ಕಾಶ್ಮೀರ | 2019 ರ ಪುಲ್ವಾಮಾಗೆ ಸರಿಯಾದ ಉತ್ತರ ಹುಡುಕಿದ್ದರೆ, 2025 ರ ಪೆಹಲ್ಗಾಮ್ ನಡೆಯುತ್ತಿರಲಿಲ್ಲ!

Photo credit: PTI
ಪೆಹಲ್ಗಾಮ್ ಗೆ ಶೋಕಿಸುತ್ತಿರುವ ದೇಶ, ಮತ್ತೊಂದು ಪೆಹಲ್ಗಾಮ್ ಆಗುವುದನ್ನು ತಡೆಯಬೇಕೆಂದರೆ ಈ ಕೆಲವು ಕಟು ಪ್ರಶ್ನೆಗಳನ್ನು ಕೇಳಬೇಕು ಮತ್ತು ಕೇಳಿಕೊಳ್ಳಬೇಕು.
1. ಅಮಾಯಕರ ಹತ್ಯೆ ಯಾರೇ ಮಾಡಿದ್ದರೂ, ಯಾಕೆ ಮಾಡಿದ್ದರೂ ಖಂಡನಾರ್ಹ. ಹತ್ಯೆಗೀಡಾದವರ ಕುಟುಂಬಗಳ ದುಃಖ ಮತ್ತು ಅಸಹಾಯಕತೆ ಮನುಷ್ಯರಾದವರೆಲ್ಲರದ್ದು ಆಗಬೇಕು.
2. ಕೊಲೆಯಾದದ್ದು ಅಮಾಯಕ ಮನುಷ್ಯರು, ಕೊಲೆ ಮಾಡಿದ್ದು ಉಗ್ರರು.
ಈ ಹತ್ಯೆ ಹಿಂದೂಗಳು ಎಂಬ ಕಾರಣಕ್ಕೆ ಆಗಿರುವುದಲ್ಲ ಎಂಬುದನ್ನು ಉಗ್ರಗಾಮಿಯಲ್ಲದ ಹಾಗೂ ವೃತ್ತಿಧರ್ಮ ಪಾಲಿಸುತ್ತಿರುವ ಬಹಳಷ್ಟು ಸ್ವಸ್ಥ ಮಾಧ್ಯಮಗಳು ವರದಿ ಮಾಡಿವೆ. ಸಂತ್ರಸ್ತರ ಜೊತೆಗೆ ಸ್ಥಳೀಯ ಮುಸ್ಲಿಮರು ಕಣ್ಣೀರು ಮಿಡಿದಿದ್ದಾರೆ ಮತ್ತು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
3. ಹಾಗೆ ನೋಡಿದರೆ ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಅತಿ ಹೆಚ್ಚು ಬಲಿಯಾಗಿರುವರು ಮುಸ್ಲಿಮರೇ . ಹಿಂದೂಗಳೂ ಬಲಿಯಾಗಿಲ್ಲ ಅಂತಲ್ಲ. ಆದರೆ ಮುಸ್ಲಿಮರಿಗೆ ಹೋಲಿಸಿದರೆ ಉಗ್ರರಿಗೆ ಬಲಿಯಾದ ಹಿಂದೂ ನಾಗರಿಕರ ಸಂಖ್ಯೆ ಕಡಿಮೆ. ಹೀಗಾಗಿ ಈ ಹತ್ಯಾಕಾಂಡದ ಹಿಂದೆ ಇರುವುದು ಧರ್ಮಕಾರಣವಲ್ಲ. ಭೂಪಟದ ರಾಜಕಾರಣ.
ಹೀಗಾಗಿ ಈ ಪ್ರಕರಣವನ್ನು ಧರ್ಮಾಧಾರಿತ ಎಂದು ಬಣ್ಣಿಸಿ ದ್ವೇಷ ರಾಜಕಾರಣದ ಮತ್ತೊಂದು ಅಧ್ಯಾಯ ಪ್ರಾರಂಭಿಸಲು ಹಿಂದುತ್ವವಾದಿಗಳು ಹೇಗೂ ಸಿದ್ಧತೆ ನಡೆಸಿದ್ದಾರೆ.
4.ವಾಸ್ತವದಲ್ಲಿ ಈ ದುರಂತದ ಹಿಂದೆ ಪಾಕಿಸ್ತಾನಿ ಪ್ರಭುತ್ವದ ಯೋಜಿತ ಸಹಕಾರವೂ ಇರಬಹುದು ಮತ್ತು ಭಾರತ ಸರ್ಕಾರದ ಉದ್ದೇಶ ಪೂರ್ವಕ ನಿರ್ಲಕ್ಷ್ಯವೂ ಇರಬಹುದು ಎಂಬುದನ್ನು ಮರೆಯಬಾರದು.
5.ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಿಂದೆಂದಿಗಿಂತಲೂ ಉಗ್ರರ ದಾಳಿ ಹೆಚ್ಚಿದೆ. ಹತ್ತಾರು ಸೈನಿಕರು ಹತರಾಗಿದ್ದಾರೆ. ಆದರೂ ಅದೆಲ್ಲವನ್ನು ನಿರ್ಲಕ್ಷಿಸಿರುವ ಕೇಂದ್ರ ಸರ್ಕಾರ ಮೋದಿ ಆಡಳಿತ ಬಂದಮೇಲೆ ಕಾಶ್ಮೀರದಲ್ಲಿ ಶಾಂತಿ ಹೆಚ್ಚಿದೆ , ಆರ್ಟಿಕಲ್ 370 ರದ್ದು ಮಾಡಿದ್ದರಿಂದ ಪ್ರವಾಸೋದ್ಯಮ ಹೆಚ್ಚಿದೆ ಎಂಬ ಸುಳ್ಳು ಹೆಗ್ಗಳಿಕೆಯನ್ನು ಪ್ರಚಾರ ಮಾಡಲು ಭದ್ರತೆಯ ಗಮನ ತಗ್ಗಿಸಿದೆ. ಇದನ್ನು ಪೆಹಲ್ಗಾಮ್ ಪ್ರಕರಣ ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ಹೀಗಾಗಿ ಈ ದುರಂತಕ್ಕೆ ಕೊಂದ ಉಗ್ರರೆಷ್ಟು ಕಾರಣರೋ, ಸ್ವಾರ್ಥ ರಾಜಕೀಯ ಉದ್ದೇಶಕ್ಕೆ ಭದ್ರತಾ ನಿರ್ಲಕ್ಷ ತೋರಿದ ಮೋದಿ ಸರ್ಕಾರವೂ ಅಷ್ಟೇ ಕಾರಣವಾಗಿದೆ.
6.ಇದಲ್ಲದೆ ನೋಟು ನಿಷೇಧ ಮಾಡಿದ್ದರಿಂದ ಕಾಶ್ಮೀರದಲ್ಲಿ ಉಗ್ರರ ಉಪಟಳ ಕಡಿಮೆಯಾಗಿದೆ, ಆರ್ಟಿಕಲ್ 370 ರದ್ದಾದ್ದರಿಂದ ಉಗ್ರರು ಹಿಮ್ಮೆಟ್ಟಿದ್ದಾರೆ, ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕಿತ್ತು ಹಾಕಿದ್ದು ಕೂಡ ಉಗ್ರರನ್ನು ಹತ್ತಿಕ್ಕುವುದಕ್ಕೆ ಎಂಬ ಮೋದಿ ಸರ್ಕಾರದ ಪ್ರಚಾರಗಳು ಎಷ್ಟು ಹುಸಿಯಾದವು ಎಂಬುದನ್ನು ಕೂಡ ಪಹಲ್ಗಾಮ್ ಹತ್ಯೆ ಮತ್ತೊಮೆ ಧೃಢಪಡಿಸಿದೆ.
7.ಭಾರತದಾದ್ಯಂತ ಕಾಶ್ಮೀರ ಶಾಂತಿಯುತವಾಗಿದೆ ಮತ್ತು ಉಗ್ರ ಮುಕ್ತವಾಗಿದೆ ಎಂಬ ಹುಸಿ ಪ್ರಚಾರಗಳು ಭದ್ರತೆಯ ಮತ್ತು ರಕ್ಷಣೆಯಿಲ್ಲದ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಿ ಉಗ್ರರಿಗೆ ಸುಲಭ ತುತ್ತು ಮಾಡಿತು.
ಹೀಗಾಗಿ ಕೊಂದ ಉಗ್ರರನ್ನು ಖಂಡತುಂಡವಾಗಿ ಖಂಡಿಸುತ್ತಲೇ , ಈ ಹತ್ಯಾಕಾಂಡವನ್ನು ತಮ್ಮ ರಾಜಕೀಯ ಉದ್ದೇಶಗಳಿಗೆ ಸಾಧ್ಯವಾಗುವಂತೆ ಮಾಡಿಬಿಟ್ಟ ಮೋದಿ ಸರ್ಕಾರದ ಭದ್ರತಾ ವೈಫಲ್ಯವನ್ನು ಕೂಡ ಮನುಷ್ಯ ಮಾತ್ರರು ಮತ್ತು ನಿಜವಾದ ದೇಶಭಕ್ತರು ಖಂಡಿಸಬೇಕು.
8. 2019 ರ ಚುನಾವಣೆಗೆ ಸ್ವಲ್ಪ ಮುನ್ನ ಪುಲ್ವಾಮಾದಲ್ಲಿ ಉಗ್ರರು 40 ಯೋಧರನ್ನು ಕೊಂದು ಹಾಕಿದಾಗ ಹೇಗೆ ಪ್ರಕರಣವನ್ನು ಮೋದಿ ಸರ್ಕಾರ ಯೋಜಿತವಾಗಿ ಬಳಸಿಕೊಂಡು ಸುಳ್ಳು ಕಥನವನ್ನು ಹೆಣೆಯಿತು ಎಂಬುದನ್ನು ಆಗ ಬಿಜೆಪಿಯೇ ನಿಯುಕ್ತಿ ಮಾಡಿದ್ದ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದು ನೆನಪಿನಲ್ಲಿಟ್ಟುಕೊಳ್ಳೋಣ
9.ಹಾಗೆಯೇ ಪುಲ್ವಾಮಾ ಆಸುಪಾಸಿನ ಭದ್ರತೆಯ ಹೊಣೆ ಹೊತ್ತಿದ್ದ Dy SP ದವಿಂದರ್ ಸಿಂಗ್ ಎಂಬ ದೆಹಲಿ ಸರ್ಕಾರದ ವಿಶೇಷ ಆಪ್ತ ಅಧಿಕಾರಿಯು, ಇಬ್ಬರು ಉಗ್ರಗಾಮಿಗಳನ್ನು ತನ್ನ ಕಾರಿನಲ್ಲಿ ಕೂಡಿಸಿಕೊಂಡು ಗಡಿ ದಾಟಿಸುತ್ತಿದ್ದಾಗ ಸೆರೆ ಸಿಕ್ಕಿದ್ದನ್ನು, ನಂತರ ದೆಹಲಿಯು ಮಧ್ಯಪ್ರವೇಶ ಮಾಡಿದ್ದನ್ನು, ಆನಂತರ ದವಿಂದರ್ ಸಿಂಗ್ ಮತ್ತು ಆ ಇಬ್ಬರು ಉಗ್ರರ ಬಗ್ಗೆ ಮೋದಿ ಸರ್ಕಾರ ಗಾಢ ಮೌನ ಪಾಲಿಸುತ್ತ ಬಂದಿರುವುದನ್ನು ಮರೆಯದಿರೋಣ.
10 . ಅದೇ ಫುಲ್ವಾಮ ಪ್ರಕರಣದಲ್ಲಿ ಕಾಶ್ಮೀರದಲ್ಲಿ ಬಿಗಿ ಭದ್ರತೆಯ ನಡುವೆಯೂ 300 ಕೆಜಿ RDX ಪುಲ್ವಾಮಾಗೆ ಹೇಗೆ ಬಂತು, 18 ಬಾರಿ ಉಗ್ರರ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ಯೋಧರ ಕ್ಯಾರಾವಾನ್ ಜಮ್ಮುವಿಂದ ಅಂದು ಏಕೆ ಕಾಶ್ಮೀರಕ್ಕೆ 40 ಟ್ರಕ್ಕುಗಳಲ್ಲಿ ಪ್ರಯಾಣ ಮಾಡಿತು.. ಇನ್ನಿತ್ಯಾದಿ ಯಾವುದೇ ಪ್ರಶ್ನೆಗಳಿಗೆ ಮೋದಿ ಸರ್ಕಾರ ಉತ್ತರ ಕೊಟ್ಟಿಲ್ಲ ಎಂಬುದನ್ನು ಮರೆಯದಿರೋಣ ..
11.ಹಾಗೆಯೇ 2006 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಲವಾರು ಸ್ಥಳೀಯ ಮುಸ್ಲಿಮರನ್ನು ಬಂಧಿಸಲಾಗಿತ್ತು. ಆ ನಂತರ ಅಭಿನವ್ ಭಾರತ್ ಸಂಸ್ಥೆ ಮತ್ತು ಅದರ ಮುಖ್ಯ ಸದಸ್ಯೆ ಪ್ರಗ್ಯಾ ಸಿಂಗ್ ಈ ಪ್ರಕರಣದ ಕಾರಣಕರ್ತರು ಎಂದು ನಿಷ್ಠಾವಂತ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸಾಬೀತು ಪಡಿಸಿದ್ದರು.
ಆದರೆ ಅದೇ ಸಮಯದಲ್ಲಿ , ಪಾಕ್ ಉಗ್ರರು ಮುಂಬೈ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕರ್ಕರೆಯವರೂ ಕೂಡ ನಿಗೂಢವಾಗಿ ಬಲಿಯಾದರು. ಆನಂತರ ಬಿಜೆಪಿ ಪಕ್ಷ ಪ್ರಜ್ಞಾ ಸಿಂಗ್ ಗೆ ಟಿಕೆಟ್ ಕೊಟ್ಟು ಸಂಸದರನ್ನಾಗಿ ಮಾಡಿತು. ಮೋದಿ ಸರ್ಕಾರ ಬಂದ ಮೇಲೆ ಮತ್ತೊಮ್ಮೆ ಈ ಸಂಘಿ ಉಗ್ರರ ಮೇಲಿದ್ದ ಪ್ರಕರಣಗಳನ್ನು ದುರ್ಬಲಗೊಳಿಸಲು ಪ್ರಾರಂಭಿಸಲಾಗಿತ್ತು.
ಆದರೆ ಇದೀಗ ಮೋದಿ ಸರ್ಕಾರದ ಅಡಿಯಲ್ಲಿರುವ NIA ತನಿಖಾ ಸಂಸ್ಥೆಯೇ ಮಾಲೆಗಾಂವ್ ಪ್ರಕರಣದಲ್ಲಿ ಪ್ರಗ್ಯಾ ದೋಷಿ ಎಂದೂ ಅತ್ಯಂತ ಗರಿಷ್ಟ ಶಿಕ್ಷೆಯನ್ನು ಕೊಡಬೇಕು ಎಂದು ಶಿಫಾರಸ್ಸು ಮಾಡಿದೆ.
ಆದ್ದರಿಂದ ಈ ಮೋದಿ ಕಾಲದಲ್ಲಿ ನಡೆಯುವ ಯಾವುದನ್ನೂ ಕೂಡ ಕಂಡಿದ್ದಷ್ಟನ್ನು ಮಾತ್ರ ನೋಡಿ ತೀರ್ಮಾನಕ್ಕೆ ಬರಲಾಗುವುದಿಲ್ಲ. ಎಂಬುದನ್ನೂ ಕೂಡ ಮರೆಯದಿರೋಣ.
ತಾತ್ಪರ್ಯವಿಷ್ಟೇ :
ಹತ್ಯೆಯಾದ ಅಮಾಯಕರ ಬಗ್ಗೆ ನೈಜ ಸಂತಾಪವನ್ನು ವ್ಯಕ್ತ ಪಡಿಸುತ್ತಲೇ ಇದು ಮರುಕಳಿಸಬಾರದೆಂದರೆ ನಿಜವಾದ ನಾಗರಿಕರು ಮತ್ತು ದೇಶಭಕ್ತರು ಮೋದಿ ಸರ್ಕಾರಕ್ಕೆ ಈ ಮೇಲಿನ ಪ್ರಶ್ನೆಗಳನ್ನು ಕೇಳಲೇಬೇಕು.
ಸಂಘಿಗಳು ಮತ್ತು ಮೋದಿ ಸರ್ಕಾರ ಪೆಹಲ್ಗಾಮ್ ಪ್ರಕರಣದ ಬಗ್ಗೆ ದೇಶ ವ್ಯಕ್ತಪಡಿಸುತ್ತಿರುವ ಸಹಜ ವ್ಯಥೆ, ಕಳವಳ ಮತ್ತು ಆಕ್ರೋಶವನ್ನು ಧರ್ಮಾಧಾರಿತ ಆಕ್ರೋಶ ಮತ್ತು ಕುರುಡು ಉನ್ಮಾದವನ್ನಾಗಿ ಪರಿವರ್ತಿಸಲು ಮತ್ತು ಆ ಮೂಲಕ ನಿಜವಾದ ಪ್ರಶ್ನೆ ಮತ್ತು ಸರಿಯಾದ ಉತ್ತರ ದೊರೆಯದಂತೆ ಮಾಡಲು ಪ್ರಯತ್ನಿಸುತ್ತಿದೆ .
ಆದರೆ ಪುಲ್ವಾಮಾಗೆ ಸರಿಯಾದ ಉತ್ತರ ಸಿಕ್ಕಿದ್ದರೆ ಪೆಹಲ್ಗಾಮ್ ಆಗುತ್ತಿರಲಿಲ್ಲ. ನೋಟು ನಿಷೇಧ , 370 ರದ್ದುಗಳು ತಪ್ಪು ಉತ್ತರ ಎಂದು ದೇಶ ಹೇಳಿದ್ದರೇ ಕಾಶ್ಮೀರ ಪ್ರಶ್ನೆಯಾಗಿಯೇ ಉಳಿಯುತ್ತಿರಲಿಲ್ಲ. ಆದ್ದರಿಂದ ಈಗಲಾದರೂ ನನ್ನ ದೇಶ ಅಮಾಯಕರ, ಅಸಹಾಯಕರ ಹತ್ಯೆಗಳ ಬಗ್ಗೆ ಮನುಷ್ಯ ಸಹಜ ಸಂತಾಪವನ್ನು ತೋರುತ್ತಲೇ, ಮೋದಿ ಸರ್ಕಾರಕ್ಕೆ ಕಾಶ್ಮೀರದ ಬಗ್ಗೆ ಸರಿಯಾದ ಪ್ರಶ್ನೆಗಳನ್ನು ಕೇಳುವಂತಾಗಲಿ. ಆ ಮೂಲಕ ಕಾಶ್ಮೀರ ಮೊದಲು ಕಾಶ್ಮೀರಿಗಳಿಗೆ ನಿಜವಾದ ಸ್ವರ್ಗವಾಗಲಿ. ಭಾರತೀಯ ಪ್ರವಾಸಿಗಳು ಶಾಂತಿಯಿಂದ ಭೀತಿಯಿಲ್ಲದೆ ಆಯಾ ಸ್ವರ್ಗದಲ್ಲಿ ನಾಲ್ಕು ದಿನ ಕಳೆದು ಬರುವಂತಾಗಲಿ. ಪುಲ್ವಾಮಾ, ಪೇಹಾಲ್ಗಾಂಗಳು ಇನ್ನೆಂದೂ ಸಂಭವಿಸದಂತ ರಾಜಕೀಯ, ಸಾಮಾಜಿಕ, ಸರ್ವ ಸಮ್ಮತ ಪರಿಹಾರ ಕಾಶ್ಮೀರಿಗಳಿಗೆ ದೊರೆಯಲಿ.
-ಶಿವಸುಂದರ್