ದೇಶವನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಹೊಣೆಗಾರಿಕೆ ಹೊತ್ತಿರುವ ‘ನ್ಯಾಯ ಯಾತ್ರೆ’

ಭಾರತದ ಜನರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀವ್ರ ಅನ್ಯಾಯವನ್ನು ಅನುಭವಿಸುತ್ತಿರುವ ಕಾರಣ ಈ ‘ನ್ಯಾಯ ಯಾತ್ರೆ’ ಆರಂಭಿಸಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ. ಈ ಯಾತ್ರೆ ಚುನಾವಣಾ ಯಾತ್ರೆಯಲ್ಲ. ಸೈದ್ಧಾಂತಿಕವಾದುದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

Update: 2024-01-17 05:50 GMT
Editor : Thouheed | Byline : ಪೂರ್ವಿ

ರಾಹುಲ್ ಗಾಂಧಿ ಇನ್ನೊಂದು ಸುದೀರ್ಘ ಯಾತ್ರೆ ಆರಂಭಿಸಿದ್ದಾರೆ.

ಅವರ ರಾಜಕೀಯ ಜೀವನದಲ್ಲಿರುವ ಸವಾಲುಗಳ ರೂಪಕದಂತೆ ಈ ಭಾರೀ ಸವಾಲಿನ ಸುದೀರ್ಘ ಯಾತ್ರೆ ಕಾಣಿಸುತ್ತಿದೆ ಮತ್ತು ಈ ಬಹುದೊಡ್ಡ ಸವಾಲನ್ನು ಧೈರ್ಯದಿಂದ ಸ್ವೀಕರಿಸಿರುವುದೇ ಅವರ ಹೆಗ್ಗಳಿಕೆ. ಸೋಲು ಗೆಲುವಿನ ಲೆಕ್ಕಾಚಾರ ಏನಿದ್ದರೂ ಆನಂತರದ್ದು.

ಸಮಾನ ಸ್ಪರ್ಧೆಯ ಅವಕಾಶವೇ ಇಲ್ಲದ ಇಂದಿನ ರಾಜಕೀಯದಲ್ಲಿ ಸೋಲೊಪ್ಪಿಕೊಳ್ಳದೆ ಸವಾಲು ಸ್ವೀಕರಿಸುವುದೇ ಭಾರೀ ಧೈರ್ಯದ ಕೆಲಸ. ಅದನ್ನು ರಾಹುಲ್ ಗಾಂಧಿ ಮಾಡಿದ್ದಾರೆ.

ಅದೇ ದಿನ ಅವರ ಆಪ್ತ, ಅವರ ತಂಡದ ಸದಸ್ಯರಾಗಿದ್ದ ಮಿಲಿಂದ್ ದಿಯೋರಾ ಈ ಸವಾಲು ಸ್ವೀಕರಿಸುವುದು ತನ್ನಿಂದಾಗದು ಎಂದು ಪಕ್ಷವನ್ನೇ ಬಿಟ್ಟಿದ್ದಾರೆ. ಹಾಗೆಯೇ ಹಲವು ಆಪ್ತರು ಕೈ ಕೊಟ್ಟಿದ್ದಾರೆ. ಇನ್ನೂ ಕೊಡಲಿದ್ದಾರೆ. ಆದರೆ ರಾಹುಲ್ ಗಾಂಧಿ ಇವೆಲ್ಲದರಿಂದ ಧೃತಿಗೆಟ್ಟಿಲ್ಲ ಎಂಬಂತೆ ಕಾಣುತ್ತಿದೆ.

ರಾಹುಲ್ ಈವರೆಗೆ ಎದುರಿಸಿದ ಅಪಪ್ರಚಾರ, ವ್ಯಂಗ್ಯ, ವೈಯಕ್ತಿಕ ದಾಳಿ, ಅವಹೇಳನಗಳು, ಸವಾಲುಗಳು ಅಸಂಖ್ಯ. ಅಷ್ಟು ದ್ವೇಷವನ್ನು, ಅಸಹನೆಯನ್ನು ಬಹುಶಃ ಭಾರತದ ಯಾವುದೇ ರಾಜಕಾರಣಿ ಈವರೆಗೆ ಎದುರಿಸಿರಲಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗಲಿದೆ ಎನ್ನುವುದು ಕೂಡ ಅಷ್ಟೇ ನಿಜ.

ಆದರೂ ಈ ಎಲ್ಲವುಗಳ ನಡುವೆಯೇ ರಾಹುಲ್ ಗಾಂಧಿ 6,700 ಕಿ.ಮೀ. ದೂರದ ಈ ಮಹತ್ವದ ಯಾತ್ರೆಗೆ ಹೆಜ್ಜೆ ಹಾಕಲು ಆರಂಭಿಸಿದ್ದಾರೆ.

ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿನ ಚಮತ್ಕಾರವನ್ನೆಲ್ಲ ಬಳಸಿ ರಾಹುಲ್ ಗಾಂಧಿಯವರನ್ನು ವ್ಯವಸ್ಥಿತವಾಗಿ ಹಣಿಯಲು, ಅವರ ಧೈರ್ಯಗೆಡಿಸಲು ಬಿಜೆಪಿಯೂ ಸೇರಿದಂತೆ ಸಂಘದ ಇಡೀ ವ್ಯವಸ್ಥೆ ಹವಣಿಸಿದ್ದಿತ್ತು. ಈಗಲೂ ಆ ಪ್ರಯತ್ನ ಹಾಗೆಯೇ ಜಾರಿಯಲ್ಲಿದೆ. ಅದಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ.

ಆದರೆ ಅದನ್ನೆಲ್ಲ ದಾಟಿಕೊಂಡು ರಾಹುಲ್ ರಾಜಕೀಯವಾಗಿ ಪ್ರಬುದ್ಧತೆ ತೋರಿದರು. ತಮ್ಮ ಬದ್ಧತೆ ಹಾಗೂ ಹೋರಾಟದ ಕಿಚ್ಚಿನ ಮೂಲಕ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯಾದರು. ಯಾರನ್ನು ಪಪ್ಪು ಎಂದು ಆಡಿಕೊಂಡು ಬಿಜೆಪಿ ನಕ್ಕಿತ್ತೋ, ಅದೇ ರಾಹುಲ್ ಬಿಜೆಪಿಯ ಎಲ್ಲ ಹುಳುಕುಗಳನ್ನೂ ಪರಿಣಾಮಕಾರಿಯಾಗಿ ಎತ್ತಿ ತೋರಿಸುತ್ತಾ ಪ್ರಶ್ನಿಸಬಲ್ಲವರಾದರು.

ಇಡೀ ದೇಶದಲ್ಲೇ ಬಿಜೆಪಿ ಹಾಗೂ ಮೋದಿಯನ್ನು ಸಮರ್ಥವಾಗಿ ಪ್ರಶ್ನಿಸಬಲ್ಲ, ಅವರ ವೈಫಲ್ಯಗಳನ್ನು ಎತ್ತಿ ತೋರಿಸಬಲ್ಲ ಏಕೈಕ ನಾಯಕ ರಾಹುಲ್ ಗಾಂಧಿ ಎಂದು ಎಲ್ಲರೂ ಒಪ್ಪಿಕೊಳ್ಳುವಂತಹ ರಾಜಕೀಯ ಮಾಡಿದರು.

ಇದು ಮೋದಿಯವರ ಬಿಜೆಪಿಗೂ ಭಯ ಹುಟ್ಟಿಸುವ ವಿಚಾರವಾಯಿತು. ಹಾಗೆಂದೇ ಅವರನ್ನು ಸಹಿಸಲಾಗುತ್ತಿಲ್ಲ. ರಾಹುಲ್ ಅವರನ್ನು ಹಣಿಯುವ ಯತ್ನಗಳು ಹಲವು ದಿಕ್ಕುಗಳಿಂದ ನಡೆದೇ ಇವೆ.

ಇದು ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆಯ ಎರಡನೇ ಹಂತ. ಅವರ ಮೊದಲ ಭಾರತ್ ಜೋಡೊ ಯಾತ್ರೆ ದಕ್ಷಿಣದಿಂದ ಉತ್ತರದವರೆಗೆ ಸಾಗಿತ್ತು.

ಮೊದಲ ಯಾತ್ರೆ 2022ರ ಸೆಪ್ಟಂಬರ್ 7ರಂದು ದಕ್ಷಿಣ ತುದಿಯ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 150 ದಿನಗಳ ಕಾಲದ ಸುದೀರ್ಘ ನಡೆಯ ಮೂಲಕ 12 ರಾಜ್ಯ, ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ 3,500 ಕಿ.ಮೀ. ಸಾಗಿತ್ತು.

ಕರ್ನಾಟಕದಲ್ಲೂ 21 ದಿನಗಳ ಕಾಲ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದರು. ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಉತ್ತರ ಪ್ರದೇಶ, ದಿಲ್ಲಿ, ಪಂಜಾಬ್ ಮೂಲಕ ಕೊನೆಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಯಾತ್ರೆ ಸಮಾರೋಪಗೊಂಡಿತ್ತು.

ಬಿಜೆಪಿಯವರು ಮತ್ತು ಸಂಘಿಗಳಿಂದ ಪಪ್ಪು ಎಂಬ ವ್ಯವಸ್ಥಿತ ಅಪಪ್ರಚಾರಕ್ಕೆ ತುತ್ತಾಗಿದ್ದ ವ್ಯಕ್ತಿ ಅದೇ ಮಂದಿಗೆ ತಮ್ಮ ಅಂತಸತ್ವವೇನು ಎಂಬುದನ್ನು ಆ ಯಾತ್ರೆಯ ಮೂಲಕ ತೋರಿಸಿದ್ದರು.

ಓರ್ವ ವ್ಯಕ್ತಿ ಅರ್ಧ ವರ್ಷಕ್ಕೂ ಹೆಚ್ಚು ಕಾಲ ದೇಶದ ತುಂಬಾ ಕಾಲ್ನಡಿಗೆ ಮಾಡುತ್ತಾರೆ, ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ - ಎಲ್ಲೂ ನಿಲ್ಲದೆ ನಡೆಯುತ್ತಾರೆ, ಜನರ ಜೊತೆ ಬೆರೆಯುತ್ತಾರೆ ಎಂದರೆ ಅದು ಸಣ್ಣ ವಿಚಾರವಲ್ಲ.

ಈಗ ಜನವರಿ 14ರಿಂದ ಮತ್ತೆ ಎರಡು ತಿಂಗಳಿಗೂ ಹೆಚ್ಚು ಕಾಲ ಪೂರ್ವದಂಚಿನ ಮಣಿಪುರದ ಥೌಬಲ್ ಜಿಲ್ಲೆಯ ಖಂಗ್‌ಜೋಮ್‌ನಿಂದ ‘ಭಾರತ ಜೋಡೊ ನ್ಯಾಯ ಯಾತ್ರೆ’ ಆರಂಭವಾಗಿದೆ. ಈ ಯಾತ್ರೆ ಪೂರ್ವದಿಂದ ಪಶ್ಚಿಮದವರೆಗೂ ಸಾಗುತ್ತಿದೆ.

ಮೋದಿ ನೇತೃತ್ವದ ಸರಕಾರದ 10 ವರ್ಷದ ಆಡಳಿತಾವಧಿಯ ಅನ್ಯಾಯ ಕಾಲವನ್ನು ಅಂತ್ಯಗೊಳಿಸುವ ಸಂಕಲ್ಪದೊಂದಿಗೆ ರಾಹುಲ್ ಗಾಂಧಿ ಈ ನ್ಯಾಯ ಯಾತ್ರೆ ಕೈಗೊಂಡಿದ್ದಾರೆ. ಮಣಿಪುರದಿಂದ ಮುಂಬೈವರೆಗಿನ ಈ ಎರಡನೇ ಆವೃತ್ತಿಯ ಈ ಯಾತ್ರೆ ಮಾರ್ಚ್ 20 ಅಥವಾ 21ರಂದು ಮುಂಬೈನಲ್ಲಿ ಮುಗಿಯಲಿದೆ.

11 ರಾಜ್ಯಗಳ 110 ಜಿಲ್ಲೆಗಳಲ್ಲಿ 100 ಲೋಕಸಭಾ ಕ್ಷೇತ್ರಗಳು ಹಾಗೂ 337 ವಿಧಾನಸಭಾ ಕ್ಷೇತ್ರಗಳಾದ್ಯಂತ ಒಟ್ಟು 6,713 ಕಿ.ಮೀ. ದೂರ 67 ದಿನಗಳ ಕಾಲ ಯಾತ್ರೆ ಸಾಗಲಿದೆ. ಬಸ್ಸು ಹಾಗೂ ಕಾಲ್ನಡಿಗೆಯಲ್ಲಿ ಯಾತ್ರೆ ಇರಲಿದೆ.

ಮಣಿಪುರದ ಖಂಗ್‌ಜೋಮ್ ಯುದ್ಧ ಸ್ಮಾರಕ ಸ್ಥಳದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ ಉದ್ಘಾಟಿಸಿ ಮಾತನಾಡಿದ ರಾಹುಲ್ ಗಾಂಧಿ, ಮಣಿಪುರದ ಸಂಕಟದ ಬಗ್ಗೆ ಮಾತನಾಡುತ್ತಲೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿ ಇಷ್ಟೊಂದು ಹಿಂಸೆ ನಡೆಯುತ್ತಿದ್ದರೂ ಪ್ರಧಾನಿ ಕಣ್ಣೀರು ಒರೆಸಲು ಬರಲಿಲ್ಲ ಎಂದು ರಾಹುಲ್ ಟೀಕಿಸಿದ್ದಾರೆ. ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರ ರಾಜ್ಯದಲ್ಲಿ ಶಾಂತಿ ಹಾಗೂ ಸಹಬಾಳ್ವೆ ಪುನರ್ ಸ್ಥಾಪಿಸುವ ಭರವಸೆಯನ್ನು ರಾಹುಲ್ ನೀಡಿದ್ದಾರೆ.

ಭಾರತದ ಜನರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀವ್ರ ಅನ್ಯಾಯವನ್ನು ಅನುಭವಿಸುತ್ತಿರುವ ಕಾರಣ ಈ ‘ನ್ಯಾಯ ಯಾತ್ರೆ’ ಆರಂಭಿಸಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ. ಈ ಯಾತ್ರೆ ಚುನಾವಣಾ ಯಾತ್ರೆಯಲ್ಲ. ಸೈದ್ಧಾಂತಿಕವಾದುದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ನಿರುದ್ಯೋಗ, ಹಣದುಬ್ಬರ ಮತ್ತು ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳನ್ನು ಯಾತ್ರೆಯ ಮೂಲಕ ಕಾಂಗ್ರೆಸ್ ಪ್ರಸ್ತಾಪಿಸಲಿದೆ.

ಇಡೀ ದೇಶ ವಿಚಿತ್ರ ತಲ್ಲಣದಲ್ಲಿ ಇರುವ ಹೊತ್ತು ಇದು. ಪ್ರಜಾಸತ್ತೆ ಎಲ್ಲ ದಿಕ್ಕುಗಳಿಂದಲೂ ಅಪಾಯವನ್ನು ಎದುರಿಸುತ್ತಿರುವ ಹೊತ್ತು. ಸಾಂವಿಧಾನಿಕ ವ್ಯವಸ್ಥೆ ಮತ್ತು ಸ್ವಾಯತ್ತ ಸಂಸ್ಥೆಗಳೆಲ್ಲವನ್ನೂ ಅಧಿಕಾರದಲ್ಲಿರುವವರು ದುರ್ಬಳಕೆ ಮಾಡಿಕೊಳ್ಳುತ್ತ, ವಿಪಕ್ಷಗಳೇ ಇಲ್ಲದ ಸ್ಥಿತಿಯನ್ನು ಸೃಷ್ಟಿಸುತ್ತ, ಅತ್ಯಂತ ಕರಾಳತೆಗೆ ಕಾರಣವಾಗಿರುವ ಸನ್ನಿವೇಶ ಇದು. ಇಂಥ ಹೊತ್ತಲ್ಲಿ ಬರೀ ತನಗಾಗಿ ಕಾಂಗ್ರೆಸ್ ಪಕ್ಷ ಈ ಯಾತ್ರೆಯನ್ನು ಕೈಗೊಳ್ಳುತ್ತಿಲ್ಲ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕಿದೆ.

ಇದನ್ನು ನ್ಯಾಯ ಯಾತ್ರೆ ಎಂದು ಕರೆಯಲಾಗಿದೆ. ಇದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯದ ಕಡೆಗಿನ ನಡಿಗೆಯಾಗುವ ಭರವಸೆಯಂತೆ ಕಾಣುತ್ತಿದೆ.

ಮೀಡಿಯಾಗಳು ಆಳುವವರ ಬಳಿ ಇರುವಾಗ, ಈ ದೇಶದ ತನಿಖಾ ಏಜನ್ಸಿಗಳಂಥ ಸ್ವಾಯತ್ತ ಸಂಸ್ಥೆಗಳು ಆಳುವವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವಾಗ, ಪ್ರಶ್ನಿಸುವವರನ್ನು ದಮನಿಸುವ ನೀತಿ ನಿರಂತರವಾಗಿ ಜಾರಿಯಲ್ಲಿರುವಾಗ ಜನರ ಎದುರಲ್ಲಿ, ಜನರ ಜೊತೆಯಲ್ಲಿ ನ್ಯಾಯದ ಕುರಿತ ಮಾತುಕತೆ, ನ್ಯಾಯದ ಹುಡುಕಾಟ ನಡೆಯಬೇಕಿದೆ.

ಜೊತೆಗೆ ಜನತೆಗೂ ನ್ಯಾಯ ಕೊಡಿಸುವ ದಿಸೆಯಲ್ಲಿನ ಯತ್ನಗಳು ಈ ನ್ಯಾಯ ಯಾತ್ರೆಯ ಮೂಲಕ ನಡೆಯುವಂತೆ ಕಾಣುತ್ತಿವೆ.

ಜನರ ಬಳಿ ಹೋಗುವುದು, ಜನರ ಜೊತೆ ಸಂವಾದ ನಡೆಸುವುದು, ಅವರ ಸಂಕಟಗಳನ್ನು ಆಲಿಸುವುದು. ಅವರಿಗೆ ಬೇಕಿರುವುದೇನು ಎಂಬುದನ್ನು ಅವರ ಅಂಗಳದಲ್ಲಿಯೇ ನಿಂತು ಅರ್ಥ ಮಾಡಿಕೊಳ್ಳುವುದು. ಬಳಿಕ ಅದನ್ನು ತಮ್ಮ ಪಕ್ಷದ ಪ್ರಣಾಳಿಕೆಯೊಳಗೆ ತಂದು, ಅಧಿಕಾರಕ್ಕೆ ಬಂದಲ್ಲಿ ಮೊದಲು ಅದನ್ನು ಈಡೇರಿಸುವುದು ಇವೆಲ್ಲದರ ಹಿನ್ನೆಲೆಯಲ್ಲಿ ಈ ಯಾತ್ರೆ ಒಂದು ತಪಸ್ಸಿನ ಸ್ವರೂಪ ಪಡೆಯುತ್ತದೆ.

ಸಂಸತ್ತಿನಲ್ಲಿ ಹೇಗೆ ವಿಪಕ್ಷಗಳ ಸದಸ್ಯರನ್ನು ದಾಖಲೆಯ ಸಂಖ್ಯೆಯಲ್ಲಿ ಅಮಾನತು ಮಾಡಲಾಯಿತು? ಆ ಮೂಲಕ ಪ್ರಜಾಸತ್ತೆಯ ಮೌಲ್ಯಗಳನ್ನೇ ಹೇಗೆ ಬದಿಗೆ ತಳ್ಳಲಾಯಿತು?, ಜನಾದೇಶವಿಲ್ಲದಿರುವಾಗಲೂ, ಜನಮತದಿಂದ ಗೆದ್ದ ಸರಕಾರವನ್ನು ಬೀಳಿಸಿ, ಅಡ್ಡದಾರಿಯಿಂದ ಅಧಿಕಾರ ಹಿಡಿಯುವುದೂ ನಡೆಯುತ್ತಿದೆ ಎಂದರೆ, ಚುನಾವಣೆಗೆ ಇರುವ ಅರ್ಥವೇನು?

ವಿಪಕ್ಷಗಳ ಸರಕಾರಗಳು ಅಧಿಕಾರದಲ್ಲಿರುವ ಸಿಎಂಗಳಿಗೆ ಈ.ಡಿ. ನೋಟಿಸ್ ಕಳಿಸುತ್ತ ಅವರ ಮೇಲೆ ತನಿಖೆಯ ತೂಗುಕತ್ತಿಯಿಡುವ ಮೂಲಕ, ಅವರನ್ನು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾರದಂತೆ ಹೇಗೆ ಕಾಡಲಾಗುತ್ತಿದೆ?

ವಿಪಕ್ಷಗಳಲ್ಲಿದ್ದು ಪ್ರಶ್ನಿಸುವವರ ವಿರುದ್ಧ ತನಿಖಾ ಏಜನ್ಸಿಗಳನ್ನು ಬಳಸಿ ದಮನಿಸುವ ಯತ್ನ, ಆ ಮೂಲಕ ಅವರು ಬಿಜೆಪಿಯೊಂದಿಗೆ ಸಹಕರಿಸುವಂಥ ಇಲ್ಲವೆ ಬಿಜೆಪಿಯನ್ನೇ ಸೇರುವಂಥ ಸನ್ನಿವೇಶವನ್ನು ಹೇಗೆ ಸೃಷ್ಟಿಸಲಾಗುತ್ತಿದೆ?

ಕಡೆಗೆ ಸರಕಾರಿ ನೌಕರರನ್ನೂ ಸರಕಾರದ ಸಾಧನೆಗಳನ್ನು ಜನರ ಮುಂದೆ ಬಣ್ಣ ಕಟ್ಟಿ ಹೇಳಲು ಬಳಸುವ ಮಟ್ಟಕ್ಕೆ ಸರಕಾರ ಹೋಗಿದೆ ಎಂದಾದರೆ, ಇದೆಷ್ಟು ಭಂಡತನ ಮತ್ತು ಅನೈತಿಕ?

ಇಂಥ ಹಲವು ಪ್ರಶ್ನೆಗಳು ಕಾಡುತ್ತಿರುವ ಹೊತ್ತಿನಲ್ಲಿ ರಾಹುಲ್ ಗಾಂಧಿಯವರ ಭಾರತ ಜೋಡೊ ನ್ಯಾಯ ಯಾತ್ರೆ ಶುರುವಾಗಿದೆ.

ಜನರು ಇದನ್ನು ಹೇಗೆ ಗ್ರಹಿಸಲಿದ್ದಾರೆ, ಭಾರತ ಜೋಡೊ ನ್ಯಾಯ ಯಾತ್ರೆಯಿಂದ ಕಾಂಗ್ರೆಸ್ ಪಕ್ಷ ಹಾಗೂ ‘ಇಂಡಿಯಾ’ ಒಕ್ಕೂಟಕ್ಕೆ ಬಲ ಸಿಕ್ಕೀತೆ ಎಂಬುದು ಸದ್ಯದ ಕುತೂಹಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪೂರ್ವಿ

contributor

Similar News