ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಸಂಶೋಧನೆಯ ಜ್ಞಾನ, ಬೋಧನೆಯ ಅನುಭವ ಬೇಕಿಲ್ಲವೇ?

Update: 2024-02-19 07:36 GMT

ರಾಜ್ಯದ ಕಾಂಗ್ರೆಸ್ ಸರಕಾರ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಪಿಎಚ್.ಡಿ. ಪದವಿಗೆ ನಿಗದಿಪಡಿಸಿದ್ದ 25 ಅಂಕಗಳನ್ನು 15 ಅಂಕಗಳಿಗೆ ಇಳಿಸಿ, 10 ಅಂಕಗಳಿಗಿದ್ದ ಸಂದರ್ಶನವನ್ನು 20 ಅಂಕಗಳಿಗೆ ಹೆಚ್ಚಿಸಿ ದಿನಾಂಕ 7-12-2023 ರಂದು ತಿದ್ದುಪಡಿ ಆದೇಶ ಹೊರಡಿಸಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಸರಕಾರ ಮಣಿದಿಯೇ ಎಂಬ ಸಂಶಯ ಮೂಡುತ್ತಿದೆ. ಹಿಂದಿನ ಬಿಜೆಪಿ ಸರಕಾರ ದಿನಾಂಕ 28-03-2023ರಂದು ಹೊರಡಿಸಿದ್ದ ಇದೇ ಆದೇಶದಲ್ಲಿ ಯುಜಿಸಿಯ 2018ರ ನೇಮಕಾತಿ ನಿಯಮಗಳ ಮಾನದಂಡದಂತೆ ಪಿಎಚ್.ಡಿ. ಪದವಿಗೆ 25 ಅಂಕಗಳನ್ನು ಮತ್ತು ಸಂದರ್ಶನಕ್ಕೆ 10 ಅಂಕಗಳನ್ನು ನಿಗದಿಪಡಿಸಿತ್ತು. ಆದರೆ ಇಂದಿನ ಕಾಂಗ್ರೆಸ್ ಸರಕಾರ ಇದರ ಬದಲಾವಣೆ ಮಾಡಿ ಸಂದರ್ಶನಕ್ಕೆ ಅಂಕ ಹೆಚ್ಚಿಸಿದ್ದು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದ ನೇಮಕಾತಿಯಲ್ಲಿ ಅರ್ಹತೆ ಮತ್ತು ಪಾರದರ್ಶಕತೆ ಕಡಿಮೆಯಾಗಿ ಬಡ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ.

ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಬಹಳಷ್ಟು ಸಂಖ್ಯೆಯ ಖಾಸಗಿ ಅನುದಾನಿತ ಪದವಿ ಕಾಲೇಜುಗಳನ್ನು ಬಲಾಢ್ಯ ಸಮುದಾಯದ ವ್ಯಕ್ತಿಗಳು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಸಂದರ್ಶನದ ಅಂಕಗಳನ್ನು ಹೆಚ್ಚಿಸಿದರೆ ಅವರಿಗೆ ಬೇಕಾದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅವರಿಗೆ ಅನುಕೂಲವಾಗುತ್ತದೆ. ಇಂದಿನ ಕಾಂಗ್ರೆಸ್ ಸರಕಾರದಲ್ಲಿ ಇಂತಹ ಅನ್ಯಾಯ ಮತ್ತು ಭ್ರಷ್ಟಾಚಾರಗಳಿಗೆ ಝೀರೋ ಟಾಲರೆನ್ಸ್ ಪಾಲಿಸಿಯನ್ನು ರಾಜ್ಯದ ಜನರು ನಿರೀಕ್ಷಿಸುತ್ತಿದ್ದಾರೆ. ಹಾಗಾಗಿ ಸರಕಾರ ಈ ಬದಲಾವಣೆಗಳನ್ನು ಈ ಕೂಡಲೇ ಮರು ಪರಿಶೀಲನೆ ಮಾಡಬೇಕಾಗಿದೆ. ಈಗಾಗಲೇ ಸಂದರ್ಶನವನ್ನು ನಡೆಸಲು ತಯಾರಾಗಿರುವ ಕಾಲೇಜುಗಳನ್ನು ಅಥವಾ ಸಂದರ್ಶನ ಮುಗಿಸಿರುವ ಕಾಲೇಜುಗಳ ಆಯ್ಕೆಪಟ್ಟಿ/ನೇಮಕಾತಿ ಪತ್ರಗಳನ್ನು ತಡೆಹಿಡಿದು ಹೊಸ ಸುತ್ತೋಲೆ ಹೊರಡಿಸಿ ಪಿಎಚ್.ಡಿ. ಪದವಿಗೆ ಯುಜಿಸಿ ನಿಗದಿಪಡಿಸಿದ 25 ಅಂಕಗಳನ್ನು ನೀಡಿ ನೇಮಕ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂದರ್ಶನಕ್ಕೆ 10ಕ್ಕಿಂತ ಹೆಚ್ಚು ಅಂಕಗಳನ್ನು ನೀಡಬಾರದು.

ಯುಜಿಸಿಯು ದಿನಾಂಕ 18-07-2018ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯ ನಿಯಮಗಳ ಮಾನದಂಡಗಳನ್ನು ಟೇಬಲ್ ನಂಬರ್ 3ಬಿ ಯಲ್ಲಿ ಸ್ಪಷ್ಟವಾಗಿ ನಿಗದಿಪಡಿಸಿದೆ ಹಾಗೂ ಅದನ್ನು ಗೆಜೆಟ್ ಆಫ್ ಇಂಡಿಯಾದಲ್ಲೂ ಅದೇ ದಿನಾಂಕದಂದು ಪ್ರಕಟಿಸಿದೆ. ಆ ನಿಯಮಗಳ ಮಾನದಂಡಗಳು ಮತ್ತು ಅವುಗಳಿಗೆ ನೀಡಿದ ಅಂಕಗಳನ್ನು ಹೀಗೆ ನಿಗದಿಪಡಿಸಿದೆ:

1) ಸ್ನಾತಕ ಪದವಿಗೆ ಗರಿಷ್ಟ 21 ಅಂಕ, ಕನಿಷ್ಠ 10 ಅಂಕ.

2) ಸ್ನಾತಕೋತ್ತರ ಪದವಿಗೆ ಗರಿಷ್ಟ 25 ಅಂಕ, ಕನಿಷ್ಠ 20 ಅಂಕ.

3) ಎಂ.ಫಿಲ್. ಪದವಿಗೆ ಗರಿಷ್ಟ 7 ಅಂಕ, ಕನಿಷ್ಠ 5 ಅಂಕ.

4) ಪಿಎಚ್.ಡಿ. ಪದವಿಗೆ 25 ಅಂಕ (ಎಂ.ಫಿಲ್. + ಪಿಎಚ್.ಡಿ. ಪದವಿಗೆ ಕನಿಷ್ಠ 25 ಅಂಕ).

5) NET with JRFಗೆ 10 ಅಂಕ, NETಗೆ 8 ಅಂಕ, SETಗೆ 5 ಅಂಕ (NET/JRF/SETಗೆ ಗರಿಷ್ಟ 10 ಅಂಕ).

6) ಪ್ರತೀ ಸಂಶೋಧನಾ ಲೇಖನಗಳಿಗೆ 2ರಂತೆ ಗರಿಷ್ಟ 6 ಅಂಕ.

7) ಬೋಧನೆಯ ಅನುಭವ (ವರ್ಷಕ್ಕೆ 2ರಂತೆ ಗರಿಷ್ಟ 10 ಅಂಕ) ಅಥವಾ Pಆಈ ಆಗಿದ್ದರೆ 10 ಅಂಕ ಮತ್ತು

8) ರಾಷ್ಟ್ರೀಯ ಪ್ರಶಸ್ತಿಗೆ 3, ರಾಜ್ಯ ಪ್ರಶಸ್ತಿಗೆ 2,

ಗರಿಷ್ಟ 3 ಅಂಕ.

ಹೀಗೆ ಒಟ್ಟು 100 ಅಂಕಗಳ ನೇಮಕಾತಿ ನಿಯಮಗಳ ಮಾನದಂಡಗಳನ್ನು ನಿಗದಿಪಡಿಸಿದೆ. ಈ ಮಾನದಂಡಗಳ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ಅವರಿಗೆ ಸಂದರ್ಶನ ಮಾಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಯುಜಿಸಿ ಸ್ಪಷ್ಟವಾಗಿ ತಿಳಿಸಿದೆ. ಸಂದರ್ಶನಕ್ಕೆ ಯಾವುದೇ ನಿರ್ದಿಷ್ಟ ಅಂಕಗಳನ್ನು ನಿಗದಿಪಡಿಸಿಲ್ಲ.

ಇದೇ ರೀತಿ ಹಿಂದಿನ ಬಿಜೆಪಿ ಸರಕಾರವೂ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿಯ ನೇಮಕಾತಿ ನಿಯಮಗಳ ಮಾನದಂಡಗಳು 18-07-2018ರಿಂದಲೂ ಜಾರಿಯಲ್ಲಿದ್ದರೂ ದಿನಾಂಕ 30-09-2021ರಂದು ಹೊರಡಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಯುಜಿಸಿಯ ನೇಮಕಾತಿ ನಿಯಮಗಳನ್ನು ಪಾಲಿಸದೆ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಿಶೇಷ ನಿಯಮಗಳು 2020ರ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿದೆ. ಯುಜಿಸಿಯ ನೇಮಕಾತಿ ನಿಯಮಗಳ ಮಾನದಂಡಗಳು 2018ರಿಂದಲೂ ಜಾರಿಯಲ್ಲಿದ್ದರೂ 2021ರಲ್ಲಿ ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸರಕಾರಿ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಮಾಡಿರುವುದು ಎಷ್ಟು ಸರಿ? ಈ ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದವರಲ್ಲಿ ಬಹುತೇಕರು ಹೊಸಬರು. ಅವರು ಇತ್ತೀಚೆಗೆ ಸ್ನಾತಕೋತ್ತರ ಪದವಿ ಮುಗಿಸಿದವರು. ಅವರಿಗೆ ಸಹಜವಾಗಿ ವಿಷಯ ಜ್ಞಾನ ಹೆಚ್ಚು ಇರುತ್ತದೆ. ಅದರಿಂದ ಅವರು SET/NET ಪಾಸಾಗಿ ಸರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿದ್ದಾರೆ.

ಅವರ ಪ್ರತಿಭೆ ಮತ್ತು ವಿಷಯ ಜ್ಞಾನದ ಬಗ್ಗೆ ಖಂಡಿತ ನಮ್ಮ ಪ್ರಶ್ನೆ ಅಲ್ಲ. ಆದರೆ ನೂತನ ಶಿಕ್ಷಣ ನೀತಿ 2020ರಲ್ಲಿ ಕೇಂದ್ರ ಸರಕಾರವು ಸಂಶೋಧನೆಗೆ ಹೆಚ್ಚು ಮಹತ್ವ ಕೊಟ್ಟಿದೆ. ಅದಕ್ಕಾಗಿ ಪದವಿ ಹಂತದಿಂದಲೇ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಸಂಶೋಧನಾ ವಿಷಯವನ್ನು ಬೋಧಿಸಲಾಗುತ್ತಿದೆ. ಆದರೆ ಇಲ್ಲಿ ಪ್ರಶ್ನೆ ಇರುವುದು ಸಹಾಯಕ ಪ್ರಾಧ್ಯಾಪಕರನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿದರೆ 5-6 ವರ್ಷ ಪಿಎಚ್.ಡಿ.ಯಲ್ಲಿ ಸಂಶೋಧನೆ ಮಾಡಿದವರು, PDF ಮಾಡಿದವರು ಮತ್ತು ಹತ್ತಾರು ವರ್ಷ ಬೋಧನೆಯ ಅನುಭವ ಹೊಂದಿದ ಹಳೆಯ ಅಭ್ಯರ್ಥಿಗಳು ಆಯ್ಕೆಯಾಗುವುದಿಲ್ಲ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಸಂಶೋಧನೆಯ ಜ್ಞಾನ ಮತ್ತು ಬೋಧನೆಯ ಅನುಭವವನ್ನು ಪರಿಗಣಿಸದಿದ್ದರೆ ಅವುಗಳ ಪ್ರಯೋಜನ ಏನು? ಅವುಗಳನ್ನು ಹೊಂದಿದ ಅಭ್ಯರ್ಥಿಗಳ ಕಥೆ ಏನು? ಪ್ರಾಧ್ಯಾಪಕರಿಗೆ ಕೇವಲ ವಿಷಯ ಜ್ಞಾನ ಇದ್ದರೆ ಸಾಕೇ? ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಂಶೋಧನೆಯ ಜ್ಞಾನ ಮತ್ತು ಅವರ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡಲು ಅನುಭವಿ ಪ್ರಾಧ್ಯಾಪಕರ ಅವಶ್ಯಕತೆ ಇಲ್ಲವೇ?

ಹಾಗೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ಅಂಶವೆಂದರೆ ಅದೇ ಹಿಂದಿನ ಬಿಜೆಪಿ ಸರಕಾರ ದಿನಾಂಕ 28-03-2023ರಂದು ಹೊರಡಿಸಿದ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಆದೇಶದಲ್ಲಿ ಯುಜಿಸಿಯ 2018ರ ನೇಮಕಾತಿ ನಿಯಮಗಳ ಮಾನದಂಡಗಳನ್ನು ಅನುಸರಿಸಿ ನೇಮಕಾತಿ ಮಾಡಿಕೊಳ್ಳಲು ಆದೇಶ ಹೊರಡಿಸಿತ್ತು. ಒಂದೇ ಸರಕಾರ, ಒಂದೇ ಹುದ್ದೆಯ ನೇಮಕಾತಿಯನ್ನು ಸರಕಾರಿ ಪದವಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಯುಜಿಸಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ನೇಮಕಾತಿಗೆ ಆದೇಶ ಹೊರಡಿಸಿದ್ದು ಎಷ್ಟು ಸರಿ? ಒಂದೇ ಹುದ್ದೆಯ ನೇಮಕಾತಿಯನ್ನು ಎರಡು ರೀತಿ ಮಾಡಲು ಅವಕಾಶವಿದೆಯೇ? ಇದ್ದರೆ ಯುಜಿಸಿಯ ಈ ಮೇಲಿನ ಮಾನದಂಡಗಳು ಯಾಕಿರಬೇಕು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಸುರೇಶ್ ಹೂಗಾರ್, ಧಾರವಾಡ

contributor

Similar News