ಪ್ರತಿಪಕ್ಷ ಮೈತ್ರಿ ಪ್ರಧಾನಿಯನ್ನೂ ಬಿಜೆಪಿಯನ್ನೂ ಕಂಗೆಡಿಸಿದೆಯೇ?
ಮಣಿಪುರದ ಹಿಂಸಾಚಾರ, ಅದರಲ್ಲೂ ಮಹಿಳೆಯರ ಮೇಲಿನ ಹೇಯ ದೌರ್ಜನ್ಯವನ್ನು ತೋರಿಸುವ ವೀಡಿಯೊ ಈ ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ. ಇದು ಪ್ರಧಾನಿಯವರ ಅಸಮರ್ಥತೆಯನ್ನು ಬಹಿರಂಗಪಡಿಸಿದೆ ಎಂಬುದು ವಿರೋಧ ಪಕ್ಷದ ನಾಯಕರ ಅಭಿಪ್ರಾಯ. ಇದೇ ವಿಚಾರವಾಗಿ ಪ್ರತಿಪಕ್ಷ ಮೈತ್ರಿಕೂಟ ತೋರಿಸಿದ ಒಗ್ಗಟ್ಟನ್ನೂ ದೇಶ ಗಮನಿಸಿದೆ.
‘‘ಪ್ರಧಾನಿ ನರೇಂದ್ರ ಮೋದಿ INDIA (Indian National Developmental Inclusive Alliance) ಎಂದರೆ ಹೆದರುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಒತ್ತಡದಲ್ಲಿದೆ.’’
ಇದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತು. ಮೊನ್ನೆ ಪಾಟ್ನಾದಲ್ಲಿ ಸರಕಾರಿ ಕಾರ್ಯಕ್ರಮದ ವೇಳೆ ಅವರು ಈ ಮಾತು ಹೇಳಿದರು.
ಮೋದಿಯವರು ‘ಇಂಡಿಯಾ’ವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದೀನ್ಗಳೊಂದಿಗೆ ಹೋಲಿಸಿದ್ದಾರೆ ಎಂಬುದರ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ, ಇದು ಅವರು ಆತಂಕಗೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ. ಅವರಿಗೆ ದಿಗಿಲಾಗಿದೆ ಎಂದು ಹೇಳಿದರು.
ಈ ಮಾತುಗಳ ಮೂಲಕ ನಿತೀಶ್ ಕುಮಾರ್, ವಿವಿಧ ಪಕ್ಷಗಳು ಮತ್ತು ದೇಶದ ವಿವಿಧ ಭಾಗಗಳಿಂದ ಬಂದಿರುವ ಭಾರತದ ನಾಯಕರ ನಿಜವಾದ ಭಾವನೆಗಳನ್ನೇ ಸೂಕ್ಷ್ಮವಾಗಿ ವ್ಯಕ್ತಪಡಿಸಿರುವಂತಿದೆ. ವಿರೋಧ ಪಕ್ಷಗಳ ಮೈತ್ರಿಕೂಟ ಪಾಟ್ನಾ ಮತ್ತು ಬೆಂಗಳೂರಿನ ಯಶಸ್ವಿ ಸಭೆಗಳ ನಂತರ, ಮಣಿಪುರದ ಸುದೀರ್ಘ ಹಿಂಸಾಚಾರದ ವಿಚಾರದಲ್ಲಿ ಸರಕಾರದ ವಿರುದ್ಧ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಬಿಗಿಪಟ್ಟು ಹಿಡಿದದ್ದು ಮೈತ್ರಿಪಕ್ಷಗಳ ನಡುವಿನ ಸ್ಪಷ್ಟ ಸಮನ್ವಯವನ್ನು ಕಾಣಿಸಿದೆ.
ಜನಾಂಗೀಯ ಘರ್ಷಣೆಗಳು ಪ್ರಾರಂಭವಾದ ೭೯ ದಿನಗಳ ನಂತರ, ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಹೇಯಕೃತ್ಯದ ವೀಡಿಯೊ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಮೋದಿ ತಮ್ಮ ಮೌನ ಮುರಿದರು. ಆದರೆ ಅವರು ಸಂಸತ್ತಿನ ಹೊರಗೆ ಮಾತನಾಡಿದರು. ಅಷ್ಟೇ ಅಲ್ಲ, ವೈರಲ್ ವೀಡಿಯೊದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾದ ವಿಚಾರವನ್ನು ಛತ್ತೀಸ್ಗಡ ಮತ್ತು ರಾಜಸ್ಥಾನದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳೊಂದಿಗೆ ಜೋಡಿಸಲು ಪ್ರಯತ್ನಿಸಿದರು. ಇದು ಪ್ರತಿಪಕ್ಷಗಳನ್ನು ಇನ್ನಷ್ಟು ಕೆರಳಿಸಿದೆ. ಮುಂಗಾರು ಅಧಿವೇಶನಕ್ಕೆ ಸಭೆ ಸೇರಿದಾಗಿನಿಂದ ಪ್ರತಿಪಕ್ಷಗಳು ನಿರಂತರವಾಗಿ ಉಭಯ ಸದನಗಳಲ್ಲಿ ತಮ್ಮ ಪ್ರತಿರೋಧವನ್ನು ತೋರಿದವು ಮತ್ತು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ತಯಾರಾದವು. ಉಭಯ ಸದನಗಳಲ್ಲಿ ಮಣಿಪುರದ ಕುರಿತು ಪ್ರಧಾನಿ ಹೇಳಿಕೆ ನೀಡಬೇಕು ಎಂಬುದು ಅವರ ಪ್ರಾಥಮಿಕ ಬೇಡಿಕೆಯಾಗಿದೆ.
ಸಂಸತ್ತಿನಲ್ಲಿ ಮಣಿಪುರ ವಿಷಯದ ಬಗ್ಗೆ ಚರ್ಚಿಸಲು ನರೇಂದ್ರ ಮೋದಿ ಏಕೆ ಹಿಂದೆ ಸರಿಯುತ್ತಿದ್ದಾರೆ? ನಿತೀಶ್ ಹೇಳುವಂತೆ ಮೋದಿಗೆ ಏಕೆ ಆತಂಕ ಮತ್ತು ಭಯ? ಅವರು INDIAವನ್ನು ಇಂಡಿಯನ್ ಮುಜಾಹಿದೀನ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಏಕೆ ಸಮೀಕರಿಸಿದರು?
ಪ್ರತಿಪಕ್ಷಗಳ ವಿವಿಧ ನಾಯಕರ ಅಭಿಪ್ರಾಯಗಳಲ್ಲಿ ವ್ಯಕ್ತವಾಗಿರುವಂತೆ, ಮೋದಿಯವರ ಈ ನಡೆಯ ಹಿಂದೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ದೇಶವನ್ನು ಸುತ್ತುವರಿದಿರುವ ಸಮಸ್ಯೆಗಳನ್ನು ಎದುರಿಸಲು ಕೇಂದ್ರ ಸರಕಾರದ ಅಸಮರ್ಥತೆ ಮತ್ತು ಎರಡನೆಯದಾಗಿ ಭ್ರಷ್ಟಾಚಾರದ ಕಳಂಕ ಈಗ ಬಿಜೆಪಿ ಆಡಳಿತವಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಂಟಿಕೊಂಡಿರುವುದು.
ಮಣಿಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರ ಮತ್ತು ಬಿಜೆಪಿ ಪ್ರಯತ್ನಿಸಿತೆ? ಅದರ ಹೊರತಾಗಿಯೂ, ಅಡೆತಡೆಯಿಲ್ಲದ ಹಿಂಸಾಚಾರ, ಅದರಲ್ಲೂ ಮಹಿಳೆಯರ ಮೇಲಿನ ಹೇಯ ದೌರ್ಜನ್ಯವನ್ನು ತೋರಿಸುವ ವೀಡಿಯೊ ಈ ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ. ಇದು ಪ್ರಧಾನಿಯವರ ಅಸಮರ್ಥತೆಯನ್ನು ಬಹಿರಂಗಪಡಿಸಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಾರೆ. ಮಣಿಪುರದಲ್ಲಿ ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಡಬಲ್ ಇಂಜಿನ್ ಸರಕಾರವಿದೆ ಎಂಬುದು ಪಕ್ಷಕ್ಕೆ ಮತ್ತೊಂದು ಹೊಡೆತವಾಗಿದೆ.
ಈ ಅಸಮರ್ಥತೆಯ ಭಾವನೆಯನ್ನು ಇನ್ನಷ್ಟು ಹೆಚ್ಚಿಸಿರುವುದು ಮಾನವ ಹಕ್ಕುಗಳ ಸಂಸ್ಥೆಗಳು, ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ಈಶಾನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಂತಕರು. ಹಿಂದುತ್ವ ಪಕ್ಷ ಎರಡು ಜನಾಂಗೀಯ ಗುಂಪುಗಳನ್ನು-ಬಹುಸಂಖ್ಯಾತ ಮೈತೈಗಳನ್ನು ಅಲ್ಪಸಂಖ್ಯಾತ ಕುಕಿಗಳ ವಿರುದ್ಧ - ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಿದೆ ಮತ್ತು ಇದು ಗುಜರಾತ್, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರೊಂದಿಗೆ ಸಂಘರ್ಷ ಸೃಷ್ಟಿಸಿದ ರೀತಿಯಲ್ಲಿಯೇ ಇದೆ ಎಂಬ ಟೀಕೆಗಳೇ ಎಲ್ಲೆಡೆಯಿಂದ ಕೇಳಿಬರುತ್ತಿವೆ.
ಈ ಬಗೆಯ ಸಂಘರ್ಷಗಳನ್ನೇ ಅನುಸರಿಸಿ, ಆರೆಸ್ಸೆಸ್-ಬಿಜೆಪಿಯ ಮಂದಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾರಥ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮಣಿಪುರದಲ್ಲಿ ಕುಕಿಗಳ ಮೇಲೆ ಮೈತೈಗಳ ಪ್ರಾಬಲ್ಯವನ್ನು ಸ್ಥಾಪಿಸುತ್ತಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಆದರೆ ವೀಡಿಯೊ ಹೊರಬಿದ್ದ ನಂತರ ಮಣಿಪುರದಲ್ಲಿ ಬಿಜೆಪಿಯ ತಂತ್ರಕ್ಕೆ ಹಿನ್ನಡೆಯಾಗಿದೆ. ಕುಕಿಗಳು ಬಿರೇನ್ ಸಿಂಗ್ ಸರಕಾರ ಮೈತೈ ಸಮುದಾಯದ ಜೊತೆ ಪಕ್ಷಪಾತಿಯಾಗಿದೆ ಎಂದು ಪದೇ ಪದೇ ಆರೋಪಿಸಿದ್ದಾರೆ. ಜನರ ಗುಂಪು ತಮ್ಮನ್ನು ವಿವಸ್ತ್ರಗೊಳಿಸಿದಾಗ ಮತ್ತು ಒಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿದಾಗ ಅಲ್ಲಿಯೇ ಎಲ್ಲವನ್ನೂ ನೋಡುತ್ತಿದ್ದ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ವೈರಲ್ ವೀಡಿಯೊದಲ್ಲಿರುವ ಸಂತ್ರಸ್ತ ಕುಕಿ ಮಹಿಳೆಯರು ಹೇಳಿದ್ದಾರೆ.
ನರೇಂದ್ರ ಮೋದಿ ಸರಕಾರ ಬೆಲೆ ಏರಿಕೆ, ನಿರುದ್ಯೋಗ ನಿವಾರಿಸುವಲ್ಲಿ ವಿಫಲವಾಗಿದೆ. ೨೦೨೨ರ ವೇಳೆಗೆ ಎಲ್ಲರಿಗೂ ಮನೆಗಳನ್ನು ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ತನ್ನ ಭರವಸೆಗಳನ್ನು ಈಡೇರಿಸುವುದೂ ಅದಕ್ಕೆ ಸಾಧ್ಯವಾಗಿಲ್ಲ ಎಂಬ ಟೀಕೆಗಳು ಈಗಾಗಲೇ ಸ್ವಲ್ಪಸಮಯದಿಂದ ಸರಕಾರದ ಬೆನ್ನು ಹತ್ತಿವೆ. ನಿರುದ್ಯೋಗ, ಗ್ರಾಮೀಣ ಬಡತನ ಮತ್ತು ಬೆಲೆ ಏರಿಕೆ ಸಮಸ್ಯೆಗಳು ಮೋದಿ ಸರಕಾರದ ನಿಯಂತ್ರಣವನ್ನು ಮೀರಿಹೋಗಿವೆ.
ಮೋದಿ ಮತ್ತು ಅವರ ಪಕ್ಷವನ್ನು ಕೆಣಕಲು ಹೇಳಲಾಗುವ ಎರಡನೇ ಅಂಶವೆಂದರೆ, ಭ್ರಷ್ಟಾಚಾರದ ಜೊತೆಗಿನ ಬಿಜೆಪಿಯ ನಂಟು. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರಕಾರವನ್ನು ಉರುಳಿಸಲು ಪಕ್ಷ ತನ್ನ ಹಣದ ಬಲವನ್ನು ಬಳಸಿದೆ ಎಂಬ ಅಭಿಪ್ರಾಯ ದೇಶಾದ್ಯಂತ ಇದೆ. ಠಾಕ್ರೆ ಪತನಕ್ಕೆ ಕಾರಣವಾದ ವಿದ್ಯಮಾನಗಳನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಘೋಷಿಸಿರುವುದು ಈ ಗ್ರಹಿಕೆಯನ್ನು ಬಲಪಡಿಸಿದೆ. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ಬಿಜೆಪಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಒಡೆದು ತನ್ನ ಕೆಲಸ ಸಾಧಿಸಿಕೊಂಡಿತು. ಅಜಿತ್ ಪವಾರ್ ಮತ್ತು ಅವರ ಎಂಟು ಸಹೋದ್ಯೋಗಿಗಳನ್ನು ಏಕನಾಥ್ ಶಿಂದೆ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು.
ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಹದ್ದುಗಣ್ಣಿನಡಿ ಇರುವ, ಪ್ರಧಾನಿಯೇ ಭ್ರಷ್ಟ ನಾಯಕರ ಗುಂಪು ಎಂದು ಕರೆದಿರುವ ವಿರೋಧ ಪಕ್ಷದ ಮೈತ್ರಿಕೂಟದ ಭಾಗವಾಗಿರುವ ವಿವಿಧ ಪಕ್ಷಗಳ ನಾಯಕರನ್ನು ಬಿಜೆಪಿ ತನ್ನ ಗುರಿಯಾಗಿಸಿಕೊಂಡಿದೆ. ಬಿಜೆಪಿಯಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ಮತ್ತು ಉತ್ತರದಿಂದ ದಕ್ಷಿಣದವರೆಗೆ ಅತಿ ಭ್ರಷ್ಟ ನಾಯಕರಿದ್ದಾರೆ. ಅವರು ಕೂಡ ಭ್ರಷ್ಟಾಚಾರಕ್ಕಾಗಿ ಕೇಂದ್ರೀಯ ಏಜೆನ್ಸಿಗಳ ಹದ್ದುಗಣ್ಣಿಗೆ ಗುರಿಯಾಗಿದ್ದವರು. ಆದರೆ ಬಿಜೆಪಿ ಸೇರಿದ ನಂತರ ಬಿಜೆಪಿಯ ವಾಷಿಂಗ್ ಮೆಷಿನ್ನಲ್ಲಿ ಶುಚಿಯಾಗಿ ನಿಂತಿದ್ದಾರೆ ಎಂದು ರಾಜ್ಯಸಭಾ ಸಂಸದ ಮತ್ತು ರಾಷ್ಟ್ರೀಯ ಜನತಾದಳದ ವಕ್ತಾರ ಮನೋಜ್ ಝಾ ಹೇಳಿದ್ದಾರೆ.
ಮನಮೋಹನ್ ಸಿಂಗ್ ಸರಕಾರದ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಹೇರಿ ೨೦೧೪ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈಗ ಆತಂಕದಲ್ಲಿದೆ ಎಂದು ಹೇಳಲಾಗುತ್ತದೆ. ಈಗ, ಅದರ ವಿರುದ್ಧದ ಅಸಮರ್ಥತೆ ಮತ್ತು ಭ್ರಷ್ಟಾಚಾರದ ಆರೋಪಗಳು, ಮೋದಿ ಆಡಳಿತದ ವಿರುದ್ಧ ಅಲೆಯನ್ನು ಸೃಷ್ಟಿಸಬಹುದು.
INDIA ವಾಸ್ತವಿಕ ಸಂಚಾಲಕ ಎಂದು ಪರಿಗಣಿಸಲ್ಪಟ್ಟಿರುವ ನಿತೀಶ್, ಮೈತ್ರಿಕೂಟವು ಶೀಘ್ರದಲ್ಲೇ ಸೀಟು ಹಂಚಿಕೆ ನೀತಿಯನ್ನು ಪ್ರಕಟಿಸಲಿದೆ ಎಂದು ಹೇಳಿದ್ದಾರೆ. ‘‘ನಾವು ಈ ವಿಚಾರವಾಗಿ ಚರ್ಚಿಸುತ್ತಿದ್ದೇವೆ. ಮೈತ್ರಿಕೂಟ ದೇಶ ಮತ್ತು ದೇಶವಾಸಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ಬಿಜೆಪಿ ಇತಿಹಾಸವನ್ನು ಬದಲಾಯಿಸುತ್ತಿದ್ದಾರೆ ಮತ್ತು ಮಹಾತ್ಮ ಗಾಂಧಿಯವರು ಏನನ್ನು ಪ್ರತಿಪಾದಿಸಿದರೋ ಅದನ್ನು ಅಳಿಸಿಹಾಕಲು ನೋಡುತ್ತಿದ್ದಾರೆ. ಮೋದಿ ಎಂದಾದರೂ ಬಾಪು ಅವರ ಹೆಸರನ್ನು ಹೇಳುತ್ತಾರೆಯೇ? ಬಿಜೆಪಿ ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ನಾಶ ಮಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’’ ಎಂದಿದ್ದಾರೆ ನಿತೀಶ್ ಕುಮಾರ್.
ಸ್ಥಾನಗಳನ್ನು ಗೆಲ್ಲಲು ಕೇವಲ ಲೆಕ್ಕಾಚಾರ ಸಾಕಾಗುವುದಿಲ್ಲ. ಅದರೊಂದಿಗೆ ರಾಜಕೀಯ ಭಾವನೆಗಳೂ ಬೇಕು ಎಂಬುದು ಬಿಹಾರ ಮುಖ್ಯಮಂತ್ರಿಗೆ ಗೊತ್ತೇ ಇದೆ. ೨೦೧೯ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ನಿತೀಶ್ ಮತ್ತು ಜೆಡಿಯು ಎನ್ಡಿಎ ಜೊತೆಗಿದ್ದು, ಬಿಹಾರವನ್ನು ಗೆದ್ದರು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಚುನಾವಣೆಗೆ ಡಿಟಿೆುತ್ರಿ ಮಾಡಿಕೊಂಡಾಗ ಸರಿಯಾದ ಲೆಕ್ಕಾಚಾರವನ್ನು ಹೊಂದಿದ್ದವು. ಕೇವಲ ಲೆಕ್ಕಾಚಾರವೇ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಿದ್ದರೆ, ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಬಿಜೆಪಿ ೪೦-೫೦ ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ಆದರೆ ಕೇಸರಿ ಪಕ್ಷ ೬೦ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿತು. ವೀಕ್ಷಕರು ಹೇಳುವ ಪ್ರಕಾರ ಅಲ್ಲಿ ಎಲ್ಲವೂ ಬಿಜೆಪಿಯ ಪರವಾಗಿಯೇ ಇತ್ತು.
ಈ ಬಾರಿ ಬಿಎಸ್ಪಿ ಇಲ್ಲಿಯವರೆಗೆ INDIAದ ಭಾಗವಾಗಿಲ್ಲ. ಆದರೆ ಮೈತ್ರಿಕೂಟದ ನಾಯಕರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಮತ್ತು ರಾಹುಲ್ ಗಾಂಧಿಯವರ ಪಾದಯಾತ್ರೆಯೊಂದಿಗೆ ಕಾಂಗ್ರೆಸ್ ಪುನರುಜ್ಜೀವನಗೊಳ್ಳುವುದರೊಂದಿಗೆ, ನಿತೀಶ್ ಮತ್ತು ಪ್ರತಿಪಕ್ಷದ ತಂತ್ರಜ್ಞರು ಈಗ ಲೆಕ್ಕಾಚಾರದ ಜೊತೆಗೇ ಮೈತ್ರಿಕೂಟದ ಪರವಾದ ಭಾವನೆಗಳನ್ನು ರೂಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಸತ್ತಿನಲ್ಲಿ ಪ್ರತಿಪಕ್ಷಗಳು ತೋರಿದ ಸಮನ್ವಯದಲ್ಲಿ ಅವುಗಳ ಇಂಥ ಒಟ್ಟಾಗಿ ಹೋಗುವ ಭಾವನೆ ಸ್ಪಷ್ಟವಾಗಿಯೇ ಗೋಚರಿಸುತ್ತದೆ. ೨೦೨೪ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಈ ಒಗ್ಗಟ್ಟಿನೊಂದಿಗೆ ಜನಸಾಮಾನ್ಯರ ಎದುರು ಹೋದಾಗ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ನೋಡಬೇಕಿದೆ.
(ಕೃಪೆ: thewire.in)