ರೈತನಾಯಕನ ಪ್ರಾಣಕ್ಕಿಂತಲೂ ಮೋದಿ ಸರಕಾರಕ್ಕೆ ಸ್ವಪ್ರತಿಷ್ಠೆಯೇ ದೊಡ್ಡದಾಗಿದೆಯೆ?

42 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತನಾಯಕನ ಪ್ರಾಣಕ್ಕಿಂತಲೂ ಮೋದಿ ಸರಕಾರಕ್ಕೆ ಪ್ರತಿಷ್ಠೆ ದೊಡ್ಡದಾಗಿದೆಯೆ? ಏಕೆ ಅದು ಹೋರಾಟ ನಿರತ ರೈತರ ಮಾತನ್ನು ಕೇಳುತ್ತಿಲ್ಲ? ತಾನೇ ಕೊಟ್ಟಿದ್ದ ಎಂಎಸ್‌ಪಿ ಭರವಸೆಯನ್ನು ಈಗಲೂ ಈಡೇರಿಸಲು ಅದಕ್ಕೆ ಮನಸ್ಸಿಲ್ಲವೆ?

Update: 2025-01-08 09:14 GMT

ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಕಳೆದ 42 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

2024ರ ಫೆಬ್ರವರಿಯಿಂದಲೇ ರೈತರಿಗಾಗಿ ಪ್ರತಿಭಟನೆ ನಡೆಸುತ್ತಿರುವ ದಲ್ಲೇವಾಲ್, ಕಡೆಗೆ ಉಪವಾಸ ಸತ್ಯಾಗ್ರಹದ ಕಠಿಣ ನಿರ್ಧಾರ ತೆಗೆದುಕೊಂಡರು. ಆವರು ಕಳೆದ 42 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಕಳವಳ ಮೂಡಿಸಿದೆ.

ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಅವರಿಗೆ ಹೇಳಿದೆ.

ಇತ್ತೀಚೆಗೆ ದಲ್ಲೇವಾಲ್ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಅವರ ರಕ್ತದೊತ್ತಡವೂ ಕುಸಿದಿರುವುದಾಗಿ ವರದಿಯಾಗಿದೆ.

70 ವರ್ಷದ ದಲ್ಲೇವಾಲ್, ಎಂಎಸ್‌ಪಿ ಕಾನೂನುಬದ್ಧಗೊಳಿಸುವ ಭರವಸೆ ಈಡೇರಿಸುವಂತೆ ಪಟ್ಟು ಹಿಡಿದಿದ್ದಾರೆ.

ಪಂಜಾಬಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಎಂಎಸ್‌ಪಿ ಅಗತ್ಯವಿದೆ ಎಂದು ಹೇಳಿದ್ದಾರೆ.

ಈಗ ಅವರು ಹೆಚ್ಚು ಕಡಿಮೆ ಒಂದೂವರೆ ತಿಂಗಳಿಂದ ಉಪವಾಸ ನಿರತರಾಗಿರುವುದರಿಂದ ದೇಹ ದುರ್ಬಲಗೊಳ್ಳುತ್ತಿದ್ದು, ಮೊನ್ನೆ ವೇದಿಕೆಯಲ್ಲಿ ಹಾಸಿಗೆಯಲ್ಲಿ ಮಲಗಿಕೊಂಡೇ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.

ಆರೋಗ್ಯ ಹದಗೆಟ್ಟಿದ್ದರೂ ಯಾವುದೇ ವೈದ್ಯಕೀಯ ನೆರವು ಪಡೆಯಲು ಅವರು ಈವರೆಗೆ ನಿರಾಕರಿಸುತ್ತಲೇ ಬಂದಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ದಲ್ಲೇವಾಲ್ ಕಿರು ವೀಡಿಯೊ ಸಂದೇಶಗಳ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಆದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ ಮೊನ್ನೆ ಶನಿವಾರ ಸಮಾವೇಶದ ವೇಳೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಲಗಿಕೊಂಡೇ ಮಾತನಾಡಿದ್ದರು.

ಸೋಮವಾರ ಸಂಜೆಯ ಹೊತ್ತಿಗೆ ಅವರ ರಕ್ತದೊತ್ತಡ ತೀವ್ರ ಕುಸಿದಿದೆ ಎಂದು ವರದಿಗಳು ಹೇಳುತ್ತಿವೆ.

ಅವರ ಆರೋಗ್ಯ ಸ್ಥಿತಿ ನೋಡಿದರೆ ಕಳವಳವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಅವರ ರಕ್ತದೊತ್ತಡ ಮತ್ತು ನಾಡಿ ಬಡಿತದಲ್ಲಿ ಏರುಪೇರಾಗುತ್ತಿದೆ ಎಂದೂ ವೈದ್ಯರು ಹೇಳಿದ್ದಾರೆ.

ಅವರಿಗೆ ಈಗ ವೈದ್ಯಕೀಯ ನೆರವು ಅಗತ್ಯವಾಗಿದೆ. ಆದರೆ ಅವರು ವೈದ್ಯಕೀಯ ನೆರವು ತೆಗೆದುಕೊಳ್ಳಲು ಒಪ್ಪುತ್ತಲೇ ಇಲ್ಲ.

‘‘ಮೊದಲು ಕೇಂದ್ರ ಸರಕಾರದ ಜೊತೆ ಮಾತುಕತೆ ನಡೆಯಬೇಕು. ಆನಂತರವೇ ನನ್ನ ಆರೋಗ್ಯದ ವಿಚಾರ’’ ಎಂದಿದ್ದಾರೆ.

ರೈತರಿಗಿಂತ ತನ್ನ ಜೀವ ಮುಖ್ಯವಲ್ಲ ಎಂದೂ ಅವರು ಮೊನ್ನೆ ಸಮಾವೇಶದ ವೇಳೆ ಹೇಳಿದ್ದಾರೆ.

‘‘ಸಂಕಷ್ಟದಲ್ಲಿ ತತ್ತರಿಸುತ್ತಿರುವ ಲಕ್ಷಾಂತರ ಭಾರತೀಯ ರೈತರ ಜೀವಕ್ಕಿಂತ ನನ್ನ ಜೀವ ಮುಖ್ಯವಲ್ಲ. ಈಗಾಗಲೇ ಏಳು ಲಕ್ಷಕ್ಕೂ ಹೆಚ್ಚು ರೈತರು ಕೃಷಿ ವಲಯದಲ್ಲಿನ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಅವರು ಸಮಾವೇಶದಲ್ಲಿ ಮಾತನಾಡುತ್ತ ಹೇಳಿದ್ದಾರೆ.

ಪಂಜಾಬ್-ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವುದಕ್ಕೆಂದೇ ರಚಿಸಲಾಗಿರುವ ಸಮಿತಿಯ ಮುಖ್ಯಸ್ಥ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನವಾಬ್ ಸಿಂಗ್ ಕೂಡ ದಲ್ಲೇವಾಲ್ ಅವರ ಮನವೊಲಿಸಲು ಈಗಾಗಲೇ ಯತ್ನಿಸಿದ್ದಾರೆ.

ನ್ಯಾ. ನವಾಬ್ ಸಿಂಗ್ ಅವರಲ್ಲದೇ, ಹರ್ಯಾಣದ ಮಾಜಿ ಡಿಜಿಪಿ ಬಿ.ಎಸ್. ಸಂಧು, ಕೃಷಿ ವಿಶ್ಲೇಷಕ ದೇವೇಂದರ್ ಶರ್ಮಾ, ಪ್ರೊ. ರಂಜಿತ್ ಸಿಂಗ್ ಘುಮನ್, ಕೃಷಿ ಅರ್ಥಶಾಸ್ತ್ರಜ್ಞ ಡಾ. ಸುಖ್‌ಪಾಲ್ ಸಿಂಗ್ ಮತ್ತು ಪ್ರೊ.ಬಲದೇವ್ ರಾಜ್ ಕಾಂಬೋಜ್ ವಿಶೇಷ ಆಹ್ವಾನಿತರಾಗಿ ಸಮಿತಿಯಲ್ಲಿದ್ದಾರೆ.

ಅವರೆಲ್ಲರೂ ಭೇಟಿಯಾಗಿ ದಲ್ಲೇವಾಲ್ ಮನವೊಲಿಕೆಗೆ ಯತ್ನಿಸಿದ್ದಾರೆ. ವೈದ್ಯಕೀಯ ನೆರವು ಪಡೆಯುವಂತೆ ನ್ಯಾ.ನವಾಬ್ ಸಿಂಗ್ ವಿನಂತಿಸಿದ್ದಾರೆ.

ಆದರೆ ದಲ್ಲೇವಾಲ್ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಅವರ ಬೇಡಿಕೆ ಎಂಎಸ್‌ಪಿಗೆ ಕಾನೂನು ಗ್ಯಾರಂಟಿ ಕೊಡುವ ಭರವಸೆಯನ್ನು ಕೇಂದ್ರ ಸರಕಾರ ಈಡೇರಿಸಬೇಕು ಎನ್ನುವುದು.

ಆದರೆ ಕೇಂದ್ರ ಸರಕಾರ ಅವರ ಜೊತೆ ಮಾತುಕತೆಗೆ ಮುಂದಾಗುವುದೇ ಎಂಬುದು ಈವರೆಗೂ ಉತ್ತರ ಸಿಗದೇ ಉಳಿದ ಪ್ರಶ್ನೆಯಾಗಿದೆ.

ರೈತರ ಬಗ್ಗೆ ದೊಡ್ಡದಾಗಿ ಮಾತಾಡುವ ಸರಕಾರ, ತಾನೇ ಕೊಟ್ಟಿದ್ದ ಭರವಸೆಯನ್ನು ಈಡೇರಿಸುವ ವಿಚಾರದಲ್ಲಿ ಹಿಂಜರಿಯುತ್ತಲೇ ಬಂದಿದೆ.

ಈಗ 70 ವರ್ಷದ ರೈತ ನಾಯಕ ಉಪವಾಸ ಸತ್ಯಾಗ್ರಹ ಆರಂಭಿಸಿ ಒಂದೂವರೆ ತಿಂಗಳು ಆಗುತ್ತ ಬಂದರೂ ಅದು ಆ ರೈತನಾಯಕನನ್ನು ಮಾತನಾಡಿಸುವ ಸೌಜನ್ಯ ತೋರಿಸಿಲ್ಲ.

ಮುಂದೇನು ಎನ್ನುವಾಗ ತುಂಬ ಕಳವಳವಾಗುತ್ತಿರುವುದು ದಲ್ಲೇವಾಲ್ ಆರೋಗ್ಯದ ಬಗ್ಗೆ.

ಈಗಲಾದರೂ ಮೋದಿ ಸರಕಾರ ತನ್ನ ಒಣ ಪ್ರತಿಷ್ಠೆ ಬದಿಗಿಟ್ಟು ರೈತರ ಜೊತೆ ಮಾತಾಡಲು ಮುಂದಾಗುತ್ತದೆಯೇ?.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News