ಪುರ್ಸ ಪೂಜೆಯಲ್ಲಿ ಮುಸ್ಲಿಮರ ಅವಹೇಳನ ಎಂದರೆ ದೇವರನ್ನು ತಂದುಕೊಟ್ಟವರ ನಿಂದನೆ ಎಂದರ್ಥ !

ಬೆಳ್ತಂಗಡಿಯ ಪುರ್ಸ ಪೂಜೆಯಲ್ಲಿ ಮುಸ್ಲಿಮರ ಅವಹೇಳನ ಒಂದು ಗಂಭೀರ ಸಾಂಸ್ಕೃತಿಕ, ಸಾಮಾಜಿಕ ಅಧಃಪತನ. ಪುರ್ಸಪೂಜೆಯಲ್ಲಿ ಯಾಕೆ ವೈದಿಕರ ಪ್ರವೇಶವಿಲ್ಲ ಎಂದರೆ ಶೂದ್ರರಿಗೆ ದೇವರನ್ನು ಮುಟ್ಟಿಸಿದವರು ಮುಸ್ಲಿಮರು ಎಂಬ ಕಾರಣಕ್ಕಾಗಿ. ವಿಪರ್ಯಾಸ ಎಂದರೆ ಜನಪದ ಪಾಡ್ದನದ ಪ್ರಕಾರ ಶೂದ್ರರಿಗೆ ದೇವರನ್ನು ಹುಡುಕಿ ಕೊಟ್ಟ ಮುಸ್ಲಿಮರನ್ನೇ ಇಂದು ಅದೇ ಶೂದ್ರ ಆರಾಧಕರು ನಿಂದಿಸುತ್ತಾರೆ !
ಪುರ್ಸ ಪೂಜೆಯಲ್ಲಿ ಮುಸ್ಲಿಂ ವೇಷಧಾರಿ ಯಾಕೆ ಬರುತ್ತಾರೆ ? ಜನಪದ ಐತಿಹ್ಯದ ಪ್ರಕಾರ, ಪಶ್ಚಿಮ ಘಟ್ಟದ ಕಾಡಂಚಿನಲ್ಲಿ ರೈತರು ಕೃಷಿ ಮಾಡಿಕೊಂಡು ಬದುಕುತ್ತಿದ್ದರು. ಎಲ್ಲಿಯವರೆಗೆ ಕೃಷಿ ಕಾಯಕ ಮಾಡುತ್ತಿದ್ದರು ಎಂದರೆ ದೇವರ ಪೂಜೆ ಮಾಡಲೂ ಪುರುಸೊತ್ತಿಲ್ಲದಷ್ಟು..! ನನ್ನನ್ನು ಯಾಕೆ ಜನ ಆರಾಧನೆ ಮಾಡುತ್ತಿಲ್ಲ ಎಂದು ಕದ್ರಿ ಜೋಗಿಗಳಿಂದ (ನಾಥ ಪಂಥ) ಪೂಜಿಸಲ್ಪುಡುತ್ತಿದ್ದ ಶಿವನಿಗೆ ಸೋಜಿಗವಾಗುತ್ತದೆ. ಕದ್ರಿ ಗುಡ್ಡ ಹತ್ತಿದ ಶಿವ ದೃಷ್ಟಿ ಹಾಯಿಸಿದಾಗ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ. ಈ ಜನರು ಪೂಜೆಗಾಗಿ ಸಮಯ ಹಾಳು ಮಾಡುವುದು ಸರಿಯಲ್ಲ ಎಂದರಿತ ಶಿವ ತಾನೇ ಜನರನ್ನು ಭೇಟಿಯಾಗಲು ಹೊರಡುತ್ತಾನೆ. ಪಾರ್ವತಿ ನಾನೂ ಬರುತ್ತೇನೆ ಎಂದು ಹಠ ಹಿಡಿದಾಗ, ನಾನೊಬ್ಬನೇ ಹೋಗಿ ಬರುತ್ತೇನೆ. ನೀನು ಕದ್ರಿಯಲ್ಲೇ ಇದ್ದುಕೊಂಡು ಜನರ ರಕ್ಷಣೆ ಮಾಡುತ್ತಿರು ಎಂದು ವಿನಂತಿಸಿದ್ರೂ ಪಾರ್ವತಿ ಸುಮ್ಮನಿರದೆ ಹಠ ಮಾಡುತ್ತಾಳೆ. ಕೊನೆಗೆ ಶಿವನು ಪಾರ್ವತಿಯ ಜತೆಗೂಡಿ ಜನ ಸಂಪರ್ಕಕ್ಕೆ ಹೊರಡುತ್ತಾರೆ. ಶಿವಪಾರ್ವತಿಯರು ಹೊರಟು ನಿಂತದ್ದು ನೋಡಿ ದೇಗುಲದ ದ್ವಾರಪಾಲಕನಾಗಿದ್ದ (ಕ್ಷೇತ್ರಪಾಲ) ಕುಟ್ಟಿ ದೈವ (ಕುಂಟಾಲ ಪಂಜುರ್ಲಿ)ವು ತಾನೂ ಬರುವುದಾಗಿ ಹೊರಟು ನಿಲ್ಲುತ್ತದೆ. ಕದ್ರಿ ದಾಟಿ ಮಲ್ಲಿಕಟ್ಟೆಗೆ ಬರುವಾಗ ಬುಟ್ಟಿ ವ್ಯಾಪಾರ ಮಾಡುತ್ತಿದ್ದ ಬೊಟ್ಟಿಕಲ್ಲು ಸಾಯಿಬ ಸಿಗುತ್ತಾನೆ. ಶಿವ ಪಾರ್ವತಿಯ ಜತೆ ತಾನೂ ಬರುವುದಾಗಿ ಬೊಟ್ಟಿಕಲ್ಲು ಸಾಯಿಬ ವಿನಂತಿ ಮಾಡಿಕೊಂಡು ಹೊರಡುತ್ತಾನೆ. ಕುಂಟಾಲ ಪಂಜುರ್ಲಿ ದೈವ ಮತ್ತು ಬೊಟ್ಟಿಕಲ್ಲು ಸಾಯಿಬ(ಬ್ಯಾರಿ ಮುಸ್ಲಿಂ)ರ ಮಾರ್ಗದರ್ಶನದಂತೆ 101 ಜನರ ಜೊತೆ ಶಿವ ಪಾರ್ವತಿ ಸಂಚಾರ ಮಾಡುತ್ತಾರೆ. ಸಂಚಾರದ ವೇಳೆ ದೇವರು ಎಂದು ತಿಳಿಯಬಾರದು ಎಂದುಕೊಂಡು ಶಿವಪಾರ್ವತಿಯರು ಕೊರಗ ಕೊರಪಲ್ದಿಯಾಗಿ (ಕೊರಗರು ಎಂದರೆ ಕರಾವಳಿಯ ಅಸ್ಪೃಶ್ಯತೆಗೆ ಒಳಗಾದ ಅತಿಸೂಕ್ಷ್ಮ ಸಮುದಾಯ) ವೇಷ ಬದಲಿಸುತ್ತಾರೆ.
ಬೆಳಗ್ಗೆದ್ದು ಪೂಜಾರಿಕೆ ಮಾಡುತ್ತಿದ್ದ ಜೋಗಿ ನೋಡಿದಾಗ ಕದ್ರಿ ದೇವಸ್ಥಾನದಲ್ಲಿ ಶಿವಪಾರ್ವತಿಯರು ಇರಲಿಲ್ಲ. ಅರ್ಚಕ ಜೋಗಿ ಮಠದ ಎತ್ತರಕ್ಕೆ ಬಂದು ನೋಡಿದಾಗ ಶಿವಪಾರ್ವತಿಯರು ಬೆದ್ರ ಮಾರ್ಗವಾಗಿ ಮನೆಮನೆಗೆ ಹೋಗಿ ಜನರ ಸಮಸ್ಯೆಗಳನ್ನು ಕೇಳುತ್ತಿದ್ದರಂತೆ. ಈ ರೀತಿ ಕೊರಗ ಕೊರಪೊಲು ರೂಪದಲ್ಲಿ ಶಿವಪಾರ್ವತಿಯರು ಮಲೆಕುಡಿಯರ ಮನೆಗೆ ಬಂದ ದಿನವನ್ನು ಪುರ್ಸ ಪರ್ಬ (ಪುರ್ಸ ಹಬ್ಬ) ಎಂದು ಆಚರಿಸುತ್ತಾರೆ.
ಇಡೀ ಪುರ್ಸ ಹಬ್ಬದ ಪೂಜೆಯಲ್ಲಿ ಹಾಡಲಾಗುವ ಪಾಡ್ದನದಲ್ಲಿ ಶಿವ ಪಾರ್ವತಿ ಮತ್ತು ಪಂಜುರ್ಲಿ ದೈವದ ಜೊತೆ ಸ್ತುತಿ ಮಾಡುವುದು ಸಾಯಿಬನನ್ನು ! ಪಾಡ್ದನದ ಪ್ರತೀ ವಾಕ್ಯದ ಕೊನೆಗೆ ಸಾಯಿಬೊ ಎಂಬ ಕೂಗು ಇರುತ್ತದೆ. ಮಲೆಕುಡಿಯರ ಮನೆ ಬಾಗಿಲಿಗೆ ದೇವರನ್ನು ಕೊರಗರ ರೂಪದಲ್ಲಿ ಕರೆ ತಂದವನು ಇದೇ ಸಾಯಿಬ ಅರ್ಥಾತ್ ಕರಾವಳಿಯ ಬ್ಯಾರಿ ಮುಸ್ಲಿಮರು ! ಹಾಗಾಗಿ ಮುಸ್ಲಿಮರನ್ನು ನೆನಪಿಸಿಕೊಳ್ಳಲು ದೈವಗಳ ವೇಷದ ಜೊತೆಗೆ ಮುಸ್ಲಿಂ ವೇಷಕ್ಕೂ ಪ್ರಾಧಾನ್ಯತೆ ನೀಡಲಾಗಿದೆ.
ಅಂದರೆ ಇಲ್ಲಿನ ಆದಿವಾಸಿಗಳು, ರೈತರು ದೇವರ ಪೂಜೆ ಮಾಡುವುದನ್ನು ರೂಡಿಸಿಕೊಳ್ಳುವ ಮೊದಲೇ ಮುಸ್ಲಿಮರು ಇದ್ದರು ಮತ್ತು ಅವರು ಶೂದ್ರರು, ಆದಿವಾಸಿಗಳ ಬದುಕಿನ ಭಾಗವಾಗಿದ್ದರು ಎಂಬುದನ್ನು ಈ ಪಾಡ್ದನ ಮತ್ತು ಆಚರಣೆ ದೃಡೀಕರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಜನರಿಗೆ ಬ್ರಾಹ್ಮಣರು ತಮ್ಮ ಶಿವನನ್ನು ಪರಿಚಯಿಸಿಕೊಳ್ಳುವುದಕ್ಕೂ ಮೊದಲೇ ಮುಸ್ಲಿಮರು ಶಿವನನ್ನು ಪರಿಚಯಿಸಿದ್ದರು. ಹಾಗಾಗಿಯೇ ಪುರ್ಸ ಪೂಜೆಯಲ್ಲಿ ಮಡಿ ಮೈಲಿಗೆಯಿಲ್ಲ, ಅಸಮಾನತೆಯಿಲ್ಲ. ಶೂದ್ರರೇ ಆರಾಧಿಸುವ, ಅರ್ಚಿಸುವ ವ್ಯವಸ್ಥೆ ಇದೆ. ಶೂದ್ರರಿಗೆ ಪೂಜೆಯ ಈ ಹಕ್ಕು ನೀಡಿದ್ದೇ ಮುಸ್ಲಿಮರು.
ಬ್ರಾಹ್ಮಣರು ಪ್ರತಿಷ್ಠಾಪಿಸಿದ ದೇವರನ್ನು ಶೂದ್ರರು ಮುಟ್ಟುವಂತಿಲ್ಲ. ಪರಿಸ್ಥಿತಿ ಹೀಗಿರುವ ದೇವರನ್ನು ಮುಟ್ಟುವ ಅವಕಾಶ ಕೊಟ್ಟವರನ್ನು ಧಾರ್ಮಿಕ ಮನಸ್ಥಿತಿಯ ಶೂದ್ರರು ಮರೆಯಬಾರದು. ಶಿವನನ್ನು ಮುಟ್ಟುವಂತೆ ಮಾಡಿದ ನಾರಾಯಣಗುರುಗಳನ್ನು ಶೂದ್ರರೇ ಮರೆತರೆ ಹೇಗೆ ? ಬಪ್ಪನಾಡಿನಲ್ಲಿ ದುರ್ಗೆಯನ್ನು ನಮಗೆ ನೀಡಿದ ಬಪ್ಪ ಬ್ಯಾರಿಯನ್ನು ನಾವೇ ಅವಹೇಳನ ಮಾಡಿದರೆ ಹೇಗೆ ?
ಬಪ್ಪನಾಡು ದೇವಸ್ಥಾನದ ಬಗೆಗಿನ ಬಹುತೇಕ ಯಕ್ಷಗಾನದಲ್ಲಿ ಬಪ್ಪ ಬ್ಯಾರಿಯನ್ನು ಜೋಕರ್ ನಂತೆ ತೋರಿಸಲಾಗುತ್ತದೆ. ಅಲ್ಲಾಹ್, ಪ್ರವಾದಿಯನ್ನು ನಿಂದಿಸಲಾಗುತ್ತದೆ. ಇವರೆಲ್ಲರೂ ಹಿರಿಯ ಯಕ್ಷಗಾನ ಕಲಾವಿದ ಶೇಣಿ ಗೋಪಾಲಕೃಷ್ಣರ ಬಪ್ಪ ಬ್ಯಾರಿ ಪಾತ್ರವನ್ನು ವೀಕ್ಷಿಸಬೇಕು. ಬಪ್ಪ ಬ್ಯಾರಿ ಒರ್ವ ಸಂತ ಮನಸ್ಸಿನ ವ್ಯಾಪಾರಿ ಎಂಬುದು ನಮ್ಮ ಎದೆಗಿಳಿಯುತ್ತದೆ. ಬಪ್ಪ ಬ್ಯಾರಿಯ ಪಾತ್ರಕ್ಕೆ ಶೇಣಿಯವರು ಜೀವ ತುಂಬಿ ಬಪ್ಪನಾಡು ಕ್ಷೇತ್ರಕ್ಕೆ ಗೌರವ ತಂದುಕೊಡುತ್ತಾರೆ. ಬಪ್ಪ ಬ್ಯಾರಿಯನ್ನು ಅವಹೇಳನ ಮಾಡುವುದು ಎಂದರೆ ಆತ ಸ್ಥಾಪಿಸಿದ ದೇವಸ್ಥಾನವನ್ನೂ ಅವಮಾನಿಸಿದಂತೆ. ಅದೇ ರೀತಿ ಪುರ್ಸಪೂಜೆಯಲ್ಲಿ ಮುಸ್ಲಿಮರ ಅವಹೇಳನ ಎಂದರೆ ಶಿವನ ಅವಹೇಳನ ಎಂದರ್ಥ.
ಪುರ್ಸ ಪೂಜೆ ಎನ್ನುವುದು ಒಂದು ಶ್ರೀಮಂತ ಕಿರುಸಂಸ್ಕೃತಿ. ಪುರ್ಸಪೂಜೆಯಲ್ಲಿ ಮುಸ್ಲಿಂ ಸೇರಿದಂತೆ ವಿವಿಧ ಜನಸಮುದಾಯವನ್ನು ಪ್ರತಿನಿಧಿಸುವ ವೇಷಗಳು ಇರುತ್ತದೆ. ಪ್ರತೀ ವೇಷಕ್ಕೂ ತನ್ನದೇ ಆದ ಇತಿಹಾಸವೂ, ಘನತೆಯೂ ಇರುತ್ತದೆ. ಪುರ್ಸ ಪೂಜೆಯ 'ಸಾಯಿಬ' ಶಿವನಿಗೇ ದಾರಿ ತೋರಿಸಿದವನು. ಇಂತಹ ಪರಂಪರೆಯ ಸಾಯಿಬ ವೇಷಕ್ಕಿರುವ ಘನತೆಯನ್ನು ಕೆಳಗಿಳಿಸಬಾರದು. ಹಾಗೆ ಸಾಯಿಬನ ಅವಹೇಳನ ಇಡೀ ಪುರ್ಸಪೂಜೆಯನ್ನು ಕೆಳಮಟ್ಟಕ್ಕಿಳಿಸುತ್ತದೆ ಮಾತ್ರವಲ್ಲದೇ, ಪುರ್ಸ ಪೂಜೆಯ ಶ್ರೀಮಂತಿಕೆಯನ್ನೇ ನಾಶ ಮಾಡುತ್ತದೆ ಎಂಬ ಎಚ್ಚರ ಪುರ್ಸ ಪೂಜೆ ಮಾಡುವ ಶೂದ್ರರಿಗೆ ಇರಬೇಕು.