ಕರ್ನಾಟಕ ಏಕೀಕರಣ ಪುರುಷ ಜಗಳೂರು ಇಮಾಂ ಸಾಹೇಬರು
ಇಮಾಂ ಸಾಹೇಬರು ರಾಜಕೀಯವನ್ನು ಹಣ ಗಳಿಸುವ ತಾಣವಾಗಿ ಕಂಡವರಲ್ಲ. ಸರಕಾರ ಎಂಬುದಕ್ಕೆ ಅವರ ವ್ಯಾಖ್ಯಾನ ಸರ್ವಕಾಲಕ್ಕೂ ಶ್ರೇಷ್ಠವಾಗಿರುವಂಥದ್ದು. ‘‘ಸಮಾಜ ಕಲ್ಯಾಣ ಮತ್ತು ಮಾನವ ಹಿತರಕ್ಷಣೆಗಾಗಿ ಇರುವಂಥ ಒಂದು ಸಂಸ್ಥೆಗೆ ಸರಕಾರ ಎನ್ನುತ್ತಾರೆ’’ ಎಂದು ಅವರು ಬರೆದಿದ್ದಾರೆ. ರಾಜಪ್ರಭುತ್ವವೇ ಇರಲಿ, ಪ್ರಜಾಪ್ರಭುತ್ವವೇ ಇರಲಿ, ಸಮಾಜವಾದ ಅಥವಾ ಸಮತಾವಾದವೇ ಇರಲಿ ಅವುಗಳ ಯೋಗ್ಯತೆಯನ್ನು ಸಮಾಜ ಕಲ್ಯಾಣ ಮತ್ತು ಮಾನವ ಹಿತರಕ್ಷಣೆಯ ಮೂಲಕ ಅಳೆಯಬೇಕು ಎಂಬುದನ್ನು ಅವರು ದೃಢವಾಗಿ ನಂಬಿದ್ದರು. ಕೊನೆಯವರೆಗೂ ಆ ನಂಬಿಕೆಯಿಂದ ಹಿಂದೆ ಸರಿಯಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಅರಸೊತ್ತಿಗೆಯ ರಾಜ್ಯಾಡಳಿತದ ಭಾಗವಾಗಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿರೋಧ ಪಕ್ಷದಲ್ಲಿದ್ದರು. ಈ ಎರಡೂ ಸಂದರ್ಭಗಳಲ್ಲಿ ಘನತೆವೆತ್ತ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದು ರಾಜಕೀಯ ನಾಯಕರಿಗೂ ಮಾದರಿಯಾದರು.
ಭಾಗ- 1
ಬಹು ಆಯಾಮಗಳ ವ್ಯಕ್ತಿತ್ವದ ಜೆ. ಮುಹಮ್ಮದ್ ಇಮಾಂ ಸಾಹೇಬರು ಊರಿನವರಿಗೆ ಇಮ್ಮಣ್ಣ. ಆದರೆ ದೂರದ ಅಭಿಮಾನಿಗಳಿಗೆ ಜಗಳೂರು ಇಮಾಂ ಸಾಹೇಬರು. ಜಗಳೂರೆಂದರೆ ಅವರಿಗೆ ಪಂಚಪ್ರಾಣವಾಗಿತ್ತು. ಅವರು ಜಗಳೂರಿನ ಕೀರ್ತಿಕಲಶವೇ ಆಗಿದ್ದರು. ಜಗಳೂರನ್ನು ಬಿಟ್ಟು ಇಮಾಂ ಸಾಹೇಬರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಅವರ ಮತ್ತು ಊರಿನ ಸಂಬಂಧ ಹಾಸುಹೊಕ್ಕಾಗಿತ್ತು. ಈ ಅವಿನಾಭಾವ ಸಂಬಂಧ ಕೂಡ ಸಾಂಸ್ಕೃತಿಕ ಹೆಮ್ಮೆಯಾಗಿ ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತದೆ.
ಅವರಿಗೆ ಊರವರು ಇಟ್ಟ ಹೆಸರಾದ ‘ಇಮ್ಮಣ್ಣ’, ಇಸ್ಲಾಮ್ ಮತ್ತು ಶರಣ ಸಂಸ್ಕೃತಿಗಳ ಕೂಡಲಸಂಗಮವಾಗಿದೆ. ಶರಣ ಸಂಸ್ಕೃತಿಯಲ್ಲಿ ‘ಅಣ್ಣ’ ಶಬ್ದ ಕೇವಲ ರಕ್ತ ಸಂಬಂಧದ ಶಬ್ದವಾಗಿರದೆ ಭಕ್ತಿ ಸಂಬಂಧದ ಶಬ್ದವಾಗಿ ವಿಸ್ತಾರಗೊಂಡಿದೆ. ಅದು ನಂತರ, ಕನ್ನಡದ ನೆಲದಲ್ಲಿ ಸರ್ವಸಮಾಜಗಳ ಮಧ್ಯೆ ಮಾನವ ಸಂಬಂಧದ ಶಬ್ದವಾಗಿ ಉಳಿದುಕೊಂಡಿದೆ. ಇಮಾಂ ಹೆಸರು ಇಮ್ಮಣ್ಣವಾಗುವುದೇ ಸಂಸ್ಕೃತಿಗಳ ಸಮ್ಮಿಲನದ ಸಂಕೇತ. ಅಂಥ ಮಾನವೀಯತೆಯ ಮಹಾನ್ ಸಂಕೇತವಾಗಿ, ಜನಸಮುದಾಯಗಳ ಮಧ್ಯೆ ಬೆಸುಗೆಯ ಕೇಂದ್ರವಾಗಿ ಬದುಕಿ ಮಾನವ ಘನತೆಯನ್ನು ಎತ್ತಿ ಹಿಡಿದ ಮಹಾಪುರುಷ ನಮ್ಮ ಜಗಳೂರು ಇಮಾಂ ಸಾಹೇಬರು. ಜಗಳೂರಲ್ಲಿ ಜಗಳವೇ ಇಲ್ಲದಂಥ ವಾತಾವರಣ ಸೃಷ್ಟಿಯಾಗಲು ಇವರ ಮನೆತನದ ಪರಂಪರೆಯೂ ಕಾರಣವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಇಮಾಂ ಸಾಹೇಬರಿಂದಾಗಿ ಜಗಳೂರು ದೇಶದ ಇತಿಹಾಸದಲ್ಲಿ ಸ್ಥಾನ ಪಡೆಯಿತು.
ಇಮಾಂ ಸಾಹೇಬರ ಘನವ್ಯಕ್ತಿತ್ವಕ್ಕೆ ಮಾರುಹೋಗದವರೇ ಇಲ್ಲ. ‘ವೀರನಾದಡೆ ವೈರಿಗಳು ಮೆಚ್ಚಬೇಕು’ ಎಂದು ಬಸವಣ್ಣನವರು ಹೇಳಿದ್ದಾರೆ. ಇಮ್ಮಣ್ಣ ಅಂಥ ವ್ಯಕ್ತಿತ್ವವುಳ್ಳವರಾಗಿದ್ದರು. ನಿಜವಾದ ಅರ್ಥದಲ್ಲಿ ಅವರು ಅಜಾತಶತ್ರುಗಳು. ಸಾಹೇಬರು ತಮ್ಮ ಸಿದ್ಧಾಂತವನ್ನು ಬಿಟ್ಟು ಬದುಕಿದವರೇ ಅಲ್ಲ. ಅವರ ಸರ್ವೋದಯ ಸಿದ್ಧಾಂತ ಸರಳ ಸಹಜವಾಗಿದೆ. ಸ್ವಾಮಿನಿಷ್ಠೆ, ಪ್ರಜಾನಿಷ್ಠೆ, ನಿರಹಂಕಾರ, ಪ್ರಾಮಾಣಿಕತೆ, ‘ಜಗದಿ ವ್ಯಕ್ತಿ ಸ್ವಾತಂತ್ರ್ಯವೇ ಮಿಗಿಲು’ ಎಂಬ ದೃಢ ನಿರ್ಧಾರ, ಪಕ್ಷದ ಬದ್ಧತೆಗಿಂತ ನ್ಯಾಯದ ಬದ್ಧತೆಗೆ ಅಂಟಿಕೊಳ್ಳುವ ಮನಸ್ಸು, ದೇಶಪ್ರೇಮ, ಕನ್ನಡ ಪ್ರೇಮ, ಹಳೆ ಮೈಸೂರಿನ ಬಗ್ಗೆ ಇದ್ದ ಭಾವಪೂರ್ಣತೆ, ನಂತರ ವಿಶಾಲ ಮೈಸೂರು ರಾಜ್ಯದ ಬಗ್ಗೆ ಇದ್ದ ಕಾಳಜಿ, ಜಗಳೂರು ಜೊತೆಗಿನ ಆತ್ಮಸಂಬಂಧ ಮುಂತಾದವು ಅವರ ಸಿದ್ಧಾಂತದಲ್ಲಿ ಅಡಕವಾಗಿದ್ದವು.
ಮಾನವ ಸಂಬಂಧಗಳ ನೈಜ ಚಿತ್ರಣ
ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಸಮಾಜ, ಜೀವನವಿಧಾನ, ರಾಜಕೀಯ ವಾತಾವರಣ, ಇವುಗಳ ಮಧ್ಯದ ಮಾನವ ಸಂಬಂಧ ಮುಂತಾದವುಗಳ ನೈಜ ಚಿತ್ರಣವನ್ನು ಮತ್ತು ನಂತರದ ದಿನಗಳಲ್ಲಿನ ಸಾಮಾಜಿಕ ಬದಲಾವಣೆ ಹಾಗೂ ವೈಪರೀತ್ಯಗಳನ್ನು ಅವರಷ್ಟು ಚೆನ್ನಾಗಿ ಬರೆದವರು ಬಹಳ ವಿರಳ. ಅವರ ಅನುಭವ ಕಥನಗಳು ಚಿತ್ರದುರ್ಗ ಜಿಲ್ಲೆ ಮತ್ತು ಹಳೆ ಮೈಸೂರು ವ್ಯಾಪ್ತಿಗೆ ಸೀಮಿತವಾಗದೆ ಇಡೀ ಕರ್ನಾಟಕ ಮತ್ತು ನಂತರ ದಿಲ್ಲಿಯವರೆಗೆ ಬೆಳೆದವು. ಅವರ ಸಾಮಾಜಿಕ ಮತ್ತು ರಾಜಕೀಯ ಒಳನೋಟಗಳು ಇಂದಿನ ಸಮಾಜಕ್ಕೆ, ಸಾಮಾಜಿಕ ಕಾರ್ಯಕರ್ತರಿಗೆ ಹಾಗೂ ರಾಜಕೀಯ ನಾಯಕರಿಗೆ ಅತ್ಯುಪಯುಕ್ತವಾಗಿವೆ.
ಮೈಸೂರು ವಲಯದ ಸಂಸ್ಕೃತಿ ಮತ್ತು ಜೀವನ ವಿಧಾನದ ಮೂಲಕ ಅವರು ದೇಶವನ್ನು ನೋಡಿದವರು. ಅದೇ ಒರೆಗಲ್ಲಿನ ಮೂಲಕ ಜೀವನವನ್ನು ರೂಪಿಸಿಕೊಂಡವರು. ಶ್ರೀಮಂತ ಮಾನವೀಯ ಹಿನ್ನೆಲೆ ಮತ್ತು ಇಳಿವಯಸ್ಸಿನಲ್ಲಿ ಕಂಡ ವ್ಯಾವಹಾರಿಕ ಹಿನ್ನಲೆಯ ಮಧ್ಯೆ ಸಾಕ್ಷಿಪ್ರಜ್ಞೆಯಂತೆ ಬದುಕಿ ನಮಗೆಲ್ಲ ಮಾನವ ಘನತೆಯ ಪಾಠ ಹೇಳುವಂಥ ಸ್ಮತಿಗಳನ್ನು ತಮ್ಮ ‘ಮೈಸೂರು ಆಗ ಮತ್ತು ಈಗ’ ಕೃತಿಯಲ್ಲಿ ದಾಖಲಿಸಿ ಹೋದವರು. ಆ ಕೃತಿ ಅವರು ಕಂಡ ಸಾಮಾಜಿಕ ಸಂಬಂಧಗಳು ಮತ್ತು ರಾಜಕೀಯ ಸ್ಥಿತ್ಯಂತರಗಳ ಚರಿತ್ರೆಯಾಗಿದೆ. ಆ ಚರಿತ್ರೆ ಅವರ ಚಾರಿತ್ರ್ಯವನ್ನು ಉಸಿರಾಡುತ್ತಿದೆ.
ಅವರ ಚಾರಿತ್ರ್ಯ ಅತ್ತಿಮಬ್ಬೆಯ ಅಸಿಧಾರಾವ್ರತದ ಹಾಗೆ. ಲಿಂಗ ಮೆಚ್ಚಿ ಅಹುದು ಅಹುದು ಎನ್ನುವ ಹಾಗೆ. ಸತ್ಯ, ನ್ಯಾಯ, ಜೀವಕಾರುಣ್ಯ, ಸಹಜತೆ, ಸೇವಾ ಹಂಬಲ, ಬದ್ಧತೆ, ಭಿನ್ನಾಭಿಪ್ರಾಯಗಳನ್ನು ವ್ಯಕ್ತಿಗತವಾಗಿ ನೋಡದಂಥ ಉದಾತ್ತ ಭಾವ, ಸಾಮಾಜಿಕ ಸಂಪತ್ತು ಪೋಲಾಗದಂತೆ ಎಚ್ಚರಿಕೆ ವಹಿಸುವ ಮನೋಭಾವ, ಮಿತವ್ಯಯದ ಮೂಲಕ ಹೆಚ್ಚಿನ ಅಭಿವೃದ್ಧಿ ಸಾಧಿಸಬೇಕೆಂಬ ಛಲ. ಸರ್ವಧರ್ಮ ಸಮಭಾವದೊಂದಿಗೆ ಮಾನವ ಸಂಬಂಧಗಳನ್ನು ಬೆಸೆಯುವ ಸಹಜಭಾವ ಮುಂತಾದವು ಅವರ ವ್ಯಕ್ತಿತ್ವವನ್ನು ರೂಪಿಸಿದವು.
ಅವರು ರಾಜಕೀಯವನ್ನು ಹಣ ಗಳಿಸುವ ತಾಣವಾಗಿ ಕಂಡವರಲ್ಲ. ಸರಕಾರ ಎಂಬುದಕ್ಕೆ ಅವರ ವ್ಯಾಖ್ಯಾನ ಸರ್ವಕಾಲಕ್ಕೂ ಶ್ರೇಷ್ಠವಾಗಿರುವಂಥದ್ದು. ‘‘ಸಮಾಜ ಕಲ್ಯಾಣ ಮತ್ತು ಮಾನವ ಹಿತರಕ್ಷಣೆಗಾಗಿ ಇರುವಂಥ ಒಂದು ಸಂಸ್ಥೆಗೆ ಸರಕಾರ ಎನ್ನುತ್ತಾರೆ’’ ಎಂದು ಅವರು ಬರೆದಿದ್ದಾರೆ. ರಾಜಪ್ರಭುತ್ವವೇ ಇರಲಿ, ಪ್ರಜಾಪ್ರಭುತ್ವವೇ ಇರಲಿ, ಸಮಾಜವಾದ ಅಥವಾ ಸಮತಾವಾದವೇ ಇರಲಿ ಅವುಗಳ ಯೋಗ್ಯತೆಯನ್ನು ಸಮಾಜ ಕಲ್ಯಾಣ ಮತ್ತು ಮಾನವ ಹಿತರಕ್ಷಣೆಯ ಮೂಲಕ ಅಳೆಯಬೇಕು ಎಂಬುದನ್ನು ಅವರು ದೃಢವಾಗಿ ನಂಬಿದ್ದರು. ಕೊನೆಯವರೆಗೂ ಆ ನಂಬಿಕೆಯಿಂದ ಹಿಂದೆ ಸರಿಯಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಅರಸೊತ್ತಿಗೆಯ ರಾಜ್ಯಾಡಳಿತದ ಭಾಗವಾಗಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿರೋಧ ಪಕ್ಷದಲ್ಲಿದ್ದರು. ಈ ಎರಡೂ ಸಂದರ್ಭಗಳಲ್ಲಿ ಘನತೆವೆತ್ತ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಬಂದು ರಾಜಕೀಯ ನಾಯಕರಿಗೂ ಮಾದರಿಯಾದರು. ಪ್ರಜಾಪ್ರಭುತ್ವದ ಬಲವರ್ಧನೆಯ ಜವಾಬ್ದಾರಿಯೊಂದಿಗೆ ವಿರೋಧ ಪಕ್ಷಗಳು ಯಾವರೀತಿ ರಚನಾತ್ಮಕವಾಗಿರಬೇಕು ಎಂಬುದನ್ನು ವಿರೋಧ ಪಕ್ಷದ ನಾಯಕರಾಗಿ ತೋರಿಸಿಕೊಟ್ಟರು. ಅವರಿಂದಾಗಿ ವಿರೋಧ ಪಕ್ಷದ ನಾಯಕತ್ವಕ್ಕೆ ಅನನ್ಯವಾದ ಘನತೆ ಬಂದಿತು. ಆಳುವ ಪಕ್ಷ ತಪ್ಪು ಮಾಡುವಾಗ ಟೀಕಿಸುವ ಧೈರ್ಯವನ್ನು ಮತ್ತು ದೇಶದ ಹಾಗೂ ಜನರ ಹಿತದೃಷ್ಟಿಯಿಂದ ಒಳ್ಳೆಯದನ್ನು ಮಾಡುವಾಗ ಪ್ರಶಂಸಿಸುವ ಹೃದಯವಂತಿಕೆಯನ್ನು ಹೊಂದಿದ್ದ ಅವರು ಪ್ರಜಾಪ್ರಭುತ್ವದ ನಿಜವಾದ ಚೌಕಿದಾರರಾಗಿದ್ದರು. ತಮ್ಮ ಪಕ್ಷ ಮಾಡುವುದು ತಪ್ಪು ಎಂದು ಅನಿಸಿದಾಗ ಹಾಗೆ ಹೇಳುವ ನೈತಿಕ ಧೈರ್ಯದ ರಾಜಕೀಯ ನಾಯಕರಾಗಿ ರಾಜನೀತಿಗೆ ಹೊಸ ಭಾಷ್ಯ ಬರೆದ ಧೀಮಂತ ವ್ಯಕ್ತಿತ್ವ ಅವರದು.
ಸರ್ವೋದಯ ಪ್ರಜ್ಞೆ
ತಮ್ಮ ಸಮಾಜೋ ರಾಜಕೀಯ ಕಾರ್ಯಗಳಲ್ಲಿ ಅವರು ಯಾವುದೇ ಚಿಂತನಾಕ್ರಮದ ಪ್ರಭಾವಕ್ಕೊಳಗಾಗದೆ ತಮ್ಮ ಅದಮ್ಯ ಸೇವಾಭಾವದಿಂದಲೇ ಸರ್ವೋದಯ ಪ್ರಜ್ಞೆಯ ಮೂಲಕ ಹೊಸದನ್ನು ಸಾಧಿಸಿದ್ದು ಗಮನಾರ್ಹವಾಗಿದೆ. ಅವರ ಕಾಲದಲ್ಲಿ ತೀವ್ರವಾದ ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳು ನಡೆದವು. ಆದರೆ ಕಮ್ಯುನಿಸ್ಟರಾಗಲಿ, ಸಮಾಜವಾದಿಗಳಾಗಲಿ, ಅಂಬೇಡ್ಕರ್‌ರಾಗಲಿ ಅವರ ಮೇಲೆ ಪ್ರಭಾವ ಬೀರಿದ್ದು ಕಾಣುವುದಿಲ್ಲ. ಅವರೆಂದೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಲ್ಲ, ಆದರೆ ಗಾಂಧೀಜಿಯವರ ಸತ್ಯನಿಷ್ಠೆ ಮತ್ತು ತ್ಯಾಗಜೀವನ ಅವರ ಮೇಲೆ ಆಳವಾದ ಪ್ರಭಾವ ಬೀರಿತ್ತು. ನೆಹರೂ ಅವರು ಎಡಪಂಥೀಯ ಚಿಂತನೆಗಳ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂಬ ಬೇಸರವಿದ್ದರೂ ಈ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವರು ಎಂಬ ನಂಬಿಕೆ ಅವರಿಗೆ ಇತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂಥ ಜನಪರ ರಾಜರು ಅವರಿಗೆ ಆದರ್ಶರಾಗಿದ್ದರು. ಜನರ ಉತ್ತಮ ಬದುಕಿಗಾಗಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗುವುದು ಅವರ ಬದುಕಿನ ಏಕೈಕ ಧ್ಯೇಯವಾಗಿತ್ತು. ಜೀವನಮೌಲ್ಯಗಳಿಂದ ಜನರ ಬದುಕು ತುಂಬಿರಬೇಕು ಎಂಬುದು ಅವರ ಆಶಯವಾಗಿತ್ತು.
ಮೈಸೂರು ರಾಜಕೀಯದಲ್ಲಿ ಅವರದು ಮೂರನೆಯ ತಲೆಮಾರು. ‘‘ರಾಜಕೀಯದಲ್ಲಿ ಸ್ಥಾನ ಪಡೆಯುವುದು ಉದರ ಪೋಷಣೆಗಲ್ಲ. ಅದು ಶಾಶ್ವತವಾದ ಜೀವನ ಮಾರ್ಗವೂ ಅಲ್ಲ. ಇಂಥ ಅವಕಾಶ ದೊರೆಯುವುದು ಜನಸೇವೆಗೋಸ್ಕರ. ನೈಜವಾದ ಸೇವೆಯನ್ನು ಸಲ್ಲಿಸಿ ಕೃತಾರ್ಥರಾಗಬೇಕೆಂದು ಬಯಸುವವನು ಸ್ವಾರ್ಥ ತ್ಯಾಗ ಮಾಡಲೂ ಸಿದ್ಧನಾಗಿರಬೇಕು. ಅದಿಲ್ಲದೆ ರಾಜಕೀಯ ಸ್ಥಾನಮಾನವನ್ನು ಸ್ವಾರ್ಥ ಸಾಧನೆಗಾಗಿ ದುರುಪಯೋಗ ಮಾಡಿದರೆ ಅದು ನಂಬಿಕೆದ್ರೋಹವಾಗಿ ಹೀನ ಕಾರ್ಯವಾಗುತ್ತದೆ’’ ಎಂಬುದು ಅವರ ದೃಢನಿರ್ಧಾರವಾಗಿತ್ತು. ಕೊನೆಯವರೆಗೂ ಅವರು ಹಾಗೇ ಬದುಕಿದರು. ‘‘ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಪ್ರಜೆಗಳು ಸುಸಂಘಟಿತವಾದ ಜನಾಂಗವಾಗಿರಬೇಕು, ಶಿಸ್ತು ಮತ್ತು ಸತ್ಯಗಳೇ ಪ್ರಜಾಪ್ರಭುತ್ವದ ತಳಹದಿ’’ ಎಂದು ಅವರು ಜನಸಮುದಾಯವನ್ನು ಎಚ್ಚರಿಸುತ್ತಿದ್ದರು.
ಜಗಳೂರಿನ ಮಾನವ ಸಂಬಂಧಗಳು, ಆ ಕಾಲದ ನಮ್ಮ ಗ್ರಾಮೀಣ ಬದುಕಿನ ಸಂಬಂಧಗಳ ಪ್ರತೀಕವಾಗಿವೆ. ಆಗ ಕೂಡ ಜಾತಿಗಳಿದ್ದವು. ಆದರೆ ಜನರು ಸಾಮಾಜಿಕ ಬದುಕಿನಲ್ಲಿ ನೀತಿಗೆ ಬೆಲೆ ಕೊಡುತ್ತಿದ್ದರು. ಅವರ ನೀತಿ ಮಾರ್ಗ ಎಲ್ಲ ಧರ್ಮಗಳನ್ನು ಒಳಗೊಳ್ಳುತ್ತ ಮುಂದೆ ಸಾಗುವಂಥದ್ದಾಗಿತ್ತು. ಅಂದಿನ ಚಿತ್ರದುರ್ಗ ಜಿಲ್ಲೆಯ, ಇಂದಿನ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಇಮಾಂ ಅವರದು ಗೌರವಾರ್ಹ ಮತ್ತು ರಾಜನೀತಿಯ ಪ್ರಜ್ಞೆಯುಳ್ಳ ಮನೆತನವಾಗಿತ್ತು. ಅವರ ತಾತ ಫಕೀರ ಸಾಹೇಬರು ಮತ್ತು ತಂದೆ ಬಡೇಸಾಹೇಬರು ಮೈಸೂರಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಜನಾನುರಾಗಿಯಾಗಿದ್ದರು.
‘ಮೈಸೂರು ಆಗ’ ಎನ್ನುವಲ್ಲಿ ಅವರ ಉತ್ಸಾಹ ಎದ್ದು ಕಂಡರೆ, ‘ಮೈಸೂರು ಈಗ’ ಎನ್ನುವಲ್ಲಿನ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳು ಅವರಲ್ಲಿ ಬೇಸರ ಮೂಡಿಸಿದ ಲಕ್ಷಣಗಳು ಎದ್ದು ಕಾಣುತ್ತಿವೆ.
ಮಾನವ ಸಂಬಂಧಗಳ ಮೊದಲ ಪಾಠ
1897ನೇ ಫೆಬ್ರವರಿ 15ರಂದು ಜಗಳೂರು ಸಮೀಪದ ಮರೇನಹಳ್ಳಿಯಲ್ಲಿ ಬಡೇಸಾಹೇಬರ ಎರಡನೇ ಮಗನಾಗಿ ಇಮಾಂ ಸಾಹೇಬರು ಜನಿಸಿದರು. ಬಾಲ್ಯದಲ್ಲೇ ರಾಜಕೀಯ ಆಸಕ್ತಿ ಹುಟ್ಟುವಂಥ ವಾತಾವರಣ ಮನೆಯಲ್ಲಿತ್ತು. ತಾತ ಫಕೀರ ಸಾಹೇಬರು ಮುನಿಸಿಪಾಲಿಟಿ ಮತ್ತು ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಇಮಾಂ ಸಾಹೇಬರು ಏಳೆಂಟು ವರ್ಷದ ಬಾಲಕರಿದ್ದಾಗ ನಡೆದ ಒಂದು ಘಟನೆ ಅವರ ಬದುಕಿನುದ್ದಕ್ಕೂ ಮಾರ್ಗದರ್ಶಿಯಾಯಿತು.
ಒಂದು ದಿನ ಪಟೇಲ ಸಂಕಪ್ಪನವರು ಅವರ ತಾತನ ಬಳಿ ಬಂದು ಪ್ರಜಾಪ್ರತಿನಿಧಿ ಸದಸ್ಯನಾಗಿ ಮೈಸೂರು ದಸರಾಗೆ ಹೋಗಲು ತಿಳಿಸಿದರು. ‘‘ನಾನು ಒಂದು ಸಲ ಹೋಗಿ ಬಂದಿದ್ದೇನೆ. ಪ್ರಜಾಪ್ರತಿನಿಧಿ ಸದಸ್ಯನಾಗಿ ನೀನೇ ಹೋಗು’’ ಎಂದು ತಾತ ಫಕೀರಸಾಹೇಬರು ಹೇಳಿದರು. ‘‘ನೀವು ಈ ಸಲ ಹೋಗಬೇಕು. ಸಾಹುಕಾರ ತಿಪ್ಪಣ್ಣನವರ ಅಭಿಪ್ರಾಯವೂ ಇದೇ’’ ಎಂದು ಸಂಕಣ್ಣ ಒತ್ತಾಯ ಮಾಡಿದರು. ಸೂಕ್ಷ್ಮ ಮನಸ್ಸಿನ ಬಾಲಕ ಇಮಾಂ ಮೇಲೆ ಈ ಸಂಭಾಷಣೆ ಎಂಥ ಮಾನವ ಸಂಬಂಧಗಳ ಪ್ರಭಾವ ಬೀರಿರಬಹುದು ಎಂದು ಕಲ್ಪಿಸುವುದೇ ಆಪ್ಯಾಯಮಾನವಾದುದು.
ಆಗಿನ ಕಾಲದ ನಮ್ಮ ಗ್ರಾಮೀಣರು ಹೆಚ್ಚು ಗುಣಗ್ರಾಹಿಗಳಾಗಿದ್ದರು. ಆ ಗುಣಗ್ರಾಹಿತ್ವದ ಪ್ರಭಾವ ಇಮಾಂ ಸಾಹೇಬರ ಮೇಲೆ ಕೊನೆಯವರೆಗೂ ಆಳವಾಗಿ ಬೀರಿದ್ದನ್ನು ಕಾಣಬಹುದಾಗಿದೆ. ಆ ಕಾಲದ ಜನರು ತಮ್ಮ ಸಾಮರ್ಥ್ಯವನ್ನು ಮತ್ತು ಇತರರ ಸಾಮರ್ಥ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಯಾರು ಯಾವ ಸ್ಥಾನಕ್ಕೆ ಯೋಗ್ಯರು ಎಂದು ಅವರ ಅಂತಃಸಾಕ್ಷಿಯೇ ನಿರ್ಧರಿಸುತ್ತಿತ್ತು. ನಾನು ತಾನು ಎನ್ನದೆ ಯೋಗ್ಯರು ಯೋಗ್ಯ ಸ್ಥಾನದಲ್ಲಿ ಇರಬೇಕು ಎಂಬುದು ಅವರ ಸಹಜ ಸ್ವಭಾವವಾಗಿತ್ತು. ಅವರ ಸಂಬಂಧಗಳು ಪ್ರೀತಿ ಮತ್ತು ನ್ಯಾಯದ ಮೇಲೆ ನಿಂತಿದ್ದವು. ಅವರು ದುರಾಸೆಯಿಂದ ಏನನ್ನೂ ಬಯಸಿದವರಲ್ಲ. ‘ಯೋಗ್ಯತೆ ಇದ್ದರೆ ಬೇಡವೆಂದರೂ ಬರುತ್ತದೆ’ ಎಂಬುದು ಅವರ ನಂಬಿಕೆಯಾಗಿತ್ತು. ಇಂಥ ಒಂದು ನಂಬಿಕೆಯನ್ನು ಇಟ್ಟುಕೊಂಡು ಯಾವ ಲೆಕ್ಕಾಚಾರವಿಲ್ಲದೆ ನಿರುಮ್ಮಳವಾಗಿ ಬದುಕಿದವರು ನಮ್ಮ ಇಮಾಂ ಸಾಹೇಬರು.
ಜಗಳೂರಿನಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ ಚಿತ್ರದುರ್ಗ, ಬೆಂಗಳೂರುಗಳಲ್ಲಿ ಮುಂದುವರಿಸಿದರು. ನಂತರ ಮದ್ರಾಸ್‌ನಲ್ಲಿ ಕಾನೂನು ಪದವಿ ಪಡೆದರು. 1923ರಲ್ಲಿ ಚಿತ್ರದುರ್ಗದಲ್ಲಿ ಕಾನೂನು ವೃತ್ತಿ ಪ್ರಾರಂಭಿಸಿದರೂ ರಾಜಕೀಯ ಸೆಳೆತ ಹೆಚ್ಚಾಗಿತ್ತು. ಅವರ ಅಣ್ಣ ಕಾಸಿಂ ಸಾಹೇಬರು ಒಂದು ಸಲ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರೂ ರಾಜಕೀಯದಲ್ಲಿ ಮುಂದುವರಿಯದೆ ಕೃಷಿಗೆ ಅಂಟಿಕೊಂಡರು.
ರಾಜಕೀಯ ಅಖಾಡ ಪ್ರವೇಶ
ಇಮಾಂ ಸಾಹೇಬರು ವಕೀಲ ವೃತ್ತಿ ತೊರೆದು 1926ರಲ್ಲಿ ಜಿಲ್ಲಾ ಬೋರ್ಡ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಪ್ರವೇಶಿಸಿದರು. ಅದೇ ವರ್ಷ ವಕೀಲರಾಗಿ ಚಿತ್ರದುರ್ಗಕ್ಕೆ ಬಂದ ಎಸ್. ನಿಜಲಿಂಗಪ್ಪ ಅವರಿಗೆ ತಮ್ಮ ಕೇಸುಗಳನ್ನು ವಹಿಸಿಕೊಟ್ಟರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಚಾಮರಾಜೇಂದ್ರ ಒಡೆಯರು 1881ರಲ್ಲಿ ಸ್ಥಾಪಿಸಿದ ಪ್ರಜಾಪ್ರತಿನಿಧಿಯ ಸದಸ್ಯರಾಗಿ, ಜಗಳೂರಿನ ಪುರಸಭೆಯ ಪ್ರಥಮ ಅಧ್ಯಕ್ಷರಾಗಿ, ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಸಂದರ್ಭದಲ್ಲಿ 250 ಮೈಲಿ ಉದ್ದದ ರಸ್ತೆ, 6 ಸೇತುವೆ, 300 ಕುಡಿಯುವ ನೀರಿನ ಬಾವಿಗಳ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಮೆಚ್ಚುಗೆಯಾಯಿತು. ಮೂರು ವರ್ಷಗಳ ನಂತರ ಪೂರ್ತಿಗೊಂಡ ಸೇತುವೆಗಳ ಉದ್ಘಾಟನೆಗೂ ಅವರೇ ಬಂದರು. ಜಗಳೂರಿನ ಅವರ ಮನೆಯಲ್ಲೇ ಉಳಿದುಕೊಂಡರು. ಅವರ ಕರ್ತೃತ್ವಶಕ್ತಿಯನ್ನು ಅರಿತ ರಾಜರು ಅವರನ್ನು ಮಂತ್ರಿಯಾಗಿ ನೇಮಿಸಿದರು.
ಇಮಾಂ ಸಾಹೇಬರು ವಿದ್ಯಾಮಂತ್ರಿಯಾಗಿ ಅನೇಕ ಮಹತ್ವದ ಕಾರ್ಯಗಳನ್ನು ಮಾಡಿದರು. ನಿರಕ್ಷರಿಗಳಿಗಾಗಿ ವಯಸ್ಕರ ಶಿಕ್ಷಣ ವ್ಯವಸ್ಥೆ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಸುಧಾರಣೆಗಾಗಿ ಪ್ರಯತ್ನಿಸಿದರು. ಅವರು ರೈಲ್ವೆ ಖಾತೆಯ ಮಂತ್ರಿಯೂ ಆಗಿದ್ದರು. ಆಗ ಸ್ವಾತಂತ್ರ್ಯ ಹೋರಾಟ ತೀವ್ರವಾಗಿ ವಿದ್ಯಾರ್ಥಿಗಳು ಶಾಲೆ ಕಾಲೇಜು ಬಿಟ್ಟು ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು. ಅವರನ್ನು ಕಾಲೇಜಿಗೆ ಮರಳಿ ಕಳಿಸುವುದಕ್ಕಾಗಿ ಬಹಳ ಪ್ರಯತ್ನಪಟ್ಟರು. ನಂತರ ಅವರು ಪೊಲೀಸ್ ಖಾತೆಯನ್ನೂ ವಹಿಸಿಕೊಳ್ಳಬೇಕಾಗಿ ಬಂದಿತು. ಆಗ ಬಂಧಿತರಾಗಿದ್ದ ನೂರಾರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಪೆರೋಲ್ ಮೇಲೆ ಬಿಡುವ ಸೌಜನ್ಯ ತೋರಿಸಿದರು. ಹಾಗೆ ಬಿಡುಗಡೆ ಹೊಂದಿದವರಲ್ಲಿ ಚಂಗಲರಾಯ ರೆಡ್ಡಿ, ಎಚ್.ಸಿ. ದಾಸಪ್ಪ, ಕೆಂಗಲ್ ಹನುಮಂತಯ್ಯ ಮುಂತಾದವರು ಇದ್ದರು. ಹೀಗೆ ಇಮಾಂ ಸಾಹೇಬರು ದ್ವೇಷರಹಿತ ರಾಜಕಾರಣ ಮಾಡಿ ಮಾದರಿಯಾದರು.
ಖಾತೆಗಳ ಪುನರ್ ವಿಂಗಡಣೆಯಾದಾಗ ಇಮಾಂ ಸಾಹೇಬರು ವಿದ್ಯುಚ್ಛಕ್ತಿ, ಲೋಕೋಪಯೋಗಿ, ಅಬಕಾರಿ, ನೀರಾವರಿ, ಸಹಕಾರ ಮತ್ತು ರೈಲ್ವೆ ಖಾತೆ ಸಚಿವರಾದರು. ಕೆಲ ಸಮಯದ ನಂತರ ಭದ್ರಾವತಿ ಕಾರ್ಖಾನೆ ಮತ್ತು ಕೈಗಾರಿಕಾ ಖಾತೆಯನ್ನೂ ಅವರಿಗೇ ವಹಿಸಿಕೊಡಲಾಯಿತು. ಅವರ ಕಾಲದಲ್ಲೇ ಭದ್ರಾವತಿ ಜಲಾಶಯ (ಲಕ್ಕವಳ್ಳಿ ಸಾಗರ) ನಿರ್ಮಾಣ ಕಾರ್ಯಕ್ಕೆ ಸಿದ್ಧತೆಗಳಾದವು. ಅವರು ನಿವೃತ್ತರಾಗುವುದಕ್ಕೆ ಮೊದಲೇ ಜೋಗ್ ವಿದ್ಯುಚ್ಛಕ್ತಿ ಕಾಮಗಾರಿಯ ಮುಖ್ಯ ಕೆಲಸಗಳೆಲ್ಲ ಮುಗಿದಿದ್ದವು.
1944ರಲ್ಲಿ ಭಾರೀ ಸಿಡಿಲಿನಿಂದಾಗಿ, ಏಶ್ಯದಲ್ಲೇ ಪ್ರಥಮವಾದ ಶಿವನಸಮುದ್ರ ವಿದ್ಯುತ್ ಕೇಂದ್ರದ ಎಲ್ಲ ಯಂತ್ರಗಳು ಸುಟ್ಟುಹೋದವು. ಯಂತ್ರಗಳ ಕಠಿಣತಮವಾದ ರಿಪೇರಿ ಕಾರ್ಯವನ್ನು ಸ್ಥಳೀಯ ಇಂಜಿನಿಯರ್‌ಗಳೇ ಮಾಡುವಂತೆ ನೋಡಿಕೊಂಡಿದ್ದು ಅವರ ದಕ್ಷತೆಗೆ ಸಾಕ್ಷಿಯಾಗಿದೆ. ಅವರು ರೈಲ್ವೆ ಸಚಿವರಾಗಿದ್ದಾಗ ದಾವಣಗೆರೆ ಮತ್ತು ಚಿಕ್ಕಜಾಜೂರು ರೈಲು ನಿಲ್ದಾಣಗಳ ನಿರ್ಮಾಣವಾಯಿತು.
ಮೈಸೂರು ರಾಜ್ಯದ 23ನೇ ದಿವಾನ ನ್ಯಾಪತಿ ಮಾಧವರಾವ್ (1941-45) ಅವರ ಕಾಲದಲ್ಲಿ ಹಂಗಾಮಿ ದಿವಾನರಾಗಿಯೂ ಕಾರ್ಯ ನಿರ್ವಹಿಸಿದ ಶ್ರೇಯಸ್ಸು ಇಮಾಂ ಸಾಹೇಬರಿಗೆ ಸಲ್ಲುತ್ತದೆ.
ಮರಳಿ ಹಳ್ಳಿಗೆ
ಇಮಾಂ ಸಾಹೇಬರು ಸಚಿವ ಸ್ಥಾನದಿಂದ ನಿವೃತ್ತರಾದಮೇಲೆ ಬೆಂಗಳೂರಿನಲ್ಲೇ ಇದ್ದು ಯಾವುದಾದರೂ ಸರಕಾರಿ ಪದವಿಗೆ ಪ್ರಯತ್ನಿಸಬೇಕೆಂದು ಅವರ ಮಿತ್ರರು ಸಲಹೆ ನೀಡಿದರು. ಆದರೆ ಅವರು ಹಾಗೆ ಮಾಡಲಿಲ್ಲ. ದೇಶ ಸೇವೆಗೆ ಸಚಿವ ಸ್ಥಾನವೊಂದೇ ಮಾರ್ಗವಲ್ಲ ಎಂದು ತಿಳಿಸಿ, ನಿವೃತ್ತರಾದ ಕೂಡಲೇ ಜಗಳೂರಿಗೆ ಹಿಂದಿರುಗಿ ಬಂದು ರೈತರ ಮಧ್ಯೆ ಸೇರಿ ವ್ಯವಸಾಯ ವೃತ್ತಿಯನ್ನು ಕೈಗೊಂಡು ಹಳ್ಳಿಯವರ ಹಾಗೆ ತಿರುಗಾಡಲು ಪ್ರಾರಂಭಿಸಿದರು.
ಮೈಸೂರು ಅರಸು ಮನೆತನದ ಅಭಿವೃದ್ಧಿಯ ಸಾಧನೆ ಅವರ ಮನಸ್ಸನ್ನು ಆವರಿಸಿತ್ತು. ಅರಸರ ಪ್ರಜಾ ವಾತ್ಸಲ್ಯ ಅವರ ಮನಸ್ಸನ್ನು ಸೂರೆಗೊಂಡಿತು. ಹಿತಮಿತ ಖರ್ಚಿನಲ್ಲಿ ಜನಹಿತ ಕಾರ್ಯಗಳನ್ನು ಯಶಸ್ವಿಗೊಳಿಸುತ್ತ ಭಾರತದಲ್ಲೇ ಮಾದರಿ ಸಂಸ್ಥಾನವಾಗಿ ಮೈಸೂರು ಕಂಗೊಳಿಸುತ್ತಿದ್ದುದರ ಬಗ್ಗೆ ಅವರಿಗೆ ಬಹಳ ಅಭಿಮಾನವಿತ್ತು. ಅಂಥ ಸುಂದರ ಮತ್ತು ಸಮೃದ್ಧ ಮೈಸೂರು ಸಂಸ್ಥಾನಕ್ಕಾಗಿ ತಾವು ಸಲ್ಲಿಸಿದ ಅಳಿಲು ಸೇವೆಯ ತೃಪ್ತಿ ಅವರ ಬದುಕನ್ನು ಚೇತೋಹಾರಿಯಾಗಿಸಿತ್ತು.
ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಗುತ್ತಿಗೆದಾರರು ಇರಲಿಲ್ಲ. ಎಲ್ಲವನ್ನೂ ಸಂಸ್ಥಾನದ ಇಂಜಿನಿಯರ್‌ಗಳು ಮುಂತಾದ ಸಿಬ್ಬಂದಿಯೇ ನಿರ್ವಹಿಸುತ್ತಿದ್ದರು. ಅವರೆಲ್ಲ ಬ್ರಿಟಿಷ್ ಸರಕಾರದ ಮತ್ತು ಇತರ ಸಂಸ್ಥಾನಗಳ ಸಿಬ್ಬಂದಿಗಿಂತ ಕಡಿಮೆ ಸಂಬಳದಲ್ಲಿ ಮಹತ್ವದ್ದನ್ನು ಸಾಧಿಸಿ ದೇಶದಲ್ಲೇ ಮಾದರಿ ಮೈಸೂರು ಆಗುವಂತೆ ಮಾಡಿದರು. ಇಮಾಂ ಸಾಹೇಬರು ತಮ್ಮ ಕರ್ತವ್ಯವನ್ನು ಪದ್ಮಪತ್ರಂ ಇವಾಂಬಸಾ (ನೀರ ಮೇಲಿನ ಕಮಲದ ಎಲೆ) ಹಾಗೆ ನಿಭಾಯಿಸಿದರು. ಬಸವಣ್ಣನವರು ಹೇಳಿದ ಹಾಗೆ, ಮಾಡುವ ಮಾಟದಲ್ಲಿ ತಾವಿಲ್ಲದಂತೆ ಇದ್ದರು. ಈ ಮನಸ್ಥಿತಿಯೇ ಅವರ ನಿರಹಂ ವ್ಯಕ್ತಿತ್ವ ರೂಪಿಸಿತು.