ಜೆಡಿಎಸ್ ಭವಿಷ್ಯ ಅಂಧಕಾರದತ್ತ, ಕಾರ್ಯಕರ್ತರು ಪರ್ಯಾಯ ಆಯ್ಕೆಯತ್ತ?

Update: 2025-02-02 10:52 IST
ಜೆಡಿಎಸ್ ಭವಿಷ್ಯ ಅಂಧಕಾರದತ್ತ, ಕಾರ್ಯಕರ್ತರು ಪರ್ಯಾಯ ಆಯ್ಕೆಯತ್ತ?
  • whatsapp icon

ಎಚ್.ಡಿ. ರೇವಣ್ಣ ಕುಟುಂಬದ ಅಧಃಪತನ, ನಿಖಿಲ್ ಕುಮಾರಸ್ವಾಮಿ ಸೋಲು ಮತ್ತು ಕಾರ್ಯಕರ್ತರಿಗೂ ಸಿಗದೆ ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಳ್ಳದ ಅವರ ರಾಜಕಾರಣದ ದ್ವಂದ್ವ ನಿಲುವು ಮತ್ತು ಬಿಗುಮಾನ, ಕುಮಾರಸ್ವಾಮಿಯ ಚಂಚಲತೆ ದೇವೇಗೌಡರ ಕೊನೆಗಾಲದಲ್ಲಿ ಅವರೇ ಕಟ್ಟಿ ಬೆಳೆಸಿದ ಪಕ್ಷದ ಅಂತ್ಯವನ್ನು ನೋಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಮಾನ್ಯ ಕಾರ್ಯಕರ್ತರಿಗೆ ಸಿಗುತ್ತಿಲ್ಲ ಎಂಬುದು ಬೇರೆಡೆಗಿರಲಿ ಶಾಸಕರು, ಜಿಲ್ಲಾ ನಾಯಕರು ಮತ್ತು ಮುಖಂಡರುಗಳಿಗೂ ಸಿಗುತ್ತಿಲ್ಲ ಎಂಬ ಕೂಗು ಪಕ್ಷದೊಳಗೆ ಭುಗಿಲೆದ್ದಿದೆ. ಆಗೊಮ್ಮೆ-ಈಗೊಮ್ಮೆ ರಾಜ್ಯ ಸರಕಾರದ ವಿರುದ್ಧ, ವಿರೋಧಿಗಳ ವಿರುದ್ಧ ಗುಟುರು ಹಾಕುವುದನ್ನು ಬಿಟ್ಟರೆ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುತ್ತಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾದ ಮೇಲಂತೂ ರಾಜ್ಯದಲ್ಲಿ ಪಕ್ಷಕ್ಕೂ ದೂರ, ಕಾರ್ಯಕರ್ತರಿಗೂ ದೂರ, ಸ್ಥಳೀಯ ನಾಯಕರಿಂದಲೂ ದೂರ. ಹೋಗಲಿ ಮತ ಹಾಕಿ ಚುನಾಯಿಸಿದ ಮಂಡ್ಯ ಮತದಾರರು ಮತ್ತು ಸ್ಥಳೀಯ ಕಾರ್ಯಕರ್ತರು, ಮುಖಂಡರಿಗಾದರೂ ಸಿಗುತ್ತಾರೆಯೇ ಅಂದರೆ ಇಲ್ಲೂ ದೂರ. ಇನ್ನು ಇವರ ಪುತ್ರ ನಿಖಿಲ್‌ರಾದರೂ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆಯೇ ಎಂದರೆ ಅದೂ ಇಲ್ಲ. ಪಕ್ಷದ ಭವಿಷ್ಯದ ನಾಯಕ ಎಂದು ಎಷ್ಟೇ ಪ್ರಚಾರ ಪಡೆದರೂ ನಿಖಿಲ್ ಕೂಡ ಮುಖಂಡರು, ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ. ಪ್ರತೀ ಚುನಾವಣೆಗಳಲ್ಲೂ ಒಂದೊಂದು ಕ್ಷೇತ್ರಕ್ಕೆ ಪಲಾಯನ ಮಾಡುವ ನಿಖಿಲ್ ಪಕ್ಷಕ್ಕೂ, ಕಾರ್ಯಕರ್ತರಿಗೂ ನಾಟ್ ರೀಚಬಲ್. ಅಪ್ಪನ ಅನುಪಸ್ಥಿತಿ ನಿರ್ವಹಿಸುವ ಗೊಡವೆಗೆ ಹೋಗದೆ ಚುನಾವಣೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ನಡೆ ಜೆಡಿಎಸ್ ಪಕ್ಷದ ಭವಿಷ್ಯವನ್ನೇ ಅಂಧಕಾರಕ್ಕೆ ದೂಡುತ್ತಿದೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಾಮ್ರಾಜ್ಯ ದಿನೇ ದಿನೇ ಅಧಃಪತನದ ಹಾದಿ ಹಿಡಿಯುತ್ತಿದೆ. ಹರದನಹಳ್ಳಿಯಿಂದ ದಿಲ್ಲಿಯವರೆಗೂ ತಮ್ಮ ಚಾಣಾಕ್ಷತನ, ಹೋರಾಟ, ತಂತ್ರಗಾರಿಕೆಗಳಿಂದಲೇ ಬಹುದೊಡ್ಡ ಸಾಮ್ರಾಜ್ಯ ನಿರ್ಮಿಸಿದ್ದವರು ಎಚ್.ಡಿ. ದೇವೇಗೌಡ. ಯಾರು ಒಪ್ಪಲಿ ಬಿಡಲಿ ಕರ್ನಾಟಕದ ಇತಿಹಾಸದಲ್ಲಿ ದೇವೇಗೌಡರ ಹೆಸರು ಯಾವತ್ತಿಗೂ ಅಳಿಯುವಂತದ್ದಲ್ಲ. ಅವರ ರಾಜಕೀಯ ಶೈಲಿಯನ್ನು ಯಾರು ಎಷ್ಟೇ ಕಟುವಾಗಿ ನಿಂದಿಸಿದರೂ ಗೌಡರ ರಾಜಕಾರಣದ ಪಟ್ಟುಗಳು ಇತರ ರಾಜಕಾರಣಿಗಳನ್ನು ಮೀರಿಸುವಂತಹದ್ದು. ರಾಜಕೀಯ ಕಡು ವಿರೋಧಿಗಳು ಗೌಡರನ್ನು ಎಷ್ಟೇ ಹೀಯಾಳಿಸಿದರೂ ಅವರು ತಲುಪಿದ್ದ ಸ್ಥಾನದ ಬಳಿ ಅವರ್ಯಾರಿಗೂ ಸುಳಿಯಲು ಸುಲಭಸಾಧ್ಯವಿಲ್ಲವೆಂಬುದು ವಾಸ್ತವ ಸತ್ಯ. ಅಷ್ಟು ಎದೆಗಾರಿಕೆಯ ದೇವೇಗೌಡರು ಕಟ್ಟಿದ್ದ ಭದ್ರವಾದ ಕೋಟೆಯ ಕಲ್ಲು ಕಂಬಗಳು ಅದ್ಯಾಕೋ ಕಾಲದ ಹೊಡೆತಕ್ಕೆ ಸಿಲುಕಿ ಅದೇ ನಾಡಿನ ಜನತೆಗೆ ಅರೆಬೆಂದ ಇಟ್ಟಿಗೆಗಳ ಪೇಲವ ಗೋಡೆಗಳಂತೆ ಭಾಸವಾಗತೊಡಗಿವೆ. ಎಚ್.ಡಿ. ಕುಮಾರಸ್ವಾಮಿ ದ್ವಂದ್ವ ನಿಲುವುಗಳು, ದುಡುಕಿನ ಮಾತುಗಳು ಗೌಡರ ಸಾಮ್ರಾಜ್ಯಕ್ಕೆ ಪದೇ-ಪದೇ ಕಲ್ಲೇಟಿನ ಪೆಟ್ಟು ನೀಡುತ್ತಿದ್ದವಷ್ಟೇ. ಆದರೆ ಭವಿಷ್ಯದಲ್ಲಿ ಗೌಡರ ಸಾಮ್ರಾಜ್ಯಕ್ಕೆ ವೀರ ಸೇನಾನಿಗಳಾಗಿ ಸಾಮ್ರಾಜ್ಯ ವಿಸ್ತರಣೆಗೆ ಬಾಹುಬಲ ಒದಗಿಸುತ್ತಾರೆ ಎಂದುಕೊಂಡಿದ್ದ ರೇವಣ್ಣ ಪುತ್ರ ಪ್ರಜ್ವಲ್, ಕುಮಾರಸ್ವಾಮಿ ಪುತ್ರ ನಿಖಿಲ್ ಇದೀಗ ಗೌಡರ ಸಾಮ್ರಾಜ್ಯದ ಅಧಃಪತನಕ್ಕೆ ಮುನ್ನುಡಿ ಬರೆಯುತ್ತಿದ್ದಾರೆಯೇ ಎಂಬ ಚರ್ಚೆಯ ಹುಟ್ಟಿಗೆ ಕಾರಣವಾಗಿದೆ.

ಪ್ರಜ್ವಲ್ ಶಾಶ್ವತ ಕಪ್ಪು ಚುಕ್ಕೆ

ತನ್ನ ರಾಜಕೀಯ ಅಂತ್ಯ ಕಾಲದಲ್ಲಿ ಬೆಟ್ಟದಷ್ಟು ಆಸೆ, ಕನಸು, ಕಲ್ಪನೆಗಳೊಂದಿಗೆ ತನ್ನ ಸ್ವಕ್ಷೇತ್ರ ಹಾಸನವನ್ನೇ ದೇವೇಗೌಡರು ತಮ್ಮ ಪ್ರೀತಿಯ ಮುದ್ದಿನ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಧಾರೆ ಎರೆದಿದ್ದರು. ಭದ್ರಕೋಟೆಯಲ್ಲಿ ವಯಸ್ಸಾದ ತಾತನಿಗೆ ಅವಕಾಶ ಬಿಟ್ಟುಕೊಟ್ಟು, ಬೇರೊಂದು ಕ್ಷೇತ್ರದಲ್ಲಿ ಹೋರಾಡಿ ಗೆಲ್ಲುವ ಛಲವಿಲ್ಲದ ಪ್ರಜ್ವಲ್ ಮೊದಲ ಹೊಡೆತಕ್ಕೆ ಗೌಡರನ್ನು ಹಾಸನದಿಂದ ಹೊರಗಟ್ಟಿ ತುಮಕೂರಿನ ಖೆಡ್ಡಾಕ್ಕೆ ಅವರನ್ನು ಬಲಿಕೊಟ್ಟು ತನ್ನ ತಾತನಿಗೆ ಮೊದಲ ಮುಖಭಂಗ ಅನುಭವಿಸುವಂತೆ ಮಾಡಿದ್ದ. ಸೋಲು ಗೌಡರಿಗೆ ಅವರ ಕುಟುಂಬಸ್ಥರಿಗೆ ಹೊಸದೇನೂ ಅಲ್ಲವಲ್ಲ, ಹಾಗಾಗಿಯೇ ಗೌಡರು ಸೋಲನ್ನು ಅರಗಿಸಿಕೊಂಡು ಮೊಮ್ಮಗನ ಗೆಲುವನ್ನು ನೋಡಿ ಪುನೀತರಾಗಿದ್ದರು. ಅದೇ ಹುಮ್ಮಸ್ಸಿನಲ್ಲಿಯೇ ದಿಲ್ಲಿಯ ಅಂಗಳದಲ್ಲಿ ಮುದ್ದಿನ ಮೊಮ್ಮಗನನ್ನು ಅದ್ದೂರಿಯಾಗಿ ಪರಿಚಯಿಸಿದ್ದರು. ಆದರೆ ಅದೇ ಮೊಮ್ಮಗ ದೊಡ್ಡಗೌಡರ ಇಡೀ ರಾಜಕೀಯ ಬದುಕಿಗೆ ಹೊಲಸು ಮೆತ್ತಿಸಿಬಿಟ್ಟ. ಗೌಡರಷ್ಟೇ ಏಕೆ ಇಡೀ ಒಕ್ಕಲಿಗ ಸಮುದಾಯವೇ ಆತನ ಹೊಲಸು, ವಿಕೃತ ಮನಸ್ಸಿಗೆ ಮುಜುಗರ ಅನುಭವಿಸಿತು.

60 ವರ್ಷಗಳ ರಾಜಕೀಯ ಬದುಕಿನುದ್ದಕ್ಕೂ ಹೋರಾಟಗಳ ಮೂಲಕ ಹಾದಿ ಸವೆಸಿದ ಎಚ್.ಡಿ. ದೇವೇಗೌಡರು, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ 5-6 ವರ್ಷಗಳಷ್ಟೇ ಅಧಿಕಾರ ಅನುಭವಿಸಿದವರು. ಮಿಕ್ಕುಳಿದ ಬಹುತೇಕ ಅವಧಿಯ ರಾಜಕಾರಣದಲ್ಲಿ ಅಧಿಕಾರ ಸವಿದದ್ದಕ್ಕಿಂತ ವಿರೋಧ ಪಕ್ಷದಲ್ಲಿ ಕುಳಿತು ವಿರೋಧಿಗಳಿಂದ ವಾಚಾಮಗೋಚರವಾಗಿ ನಿಂದಿಸಿಕೊಂಡವರು. ಬಹುಪಾಲು ರಾಜಕೀಯ ಜೀವನವನ್ನು ಅಧಿಕಾರವಿಲ್ಲದೆ ಅನುಭವಿಸಿದರೂ ಎಂದೂ ಹೋರಾಟದಿಂದ ಹಿಂದೆ ಸರಿದಿರಲಿಲ್ಲ, ವಿರೋಧಿಗಳ ಮುಂದೆ ತಲೆ ಬಗ್ಗಿಸಿಕೊಂಡು ನಿಂತವರೂ ಅಲ್ಲ. ಅಂತಹ ದೇವೇಗೌಡರನ್ನು ಅವರ ಮುದ್ದಿನ ಮೊಮ್ಮಗ ಪ್ರಜ್ವಲ್ ರೇವಣ್ಣ ತಿಂಗಳುಗಟ್ಟಲೆ ಮನೆಯಿಂದಲೇ ಹೊರಬಾರದಂತೆ ಮಾಡಿದ್ದು ಗೌಡರ ಸಾಮ್ರಾಜ್ಯ ಪತನಕ್ಕೆ ಮೊತ್ತ ಮೊದಲ ಅಣುಬಾಂಬ್ ಆಗಿತ್ತು.

ಸ್ವಂತ ಅಣ್ಣನ ಮಗನನ್ನೇ ಕುಮಾರಸ್ವಾಮಿ ಬೆಳೆಯಲು ಅವಕಾಶ ಕೊಡುತ್ತಿಲ್ಲ ಎನ್ನುತ್ತಿದ್ದ ಜೆಡಿಎಸ್‌ನವರೇ ಇಂತಹ ವಿಕೃತ ಮನಸ್ಥಿತಿ, ಹೊಲಸು ವ್ಯಕ್ತಿ-ವ್ಯಕ್ತಿತ್ವ ದೇವೇಗೌಡರ ಮೊಮ್ಮಗನಾಗಿ ಜನಿಸಿದ್ದಾದರೂ ಹೇಗೆ ಎಂದು ಅಚ್ಚರಿಪಟ್ಟಿದ್ದರು. ಕುಮಾರಸ್ವಾಮಿಯನ್ನು ನಿಂದಿಸುತ್ತಿದ್ದವರೇ ಅವರು ಮಾಡುತ್ತಿದ್ದದ್ದೇ ಸರಿಯಿತ್ತು ಎನ್ನಲು ಶುರು ಮಾಡಿದ್ದರು. ಪ್ರಜ್ವಲ್ ವಿಚಾರದಲ್ಲಿ ಕುಮಾರಸ್ವಾಮಿಯ ವಿರುದ್ಧವೇ ಒಳಗೊಳಗೆ ಬುಸುಗುಡುತ್ತಿದ್ದ ಪಕ್ಷದ ಕಾರ್ಯಕರ್ತರು ಆತ ಇನ್ನೆಂದೂ ಸಾರ್ವಜನಿಕವಾಗಿ ಕಣ್ಣಿಗೆ ಕಾಣಿಸದಿದ್ದರೆ ಸಾಕಪ್ಪಾ ಎನ್ನುವಂತಾದರು.

ದೇವೇಗೌಡ ಮತ್ತು ಕುಮಾರಸ್ವಾಮಿಯ ನಂತರ ಜೆಡಿಎಸ್ ಪಕ್ಷದ ಉತ್ತರಾಧಿಕಾರಿಯಾಗಿ ಪ್ರಜ್ವಲ್ ರೇವಣ್ಣನೇ ಸೂಕ್ತ ಎನ್ನುತ್ತಿದ್ದ ಕಾರ್ಯಕರ್ತರು, ರಾಜಕೀಯ ಪಂಡಿತರೆಲ್ಲರ ಆಶಾಗೋಪುರ ಒಮ್ಮೆಲೆ ಧರೆಗೆ ಉರುಳಿದ್ದೇ ತಡ ಕಾರ್ಯಕರ್ತರು ಮತ್ತು ಅದೇ ರಾಜಕೀಯ ಪಂಡಿತರಿಗೆ ನಿಖಿಲ್ ಕುಮಾರಸ್ವಾಮಿ ದೇವೇಗೌಡರ ಸಾಮ್ರಾಜ್ಯಕ್ಕೆ ದಂಡಾಧಿಕಾರಿಯಾಗುತ್ತಾರೆ, ಪಕ್ಷದ ಸಾರಥಿಯಾಗಿ ಕಾರ್ಯಕರ್ತರ ಆತ್ಮಸ್ಥೈರ್ಯ ಇಮ್ಮಡಿಗೊಳಿಸುತ್ತಾರೆ ಎಂದು ಕನಸು ಕಂಡಿದ್ದರು. ಆದರೆ ವಾಸ್ತವವಾಗಿ ಆಗುತ್ತಿರುವುದನ್ನು ನೋಡಿದರೆ ನಿಖಿಲ್ ದೊಡ್ಡಗೌಡರ ಸಾಮ್ರಾಜ್ಯದ ಉತ್ತರಾಧಿಕಾರಿಯಾಗುವ ಮಾತಿರಲಿ ತಂದೆ ಕುಮಾರಸ್ವಾಮಿಗೂ ಬಲವಾಗುವ ಬದಲು ತಂದೆಗೆ ಬಲಹೀನನಾಗಿ ಅವರ ಮನೋ ಬೇಗುದಿಗೆ ಕಾರಣರಾಗುತ್ತಿದ್ದಾರೇನೋ ಎಂಬಂತಾಗಿದೆ.

ಸದ್ಯದ ಮಟ್ಟಿಗೆ ದೊಡ್ಡಗೌಡರ ಕುಟುಂಬಕ್ಕೆ ನಿಖಿಲ್ ಉಳಿದಿರುವ ಏಕೈಕ ಆಸರೆ ಮತ್ತು ಆಶಾ ಗೋಪುರ. ಪ್ರಜ್ವಲ್ ರೇವಣ್ಣ ಅಂಟಿಸಿ ಹೋಗಿರುವ ಹೊಲಸನ್ನು ಸ್ವಚ್ಛಗೊಳಿಸುವ ಕೆಲಸ ಆ ದೇವರಿಂದಲೂ ಸಾಧ್ಯವಿಲ್ಲ ಎನ್ನುವುದಂತೂ ಸತ್ಯ. ಆದರೆ ಅಧಃಪತನದ ಅಂಚಿಗೆ ವಾಲುತ್ತಿರುವ ಪಕ್ಷಕ್ಕೆ ಕೊಂಚವಾದರೂ ಪುನಶ್ಚೇತನ ನೀಡಬಹುದಾಗಿತ್ತು. ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ನೆರಳಿನಿಂದ ಹೊರಬರಲು ಸಾಧ್ಯವಾಗದೆ ಭವಿಷ್ಯದಲ್ಲಿ ರಾಜಕೀಯವಾಗಿ ತನ್ನ ಸ್ಪಷ್ಟ ನಿಲುವುಗಳೇನೂ ಇಲ್ಲದೆ, ತನ್ನ ರಾಜಕೀಯ ಜೀವನದ ಹೋರಾಟದ ಆರಂಭವಾದರೂ ಎಲ್ಲಿಂದ ಶುರು ಮಾಡಬೇಕೆಂಬುದು ಸ್ಪಷ್ಟವಿಲ್ಲದೆ, ತಮ್ಮ ಬೆನ್ನ ಹಿಂದೆ ರಾಜಕೀಯ ವಿರೋಧಿಗಳು ಹೆಣೆಯುತ್ತಿರುವ ಚುನಾವಣಾ ತಂತ್ರಗಳನ್ನು ಅರಿಯಲು ಸಾಧ್ಯವಾಗದೆ ಪದೇ-ಪದೇ ಸೋತು ಪಕ್ಷದೊಳಗೆ ಭಿನ್ನಮತ ಸೃಷ್ಟಿಯಾಗಲು ಕಾರಣರಾಗುತ್ತಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆಯ ಸೋಲು ನಿಖಿಲ್‌ರ ಸ್ವಯಂಕೃತ ಸೋಲಲ್ಲ. ಆದರೆ ರಾಮನಗರ ಮತ್ತು ಚನ್ನಪಟ್ಟಣದ ಸೋಲು ಸ್ವತಃ ನಿಖಿಲ್ ಕುಮಾರಸ್ವಾಮಿಯದ್ದೇ ಸ್ವಯಂಕೃತ ಅಪರಾಧಕ್ಕೆ ಸಿಕ್ಕ ಬಳುವಳಿ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷದ ಚುಕ್ಕಾಣಿ ಹಿಡಿದು ರಾಜ್ಯಾದ್ಯಂತ ಪಕ್ಷ ಸಂಘಟಿಸುವ ಚಾಕಚಕ್ಯತೆ ಪ್ರದರ್ಶಿಸಬೇಕಾದ ನಿಖಿಲ್ ಕೇವಲ ತಾನು ಸ್ಪರ್ಧಿಸುವ ಕ್ಷೇತ್ರಗಳಲ್ಲೇ ವಿರೋಧಿಗಳ ತಂತ್ರಗಾರಿಕೆ ಭೇದಿಸಲು ಸಾಧ್ಯವಾಗುತ್ತಿಲ್ಲ. ಬೇರೆ ಕ್ಷೇತ್ರಗಳಲ್ಲಿ ತನ್ನಿಷ್ಟದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಎದೆಗಾರಿಕೆ ಇದ್ದರಷ್ಟೇ ಪಕ್ಷ ಸಂಘಟನೆ ಇಲ್ಲವಾದರೆ ಯಾರದ್ದೋ ಪಕ್ಷಕ್ಕೆ ಸೇರಿ ಹತ್ತರ ನಂತರದಲ್ಲಿ ಹನ್ನೊಂದನೆಯವನಾಗಿ ಕಾಲಚಕ್ರದ ಅವಕಾಶಕ್ಕಾಗಿ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಆದರೆ ರಾಜಕೀಯ ಕುರುಕ್ಷೇತ್ರದಲ್ಲಿ ಯಾವ ವಿಶೇಷ ಪಟ್ಟುಗಳನ್ನು ಪ್ರದರ್ಶಿಸುವ ಶಕ್ತಿಯಿಲ್ಲದೆ ನೇರ ವಿರೋಧಿಗಳ ಅಖಾಡದಲ್ಲಿ ಮುಗ್ಗರಿಸಿ ಬೀಳುವುದನ್ನೇ ಕಾಯಕವನ್ನಾಗಿಸಿಕೊಂಡಿರುವುದು ದುರಂತವೇ ಸರಿ.

ಕೊನೆಯದಾಗಿ

ತಾತ ಎಚ್.ಡಿ. ದೇವೇಗೌಡ, ತಂದೆ ಎಚ್.ಡಿ. ಕುಮಾರಸ್ವಾಮಿ ನೆರಳಿನಿಂದ ಹೊರಬಂದು ನಿಖಿಲ್ ವಿಷಯಾಧಾರಿತ ಹೋರಾಟ ಮಾಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಾ, ಸಾಮಾನ್ಯ ಕಾರ್ಯಕರ್ತರಿಗೂ ಸುಲಭವಾಗಿ ಸಿಗುವಂತಾದರೆ ಮಾತ್ರ ಅವರಿಗೂ ಪಕ್ಷಕ್ಕೂ ಭವಿಷ್ಯವಿದೆ. ಅದು ಬಿಟ್ಟು ಒಂದೊಂದು ಚುನಾವಣೆಯಲ್ಲಿ ಒಂದೊಂದು ಕ್ಷೇತ್ರಕ್ಕೆ ಅತಿಥಿ ನಟನಾಗಿ ಹೋದರೆ ಭವಿಷ್ಯದಲ್ಲಿ ಪಕ್ಷ ಅಧೋಗತಿಗೆ ಇಳಿಯಲಿದೆ. ಕೇಂದ್ರ ಮಂತ್ರಿಗಿರಿಯ ಕಾರಣದಿಂದಾಗಿ ರಾಜ್ಯ ರಾಜಕಾರಣದಿಂದ ಹೊರಗಿ ರುವ ಕುಮಾರಸ್ವಾಮಿಯವರ ಅನುಪಸ್ಥಿತಿಯನ್ನು ರಾಜಕೀಯ ವಲಯದಲ್ಲೂ, ಪಕ್ಷದ ಕಾರ್ಯ ಚಟುವಟಿಕೆಗಳಲ್ಲೂ ನಿಖಿಲ್ ತುಂಬದೆ ಹೋದಲ್ಲಿ ಜೆಡಿಎಸ್ ಪಕ್ಷದ ಭವಿಷ್ಯ ನೀರ ಮೇಲಿನ ಗುಳ್ಳೆಯಾಗು ವುದಲ್ಲದೆ ದೇವೇಗೌಡರ ಅಂತ್ಯ ಕಾಲದಲ್ಲಿ ಪಕ್ಷವನ್ನು ಅಂತ್ಯದತ್ತ ನೂಕಿದ ಅಪಕೀರ್ತಿಯೂ ಮೊಮ್ಮಕ್ಕಳ ಪಾಲಿಗೆ ಅಂಟಿಕೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ. ಶಿವಪ್ರಸಾದ್

contributor

Similar News