ಚುನಾವಣಾ ಆಯೋಗದ ನಡೆ ಪ್ರಾಮಾಣಿಕವಾಗಿದ್ದರೆ ಸ್ವತಂತ್ರ ಪರಿಶೋಧನೆಗೆ ಅದು ಏಕೆ ಭಯಪಡಬೇಕು?

ಈಗ ಕೇಳಿ ಬಂದಿರುವ ಗಂಭೀರ ಆರೋಪಗಳಿಗಿಂತ ಹೆಚ್ಚು, ಆ ಆರೋಪಗಳನ್ನು ಯಾರು ಮಾಡಿದ್ದಾರೆ ಎಂಬುದೇ ಆಯೋಗಕ್ಕೆ ಹೆಚ್ಚು ಮಹತ್ವದ್ದು ಎಂದು ಕಾಣುತ್ತದೆ. ಆರೋಪಗಳನ್ನು ಮಾಡಿರುವ ಪೊಲೀಸ್ ಅಧಿಕಾರಿ ಅಮಾನತುಗೊಂಡಿದ್ದಾರೆ ಎಂದು ಹೇಳುವುದರಲ್ಲೇ ಆಯೋಗ ವ್ಯಸ್ತವಾಗಿದೆ. ಆರೋಪವನ್ನು ಮಾಡುವ ವ್ಯಕ್ತಿಯ ಮೇಲೆಯೇ ಪ್ರತಿ ದಾಳಿ ಮಾಡುವುದರ ಬದಲಿಗೆ ಸತ್ಯವನ್ನು ಮುಂದಿಟ್ಟು ಸಂಶಯವನ್ನು ಪರಿಹರಿಸುವುದು ಚುನಾವಣಾ ಆಯೋಗದಂತಹ ಮಹತ್ವದ ಸಾರ್ವಜನಿಕ ಸಂಸ್ಥೆಯ ಜವಾಬ್ದಾರಿಯಾಗಿದೆ.;

Update: 2025-04-23 12:46 IST
ಚುನಾವಣಾ ಆಯೋಗದ ನಡೆ ಪ್ರಾಮಾಣಿಕವಾಗಿದ್ದರೆ ಸ್ವತಂತ್ರ ಪರಿಶೋಧನೆಗೆ ಅದು ಏಕೆ ಭಯಪಡಬೇಕು?
  • whatsapp icon

ಭಾರತದ ಚುನಾವಣಾ ಆಯೋಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಸಾಂವಿಧಾನಿಕವಾಗಿ ಬದ್ಧವಾಗಿದೆ. ದಶಕಗಳಿಂದ, ದೇಶದ ಚುನಾವಣಾ ಆಯೋಗ ವೃತ್ತಿಪರತೆ ಮತ್ತು ನಿಷ್ಪಕ್ಷನಡೆಗೆ ಖ್ಯಾತಿಯನ್ನು ಪಡೆದಿದೆ.

ಕೆಲವೊಂದು ಲೋಪದೋಷಗಳ ಆಚೆಯೂ ನಮ್ಮ ದೇಶದ ಚುನಾವಣಾ ಆಯೋಗ ಕಳೆದೊಂದು ದಶಕದ ಹಿಂದಿನವರೆಗೂ ನಿಷ್ಪಕ್ಷವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂಬ ವಿಶ್ವಾಸವನ್ನು ಗಳಿಸಿತ್ತು. ಆದರೆ ಇತ್ತೀಚಿನ ಘಟನೆಗಳು ಮತ್ತು ಆಯೋಗದ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅದರ ಪ್ರತಿಕ್ರಿಯೆಯು ಆಯೋಗದ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂಸ್ಥಿಕ ಸ್ವಾತಂತ್ರ್ಯದ ಬಗ್ಗೆ ಅನೇಕ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಮಾನತುಗೊಂಡ ಪೊಲೀಸ್ ಅಧಿಕಾರಿ ರಂಜಿತ್ ಕಸಲೆ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊ ವೈರಲ್ ಆಗಿದೆ.

‘‘ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷದ ಧನಂಜಯ್ ಮುಂಡೆ ಸರಿಯಾಗಿ ಚುನಾವಣೆ ಗೆದ್ದಿಲ್ಲ ಮತ್ತು ಮೌನವಾಗಿರಲು ನನಗೆ 10 ಲಕ್ಷ ರೂಪಾಯಿ ನೀಡಲಾಗಿತ್ತು’’ ಎಂದು ಅವರು ಆರೋಪಿಸಿದ್ದಾರೆ. ಇವಿಎಂ ಭದ್ರತೆ ಮತ್ತು ಚುನಾವಣಾ ಸಮಗ್ರತೆಯ ಕುರಿತು ದೀರ್ಘಕಾಲದಿಂದ ನಡೆಯುತ್ತಿರುವ ಚರ್ಚೆಯನ್ನು ಈ ವೀಡಿಯೊ ಮತ್ತೆ ಜೀವಂತಗೊಳಿಸಿದೆ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕಸಲೆ ಅವರ ಆರೋಪಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬಿಜೆಪಿಗೆ ಹಾಗೂ ಚುನಾವಣಾ ಆಯೋಗಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿವೆೆ.

ವೀಡಿಯೋ ವೈರಲ್ ಆದ ತಕ್ಷಣವೇ ಚುನಾವಣಾ ಆಯೋಗ ಅದರ ವಿರುದ್ಧ ಬಂದಿದ್ದ ಗಂಭೀರ ಆರೋಪಗಳನ್ನು ಅತೃಪ್ತ ಪೊಲೀಸ್ ಅಧಿಕಾರಿಯ ಆರೋಪ ಎಂದು ತಳ್ಳಿಹಾಕಿತು.

ಆ ವೀಡಿಯೊವನ್ನು ಹಂಚಿಕೊಂಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕುರಿತು ರವಿವಾರ ಪ್ರತಿಕ್ರಿಯಿಸಿರುವ ಭಾರತೀಯ ಚುನಾವಣಾ ಆಯೋಗ, ಈ ಆರೋಪ ಅಮಾನತುಗೊಂಡಿರುವ ರಂಜಿತ್ ಕಸಲೆ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಮಾಡಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಲ್ಲಗಳೆದಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅಖಿಲೇಶ್ ಯಾದವ್, ‘‘ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲು ಬಿಜೆಪಿ ಸದಸ್ಯರು ತನ್ನ ಖಾತೆಗೆ 10 ಲಕ್ಷ ರೂ. ಜಮೆ ಮಾಡಿದ್ದರು ಎಂದು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿರುವುದು ಬಿಜೆಪಿಯ ಬೃಹತ್ ಭ್ರಷ್ಟಾಚಾರವನ್ನು ಬಯಲುಗೊಳಿಸಿದೆ. ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲು ಅವರು ಯಾರನ್ನು ಬಳಸಿಕೊಳ್ಳುತ್ತಾರೆ ಎಂದು ಪ್ರಶ್ನಿಸುತ್ತಿದ್ದವರಿಗೆ ಇಂದು ಉತ್ತರ ದೊರೆತಿರಬಹುದು’’ ಎಂದು ಹೇಳಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ‘‘ಕಟ್ಟುನಿಟ್ಟನ ಕಾನೂನು ಆಡಳಿತ ಹಾಗೂ ಶಿಷ್ಟಾಚಾರದ ಮೂಲಕ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದ ವಿದ್ಯುನ್ಮಾನ ಮತ ಯಂತ್ರಗಳನ್ನು ಹೊರ ತೆಗೆಯಬಲ್ಲ ಯಾವುದೇ ಸಾಧ್ಯತೆಗಳಿರಲಿಲ್ಲ. ಈ ಆರೋಪದ ಗಂಭೀರತೆಯನ್ನು ಪರಿಗಣಿಸಿ, ಮುಖ್ಯ ಚುನಾವಣಾಧಿಕಾರಿ ಮೂಲಕ ಜಿಲ್ಲಾಧಿಕಾರಿ ಹಾಗೂ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವರದಿಯನ್ನು ಕೋರಲಾಗಿದೆ. ವರದಿ ಸ್ವೀಕರಿಸಿದ ನಂತರ, ಮುಂದಿನ ಕ್ರಮ ಕೈಗೊಳ್ಳಲಾಗುವುದು’’ ಎಂದು ಹೇಳಿದೆ.

ಇವಿಎಂಗಳ ತಿರುಚುವಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ರಂಜಿತ್ ಕಸಲೆ ಮಾಡಿದ್ದ ಆರೋಪಗಳ ವೀಡಿಯೊವನ್ನು ಶನಿವಾರ ಕಾಂಗ್ರೆಸ್ ಪಕ್ಷ ಕೂಡಾ ಎಕ್ಸ್ ನಲ್ಲಿ ಹಂಚಿಕೊಂಡಿತ್ತು. ಕಾಂಗ್ರೆಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಭಾರತೀಯ ಚುನಾವಣಾ ಆಯೋಗ, ‘‘ವಿದ್ಯುನ್ಮಾನ ಮತ ಯಂತ್ರಗಳನ್ನು ನಿರ್ವಹಿಸಲು ಅನುಸರಿಸಲಾಗಿದ್ದ ಪ್ರಕ್ರಿಯೆಯಲ್ಲಿ ಅವನ್ನು ತಿರುಚಲು ಅವಕಾಶವೇ ಇರಲಿಲ್ಲ. ಈ ಸಂಬಂಧ, ಮುಖ್ಯ ಚುನಾವಣಾಧಿಕಾರಿಯ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವರದಿ ಕೋರಲಾಗಿದ್ದು, ವರದಿಯನ್ನು ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’’ ಎಂದು ಸಮರ್ಥಿಸಿಕೊಂಡಿತ್ತು.

ಈ ಕುರಿತು ಮತ್ತೊಂದು ಪ್ರತ್ಯೇಕ ಪೋಸ್ಟ್ ಮಾಡಿದ್ದ ಭಾರತೀಯ ಚುನಾವಣಾ ಆಯೋಗ, ‘‘ಘಟನೆ ನಡೆದ ವೇಳೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆದ ರಂಜಿತ್ ಕಸಲೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕರ್ತವ್ಯದಲ್ಲಿರಲಿಲ್ಲ. ಸಾರ್ವಜನಿಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಹಾಗೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಉದ್ದೇಶದೊಂದಿಗೆ ಈ ಆರೋಪಗಳನ್ನು ಮಾಡಲಾಗಿದೆ ಎನ್ನಲಾಗಿದೆ’’ ಎಂಬ ವರದಿಯೊಂದನ್ನು ಹಂಚಿಕೊಂಡಿತ್ತು.

‘‘ಬೀಡ್ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಪ್ರಕಾರ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ಅಮಾನತುಗೊಂಡಿರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಂಜಿತ್ ಕಸಲೆ ಚುನಾವಣಾ ಕರ್ತವ್ಯದಲ್ಲಿರಲಿಲ್ಲ. ಅವರ ಈ ಆರೋಪಗಳು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಶಾಂತಿಯನ್ನು ಭಂಗಗೊಳಿಸುವ ಗುರಿ ಹೊಂದಿದ್ದು, ಸರಕಾರದ ವಿರುದ್ಧ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಉದ್ದೇಶ ಹೊಂದಿವೆ. ಕಸಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ’’ ಎಂದೂ ಆ ಪೋಸ್ಟ್‌ನಲ್ಲಿ ಹೇಳಲಾಗಿತ್ತು.

ವಿದ್ಯುನ್ಮಾನ ಮತ ಯಂತ್ರಗಳ ದಾಸ್ತಾನು ಕುರಿತು ತಪ್ಪು ಮಾಹಿತಿಗಳನ್ನು ಹರಡುತ್ತಿರುವ ಆರೋಪದ ಮೇಲೆ ರಂಜಿತ್ ಕಸಲೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಬೀಡ್ ಜಿಲ್ಲೆಯ ಚುನಾವಣಾಧಿಕಾರಿ ಕೂಡಾ ಭಾರತೀಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

‘‘ವಿದ್ಯುನ್ಮಾನ ಮತ ಯಂತ್ರಗಳ ದಾಸ್ತಾನು ವಿರುದ್ಧ ವದಂತಿಗಳನ್ನು ಹರಡಿ, ತಮ್ಮ ಈ ಹೇಳಿಕೆಯ ಮೂಲಕ, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಯ ವಿರುದ್ಧ 17/04 ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕಟ್ಟುನಿಟ್ಟಿನ ಕ್ರಮದ ನಂತರ, ವರದಿಯೊಂದನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ’’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ಮೇಲ್ನೋಟಕ್ಕೆ, ಇದು ಸಮಂಜಸವಾದ ಖಂಡನೆಯಂತೆ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಚುನಾವಣಾ ಆಯೋಗದ ಪ್ರತಿಕ್ರಿಯೆ ರಕ್ಷಣಾತ್ಮಕ ಮಾತ್ರವಲ್ಲದೆ ಅಸ್ಪಷ್ಟವೂ ಆಗಿದೆ.

ಈಗ ಕೇಳಿ ಬಂದಿರುವ ಗಂಭೀರ ಆರೋಪಗಳಿಗಿಂತ ಹೆಚ್ಚು, ಆ ಆರೋಪಗಳನ್ನು ಯಾರು ಮಾಡಿದ್ದಾರೆ ಎಂಬುದೇ ಆಯೋಗಕ್ಕೆ ಹೆಚ್ಚು ಮಹತ್ವದ್ದು ಎಂದು ಕಾಣುತ್ತದೆ. ಆರೋಪಗಳನ್ನು ಮಾಡಿರುವ ಪೊಲೀಸ್ ಅಧಿಕಾರಿ ಅಮಾನತುಗೊಂಡಿದ್ದಾರೆ ಎಂದು ಹೇಳುವುದರಲ್ಲೇ ಆಯೋಗ ವ್ಯಸ್ತವಾಗಿದೆ. ಆರೋಪವನ್ನು ಮಾಡುವ ವ್ಯಕ್ತಿಯ ಮೇಲೆಯೇ ಪ್ರತಿ ದಾಳಿ ಮಾಡುವುದರ ಬದಲಿಗೆ ಸತ್ಯವನ್ನು ಮುಂದಿಟ್ಟು ಸಂಶಯವನ್ನು ಪರಿಹರಿಸುವುದು ಚುನಾವಣಾ ಆಯೋಗದಂತಹ ಮಹತ್ವದ ಸಾರ್ವಜನಿಕ ಸಂಸ್ಥೆಯ ಜವಾಬ್ದಾರಿಯಾಗಿದೆ.

ಇದಲ್ಲದೆ, ‘ಕಟ್ಟುನಿಟ್ಟಾದ ಪ್ರೋಟೋಕಾಲ್’ಗಳು ಜಾರಿಯಲ್ಲಿವೆ ಎಂದು ಇಸಿಐ ಪದೇ ಪದೇ ಉಲ್ಲೇಖಿಸುತ್ತದೆ. ಈ ಪ್ರೋಟೋಕಾಲ್‌ಗಳು ಯಾವುವು ಎಂಬುದನ್ನು ವಿವರಿಸದೆ ಇರುವುದು ಸಾರ್ವಜನಿಕರ ಗೊಂದಲವನ್ನು ಹೆಚ್ಚಿಸುತ್ತದೆ.

ಈ ಪ್ರೋಟೋಕಾಲ್‌ಗಳು ಯಾವುವು? ಅವುಗಳನ್ನು ಯಾರು ಮೇಲ್ವಿಚಾರಣೆ ಮಾಡುತ್ತಾರೆ? ಸ್ವತಂತ್ರ ವೀಕ್ಷಕರು ಅಥವಾ ಸ್ವತಂತ್ರ ಲೆಕ್ಕಪರಿಶೋಧಕರು ಇವಿಎಂ ಸಾಗಾಟ ಮತ್ತು ದಾಸ್ತಾನನ್ನು ಪರಿಶೀಲಿಸಲು ಮುಂದಾದರೆ ಅವರಿಗೆ ಅನುಮತಿ ನೀಡಲಾಗುವುದೇ?

ಚುನಾವಣಾ ಆಯೋಗ ಡೇಟಾ ನೀಡಬೇಕಿತ್ತು. ಆದರೆ ಅದು ಕೇವಲ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನೀಡಿದೆ.

ಇಂತಹ ಸೂಕ್ಷ್ಮ ವಿಷಯವನ್ನು ನಿರ್ವಹಿಸಲು ಆಯೋಗವು ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿರುವುದು ಮತ್ತೊಂದು ಕಳವಳಕಾರಿ ವಿಷಯವಾಗಿದೆ.

ಇವಿಎಂ ಟ್ಯಾಂಪರಿಂಗ್ ಆರೋಪಗಳು ನಿರಾಧಾರ ಎಂದು ಆಯೋಗ ಹೇಳಬೇಕಿರುವುದು ಅಧಿಕೃತ ಪತ್ರಿಕಾಗೋಷ್ಠಿಗಳಲ್ಲಿ ಮತ್ತು ದಾಖಲೆಯ ವಿವರಣೆಗಳಲ್ಲಿ.

ಭಾರತೀಯ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಇರುವ ಚುನಾವಣಾ ಆಯೋಗ ಎಕ್ಸ್‌ನಲ್ಲಿ ಕೆಲವು ಸಾಲುಗಳಲ್ಲಿ ಉತ್ತರ ನೀಡಿದರೆ ಸಾಲದು.

ಇದಲ್ಲದೆ, ಮುಖ್ಯ ಚುನಾವಣಾ ಅಧಿಕಾರಿಯ ಮೂಲಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಎಸ್‌ಪಿಯಿಂದ ವರದಿಯನ್ನು ಕೋರಿರುವುದಾಗಿ ಆಯೋಗ ತಿಳಿಸಿದೆ. ಆದರೆ ಈ ವರದಿಯನ್ನು ಯಾವಾಗ ಸಾರ್ವಜನಿಕಗೊಳಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆಯೋಗ ನೀಡುವ ಉತ್ತರಗಳ ಅಸ್ಪಷ್ಟತೆಯು ಜನರಲ್ಲಿ ಅಪನಂಬಿಕೆಯನ್ನು ಸೃಷ್ಟಿಸಿದೆ.

ರಾಹುಲ್ ಗಾಂಧಿ, ಬೋಸ್ಟನ್‌ನಲ್ಲಿ ಭಾರತೀಯ ವಲಸಿಗರೊಂದಿಗೆ ಮಾತನಾಡುವ ವೇಳೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೊನೆಯ ಕೇವಲ ಎರಡು ಗಂಟೆಗಳಲ್ಲಿ 65 ಲಕ್ಷ ಮತದಾರರು ನಿಗೂಢವಾಗಿ ಮತ ಚಲಾಯಿಸಿದ್ದನ್ನು ಪ್ರಸ್ತಾಪಿಸಿ ಇದು ಆಗುವುದು ಅಸಾಧ್ಯ ಎಂದು ಹೇಳುತ್ತಾರೆ ಮತ್ತು ಆ ವಾದವು ತರ್ಕಬದ್ಧವೆಂದು ಕಾಣುತ್ತದೆ.

ಕೆಲವು ಪ್ರದೇಶಗಳಲ್ಲಿ ಒಟ್ಟು ನೋಂದಾಯಿತ ಜನಸಂಖ್ಯೆಗಿಂತ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ ಎಂಬ ಅಂಶವನ್ನೂ ಅವರು ಪ್ರಸ್ತಾಪಿಸಿದ್ದಾರೆ. ಆದರೆ ಇದೆಲ್ಲದರ ಕುರಿತು ಚುನಾವಣಾ ಆಯೋಗ ನೀಡಿರುವ ಪ್ರತಿಕ್ರಿಯೆ ಮಾತ್ರ ನಿರಾಶಾದಾಯಕವಾಗಿದೆ.

ರಾಹುಲ್ ಗಾಂಧಿಯವರ ಕಳವಳಗಳು ಹೊಸದಲ್ಲ ಎಂಬುದನ್ನು ಗಮನಿಸುವುದು ಇಲ್ಲಿ ಅತ್ಯಗತ್ಯ.

ಕಳೆದ ಹಲವಾರು ವರ್ಷಗಳಿಂದ, ನಾಗರಿಕ ಸಮಾಜ ಸಂಸ್ಥೆಗಳು, ರಾಜಕೀಯ ವಿಶ್ಲೇಷಕರು ಮತ್ತು ಮಾಜಿ ಚುನಾವಣಾ ಆಯುಕ್ತರು ಸಹ ಇವಿಎಂ ಮತ್ತು ಮತದಾರರ ಪಟ್ಟಿ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಷಯಗಳ ಮೇಲ್ವಿಚಾರಣೆಯಲ್ಲಿ ಚುನಾವಣಾ ಆಯೋಗದ ಪಾತ್ರವನ್ನು ಆಡಿಟ್ ಮತ್ತು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು, ತಿರಸ್ಕಾರದಿಂದ ತಳ್ಳಿಹಾಕಬಾರದು.

ಬಿಜೆಪಿ ಸಾಮಾನ್ಯವಾಗಿ ಈ ಕುರಿತು ಚರ್ಚೆ ಬಂದಾಗಲೆಲ್ಲ ರಾಹುಲ್ ಗಾಂಧಿಯನ್ನು ಅವಮಾನಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಈ ವಿಷಯದ ಬಗ್ಗೆ ರಾಹುಲ್ ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ.

ರಾಹುಲ್ ಗಾಂಧಿ ಅಮೆರಿಕದಲ್ಲಿ ಭಾಷಣ ಮಾಡಿದ ಸ್ಥಳವನ್ನು ಪ್ರಶ್ನಿಸುವವರದ್ದು ಬೇರೆಯದೇ ಒಂದು ಗುಂಪಿದೆ. ಇವರಿಗೆ ವಿಮರ್ಶೆಯ ಸ್ಥಳವು ವಿಮರ್ಶೆಯ ಸಾರಕ್ಕಿಂತ ಮುಖ್ಯ. ಏನು ಹೇಳಿದ್ದಾರೆ ಎಂಬುದಕ್ಕಿಂತ ಹೆಚ್ಚು ಎಲ್ಲಿ ಹೇಳಿದ್ದಾರೆ ಎಂಬುದೇ ಇವರಿಗೆ ಮುಖ್ಯ.

ಈ ಕುರಿತು ಬಿಜೆಪಿಯ ಪ್ರತಿಕ್ರಿಯೆ ವಿಷಾದನೀಯ. ವಿಶೇಷವಾಗಿ ಪಕ್ಷದ ವಕ್ತಾರ ಸಂಬಿತ್ ಪಾತ್ರ, ರಾಹುಲ್ ಹೇಳಿಕೆಗಳ ಸಾರವನ್ನು ಪ್ರಶ್ನಿಸುವ ಅಥವಾ ಪ್ರತಿಕ್ರಿಯಿಸುವ ಬದಲು ರಾಹುಲ್ ಗಾಂಧಿ ಅವರ ಮೇಲೆ ವೈಯಕ್ತಿಕ ದಾಳಿ ಮಾಡುತ್ತಾರೆ.

ಅವರು ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದು ಕರೆದು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅವರ ಮೇಲೆ ಇರುವ ಹಣ ದುರುಪಯೋಗ ಆರೋಪವನ್ನು ಪುನಃರುಚ್ಚರಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಈ.ಡಿ.ಯ ಆರೋಪಗಳು ಏನೇ ಇದ್ದರೂ, ಅದು ರಾಹುಲ್ ಗಾಂಧಿ ಚುನಾವಣಾ ಆಯೋಗದ ಬಗ್ಗೆ ಮಾಡಿರುವ ಟೀಕೆಯ ವಿಶ್ವಾಸಾರ್ಹತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆಡಳಿತ ಪಕ್ಷದ ವ್ಯಕ್ತಿಗಳು ಮಹತ್ವದ ಸಾರ್ವಜನಿಕ ಸಂಸ್ಥೆಗಳ ಕುರಿತ ಟೀಕೆಯನ್ನು ದೇಶದ್ರೋಹಕ್ಕೆ ಸಮೀಕರಿಸುವುದು ಅಪಾಯಕಾರಿ.

ಬಲಿಷ್ಠ ಪ್ರಜಾಪ್ರಭುತ್ವದಲ್ಲಿ, ಸಾರ್ವಜನಿಕ ಸಂಸ್ಥೆಗಳು ಟೀಕೆ ಟಿಪ್ಪಣಿ ಹಾಗೂ ಪ್ರಶ್ನೆಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಮಹತ್ವದ ಸ್ಥಾನದಲ್ಲಿರುವ ರಾಜಕಾರಣಿಗಳನ್ನು ಸುಮ್ಮನಾಗಿಸದೆ ಅವರು ಎತ್ತಿರುವ ಪ್ರಶ್ನೆಗಳನ್ನು ಎದುರಿಸಲು ಸಜ್ಜಾಗಿರಬೇಕು.

ಇನ್ನು ಚುನಾವಣಾ ಆಯೋಗದ ಸಮಗ್ರತೆಯು ನಿಜವಾಗಿಯೂ ಎ+ ಲೆವೆಲ್‌ನದ್ದು ಆಗಿದ್ದರೆ, ಸ್ವತಂತ್ರ ಪರಿಶೋಧನೆಗೆ ಅದು ಏಕೆ ಭಯಪಡಬೇಕು? ದತ್ತಾಂಶ ಆಧಾರಿತ ಪ್ರತಿವಾದಗಳನ್ನು ಮುಂದಿಡುವ ಬದಲು ಆಕ್ರೋಶದಿಂದ ಏಕೆ ಪ್ರತಿಕ್ರಿಯಿಸಬೇಕು? ಮತ್ತು ಚುನಾವಣಾ ಆಯೋಗ ನಿಜವಾಗಿಯೂ ತಟಸ್ಥವಾಗಿದ್ದರೆ, ವಸ್ತುನಿಷ್ಠವಾಗಿದ್ದರೆ ಅದರ ಎಲ್ಲ ಪ್ರಕ್ರಿಯೆಗಳು ಕಠಿಣ ಪರಿಶೀಲನೆಯಲ್ಲೂ ಪಾಸಾಗುತ್ತವೆ ಎಂದು ಸಾಬೀತುಪಡಿಸುವ ಅವಕಾಶವನ್ನು ಏಕೆ ಸ್ವಾಗತಿಸಬಾರದು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News