ಶ್ರೀಲಂಕಾ ಹಾದಿಯಲ್ಲಿ ಭಾರತ?

Update: 2024-12-24 05:24 GMT

ಸಾಂಕ್ರಾಮಿಕ ರೋಗಗಳು ಹಾಗೂ ಯುದ್ಧಗಳಲ್ಲಿ ಮೃತಪಟ್ಟವರಿಗಿಂತಲೂ ದುಪ್ಪಟ್ಟು ಪ್ರಮಾಣದ ಜನರು ಜನಾಂಗೀಯ ಹಿಂಸಾಚಾರ ಮತ್ತು ಕೋಮು ಗಲಭೆಗಳಲ್ಲಿ ಮೃತಪಟ್ಟಿದ್ದಾರೆ ಎನ್ನುತ್ತದೆ ಇತಿಹಾಸ. ಜನಾಂಗೀಯ ಮತ್ತು ಕೋಮು ಶ್ರೇಷ್ಠತೆಯ ವ್ಯಸನ ಸೃಷ್ಟಿಸುವ ದುರಂತವಿದು. ಈ ಮಾತಿಗೆ ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶದಂತಹ ನೆರೆಯ ದೇಶಗಳ ಉದಾಹರಣೆಗಳು ಕಣ್ಣ ಮುಂದೆಯೇ ಇವೆ. ಹೀಗಿದ್ದೂ, ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಭಾರತ ಕೂಡಾ 1990ರ ದಶಕದ ನಂತರ ಕೋಮು ಧ್ರುವೀಕರಣಕ್ಕೆ ಪಕ್ಕಾಗಿ, ಬಹುಸಂಖ್ಯಾತ ಶ್ರೇಷ್ಠತೆಯ ವ್ಯಸನದಿಂದ ಪತನದತ್ತ ಸಾಗುತ್ತಿದೆ. ನಮ್ಮ ದೇಶದ ನೆರೆಯ ಪುಟ್ಟ ದ್ವೀಪ ರಾಷ್ಟ್ರ ಶ್ರೀಲಂಕಾ ಕೂಡಾ ಸಿಂಹಳೀಯರ ಬಹುಸಂಖ್ಯಾತ ಶ್ರೇಷ್ಠತೆಯ ವ್ಯಸನಕ್ಕೆ ದಿವಾಳಿಯಾಗಿದ್ದು ಇತ್ತೀಚಿನ ಜ್ವಲಂತ ನಿದರ್ಶನ.

ಸುಮಾರು ಮೂರು ದಶಕಗಳ ಕಾಲ ಸಿಂಹಳೀಯರು ಹಾಗೂ ತಮಿಳರ ನಡುವೆ ನಡೆದ ರಕ್ತಸಿಕ್ತ ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಅಂತ್ಯ ಹಾಡಿದ ಶ್ರೇಯಸ್ಸು 2005ರಿಂದ 2015ರ ನಡುವೆ ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹಿಂದಾ ರಾಜಪಕ್ಸೆಗೆ ನಿಸ್ಸಂಶಯವಾಗಿ ಸಲ್ಲಬೇಕು. ಆದರೆ, ಅವರು ಈ ಸಾಧನೆಯನ್ನು ಮಾಡಲು ಅನುಸರಿಸಿದ್ದು ಮಾತ್ರ ದಬ್ಬಾಳಿಕೆ ಹಾಗೂ ರಕ್ತಸಿಕ್ತ ದೌರ್ಜನ್ಯದ ಮಾರ್ಗವನ್ನೇ. ಹೀಗಾಗಿಯೇ, ತಮಿಳರ ಹಕ್ಕುಗಳ ಪರವಾಗಿ ಹಿಂಸಾತ್ಮಕ ಮಾರ್ಗವನ್ನು ಹಿಡಿದಿದ್ದ ಎಲ್‌ಟಿಟಿಇಯನ್ನು ನಿರ್ದಯವಾಗಿ ಬಗ್ಗುಬಡಿದ ನಂತರ ಕೂಡಾ, ಮಹಿಂದಾ ರಾಜಪಕ್ಸೆಯ ರಕ್ತದಾಹ ಇಂಗಲಿಲ್ಲ. ಹೀಗಾಗಿ, ಸಿಂಹಳೀಯರ ಬಹುಸಂಖ್ಯಾತ ಶ್ರೇಷ್ಠತೆಯ ವ್ಯಸನವನ್ನು ಬಡಿದೆಬ್ಬಿಸಿದ್ದ ಮಹಿಂದಾ ರಾಜಪಕ್ಸೆ, ನಂತರ, ಶ್ರೀಲಂಕಾ ದೇಶದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡರು. ಶ್ರೀಲಂಕಾದ ಬಹುಸಂಖ್ಯಾತ ಸಿಂಹಳೀಯರನ್ನು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಯಶಸ್ವಿಯಾಗಿ ಎತ್ತಿ ಕಟ್ಟಿದರು.

ಅದಕ್ಕೆ ಕಾರಣವೂ ಇತ್ತು: ತಮಿಳು ಸಂಘಟನೆ ಎಲ್‌ಟಿಟಿಇಯನ್ನು ಬಗ್ಗು ಬಡಿದ ನಂತರ ಶ್ರೀಲಂಕಾದ ಬಹುಸಂಖ್ಯಾತರಾದ ಸಿಂಹಳೀಯರ ಅಸ್ಮಿತೆಯಾಗಿ ರೂಪುಗೊಂಡಿದ್ದ ಮಹಿಂದಾ ರಾಜಪಕ್ಸೆ, ಅದರ ಮರೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಅವರ ನಿರಂಕುಶ ತೀರ್ಮಾನಗಳಿಂದ ಶ್ರೀಲಂಕಾದ ಜಿಡಿಪಿ ನಕಾರಾತ್ಮಕ ಬೆಳವಣಿಗೆ ಸಾಧಿಸತೊಡಗಿತ್ತು. ವಿದೇಶಿ ಸಾಲ ಅಂಕೆ ಮೀರಿತ್ತು. ಹಣದುಬ್ಬರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನಿರುದ್ಯೋಗ ಪ್ರಮಾಣವೂ ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದಕ್ಕೆಲ್ಲ ಕಳಶವಿಟ್ಟಂತೆ ಅವರ ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮೇರೆ ಮೀರಿತ್ತು. ಇದೆಲ್ಲದರ ಪರಿಣಾಮ ಶ್ರೀಲಂಕಾದ ಆರ್ಥಿಕತೆ ದಿಢೀರನೆ ಕುಸಿದು ಬಿದ್ದಿತ್ತು.

ಯಾವುದೇ ಸರ್ವಾಧಿಕಾರಿ ಮನಸ್ಥಿತಿಯ ಆಡಳಿತಗಾರ ತನ್ನ ಹುಳುಕುಗಳನ್ನು ಮುಚ್ಚಿಡಲು ಮೊದಲು ಮಾಡುವುದೇ ದೇಶದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ತುಪ್ಪ ಸುರಿಯುವುದು. ಅಡಾಲ್ಫ್ ಹಿಟ್ಲರ್‌ನಂತಹ ಸರ್ವಾಧಿಕಾರಿಗಳು ಈ ಮಾತಿಗೆ ಉತ್ತಮ ನಿದರ್ಶನ. ಮಹಿಂದಾ ರಾಜಪಕ್ಸೆ ಕೂಡಾ ಸರ್ವಾಧಿಕಾರಿ ಮನಸ್ಥಿತಿಗೆ ಪಕ್ಕಾಗಿದ್ದುದರಿಂದ ಹಾಗೂ ತೀವ್ರ ಭ್ರಷ್ಟರಾಗಿದ್ದುದರಿಂದ, ಶ್ರೀಲಂಕಾ ಪ್ರಜೆಗಳ ಗಮನವನ್ನು ಬೇರೆಡೆ ಸೆಳೆಯಲು ಜನಾಂಗೀಯ ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡಿದರು. ಬಹುಸಂಖ್ಯಾತ ಶ್ರೇಷ್ಠತೆಯ ವ್ಯಸನದಿಂದ ನರಳುತ್ತಿದ್ದ ಸಿಂಹಳೀಯರು ಕೂಡಾ ಕಣ್ಣು ಮುಚ್ಚಿಕೊಂಡು ಅದಕ್ಕೆ ತಮ್ಮ ಸಹಕಾರ ನೀಡಿದರು. ಆದರೆ, ದೇಶದ ಆರ್ಥಿಕತೆ ದಿವಾಳಿಯಾಗಿದೆ ಎಂದು ಅರ್ಥವಾಗುವ ಹೊತ್ತಿಗೆ ಅವರೇ ಬೀದಿಗೆ ಬಿದ್ದಿದ್ದರು. ಕೊನೆಗೆ ಮಹಿಂದಾ ರಾಜಪಕ್ಸೆ ಸರಕಾರದ ಪದಚ್ಯುತಿಗೆ ಸ್ವತಃ ಬೀದಿಗಿಳಿದ ಸಿಂಹಳೀಯರು, ಅಧ್ಯಕ್ಷರ ನಿವಾಸಕ್ಕೇ ಮುತ್ತಿಗೆ ಹಾಕಿದರು. ಭದ್ರತಾ ಸಿಬ್ಬಂದಿಯನ್ನು ಭೇದಿಸಿ, ಅವರು ಅಧ್ಯಕ್ಷರ ನಿವಾಸದ ಒಳ ಹೊಕ್ಕಾಗ ಅವರಿಗೆ ಆಘಾತಕಾರಿ ಸತ್ಯವೊಂದು ಎದುರಾಯಿತು. ಕಂತೆ ಕಂತೆ ಶ್ರೀಲಂಕಾ ನಗದು ಅಧ್ಯಕ್ಷರ ನಿವಾಸದಲ್ಲಿ ಸಂಗ್ರಹವಾಗಿರುವುದು ಬಯಲಾಯಿತು. ಅಲ್ಲಿಯವರೆಗೆ ಮಹಿಂದಾ ರಾಜಪಕ್ಸೆಯನ್ನು ತಮ್ಮ ಅಸ್ಮಿತೆ ಎಂದೇ ಪರಿಗಣಿಸಿದ್ದ ಸಿಂಹಳೀಯರಿಗೆ, ಅವರ ನಿಜ ಮುಖ ಬಯಲಾಗಿತ್ತು. ಆದರೆ, ಅಷ್ಟು ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ತಮ್ಮ ಬಹುಸಂಖ್ಯಾತ ಶ್ರೇಷ್ಠತೆಯ ವ್ಯಸನದಿಂದ ಇಡೀ ದೇಶದ ಆರ್ಥಿಕತೆಯೇ ಎಕ್ಕುಟ್ಟಿ ಹೋಗುವಂತೆ ಮಾಡಿದ್ದರು ಶ್ರೀಲಂಕಾದ ಬಹುಸಂಖ್ಯಾತರಾದ ಸಿಂಹಳೀಯರು.

ಸದ್ಯ, ಬಹುಸಂಖ್ಯಾತ ಶ್ರೇಷ್ಠತೆ ವ್ಯಸನದಿಂದ ಶ್ರೀಲಂಕಾದಲ್ಲಿ ಏನೆಲ್ಲ ಆಗಿ ಹೋಯಿತೋ, ಅದರ ನೆರಳಿನಂಥ ಘಟನೆಗಳು ಭಾರತದಲ್ಲೂ ಕಾಣಿಸಿಕೊಳ್ಳತೊಡಗಿವೆ. ಭಾರತದ ವಿದೇಶಿ ಸಾಲ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ, ಹಣದುಬ್ಬರ ಅಂಕೆ ಮೀರಿದೆ, ನಿರುದ್ಯೋಗ ಕಳೆದ ಅರ್ಧ ಶತಮಾನದಲ್ಲೇ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ. ಜಿಡಿಪಿ ಬೆಳವಣಿಗೆ ಕುಂಠಿತವಾಗಿದೆ, ಕೈಗಾರಿಕಾ ಬೆಳವಣಿಗೆ ಮಂದವಾಗಿದೆ. ಆದರೆ, ಬಹುಸಂಖ್ಯಾತ ಶ್ರೇಷ್ಠತೆಯ ವ್ಯಸನ ಮಾತ್ರ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗಿದೆ. ಯಾವುದೇ ದೇಶ ಆರ್ಥಿಕವಾಗಿ ಪತನವಾಗುತ್ತಿದೆ ಎಂಬುದಕ್ಕೆ ಮುನ್ಸೂಚನೆಯಿದು.

ಶ್ರೀಲಂಕಾ ಹಾದಿಯಲ್ಲಿ ಭಾರತ?

ಭಾರತ ಕೂಡಾ ಶ್ರೀಲಂಕಾ ಹಾದಿಯಲ್ಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸತೊಡಗಿದ್ದಾರೆ. ಅದಕ್ಕೆ ಕಾರಣ: ಭಾರತದ ಬಾಹ್ಯ ಸಾಲ ಪ್ರಮಾಣ ವಿಪರೀತ ಏರಿಕೆಯಾಗಿರುವುದು, ಜಿಡಿಪಿ ಬೆಳವಣಿಗೆ ಕುಸಿತ ಕಂಡಿರುವುದು, ಶೇರು ಮಾರುಕಟ್ಟೆ ಮೌಲ್ಯ ಪತನಗೊಳ್ಳುತ್ತಿರುವುದು, ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಪ್ರಮಾಣದಲ್ಲಿ ಕುಸಿದಿರುವುದು, ನಿರುದ್ಯೋಗ ಪ್ರಮಾಣ ಕಳೆದ ಅರ್ಧ ಶತಮಾನದಲ್ಲೇ ಗರಿಷ್ಠ ಪ್ರಮಾಣಕ್ಕೆ ತಲುಪಿರುವುದು, ಕೈಗಾರಿಕಾ ಬೆಳವಣಿಗೆ ಮಂದವಾಗಿರುವುದು.

ಬಾಹ್ಯ ಸಾಲದಲ್ಲಿ ಏರಿಕೆ

ಶ್ರೀಲಂಕಾದ ಆರ್ಥಿಕತೆ ಕುಸಿದು ಬೀಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಬಾಹ್ಯ ಸಾಲ ಪ್ರಮಾಣ. 2022-23ನೇ ಸಾಲಿನಲ್ಲಿ ಶ್ರೀಲಂಕಾದ ಬಾಹ್ಯ ಸಾಲ ಪ್ರಮಾಣ 83.6 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದರಿಂದ, ಶ್ರೀಲಂಕಾ ಅನೇಕ ದೇಶಗಳ ಪಾಲಿಗೆ ಸುಸ್ತಿದಾರನಾಗಬೇಕಾಯಿತು. ಮುಖ್ಯವಾಗಿ ಚೀನಾಗೆ ದೊಡ್ಡ ಸುಸ್ತಿಗಾರನಾಗಬೇಕಾಯಿತು. ಇದರಿಂದ, ದೇಶದ ಬಹುತೇಕ ಆದಾಯವನ್ನು ಸಾಲ ಮತ್ತು ಸಾಲದ ಬಡ್ಡಿ ತೀರಿಸಲೇ ವ್ಯಯಿಸಬೇಕಾಗಿ ಬಂದಿದ್ದರಿಂದ, ಶ್ರೀಲಂಕಾದ ಆರ್ಥಿಕ ಬುನಾದಿ ಕುಸಿದು ಬಿದ್ದಿತು.

ಭಾರತ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. 2014ರವರೆಗೆ ಕೇವಲ 55 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಭಾರತದ ಬಾಹ್ಯ ಸಾಲ ಪ್ರಮಾಣ, 2024-25ನೇ ಸಾಲಿನ ವೇಳೆಗೆ ಸುಮಾರು 200 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅರ್ಥಾತ್, ಭಾರತದ ಬಾಹ್ಯ ಸಾಲ ಪ್ರಮಾಣ ಕೇವಲ ಹತ್ತೇ ವರ್ಷಗಳಲ್ಲಿ ಮೂರು ಪಟ್ಟು ಅಧಿಕವಾಗಿದೆ. ಬಾಹ್ಯ ಸಾಲಗಳ ಅಸಲು ಮತ್ತು ಬಡ್ಡಿ ತೀರಿಸಲೇ ಭಾರತ ತನ್ನ ವಾರ್ಷಿಕ ಆದಾಯದಲ್ಲಿ ಅಂದಾಜು ಶೇ. 50ರಷ್ಟು ಮೊತ್ತವನ್ನು ವ್ಯಯಿಸುತ್ತಿದೆ ಎನ್ನಲಾಗುತ್ತಿದೆ. ಇದು ಯಾವುದೇ ದೇಶದ ಆರ್ಥಿಕತೆ ರೋಗಗ್ರಸ್ತವಾಗಿರುವುದರ ಸ್ಪಷ್ಟ ಸೂಚನೆ.

ಜಿಡಿಪಿ ಕುಸಿತ

ಶ್ರೀಲಂಕಾದ ಬಹುಸಂಖ್ಯಾತ ಸಿಂಹಳೀಯ ಸಮುದಾಯವನ್ನು ಬಹುಸಂಖ್ಯಾತ ಶ್ರೇಷ್ಠತೆಯ ಅಮಲಿನಲ್ಲಿ ತೇಲಿಸಿದ್ದ ಮಹಿಂದಾ ರಾಜಪಕ್ಸೆ, ಅದರ ಮರೆಯಲ್ಲಿ ನೀಡಿದ್ದ ದುರಾಡಳಿತದಿಂದ ಶ್ರೀಲಂಕಾದ ಜಿಡಿಪಿ ಬೆಳವಣಿಗೆ -7.82ಗೆ ತಲುಪಿತ್ತು. ಇದರಿಂದ ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡು, ಶ್ರೀಲಂಕಾ ದೇಶದ ಪ್ರಮುಖ ಆದಾಯ ಮೂಲವಾಗಿದ್ದ ಪ್ರವಾಸೋದ್ಯಮದ ಮೇಲೆ ತೀವ್ರ ಪ್ರತಿಕೂಲ ಪರಿಣಾಮವುಂಟಾಗಿತ್ತು. ಇವೆಲ್ಲದರ ಪರಿಣಾಮವಾಗಿ ನಿರುದ್ಯೋಗ ಪ್ರಮಾಣವೂ ಶೇ. 6.33ಕ್ಕೆ ತಲುಪಿತ್ತು.

ಭಾರತದ ಪರಿಸ್ಥಿತಿ ಕೂಡಾ ಶ್ರೀಲಂಕಾಗಿಂತ ಭಿನ್ನವಾಗಿಲ್ಲ. ಶೇ. 8ರ ಜಿಡಿಪಿ ಬೆಳವಣಿಗೆ ಸಾಧಿಸುತ್ತಿದ್ದ ಭಾರತವು, ಈ ಸಾಲಿನ ತ್ರೈಮಾಸಿಕದಲ್ಲಿ ಶೇ. 6ರ ಆಸುಪಾಸಿನ ಜಿಡಿಪಿ ಬೆಳವಣಿಗೆ ಸಾಧಿಸಿದೆ. ಇದರಿಂದ, ಕೈಗಾರಿಕಾ ಬೆಳವಣಿಗೆ ಕುಂಠಿತಗೊಂಡಿದ್ದು, ಪ್ರಮುಖವಾಗಿ ವಾಹನ ತಯಾರಿಕಾ ಉದ್ಯಮಗಳು ತೀವ್ರ ಹಿನ್ನಡೆ ಅನುಭವಿಸಿವೆ. ನಿರುದ್ಯೋಗ ಪ್ರಮಾಣ ಶೇ. 6.7ಕ್ಕೆ ತಲುಪಿದೆ. ಭಾರತದ ಆರ್ಥಿಕತೆ ಕುಸಿಯುತ್ತಿರುವ ಮುನ್ಸೂಚನೆ ದೊರೆಯುತ್ತಿದ್ದಂತೆಯೇ ವಿದೇಶಿ ಬಂಡವಾಳಿಗರು ತಮ್ಮ ಹೂಡಿಕೆಯನ್ನು ಭಾರತದ ಮಾರುಕಟ್ಟೆಯಿಂದ ಹಿಂದೆಗೆಯುತ್ತಿರುವುದರಿಂದ, ಭಾರತದ ಶೇರು ಮಾರುಕಟ್ಟೆಯೂ ಭಾರೀ ನಷ್ಟಕ್ಕೆ ತುತ್ತಾಗತೊಡಗಿದೆ. ವ್ಯಾಪಾರ ಕೊರತೆಯು ವಿಪರೀತ ಏರಿಕೆಯಾಗಿದೆ.

ಹಣದುಬ್ಬರ

ಬಾಹ್ಯ ಸಾಲ, ಜಿಡಿಪಿ ಕುಸಿತದಿಂದ ಶ್ರೀಲಂಕಾದ ಹಣದುಬ್ಬರ ದರ ಶೇ. 45.21ಕ್ಕೆ ಏರಿಕೆಯಾಗಿತ್ತು. ಇದರಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿ, ಜನಸಾಮಾನ್ಯರ ದಿನನಿತ್ಯದ ಬದುಕು ಅಸ್ತವ್ಯಸ್ತಗೊಂಡಿತು. ಕೈಯಲ್ಲಿ ದುಡ್ಡಿದ್ದವರೂ ಒಂದು ಪೌಂಡ್ ಬ್ರೆಡ್ ಖರೀದಿಸಲಾಗದಂಥ ಆಹಾರ ಮುಗ್ಗಟ್ಟು ತಲೆದೋರಿತ್ತು. ಅದಕ್ಕೆ ಮತ್ತೊಂದು ಪ್ರಮುಖ ಕಾರಣ: ರಾಸಾಯನಿಕ ಕೃಷಿಯ ಮೇಲೆ ಏಕಾಏಕಿ ನಿಷೇಧ ಹೇರಿ, ಸಾವಯವ ಕೃಷಿಯನ್ನು ಕಡ್ಡಾಯಗೊಳಿಸಿದ್ದು, ಇದರಿಂದ ಶ್ರೀಲಂಕಾದಲ್ಲಿ ಆಹಾರ ಪದಾರ್ಥಗಳ ಕೊರತೆ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿತು. ಕೊನೆಗೆ, ಶ್ರೀಲಂಕಾ ಆರ್ಥಿಕತೆಯ ಪತನದಲ್ಲೂ ಇದು ಪ್ರಮುಖ ಪಾತ್ರ ವಹಿಸಿತು.

ಭಾರತದಲ್ಲೂ ಕೂಡಾ ಕೈಗಾರಿಕಾ ವಲಯವು ಮಂದಗತಿಯ ಬೆಳವಣಿಗೆ ಸಾಧಿಸುತ್ತಿರುವುದರಿಂದ, ಉದ್ಯೋಗ ನೇಮಕಾತಿ ಪ್ರಮಾಣವೂ ಕುಂಠಿತಗೊಂಡಿದೆ. ಇದರೊಂದಿಗೆ, ವಿದೇಶಗಳಿಂದ ಆಮದು ಪ್ರಮಾಣ ತೀವ್ರ ಗತಿಯಲ್ಲಿ ಏರಿಕೆಯಾಗಿರುವುದರಿಂದ, ಸ್ಥಳೀಯ ಕೈಗಾರಿಕೆಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗದ ಸ್ಥಿತಿ ತಲುಪಿವೆ. ಆಮದು ಪ್ರಮಾಣದ ಏರುಗತಿಯಿಂದ, ವಿದೇಶಿ ವಿನಿಮಯ ನಗದಾದ ಡಾಲರ್‌ಗಾಗಿನ ಬೇಡಿಕೆಯೂ ಹೆಚ್ಚಾಗಿದ್ದು, ಇದರಿಂದ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಡಿಸೆಂಬರ್ 19, 2024ಕ್ಕೆ ಅಂತ್ಯಗೊಂಡಂತೆ ರೂಪಾಯಿ ಎದುರು ಡಾಲರ್ ಬೆಲೆ 85.12ಗೆ ಏರಿಕೆಯಾಗಿದೆ.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಅಧಿಕಾರ ವಹಿಸಿಕೊಂಡ ನಂತರ, ಕಠಿಣ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಸಾಧ್ಯತೆ ಇರುವುದಿಂದ, ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಪತನಗೊಂಡು, ಒಂದು ಡಾಲರ್‌ಗೆ 90 ರೂ.ಗೆ ತಲುಪುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಡಾಲರ್ ಎದುರು ರೂಪಾಯಿ ನಿರಂತರವಾಗಿ ಅಪಮೌಲ್ಯಗೊಳ್ಳುತ್ತಿರುವುದರಿಂದ, ಅತಿ ಹೆಚ್ಚು ರಫ್ತು ಅವಲಂಬನೆಗೊಳಗಾಗಿರುವ ಭಾರತದಲ್ಲಿನ ದಿನಬಳಕೆಯ ವಸ್ತುಗಳ ಬೆಲೆಯೂ ವಿಪರೀತವಾಗಿ ಏರಿಕೆಯಾಗತೊಡಗಿದೆ. ‘ಇಕನಾಮಿಕ್ ಟೈಮ್ಸ್’ ವರದಿಯ ಪ್ರಕಾರ, ಮುಂದಿನ ವರ್ಷದ ಆರಂಭದ ವೇಳೆಗೆ ದಿನಬಳಕೆ ವಸ್ತುಗಳ ಬೆಲೆ ಶೇ. 5ರಿಂದ ಶೇ. 20ರಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇವೆಲ್ಲದರ ಒಟ್ಟಾರೆ ಪರಿಣಾಮವಾಗಿ, ಭಾರತದ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗುತ್ತಿದೆ. ಭಾರತದ ಆರ್ಥಿಕತೆ ದಿಢೀರನೆ ಶ್ರೀಲಂಕಾ ಆರ್ಥಿಕತೆಯಂತೆ ಕುಸಿದು ಬೀಳದಿದ್ದರೂ, ಅಂತಹ ಮುನ್ಸೂಚನೆಗಳನ್ನು ಈಗಾಗಲೇ ಪ್ರದರ್ಶಿಸತೊಡಗಿದೆ ಎಂಬುದು ಆರ್ಥಿಕ ತಜ್ಞರ ಅಭಿಮತವಾಗಿದೆ. ಯಾವುದೇ ದೇಶ ಜನಾಂಗೀಯ ಶ್ರೇಷ್ಠತೆಯ ವ್ಯಸನಕ್ಕೆ ತುತ್ತಾದರೆ, ಅದರಲ್ಲೂ ಅಂತಹ ದೇಶದ ಬಹುಸಂಖ್ಯಾತರು ತುತ್ತಾದರೆ ಆಗುವ ಅನಾಹುತವಿದು.

ದುರಂತವೆಂದರೆ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿದ್ದಾಗ, ಭಾರತದ ಆರ್ಥಿಕ ಆರೋಗ್ಯದ ಬಗ್ಗೆ ಪುಂಖಾನುಪುಂಖ ಚರ್ಚೆಗಳನ್ನು ಹಮ್ಮಿಕೊಳ್ಳುತ್ತಿದ್ದ ಮುಖ್ಯವಾಹಿನಿ ಮಾಧ್ಯಮಗಳು, ಇಂದು ಭಾರತದ ಆರ್ಥಿಕ ದುಸ್ಥಿತಿಯ ಬಗ್ಗೆ ತುಟಿಯನ್ನೇ ಬಿಚ್ಚದಿರುವುದು. ಹೀಗಾಗಿ, ದೇಶದ ಜನತೆಗೆ ಭಾರತದ ಆರ್ಥಿಕ ಆರೋಗ್ಯದ ನೈಜ ಚಿತ್ರಣವೇ ದೊರೆಯದಂತಾಗಿದೆ. ಮತ್ತೂ ದುರಂತವೆಂದರೆ, ರೋಗಗ್ರಸ್ತಗೊಳ್ಳುತ್ತಿರುವ ಭಾರತದ ಆರ್ಥಿಕತೆ ಬಗ್ಗೆ ಪರ್ಯಾಯ ಮಾಧ್ಯಮಗಳು ಸಾಧ್ಯವಾದಷ್ಟೂ ಗಮನ ಸೆಳೆಯುತ್ತಿದ್ದರೂ, ಜನಾಂಗೀಯ ಶ್ರೇಷ್ಠತೆ ಹಾಗೂ ಕೋಮುವಾದದ ಅಮಲಿಗೆ ತುತ್ತಾಗಿರುವ ಬಹುಸಂಖ್ಯಾತ ಹಿಂದೂಗಳು, ಅಂತಹ ಪರ್ಯಾಯ ಮಾಧ್ಯಮಗಳನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೇ ಹೋಗದೆ, ವಾಟ್ಸ್ ಆ್ಯಪ್ ಯೂನಿವರ್ಸಿಟಿಯ ಸುಳ್ಳುಗಳಿಗೆ ತಮ್ಮ ಮಿದುಳು ಅಡವಿಟ್ಟಿದ್ದಾರೆ.

ಹೀಗಾಗಿಯೇ, ಖ್ಯಾತ ಆರ್ಥಿಕ ಚಿಂತಕ ಕಾರ್ಲ್ ಮಾರ್ಕ್ಸ್ ಧರ್ಮವನ್ನು ಅಫೀಮಿಗೆ ಹೋಲಿಸಿದ್ದು!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸದಾನಂದ ಗಂಗನಬೀಡು

contributor

Similar News