ಕಾಫಿನಾಡಿನಲ್ಲಿ ಮಂಗಗಳ ಹಾವಳಿಯಿಂದ ಅಪಾರ ಬೆಳೆ ನಷ್ಟ : ಸಂಕಷ್ಟದಲ್ಲಿ ರೈತರು

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮಂಗಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಹಸನಾಗಿ ಬೆಳೆದು ನಿಂತಿರುವ ಬೆಳೆಯನ್ನು ತಿಂದು ಹಾಕುತ್ತಿರುವುದರಿಂದ ರೈತರು, ಬೆಳೆಗಾರರು ಬೆಳೆನಷ್ಟಕ್ಕೊಳಗಾಗುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ದಟ್ಟ ಅರಣ್ಯ, ಅಭಯಾರಣ್ಯ, ಮೀಸಲು ಅರಣ್ಯದಂತಹ ಕಾನನಗಳು ಹೆಚ್ಚಾಗಿವೆ. ಇಂತಹ ಕಾಡುಗಳಲ್ಲಿ ಅಪರೂಪದ ವನ್ಯಜೀವಿಗಳೊಂದಿಗೆ ಮಂಗಗಳೂ ಹೇರಳ ಸಂಖ್ಯೆಯಲ್ಲಿವೆ. ಇಲ್ಲಿನ ವನ್ಯಜೀವಿಗಳ ಪೈಕಿ ಮಂಗಗಳು ಕಾಡಂಚಿನ ಗ್ರಾಮ, ಊರುಗಳಲ್ಲಿರುವ ಕಾಫಿ, ಅಡಿಕೆ ತೋಟಗಳಿಗೆ ಭಾರೀ ಸಂಖ್ಯೆಯಲ್ಲಿ ದಾಳಿ ಇಟ್ಟು ಹಸನಾಗಿ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು, ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸುವಂತಾಗಿದೆ.
ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳು ಎಲ್ಲೆಂದರಲ್ಲಿ ಕಂಡು ಬರುತ್ತವೆ. ಅಡಿಕೆ ತೋಟಗಳು ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದಂತಹ ರೋಗಗಳಿಗೆ ತುತ್ತಾಗಿ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಆಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅತೀವೃಷ್ಟಿ, ಅಕಾಲಿಕ ಮಳೆಯಿಂದಾಗಿ ಬೆಳೆಗಾರರು ಬೆಳೆನಷ್ಟ ಅನುಭವಿಸುತ್ತಿದ್ದಾರೆ. ಕಾಫಿ ಬೆಳೆಗಾರರದ್ದೂ ಇದೇ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಗಳ ಮಧ್ಯೆ ಕಾಡಾನೆಗಳ ಹಾವಳಿಯಿಂದಾಗಿಯೂ ರೈತರು ಬೆಳೆ ನಷ್ಟ ಅನುಭವಿಸುವಂತಾಗಿದೆ.
ಸದ್ಯ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಕಾಫಿ, ಅಡಿಕೆ ತೋಟಗಳು ಹಸಿರಿನಿಂದ ಕಂಗೊಳಿಸುತ್ತಿರುವುದಲ್ಲದೆ ಉತ್ತಮ ಫಸಲು ಹಸನಾಗಿ ಬೆಳೆದು ನಿಂತಿದೆ. ಆದರೆ ಹೀಗೆ ಬೆಳೆದಿರುವ ಫಸಲು ಮಂಗಗಳ ಹೊಟ್ಟೆ ಸೇರುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ರೈತರು ಬೆವರು ಸುರಿಸಿ ಪೋಷಣೆ ಮಾಡಿದ ಕಾಫಿ, ಅಡಿಕೆ ತೋಟಗಳನ್ನು ಸದ್ಯ ಮಂಗಗಳು ಆಶ್ರಯತಾಣವನ್ನಾಗಿಸಿಕೊಂಡಿವೆ. ನೂರಾರು ಸಂಖ್ಯೆಯಲ್ಲಿ ಅಡಿಕೆ ತೋಟಗಳಿಗೆ ದಾಳಿ ಇಡುತ್ತಿರುವ ಮಂಗಗಳು ಅಡಿಕೆ ಹೀಚುಗಳನ್ನು ಕಿತ್ತು ಹಾಕುತ್ತಿರುವುದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರೀ ನಷ್ಟದ ಆತಂಕ ಎದುರಾಗಿದೆ. ಅಡಿಕೆಯೊಂದಿಗೆ ತೋಟಗಳಲ್ಲಿ ಬೆಳೆದ ಬಾಳೆ ಸೇರಿದಂತೆ ಇತರ ಹಣ್ಣು ಹಂಪಲುಗಳನ್ನು ತಿಂದು ಹಾಕುತ್ತಿರುವುದರಿಂದ ರೈತರ ಪಾಲಿಗೆ ಈ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಕಾಫಿ ಬೆಳೆಗಾರರನ್ನೂ ಮಂಗಗಳು ನಿದ್ದೆಗೆಡಿಸುತ್ತಿದ್ದು, ಕಾಫಿ ತೋಟಗಳಲ್ಲಿ ಇದೀಗ ಕಾಫಿ ಹೀಚು ಕಟ್ಟುತ್ತಿದ್ದು, ಮಂಗಗಳು ಈ ಹೀಚುಗಳನ್ನು ಕಿತ್ತು ತಿನ್ನುತ್ತಿರುವುದಲ್ಲದೇ ಕಾಫಿ ಗಿಡಗಳ ಚಿಗುರನ್ನು ಮುರಿದು ಹಾಕುತ್ತಾ ಕಾಫಿ ಗಿಡಗಳ ಬೆಳವಣಿಗೆಗೂ ಅಡ್ಡಿಯಾಗುತ್ತಿವೆ.
ಮಂಗಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕು, ಇಲ್ಲವೆ ಮಂಗಗಳ ಸ್ಥಳಾಂತರಕ್ಕೆ ಕ್ರಮವಹಿಸುವ ಮೂಲಕ ರೈತರು ಬೆವರು ಸುರಿಸಿ ಬೆಳೆದ ಬೆಳೆ ರಕ್ಷಣೆಗೆ ಮುಂದಾಗಬೇಕು ಎಂದು ರೈತರು, ಬೆಳೆಗಾರರು ಮನವಿ ಮಾಡಿದ್ದಾರೆ.
ಮಲೆನಾಡು ಭಾಗದಲ್ಲಿ ಹಿಂದೆ ಮಂಗಗಳ ಹಾವಳಿ ಅಷ್ಟಾಗಿ ಇರಲಿಲ್ಲ. ಸದ್ಯ ಮಂಗಗಳ ಸಂತತಿ ದುಪ್ಪಟ್ಟಾಗಿದೆ. ಅರಣ್ಯದಂಚಿನ ಗ್ರಾಮಗಳಲ್ಲಿರುವ ಕಾಫಿ, ಅಡಿಕೆ ತೋಟಗಳಿಗೆ ಭಾರೀ ಸಂಖ್ಯೆಯಲ್ಲಿ ಮಂಗಗಳು ದಾಳಿ ಇಡುತ್ತಿದ್ದು, ಬೆಳೆ ನಾಶ ಮಾಡುತ್ತಿವೆ. ಮಂಗಗಳ ಹಾವಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಬೆಳೆ ಬೆಳೆದ ನಮ್ಮಂತಹ ಸಣ್ಣ ಬೆಳೆಗಾರರಿಗೆ ಭಾರೀ ನಷ್ಟವಾಗುತ್ತಿದೆ. ಬೆಳೆದ ಬೆಳೆಗಳೆಲ್ಲವೂ ಮಂಗಗಳ ಪಾಲಾಗುತ್ತಿದ್ದು, ಮಂಗಗಳ ಹಾವಳಿ ಹೆಚ್ಚಾಗಿರುವ ಕಡೆಗಳಲ್ಲಿ ಅರಣ್ಯ ಇಲಾಖೆ ಅವುಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಕ್ರಮವಹಿಸಬೇಕು.
-ಎಸ್.ಲಿಂಗಯ್ಯ, ರೈತ, ಕಳಸ
ಮಂಗಗಳ ನಿಯಂತ್ರಣಕ್ಕೆ ರೈತರ ಹರಸಾಹಸ :
ಮಂಗಗಳ ವಿಪರೀತ ಹಾವಳಿ ನಿಯಂತ್ರಣಕ್ಕೆ ರೈತರು, ಬೆಳೆಗಾರರು ಕಾರ್ಮಿಕರನ್ನು ನೇಮಿಸಿ ಪಟಾಕಿ ಸಿಡಿಸುವುದು, ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುವಂತಹ ಕಸರತ್ತು ಮಾಡುತ್ತಿದ್ದರೂ ಮಂಗಗಳ ಹಾವಳಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಾಫಿ, ಅಡಿಕೆ ಬೆಳೆ ನಾಶ ಮಾಡುತ್ತಿರುವ ಮಂಗಗಳನ್ನು ಕೊಲ್ಲುವಂತಿಲ್ಲ, ಸೆರೆ ಹಿಡಿದು ಬೇರೆಡೆ ಸಾಗಣೆಯನ್ನೂ ಮಾಡಲು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪ್ರೇಮಿಗಳಿಂದ ವಿರೋಧ ಇರುವುದರಿಂದ ಅವುಗಳ ನಿಯಂತ್ರಣಕ್ಕೆ ರೈತರು ಹರಸಾಹಸ ಪಡುವಂತಾಗಿದೆ.