ಬಸವಣ್ಣನವರ ವಚನಗಳಲ್ಲಿ ಆರೋಗ್ಯ ವಿಚಾರಗಳು

Update: 2025-04-30 12:20 IST
ಬಸವಣ್ಣನವರ ವಚನಗಳಲ್ಲಿ ಆರೋಗ್ಯ ವಿಚಾರಗಳು
  • whatsapp icon

ಜೀವದ ಉಗಮ ನೀರಿನಲ್ಲಿ. ಅಲ್ಲಿಂದ ಪ್ರಾರಂಭವಾದ ಜೀವಸಂಕುಲ, ಜಲ-ಭೂಜಲ-ಭೂಮಿಯಲ್ಲಿ ವಿಕಾಸದ ಮೆಟ್ಟಲನ್ನು ಏರಿ ಮನುಷ್ಯನಲ್ಲಿ ಪರ್ಯಾವಸಾನಗೊಂಡಿದೆ. ನೀರಿನಲ್ಲಿ ಉಗಮವಾದ ಜೀವ ನೀರನ್ನು ತನ್ನ ಹೊರ ಆವರಣವಾಗಿ ಪಡೆದಿತ್ತು. ಮೇಲ್ಮಟ್ಟದ ಜೀವವರ್ಗ ನೀರನ್ನು ತನ್ನ ಒಳ ಆವರಣದಲ್ಲಿ ರಕ್ತದಂತೆ ಪಡೆದು, ಅದರ ನಿರಂತರ ಪರಿಚಲನೆಯಿಂದ ಜೀವನ ನಡೆಸುತ್ತದೆ. ಈ ಮಾತಿನ ಅರಿವು ಶಿವಶರಣರಿಗೆ ಹನ್ನೆರಡನೇ ಶತಮಾನದಲ್ಲಿ ಇದ್ದುದು ನಿಜಕ್ಕೂ ಅಚ್ಚರಿಯ ಸಂಗತಿ. ಈ ಜಗತ್ತಿನ ಸೃಷ್ಟಿಗೆ ಕಾರಣಗಳಾದ ಪಂಚಮಹಾಭೂತಗಳು ಯಾರ ಸ್ವತ್ತೂ ಅಲ್ಲ. ಅವುಗಳಿಗೆ ಯಾವ ಎಲ್ಲೆಕಟ್ಟಿಲ್ಲ. ಅವು ಯಾವುದೇ ಜಾತಿ ಭೇದವಿಲ್ಲದೆ ಜನಪದಕ್ಕೆ ಸೇರಿರುವ ಅಂಶವನ್ನು ಬಸವಣ್ಣನವರು ಚೆನ್ನಾಗಿ ವಿವರಿಸಿದ್ದಾರೆ.

ಹನ್ನೆರಡನೇ ಶತಮಾನದಲ್ಲಿ ಬಾಳಿದ ಬಸವಣ್ಣನವರು ಅಪ್ರತಿಮ ಸಮಾಜ ಸುಧಾರಕರು. ವೈಜ್ಞಾನಿಕ, ವಿಶೇಷವಾಗಿ ದೈಹಿಕ, ಮಾನಸಿಕ ವಿಜ್ಞಾನದ ಬೆಳವಣಿಗೆಯಾಗದಿದ್ದ ಆ ಕಾಲದಲ್ಲಿ ಅವರು ಮನುಷ್ಯನ ಒಳ ಹೊರಗನ್ನು ಅಗಾಧ ಸಾಮರ್ಥ್ಯದಿಂದ ಅರಿತು ಋಜು ಜೀವನ ನಡೆಸಲು ಮಾರ್ಗ ತೋರಿದರು.

ನಮ್ಮ ದೇಹದ ರಚನೆಯನ್ನು ವಿವರಿಸುತ್ತ ಅದು ‘ಎಲುಬಿನ ಮನೆಗಟ್ಟು, ತೊಗಲ ಹೊದಿಕೆ, ನರವಿನ ಹಂಜರ’ ಎಂದು ಬಸವಣ್ಣನವರು ಹೇಳಿದ್ದಾರೆ. ಜೀವ ಸೃಷ್ಟಿಯ ಬಗ್ಗೆ ಬಸವಣ್ಣನವರು ಸ್ಪಷ್ಟ ತಿಳುವಳಿಕೆ ಹೊಂದಿದ್ದರು. ಭ್ರೂಣ ಗರ್ಭಕೋಶದಲ್ಲಿ ನೆಲೆಯೂರಿ, ಪಿಂಡಗೂಸಾಗಿ ಬೆಳೆಯಲು ಸ್ತ್ರೀ ಪುಷ್ಪವತಿಯಾಗಿರಬೇಕು ಎಂಬುದನ್ನು ‘ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’ ಎಂದು ವಿವರಿಸಿರುವರು. ಆಗಲೇ ಜೀವದ ‘ಜಲಬಿಂದು’ ಆಕೆಯಲ್ಲಿ ಆಶ್ರಯ ಪಡೆದು ಹೊಸ ಜೀವಕ್ಕೆ ಜನ್ಮ ನೀಡಬಲ್ಲವಳಾಗುತ್ತಾಳೆ. ಎಲ್ಲರೂ ಜನ್ಮ ತಳೆಯುವುದು ಒಂದೇ ರೀತಿ. ಅದಕ್ಕೆ ಜಾತಿ-ಕುಲ ಭೇದವಿಲ್ಲ. ಅದಕ್ಕಾಗಿ ಅವರು ‘ಹೊಲೆಯೊಳಗೆ ಹುಟ್ಟಿ ಕುಲವನರಸುವುದೇ?’ ಎಂದು ಪ್ರಶ್ನಿಸಿರುವುದು ಸ್ವಾಭಾವಿಕವಾಗಿದೆ.

ದೇಹಕ್ಕಿಂತ ಮನಸ್ಸಿಗೆ ಹೆಚ್ಚಿನ ಸ್ಥಾನ ನೀಡಿ ವ್ಯಕ್ತಿ ಅಂತರಂಗ ಬಹಿರಂಗ ಶುದ್ಧಿ ಪಡೆದುಕೊಳ್ಳುವುದರ ಬಗ್ಗೆ ದಾರಿ ತೋರಿದರು. ಬಸವಣ್ಣನವರ ವಚನಗಳಿಂದಾಗಿ ಅವರನ್ನು ಶ್ರೇಷ್ಠ ಮನೋವಿಜ್ಞಾನಿಗಳನ್ನಾಗಿಸಿದೆ. ದೇವರನ್ನು ಕಾಣಲು ಬಸವಣ್ಣನವರು ಎಲ್ಲಿಗೂ ಹೋಗಬೇಕಿಲ್ಲ. ನಮ್ಮ ದೇಹವೇ ದೇಗುಲ ಎಂದು, ದೇಹರಚನೆಯನ್ನು ಬಳಸಿಕೊಂಡು ಹೀಗೆ ಹೇಳಿದ್ದಾರೆ:

‘‘ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರ ಹೊನ್ನ ಕಲಶವಯ್ಯಾ?’’

ನಮ್ಮ ದೇಹದ ಬೆಳವಣಿಗೆಗೆ ಶೈಶವಾವಸ್ಥೆಯಲ್ಲಿ ತಾಯಿಯ ಹಾಲು ಭದ್ರ ಬುನಾದಿಯನ್ನೊದಗಿಸುತ್ತದೆ. ಅದನ್ನು ‘ಹಸಿದಳುವ ಶಿಶುವಿಂಗೆ ತಾಯಿ ಮೊಲೆಯ ಕೊಟ್ಟರೆ ಶಿಶು ಜೀವಿಸದಿಪ್ಪುದೆ’ ಎಂದಿದ್ದಾರೆ. ಆ ‘ತಾಯಿಯ ಹಾಲು ನಂಜಾಗಲಾರದು. ಇಂದು ಆರೋಗ್ಯವನ್ನು ವಿವರಿಸುವಾಗ ಬೌದ್ಧಿಕ ಆರೋಗ್ಯಕ್ಕೆ ಮಹತ್ವ ಕೊಡುವ ಪರಿಪಾಠ ಈಚೆಗೆ ಸೇರಿಕೊಂಡಿದೆ. ವ್ಯಕ್ತಿ ಬೌದ್ಧಿಕವಾಗಿ ಬೆಳೆಯಬೇಕು ಎಂಬುದನ್ನು ಮನಗಂಡಿದ್ದ ಬಸವಣ್ಣನವರು ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ’ ಎಂದಿದ್ದಾರೆ.

ತುಂಬು ಜೀವನದ ನಂತರ ವೃದ್ಧಾಪ್ಯ ಗೋಚರಿಸುತ್ತದೆ. ಅದನ್ನು ಬಸವಣ್ಣನವರು ವಿವರಿಸುತ್ತ, ವೃದ್ಧಾಪ್ಯದ ವ್ಯಕ್ತಿಯ ಕೆನ್ನೆ ಕೂದಲು ನೆರೆದು ಗಲ್ಲ ಸುಕ್ಕುಗಟ್ಟುತ್ತದೆ. ದೇಹ ಜರ್ಜರಿತವಾಗುತ್ತದೆ.‘ಹಲ್ಲು ಹೋಗಿ, ಬೆನ್ನು ಬಾಗಿ ಅನ್ಯರಿಗೆ ಹಂಗಾಗಿ’ ಬಿಡುತ್ತಾನೆ. ಆಧಾರ ಪಡೆಯಲು ಕಾಲ ಕೆಳಗೆ ಕೈಯನೂರಿ ಕೋಲು ಹಿಡಿಯಬೇಕಾಗುತ್ತದೆ.

ಮನಸ್ಥಿತಿಯ ಅಸ್ಥಿರತೆ ದೇಹದ ಆರೋಗ್ಯದ ಮೇಲೆ ತನ್ನ ದುಷ್ಟಭಾವ ಬೀರುತ್ತದೆ. ಅದಕ್ಕಾಗಿ ಬಸವಣ್ಣನವರು ಹೀಗೆ ಧೈರ್ಯ ನೀಡುತ್ತಾರೆ.

‘‘ಅಂಜದಿರು, ಅಳುಕದಿರು, ಕುಂದದಿರು, ಕುಸಿಯದಿರು

ಏನೋ ಎಂತೋ ಎಂದು ಚಲಿಸದಿರು...’’

ನಮ್ಮ ಮನಸ್ಸು ಒಂದು ಕಡೆ ಸ್ಥಿರವಾಗಿ ನಿಲ್ಲದೆ, ಕೊಂಬೆಯ ಮೇಲಿರುವ ಕೋತಿಯಂತೆ ಒಂದು ಕಡೆ ನಿಲ್ಲದೆ ಅತ್ತಿಂದಿತ್ತ ನೆಗೆದಾಡುತ್ತಿರುತ್ತದೆ. ಅತ್ತಿಂದಿತ್ತ ಹರಿದಾಡುವ ಮನಸ್ಸು, ಒಂದು ಕಡೆ ಕೇಂದ್ರೀಕರಿಸಲು ಅವಕಾಶ ಮಾಡಿಕೊಡದೇ ಇರುವುದನ್ನು ಬಸವಣ್ಣನವರು ಹೀಗೆ ವರ್ಣಿಸಿದ್ದಾರೆ.

‘‘ಕೊಂಬಿನ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು

ನಿಂತಲ್ಲಿ ನಿಲಲೀಯದೆನ್ನ ಮನವು

ಹೊಂದಿದಲ್ಲಿ ಹೊಂದಲೀಯದೆನ್ನ ಮನವು’’

ದೇಹವನ್ನು ಒಂದು ಕಡೆ ಇರಿಸಬಹುದು. ಆದರೆ ಮನಸ್ಸಿಗೆ ಬೇಡಿ ಹಾಕಿ ನಿಲ್ಲಿಸಲಿಕ್ಕೆ ಆಗದು ಎಂಬುದನ್ನು ಹೀಗೆ ಬಸವಣ್ಣನವರು ಹೇಳಿದ್ದಾರೆ: ‘‘ಎನ್ನ ಕಾಯಕ್ಕೆ ಕಾಹ ಹೇಳುವಲ್ಲದೆ ಮನಕ್ಕೆ ಕಾಹ ಹೇಳುವರಿಲ್ಲಯ್ಯ’’. ಮನುಷ್ಯನೊಳಗೆ ಚಂಚಲತೆಯೊಟ್ಟಿಗೆ ದೌರ್ಬಲ್ಯಗಳೂ ಸೇರಿಕೊಂಡಿದ್ದನ್ನು ಕಂಡು: ‘‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ

ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯಾ’’

ಎಂದಿದ್ದಾರೆ. ವ್ಯಕ್ತಿಯ ಒಳಗೂ-ಹೊರಗೂ , ಅಂತರಂಗ-ಬಹಿರಂಗ ಒಂದೇ ರೀತಿ ಇಲ್ಲವಾದಲ್ಲಿ ಜೀವನಕ್ಕೆ ಯಾವ ಅರ್ಥವೂ ಇಲ್ಲ.

ಪಂಚೇಂದ್ರಿಯಗಳ ಪ್ರಭಾವ ವರ್ತುಲದಲ್ಲಿ ಸಿಲುಕಿ, ಜೀವನದಲ್ಲಿ ತೊಂದರೆಗೀಡಾಗುತ್ತೇವೆ ಎಂಬುದನ್ನು ಬಸವಣ್ಣನವರು ಹೀಗೆ ಚಿತ್ರಿಸಿದ್ದಾರೆ:

‘‘ಸಂಸಾರವೆಂಬ ಸರ್ಪ ಮುಟ್ಟಲು

ಪಂಚೇಂದ್ರಿಯ ವಿಷಯವೆಂಬ ವಿಷಯದಿಂದ

ಆನು ಮುಂದುಗೆಟ್ಟೆನಯ್ಯ’’

ಅದರ ಬಗ್ಗೆ ಮತ್ತಷ್ಟು ವಿವರಣೆ ನೀಡುತ್ತಾ, ಪಂಚೇಂದ್ರಿಯಗಳ ಪ್ರಭಾವ ದಿಂದ ಮನಸ್ಸು ಮತ್ತು ದೇಹ ವಿಕಾರಗೊಳ್ಳುವುದರ ಬಗ್ಗೆ ಹೀಗೆ ಹೇಳಿದ್ದಾರೆ:

‘‘ವಿಕಳನಾದೆನು ಪಂಚೇಂದ್ರಿಯ ಸಪ್ತಧಾತುವಿನಿಂದ,

ಮತಿಗೆಟ್ಟೆನು ಮನದ ವಿಕಾರದಿಂದ

ಸ್ಮತಿಗೆಟ್ಟೆನು ಕಾಯವಿಕಾರದಿಂದ...’’

ಒಳ್ಳೆಯ ಆಹಾರ-ಪಾನೀಯ ದೇಹಕ್ಕೆ ಒಳ್ಳೆಯದು. ಅದನ್ನು ಬಿಟ್ಟು ಅಲ್ಲವಾದುದನ್ನು ಸೇವಿಸಬಾರದು. ಅವು ನಿಷಿದ್ಧ ಎಂಬುದನ್ನು ಸಾರುತ್ತ,

‘‘ಹಸಿದು ಎಕ್ಕೆಯ ಕಾಯ ಮೆಲಬಹುದೆ?

ನೀರಡಿಸಿ ವಿಷವ ಕುಡಿಯಬಹುದೆ?’’

ಎಂದು ಪ್ರಶ್ನಿಸುತ್ತಾರೆ. ನಾವು ಊಟ ಮಾಡುವುದರಲ್ಲಿ ಹಿತ ಮಿತವನ್ನು ಕಾಯ್ದುಕೊಳ್ಳಬಹುದು. ಆಹಾರ ಪಥ್ಯ ಮಾಡದಿದ್ದಲ್ಲಿ ದೇಹ ಬೊಜ್ಜಿನಿಂದ ಸ್ಥೂಲಗೊಂಡು ಅನೇಕ ರೋಗಗಳಿಗೆ ತಾಣವಾಗಿ ಪರಿಣಮಿಸುತ್ತದೆ. ನಾವು ಕೇವಲ ದೇಹದ ಬಯಕೆ ತೀರಿಸಲು ಇಲ್ಲವೇ ಬಾಯಿ ಸವಿಗಾಗಿ ಉಣ್ಣಬಾರದು ಎಂಬುದನ್ನು ಪ್ರತಿಪಾದಿಸುತ್ತ,

‘‘ಒಡಲ ಕಳವಳಕ್ಕೆ ಬಾಯಿಸವಿಗೆ

ಬಯಸಿ ಉಂಡೆನಾದರೆ ನಿಮ್ಮ ತೊತ್ತಿನ ಮಗನಲ್ಲ’’ ಎಂದಿದ್ದಾರೆ.

ನಾವು ಯಾವ ರೀತಿಯ ಬೀಜವನ್ನೂರುತ್ತೇವೆಯೋ ಅದರ ಫಲ ದೊರೆಯುತ್ತದೆ. ಬೀಜದ ಕಸುವು ಅದರ ಬೆಳವಣಿಗೆಗೆ ಚೇತನವನ್ನು ನೀಡುತ್ತದೆ. ಅದಕ್ಕೆ ಬೇರೆ ಯಾವುದೇ ವಸ್ತುವನ್ನು ಹೊರಗಿನಿಂದ ಸೇರಿಸುವ ಪ್ರಯತ್ನ ಮಾಡಿದರೂ ಅದು ತನ್ನ ಮೂಲ ಸ್ವರೂಪವನ್ನೇ ಪಡೆಯುವುದು ಎಂಬುದನ್ನು ಸಾರುತ್ತ ಬಸವಣ್ಣನವರು ಹೀಗೆ ಹೇಳಿದ್ದಾರೆ:

‘‘ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ

ಆಕಳ ಹಾಲನೆರೆದು ಜೇನುತುಪ್ಪವ ಹೊಯ್ದರೆ

ಸಹಿಯಾಗಬಲ್ಲುದೆ, ಕಹಿಯಹುದಲ್ಲವೆ?’’

ಜೀವನದಲ್ಲಿ ನಾವು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಬಸವಣ್ಣನವರು ನೀತಿ ಸಂಹಿತೆಯನ್ನು ಅನುಶಾಸನದಂತೆ ನೀಡಿರುವರು. ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ವ್ಯಕ್ತಿ ತನ್ನ ಅಂತರಂಗವನ್ನು, ಬಹಿರಂಗವನ್ನು ಶುದ್ಧ ಮಾಡಬಹುದೆಂದು ಸಾರಿದರು. ಆ ಅನುಶಾಸನದ ಸೂತ್ರಗಳಿವು: ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ....ಈ ಸರಳ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು, ಅವುಗಳನ್ನು ಅನುಸರಿಸುವ ವ್ಯಕ್ತಿಯ ಒಳ-ಹೊರಗು ಪರಿಶುದ್ಧ ಮತ್ತು ಪಾರದರ್ಶಕ.

ಮಾನವ ದೇಹವನ್ನು ಛೇದಿಸಿ ಒಳಾಂಗಗಳ ರಚನೆ ಮತ್ತು ಕಾರ್ಯಕ್ರಿಯೆ ಗಳನ್ನು ತಿಳಿಯದ ಕಾಲದಲ್ಲಿ ಬಸವಣ್ಣನವರು ಜೀವಿಸಿದ್ದರು. ಅವರು ತಮ್ಮ ಜ್ಞಾನದಿಂದ ದೇಹದ ಒಳಹೊರಗನ್ನು ತಿಳಿದುಕೊಂಡಿದ್ದರು ಎಂಬುದಕ್ಕೆ ಅವರ ವಚನಗಳೇ ಸಾಕ್ಷಿಯಾಗಿವೆ. ಅಲೆಕ್ಸಾಂಡರ್ ಪೋಪ್ ಹೇಳಿದಂತೆ ‘ಮಾನವ ಕುಲದ ಸಮರ್ಪಕ ಅಧ್ಯಯನ ಮನುಷ್ಯ’. ಬಸವಣ್ಣನವರ ವಚನಗಳಲ್ಲಿ ದೇಹವನ್ನು ಸದೃಢಗೊಳಿಸುವ ಬಗ್ಗೆ ಸೂಚನೆಗಳಿವೆ. ‘ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯಿತು’ ಎಂಬಲ್ಲಿ ಉಷಃಕಾಲದ ನೀಲಾತೀತ ಕಿರಣಗಳು ದೇಹದ ಮೇಲೆ ಸುಪ್ರಭಾವ ಹೊಂದಿರುವುದನ್ನು ಪ್ರತಿಬಿಂಬಿಸಿವೆ. ಅವುಗಳ ಫಲವಾಗಿ ಚರ್ಮದಡಿಯಲ್ಲಿ ಡಿ ಜೀವಸತ್ವ ರೂಪಗೊಳ್ಳುತ್ತದೆ.

ಹೀಗೆ ಹನ್ನೆರಡನೆಯ ಶತಮಾನದಲ್ಲಿ, ಜಗತ್ತಿನ್ನೂ ಕತ್ತಲೆಯಲ್ಲಿ ಮುಳುಗಿ ದ್ದಾಗ, ಬಸವಣ್ಣನವರು ವೈಜ್ಞಾನಿಕ ಸಾಧನಗಳಿಲ್ಲದೆ ವೈಜ್ಞಾನಿಕ ಸತ್ಯಗಳನ್ನು ಬಯಲಿಗೆಳೆಯುವುದರಲ್ಲಿ ಯಶಸ್ವಿಯಾಗಿದ್ದರು. ಅವರು ಕಂಡ ವೈಜ್ಞಾನಿಕ ಸತ್ಯಗಳು, ಆರೋಗ್ಯ ವಿಚಾರಗಳು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News