ಬೇಸಿಗೆಯಲ್ಲಿ ಲಿಂಬೆ ಹಣ್ಣಿಗೆ ಹೆಚ್ಚಿದ ಬೇಡಿಕೆ

Update: 2024-04-15 15:15 IST
ಬೇಸಿಗೆಯಲ್ಲಿ ಲಿಂಬೆ ಹಣ್ಣಿಗೆ ಹೆಚ್ಚಿದ ಬೇಡಿಕೆ
  • whatsapp icon

ಹೊಸಕೋಟೆ: ಬಿಸಿಲ ಬೇಗೆ ಹೆಚ್ಚಿದ್ದು, ಜನ ಬಾಯಾರಿಕೆ ನೀಗಿಸಲು ಲಿಂಬೆ ಹಣ್ಣಿನ ಜ್ಯೂಸ್‌ನ ಮೊರೆ ಹೋಗಿದ್ದಾರೆ. ಇದು ಲಿಂಬೆ ಹಣ್ಣಿನ ದರದ ಏರಿಕೆಗೂ ಕಾರಣವಾಗಿದೆ.

ಲಿಂಬೆ ಹಣ್ಣು ಕೇವಲ ಜ್ಯೂಸ್‌ಗಷ್ಟೇ ಅಲ್ಲ. ಇತರ ಅಡುಗೆ ಅವಶ್ಯಕತೆಗಳಿಗೂ ಬೇಕಾಗುತ್ತದೆ. ಆದರೆ ಗಗನಕ್ಕೇರಿರುವ ದರದಿಂದಾಗಿ ಜನ ಲಿಂಬೆ ಹಣ್ಣು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ದರ ಹೆಚ್ಚಳ ಮೇ ಅಂತ್ಯದವರೆಗೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಹವಾಮಾನ ವೈಪರೀತ್ಯದಿಂದ ಲಿಂಬೆ ಹಣ್ಣಿನ ಇಳುವರಿಯೂ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಲಿಂಬೆ ಹಣ್ಣಿನ ಲಭ್ಯತೆಯೂ ಕಡಿಮೆಯಾಗಿದೆ.

ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ?: ಮಾರುಕಟ್ಟೆಯಲ್ಲಿ 1,000 ಲಿಂಬೆಹಣ್ಣಿನ ಬೆಲೆ 5,500ರೂ. ರಿಂದ 7,000 ರೂ.ವರೆಗೆ ತಲುಪಿದೆ. ಈ ಹಿಂದೆ ದರ 2,500 ರೂ.ಯಿಂದ 3,000 ರೂ.ವರೆಗೆ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ 20 ರೂ.ಗೆ ಚಿಕ್ಕ ಗಾತ್ರದ ಮೂರು ಲಿಂಬೆಹಣ್ಣು ಸಿಗುತ್ತಿವೆ. ಉತ್ತಮ ಗಾತ್ರದ ಲಿಂಬೆ ಹಣ್ಣಿಗೆ 10 ರೂ. ಇದೆ. ಹಾಗಾಗಿ, ಗ್ರಾಹಕರು ಲಿಂಬೆಹಣ್ಣು ಖರೀದಿಗೆ ಹಿಂಜರಿಯುವಂತಾಗಿದೆ.

ಮಳೆಗಾಲದಲ್ಲಾದರೆ 10 ರೂ.ಗೆ 5 ಲಿಂಬೆ ಹಣ್ಣುಸಿಗುತ್ತಿತ್ತು. ಆದರೆ, ಬೇಸಿಗೆಯ ಈ ಸಂದರ್ಭದಲ್ಲಿ 10 ರೂ. ಕೊಟ್ಟರೆ ಉತ್ತಮ ಗ್ರಾತ್ರದ ಒಂದು ಅಥವಾ 20 ರೂ.ಗೆ ಸಣ್ಣಗಾತ್ರದ ಮೂರು ಲಿಂಬೆ ಸಿಗುತ್ತಿದೆ. ವಿಧಿಯಿಲ್ಲದೆ ಖರೀದಿಸುವಂತಾಗಿದೆ.

 ರಂಜಿತಾ, ಗೃಹಿಣಿ ಚಿಕ್ಕಕೋಲಿಗ

ಬೇಸಿಗೆಯಲ್ಲಿ ಲಿಂಬೆ ಹಣ್ಣಿನ ಪಾನೀಯಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಲಿಂಬೆಹಣ್ಣಿನ ಬೆಲೆ ಹೆಚ್ಚಾಗಿದೆ. ನಾವು ಅನಿವಾರ್ಯವಾಗಿ ಒಂದೇ ಬಾರಿ ಹೆಚ್ಚು ಹಣ್ಣು ಖರೀದಿಸುತ್ತೇವೆ. ಇದರಿಂದ ಸ್ವಲ್ಪಅನುಕೂಲ ಆಗುತ್ತಿದೆ.

ಕೃಷ್ಣಪ್ಪ, ಜ್ಯೂಸ್ ವ್ಯಾಪಾರಿ

ಪ್ರತೀ ಬೇಸಿಗೆಯಲ್ಲಿ ಲಿಂಬೆ ಹಣ್ಣಿನ ಇಳುವರಿ ಕಡಿಮೆಯಾಗುತ್ತದೆ. ಜತೆಗೆ ಮಳೆ ಇಲ್ಲದೇ ಇರುವುದು ಇಳುವರಿ ಕಡಿಮೆಯಾಗಲು ಕಾರಣವಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಲಿಂಬೆಹಣ್ಣು ಬರುತ್ತಿಲ್ಲ. ಹಾಗಾಗಿ ದರ ಹೆಚ್ಚಾಗಿದೆ.

ಮಹಾಲಿಂಗಪ್ಪ, ವ್ಯಾಪಾರಿ ಹೊಸಕೋಟೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News