ಹಿಂದಿ-ಹಿಂದೂ-ಹಿಂದುಸ್ಥಾನ: ಸಂಸ್ಕೃತೀಕರಣ ಕಾರ್ಯಸೂಚಿ

ಹಿಂದಿ ಹೇರಿಕೆಯು ಒಗ್ಗೂಡಿಸುವ ಭಾಷೆಯಾಗದೆ ಸ್ಥಳೀಯ ಭಾಷೆಗಳ ಐಕ್ಯತೆಯನ್ನು, ಸಹಜೀವನವನ್ನು ಬೇರ್ಪಡಿಸುವ ರಾಜಕೀಯ ಅಸ್ತ್ರವಾಗಿದೆ. ಒಮ್ಮೆ ಭಾಷೆಯ ಅವನತಿ ಸಾಧಿಸಿದರೆ ಅದು ಮುಂದೆ ಪ್ರಾದೇಶಿಕತೆಯ ಕಣ್ಮರೆಗೆ ಮುನ್ನುಡಿಯಾಗುತ್ತದೆ. 2,333 ಭಾಷೆಗಳನ್ನು ಅಂಚಿಗೆ ತಳ್ಳಲು ಹಿಂದಿಯನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಆ ಮೂಲಕ ರಾಜ್ಯಗಳ ಸ್ವಾಯತ್ತತೆ, ಅಸ್ಮಿತೆಯನ್ನು ನಾಶ ಮಾಡುತ್ತಾರೆ. ಐಕ್ಯತೆ ಸಾಧಿಸುವ ಬದಲಿಗೆ ಒಕ್ಕೂಟನ್ನು ಛಿದ್ರಗೊಳಿಸಲು ಹಿಂದಿಯನ್ನು ಸಾಧನವಾಗಿ ಪ್ರಯೋಗಿಸಲಾಗುತ್ತಿದೆ.

Update: 2024-09-22 09:45 GMT

ಹಿನ್ನೆಲೆ

ಸಂವಿಧಾನ ರಚನೆ ಸಮಿತಿ ನಡೆಸಿದ ಅನೇಕ ಸಭೆಗಳಲ್ಲಿ ಅಧಿಕೃತ ಭಾಷೆಗಳ ಕುರಿತು ಚರ್ಚೆ, ವಾಗ್ವಾದಗಳಾದವು. ಈ ಚರ್ಚೆಯಲ್ಲಿ ಭಾಗವಹಿಸಿದ ಆರ್.ವಿ.ಧೂಲೆಕರ್ ‘‘ಹಿಂದಿ ಮಾತನಾಡಲು ಬರದವರಿಗೆ ಭಾರತದಲ್ಲಿ ಬದುಕಲು ಅವಕಾಶವಿಲ್ಲ’’ ಎಂದು ಮಾತನಾಡಿದ್ದರು. ಸಾಕಷ್ಟು ವಿರೋಧದ ನಡುವೆಯೂ 14 ಸೆಪ್ಟಂಬರ್ 1949ರಂದು ಒಂದು ಮತದಿಂದ ಹಿಂದಿಯನ್ನು ಅಧಿಕೃತ ಭಾಷೆಯೆಂದು ಆಯ್ಕೆ ಮಾಡಲಾಯಿತು. ರಾಜಿಸೂತ್ರವಾಗಿ ಮುಂದಿನ 15 ವರ್ಷಗಳವರೆಗೆ ಇಂಗ್ಲಿಷ್ ಅಧಿಕೃತ ಸಹ ಭಾಷೆಯಾಗಿ ಮುಂದುವರಿಯುತ್ತದೆ ಎಂದೂ ನಿರ್ಧರಿಸಲಾಯಿತು. 1959ರಲ್ಲಿ ಆಗಿನ ಪ್ರಧಾನಿ ನೆಹರೂ ‘‘ಎಲ್ಲಿಯವರೆಗೂ ಹಿಂದಿ ಭಾಷಿಕರಲ್ಲದ ಜನತೆ ಬಯಸುತ್ತಾರೋ ಅಲ್ಲಿಯವರೆಗೆ ಇಂಗ್ಲಿಷ್ ಅಧಿಕೃತ ಭಾಷೆಯಾಗಿ ಮುಂದುವರಿಯುತ್ತದೆ’’ ಎಂದು ಆಶ್ವಾಸನೆ ನೀಡಿದ್ದರು. ಆದರೆ ಮೇಲಿನ ಅವಧಿ ಮುಗಿದ ನಂತರ 1965ರಲ್ಲಿ ಅಧಿಕೃತ ಭಾಷೆಗಳ ಕಾಯ್ದೆ ಜಾರಿಗೊಂಡಿತು. ಇದು ಮುಂದೆ ದಕ್ಷಿಣ ರಾಜ್ಯಗಳಲ್ಲಿ ಅದರಲ್ಲಿಯೂ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಗೆ ಕಾರಣವಾಯಿತು. ಜನವರಿ 1965ರಂದು ಮಧುರೈನಲ್ಲಿ ಪ್ರಾರಂಭಗೊಂಡ ಪ್ರತಿಭಟನೆಯು ನಂತರ ಮದ್ರಾಸ್(ಈಗಿನ ಚೆನ್ನೈ) ನಗರಕ್ಕೂ ವ್ಯಾಪಿಸಿಕೊಂಡಿತು. ಪತ್ರಕರ್ತ ರಾಮಕೃಷ್ಣನ್ ಅವರು ‘ಹಿಂದಿ ಹೇರಿಕೆಯ ವಿರುದ್ಧದ ಹೋರಾಟಕ್ಕೆ ತಮಿಳುನಾಡಿನಲ್ಲಿ ದೀರ್ಘ ಇತಿಹಾಸವಿದೆ. ಆಗಸ್ಟ್ 1937ರಂದು ಆಗಿನ ಮದ್ರಾಸ್ ಪ್ರೆಸಿಡೆನ್ಸಿಯ ನೇತೃತ್ವ ವಹಿಸಿದ್ದ ಸಿ.ರಾಜಗೋಪಾಲಾಚಾರಿ ಪ್ರೌಢ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದರು. ಆಗಿನ್ನೂ ಜಸ್ಟಿಸ್ ಪಕ್ಷದಲ್ಲಿದ್ದ ಪೆರಿಯಾರ್ ಅವರು ಈ ನಿರ್ಧಾರದ ವಿರುದ್ಧ ಚಳವಳಿ ಆರಂಭಿಸಿದರು, ಕೆಲ ತಿಂಗಳು ಕಳೆದು ಸಿ.ರಾಜಗೋಪಾಲಾಚಾರಿ ರಾಜೀನಾಮೆ ನೀಡಿದ ನಂತರ 1940ರಲ್ಲಿ ಬ್ರಿಟಿಷ್ ಸರಕಾರವು ಹಿಂದಿಯನ್ನು ಐಚ್ಛಿಕ ಭಾಷೆಯಾಗಿ ಆದೇಶ ಹೊರಡಿಸಿತು. ಜನವರಿ 1965ರಲ್ಲಿ ಹಿಂದಿ ಹೇರಿಕೆಯ ವಿರುದ್ಧ ಎರಡನೇ ಚಳವಳಿ ಪ್ರಾರಂಭವಾಯಿತು’ ಎಂದು ಬರೆಯುತ್ತಾರೆ. ಹೀಗಾಗಿ ದಕ್ಷಿಣದ ರಾಜ್ಯಗಳ ವಿರೋಧದ ಕಾರಣಕ್ಕೆ ಹಿಂದಿಯ ಜೊತೆಗೆ ಇಂಗ್ಲಿಷ್ ಸಹ ಅಧಿಕೃತ ಭಾಷೆ ಎಂದು ಸುತ್ತೋಲೆ ಹೊರಡಿಸಿದರು. ನಂತರ 1963ರ ಅಧಿಕೃತ ಭಾಷೆಗಳ ಕಾಯ್ದೆಯನ್ನು ಆಧರಿಸಿ 1976ರಲ್ಲಿ 30 ಸಂಸದರ(ಲೋಕಸಭೆಯಿಂದ 20, ರಾಜ್ಯಸಭೆಯಿಂದ 10) ಸಮಿತಿಯನ್ನು ರಚಿಸಲಾಯಿತು. ಆಡಳಿತದಲ್ಲಿ ಹಿಂದಿಯನ್ನು ಅಧಿಕೃತವಾಗಿ ಬಳಸುವುದನ್ನು ಜಾರಿಗೊಳಿಸುವುದರ ಕುರಿತಂತೆ ವರದಿಯನ್ನು ಸಹ ಸಲ್ಲಿಸಿತು.

ವರ್ತಮಾನದ ಬಿಕ್ಕಟ್ಟುಗಳು

ಅಕ್ಟೋಬರ್ 2022ರಂದು ಅಮಿತ್ ಶಾ ಅಧ್ಯಕ್ಷತೆಯ ಅಧಿಕೃತ ಭಾಷೆಗಳ ಸಂಸದೀಯ ಸಮಿತಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ 11ನೇ ವರದಿಯನ್ನು ಸಲ್ಲಿಸಿದೆ. ಸಂಸದೀಯ ಸಮಿತಿಯು ಹಿಂದಿ ಮಾತನಾಡುವ ರಾಜ್ಯಗಳಲ್ಲಿರುವ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಮತ್ತು ಇತರ ರಾಜ್ಯಗಳಲ್ಲಿ ಸ್ಥಳಿಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕೆಂದು ಶಿಫಾರಸು ಮಾಡಿದೆ. ಇಂಗ್ಲಿಷನ್ನು ಬೋಧನಾ ಮಾಧ್ಯಮವಾಗುಳ್ಳ ತಾಂತ್ರಿಕ ಮತ್ತು ಇತರ ಶಿಕ್ಷಣ ಸಂಸ್ಥೆಗಳು ಕ್ರಮೇಣವಾಗಿ ಇಂಗ್ಲಿಷ್‌ನಿಂದ ಹೊರಬಂದು ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಅಳವಡಿಸಿಕೊಳ್ಳಬೇಕೆಂದು ಹೇಳಿದೆ. ಕೇಂದ್ರ ಸರಕಾರದ ಉದ್ಯೋಗಿಗಳು ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಹಿಂದಿಯನ್ನು ಬಳಸದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಅವರ ಭಡ್ತಿ, ವೇತನದಲ್ಲಿ ಹೆಚ್ಚಳವನ್ನು ತಡೆಹಿಡಿಯಬೇಕೆಂದು ಶಿಫಾರಸು ಮಾಡಿದ್ದಾರೆ. ಇದು ಭಾಷಾ ದೌರ್ಜನ್ಯ ಎನ್ನುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಮೋದಿ-ಶಾ ಅವರು ಇಲ್ಲಿನ ಸ್ಥಳೀಯ ಭಾಷೆಗಳನ್ನು ಹಿಂದಿಯ ಅಧೀನ ಭಾಷೆಗಳನ್ನಾಗಿ ಬಿಂಬಿಸಲು ತಿಣುಕಾಡುತ್ತಿದ್ದಾರೆ. ಈ ಅತಿಕ್ರಮಣದ ಮೂಲಕ ಎರಡು ಸಾವಿರಕ್ಕೂ ಹೆಚ್ಚಿನ ಭಾಷೆಗಳನ್ನು ಅಲ್ಪಸಂಖ್ಯಾತ ಭಾಷೆಗಳು, ಹಿಂದಿ ಮಾತ್ರ ಬಹುಸಂಖ್ಯಾತ ಭಾಷೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಮುಂದುವರಿದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿಯಲ್ಲಿ ಮಾತ್ರ ಬರೆಯುವಂತಹ ಅನಿವಾರ್ಯ ಸೃಷ್ಟಿಸುತ್ತಿದ್ದಾರೆ. 5 ಆಗಸ್ಟ್ 2023ರಂದು ಅಧಿಕೃತ ಭಾಷೆಗಳ ಕುರಿತಾದ ಸಂಸದೀಯ ಸಮಿತಿಯ ಸಭೆಯಲ್ಲಿ ಆಗಿನ ಗೃಹಮಂತ್ರಿ ಅಮಿತ್ ಶಾ ಯಾವುದೇ ವಿರೋಧವಿಲ್ಲದೆ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳಬೇಕು ಎಂದು ಹೇಳಿಕೆ ನೀಡಿದಾಗ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ‘‘ನಾನು ಶಾ ಅವರ ಹೇಳಿಕೆಯನ್ನು ಬಲವಾಗಿ ವಿರೋಧಿಸುತ್ತೇನೆ, ಹಿಂದಿ ಭಾಷಿಕರಲ್ಲದವರ ದನಿಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ, ಯಾವುದೇ ಬಗೆಯ ಹಿಂದಿ ಹೇರಿಕೆಯನ್ನು ತಮಿಳುನಾಡು ವಿರೋಧಿಸುತ್ತದೆ’’ ಎಂದು ಹೇಳಿದ್ದರು. ಆದರೆ ಈ ಸಂಸದೀಯ ಸಮಿತಿಯು ಹಿಂದಿಯನ್ನು ಅಧಿಕೃತ ಭಾಷೆ ಎಂದು ನಿರ್ಧರಿಸುವ ಮುನ್ನ ದಕ್ಷಿಣ, ಪೂರ್ವ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ್ದರೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.

ಹಿಂದಿಯನ್ನು ಅಧಿಕೃತ ಭಾಷೆ, ರಾಷ್ಟ್ರ ಭಾಷೆ ಎಂದು ಹೇರುವುದರಿಂದ ಸ್ಥಳೀಯ ಭಾಷೆಗಳ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು? ಪ್ರೊ. ರಿತ್ವಿಕ್ ಬ್ಯಾನರ್ಜಿ ‘‘ಸ್ಥಳೀಯ ಭಾಷೆ ಮತ್ತು ಹಿಂದಿಯ ನಡುವಿನ ಭಾಷಿಕ ಅಂತರವನ್ನು ಅಧ್ಯಯನ ಮಾಡಬೇಕಿದೆ. ಈ ಭಾಷಾ ಸಂಬಂಧಿತ ಅಂತರವು ಒಂದು ತಾಯ್ನುಡಿಯ ಜನರು ಮತ್ತೊಂದು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾವರ್ಥ್ಯವನ್ನು ಅರಿಯಲು ಸಹಕಾರಿಯಾಗುತ್ತದೆ. ಬರ್ಮೇರಿ ಅಥವಾ ಮಗಧ ನುಡಿಯು ಭಾಷಿಕವಾಗಿ ಹಿಂದಿಗೆ ಹತ್ತಿರವಿದೆ. ಈ ತಾಯ್ನುಡಿಯನ್ನು ಮಾತನಾಡುವವರಿಗೆ ಹಿಂದಿ ಕುರಿತು ತುಂಬಾ ಹೇವರಿಕೆ ಇರುವುದಿಲ್ಲ. ಆದರೆ ಹಿಂದಿಯೊಂದಿಗೆ ಯಾವುದೇ ಸಂಬಂಧವಿಲ್ಲದ ತಮಿಳು, ತೆಲುಗು ಭಾಷೆಗಳನ್ನು ಮಾತನಾಡುವ ಜನರಿಗೆ ಅದರ ಹೇರುವಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಗಧ ಭಾಷೆ ಮಾತನಾಡುವ ಜನತೆ ಹಿಂದಿಯಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಭಾವಿಸುವುದಿಲ್ಲ, ಆದರೆ ತೆಲುಗು ಮತ್ತು ಇತರ ದಕ್ಷಿಣ ಭಾಷಿಕದ ಜನರಿಗೆ ಹಿಂದಿ ತಮ್ಮ ಅಸ್ಮಿತೆಗೆ ಕಂಟಕ ಎಂದು ವಿಶ್ಲೇಷಿಸುತ್ತಾರೆ.ಇದರ ಇನ್ನೊಂದು ಅರ್ಥವೆಂದರೆ ತೆಲುಗು ಭಾಷೆಗಿಂತ ಮಗಧ ಭಾಷೆಗೆ ಹಿಂದಿಯಿಂದ ಹೆಚ್ಚಿನ ಅಪಾಯವಿದೆ. ಅಂದರೆ ಹಿಂದಿಗೆ ಹತ್ತಿರವಾದಷ್ಟು ಆ ನುಡಿಯನ್ನು, ಸಂಸ್ಕೃತಿಯನ್ನು ವಸಾಹತೀಕರಣಗೊಳಿಸುವುದು ಸುಲಭವಾಗುತ್ತದೆ’’ ಎಂದು ಬರೆಯುತ್ತಾರೆ. ಮೃಣಾಲ್ ಪಾಂಡೆಯವರು ‘‘ರಾಷ್ಟ್ರಭಾಷೆ ಎನ್ನುವುದೇ ಒಂದು ಅಪಾರ್ಥವಾಗಿದೆ. ಭಾಷೆ ಎನ್ನುವುದೇ ಆಡು ನುಡಿಗಳಾದ ಬ್ರಜ್, ಅವಧಿ, ಮೈಥಿಲಿ, ಭೋಜಪುರಿ, ಉರ್ದು, ಖಡಿಬೋಲಿ ಮುಂತಾದವುಗಳ ಮಿಶ್ರಣವಾಗಿದೆ’’ ಎಂದು ಹೇಳುತ್ತಾರೆ.

ಭಾರತವು ಭಾಷಿಕವಾಗಿ ಬಹುಸಂಸ್ಕೃತಿಯ ದೇಶವಾಗಿದೆ. ಅದರದೇ ವಿಶಿಷ್ಟತೆಯಿದೆ. ಭಾರತೀಯರು ಅಂದಾಜು 2,333 ಭಾಷೆಗಳನ್ನು ಮಾತನಾಡುತ್ತಾರೆ. ಸಂವಿಧಾನದ 8ನೇ ಅನುಬಂಧದಲ್ಲಿ 22 ಅಧಿಕೃತ ಭಾಷೆಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಭಾರತದಲ್ಲಿ ಅನುಸೂಚಿತವಲ್ಲದ ಸುಮಾರು 100 ಭಾಷೆಗಳಿವೆ. ಪ್ರತೀ ಭಾಷೆಯನ್ನು ಅಂದಾಜು 10,000 ಜನಸಂಖ್ಯೆ ಮಾತನಾಡುತ್ತಾರೆ. 1,800 ತಾಯ್ನುಡಿಗಳಿವೆ. ಸಾವಿರಾರು ಸಂಖ್ಯೆಯ ಆಡುನುಡಿಗಳಿವೆ. ಈ ಭಾಷೆಗಳಲ್ಲಿ ಹಿಂದಿ ಸಹ ಒಂದು ಭಾಷೆಯೇ ಹೊರತು ಅದು ಪ್ರಧಾನನೆಲೆಯ ಭಾಷೆಯಲ್ಲ. ಭಾಷಾತಜ್ಞರ ಪ್ರಕಾರ ಪ್ರತಿಯೊಂದು ಭಾಷೆಯೂ ಬಹುಭಾಷಿಕವಾಗಿರುತ್ತದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಇಲ್ಲಿನ ಸ್ಥಳೀಯ ಬಹುಭಾಷಿಕತೆ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕವೇ ತಮ್ಮ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿವೆ. ಭೌಗೋಳಿಕವಾಗಿ ಗಡಿಭಾಗದ ಕುರಿತಂತೆ, ನೀರಿನ ಹಂಚಿಕೆಯ ಕುರಿತಂತೆ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯವಿರಬಹುದೇ ಹೊರತು ಬಹುಭಾಷಿಕವಾಗಿ ಮತ್ತಷ್ಟು ಹತ್ತಿರವಾಗಿ ಬೆಸೆದುಕೊಂಡಿವೆ. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಅನ್ಯೋನ್ಯತೆಯನ್ನು ಉಳಿಸಿಕೊಂಡು ಬರಲಾಗಿದೆ. ದಕ್ಷಿಣದ ಕನ್ನಡ, ತಮಿಳು, ಮಲಯಾಳಂ, ತೆಲುಗು, ಪೂರ್ವದ ಭೋಜಪುರಿ, ಮೈಥಿಲಿ, ಅವಧಿ, ಗೊಂಡ್, ಮೇವಾಢಿ ಮುಂತಾದ ಪ್ರಾಚೀನ ಇತಿಹಾಸವುಳ್ಳ ಭಾಷೆಗಳ ಮೇಲೆ ಕೇವಲ ಇನ್ನೂರು ವರ್ಷಗಳಷ್ಟು ಹಳೆಯದಾದ ಹಿಂದಿಯನ್ನು ಅಧಿಕೃತ ಭಾಷೆ ಎಂದು ಹೇರುವುದು ಕ್ರೌರ್ಯ ಎನಿಸಿಕೊಳ್ಳುತ್ತದೆ. ಕನ್ನಡ ತಾಯ್ನುಡಿ ಮಾತನಾಡುವವರು ತಮಿಳು ತಾಯ್ನುಡಿಯವರೊಂದಿಗೆ, ಅಸ್ಸಾಮಿನವರು ಮಲಯಾಳಂ ಭಾಷಿಕರೊಂದಿಗೆ ಸಂವಹನ ನಡೆಸಲು ತಮ್ಮದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ತಮಗೆ ಸುಲಭವೆನಿಸುವ ಸಂಪರ್ಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕನ್ನಡಿಗರು ಅಸ್ಸಾಮಿನವರೊಂದಿಗೆ ಮಾತನಾಡಲು ವಿಭಿನ್ನವಾದ ಸಂಪರ್ಕ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ಹಿಂದಿಯನ್ನು ಸಂಪರ್ಕ ಭಾಷೆ ಎಂದು ಹೇರುವುದು ಭಾಷಾ ಫ್ಯಾಶಿಸಂ ಎನಿಸಿಕೊಳ್ಳುತ್ತದೆ.

ಭಾಷಾ ತಜ್ಞರು ಈ ಹಿಂದಿ ಹೇರಿಕೆಯು 19ನೇ ಶತಮಾನದ ಸುಮಾರಿಗೆ ಉತ್ತರಪ್ರದೇಶದಲ್ಲಿ ಪ್ರಾರಂಭವಾಯಿತು ಎಂದು ಹೇಳುತ್ತಾರೆ(ಸ್ಕ್ರಾಲ್.ಇನ್-3, ಜೂನ್ 2019) ಆಗ ಕೆಲ ಹಿಂದೂಗಳು ಆಡಳಿತ ಭಾಷೆಯಾಗಿದ್ದ ಉರ್ದು (ಇಂಗ್ಲಿಷ್ ಜೊತೆಗೆ) ಬದಲಿಗೆ ಹಿಂದಿಯನ್ನು ಬಳಸಬೇಕು ಎಂದು ತಗಾದೆ ತೆಗೆದರು. ಗಾರ್ಗಾ ಚಟರ್ಜಿಯವರು ‘ಈ ರಾಜಕಾರಣದ ಫಲವಾಗಿ ಉರ್ದು ಮತ್ತು ಹಿಂದಿ ಅನುಕ್ರಮವಾಗಿ ಮುಸ್ಲಿಮ್ ಮತ್ತು ಹಿಂದೂಗಳ ಪ್ರತಿನಿಧಿತ್ವಗಳಾದವು. ಈ ಪ್ರಕ್ರಿಯೆಯಲ್ಲಿ ಹಿಂದಿಗೆ ಒತ್ತು ಕೊಡುವುದು ನಿರ್ಣಾಯಕ ಎಂದು ಪರಿಗಣಿಸಲಾಯಿತು. ಉತ್ತರ ಭಾರತದ ಅನೇಕ ಭಾಷೆಗಳಾದ ಅವಧಿ, ಭೋಜಪುರಿ, ರಾಜಸ್ಥಾನಿ, ಬ್ರಜ್ ಮುಂತಾದವುಗಳನ್ನು ಹಿಂದಿಯೊಳಗೆ ವಿಲೀನಗೊಳಿಸಿದರು. ಭಾರತದ ಭಾಷೆಗಳಲ್ಲಿಯೇ ಹಿಂದಿ ಅತ್ಯಂತ ತರುಣ ನುಡಿಯಾಗಿದೆ. 19ನೇ ಶತಮಾನದ ಕೊನೆಯ ಭಾಗದಲ್ಲಿ ಮೊದಲ ಹಿಂದಿ ಕಾದಂಬರಿ ಪ್ರಕಟವಾಯಿತು.. ಇದಕ್ಕೂ ಮೊದಲು ಮಧ್ಯಯುಗೀನ ಕಾಲದಲ್ಲಿ ಕಬೀರ, ರಹೀಮರಂತಹ ಸಂತರು ಒಳಗೊಂಡಂತೆ ಅನೇಕರಿಗೆ ಬ್ರಜ್ ಭಾಷೆಯು ಸಾಹಿತ್ಯದ ಭಾಷೆಯಾಗಿತ್ತು. ಅವಧಿ ನುಡಿಯು ರಾಮಚರಿತಮಾನಸ ಗ್ರಂಥದ ಭಾಷೆಯಾಗಿದೆ. ಆದರೆ ಇನ್ನೂರು ವರ್ಷಗಳ ಹಳೆಯದಾದ ಇಂದಿನ ಹಿಂದಿ ಐನೂರು ವರ್ಷಗಳಷ್ಟು ಹಳೆಯದಾದ ಈ ನುಡಿಗಳೆಲ್ಲವನ್ನೂ ತನ್ನೊಳಗೆ ಜೀರ್ಣಿಸಿಕೊಂಡಿದೆ’ ಎಂದು ಬರೆಯುತ್ತಾರೆ.

ಉತ್ತರ ಭಾರತದಲ್ಲಿ ಹೆಚ್ಚುತ್ತಾ ಹೋದ ಜನಸಂಖ್ಯೆಯ ಕಾರಣದಿಂದಲೂ ಹಿಂದಿ ಭಾಷೆಯು ಬೆಳೆದಿದೆ. 1971ರ ಜನಗಣತಿಯಿಂದ 2011ರ ಜನಗಣತಿವರೆಗಿನ ಅವಧಿಯಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ.37ರಿಂದ ಶೇ.44ರಷ್ಟಾಗಿದೆ.

ಹಿಂದಿ ಏಕಾಂಗಿಯಾಗಿ ಹಬ್ಬಿಕೊಳ್ಳುತ್ತಿಲ್ಲ, ಜೊತೆಗೆ ಬ್ರಾಹ್ಮಣೀಕರಣದ ಮುಖವಾಗಿರುವ ಸಂಸ್ಕೃತವನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಬರುತ್ತಿದೆ. ಇದು ಮುಖ್ಯ ಅಪಾಯವಾಗಿದೆ. ಮೃಣಾಲ್ ಪಾಂಡೆಯವರು ‘ಸಂಸ್ಕೃತವನ್ನು ಮುಂದುವರಿದ ಜಾತಿಗಳು ಹಾಗೂ ಅಲ್ಲಿನ ಪುರುಷರು ಬಳಸುವ ಕ್ಲಾಸಿಕ್ ಶೈಲಿ ಹಾಗೂ ಇನ್ನುಳಿದ ಜಾತಿಗಳು ಮತ್ತು ಮಹಿಳೆಯರ ನಡುವಿನ ಜigಟossiಚಿ(ಒಂದೇ ಸಮುದಾಯದೊಳಗೆ ಒಂದೇ ಭಾಷೆಯ ಎರಡು ವಿಧಗಳನ್ನು ಮಾತನಾಡುವುದು) ಎಂದು ಪರಿಗಣಿಸಲಾಗಿದೆ. ಇತರ ಜಾತಿಗಳು ಮತ್ತು ಮಹಿಳೆಯರಿಗೆ ಸಂಸ್ಕೃತ ಬಳಕೆಯನ್ನು ನಿಷೇಧಿಸಲಾಗಿತ್ತು’ ಎಂದು ಬರೆಯುತ್ತಾರೆ. ಮೋದಿ-ಶಾ ಜೋಡಿ ಜಾರಿಗೊಳಿಸಲು ಬಯಸುತ್ತಿರುವ ಹಿಂದಿಯು ತನ್ನೊಳಗೆ ಸಂಸ್ಕೃತ ಎನ್ನುವ ಬ್ರಾಹ್ಮಣೀಕರಣವನ್ನು ಹೊತ್ತುಕೊಂಡಿದೆ. ಹಿಂದಿಯ ನೆಪದಲ್ಲಿ ಮರಳಿ ಸಂಸ್ಕೃತ ಭಾಷೆಯನ್ನು ಜಾರಿಗೊಳಿಸುವುದು ಹಾಗೂ ಪ್ರಾಚೀನ ಭಾರತದ ಗುರುಕುಲ ಪದ್ಧತಿಯನ್ನು ಮರಳಿ ಸ್ಥಾಪಿಸುವುದು ಇವರ ದೀರ್ಘಕಾಲೀನ ಯೋಜನೆ. ಇದು ಆರೆಸ್ಸೆಸ್‌ನ ಕಾರ್ಯಸೂಚಿಯಾಗಿದೆ. ಆರೆಸ್ಸೆಸ್ ರಾಜಕಾರಣ ಮೂಲಕ ಸಂಸ್ಕೃತವನ್ನು ದೇವನಾಗರಿ ಎಂದೂ ಹಿಂದೂಗಳ ಭಾಷೆಯೆಂದು ಕಥನ ಕಟ್ಟಿದ್ದಾರೆ. ಇದನ್ನು ಮುಂದುವರಿಸಿ ಉರ್ದು ವಿದೇಶಿ ಮುಸ್ಲಿಮರ ಭಾಷೆ ಮತ್ತು ಇತರ ಸ್ಥಳೀಯ ಭಾಷೆಗಳು ಹಿಂದಿಯ ಒಳನುಡಿಗಳು ಎಂದು ಅಧಿಕೃತವಾಗಿ ದಾಖಲಿಸುತ್ತಿದ್ದಾರೆ. ಇದರ ಮೂಲಕ ಮೊದಲ ಹಂತದ ಸಿದ್ಧತೆ ನೆರವೇರಿಸಿಕೊಳ್ಳುತ್ತಾರೆ. ಇದು ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಹಿಂದಿಯು ಸಂಸ್ಕೃತದ ಅಧೀನ ಭಾಷೆ ಎಂದು ಕರೆದು ಈ ದೇವನಾಗರಿಯನ್ನು ಅಧಿಕೃತಗೊಳಿಸುತ್ತಾರೆ. ಈ ಕಾರ್ಯಸೂಚಿಗೆ ಉದಾಹರಣೆಯಾಗಿ 2015ರಲ್ಲಿ ಭೋಪಾಲ್‌ನಲ್ಲಿ ಆಯೋಜನೆಗೊಂಡಿದ್ದ ಹಿಂದಿ ಭಾಷಾ ಸಮಾವೇಶದಲ್ಲಿ ಉರ್ದು, ಪರ್ಷಿಯನ್ ಹಾಗೂ ಗ್ರಾಮೀಣ ಭಾಗದ ಆಡುಮಾತುಗಳನ್ನು ಒಳಗೊಂಡ ಹಿಂದಿಯನ್ನು ಶುದ್ಧೀಕರಿಸಬೇಕಿದೆ ಎನ್ನುವ ಚರ್ಚೆ ನಡೆಸಿದ್ದರು.

ಉಪಸಂಹಾರ

ಹಿಂದಿ ಹೇರಿಕೆಯು ಒಗ್ಗೂಡಿಸುವ ಭಾಷೆಯಾಗದೆ ಸ್ಥಳೀಯ ಭಾಷೆಗಳ ಐಕ್ಯತೆಯನ್ನು, ಸಹಜೀವನವನ್ನು ಬೇರ್ಪಡಿಸುವ ರಾಜಕೀಯ ಅಸ್ತ್ರವಾಗಿದೆ. ಒಮ್ಮೆ ಭಾಷೆಯ ಅವನತಿ ಸಾಧಿಸಿದರೆ ಅದು ಮುಂದೆ ಪ್ರಾದೇಶಿಕತೆಯ ಕಣ್ಮರೆಗೆ ಮುನ್ನುಡಿಯಾಗುತ್ತದೆ. 2,333 ಭಾಷೆಗಳನ್ನು ಅಂಚಿಗೆ ತಳ್ಳಲು ಹಿಂದಿಯನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಆ ಮೂಲಕ ರಾಜ್ಯಗಳ ಸ್ವಾಯತ್ತತೆ, ಅಸ್ಮಿತೆಯನ್ನು ನಾಶ ಮಾಡುತ್ತಾರೆ. ಐಕ್ಯತೆ ಸಾಧಿಸುವ ಬದಲಿಗೆ ಒಕ್ಕೂಟವನ್ನು ಛಿದ್ರಗೊಳಿಸಲು ಹಿಂದಿಯನ್ನು ಸಾಧನವಾಗಿ ಪ್ರಯೋಗಿಸಲಾಗುತ್ತಿದೆ. ಪ್ರಾಚೀನವಾಗಿರುವ, ಬಹುಸಂಸ್ಕೃತಿಯ ಭಾಗವಾಗಿರುವ ಸಾವಿರಾರು ಸ್ಥಳೀಯ ಭಾಷೆಗಳನ್ನು ಹಿಂದಿಯ ಉಪಭಾಷೆಗಳು ಎಂದು ಕರೆದು ಆ ಮೂಲಕ ಹಿಂದೂ ರಾಷ್ಟ್ರೀಯತೆಯನ್ನು ಜಾರಿಗೊಳಿಸಲು ಮೋದಿ ನೇತೃತ್ವದ ಮೈತ್ರಿ ಸರಕಾರವು ಎಲ್ಲಾ ಬಗೆಯ ಅಧಿಕಾರವನ್ನು ಪ್ರಯೋಗಿಸುತ್ತಿದೆ. ಹಿಂದಿಯ ಛಧ್ಮವೇಷದಲ್ಲಿ ಆರೆಸ್ಸೆಸ್‌ನ ಬ್ರಾಹ್ಮಣೀಕರಣದ ರೂಪವಾದ ಸಂಸ್ಕೃತವನ್ನೂ ಸಹ ಪುನರ್ ಸ್ಥಾಪಿಸುವ ಹುನ್ನಾರಗಳು ನಡೆಯುತ್ತಿವೆ. ಹಿಂದಿ-ಸಂಸ್ಕೃತದ ಈ ಸಾಂಸ್ಕೃತಿಕ ರಾಜಕಾರಣ ಮತ್ತಷ್ಟು ಅಪಾಯಕಾರಿ. ದನಿಯಿರುವ ಕನ್ನಡ, ತಮಿಳು, ಮಲಯಾಳಂ, ತೆಲುಗು, ಮರಾಠಿ, ಬಂಗಾಳಿ, ಒಡಿಯಾ ಮತ್ತು ದನಿಯಿಲ್ಲದ ಅವಧಿ, ಮೈಥಿಲಿ, ಭೋಜಪುರಿ, ಉರ್ದು ಮುಂತಾದ ಸ್ಥಳೀಯ ಭಾಷೆಗಳು ಒಗ್ಗಟ್ಟಾಗಿ ಈ ಸಂಸ್ಕೃತೀಕರಣವನ್ನು ಹಿಮ್ಮೆಟ್ಟಿಸಬೇಕಾಗಿದೆ. ಹಿಂದಿ ಭಾಷೆಯನ್ನು ಬಳಸಿಕೊಂಡು ಅದಕ್ಕೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಬಂಧಗಳನ್ನು ಕಲ್ಪಿಸಿ ಸಂಸ್ಕೃತದ ಮೂಲಕ ಸಾಂಸ್ಕೃತಿಕ ಮುಖವಾಡ ತೊಡಿಸಿ ಆರ್ಯರ ಸಿದ್ಧಾಂತಕ್ಕೆ ಜೀವ ತುಂಬುವ ಈ ವೈದಿಕಶಾಹಿ ಪರವಾದ ನಡೆಯನ್ನು ಸೋಲಿಸಬೇಕಿದೆ.

ಯಾವುದೇ ಬಗೆಯ ಜ್ಞಾನ ಬೆಳೆಸುವ, ಉದ್ಯೋಗ ಕಲ್ಪಿಸುವ, ಶೈಕ್ಷಣಿಕ ಉದ್ದೇಶವು ಇಲ್ಲದ ಹಿಂದಿಯನ್ನು ತಮ್ಮ ರಾಜಕೀಯ ಆಶೋತ್ತರಗಳಿಗೆ, ಒಕ್ಕೂಟ ವ್ಯವಸ್ಥೆಯ ನಾಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ನವ ವಸಾಹತುಶಾಹಿ ಧೋರಣೆಯಾಗಿದೆ. ಆದರೆ ಈ ಸರ್ವಾಧಿಕಾರದ ವಿರುದ್ಧ ಪ್ರಾದೇಶಿಕ ಹೋರಾಟಗಳು ಶುರುವಾಗಿದೆ. ಇದು ಒಕ್ಕೂಟ ವ್ಯವಸ್ಥೆಯ ಕುರಿತು ಭರವಸೆ ಮೂಡಿಸುವಂತಿವೆ. ತಮಿಳುನಾಡು ರಾಜ್ಯದಲ್ಲಿ ಭಾಷಾ ವಿಚಾರಕ್ಕೆ, ಹಿಂದಿ ಹೇರಿಕೆ ವಿರೋಧಿ ಜನಾಂದೋಲನಕ್ಕೆ, ದ್ರಾವಿಡ ಅಸ್ಮಿತೆಗೆ ಸಂಬಂಧಿಸಿದಂತೆ, ಅಸ್ಸಾಮಿನಲ್ಲಿ ಸ್ಥಳೀಯರ ಅಸ್ತಿತ್ವದ ಕುರಿತು ಸಂಬಂಧಿಸಿದಂತೆ, ಕೇರಳ, ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ಸೈದ್ಧಾಂತಿಕ ಬದ್ಧತೆಯ ಕಾರಣಕ್ಕೆ ನಿರಂತರವಾಗಿ ನಡೆಸುತ್ತಿರುವ ಸಂಘರ್ಷವು ಒಕ್ಕೂಟ ವ್ಯವಸ್ಥೆಯ ಕುರಿತಾದ ಭರವಸೆಯನ್ನು ಜೀವಂತವಾಗಿಟ್ಟಿದೆ. ಈ ಪ್ರತಿರೋಧವು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಬಿ. ಶ್ರೀಪಾದ ಭಟ್

contributor

Similar News