ಮೇ ದಿನದ ನೆನಪಿನಲ್ಲಿ...
ಜಗತ್ತಿನಲ್ಲಿ ನೂರಕ್ಕೂ ಅಧಿಕ ವರ್ಷಗಳಿಂದ ನಡೆದು ಬರುತ್ತಿರುವ ಮೇ ದಿನದ ಕ್ರಾಂತಿಕಾರಿ ಪರಂಪರೆ ಈಗಲೂ ಜಗದ ಎಲ್ಲಾ ಕಾರ್ಮಿಕ ಚಳವಳಿಗೆ ಹೊಸ ಸ್ಫೂರ್ತಿ ಹಾಗೂ ಚೈತನ್ಯದ ಕಾವನ್ನು ನೀಡುತ್ತಲೇ ಬಂದಿದೆ. ಪ್ರತೀ ಬಾರಿಯೂ ಜಾಗತಿಕವಾಗಿ ಒಂದೊಂದು ಸವಾಲನ್ನು ಮೇ ದಿನ ತನ್ನ ಘೋಷಣೆಯನ್ನಾಗಿ ಅಳವಡಿಸಿಕೊಳ್ಳುತ್ತಿದೆ. ಈ ಬಾರಿ ಜಾಗತಿಕವಾಗಿ ಬಂಡವಾಳಶಾಹಿ ಯುದ್ಧದ ಹೆಸರಲ್ಲಿ ಫೆಲೆಸ್ತೀನ್ ಜನರ ಮೇಲೆ ನಡೆಸುತ್ತಿರುವ ದಾಳಿಯ ವಿರುದ್ಧ ಮೇ ದಿನ ಕೇಂದ್ರೀಕರಿಸಲಾಗಿದೆ. ಹಾಗೆಯೇ ಭಾರತದಲ್ಲಿ ಹೆಡೆ ಎತ್ತಿ ನಿಂತಿರುವ ಫ್ಯಾಶಿಸಂ ಸೋಲಿಸುವ ಸವಾಲನ್ನು ಭಾರತದ ಕಾರ್ಮಿಕ ವರ್ಗ ತನ್ನ ಪ್ರಧಾನ ಕರ್ತವ್ಯವನ್ನಾಗಿಸಿಕೊಳ್ಳಬೇಕಾಗಿದೆ. ಈ ವರ್ಷದ ಮೇ ದಿನಾಚರಣೆಯು ಭವಿಷ್ಯದಲ್ಲಿ ಹೊಸದೊಂದು ಭರವಸೆಗೆ ನಾಂದಿಯಾಗಲಿ ಎಂದು ದೃಢವಾಗಿ ನಂಬೋಣ.
ಮೇ 1 ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ. ಅದೊಂದು ಅಂತರ್ ರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ದಿನ.
ಅದು 1886ರ ಮೇ 4 ಮಂಗಳವಾರ. ಸಮಯ ರಾತ್ರಿ ಎಂಟೂವರೆ ಗಂಟೆ. ಅಮೆರಿಕದ ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕದ ಬಳಿ ಸುಮಾರು 2,500 ಜನರು ನೆರೆದಿದ್ದ ಒಂದು ಸಭೆ. ಆ ಸಭೆಯನ್ನುದ್ದೇಶಿಸಿ ಕಾರ್ಮಿಕ ಪತ್ರಿಕೆಯೊಂದರ ಸಂಪಾದಕ ಆಗಸ್ಟ್ ಸ್ಪೈಸ್ ಆಗಷ್ಟೇ ತನ್ನ ಪ್ರತಿಭಟನಾ ಭಾಷಣ ಆರಂಭಿಸಿದ್ದರು. ಈ ಸಭೆಯ ಹಿಂದಿನ ದಿನವಷ್ಟೇ, ಮ್ಯಾಕ್-ಕಾರ್ಮಿಕ್ ರೀಪರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ಮುಷ್ಕರನಿರತ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಅದನ್ನು ಖಂಡಿಸಿ ಚಿಕಾಗೋದ ಈ ಹೇ ಮಾರ್ಕೆಟ್ ಚೌಕದಲ್ಲಿ ಈ ಸಭೆ ನಡೆಯುತ್ತಿತ್ತು. ಆಗಸ್ಟ್ ಸ್ಪೈಸ್ ಭಾಷಣದ ಬಳಿಕ ಕಾರ್ಮಿಕ ನಾಯಕ ಆಲ್ಬರ್ಟ್ ಪಾರ್ಸನ್, ಮೆಥಾಡಿಸ್ಟ್ ಚರ್ಚ್‌ನ ಪಾದ್ರಿಯಾಗಿದ್ದ ಸ್ಯಾಮುಯಲ್ ಮಾತನಾಡಿ ಅಮೆರಿಕನ್ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಯಲು ಮಾಡತೊಡಗಿದರು. ಗಂಟೆ ರಾತ್ರಿ ಹತ್ತುವರೆಯಾದರೂ ಅಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಜನರು ಇನ್ನೂ ಇದ್ದರು. ಸ್ಯಾಮುಯೆಲ್ ಫೀಲ್ಡನ್ ತನ್ನ ಭಾಷಣ ಮುಗಿಸಬೇಕು ಎನ್ನುವಷ್ಟರಲ್ಲೇ...176 ಜನರನ್ನು ಒಳಗೊಂಡ ಸಶಸ್ತ್ರ ಪೊಲೀಸರ ತುಕಡಿಯೊಂದು ದಿಢೀರನೆ ಆ ಸಭೆಯ ಮೇಲೆ ದಾಳಿ ನಡೆಸಿತು. ಅಷ್ಟರಲ್ಲೇ ಪೊಲೀಸರ ಮಧ್ಯದಲ್ಲೇ ಒಮ್ಮೆಲೇ ಡೈನಮೈಟ್ ಬಾಂಬ್ ಆಸ್ಫೋಟಿಸಿತು. ಅಮೆರಿಕದ ಇತಿಹಾಸದಲ್ಲೇ ಇಂತಹ ಬಾಂಬು ಆಸ್ಫೋಟಗೊಂಡಿದ್ದು ಅದೇ ಮೊದಲು.! ಪರಿಣಾಮ ಒಬ್ಬ ಸತ್ತು ಹತ್ತಾರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಇದರಿಂದಾಗಿ ಕೋಪೋದ್ರೇಕಗೊಂಡ ಪೊಲೀಸರು ವಿವೇಕಹೀನರಾಗಿ ಹಲವು ದಿಕ್ಕುಗಳಿಂದ ಯರ್ರಾ-ಬಿರ್ರಿಯಾಗಿ ಗುಂಡು ಹಾರಿಸಿ ನಾಲ್ಕು ಕಾರ್ಮಿಕರ ದೇಹಗಳನ್ನು ನೆಲಕ್ಕುರುಳಿಸಿದರು. ಹತ್ತಾರು ಜನರು ಮಾರಣಾಂತಿಕವಾಗಿ ಗಾಯಗೊಂಡರು. ಈ ಬಾಂಬು ಸ್ಫೋಟವು ಪೊಲೀಸರನ್ನು ಎಷ್ಟು ಭಯ-ಭೀತರನ್ನಾಗಿಸಿತ್ತೆಂದರೆ...ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಅಲ್ಲಿ ನೆರೆದಿದ್ದ ಕಾರ್ಮಿಕರನ್ನು ಕೊಂದಿದ್ದು ಮಾತ್ರವಲ್ಲ; ಅವರ ಆರು ಜನ ಪೊಲೀಸ್ ಸಹೋದ್ಯೋಗಿಗಳನ್ನೇ ಸ್ವತಃ ಅವರ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದರು.!
ಚಿಕಾಗೋ ನಗರದ ಹೇ ಮಾರ್ಕೆಟ್ ಚೌಕದಲ್ಲಿ ಅಂದು ನಡೆದ ಈ ದುರ್ಘಟನೆಯ ಪರಿಣಾಮ ನಂತರದ ದಿನಗಳಲ್ಲಿ ಇನ್ನೂ ಭೀಕರವಾಗಿತ್ತು. ಚಿಕಾಗೋ ಮಾತ್ರವಲ್ಲ ಅಮೆರಿಕದ ಎಲ್ಲಾ ನಗರಗಳಲ್ಲಿ ವಾಕ್ ಮತ್ತು ಸಂಘಟನಾ ಸ್ವಾತಂತ್ರ್ಯದ ಹಕ್ಕುಗಳು ಮೊಟಕುಗೊಂಡು ಹೇಳಹೆಸರಿಲ್ಲದಂತೆ ಮಾಯವಾದವು. ಅಮೆರಿಕದಾದ್ಯಂತ ನೂರಾರು ಕಾರ್ಮಿಕ ನಾಯಕರನ್ನು ದಸ್ತಗಿರಿ ಮಾಡಿ ಹಿಂಸೆ ನೀಡಲಾಯಿತು. ಪೊಲೀಸರ ಉದ್ಧಟತನದಿಂದ ಉಂಟಾದ ಹೇ ಮಾರ್ಕೆಟ್ ದುರ್ಘಟನೆಯ ಹೊಣೆಯನ್ನು ನೈಟ್ಸ್ ಆಫ್ ಲೇಬರ್ ಹೆಗಲಿಗೇರಿಸಿ ಅದರ ಮುಖಂಡರನ್ನು ಆರೋಪಿಗಳನ್ನಾಗಿ ಮಾಡಲಾಯಿತು. ಅಮೆರಿಕದ ಪತ್ರಿಕೆಗಳು, ವ್ಯಾಪಾರಸ್ಥರು ಮತ್ತು ಜನಸಾಮಾನ್ಯರು ಹೀಗೆ ಎಲ್ಲರೂ ಲೇಬರ್ ಯೂನಿಯನ್ ಮುಖಂಡರನ್ನು ದ್ವೇಷಿಸಲಾರಂಭಿಸಿದರು. ಪರಿಣಾಮ ಕಾರ್ಮಿಕರು ಜನಸಾಮಾನ್ಯರ ಸಹಾನುಭೂತಿ ಕಳೆದುಕೊಂಡರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೈಗಾರಿಕಾ ಮಾಲಕರು ಸರಕಾರದ ಮೇಲೆ ಒತ್ತಡ ತಂದು ಕಾರ್ಮಿಕ ನಾಯಕರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ಅಂತಿಮವಾಗಿ ಬಂಧಿಸಲಾಗಿದ್ದ 8 ಜನ ಮುಖಂಡರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅದರಲ್ಲಿ 4 ಜನರನ್ನು 1887 ನವೆಂಬರ್ 11ರಂದು ಗಲ್ಲಿಗೇರಿಸಲಾಯಿತು. ಉಳಿದ 4 ಜನರ ಪೈಕಿ ಒಬ್ಬ ಲೂಯಿ ಲಿಂಗ್ ಎಂಬಾತನು ಜೈಲಿನಲ್ಲೇ ಡೈನಮೈಟ್ ಸಿಡಿತದಿಂದ ಹಿಂದಿನ ದಿನವಷ್ಟೇ ಸತ್ತು ಹೋದರೆ ಉಳಿದ 3 ಕೈದಿಗಳಿಗೆ 1893 ಜೂನ್‌ನಲ್ಲಿ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಲಾಯಿತು. ಹೇ ಮಾರ್ಕೆಟ್‌ನ ಆ ಪ್ರತಿಭಟನಾ ಸಭೆ, ನಂತರ ನಡೆದ ಪೊಲೀಸ್ ದೌರ್ಜನ್ಯ, ನಂತರದ ವಿಚಾರಣೆ, ಗಲ್ಲು ಶಿಕ್ಷೆ ಹೀಗೆ ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ಇಂದಿಗೂ ಹೇ ಮಾರ್ಕೆಟ್ ಹತ್ಯಾಕಾಂಡವೆಂದೇ ಕರೆಯಲ್ಪಡುತ್ತದೆ.
ಮೇ ದಿನದ ಉದಯ
ಚಿಕಾಗೋದ ಹೇ ಮಾರ್ಕೆಟ್ ಘಟನೆ ಮತ್ತು ನಂತರದಲ್ಲಿ ಕಾರ್ಮಿಕ ನಾಯಕರ ವಿಚಾರಣೆ ನಾಟಕ ಮತ್ತು ಅದರಲ್ಲಿ 4 ಜನರನ್ನು ಗಲ್ಲಿಗೇರಿಸಿದ ಪ್ರಕರಣದ ಹಿಂದಿರುವ ಪಿತೂರಿಗಳನ್ನು ಅಮೆರಿಕನ್ ಲೇಬರ್ ಯೂನಿಯನ್ ಮತ್ತು ಲೈಟ್ಸ್ ಆಫ್ ಲೇಬರ್ ಯೂನಿಯನ್‌ನ ಕಾರ್ಮಿಕ ನಾಯಕರು ಆಳವಾಗಿ ಅರ್ಥೈಸಿಕೊಂಡರು. ಚಿಕಾಗೋದ ಆಳುವ ಪ್ರಭುಗಳು ಇಡೀ ಕಾರ್ಮಿಕ ಚಳವಳಿಯನ್ನೇ ಈ ಪ್ರಕರಣದ ಮೂಲ ಹೊಸಕಿ ಹಾಕುವ ಯೋಜನೆ ಹೊಂದಿದ್ದರು. ಹಾಗಾಗಿ ಹೇ ಮಾರ್ಕೆಟ್ ಪ್ರಕರಣದಲ್ಲಿ ಬಂಧಿತರಾಗಿರುವ ಕಾರ್ಮಿಕ ನಾಯಕರ ಬಿಡುಗಡೆಗೆ ಅಮೆರಿಕದ ಉದ್ದಗಲಕ್ಕೂ ಪ್ರತಿಭಟನೆಗಳನ್ನು ಆಯೋಜಿಸಿ ಅವರ ಪರ ನ್ಯಾಯಾಲಯದ ಹೋರಾಟಕ್ಕೆ ಹಣ ಸಂಗ್ರಹಿಸಲಾಯಿತು. ಬಂಧನಕ್ಕೊಳಗಾದ ಈ ನಾಯಕರ ಬಗ್ಗೆ ದೇಶದೆಲ್ಲೆಡೆ ಅನುಕಂಪದ ಮಹಾಪೂರವೇ ಹರಿದು ಬಂತು. ಅಮೆರಿಕದ ಹೆಸರಾಂತ ಕಾದಂಬರಿಕಾರ ವಿಲಿಯಂ ಡೀನ್ ಹೊವೆಲ್ಸ್ ಸೇರಿದಂತೆ ಹಲವು ಮಾಜಿ ಸೆನೆಟರ್‌ಗಳು, ಮಾಜಿ ನ್ಯಾಯಾಧೀಶರು ಹೀಗೆ ಹಲವರು ಕಾರ್ಮಿಕರ ನ್ಯಾಯಬದ್ಧ ಹಕ್ಕನ್ನು ಬೆಂಬಲಿಸಿದರು. ಈ ಎಲ್ಲಾ ವಿರೋಧಗಳ ನಡುವೆಯೂ ಬಂಧಿತ ಕಾರ್ಮಿಕ ನಾಯಕರನ್ನು ಗಲ್ಲಿಗೇರಿಸಲು ತಯಾರಿ ನಡೆದಿತ್ತು. ಅವರನ್ನು ಗಲ್ಲಿಗೇರಿಸುವ ಆ 1887ರ ನವೆಂಬರ್ 11ರ ದಿನ ಇಡೀ ಚಿಕಾಗೋ ನಗರವೇ ಕಾರ್ಮಿಕರ ಕ್ರೋಧದಿಂದ ಹೆಪ್ಪುಗಟ್ಟಿದ ಕಾರ್ಮೋಡದಂತಿತ್ತು. ಯಾವಾಗ ಬೇಕಾದರೂ ಆ ಮೋಡಗಳು ಒಡೆದು ಅಬ್ಬರದ ಮಳೆ ಸುರಿಯುವ ಎಲ್ಲಾ ಲಕ್ಷಣಗಳು ಕಂಡು ಬಂದವು. ಚಿಕಾಗೋದಲ್ಲಿ ಅಂದು ಒಂದುಗೂಡಿದ್ದ ಕಾರ್ಮಿಕರ ಸಂಖ್ಯೆಗೆ ಅಲ್ಲಿ ನಿಯೋಜಿಸಲಾಗಿದ್ದ ಶಸ್ತ್ರಸಜ್ಜಿತ ಪೊಲೀಸರು ಏನೇನೂ ಅಲ್ಲವಾಗಿತ್ತು. ಒಂದರ್ಥದಲ್ಲಿ ಅಲ್ಲಿನ ಜೈಲಿನ ಮೇಲೆ ದಾಳಿ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನು ಕಾರ್ಮಿಕರು ನಡೆಸಿದ್ದರು.! ಆದರೆ ಈ ವಿಷಯ ಜೈಲಿನೊಳಗಿದ್ದ ಸ್ಪೈಸ್, ಎಂಗೆಲ್ಸ್ ಮತ್ತಿತರರ ಗಮನಕ್ಕೆ ಬೀಳುತ್ತಿದ್ದಂತೆ ಮರಣದಂಡನೆಗೆ ಗುರಿಯಾಗಿದ್ದರೂ, ಸಾವಿನ ದಡದಲ್ಲೂ ನಿಂತಿದ್ದರೂ ಅವರು ವಿವೇಕಶಾಲಿಗಳಾಗಿ ವರ್ತಿಸಿದರು. ಕಾರ್ಮಿಕರೇನಾದರೂ ಅಂತಹ ಕಾರ್ಯಕ್ಕೆ ಕೈ ಹಾಕಿದರೆ ಮುಂದಾಗುವ ಘಟನೆಗಳು ಕಲ್ಪನಾತೀತವಾಗಿದ್ದವು. ಇಡೀ ಚಿಕಾಗೋದಲ್ಲಿ ಕಾರ್ಮಿಕರ ಮಾರಣಹೋಮವೇ ನಡೆಯುತ್ತಿತ್ತು. ಹೀಗಾಗಿ ಆತ್ಮಾರ್ಪಣೆ ಮಾಡಲು ಸಿದ್ಧವಾಗಿದ್ದ ಆ ನಾಲ್ಕು ಬಂಧಿತ ನಾಯಕರು ಇಂತಹ ಕೆಲಸಕ್ಕೆ ಇಳಿಯದಿರುವಂತೆ ಹೊರಗಿರುವ ಕಾರ್ಮಿಕರಿಂದ ಶಪಥ ಮಾಡಿಸಿದರು. ಇಂತಹ ವಿಶಾಲ ಮನೋಭಾವದ ಆ ಕಾರ್ಮಿಕರ ನಾಯಕರನ್ನು ಅಂತಿಮವಾಗಿ ಭೇಟಿ ಮಾಡಲು ಅವರ ಕುಟುಂಬದವರಿಗೂ ಅವಕಾಶ ನೀಡದೆ ಆಳುವ ಅರಸರು ತಮ್ಮ ಅಮಾನವೀಯತೆಯನ್ನು ಮೆರೆದರು. ಮಾತ್ರವಲ್ಲ 1887ರ ನವೆಂಬರ್ 11 ಮಧ್ಯಾಹ್ನದ ಹೊತ್ತಿಗೆ ಆ ನಾಲ್ವರು ಕಾರ್ಮಿಕ ನಾಯಕರ ಕುತ್ತಿಗೆಗೆ ಗಲ್ಲಿನ ಹಗ್ಗ ಬಿಗಿದರು.! ಜಗತ್ತಿನ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ಆ ಶುಕ್ರವಾರ ‘ಬ್ಲಾಕ್ ಫ್ರೈಡೆ’ ಎಂದೇ ದಾಖಲಾಯಿತು. ಇದಾದ ನಂತರ ಅಮೆರಿಕ ಮಾತ್ರವಲ್ಲ ಜಗತ್ತಿನಾದ್ಯಂತ ಕಾರ್ಮಿಕರ ಬಲಿದಾನ, ಹಕ್ಕುಗಳ ರಕ್ಷಣೆ ಕುರಿತು ಬಿಸಿಬಿಸಿ ಚರ್ಚೆಗಳು ನಡೆದವು. ಕಾರ್ಮಿಕ ನಾಯಕರು ಹುತಾತ್ಮರಾದರೂ ಕಾರ್ಮಿಕರ ಪರಿಸ್ಥಿತಿಯೇನೂ ಬದಲಾಗಲಿಲ್ಲ. ಅದರ ಬದಲು ತೀವ್ರ ದುಡಿತ, ಶೋಷಣೆಗಳು ಮತ್ತಷ್ಟು ತೀವ್ರಗೊಂಡವು. 1888ರ ಡಿಸೆಂಬರ್‌ನಲ್ಲಿ ಕಾರ್ಮಿಕ ಚಳವಳಿಯನ್ನು ಪುನರುಜ್ಜೀವನಗೊಳಿಸುವ ದೃಷ್ಟಿಯಿಂದ ಅಮೆರಿಕನ್ ಫೆಡರೇಷನ್ ಆಫ್ ಲೇಬರ್ಸ್ ಸೈಂಟ್ ಲೂಯಿಯದಲ್ಲಿ ಸಮಾವೇಶವೊಂದನ್ನು ಸಂಘಟಿಸಿತು. ಅದರಲ್ಲಿ 8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ಖಾಸಗಿ ಕಾರ್ಯಕ್ಕೆ ಎನ್ನುವ ಬೇಡಿಕೆಯನ್ನು ಅಂಗೀಕರಿಸಿ 1890 ಮೇ 1ರ ದಿನಾಚರಣೆಗೆ ಅಧಿಕೃತವಾಗಿ ಕರೆ ನೀಡಿತು.
ಚಾರಿತ್ರಿಕ ದಿನ
ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಮೇ ದಿನವು ವಿಶ್ವದ ಎಲ್ಲಾ ಕಾರ್ಮಿಕ ವರ್ಗವನ್ನು ಏಕತ್ರಗೊಳಿಸಿ ಬಂಡವಾಳಶಾಹಿಗಳು ಹೆಣೆಯುತ್ತಿರುವ ಶೋಷಣೆಗಳ ಚಕ್ರವೂಹದ ಅಭೇದ್ಯ ಕೋಟೆಗಳನ್ನು ಭೇದಿಸುತ್ತಾ ಹೋರಾಟಕ್ಕಿಳಿಸುವ ಚಾರಿತ್ರಿಕ ದಿನ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುಶಃ ಜಗತ್ತಿನ ಎಲ್ಲಾ ದೇಶಗಳಲ್ಲೂ ಮೇ ದಿನವನ್ನು ತಪ್ಪದೇ ಆಚರಿಸಲಾಗುತ್ತಿದೆ. ‘‘ವಿಶ್ವದ ಕಾರ್ಮಿಕರೇ ಒಂದಾಗಿರಿ’’ ಎನ್ನುವ ಸ್ಫೂರ್ತಿಯನ್ನು ಕಾರ್ಮಿಕ ವರ್ಗಕ್ಕೆ ನೀಡಿ ಆ ವರ್ಗವನ್ನು ಒಂದುಗೂಡಿಸುವ ಅದರ ಪ್ರಚ್ಛನ್ನ ಶಕ್ತಿ ಆಪಾರ. ಒಂದೇ ಮಾತಿನಲ್ಲಿ ಹೇಳಬೇಕಾದರೆ ಎಲ್ಲ ರಾಷ್ಟ್ರಗಳಲ್ಲಿಯೂ ಧನಿಕ ವರ್ಗವು ಕಾರ್ಮಿಕ ವರ್ಗದ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಗುಲಾಮಗಿರಿಯ ಹೊಸ ರೂಪದ ವಿರುದ್ಧ ಟೊಂಕಕಟ್ಟಿ ನಿಲ್ಲಲು ಪ್ರೇರೇಪಿಸುತ್ತಿದೆ ಮೇ ದಿನ.
ಆದರೆ ಇಂತಹ ಚಾರಿತ್ರಿಕ ದಿನವನ್ನು ಇದೀಗ ಎಲ್ಲಾ ಕಡೆಗಳಲ್ಲೂ ಕೇವಲ ಔಪಚಾರಿಕವಾಗಿ ಬೇರೆಯ ದಿನಾಚರಣೆಗಳಂತೆ ಆಚರಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿದೆ. ಇಂತಹ ಅಪಾಯ ಪ್ರವೃತ್ತಿಗಳ ಬಗ್ಗೆ ಭಾರತದ ಕಾರ್ಮಿಕ ಚಳವಳಿಯ ಅಗ್ರಗಣ್ಯ ನಾಯಕರಾಗಿದ್ದ ಡಾ. ಎಂ.ಕೆ. ಪಂಧೆಯವರು ಅಮೆರಿಕದ ಇಲಿನಾಯ್ ಲೇಬರ್ ಹಿಸ್ಟರಿ ಸೊಸೈಟಿ ಪ್ರಕಟಿಸಿರುವ ಡಾ. ವಿಲಿಯಂ ಜೆ. ಆಡ್ಯಲ್‌ಮೆನ್ ಅವರು ಹೇ ಮಾರ್ಕೆಟ್ ಪ್ರಕರಣದ ಚರಿತ್ರೆಯನ್ನು ವಿಸ್ತೃತವಾಗಿ ವಿವರಿಸಿರುವ ‘ಹೇ ಮಾರ್ಕೆಟ್ ರೀ-ವಿಸಿಟೆಡ್’ ಕೃತಿಯ ಭಾರತೀಯ ಆವೃತ್ತಿಗೆ 2009ರ ಮೇ 4ರಂದು ಬರೆದ ಮುನ್ನುಡಿಯಲ್ಲಿ ಹೀಗೆ ಗುರುತಿಸಿದ್ದಾರೆ: ‘‘ಇಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಫೈವ್‌ಸ್ಟಾರ್ ಟ್ರೇಡ್ ಯೂನಿಯನ್ ಸಂಸ್ಕೃತಿ ಆವಿಷ್ಕರಿಸುತ್ತಿದೆ. ಇಂತಹ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ನಾಯಕರು ಹೇ ಮಾರ್ಕೆಟ್ ಹುತಾತ್ಮರನ್ನು ಕೇವಲ ಮೇ 1ರಂದು ವೈಭವೀಕರಿಸಿ ಮೇ ದಿನದ ಜನಪ್ರಿಯತೆಯನ್ನು ಕೇವಲ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆ ಹುತಾತ್ಮರ ಧೀರ ಧೀಮಂತಿಕೆಯಲ್ಲಿ ಹೆಜ್ಜೆ ಹಾಕದೆ ವರ್ಗ ಸಖ್ಯತೆಯ ಧೋರಣೆಗಳನ್ನು ಅನುಸರಿಸುತ್ತಾ ಶೋಷಕರೊಂದಿಗೆ ಶಾಮೀಲಾಗುತ್ತಿದ್ದಾರೆ. ಇಂತಹ ನಾಯಕರು ಹೇ ಮಾರ್ಕೆಟ್ ಹುತಾತ್ಮ ಪರಂಪರೆಗಳನ್ನು ಮುಂದೊಯ್ಯಲಾರರು, ಮೇಲಾಗಿ ಅವರಿಗೆ ಆ ಹಕ್ಕೂ ಇರುವುದಿಲ್ಲ.’’
ಹೇ ಮಾರ್ಕೆಟ್ ಘಟನೆ ನಡೆದು ಇಂದಿಗೆ 138 ವರ್ಷಗಳಾದವು. ಜಗತ್ತಿನಲ್ಲಿ ನೂರಕ್ಕೂ ಅಧಿಕ ವರ್ಷಗಳಿಂದ ನಡೆದು ಬರುತ್ತಿರುವ ಮೇ ದಿನದ ಆ ಕ್ರಾಂತಿಕಾರಿ ಪರಂಪರೆ ಈಗಲೂ ಜಗದ ಎಲ್ಲಾ ಕಾರ್ಮಿಕ ಚಳವಳಿಗೆ ಹೊಸ ಸ್ಫೂರ್ತಿ ಹಾಗೂ ಚೈತನ್ಯದ ಕಾವನ್ನು ನೀಡುತ್ತಲೇ ಬಂದಿದೆ. ಪ್ರತೀ ಬಾರಿಯೂ ಜಾಗತಿಕವಾಗಿ ಒಂದೊಂದು ಸವಾಲನ್ನು ಮೇ ದಿನ ತನ್ನ ಘೋಷಣೆಯನ್ನಾಗಿ ಅಳವಡಿಸಿಕೊಳ್ಳುತ್ತಿದೆ. ಈ ಬಾರಿ ಜಾಗತಿಕವಾಗಿ ಬಂಡವಾಳಶಾಹಿ ಯುದ್ಧದ ಹೆಸರಲ್ಲಿ ಫೆಲೆಸ್ತೀನ್ ಜನರ ಮೇಲೆ ನಡೆಸುತ್ತಿರುವ ದಾಳಿಯ ವಿರುದ್ಧ ಮೇ ದಿನ ಕೇಂದ್ರೀಕರಿಸಲಾಗಿದೆ. ಹಾಗೆಯೇ ಭಾರತದಲ್ಲಿ ಹೆಡೆ ಎತ್ತಿ ನಿಂತಿರುವ ಫ್ಯಾಶಿಸಂ ಸೋಲಿಸುವ ಸವಾಲನ್ನು ಭಾರತದ ಕಾರ್ಮಿಕ ವರ್ಗ ತನ್ನ ಪ್ರಧಾನ ಕರ್ತವ್ಯವನ್ನಾಗಿಸಿಕೊಳ್ಳಬೇಕಾಗಿದೆ. ಈ ವರ್ಷದ ಮೇ ದಿನಾಚರಣೆಯು ಭವಿಷ್ಯದಲ್ಲಿ ಹೊಸದೊಂದು ಭರವಸೆಗೆ ನಾಂದಿಯಾಗಲಿ ಎಂದು ದೃಢವಾಗಿ ನಂಬೋಣ.