತ ಸಮುದಾಯಗಳಿಗೆ ಪರ್ಯಾಯ ನ್ಯಾಯ ಒದಗಿಸುವ ಉಪಕ್ರಮಗಳನ್ನು ಸರಕಾರಗಳು ಕೈಗೊಳ್ಳುವುದು ಸ್ವತಂತ್ರ ಭಾರತದಲ್ಲಿ ನಡೆದುಬಂದಿರುವ ಆಡಳಿತ ಪದ್ಧತಿ. ಭಾರತದ ಸಂದರ್ಭದಲ್ಲಿ ಇದನ್ನೇ ತಪ್ಪಾಗಿ ‘ಸಮಾಜವಾದ’ ಎಂದು ವ್ಯಾಖ್ಯಾನಿಸಲಾಗುತ್ತದೆ. ಈ ರೀತಿಯ ಉಪಕ್ರಮಗಳು ಸಮಾಜವಾದಿ ಪರಿಕಲ್ಪನೆಯ ಒಂದು ಛಾಯೆ ಮಾತ್ರವಾಗಿದ್ದು, ದೃಷ್ಟಿ ಭ್ರಮೆಯ (Optical illusion) ಹಾಗೆ ಜನರ ನಡುವೆ ವಿಶ್ವಾಸ ಮೂಡಿಸುತ್ತದೆ.

ಪೀಠದಾಹದ ಅತಿರೇಕಗಳ ನಡುವೆ

ಜನಸಾಮಾನ್ಯರ ಜೀವನೋಪಾಯವನ್ನು ಸುಗಮಗೊಳಿಸುವ ಸಲುವಾಗಿ ಜಾರಿಗೊಳಿಸುವ ಜನಕಲ್ಯಾಣ ಯೋಜನೆಗಳು ಆಡಳಿತ ನಿರ್ವಹಣೆಯಲ್ಲಿ ಒಂದು ಪ್ರಮುಖ ಆಯ್ಕೆ ಅಥವಾ ಆದ್ಯತೆಯಾಗಬೇಕೇ ಹೊರತು ಅದೇ ಆಳ್ವಿಕೆಯ ಮೂಲ ಆದ್ಯತೆ-ಉದ್ದೇಶ ಆಗಬಾರದು. ಇದನ್ನೂ ಮೀರಿದ ಜವಾಬ್ದಾರಿಯುತ ಕರ್ತವ್ಯಗಳನ್ನು ಸರಕಾರಗಳು ನಿಭಾಯಿಸಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸೌಕರ್ಯಗಳು, ಸಮಾಜಘಾತುಕ ಶಕ್ತಿಗಳ ನಿಯಂತ್ರಣ, ದುರ್ಬಲ ವರ್ಗಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವುದು ಇವೆಲ್ಲವೂ ಸರಕಾರದ ಕ್ಷಮತೆ ಮತ್ತು ದಕ್ಷತೆಯನ್ನು ನಿರ್ಧರಿಸುವ ನಿರ್ಣಾಯಕ ಅಂಶಗಳು. ಇದರ ನಡುವೆಯೇ ಸಮಾಜದಲ್ಲಿ ಉದ್ಭವಿಸುವ ಅಶಾಂತಿ ಮತ್ತು ಅಸಮಾಧಾನಗಳನ್ನು ಸರಿಪಡಿಸುವ ನೈತಿಕ ಜವಾಬ್ದಾರಿಯೂ ಇರುತ್ತದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಈ ವಾಸ್ತವವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದಂತೆ ಕಾಣುತ್ತಿದೆ.

ಭಾರತದ ಪ್ರಜಾತಂತ್ರವನ್ನು ಮೂಲತಃ ಕಾಡುತ್ತಿರುವ ವ್ಯಾಧಿ ಎಂದರೆ ಹಣಕಾಸು ಭ್ರಷ್ಟಾಚಾರ ಮತ್ತು ಅದರ ಸುತ್ತಲೂ ಹುತ್ತದಂತೆ ಹಬ್ಬಿಕೊಳ್ಳುವ ಅವಕಾಶವಾದ, ಸ್ವಜನಪಕ್ಷಪಾತ, ಅಧಿಕಾರ ವ್ಯಾಮೋಹ ಮತ್ತು ಪೀಠದಾಹ. ಈ ವ್ಯಸನಗಳನ್ನು ಮೀರಲು ವಿಫಲವಾಗಿರುವುದರಿಂದಲೇ ಪಕ್ಷ ರಾಜಕಾರಣ ಎನ್ನುವುದು ಪಕ್ಷಾಂತರ ರಾಜಕಾರಣವಾಗಿ ಹೊರಳಿದೆ. ಪೀಠದಾಹದ ಅತಿರೇಕಗಳನ್ನು ನಾವು ಪಕ್ಷಾಂತರಗಳಲ್ಲಿ, ಆಪರೇಷನ್ ಕಮಲ, ಆಪರೇಷನ್ ಹಸ್ತ ಕ್ರಿಯೆಗಳಲ್ಲಿ ಕಾಣಬಹುದು. ಒಂದು ಸಮೀಕ್ಷೆಯ ಪ್ರಕಾರ ದೇಶದ ಆರು ರಾಜ್ಯಗಳಲ್ಲಿ66 ಶಾಸಕರು ಪಕ್ಷಾಂತರ ಮಾಡಿದ್ದು, ಅವರ ಪೈಕಿ59 ಶಾಸಕರಿಗೆ ಮರಳಿ ಟಿಕೆಟ್ ನೀಡಲಾಗಿದೆ. ಇವರ ಪೈಕಿ 41 ಅಭ್ಯರ್ಥಿಗಳು ಪುನಃ ಗೆದ್ದು ಬಂದಿದ್ದಾರೆ. ಇದರ ಅತಿದೊಡ್ಡ ಫಲಾನುಭವಿ ಬಿಜೆಪಿ ಆಗಿರುವುದು ಸೋಜಿಗವೇನಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯ ಹೊರತಾಗಿಯೂ ಚುನಾಯಿತ ಪ್ರತಿನಿಧಿಗಳು ಮುಖ್ಯವಾಹಿನಿ ಪಕ್ಷಗಳ ನೆರವಿನೊಂದಿಗೆ ಪಕ್ಷಾಂತರದಲ್ಲಿ ತೊಡಗಿರುವುದು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಒಂದು ಕಪ್ಪುಚುಕ್ಕೆ ಎನ್ನಬಹುದು.

ಆಡಳಿತಾರೂಢ ಪಕ್ಷಗಳು ತಮ್ಮ ಸರಕಾರ ಎಂದು ಪತನವಾಗುವುದೋ ಎಂಬ ಆತಂಕದಲ್ಲೇ ಆಡಳಿತ ನಡೆಸಿದರೆ, ಪರಾಜಿತ ವಿರೋಧ ಪಕ್ಷಗಳು ಸರಕಾರವನ್ನು ಹೇಗೆ ಪತನಗೊಳಿಸುವುದು ಎಂಬ ಚಿಂತೆಯಲ್ಲಿ ಮುಳುಗಿರುತ್ತವೆ. ಕರ್ನಾಟಕದ ಬಿಜೆಪಿ ನಾಯಕರು ಕಳೆದ ಒಂದು ವರ್ಷದಿಂದಲೂ ಈ ಜಪ ಮಾಡುತ್ತಲೇ ಇದ್ದಾರೆ. 2024ರಲ್ಲಿ ಮರಳಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರಕಾರ ಆಗಸ್ಟ್ ವೇಳೆಗೆ ಪತನವಾಗುತ್ತದೆ ಎಂದು ಆರ್‌ಜೆಡಿ ನಾಯಕ ಲಾಲು ಯಾದವ್ ಹೇಳುತ್ತಾರೆ. ಅಂದರೆ ಸಂಸದೀಯ ಪ್ರಜಾತಂತ್ರದಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸಿ ಶಾಸನ ಸಭೆಗಳನ್ನು ಪ್ರವೇಶಿಸುವ ಪಕ್ಷಗಳ ಮತ್ತು ರಾಜಕಾರಣಿಗಳ ಗಮನ ಬಹುಮಟ್ಟಿಗೆ ಅಧಿಕಾರ ಪೀಠದ ಮೇಲೇ ಕೇಂದ್ರೀಕೃತವಾಗಿರುತ್ತದೆ. ಎರಡೂ ಬದಿಗಳಲ್ಲಿ ಅನುಸರಿಸಲಾಗುವ ಮಾರ್ಗ-ವಿಧಾನಗಳು ಎಲ್ಲ ನೈತಿಕ ಮೌಲ್ಯಗಳನ್ನೂ ಕಳೆದುಕೊಂಡಿರುತ್ತವೆ ಎನ್ನುವುದಕ್ಕೆ ಕಳೆದ ಹತ್ತು ವರ್ಷಗಳ ಬೆಳವಣಿಗೆಗಳೇ ಸಾಕ್ಷಿ.

ಭ್ರಷ್ಟತೆಯಿಂದ ಸ್ವಚ್ಛತೆಯೆಡೆಗೆ!

ಈ ಹಿನ್ನೆಲೆಯಲ್ಲಿ ನೋಡಿದಾಗ 40 ಪರ್ಸೆಂಟ್ ಸರಕಾರ ಎಂದು ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧ ಜನಾಭಿಪ್ರಾಯವನ್ನು ಕ್ರೋಡೀಕರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರಕ್ಕೆ ಭ್ರಷ್ಟಾಚಾರವನ್ನು ನಿಯಂತ್ರಿಸುವುದೇ ಪ್ರಥಮ ಆದ್ಯತೆಯಾಗಬೇಕಿತ್ತು. ಹಿಂದಿನ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಿಸುವ ಮೂಲಕ ಜನಸಾಮಾನ್ಯರ ವಿಶ್ವಾಸ ಗಳಿಸುವುದು ಕಾಂಗ್ರೆಸ್ ಸರಕಾರದ ಮುಖ್ಯ ಗುರಿ ಆಗಬೇಕಿತ್ತು. ಆದರೆ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರವು ಈ ನಿರೀಕ್ಷೆಗಳೆಲ್ಲವನ್ನೂ ಹುಸಿಗೊಳಿಸಿದೆ. ಕೋಟ್ಯಂತರ ರೂ.ಗಳ ಈ ಹಗರಣಕ್ಕೆ ಈಗಾಗಲೇ ಒಬ್ಬ ಸಚಿವರು ಬಲಿಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಇಂತಹ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕುವ ಒಂದು ನೈತಿಕ ಲಕ್ಷ್ಮಣರೇಖೆಯನ್ನು ಎಳೆದಿದ್ದರೆ ಹೀಗಾಗುತ್ತಿತ್ತೇ?

ಹೀಗೆ ಮಾಡಲು ಯಾವುದೇ ಸರಕಾರಕ್ಕೆ ನೈತಿಕ ಸ್ಥೈರ್ಯ ಮತ್ತು ಮಾನದಂಡಗಳ ಪರಿವೆ ಇರಬೇಕು. ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಾಗುವ ಸಲುವಾಗಿಯೇ ದಶಕಗಳ ಪಕ್ಷನಿಷ್ಠೆಯನ್ನು ಬದಿಗೊತ್ತಿ ಆಡಳಿತಾರೂಢ ಪಕ್ಷಕ್ಕೆ ಸೇರಿಕೊಂಡು, ಅಲ್ಲಿ ‘ಶುದ್ಧಹಸ್ತ’ರೆಂಬ ಹಣೆಪಟ್ಟಿ ಪಡೆದು, ಮತ್ತೊಮ್ಮೆ ಅಧಿಕಾರ ಪೀಠದಲ್ಲಿ ವಿರಾಜಮಾನರಾಗುವ ಪ್ರಸಂಗಗಳು ಕಳೆದ ಹತ್ತು ವರ್ಷಗಳಲ್ಲಿ ಹೇರಳವಾಗಿವೆ. ಬಿಜೆಪಿ ನಾಯಕತ್ವವು ಇಂತಹ ಒಂದು ಯೋಜನಾಬದ್ಧ ಕಾರ್ಯಕ್ರಮವನ್ನೇ ರೂಪಿಸಿರುವುದು ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾ ಮೊದಲಾದ ರಾಜ್ಯಗಳಲ್ಲಿ ಯಶಸ್ಸನ್ನೂ ಪಡೆದಿದೆ. ಸಾಂವಿಧಾನಿಕ ನೈತಿಕತೆ ಮತ್ತು ಆಳ್ವಿಕೆಯ ಪಾರದರ್ಶಕತೆಯನ್ನು ಕಳೆದುಕೊಂಡಿರುವ ರಾಜಕೀಯ ಪಕ್ಷಗಳಿಗೆ ಅಧಿಕಾರವೊಂದೇ ಅಂತಿಮ ಗುರಿ ಆಗಿರುವುದರಿಂದ ಈ ವಾಮಮಾರ್ಗಗಳ ರಾಜಕೀಯ ಸಂಸ್ಕೃತಿಯೂ ಸಾಮಾನ್ಯವಾಗಿ ಸ್ವೀಕೃತವೇ ಆಗಿಹೋಗಿದೆ.

ಈ ನಡುವೆಯೇ ಕರ್ನಾಟಕದ ರಾಜಕಾರಣದಲ್ಲಿ ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ (MUDA) ಭ್ರಷ್ಟ ಹಗರಣಗಳು ಸದ್ದು ಮಾಡುತ್ತಿರುವುದು ಭ್ರಷ್ಟ ವ್ಯವಸ್ಥೆಯ ಮತ್ತೊಂದು ಆಯಾಮವನ್ನು ಹೊರಗೆಡಹಿದೆ. ಪರಸ್ಪರ ದೋಷಾರೋಪಗಳ ಮೂಲಕವೇ ತಮ್ಮ ಸಚ್ಚಾರಿತ್ರ್ಯವನ್ನು ಪ್ರದರ್ಶಿಸುವ ಒಂದು ಪರಂಪರೆಗೆ ಬೂರ್ಷ್ವಾ ಪಕ್ಷಗಳು ಒಗ್ಗಿ ಹೋಗಿರುವುದರಿಂದ, MUDAದಂತಹ ಹಗರಣಗಳು ಅಂತಿಮವಾಗಿ ಯಾವುದೋ ಒಂದು ತನಿಖಾ ಆಯೋಗದ ವರದಿಯಲ್ಲಿ ಮರೆಯಾಗಿ ಹೋಗುತ್ತವೆ. ಆದರೂ ಯಾವುದೇ ಭ್ರಷ್ಟಾಚಾರದ ಕಳಂಕ ಇಲ್ಲದ, ಸಮಾಜಮುಖಿ ಜನಪರ ನಾಯಕರೆಂದೇ ಹೆಸರುಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು MUDA ಹಗರಣದಲ್ಲಿ ಕೇಳಿಬರುತ್ತಿರುವುದು ಸರಕಾರದ ವಿಶ್ವಾಸಾರ್ಹತೆಗೇ ಧಕ್ಕೆ ಉಂಟುಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುತ್ತಿಕೊಂಡಿರುವ ಆರೋಪಗಳನ್ನು ವೈಯುಕ್ತಿವಾಗಿ ಅಲ್ಲಗಳೆಯುವುದು, ನಿರಾಕರಿಸುವುದು ಕೇವಲ ರಾಜಕೀಯ ತಂತ್ರಗಾರಿಕೆಯಾಗುತ್ತದೆ.

ಮತ್ತೊಂದೆಡೆ ಐದು ವರ್ಷಗಳ ಭ್ರಷ್ಟಾತಿಭ್ರಷ್ಟ ಆಳ್ವಿಕೆಯಲ್ಲಿ ಒಂದೇ ಒಂದು ರಾಜೀನಾಮೆಯನ್ನೂ ನೀಡದ ವಿರೋಧ ಪಕ್ಷ ಬಿಜೆಪಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಪಕ್ಷದ ದ್ವಂದ್ವ ನೀತಿಯನ್ನು ತೋರಿದರೂ, ಇಡೀ ಹಗರಣದ ಬಗ್ಗೆ ನಿಷ್ಪಕ್ಷ, ಪಾರದರ್ಶಕ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ಜನರ ಮುಂದಿಡುವುದು ಕಾಂಗ್ರೆಸ್ ಸರಕಾರದ ಆದ್ಯತೆಯಾಗಬೇಕಿದೆ. ತಮ್ಮ ಜಾತಿಯ ಕಾರಣದಿಂದಲೇ ರಾಜೀನಾಮೆಗಾಗಿ ಆಗ್ರಹಿಸಲಾಗುತ್ತಿದೆ ಎಂಬ ಮುಖ್ಯಮಂತ್ರಿಗಳ ಆರೋಪ ಜಾತಿ ಸಮೀಕರಣದ ನೆಲೆಯಲ್ಲಿ ಅನಿವಾರ್ಯವಾಗಿರಬಹುದಾದರೂ ಇದರಿಂದ ಜನಸಾಮಾನ್ಯರ ವಿಶ್ವಾಸವನ್ನು ಗಳಿಸಲಾಗುವುದಿಲ್ಲ. ತಮ್ಮ ಸರಕಾರ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿದೆ, ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯದ ಜನತೆಗೆ ರವಾನಿಸಬೇಕಿದೆ. ಅದಕ್ಕೆ ದಕ್ಷ ಪ್ರಾಮಾಣಿಕ ಆಡಳಿತಾತ್ಮಕ ಉಪಕ್ರಮಗಳು ಅವಶ್ಯವಾಗಿ ಬೇಕಾಗುತ್ತವೆ.

ಭ್ರಷ್ಟತೆಯ ಮೂಲ ಭೇದಿಸಬೇಕಿದೆ

ಮುಡಾ (MUDA) ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು ‘‘MUDA ಗಬ್ಬೆದ್ದು ನಾರುತ್ತಿದೆ ಅದನ್ನು ಕ್ಲೀನ್ ಮಾಡುತ್ತೇವೆ’’ ಎಂದು ಹೇಳಿರುವುದು ಸ್ವಾಗತಾರ್ಹವಾದರೂ, ಅಧಿಕಾರ ವಹಿಸಿಕೊಂಡು ಒಂದು ವರ್ಷದ ನಂತರ ಈ ಹೇಳಿಕೆ ನೀಡುವುದು ಆಡಳಿತ ವ್ಯವಸ್ಥೆಯ ಆಂತರಿಕ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ. MUDA ಸಂಸ್ಥೆಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವಾಗಲೇ ಈ ವಿಚಾರ ಸರಕಾರಕ್ಕೆ ತಿಳಿದಿರಬೇಕಲ್ಲವೇ? ಯಾವುದೋ ಒಂದು ಮೂಲೆಯಿಂದ ಹಗರಣ ನಡೆದಿರುವುದು ಹೊರಬರುವವರೆಗೂ ಈ ಭ್ರಷ್ಟಾಚಾರದ ಹುತ್ತದಲ್ಲಿ ಎಷ್ಟು ವಿಷಜಂತುಗಳು ಅಡಗಿದ್ದವು ಎಂಬ ಮಾಹಿತಿ ಸರಕಾರಕ್ಕೆ ಇರಲಿಲ್ಲವೇ? ಅಥವಾ ಗೊತ್ತಿದ್ದರೂ ತಮ್ಮ ಆಪ್ತವಲಯವನ್ನು ಕಾಪಾಡುವ ಸಲುವಾಗಿ ಸರಕಾರ ಜಾಣ ಮೌನಕ್ಕೆ ಶರಣಾಗಿತ್ತೇ? ಒಂದು ಭ್ರಷ್ಟ ಸರಕಾರದಿಂದ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ಸರಕಾರಕ್ಕೆ ಆಡಳಿತ ಯಂತ್ರವನ್ನು ಪಾರದರ್ಶಕವಾಗಿಸುವುದು, ಶುಚಿಗೊಳಿಸುವುದು ಪ್ರಥಮ ಆದ್ಯತೆಯಾಗಬೇಕಿತ್ತಲ್ಲವೇ ?

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯನ್ನು ತಾಳಲಾಗದೆ ಈಗ ಬೋಗಸ್ ಬಿಪಿಎಲ್ ಕಾರ್ಡ್‌ಗಳ ವಿರುದ್ಧ ಸಮರ ಸಾರಲು ಸಿದ್ಧವಾಗಿರುವ ರಾಜ್ಯ ಸರಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮುನ್ನವೇ ಈ ವಿಚಾರದಲ್ಲಿ ಜಾಗ್ರತೆ ವಹಿಸುವ ಕ್ಷಮತೆ ಇರಬೇಕಿತ್ತಲ್ಲವೇ? ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಾರ ೨೦೨೧ರ ಡಿಸೆಂಬರ್ ಮತ್ತು ೨೦೨೪ರ ನಡುವೆ ಅಧಿಕಾರಿಗಳು ೬.೧೭ ಲಕ್ಷ ಬೋಗಸ್ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದುಪಡಿಸಿದ್ದಾರೆ. ಆದರೂ ಶೇಕಡಾ ೮೦ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿರುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆಂತರಿಕ ಇಲಾಖಾ ಭ್ರಷ್ಟಾಚಾರ ಮತ್ತು ತಳಮಟ್ಟದಿಂದ ವಿಧಾನಸೌಧದವರೆಗೆ ಹರಡಿರುವ ಸ್ವಜನಪಕ್ಷಪಾತ ಮತ್ತು ರಾಜಕೀಯ ಅವಕಾಶವಾದವನ್ನು ಹೋಗಲಾಡಿಸಿದ್ದರೆ ಹೀಗಾಗುತ್ತಿರಲಿಲ್ಲ. ವಿವಿಧ ಹಂತಗಳಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲದೆ ಇಷ್ಟೊಂದು ಬೋಗಸ್ ಕಾರ್ಡ್‌ಗಳು ಇರುತ್ತಿರಲಿಲ್ಲ.

ಬೋಗಸ್ ಬಿಪಿಎಲ್ ಆಗಲೀ, ಮುಡಾ ನಿವೇಶನಗಳ ಅಕ್ರಮ ಹಂಚಿಕೆಯಾಗಲೀ, ಇದರ ಮೂಲ ಇರುವುದು ತಳಮಟ್ಟದ ಪ್ರಭಾವಿ ರಾಜಕೀಯ ವಲಯದಲ್ಲಿ. ನಿವೇಶನಾಕಾಂಕ್ಷಿಗಳ ದಂಡು ಪ್ರಭಾವಿ ರಾಜಕೀಯ ನಾಯಕರ ಸುತ್ತ ಇರುವಂತೆಯೇ, ಸ್ವಂತ ಮನೆ, ಕಾರು ಇತ್ಯಾದಿ ಆಸ್ತಿ ಹೊಂದಿರುವವರೂ ಇದೇ ಪ್ರಭಾವಿ ವಲಯವನ್ನು ಬಳಸಿಕೊಂಡು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುತ್ತಾರೆ. ಈ ಸುಡು ವಾಸ್ತವವನ್ನು ಅರಿಯಲು ಯಾವುದೇ ಸಮಾಜಶಾಸ್ತ್ರೀಯ ಸಂಶೋಧನೆ ಅಗತ್ಯವಿಲ್ಲ. ನಮ್ಮ ರಾಜಕೀಯ ವ್ಯವಸ್ಥೆಯ ಆಳ-ಅಗಲ ಅರಿತಿದ್ದರೆ ಸಾಕು. ಅಧಿಕಾರ ರಾಜಕಾರಣದ ಸ್ವಾರ್ಥ ಹಿತಾಸಕ್ತಿಗಳು ಇಂತಹ ಭ್ರಷ್ಟ ಪರಂಪರೆಯನ್ನು ತೆರೆಮರೆಯಲ್ಲಿ ಕಾಪಾಡುತ್ತಲೇ ಇರುತ್ತವೆ. ಇದನ್ನು ಹೋಗಲಾಡಿಸಲು ಆಳ್ವಿಕೆಯ ಕೇಂದ್ರಗಳ ಸುತ್ತಲೂ ಇರುವ ಫ್ರತಿಫಲಾಕಾಂಕ್ಷಿಗಳನ್ನು ನಿವಾರಿಸುವುದು ಅತ್ಯವಶ್ಯ. ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿರುವುದೇ ?

ಸಾಂವಿಧಾನಿಕ ನೈತಿಕತೆಯ ಕೊರತೆ

ಪ್ರಾಮಾಣಿಕ-ಪಾರದರ್ಶಕ ಆಳ್ವಿಕೆಯನ್ನು ನೀಡುವ ಯಾವುದೇ ಸರಕಾರಕ್ಕೆ ಮೂಲತಃ ಇರಬೇಕಾದ್ದು ಸಂವಿಧಾನ ನಿಷ್ಠೆ ಮತ್ತು ಜನನಿಷ್ಠೆ. ತಮ್ಮನ್ನು ಆಯ್ಕೆ ಮಾಡಿರುವ ಜನತೆ ತಮ್ಮಿಂದ ಅಪೇಕ್ಷಿಸುವಂತಹ ಸ್ವಚ್ಛ, ಪ್ರಾಮಾಣಿಕ ಆಡಳಿತ ನೀಡುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುವ ಉಪಕ್ರಮಗಳೇ ಜನರ ವಿಶ್ವಾಸವನ್ನು ಗಟ್ಟಿಗೊಳಿಸುತ್ತವೆ. ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿರುವುದು ಕೇವಲ ಅಧಿಕಾರ ಹಸ್ತಾಂತರದ ದೃಷ್ಟಿಯಿಂದಲ್ಲ. ಐದು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಎದುರಿಸಿದ ಮತದ್ವೇಷ, ಮತೀಯ ದ್ವೇಷ ರಾಜಕಾರಣ, ಭ್ರಷ್ಟಾಚಾರ ಹಾಗೂ ಮತಾಂಧತೆಯ ವಿರುದ್ಧ ರಾಜ್ಯದ ಜನತೆ ಪ್ರತಿರೋಧದ ರೂಪದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ತಾತ್ವಿಕವಾಗಿ ಸಮಾಜವಾದಿ ಎನಿಸಿಕೊಂಡಿರುವ, ಸಾಮಾಜಿಕ ಕಾಳಜಿ-ಕಳಕಳಿಯಿರುವ ನೇತಾರ ಎನಿಸಿಕೊಂಡಿರುವ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರಕಾರವು ತನ್ನ ಸಾಂವಿಧಾನಿಕ ಬದ್ಧತೆಗಳನ್ನು ಪೂರೈಸುತ್ತದೆ ಎಂಬ ವಿಶ್ವಾಸದೊಂದಿಗೆ 135 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ.

ಸಾಂವಿಧಾನಿಕ ಬದ್ಧತೆ ಎಂದರೆ ಗ್ರಾಂಥಿಕ ಪಠಣ ಅಲ್ಲ ಅಥವಾ ಸಂವಿಧಾನದ ವೈಭವೀಕರಣ ಮಾತ್ರವಲ್ಲ. ಅದನ್ನು ಅಕ್ಷರಶಃ ಪಾಲಿಸುವುದಾಗಿರುತ್ತದೆ. ಅದರರ್ಥ ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ, ನಿಷ್ಪಕ್ಷ, ಜನಪರ ಆಳ್ವಿಕೆಯನ್ನು ನೀಡುವುದು. ಜಾತಿ, ಮತ, ಧರ್ಮ, ಸಾಮುದಾಯಿಕ ಅಸ್ಮಿತೆಗಳನ್ನು ದಾಟಿ ರಾಜ್ಯದ ಸಮಸ್ತ ಜನತೆಯ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಕಾಪಾಡುವುದು. ಈ ಉದಾತ್ತ ಧ್ಯೇಯವನ್ನು ರಾಜಕೀಯ ಸ್ವ ಹಿತಾಸಕ್ತಿಗೆ ಬಲಿಕೊಡುವುದೇ ಆದರೆ ರಾಜ್ಯವು ಮತ್ತೊಮ್ಮೆ ಬಲಪಂಥೀಯ ದ್ವೇಷ ರಾಜಕಾರಣಕ್ಕೆ, ಅವಕಾಶವಾದಿ ರಾಜಕಾರಣಕ್ಕೆ ಬಲಿಯಾಗುತ್ತದೆ. ಅಧಿಕಾರ ವ್ಯಾಮೋಹ ಮತ್ತು ಪೀಠದಾಹದಿಂದ ಮುಕ್ತವಾಗಿ ಜನಪರ ಕಾಳಜಿಯೊಂದಿಗೆ ಸ್ವಚ್ಛ ಆಡಳಿತ ನೀಡುವತ್ತ ರಾಜ್ಯ ಸರಕಾರ ಗಮನಹರಿಸುವುದು ವರ್ತಮಾನದ ತುರ್ತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ನಾ. ದಿವಾಕರ

contributor

Similar News