ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್‌ರ ಹೆಸರನ್ನು ತನಗೆ ಬೇಕಾದಾಗಲೆಲ್ಲ ಬಳಸಿಕೊಳ್ಳುವ ಮೋದಿ ಸರಕಾರ ಇವರ ಪರಂಪರೆಯನ್ನು ನಿಜವಾಗಿಯೂ ಅನುಸರಿಸುತ್ತಿದೆಯೇ? -ದುಷ್ಯಂತ್ ದವೆ

ಈ ದೇಶ ಶತಮಾನಗಳಿಂದಲೂ ಶ್ರೇಷ್ಠ ದೇಶಗಳಲ್ಲಿ ಒಂದಾಗಿದೆ, ನಮ್ಮ ನಾಗರಿಕತೆ ಸುಂದರವಾಗಿದೆ. ಆದರೆ ಇಂದು ಹಳೆಯ ಗಾಯಗಳನ್ನು ಅಗೆದು, ಈ ದೇಶದಲ್ಲಿ ಇಸ್ಲಾಮಿಕ್ ಅವಧಿಯಲ್ಲಿ ಏನಾಯಿತು ಎಂಬುದರ ಕುರಿತು ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂಬೇಡ್ಕರ್ ಮತ್ತು ಪಟೇಲ್ ಅವರಿಗಿದ್ದ ಈ ಆತಂಕಗಳು ಇಂದು ನಿಜವಾಗಿಬಿಟ್ಟಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ದವೆ.;

Update: 2025-04-23 11:11 IST
ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್‌ರ ಹೆಸರನ್ನು ತನಗೆ ಬೇಕಾದಾಗಲೆಲ್ಲ ಬಳಸಿಕೊಳ್ಳುವ ಮೋದಿ ಸರಕಾರ ಇವರ ಪರಂಪರೆಯನ್ನು ನಿಜವಾಗಿಯೂ ಅನುಸರಿಸುತ್ತಿದೆಯೇ? -ದುಷ್ಯಂತ್ ದವೆ
  • whatsapp icon

ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ, ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ದುಷ್ಯಂತ್ ದವೆ ‘ದಿ ವೈರ್’ಗಾಗಿ ಕರಣ್ ಥಾಪರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ, ಅಂಬೇಡ್ಕರ್ ಮತ್ತು ಪಟೇಲ್ ಪರಂಪರೆಯನ್ನು ಮೋದಿ ಸರಕಾರ ಹೇಗೆ ಸಂಪೂರ್ಣ ಕಡೆಗಣಿಸಿದೆ ಎಂಬುದನ್ನು ವಿವರಿಸಿದ್ದಾರೆ.

ಮೋದಿ ಸರಕಾರ ಕಳೆದ 10 ವರ್ಷಗಳಲ್ಲಿ ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್ ಅವರ ಪ್ರತಿಪಾದನೆಗಳನ್ನು ಪದೇ ಪದೇ, ಸ್ಪಷ್ಟವಾಗಿ ನಿರ್ಲಕ್ಷಿಸಿದೆ ಮತ್ತು ಉಲ್ಲಂಘಿಸಿದೆ ಎಂದು ದುಷ್ಯಂತ್ ದವೆ ಹೇಳಿದ್ದಾರೆ.

ವಕ್ಫ್ ಕಾಯ್ದೆಯ ಸಾಂವಿಧಾನಿಕತೆಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ಕಡೆಗಣಿಸಿದೆ ಎಂದು ಅವರು ಉಲ್ಲೇಖಿಸುವ ಅಂಬೇಡ್ಕರ್ ವಿಚಾರಗಳು ಎರಡು.

ಮೊದಲನೆಯದಾಗಿ, ಯಾವುದೇ ಸರಕಾರ ಮುಸ್ಲಿಮ್ ಸಮುದಾಯವನ್ನು ಪ್ರಚೋದಿಸುವ ರೀತಿಯಲ್ಲಿ ತನ್ನ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದು ಹುಚ್ಚು ಸರಕಾರವಾಗುತ್ತದೆ ಎಂದು ಅಂಬೇಡ್ಕರ್ 1948ರ ಡಿಸೆಂಬರ್ 2ರಂದು ಹೇಳಿದ್ದನ್ನು ಅವರು ನೆನಪಿಸಿದ್ದಾರೆ.

ಮೋದಿ ಸರಕಾರ ನಿರ್ಲಕ್ಷಿಸಿರುವ, ಅಂಬೇಡ್ಕರ್ ಅವರ ಎರಡನೇ ಮಾತು 1948ರ ನವೆಂಬರ್ 4ರಂದು ಹೇಳಿದ್ದಾಗಿದೆ.

‘‘ಅಲ್ಪಸಂಖ್ಯಾತರು ಒಂದು ಸ್ಫೋಟಕ ಶಕ್ತಿಯಾಗಿದ್ದು, ಅದು ಸ್ಫೋಟಗೊಂಡರೆ, ಸರಕಾರದ ಸಂಪೂರ್ಣ ರಚನೆಯನ್ನೇ ಸ್ಫೋಟಿಸಬಹುದು. ಯುರೋಪಿನ ಇತಿಹಾಸದಲ್ಲಿ ಈ ಸಂಗತಿಗೆ ಸಾಕಷ್ಟು ಮತ್ತು ಭಯಾನಕ ಪುರಾವೆಯಿದೆ. ಇನ್ನೊಂದು ವಿಚಾರವೆಂದರೆ, ಭಾರತದಲ್ಲಿನ ಅಲ್ಪಸಂಖ್ಯಾತರು ತಮ್ಮ ಅಸ್ತಿತ್ವವನ್ನು ಬಹುಸಂಖ್ಯಾತರ ಕೈಯಲ್ಲಿ ಇಡಲು ಒಪ್ಪಿಕೊಂಡಿದ್ದಾರೆ’’ ಎಂದು ಅಂಬೇಡ್ಕರ್ ಹೇಳಿದ್ದರು.

ದವೆ ಹೇಳುವಂತೆ, ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಸರಣಿ ವಿದ್ಯಮಾನಗಳು ತೀವ್ರ ಕಳವಳಕಾರಿಯಾಗಿವೆ. ತಾವೊಬ್ಬ ಮುಸ್ಲಿಮ್ ಅಲ್ಲದಿದ್ದರೂ, ಹಿಂದೂ ಮತ್ತು ಬ್ರಾಹ್ಮಣ ಆಗಿರುವಾಗಲೂ, ಮುಸ್ಲಿಮರ ವಿಷಯವಾಗಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಕಳವಳವಾಗುತ್ತದೆ ಎನ್ನುವ ಅವರು ‘ಲವ್ ಜಿಹಾದ್’ ಅಂಥ ಮಾತುಗಳು ನೋವುಂಟುಮಾಡುತ್ತವೆ ಎನ್ನುತ್ತಾರೆ.

ಒಬ್ಬ ಹಿಂದೂ ಹುಡುಗ ಮುಸ್ಲಿಮ್ ಹುಡುಗಿಯನ್ನು ಮದುವೆಯಾದರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಒಬ್ಬ ಮುಸ್ಲಿಮ್ ಹುಡುಗ ಹಿಂದೂ ಹುಡುಗಿಯನ್ನು ಮದುವೆಯಾದರೆ ಅದನ್ನು ಲವ್ ಜಿಹಾದ್ ಎಂದು ಕರೆಯಲಾಗುತ್ತದೆ ಮತ್ತು ಅದರ ಪರಿಣಾಮಗಳು ಕೆಲವೊಮ್ಮೆ ತುಂಬಾ ತೀವ್ರ ಮಟ್ಟದವಾಗಿರುತ್ತವೆ.ಅಂಥ ಹೊತ್ತಲ್ಲಿ ಆ ಹುಡುಗನನ್ನು ಬಂಧಿಸಲಾಗುತ್ತದೆ, ಅವನ ಕುಟುಂಬವನ್ನೂ ಬಂಧಿಸಲಾಗುತ್ತದೆ. ಕೆಲವೊಮ್ಮೆ ಅವನ ಮನೆಯನ್ನೂ ಧ್ವಂಸಗೊಳಿಸಲಾಗುತ್ತದೆ ಎನ್ನುವ ಅವರು ‘ಲವ್ ಜಿಹಾದ್’ನಿಂದ ಶುರುವಾಗಿ, ಪೌರತ್ವ ತಿದ್ದುಪಡಿ ಕಾಯ್ದೆವರೆಗೆ, ಇತ್ತೀಚೆಗೆ ಈದ್ ದಿನದಂದು ಮುಸ್ಲಿಮರನ್ನು ನಡೆಸಿಕೊಂಡ ರೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಬುಲ್ಡೋಜರ್ ನ್ಯಾಯ ಮೂಲತಃ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಮತ್ತು ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆಯ ಹೊರತಾಗಿಯೂ ಅದು ನಡೆಯುತ್ತಿದೆ ಎನ್ನುವ ದವೆ, ಆರೆಸೆಸ್ ಮುಖ್ಯಸ್ಥ ಭಾಗವತ್ ನಮ್ಮ ರಾಷ್ಟ್ರೀಯ ಅಭಿವೃದ್ಧಿಯ ಭಾಗವಾಗಿ ಮುಸ್ಲಿಮ್ ಸಮುದಾಯವನ್ನು ನೋಡಬೇಕು ಎಂದಿರುವುದನ್ನು ಕೂಡ ಪ್ರಸ್ತಾಪಿಸಿದ್ದಾರೆ.

ಈ ದೇಶದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ನಿರಂತರವಾದ ಅಭಿಯಾನ ನಡೆದಂತಿರುವ ಸನ್ನಿವೇಶವಿದೆ. ಮುಸ್ಲಿಮರು ದೇಶದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಅಪಾರ ನಂಬಿಕೆ ಉಳಿಸಿಕೊಂಡಿದ್ದಾರೆ. ಬಹುಶಃ ಅವರು ಭಾರತೀಯ ನ್ಯಾಯಾಂಗದಲ್ಲಿ ಅಚಲ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಆ ನಂಬಿಕೆಯಿಂದಾಗಿ ಅವರು ಭರವಸೆ ಕಳೆದುಕೊಳ್ಳುತ್ತಿಲ್ಲ. ಹಾಗಾಗಿ, ಅವರು ಆ ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳದೆ ಇರುವಂತಾಗಲು, ನ್ಯಾಯಾಂಗ ಯಾವಾಗಲೂ ಅವರ ಹಕ್ಕುಗಳನ್ನು ರಕ್ಷಿಸಲು ನಿಲ್ಲಬೇಕಿದೆ.

ಅಂಬೇಡ್ಕರ್ ಒಬ್ಬ ಪ್ರವಾದಿಯಾಗಿದ್ದರು, ಅವರು ಈ ದೇಶ ಎದುರಿಸಲಿರುವ ಸಮಸ್ಯೆಗಳನ್ನು ಮುಂಚಿತವಾಗಿಯೇ ಮನಗಂಡಿದ್ದರು. ಅವರು ಅತ್ಯಂತ ಶ್ರೇಷ್ಠ ದಾರ್ಶನಿಕ ಎನ್ನುತ್ತಾರೆ ದವೆ.

ಸಂವಿಧಾನ ಸಭೆಯ ಚರ್ಚೆ ಸಮಯದಲ್ಲಿ ಮಾತನಾಡಿದ ಅಂಬೇಡ್ಕರ್, ಬಹುಸಂಖ್ಯಾತರ ಸರಕಾರ ಮಾಡುತ್ತಿರುವ ಅಪಾಯ ಮತ್ತು ಅದರಲ್ಲಿ ಅಂತರ್ಗತವಾಗಿರುವ ಸ್ಪಷ್ಟ ದ್ರೋಹ ಎರಡನ್ನೂ ಎತ್ತಿ ತೋರಿಸಿದ್ದಾರೆ ಎಂದು ದವೆ ಹೇಳುತ್ತಾರೆ.

ಅಂಬೇಡ್ಕರ್ ಅವರ ಓದು ಅದ್ಭುತವಾಗಿತ್ತು.

ಏಕೆಂದರೆ ಅವರು ಸಮಾಜದಲ್ಲಿ ಭ್ರಾತೃತ್ವ ಇರಬೇಕು ಮತ್ತು ಪ್ರಜಾಪ್ರಭುತ್ವ ಭ್ರಾತೃತ್ವದಿಂದ ಮಾತ್ರ ಉಳಿಯುತ್ತದೆ ಎಂದು ನಂಬಿದ್ದರು ಎಂಬುದನ್ನು ದವೆ ಹೇಳಿದ್ದಾರೆ.

ಅವರು ಹೇಳುವಂತೆ ಮೋದಿ ಸರಕಾರ ನಿರ್ಲಕ್ಷಿಸಿದೆ ಎನ್ನಲಾದ ಸರ್ದಾರ್ ಪಟೇಲ್ ಅವರ ಸಲಹೆ 1949ರ ಮೇ 25ರಂದು ಬಂದದ್ದಾಗಿದೆ.

‘‘ಬಹುಸಂಖ್ಯಾತರಾಗಿರುವ ನಾವು ಅಲ್ಪಸಂಖ್ಯಾತರು ಹೇಗೆ ಭಾವಿಸುತ್ತಾರೆ ಮತ್ತು ಅವರ ಸ್ಥಾನದಲ್ಲಿ ನಮ್ಮನ್ನು ಹಾಗೆ ನಡೆಸಿಕೊಂಡರೆ ನಮಗೆ ಹೇಗೆ ಅನಿಸುತ್ತದೆ ಎಂಬುದರ ಕುರಿತು ಯೋಚಿಸಬೇಕು’’ ಎಂದು ಪಟೇಲ್ ಹೇಳಿದ್ದರು.

ಸರ್ದಾರ್ ಪಟೇಲ್ ಮತ್ತು ಅಂಬೇಡ್ಕರ್ ಅವರು ಈ ದೇಶದ ಶ್ರೇಷ್ಠ ವ್ಯಕ್ತಿಗಳು ಎಂದು ದವೆ ಉಲ್ಲೇಖಿಸುತ್ತಾರೆ.

ಸ್ವಾತಂತ್ರ್ಯ ಚಳವಳಿಯ ಮೂಲಕ ಬಂದ ನೂರಾರು ಇತರ ನಾಯಕರಂತೆಯೇ ಅವರು ನಿಜವಾದ ರಾಷ್ಟ್ರೀಯವಾದಿಗಳಾಗಿದ್ದರು. ಪಟೇಲ್ ಮೂಲಭೂತ ಹಕ್ಕುಗಳ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಅಲ್ಪಸಂಖ್ಯಾತ ಹಕ್ಕುಗಳ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಅವರು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆ ನೀಡಿದ್ದರು.

ಒಬ್ಬರನ್ನು ಬೇರೆಯವರಂತೆ ನಡೆಸಿಕೊಳ್ಳುವಾಗ, ನಮ್ಮನ್ನು ಹಾಗೆ ನಡೆಸಿಕೊಂಡರೆ ನಮಗೆ ಹೇಗೆನ್ನಿಸುತ್ತದೆ ಎಂದು ಯೋಚಿಸುವ ಪ್ರಬುದ್ಧತೆ ಇರಬೇಕು ಎಂದಿದ್ದರು ಎಂಬುದನ್ನು ದವೆ ಹೇಳಿದ್ದಾರೆ.

ಈ ದೇಶ ಶತಮಾನಗಳಿಂದಲೂ ಶ್ರೇಷ್ಠ ದೇಶಗಳಲ್ಲಿ ಒಂದಾಗಿದೆ, ನಮ್ಮ ನಾಗರಿಕತೆ ಸುಂದರವಾಗಿದೆ. ಆದರೆ ಇಂದು ಹಳೆಯ ಗಾಯಗಳನ್ನು ಅಗೆದು, ಈ ದೇಶದಲ್ಲಿ ಇಸ್ಲಾಮಿಕ್ ಅವಧಿಯಲ್ಲಿ ಏನಾಯಿತು ಎಂಬುದರ ಕುರಿತು ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂಬೇಡ್ಕರ್ ಮತ್ತು ಪಟೇಲ್ ಅವರಿಗಿದ್ದ ಈ ಆತಂಕಗಳು ಇಂದು ನಿಜವಾಗಿಬಿಟ್ಟಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಸುಮಾರು 30 ವರ್ಷಗಳ ಹಿಂದೆಯೇ ಬಿಜೆಪಿ ನಾಯಕರು ಚುನಾವಣೆಗಳ ಸೋಲು ಗೆಲುವು ಭಾವನಾತ್ಮಕ ವಿಷಯಗಳ ಮೇಲೆ ಇರುತ್ತದೆ ಮತ್ತು ಧರ್ಮ ಭಾವನಾತ್ಮಕ ವಿಷಯವಾಗಿದೆ ಎಂದು ಭಾವಿಸಿದ್ದರು. ಅಂಬೇಡ್ಕರ್ ಮತ್ತು ಪಟೇಲರನ್ನು ಗೌರವಿಸುವುದಾಗಿ, ಅನುಸರಿಸುವುದಾಗಿ ಹೇಳುವ ಬಿಜೆಪಿಯವರು ಚುನಾವಣೆಗಳನ್ನು ಗೆಲ್ಲಲು ಅದೇ ಅಂಬೇಡ್ಕರ್ ಮತ್ತು ಪಟೇಲರ ಪ್ರತಿಪಾದನೆಗಳನ್ನು ತುಳಿಯುತ್ತಿದ್ದಾರೆ. ದೇಶದ ಮೇಲಾಗುವ ಪರಿಣಾಮಗಳ ಬಗ್ಗೆ ಬಿಜೆಪಿಯವರಿಗೆ ಕಳಕಳಿಯಿಲ್ಲ. ಬಿಜೆಪಿಯ ಸಿದ್ಧಾಂತವನ್ನು ನಾನು ಒಪ್ಪುವುದಿಲ್ಲ. ಆದರೆ ನಾನು ಬಿಜೆಪಿಯನ್ನು ಒಂದು ಸಂಘಟನೆಯಾಗಿ ಗೌರವಿಸುತ್ತೇನೆ. ನಿಜವಾಗಿಯೂ ಕಾಡುವ ಸಂಗತಿಯೆಂದರೆ, ಈ ದೇಶವನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಲು ಬಯಸುವ ಪಕ್ಷ ಶಾಂತಿಯಿಂದ, ಸಹೋದರತ್ವದಿಂದ ಪ್ರಗತಿ ಸಾಧ್ಯವಿದೆ ಎಂಬುದನ್ನು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ದವೆ ಕೇಳುತ್ತಾರೆ.

ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಹೇಳುತ್ತ, ದವೆ ಅವರು, ಅದು ಸಂವಿಧಾನದ ಆರ್ಟಿಕಲ್ 25 ಮತ್ತು 26 ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.

ಸಂವಿಧಾನ ರಚಿಸುವಾಗ ಮುಸ್ಲಿಮ್ ಸಮುದಾಯ ಅಸ್ತಿತ್ವದಲ್ಲಿತ್ತು, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಉದ್ಭವಿಸುವ ಸಮಸ್ಯೆ ಮತ್ತು ಸವಾಲುಗಳು ಸಂವಿಧಾನ ಸಭೆಯ ಸದಸ್ಯರ ಮುಂದೆ ಇದ್ದವು, ಅವರು ಆ ಬಗ್ಗೆ ಬಹಳ ಜಾಗೃತರಾಗಿದ್ದರು.

ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತತೆಯನ್ನು ರಕ್ಷಿಸುವ, ಧರ್ಮದ ವೃತ್ತಿ ಆಚರಣೆ ಮತ್ತು ಪ್ರಚಾರಕ್ಕೆ ಅವಕಾಶ ನೀಡುವ ಆರ್ಟಿಕಲ್ 25 ಹಾಗೂ ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ನೀಡುವ ಆರ್ಟಿಕಲ್ 26 ಸಂವಿಧಾನದಲ್ಲಿ ಅಡಕವಾದದ್ದು ಈ ಕಾಳಜಿಗಳಿಂದಾಗಿ. ಸಮಾಜಕ್ಕಾಗಿ ಏನನ್ನೋ ಮಾಡಬೇಕೆಂದು ಯಾರೇ ಬಯಸಿದರೂ ಸರಕಾರ ಅದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಇದು ಧಾರ್ಮಿಕ ಸಂಸ್ಥೆ ಎಂದು ನೆಪ ಮಾಡಿ ಅದನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದು ಸಂವಿಧಾನವೇ ಪ್ರತಿಪಾದಿಸಿದ ಧಾರ್ಮಿಕ ಸ್ವಾತಂತ್ರ್ಯ.

ಈಗಿನ ವಕ್ಫ್ ತಿದ್ದುಪಡಿ ಕಾಯ್ದೆ ಆರ್ಟಿಕಲ್ 25 ಮತ್ತು ಆರ್ಟಿಕಲ್ 26 ಅನ್ನು ಉಲ್ಲಂಘಿಸುತ್ತದೆ. ಅದು ಅಸ್ತಿತ್ವದಲ್ಲಿರುವ ವಕ್ಫ್‌ಗಳನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ. ತಲೆಮಾರುಗಳಿಂದ ವಕ್ಫ್‌ಗಳು ಅಸ್ತಿತ್ವದಲ್ಲಿವೆ ಮತ್ತು ಅವು ಮುಸ್ಲಿಮ್ ಸಮುದಾಯಕ್ಕೆ ಸಹಾಯ ಮಾಡುತ್ತಿವೆ. ಅವನ್ನು ನಿರ್ದಿಷ್ಟ ಕಾರಣಕ್ಕಾಗಿ ಪ್ರತ್ಯೇಕಿಸಲು ಹೊರಟಿರುವುದೇ ಕಳವಳಕಾರಿ ಎನ್ನುತ್ತಾರೆ.

ಯಾವುದೇ ಧರ್ಮದವರಾದರೂ, ಈ ರೀತಿಯ ದತ್ತಿ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ತಮ್ಮ ಸ್ವಂತ ಧರ್ಮಕ್ಕೆ ಸೀಮಿತಗೊಳಿಸಲು ಬಯಸುತ್ತಾರೆ.

ಮುಸ್ಲಿಮರು ಹಿಂದೂ ದತ್ತಿಗಳಿಗೆ ಹೋಗುವುದನ್ನು ಹಿಂದೂಗಳು ಬಯಸುವುದಿಲ್ಲ. ಅದೇ ರೀತಿ, ಮುಸ್ಲಿಮರೂ ಅದನ್ನು ಬಯಸುವುದಿಲ್ಲ. ಪಾರ್ಸಿಗಳು ಎಂದಿಗೂ ಪಾರ್ಸಿಯೇತರರಿಗೆ ಅವಕಾಶ ಕೊಡುವುದಿಲ್ಲ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅಸ್ತಿತ್ವದಲ್ಲಿದೆ ಮತ್ತು ಜನರು ಆ ಸ್ವಾತಂತ್ರ್ಯವನ್ನು ಯಾರ ಹಸ್ತಕ್ಷೇಪವಿಲ್ಲದೆ ಅನುಭವಿಸುತ್ತಿದ್ದಾರೆ ಎನ್ನುವ ದವೆ, ಸರಳವಾಗಿ ಹೇಳಬೇಕೆಂದರೆ, ಇದು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟ ಸ್ವಾತಂತ್ರ್ಯ. ಸಂವಿಧಾನದಲ್ಲಿ ಆರ್ಟಿಕಲ್ 13 ಇದೆ. ಅದು ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುವ ಯಾವುದೇ ಆದೇಶ, ಯಾವುದೇ ಅಧಿಸೂಚನೆಯನ್ನು ಅನೂರ್ಜಿತ ಮಾಡುವ ರಕ್ಷಣಾತ್ಮಕ ಆಸರೆಯಾಗಿದೆ ಎಂಬುದರ ಕಡೆ ಗಮನ ಸೆಳೆಯುತ್ತಾರೆ.

ಸರಕಾರ ಯಾವುದೇ ರೀತಿಯಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆ ಮಾಡಬಾರದು ಎಂಬುದಕ್ಕಾಗಿಯೇ ಆರ್ಟಿಕಲ್ 13ರ ಅಡಿ ಅಂಥ ರಕ್ಷಣೆ ಒದಗಿಸಲಾಗಿದೆ ಎನ್ನುತ್ತಾರೆ.

ಆರ್ಟಿಕಲ್ 32 ಕೂಡ ಮೂಲಭೂತ ಹಕ್ಕುಗಳ ಉಲ್ಲಂಘನೆ ವಿರುದ್ಧ ರಕ್ಷಣೆ ನೀಡುತ್ತದೆ. ಅಂಥ ಉಲ್ಲಂಘನೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವ ಹಕ್ಕನ್ನು ಪ್ರತಿಯೊಬ್ಬ ನಾಗರಿಕರಿಗೂ ಖಾತರಿಪಡಿಸಲಾಗಿದೆ.

ಸುಪ್ರೀಂ ಕೋರ್ಟ್ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಅದಕ್ಕಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಬದ್ಧವಾಗಿದೆ. ‘‘ಸಂವಿಧಾನದ ಹೃದಯ ಮತ್ತು ಆತ್ಮವೆಂದು ಈ ಸಂವಿಧಾನದ ಯಾವುದೇ ಒಂದು ವಿಧಿಯ ಮೇಲೆ ನಾನು ಬೆರಳಿಡುವುದಾದರೆ ಅದು ಆರ್ಟಿಕಲ್ 32’’ ಎಂದು ಅಂಬೇಡ್ಕರ್ ಹೇಳಿದ್ದನ್ನು ದವೆ ನೆನಪಿಸಿದ್ದಾರೆ.

ಸುಪ್ರೀಂ ಕೋರ್ಟ್ 32ನೇ ವಿಧಿಯ ಅಡಿಯಲ್ಲಿನ ತನ್ನ ಕರ್ತವ್ಯವನ್ನು ಮರೆತಿದೆ ಮತ್ತು ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದಾಗ ಜನರನ್ನು ಪದೇ ಪದೇ ಹೈಕೋರ್ಟ್ ಗಳಿಗೆ ಓಡಿಸುತ್ತಿದೆ ಎಂದೂ ದವೆ ಹೇಳಿದ್ದಾರೆ.

ವಕ್ಫ್ ತಿದ್ದುಪಡಿ ಕಾಯ್ದೆ ವಿಷಯವಾಗಿ ಸುಪ್ರೀಂ ಕೋರ್ಟ್ ಸರಿಯಾಗಿಯೇ ವರ್ತಿಸಿದೆ ಮತ್ತು ಸಾಲಿಸಿಟರ್ ಜನರಲ್ ಕೂಡ ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದರು ಎಂಬುದನ್ನು ದವೆ ಹೇಳುತ್ತಾರೆ.

ಸುಪ್ರೀಂ ಕೋರ್ಟ್ 1954ರಲ್ಲಿ ಮದ್ರಾಸ್ ದತ್ತಿ ಕಾಯ್ದೆ, ಧಾರ್ಮಿಕ ದತ್ತಿ ಕಾಯ್ದೆ, ಒರಿಸಾ ಧಾರ್ಮಿಕ ದತ್ತಿ ಕಾಯ್ದೆ ಮತ್ತು ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆಯ ಹಲವು ನಿಬಂಧನೆಗಳನ್ನು ರದ್ದುಗೊಳಿಸಿತು. ಈಗ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಅಧಿಕಾರಗಳನ್ನು ಆಯುಕ್ತರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿತು. ಇವು ಆರ್ಟಿಕಲ್ 26ರ ಅಡಿಯಲ್ಲಿ ರಕ್ಷಿಸಲ್ಪಟ್ಟ ಧಾರ್ಮಿಕ ಸಂಸ್ಥೆಗಳು ಮತ್ತು ಆದ್ದರಿಂದ ಅವುಗಳನ್ನು ಮುಟ್ಟುವ ಹಾಗಿಲ್ಲ. ಸಮುದಾಯವೇ ಅದನ್ನು ಮಾಡಬೇಕು ಎನ್ನುತ್ತಾರೆ ಅವರು.

ಈ ಕಾಯ್ದೆಯನ್ನು ತರುವ ಮೊದಲು ಸರಕಾರ ಗಂಭೀರವಾಗಿ ಪರಿಶೀಲಿಸಿಲ್ಲ ಎಂಬುದು ಆಶ್ಚರ್ಯವನ್ನುಂಟುಮಾಡುತ್ತದೆ. ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ನಿಬಂಧನೆಗಳಿಗೆ ಹೋಲುವ ಅನೇಕ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದರೆ ಈ ತೀರ್ಪುಗಳನ್ನು ಯಾರೂ ನೋಡಿದಂತಿಲ್ಲ. ವಕ್ಫ್‌ಗಳಂತಹ ಮುಸ್ಲಿಮ್ ಸಂಸ್ಥೆಗಳಲ್ಲಿ ಮಾತ್ರವಲ್ಲ, ಅನೇಕ ಸಂಸ್ಥೆಗಳಲ್ಲಿಯೂ ದಾಖಲೆಗಳು ಸಿಗದೇ ಇರಬಹುದು, ಆದರೆ ವರ್ಷಗಳಿಂದ ಈ ಸಂಸ್ಥೆಗಳನ್ನು ಸಮುದಾಯಗಳು ಧಾರ್ಮಿಕ ಸಂಸ್ಥೆಗಳಾಗಿ ಪರಿಗಣಿಸಿವೆ ಮತ್ತು ಗೌರವಿಸುತ್ತಿವೆ. ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ವಕ್ಫ್ ತಿದ್ದುಪಡಿ ಕಾಯ್ದೆ ಭಾರತೀಯ ನ್ಯಾಯಶಾಸ್ತ್ರದ ಉಲ್ಲಂಘನೆಯಾಗಿದೆ. ಆರ್ಟಿಕಲ್ 25 ಮತ್ತು 26 ಅನ್ನು ಅದು ಉಲ್ಲಂಘಿಸುತ್ತದೆ ಎಂಬುದು ದವೆ ಅವರ ಅಭಿಪ್ರಾಯವಾಗಿದೆ.

ಇದು ಸಾಂವಿಧಾನಿಕವಾಗಿ ಸರಿಯಾಗಿಲ್ಲ. ಇದು ಕಾನೂನುಬದ್ಧವಾಗಿಲ್ಲ. ಇದು ನ್ಯಾಯಶಾಸ್ತ್ರದ ದೃಷ್ಟಿಯಿಂದ ಉತ್ತಮವಾಗಿಲ್ಲ ಮತ್ತು ಸಂವಿಧಾನದ ಪೀಠಿಕೆಯ ಭಾಗವಾಗಿರುವ ಭ್ರಾತೃತ್ವಕ್ಕೇ ಧಕ್ಕೆ ತರುವುದರಿಂದ ಇದು ಸರಿಯಾದುದಲ್ಲ ಎಂದಿದ್ದಾರೆ ದುಷ್ಯಂತ್ ದವೆ.

ಭ್ರಾತೃತ್ವವನ್ನು ಸೃಷ್ಟಿಸುವ ಬದಲು, ಇಂದು ಸಮಾಜದಲ್ಲಿ ಗಂಭೀರ ಒಡಕನ್ನು ಮೂಡಿಸುವುದು ನಡೆಯುತ್ತಿದೆ. ಬಹುಸಂಖ್ಯಾತ ಸಮುದಾಯಗಳಲ್ಲಿರುವ ಎಲ್ಲರೂ ಈ ತಿದ್ದುಪಡಿ ಕಾಯ್ದೆಯಲ್ಲಿ ಏನು ತಪ್ಪಾಗಿದೆ ಎಂದು ಕೇಳುತ್ತಾರೆ, ಮುಸ್ಲಿಮರು ಇದು ಸಂವಿಧಾನಬಾಹಿರ ಎಂದು ಭಾವಿಸುತ್ತಾರೆ. ಅಂದರೆ ಸಮಾಜದಲ್ಲಿ ಗಂಭೀರವಾದ ಒಡಕು ಇದೆ ಎನ್ನುತ್ತಾರೆ ದವೆ.

ವಕ್ಫ್ ತಿದ್ದುಪಡಿ ಕಾಯ್ದೆ ಸಂಪೂರ್ಣವಾಗಿ ಅಸಾಂವಿಧಾನಿಕ. ಹಾಗಾಗಿ, ಸುಪ್ರೀಂ ಕೋರ್ಟ್ ವಕ್ಫ್ ಕಾಯ್ದೆಯನ್ನು ಸಂವಿಧಾನದ ಆರ್ಟಿಕಲ್ 13ರ ಅಡಿಯಲ್ಲಿ ಅನೂರ್ಜಿತ ಎಂದು ಘೋಷಿಸಬೇಕೆಂದು ದುಷ್ಯಂತ್ ದವೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಎಸ್. ಸುದರ್ಶನ್

contributor

Similar News