ಭಾರತದಲ್ಲಿನ ಜಿಎಸ್‌ಟಿ ಪದ್ಧತಿ ವೈಜ್ಞಾನಿಕವೆ?

Update: 2024-11-22 06:55 GMT

ಜುಲೈ 1, 2017ರ ಮಧ್ಯರಾತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಾರಿಗೊಳಿಸಿದ ಜಿಎಸ್‌ಟಿ ಪದ್ಧತಿಯ ಬಗ್ಗೆ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿ ರುವ ರಾಜ್ಯಗಳಿಂದ ಅಪಸ್ವರ ಕೇಳಿ ಬರತೊಡಗಿದೆ. ಕೇಂದ್ರೀಕೃತ ತೆರಿಗೆ ಪದ್ಧತಿಯಾದ ಜಿಎಸ್‌ಟಿಯಿಂದ ವಿರೋಧ ಪಕ್ಷಗಳು ಆಡಳಿತಾರೂಢವಾಗಿರುವ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕರ್ನಾಟಕ, ಪಶ್ಚಿಮ ಬಂಗಾಳ, ಕೇರಳದಂಥ ಸರಕಾರಗಳು ತೀವ್ರ ಅಸಮಾಧಾನ ವ್ಯಕ್ತಪಡಿಸತೊಡಗಿವೆ. 2004ರಿಂದ 2014ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರ ಜಿಎಸ್‌ಟಿ ಪದ್ಧತಿಯನ್ನು ಜಾರಿಗೊಳಿಸಲು ಮುಂದಾದಾಗ, ಇದೇ ಕಾರಣಗಳನ್ನು ನೀಡಿ ಆಗ ಪ್ರಬಲ ವಿರೋಧ ಒಡ್ಡಿದ್ದು ಬೇರೆ ಯಾರೂ ಅಲ್ಲ-ಆಗ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ! ಆದರೆ, ನವೆಂಬರ್ 8ರಂದು ರಾತ್ರೋರಾತ್ರಿ ಮಾಡಿದ ನೋಟು ಅಮಾನ್ಯ ನಿರ್ಧಾರದಿಂದ ಸರಕಾರದ ಬೊಕ್ಕಸ ಬರಿದಾಗುವ ಮುನ್ಸೂಚನೆ ದೊರೆತ ಕೂಡಲೇ ಅದೇ ಜಿಎಸ್‌ಟಿಯನ್ನು ಜಾರಿಗೊಳಿಸಿದ್ದು ಕೂಡಾ ನರೇಂದ್ರ ಮೋದಿ!!

ಭಾರತದಲ್ಲಿ ಹಲವಾರು ವರ್ಷಗಳಿಂದ (2000ರಲ್ಲಿ ತೆರಿಗೆ ಸಂಗ್ರಹದ ಸರಳೀಕರಣದ ಭಾಗವಾಗಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಜಿಎಸ್‌ಟಿ ಪದ್ಧತಿ ಜಾರಿ ಕುರಿತು ಪ್ರತಿಪಾದಿಸಿದ್ದರು) ನನೆಗುದಿಗೆ ಬಿದ್ದಿದ್ದ ಜಿಎಸ್‌ಟಿ ಜಾರಿ ಪ್ರಸ್ತಾವ ಮತ್ತೆ ಮುನ್ನೆಲೆಗೆ ಬಂದಿದ್ದು 2004-2014ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಅವಧಿಯಲ್ಲಿ. ಆದರೆ, ಬಿಜೆಪಿ ಆಡಳಿತಾರೂಢ ಬಿಜೆಪಿ ಸರಕಾರಗಳು ಈ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಅದು ಮತ್ತೊಮ್ಮೆ ನನೆಗುದಿಗೆ ಬಿದ್ದಿತ್ತು. ಒಂದು ವೇಳೆ ಭಾರತದಲ್ಲಿ ಅವಾಂತರಕಾರಿ ನೋಟು ಅಮಾನ್ಯ ಜಾರಿಯಾಗಿರದಿದ್ದರೆ ಇಂದಿಗೂ ಕೂಡಾ ಜಿಎಸ್‌ಟಿ ಪದ್ಧತಿ ಜಾರಿಯಲ್ಲಿರುತ್ತಿರಲಿಲ್ಲವೇನೊ? ಆದರೆ, ಕಪ್ಪು ಹಣವನ್ನು ಬಿಳುಪಾಗಿಸಲು ಅವಕಾಶ ಮಾಡಿಕೊಟ್ಟ ನೋಟು ಅಮಾನ್ಯದಿಂದ, ಸರಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದ ಆದಾಯ ನಷ್ಟವುಂಟಾಗತೊಡಗಿತು. ಆಗ ದಿಢೀರನೆ ಮೇಲೆದ್ದ ಪ್ರಧಾನಿ ನರೇಂದ್ರ ಮೋದಿ ಜುಲೈ 1, 2017ರ ಮಧ್ಯರಾತ್ರಿ ಜಿಎಸ್‌ಟಿಯನ್ನು ಜಾರಿಗೆ ತಂದೇಬಿಟ್ಟರು. ಮಾತ್ರವಲ್ಲದೆ; ಇದೊಂದು ಕ್ರಾಂತಿಕಾರಿ ಕ್ಷಣ ಎಂದೂ ಬಣ್ಣಿಸಿದರು.

ಆದರೆ, ಜಿಎಸ್‌ಟಿ ಪದ್ಧತಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಣ್ಣಪುಟ್ಟ ವ್ಯಾಪಾರೋದ್ಯಮಗಳು. ತೆರಿಗೆಯ ಹೊರೆಯನ್ನು ಹಗುರಾಗಿಸಬೇಕಾಗಿದ್ದ ಜಿಎಸ್‌ಟಿ ಪದ್ಧತಿಯಿಂದಲೇ ತೆರಿಗೆ ಹೆಚ್ಚಿದ ಪರಿಣಾಮ ಸಣ್ಣ ಮತ್ತು ಕಿರು ಉದ್ಯಮಗಳು ಕದವಿಕ್ಕಿಕೊಂಡವು. ಸಣ್ಣಪುಟ್ಟ ವ್ಯಾಪಾರೋದ್ಯಮಗಳು ದಿವಾಳಿ ಎದ್ದವು. ಇದೀಗ ರಾಜ್ಯಗಳ ತೆರಿಗೆ ಸಂಗ್ರಹ ಸ್ವಾಯತ್ತತೆಗೂ ಮಾರಕವಾಗಿ ಪರಿಣಿಸಿದೆ. ಹೀಗಾಗಿಯೇ ವಿರೋಧ ಪಕ್ಷಗಳ ರಾಜ್ಯಗಳು ಜಿಎಸ್‌ಟಿ ತೆರಿಗೆ ಪದ್ಧತಿಯ ಸುಧಾರಣೆ ಅಥವಾ ಈ ಹಿಂದಿನ ಮೌಲ್ಯವರ್ಧಿತ ತೆರಿಗೆ ಪದ್ಧತಿಗೆ ಮರಳಬೇಕು ಎಂದು ಆಗ್ರಹಿಸತೊಡಗಿವೆ.

ಜಿಎಸ್‌ಟಿ ಪರಿಕಲ್ಪನೆ ಜಾರಿಗೆ ಬಂದಿದ್ದು ಯಾವಾಗ?

ಇಡೀ ದೇಶಾದ್ಯಂತ ಮಾರಾಟ ತೆರಿಗೆ, ಸೇವಾ ತೆರಿಗೆ, ಅಬಕಾರಿ ಸುಂಕ, ಸೀಮಾ ಸುಂಕದಂತಹ ವಿವಿಧ ಹಂತದ ಪರೋಕ್ಷ ತೆರಿಗೆ ವ್ಯವಸ್ಥೆಗಳು ಜಾರಿಯಲ್ಲಿವೆ. ಈ ಬಹು ಹಂತದ ತೆರಿಗೆಯಿಂದ ತೆರಿಗೆ ಸಂಗ್ರಹ ಮತ್ತು ಪಾವತಿ ಕ್ಲಿಷ್ಟಕರವಾಗಿ ಪರಿಣಿಸುವುದರೊಂದಿಗೆ, ತೆರಿಗೆ ವಂಚನೆಯ ಪ್ರಕರಣಗಳೂ ಹೇರಳವಾಗಿ ನಡೆಯುತ್ತವೆ. ಇಂತಹ ದೋಷಪೂರಿತ ತೆರಿಗೆ ಸಂಗ್ರಹ ವ್ಯವಸ್ಥೆಗೆ ಅಂತ್ಯವಾಡಿ, ಸರಳ ಹಾಗೂ ಕೇಂದ್ರೀಕೃತ ತೆರಿಗೆ ಸಂಗ್ರಹ ವ್ಯವಸ್ಥೆಯಾದ ಜಿಎಸ್‌ಟಿಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದು ಫ್ರಾನ್ಸ್. ಅತ್ಯಂತ ಮುಂದುವರಿದ ದೇಶಗಳ ಸಾಲಿಗೆ ಸೇರಿರುವ ಫ್ರಾನ್ಸ್‌ನಲ್ಲಿ ಜಿಎಸ್‌ಟಿ ಹಂತ ಪ್ರಾರಂಭವಾಗುವುದೇ ಶೇ. 2.1ರಿಂದ. ನಾಲ್ಕು ಹಂತದ ಜಿಎಸ್‌ಟಿ ಫ್ರಾನ್ಸ್‌ನಲ್ಲಿದ್ದು, ಕ್ರಮವಾಗಿ ಶೇ. 2.1, ಶೇ. 5.5, ಶೇ. 10 ಹಾಗೂ ಶೇ. 20ರ ಜಿಎಸ್‌ಟಿ ಹಂತಗಳನ್ನು ಹೊಂದಿದೆ.

ಜಿಎಸ್‌ಟಿ ಪದ್ಧತಿಯನ್ನು ಇಡೀ ಜಗತ್ತಿಗೇ ಪ್ರಪ್ರಥಮ ಬಾರಿಗೆ ಪರಿಚಯಿಸಿದ ಫ್ರಾನ್ಸ್‌ನಂತಹ ಅತ್ಯಂತ ಶ್ರೀಮಂತ ದೇಶದಲ್ಲೇ ಗರಿಷ್ಠ ಜಿಎಸ್‌ಟಿ ತೆರಿಗೆ ದರ ಶೇ. 20ರಷ್ಟಿದ್ದರೆ, ಇನ್ನೂ 20 ಕೋಟಿಗೂ ಹೆಚ್ಚು ಕಡು ಬಡವರನ್ನು ಹೊಂದಿರುವ ಭಾರತದಲ್ಲಿ ವಿಧಿಸಲಾಗುತ್ತಿರುವ ಗರಿಷ್ಠ ತೆರಿಗೆ ಪ್ರಮಾಣ ಶೇ. 28ರಷ್ಟಿದೆ! 2004-2014ರವರೆಗೆ ಅಧಿಕಾರದಲ್ಲಿದ್ದ ಯುಪಿಎ ಸರಕಾರ ಪ್ರಸ್ತಾಪಿಸಿದ್ದ ಗರಿಷ್ಠ ಶೇ. 18ರ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ಜನವಿರೋಧಿ ಎಂದು ವಿರೋಧಿಸಿದ್ದ ಬಿಜೆಪಿ, ಇದೀಗ ಭಾರತದ ಸಾಮಾನ್ಯ ಪ್ರಜೆಗಳ ಮೇಲೆ ವಿಧಿಸುತ್ತಿರುವ ಗರಿಷ್ಠ ಜಿಎಸ್‌ಟಿ ದರ ಶೇ. 28ರಷ್ಟು! ಅರ್ಥಾತ್, ಯುಪಿಎ ಸರಕಾರ ಪ್ರಸ್ತಾಪಕ್ಕಿಂತ ಶೇ.10ರಷ್ಟು ಹೆಚ್ಚು!!

ಯುಪಿಎ ಸರಕಾರ ಜಾರಿಗೊಳಿಸಲು ಮುಂದಾಗಿದ್ದ ಜಿಎಸ್‌ಟಿಯನ್ನು ಬಿಜೆಪಿ ಆಡಳಿತಾರೂಢ ರಾಜ್ಯಗಳು ವಿರೋಧಿಸಿದ್ದರಿಂದ ದೇಶದ ಬೊಕ್ಕಸಕ್ಕಾದ ಬರೋಬ್ಬರಿ ನಷ್ಟ ರೂ. 12 ಲಕ್ಷ ಕೋಟಿ. ಒಂದು ವೇಳೆ ಯುಪಿಎ ಸರಕಾರ ಪ್ರಸ್ತಾವಿಸಿದ್ದ ಜಿಎಸ್‌ಟಿ ಪದ್ಧತಿ ಜಾರಿಗೆ ಬಂದಿದ್ದರೆ, ಪರೋಕ್ಷ ತೆರಿಗೆ ಪ್ರಮಾಣ ಇನ್ನಷ್ಟು ಹಗುರಾಗುವುದರೊಂದಿಗೆ, ವ್ಯಾಪಾರೋದ್ಯಮಗಳ ಬೆಳವಣಿಗೆಗೂ ಪೂರಕವಾಗುತ್ತಿತ್ತು. ಆದರೆ, ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ನೆಪ ಮುಂದುಮಾಡಿ, ಯುಪಿಎ ಸರಕಾರದ ಜಿಎಸ್‌ಟಿ ತೆರಿಗೆ ಪ್ರಸ್ತಾವವನ್ನು ವಿರೋಧಿಸಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ಇದೀಗ ಮಾಡುತ್ತಿರುವುದೇ ಆ ಕೆಲಸವನ್ನು.

ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಪೂರಕವಾಗಿದ್ದ ವ್ಯಾಟ್

ಒಕ್ಕೂಟ ದೇಶವಾದ ಭಾರತದಲ್ಲಿ ವೈವಿಧ್ಯಯಯ ಭೂಪ್ರದೇಶಗಳಿವೆ. ಅದಕ್ಕೆ ತಕ್ಕಂತೆ ಜನರ ಅಗತ್ಯಗಳು ಮತ್ತು ಬೇಡಿಕೆಗಳೂ ಇವೆ. ಹೀಗಾಗಿಯೇ ಈ ಹಿಂದೆ ಮೌಲ್ಯವರ್ಧಿತ ತೆರಿಗೆ ಪದ್ಧತಿಯಲ್ಲಿ ರಾಜ್ಯಗಳಿಗೆ ತಮ್ಮ ಅಗತ್ಯಗನುಗುಣವಾಗಿ ಮಾರಾಟ ತೆರಿಗೆ, ಸೇವಾ ತೆರಿಗೆ, ಅಬಕಾರಿ ಸುಂಕ ಇತ್ಯಾದಿಗಳನ್ನು ಏರಿಕೆ/ಇಳಿಕೆ ಮಾಡಿಕೊಳ್ಳುವ ಅವಕಾಶವಿತ್ತು. ಇದರಿಂದ ಪ್ರತೀ ರಾಜ್ಯಗಳಿಗೂ ಆರ್ಥಿಕ ಸ್ವಾಯತ್ತತೆಯೂ ಪ್ರಾಪ್ತವಾಗಿತ್ತು. ಆದರೆ, ಕೇಂದ್ರೀಕೃತ ತೆರಿಗೆ ಪದ್ಧತಿಯಾದ ಜಿಎಸ್‌ಟಿಯಿಂದ ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆಯಾಗಿದೆ. ಅದರಲ್ಲೂ ಗ್ಯಾರಂಟಿ ಯೋಜನೆಗಳಂತಹ ಜನಪರ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶದಂತಹ ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಪದ್ಧತಿ ಮಾರಕವಾಗಿ ಪರಿಣಮಿಸಿದೆ.

ಮಾರಾಟ ತೆರಿಗೆ, ಸೇವಾ ತೆರಿಗೆ, ಅಬಕಾರಿ ಸುಂಕ ಇತ್ಯಾದಿಗಳು ರಾಜ್ಯಗಳ ಪ್ರಮುಖ ಆದಾಯ ಮೂಲವಾಗಿದ್ದವು. ಯಾವುದೇ ರಾಜ್ಯ ಆದಾಯ ಕೊರತೆ ಎದುರಿಸಿದರೆ, ತನ್ನ ಅಗತ್ಯಕ್ಕೆ ತಕ್ಕಂತೆ ರಾಜ್ಯ ಬಜೆಟ್‌ನಲ್ಲಿ ಮಾರಾಟ ತೆರಿಗೆ, ಸೇವಾ ತೆರಿಗೆ, ಅಬಕಾರಿ ಸುಂಕ ಇತ್ಯಾದಿಗಳನ್ನು ಏರಿಕೆ ಮಾಡಿಕೊಳ್ಳಲು ಸಾಧ್ಯವಿತ್ತು. ಆದರೆ, ಜಿಎಸ್‌ಟಿ ತೆರಿಗೆ ಪದ್ಧತಿಯಿಂದ ಆ ಸ್ವಾಯತ್ತತೆ ನಾಶವಾಗಿದೆ. ಪ್ರತಿಯೊಂದಕ್ಕೂ ಕೇಂದ್ರ ಸರಕಾರದ ಅನುದಾನ ಮತ್ತು ತೆರಿಗೆ ಹಂಚಿಕೆ ಪಾಲನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ತಲೆದೋರಿದೆ. ಇದರೊಂದಿಗೆ ಕರ್ನಾಟಕದಂತಹ ಬಹುದೊಡ್ಡ ಜಿಎಸ್‌ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಕೇಂದ್ರದ ಜಿಎಸ್‌ಟಿ ಹಂಚಿಕೆ ಪಾಲಿನಲ್ಲಿ ವಂಚನೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. 2023-24ನೇ ಸಾಲಿನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯಕ್ಕೆ ಪ್ರತೀ ವರ್ಷ ರೂ. 40,000 ಕೋಟಿಯಷ್ಟು ತೆರಿಗೆ ವಂಚನೆಯಾಗುತ್ತಿದೆ ಎಂದು ಅಂಕಿ-ಅಂಶಗಳೇ ಹೇಳುತ್ತಿವೆ. ಕೇಂದ್ರೀಕೃತ ತೆರಿಗೆ ಸಂಗ್ರಹ ಪದ್ಧತಿಯಿಂದ ಆಗಿರುವ ಪ್ರತಿಕೂಲ ಪರಿಣಾಮವಿದು.

ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಜಿಎಸ್‌ಟಿ ತೆರಿಗೆ ಪದ್ಧತಿ

ಭಾರತವೆಂದಿಗೂ ಏಕದೇಶವಾಗಿರಲಿಲ್ಲ, ಮುಂದೆಯೂ ಆಗುವುದಿಲ್ಲ. ಹೀಗಾಗಿಯೇ ಭಾರತವನ್ನು ಒಕ್ಕೂಟ ಗಣರಾಜ್ಯವೆಂದು ಸಂವಿಧಾನದಲ್ಲಿ ಘೋಷಿಸಿರುವುದು. ಇದರನ್ವಯ ಪ್ರತೀ ರಾಜ್ಯಗಳೂ ತಮ್ಮದೇ ಆದ ಸ್ವಾಯತ್ತತೆ ಹೊಂದಿವೆ. ಇದರಿಂದ ಕೇಂದ್ರ ಸರಕಾರದಂತೆ ಪ್ರತೀ ರಾಜ್ಯಗಳೂ ತಮ್ಮದೇ ಆದ ಶಾಸನ ರೂಪಿಸಿಕೊಳ್ಳುವ ಅಧಿಕಾರ ಹೊಂದಿವೆ. ಇಂತಹ ಸ್ವಾಯತ್ತತೆಗೆ ಮೌಲ್ಯವರ್ಧಿತ ತೆರಿಗೆ ಪದ್ಧತಿ ಪೂರಕವಾಗಿತ್ತು. ಮುಖ್ಯವಾಗಿ ತಮ್ಮ ರಾಜ್ಯದ ಪ್ರಜೆಗಳ ಹಿತಕ್ಕನುಗುಣವಾಗಿ ಯೋಜನೆಗಳನ್ನು ರೂಪಿಸಬಲ್ಲ ಆರ್ಥಿಕ ಸ್ವಾಯತ್ತತೆ ಮತ್ತು ಚೈತನ್ಯ ರಾಜ್ಯಗಳಿಗೆ ಪ್ರಾಪ್ತವಾಗಿತ್ತು. ಆದರೆ, ಇಂತಹ ಸ್ವಾಯತ್ತತೆ ಮತ್ತು ಚೈತನ್ಯಕ್ಕೆ ಧಕ್ಕೆ ತಂದಿರುವ ಜಿಎಸ್‌ಟಿ ತೆರಿಗೆ ಪದ್ಧತಿ, ವಿರೋಧ ಪಕ್ಷಗಳ ರಾಜ್ಯ ಸರಕಾರಗಳನ್ನು ಹಣಿಯಲು ಆಡಳಿತಾರೂಢ ಕೇಂದ್ರ ಸರಕಾರದ ಪಾಲಿಗೆ ಬ್ರಹ್ಮಾಸ್ತ್ರವಾಗಿ ರೂಪುಗೊಂಡಿದೆ. ಇದರಿಂದ ವಿರೋಧ ಪಕ್ಷಗಳ ರಾಜ್ಯ ಸರಕಾರಗಳು ಪದೇ ಪದೇ ಜಿಎಸ್‌ಟಿ ಹಂಚಿಕೆಯಲ್ಲಿ ಅನ್ಯಾಯಕ್ಕೊಳಗಾಗುತ್ತಿದ್ದರೆ, ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ ಪಕ್ಷದ ರಾಜ್ಯ ಸರಕಾರಗಳಿಗೆ ಭಾರೀ ಪ್ರಮಾಣದ ತೆರಿಗೆ ಹಂಚಿಕೆ ಮಾಡುವ ಮೂಲಕ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ನೀತಿಯನ್ನು ಪ್ರತ್ಯಕ್ಷವಾಗಿಯೇ ಪ್ರದರ್ಶಿಸಲಾಗುತ್ತಿದೆ. ಇಂತಹ ಪೂರ್ವಗ್ರಹಪೀಡಿತ ಮತ್ತು ಪಕ್ಷಪಾತಿ ಪಕ್ಷ ರಾಜಕಾರಣದಿಂದ ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ ಢಾಳಾದ ವ್ಯತಿರಿಕ್ತ ಪರಿಣಾಮವುಂಟಾಗುತ್ತಿದೆ.

ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ತೆರಿಗೆ ಪ್ರಮಾಣ ವನ್ನು ಹೊಂದಿರುವ ಮಾಲ್ಟಾ, ಸಿಪ್ರಸ್, ಆ್ಯಂಡೊರ್ರಾ, ಮಾಂಟೆನೆಗ್ರೊ ಹಾಗೂ ಸಿಂಗಾಪೂರ್ ನಂತಹ ದೇಶಗಳು ಬಲಿಷ್ಠ ಆರ್ಥಿಕ ತಳಹದಿಯನ್ನು ಹೊಂದಿದ್ದರೆ, ಭಾರೀ ಪ್ರಮಾಣದ ತೆರಿಗೆ ಪದ್ಧತಿಯನ್ನು ಹೊಂದಿರುವ ಭಾರತ, ಹಣದುಬ್ಬರ ಮತ್ತು ಬೆಲೆಯೇರಿಕೆಯಿಂದ ನಲುಗುತ್ತಲೇ ಇದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನತೆ ಬಸವಳಿದು ಹೋಗಿದ್ದಾರೆ.

ತೆರಿಗೆ ಪದ್ಧತಿಯ ಸರಳೀಕರಣವೆಂದರೆ, ದುರ್ಬಲ ಮತ್ತು ಅಂಚಿನ ವರ್ಗಗಳ ಮೇಲಿನ ತೆರಿಗೆ ಪ್ರಮಾಣದ ಹೊರೆಯನ್ನು ತಗ್ಗಿಸಿ, ಭಾರಿ ಪ್ರಮಾಣದ ಸಂಪತ್ತು ಶೇಖರಿಸಿಕೊಂಡಿರುವ ಕುಬೇರರ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸುವುದೇ ಹೊರತು, ಬಡ ಮತ್ತು ಮಧ್ಯಮ ವರ್ಗಗಳ ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ಮನಬಂದಂತೆ ತೆರಿಗೆ ಏರಿಕೆ ಮಾಡಿ, ತೆರಿಗೆ ಸಂಗ್ರಹ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಬೀಗುವುದಲ್ಲ. ಇದರಿಂದ ಬಡವರು ಮತ್ತು ಶ್ರೀಮಂತರ ನಡುವಿನ ಅಸಮಾನತೆಯ ಕಂದರ ಮಾತ್ರ ಹಿಗ್ಗುವುದಿಲ್ಲ; ಬದಲಿಗೆ, ಬಡ ಮತ್ತು ಮಧ್ಯಮ ವರ್ಗದ ವೆಚ್ಚ ಸಾಮರ್ಥ್ಯ ತಗ್ಗಿ, ದೇಶೀಯ ಮಾರುಕಟ್ಟೆಯೂ ಕುಸಿದು ಬೀಳುತ್ತದೆ. ದೇಶೀಯ ಮಾರುಕಟ್ಟೆ ಕುಸಿದು ಬೀಳುತ್ತಿದ್ದಂತೆ, ದೇಶದ ಆರ್ಥಿಕತೆಯೂ ಕುಸಿದು ಬೀಳುತ್ತದೆ.

ಭಾರತದಂತಹ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಜಿಎಸ್‌ಟಿ ತೆರಿಗೆ ಪದ್ಧತಿಯ ವಿರುದ್ಧ ಇನ್ನಾದರೂ ವಿರೋಧ ಪಕ್ಷಗಳು ದನಿಯೆತ್ತಬೇಕಿದೆ. ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ರಕ್ಷಣೆಗಾಗಿ ಮೌಲ್ಯವರ್ಧಿತ ತೆರಿಗೆ ವ್ಯವ ಸ್ಥೆಯ ಮರು ಜಾರಿಗೆ ಒತ್ತಡ ಹೇರಬೇಕಿದೆ. ಇಲ್ಲವಾದರೆ, ಕೇಂದ್ರದಲ್ಲಿನ ಸರಕಾರಗಳ ತಾರತಮ್ಯದಿಂದ ಇಡೀ ಒಕ್ಕೂಟ ವ್ಯವಸ್ಥೆಯೇ ಛಿದ್ರವಾಗುವ ದಿನ ದೂರವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸದಾನಂದ ಗಂಗನಬೀಡು

contributor

Similar News