ಹಜ್‌ಯಾತ್ರೆ 2024: ಮಿನಾ ಪ್ರದೇಶದಲ್ಲಿ ಭಾರತೀಯ ಯಾತ್ರಿಗಳ ವಾಸ್ತವ್ಯಕ್ಕೆ ಇನ್ನೂ ಸಿಗದ ಅವಕಾಶ

Update: 2024-05-10 05:10 GMT

ಬೆಂಗಳೂರು: ಖಾಸಗಿ ಹಜ್ ಟೂರ್ ಆಪರೇಟರ್‌ಗಳ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ಭಾರತದಿಂದ ಯಾತ್ರಿಗಳು ಪ್ರಯಾಣ ಆರಂಭಿಸಲು ದಿನಗಣನೆ ಆರಂಭವಾಗಿದೆ. ಆದರೆ, ಈವರೆಗೆ ಮಿನಾ ಪ್ರದೇಶದಲ್ಲಿ ಭಾರತೀಯ ಯಾತ್ರಿಗಳ ವಾಸ್ತವ್ಯಕ್ಕೆ ಅವಕಾಶ ಸಿಗದೆ ಇರುವುದು ಟೂರ್ ಆಪರೇಟರ್‌ಗಳನ್ನು ಹೈರಾಣಾಗಿಸಿದೆ.

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಅಧೀನದಲ್ಲಿ ಬರುವ ಭಾರತೀಯ ಹಜ್ ಸಮಿತಿಯು ಈ ವಿಚಾರದಲ್ಲಿ, ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಭಾರತೀಯ ಹಜ್ ಮಿಷನ್ ಜೊತೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡು, ಯಾತ್ರಿಗಳು ಸುಗಮವಾಗಿ ತಮ್ಮ ಯಾತ್ರೆಗೆ ತೆರಳಲು ಅನುಕೂಲ ಮಾಡಿಕೊಡಬೇಕಿದೆ.

ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಯಾತ್ರೆ ಆರಂಭಕ್ಕೂ ಮುನ್ನ ಯಾತ್ರಿಗಳ ದಾಖಲೆಗಳ ಪರಿಶೀಲನೆ, ಹೊಟೇಲ್‌ಗಳನ್ನು ಕಾಯ್ದಿರಿಸುವುದು, ಅರಫಾ ಹಾಗೂ ಮಿನಾದಲ್ಲಿ ಯಾತ್ರಿಗಳು ಉಳಿದುಕೊಳ್ಳಲು ಟೆಂಟ್‌ಗಳ ವ್ಯವಸ್ಥೆ ಮಾಡುವುದು, ಮುಅಲ್ಲಿಮ್‌ಗಳನ್ನು ನಿಯುಕ್ತಿ ಮಾಡುವುದು ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.

ಮೇ ತಿಂಗಳ ಮೂರನೇ ವಾರದ ಆರಂಭದಿಂದ ಕರ್ನಾಟಕ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಯಾತ್ರಿಗಳು ಹಜ್ ಯಾತ್ರೆಗೆ ಪ್ರಯಾಣ ಆರಂಭಿಸಲಿದ್ದಾರೆ. ಆದರೆ, ಸೌದಿ ಅರೇಬಿಯಾ ಸರಕಾರದ ಹೊಸ ನಿಯಮಗಳ ಪ್ರಕಾರ ಐಬಾನ್ ಖಾತೆಗೆ ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಹಣ ಜಮೆ ಮಾಡುವಂತಿಲ್ಲ.

ಬದಲಾಗಿ, ಭಾರತೀಯ ಹಜ್ ಮಿಷನ್ ಖಾತೆಗೆ ಹಣ ಜಮೆ ಮಾಡಿ, ಅಲ್ಲಿಂದಲೇ ಅವರು ಯಾತ್ರೆ ಸಂದರ್ಭದಲ್ಲಿನ ವೆಚ್ಚಗಳನ್ನು ಭರಿಸಬೇಕಿದೆ. ಐಬಾನ್ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆಯೂ 24 ಗಂಟೆಯಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ, ಹೊಸ ನಿಯಮಗಳ ಹಣ ಜಮೆ ಮಾಡುವಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ ಎಂದು ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿರುವ ಕರ್ನಾಟಕ ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಶಫಿ ಅಹ್ಮದ್, ಭಾರತೀಯ ಹಜ್ ಕಮಿಟಿ ಹಾಗೂ ಭಾರತೀಯ ಹಜ್ ಮಿಷನ್ ಅವರ ವಿಳಂಬ ಧೋರಣೆಯಿಂದಾಗಿ ನಮಗೆ ಇನ್ನೂ ಸಮರ್ಪಕವಾಗಿ ಹೊಟೇಲ್‌ಗಳನ್ನು ಕಾಯ್ದಿರಿಸಲು ಆಗುತ್ತಿಲ್ಲ. ಯಾತ್ರೆಗೆ ಹೋಗುವವರಿಗೆ ಲಸಿಕೆಗಳನ್ನು ಹಾಕಬೇಕು. ಈವರೆಗೆ ಆರೋಗ್ಯ ಸಚಿವಾಲಯದಿಂದ ನಮಗೆ ಲಸಿಕೆಗಳನ್ನು ಪೂರೈಸಿಲ್ಲ. ಈ ಸಂಬಂಧ ಭಾರತೀಯ ಹಜ್ ಸಮಿತಿ ಹಾಗೂ ರಾಜ್ಯ ಹಜ್ ಸಮಿತಿಯ ಗಮನಕ್ಕೂ ತಂದಿದ್ದೇವೆ ಎಂದರು.

ನಮ್ಮ ಮೂಲಕ ಹಜ್ ಯಾತ್ರೆಗೆ ತೆರಳುವ ಯಾತ್ರಿಗಳಿಗಾಗಿ ವಿಮಾನಯಾನದ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಮೀನಾದಲ್ಲಿ ಟೆಂಟ್‌ಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಗದಿದ್ದರೆ ಯಾತ್ರಿಗಳನ್ನು ಕರೆದುಕೊಂಡು ಹೋಗಿ ನಾವು ಉಳಿಸುವುದು ಎಲ್ಲಿ? ಒಂದು ವೇಳೆ ಯಾತ್ರಿಗಳು ನಾವು ಬುಕ್ಕಿಂಗ್ ಮಾಡಿದ ದಿನ ಪ್ರಯಾಣ ಮಾಡಲು ಸಾಧ್ಯವಾಗದಿದ್ದರೆ ನಮ್ಮ ಮೇಲೆ ಆರ್ಥಿಕವಾಗಿ ದೊಡ್ಡ ಸಂಕಷ್ಟ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಈ ಬಗ್ಗೆ ತ್ವರಿತವಾಗಿ ಗಮನ ಹರಿಸಬೇಕು. ಸೌದಿ ಅರೇಬಿಯಾ ಸರಕಾರ, ಭಾರತೀಯ ಹಜ್ ಮಿಷನ್ ಜೊತೆ ಚರ್ಚೆ ನಡೆಸಿ, ನಮಗೆ ಅನುಕೂಲ ಮಾಡಿಕೊಡಬೇಕು. ನಮ್ಮ ರಾಜ್ಯದಿಂದಲೇ ಕನಿಷ್ಠ 3 ಸಾವಿರ ಮಂದಿ ಈ ಬಾರಿ ಹಜ್ ಯಾತ್ರೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಶಫಿ ಅಹ್ಮದ್ ತಿಳಿಸಿದರು.

‘ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ’

ಭಾರತ ಸರಕಾರ ಹಾಗೂ ಭಾರತೀಯ ಹಜ್ ಮಿಷನ್‌ನವರು ಈ ವಿಚಾರದಲ್ಲಿ ತುಂಬಾ ಗಂಭೀರವಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ಯಾತ್ರಿಗಳ ಹಣ ಭಾರತೀಯ ಹಜ್ ಮಿಷನ್ ಖಾತೆಗೆ ವರ್ಗಾವಣೆ ಮಾಡುವ ವಿಚಾರದಲ್ಲಿ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜೊತೆಗೆ, ಮಿನಾ ಪ್ರದೇಶದಲ್ಲಿ ಯಾತ್ರಿಗಳ ವಾಸ್ತವ್ಯಕ್ಕೆ ಅವಕಾಶ ಇನ್ನೂ ಸಿಗದೇ ಇರುವುದು ನಮ್ಮ ಸಮಸ್ಯೆಗಳನ್ನು ಹೆಚ್ಚಿಸಿದೆ. ನಿರಂತರವಾಗಿ ಭಾರತೀಯ ಹಜ್ ಸಮಿತಿಯವರ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಅವರು ಸಮಸ್ಯೆ ಬಗೆಹರಿಸಿ, ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಯಾತ್ರೆಗೆ ತೆರಳುವ ಯಾತ್ರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಪವಿತ್ರ ಮಕ್ಕಾ ಪ್ರವಾಸದಲ್ಲಿರುವ ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ದೂರವಾಣಿ ಮೂಲಕ ‘ವಾರ್ತಾಭಾರತಿ’ಗೆ ತಿಳಿಸಿದರು.

ಎಚ್ಚರ ಇರಲಿ

ಕಡಿಮೆ ಮೊತ್ತದಲ್ಲಿ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಜಾಹೀ ರಾತುಗಳನ್ನು ನೀಡುವವರ ಬಗ್ಗೆ ಎಚ್ಚರಿಕೆ ಇರಲಿ. ಹಜ್ ಯಾತ್ರೆಯ ವೀಸಾ ಇಲ್ಲದೇ ಯಾರಾದರೂ ಹಜ್ ನಿರ್ವಹಿಸಲು ಹೋಗಿ ಸೌದಿ ಅರೇಬಿಯಾ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಅಂತಹವರಿಗೆ ಕನಿಷ್ಠ 50 ಸಾವಿರ ಸೌದಿ ರಿಯಾಲ್(ಭಾರತದ ಸುಮಾರು 12 ಲಕ್ಷ ರೂ.ಗಳು) ದಂಡ, 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೇ ಮುಂದಿನ 10 ವರ್ಷಗಳ ಕಾಲ ಆಪಾದಿತ ವ್ಯಕ್ತಿ ಸೌದಿ ಅರೇಬಿಯಾ ಪ್ರವೇಶಿಸಲು ನಿರ್ಬಂಧಿಸಲಾಗುತ್ತದೆ. ಆದುದರಿಂದ, ಬಿಸಿನೆಸ್ ವೀಸಾ, ವಿಸಿಟಿಂಗ್ ವೀಸಾ ಪಡೆದು ಹಜ್ ಯಾತ್ರೆಗೆ ತೆರಳದಂತೆ ರಾಜ್ಯ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅಮ್ಜದ್ ಖಾನ್ ಎಂ.

contributor

Similar News