ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾಗಲಿ

ಕರಾವಳಿ ಕರ್ನಾಟಕದ ರೈಲ್ವೆ ಸಮಸ್ಯೆಗಳನ್ನು ಆಲಿಸಲು ಹಾಗೂ ಸೂಕ್ತ ಸ್ಪಂದನೆಯನ್ನು ನೀಡಲು, ರೈಲು ಸಹಾಯಕ ಸಚಿವ ವಿ. ಸೋಮಣ್ಣ ಅವರು ಮಂಗಳೂರಿನಲ್ಲಿ ಜುಲೈ 17ರಂದು ಸಭೆ ಕರೆದಿದ್ದಾರೆ. ಮುಂಬೈಯಿಂದ ಮಹಾರಾಷ್ಟ್ರ ಕನ್ನಡಿಗರು ಕೂಡ ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ‘ರೈಲು ಯಾತ್ರಿ ಸಂಘ ಮುಂಬೈ’ ಇವರು ಕರ್ನಾಟಕದ ಕನ್ನಡಿಗ ರೈಲು ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ‘ಕರಾವಳಿ ಕರ್ನಾಟಕ’ದ ಆಸ್ನೋಟಿಯಿಂದ ಮಂಗಳೂರು ಸೆಂಟ್ರಲ್ ತನಕದ ರೈಲು ಪ್ರಯಾಣಿಕರ ಪರವಾಗಿ ವಿನಂತಿಸುವ ಕೆಲವೊಂದು ಅತಿಮುಖ್ಯ ಬೇಡಿಕೆಗಳು.

Update: 2024-07-16 09:16 GMT

1. ಕೊಂಕಣ ರೈಲ್ವೆ ಹಳಿಯ ಡಬ್ಲಿಂಗ್:

ಕೊಂಕಣ ರೈಲ್ವೆಯಲ್ಲಿ ಎಷ್ಟು ರೈಲುಗಳನ್ನು ‘ಅಪಘಾತ ರಹಿತ’ವಾಗಿ ಓಡಿಸಬಹುದೋ ಅದಕ್ಕಿಂತ ಹೆಚ್ಚುವರಿ ಶೇ. 40 ಪ್ರಯಾಣಿಕರ ರೈಲುಗಳನ್ನು ಈಗಾಗಲೇ ತೋಕೂರು-ರೋಹ ನಡುವೆ ಓಡಿಸಲಾಗುತ್ತದೆ. ಇದರಿಂದಾಗಿ ದಿನದ ಯಾವುದೇ ಸಮಯದಲ್ಲಿ ಮುಂಬೈಯಿಂದ ಮಂಗಳೂರು ಹಾಗೂ ಮಂಗಳೂರಿನಿಂದ ಮುಂಬೈಗೆ ಕೊಂಕಣ ರೈಲ್ವೆಯಲ್ಲಿ 26 ರೈಲುಗಳು ಆಚೀಚೆ ಹೋಗುತ್ತಿರುವುದನ್ನು ಕೊಂಕಣ್ ರೈಲ್ವೆ ಸ್ಟೇಟಸ್ ನಕ್ಷೆಯಲ್ಲಿ ಕಾಣಬಹುದಾಗಿದೆ.

ಇಷ್ಟೊಂದು ನಿಬಿಡವಾಗಿ ರೈಲುಗಳನ್ನು ಓಡಿಸುವಾಗ ಅಪಘಾತದ ಸಂಭವ ಹೆಚ್ಚಿದೆ. ಹಾಗಾಗಿ ಕೊಂಕಣ ರೈಲ್ವೆಯ ತೋಕೂರಿಂದ ರೋಹ ತನಕದ 760 ಕಿಲೋಮೀಟರ್ ರೈಲು ಮಾರ್ಗವನ್ನು ಡಬ್ಲಿಂಗ್ ಮಾಡುವುದು ನಮ್ಮ ಪ್ರಮುಖ ಬೇಡಿಕೆ ಆಗಿದೆ.

ರೋಹದಿಂದ ವೀರ್ ತನಕದ ಕೊಂಕಣ ರೈಲ್ವೆಯ ಭಾಗದ ಹಳಿಗಳನ್ನು ಈಗಾಗಲೇ ಡಬ್ಲಿಂಗ್ ಮಾಡಲಾಗಿದೆ. ನಮ್ಮ ವಿನಂತಿಯ ಪ್ರಕಾರ ಕೊಂಕಣ ರೈಲ್ವೆಯ ಹಳಿಗಳನ್ನು ಐದು ವಿವಿಧ ಭಾಗಗಳಲ್ಲಿ ಡಬ್ಲಿಂಗ್ ಕೆಲಸವನ್ನು ಕೈಗೆತ್ತಿಕೊಂಡು 2024 ಡಿಸೆಂಬರ್ ತಿಂಗಳಲ್ಲಿ ಮುಗಿಸುವ ಸ್ವಷ್ಟ ಗುರಿಯನ್ನು ಹಾಕಬೇಕಾಗಿದೆ. ಡಬ್ಲಿಂಗ್ ಮಾಡಲು ಬಹಳ ಸುಲಭ. ಯಾಕೆಂದರೆ ಪ್ರತೀ ಸೇತುವೆಯನ್ನು ನಿರ್ಮಾಣ ಮಾಡಿದಾಗಲೇ ಎರಡು ಹಳಿಗಳನ್ನು ಹಾಸಲು ಬೇಕಾದಷ್ಟು ಅಗಲವನ್ನು ಇಡಲಾಗಿದೆ.

2. ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ:

ಕೊಂಕಣ ರೈಲ್ವೆಯು ಸುಮಾರು ರೂ. 5,000 ಕೋಟಿಯಷ್ಟು ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಲಾಗಿದೆ. ಕೊಂಕಣ ರೈಲ್ವೆಯ ಬಳಿ ಹಳಿ ಡಬ್ಲಿಂಗ್ ಮಾಡಲು ಹಣವಿಲ್ಲ. ಆದುದರಿಂದ ಕೊಂಕಣ ರೈಲ್ವೆಯನ್ನು ಬರ್ಕಾಸ್ತುಗೊಳಿಸಿ, ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿದಲ್ಲಿ ಆಗ ಹಳಿ ಡಬ್ಲಿಂಗ್ ಕೆಲಸವನ್ನು ತ್ವರಿತವಾಗಿ ಮಾಡಬಹುದು.

ಕೊಂಕಣ ರೈಲ್ವೆಯ ಬಳಿ ಹೆಚ್ಚುವರಿ ಹಾಗೂ ಹೊಸ ಜರ್ಮನ್ ತಂತ್ರಜ್ಞಾನದ ಎಲ್.ಎಚ್.ಬಿ. ರೈಲು ಕೋಚುಗಳನ್ನು ಖರೀದಿಸಲು ಹಣವಿಲ್ಲ.

3. ವೇಗ ಹೆಚ್ಚಳ:

ಪ್ರಸಕ್ತ ಮಂಗಳೂರು ಸೆಂಟ್ರಲ್‌ನಿಂದ ಆರಂಭವಾಗಿ ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಸ್ ತನಕ ಸಂಚರಿಸುವ ರೈಲು ಸಂಖ್ಯೆ 12620 ಈ ರೈಲು-1,135 ಕಿಲೋಮೀಟರ್ ದೂರವನ್ನು ಕ್ರಮಿಸಲು 16 ಗಂಟೆ 35 ನಿಮಿಷ ತೆಗೆದುಕೊಳ್ಳುತ್ತಿದೆ. ಅಂದರೆ ಇದರ ಸರಾಸರಿ ವೇಗ ಕೇವಲ ಪ್ರತೀ ಗಂಟೆಗೆ 55 ಕಿ.ಮೀ. ಮಾತ್ರ!!

ಕೊಂಕಣ ರೈಲ್ವೆ ಹಳಿಗಳನ್ನು ಡಬ್ಲಿಂಗ್ ಮಾಡಿದಲ್ಲಿ ನಾವು ಪ್ರತೀ ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ ಸಂಚರಿಸಿ ಕೇವಲ 8 ಗಂಟೆಯೊಳಗೆ ಮುಂಬೈ ತಲುಪಬಹುದಾಗಿದೆ. ಇದರಿಂದಾಗಿ ಹಣ, ಶ್ರಮ ಹಾಗೂ ಸಮಯದ ಉಳಿತಾಯವೂ ಆಗಲಿದೆ

4. ಬಾಂದ್ರಾ ಟರ್ಮಿನಸ್‌ನಿಂದ ಮಂಗಳೂರು ಜಂಕ್ಷನ್‌ಗೆ ಪ್ರತಿದಿನದ ಹೊಸ ಎಕ್ಸ್‌ಪ್ರೆಸ್ ರೈಲು ಬೇಕು:

ಮಧ್ಯ ಮುಂಬೈಯಿಂದ ಮಂಗಳೂರಿಗೆ ಪ್ರತಿದಿನ 13 ರೈಲುಗಳು ಹೋಗುತ್ತಿವೆ. ಆದರೆ ಪಶ್ಚಿಮ ಮುಂಬೈಯಿಂದ ಒಂದೇ ಒಂದು ರೈಲು ಮಂಗಳೂರು ಕಡೆ ಹೋಗುತ್ತಿಲ್ಲ. ಆದುದರಿಂದ ಮುಂಬೈ ಪಶ್ಚಿಮದ ಕಡೆ ವಾಸಿಸುವ ಮಹಾರಾಷ್ಟ್ರ ಕನ್ನಡಿಗರು ಮೂರು ಲೋಕಲ್ ರೈಲು ಹಾಗೂ ಎರಡು ಆಟೋರಿಕ್ಷಾ ಹಿಡಿದು ಮಧ್ಯ ರೈಲ್ವೆಯ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಹೋಗಬೇಕು. ಅಲ್ಲಿಂದ ಮಂಗಳೂರಿಗೆ ಹೋಗುವ ರೈಲನ್ನು ಹತ್ತಿ ಪ್ರಯಾಣವನ್ನು ಮುಂದುವರಿಸಬೇಕಾಗಿದೆ.

ಆದುದರಿಂದ ನಮಗೆ ಜರ್ಮನ್ ತಂತ್ರಜ್ಞಾನದ ಎಲ್.ಎಚ್.ಬಿ. ಬೋಗಿಗಳಿರುವ ಪ್ರತಿದಿನದ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಬಾಂದ್ರಾ ಟರ್ಮಿನೆಸ್‌ನಿಂದ ಆರಂಭವಾಗಿ ವಾಸಾಯಿ ರೋಡ್, ಪನ್ವೇಲ್ ಮುಖಾಂತರ ಮಂಗಳೂರು ಜಂಕ್ಷನ್‌ಗೆ ಹೋಗುವ ರೈಲು ಬೇಕು.

5. ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ಮಧ್ಯೆ ಬಾಕಿ ಇರುವ ಎರಡು ಕಿಲೋಮೀಟರ್ ಡಬ್ಲಿಂಗ್ ಆಗಲಿ:

ಮಂಗಳೂರು ಬೆಂಗಳೂರು ರೈಲನ್ನು ಆರಂಭಿಸಿದಾಗ, ಮಂಗಳೂರು ಸೆಂಟ್ರಲ್‌ನಿಂದ ಮಂಗಳೂರು ಜಂಕ್ಷನ್‌ಗೆ ಹಳಿ ಡಬ್ಲಿಂಗ್ ಶೇ. 90 ಕೆಲಸವನ್ನು ಮಾಡಲಾಗಿತ್ತು. ಆದರೆ ಕೇವಲ ಎರಡು ಕಿಲೋಮೀಟರ್ ಡಬ್ಲಿಂಗ್ ಬಾಕಿ ಇದ್ದುದರಿಂದ ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ಮಧ್ಯೆ ಅದೇ ಹಳಿಯಲ್ಲಿ ರೈಲು ಹೋಗಿ ಬರಬೇಕಾಗಿದೆ. ಇದರಿಂದ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಈ ಎರಡು ಕಿಲೋ ಮೀಟರ್ ಹಳಿಯನ್ನು ಕೂಡಲೇ ಡಬ್ಲಿಂಗ್ ಮಾಡಬೇಕಾಗಿದೆ.

6. ಮತ್ಸ್ಯಗಂಧ ರೈಲಿಗೆ ಹೊಸ ರೈಲು ಡಬ್ಬಿಗಳು ಬೇಕು:

ಮತ್ಸ್ಯಗಂಧ ರೈಲು 1997ರಂದು ಆರಂಭವಾಗಿದ್ದರೂ, ಕಳೆದ 27 ವರ್ಷಗಳಿಂದ ಅದೇ ಹಳೆಯ, ಹಾಳಾದ, ಸೋರುವ, ಐಸಿಎಫ್ ಕೋಚ್‌ಗಳನ್ನೇ ಇಂದಿಗೂ ಉಪಯೋಗಿಸಲಾಗುತ್ತಿದೆ.

ಇದನ್ನು ಬೇಗನೆ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚುಗಳನ್ನಾಗಿ ಬದಲಾಯಿಸಲು ಕೋರಲಾಗಿದೆ.

7. ಶೇ. 40 ಹೆಚ್ಚುವರಿ ದರ ವಿಧಿಸುವುದನ್ನು ರದ್ದು ಮಾಡಬೇಕು:

ಇಡೀ ದೇಶದಲ್ಲಿ ಎಲ್ಲೂ ರೈಲಿನ ಟಿಕೆಟ್‌ಗೆ ಹೆಚ್ಚುವರಿ ದರವನ್ನು ವಿಧಿಸಿಲ್ಲ. ಕೇವಲ ಕೊಂಕಣ್ ರೈಲ್ವೆಯು 760 ಕಿಲೋಮೀಟರ್ ದೂರಕ್ಕೆ ಶೇ. 140 ಟಿಕೆಟ್ ದರವನ್ನು ಸಂಗ್ರಹ ಮಾಡುತ್ತಿದೆ.

ಈ ರೀತಿ ಕಳೆದ 27 ವರ್ಷಗಳಿಂದ ಹಗಲು ದರೋಡೆ ನಡೆದಿದೆ ಎಂದು ಪ್ರಯಾಣಿಕರು ಅಲವತ್ತುಗೊಳ್ಳುತ್ತಾರೆ. ಇದನ್ನು ಈ ಕೂಡಲೇ ನಿಲ್ಲಿಸಬೇಕಾದರೆ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಗೆ ವಿಲೀನಗೊಳಿಸುವುದೊಂದೇ ಮಾರ್ಗ.

8. ಕಡಿಮೆ ವೇಗದ, ಅತೀ ಹೆಚ್ಚಿನ ದರದ ವಂದೇ ಭಾರತ್ ರೈಲುಗಳ ಅಗತ್ಯವಿಲ್ಲ:

ರಾಜಧಾನಿ ಎಕ್ಸ್‌ಪ್ರೆಸ್ 4 ಗಂಟೆಗಳಲ್ಲಿ, ಮಂಗಳೂರು ಎಕ್ಸ್ ಪ್ರೆಸ್ ನಾಲ್ಕುವರೆ ಗಂಟೆಯಲ್ಲಿ ಮಡಗಾಂವ್ ತಲುಪುತ್ತದೆ. ಆದರೆ ಸುಮಾರು ಐದರಿಂದ ಆರು ಪಟ್ಟು ಹೆಚ್ಚು ದರದ ವಂದೇ ಭಾರತ್ ರೈಲು 4 ಗಂಟೆ 35 ನಿಮಿಷ ತೆಗೆದುಕೊಳ್ಳುತ್ತದೆ.

ಕೊಂಕಣ ರೈಲ್ವೆಯಲ್ಲಿ ಡಬ್ಲಿಂಗ್ ಇಲ್ಲದಿರುವುದರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆದುದರಿಂದ ಕೊಂಕಣ್ ರೈಲ್ವೆ ರೂಟ್‌ನಲ್ಲಿ ಅತಿಹೆಚ್ಚಿನ ದರದ, ಆದರೆ ರಾಜಧಾನಿ ಹಾಗೂ ಮಂಗಳೂರು ಎಕ್ಸ್‌ಪ್ರೆಸ್‌ಗಿಂತ ಕಡಿಮೆ ವೇಗದಲ್ಲಿ ಓಡಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ಬೇಡವೇ ಬೇಡ.

9. ಮಂಗಳೂರು ಸೆಂಟ್ರಲ್ ಭಾವನಗರ ಮಧ್ಯೆ ಹೊಸ ಸಾಪ್ತ್ತಾಹಿಕ ರೈಲು:

ದಕ್ಷಿಣ ರೈಲ್ವೆಯು ಕೇಳಿದ, ಮಂಗಳೂರು ಸೆಂಟ್ರಲ್ ಭಾವನಗರ ಸಾಪ್ತಾಹಿಕ ರೈಲನ್ನು ಕೊಂಕಣ ರೈಲ್ವೆ, ದಕ್ಷಿಣ ರೈಲ್ವೆ, ಮಧ್ಯ ರೈಲ್ವೆ ಹಾಗೂ ಪಶ್ಚಿಮ ರೈಲು 9 ಜೂನ್ 2022ರಂದು ಒಪ್ಪಿಕೊಂಡಿವೆ. ಆದರೆ ಇದು ಇನ್ನೂ ಆರಂಭವಾಗಿಲ್ಲ. ಕೂಡಲೇ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ.

10. ಮಂಗಳೂರು-ಶಿವಮೊಗ್ಗ ಮಧ್ಯೆ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು

ಹೊನ್ನಾವರದಿಂದ ತಾಳಗುಪ್ಪದ ತನಕ ಹೊಸ ರೈಲು ಹಳಿಯನ್ನು ಹಾಸಿದರೆ, ಆಗ; ಮಂಗಳೂರಿನಿಂದ ಶಿವಮೊಗ್ಗಕ್ಕೆ ನೇರ ರೈಲಿನ ಸಂಪರ್ಕವು ಸಿಗಲಿದೆ ಹಾಗೂ ಆ ಭಾಗದ ಜನರಿಗೆ ಮಂಗಳೂರು ನಗರಕ್ಕೆ ಬರಲು ಹಾಗೂ ಹೋಗಲು ಸಹಾಯಕವಾಗಲಿದೆ.

-ಆಧ್ಯಕ್ಷರು ಮತ್ತು ಸದಸ್ಯರು,

ರೈಲು ಯಾತ್ರಿ ಸಂಘ ಮುಂಬೈ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News